varthabharthi


ಮುಂಬೈ ಸ್ವಗತ

ಮುಂಬೈ ನೆಲದ ಕನ್ನಡ ಲೇಖಕಿಯರ ಅಸ್ಮಿತೆ ‘ಸೃಜನಾ’

ವಾರ್ತಾ ಭಾರತಿ : 23 Apr, 2021
ದಯಾನಂದ ಸಾಲ್ಯಾನ್

‘‘ಕನ್ನಡ ತಾಯ್ನೆಲದಿಂದ ದೂರವಾದ ಮುಂಬೈಯಂತಹ ಮುಖಹೀನ ಮಹಾನಗರದ ನಿವಾಸಿಗಳಾಗಿ ಸಂಪೂರ್ಣ ಕನ್ನಡದ್ದಲ್ಲದ ಬದುಕನ್ನು ಕನ್ನಡದಲ್ಲಿ ರೂಪಿಸುವ ಕೆಲಸ ಸುಲಭ ಸಾಧ್ಯವಲ್ಲ’’ ಎಂಬ ಯಶವಂತ ಚಿತ್ತಾಲರ ಮಾತಿನ ಆಳದಲ್ಲೇ ‘ಸೃಜನಾ’ದ ಯಶಸ್ಸು, ಸಾಧನೆ ಏನು? ಎಂತಹದ್ದು ಎಂಬುದನ್ನು ನಾವು ಗುರುತಿಸಬಹುದು.


ಮುಂಬಾಪುರಿಯಲ್ಲಿ ಅನ್ಯ ಸಂಸ್ಕೃತಿ, ಧರ್ಮ ಭಾಷೆಗಳ ಮಧ್ಯೆ ತಮ್ಮತನವನ್ನು ಉಳಿಸುವುದಕ್ಕೆ, ಬೆಳೆಸುವುದಕ್ಕೆ ಇಲ್ಲಿನ ಕನ್ನಡಿಗರು ಮತ್ತು ಕನ್ನಡ ಸಂಘಟನೆಗಳ ಕೊಡುಗೆ ಅನುಪಮ. ಈ ನಗರ-ಉಪನಗರದುದ್ದಕ್ಕೂ ಲೆಕ್ಕಕ್ಕೆ ಸಿಗದಷ್ಟು ಪ್ರಮಾಣದಲ್ಲಿ ಕನ್ನಡ ಸಂಘ-ಸಂಸ್ಥೆಗಳು ಇವೆ. ಕೆಲವು ಪ್ರತಿಷ್ಠೆಗಾಗಿ ಅಸ್ತಿತ್ವ ಉಳಿಸಿಕೊಂಡಿದ್ದರೆ, ಮತ್ತೆ ಕೆಲವೊಂದು ಹತ್ತರಲ್ಲಿ ಹನ್ನೊಂದಾಗಿ ಮುಂದೆ ಸಾಗುತ್ತಿವೆ. ಇನ್ನು ಕೆಲವು ತಮ್ಮ ಧ್ಯೇಯೋದ್ದೇಶಗಳ ಅಡಿಯಲ್ಲಿ ಸಾರ್ಥಕತೆಯನ್ನು ಪಡೆದುಕೊಂಡಿವೆ.

ನಮಗೆ ಈಗ ಇಲ್ಲಿ ಮುಖ್ಯವಾಗುವ ಸಂಸ್ಥೆ ‘ಸೃಜನಾ’-ಕನ್ನಡ ಲೇಖಕಿಯರ ಬಳಗ, ಮುಂಬೈ. ಕನ್ನಡಿಗರ ಅಕ್ಕ ಎಂದು ಕರೆಯಲ್ಪಡುವ ಡಾ. ಸುನೀತಾ ಎಂ. ಶೆಟ್ಟಿ ಅವರ ಮುಂದಾಳುತ್ವದಲ್ಲಿ ಮಿತ್ರಾ ವೆಂಕಟ್ರಾಜ, ಡಾ. ಗಿರಿಜಾ ಶಾಸ್ತ್ರಿ, ಡಾ. ವಿ.ಕೆ. ಮಣಿಮಾಲಿನಿ, ರೇಖಾ ರಾವ್, ಡಾ. ಸುಮಾ ದ್ವಾರಕನಾಥ್ ಮೊದಲಾದವರು 2002ರಲ್ಲಿ ಮುಂಬೈ ವಿಶ್ವವಿದ್ಯಾನಿಲಯದ ಆವರಣದಲ್ಲಿದ್ದ ಡಾ. ವಸಂತಕುಮಾರ್ ತಾಳ್ತಜೆ ಅವರ ಮನೆಯಲ್ಲಿ ಒಟ್ಟುಗೂಡಿ ಚರ್ಚಿಸಿದ್ದರ ಫಲರೂಪವಾಗಿ ರೆಕ್ಕೆ ಮೂಡಿದ್ದು ‘ಸೃಜನಾ’. ಹೀಗೆ ಹುಟ್ಟಿದ ‘ಸೃಜನಾ’ ಉದ್ಘಾಟನೆಗೊಂಡದ್ದು ಅದೇ ವಿಶ್ವವಿದ್ಯಾನಿಲಯದ ಕ್ಯಾಂಪಸ್‌ನಲ್ಲಿ 2003ರ ಫೆಬ್ರವರಿ 2ರಂದು. ಮರಾಠಿಯ ಖ್ಯಾತ ದಲಿತ ಲೇಖಕಿ ಊರ್ಮಿಳಾ ಪವಾರ್ ಅವರಿಂದ, ಡಾ. ವಸಂತಕುಮಾರ್ ತಾಳ್ತಜೆ ಅವರ ಮೇಲ್ವಿಚಾರಣೆಯಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಯಶವಂತ ಚಿತ್ತಾಲರು ಆಗಮಿಸಿದ್ದರು.

ಹಾಗೆ ನೋಡಿದರೆ ಇಲ್ಲಿ ಮಹಿಳಾ ಸಂಘಟನೆಗಳಿಗೆ ಬರ ಇಲ್ಲ. ವನಿತಾ ಸಮಾಜ, ಸ್ತ್ರೀಶಕ್ತಿ, ‘ಅನುಜಾ’ ಮೊದಲಾದ ಹತ್ತು ಹಲವು ಸಂಘಟನೆಗಳು ಇಲ್ಲಿವೆ. ಇಲ್ಲಿನ ಕನ್ನಡ ಸಂಘಟನೆಗಳು, ಜಾತೀಯ ಸಂಘಟನೆಗಳಲ್ಲೂ ಮಹಿಳಾ ವಿಭಾಗಗಳು ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿವೆ. ಮಹಿಳೆಯರಿಗಾಗಿ ನೂರಾರು ಸಂಘಟನೆಗಳು ಇರುವಾಗ ಇವೆಲ್ಲದರ ಮಧ್ಯೆ ‘ಸೃಜನಾ’ದ ಅವಶ್ಯಕತೆ ಇದೆಯೇ? ಎಂಬ ಪ್ರಶ್ನೆ ಸಹಜವಾದುದು. ಆದರೆ ಈ ಲೇಖಕಿಯರ ಬಳಗ ತಾನು ದಾಟಿ ಬಂದ ಹದಿನೇಳು ವರ್ಷಗಳಲ್ಲಿ ಆ ಪ್ರಶ್ನೆ, ಸಂಶಯಗಳು ನಿರಾಧಾರ ಅಥವಾ ‘ಸೃಜನಾ’ದ ಮಟ್ಟಿಗೆ ಅಪ್ರಸ್ತುತ ಎಂದು ತೋರಿಸಿಕೊಟ್ಟಿದೆ. ಏಕೆಂದರೆ ವಿಜಯಾ ದಬ್ಬೆ ಅವರ ಅಭಿವ್ಯಕ್ತಿಯಂತೆ, ‘‘ಸಾಹಿತ್ಯ ಸಮ್ಮೇಳನಗಳ ಒಳ ಹೊರಗೆ ಬಂದ ವಿರೋಧದಿಂದಾಗಿ ಮಹಿಳಾ ಗೋಷ್ಠಿಗಳು ಕಣ್ಮರೆಯಾದವು. ಆದರೆ ಮಹಿಳಾ ಸಮ್ಮೇಳನಗಳು ತಲೆ ಎತ್ತಿದವು... ಲೇಖಕಿಯರ ಸಂಘ ಅಸ್ತಿತ್ವಕ್ಕೆ ಬಂದಿದೆ’’. ಯಾವುದೇ ರೀತಿಯ ಭಿನ್ನಾಭಿಪ್ರಾಯದಿಂದ ಅಥವಾ ಬಂಡಾಯದಿಂದ ಹುಟ್ಟಿಕೊಂಡ ಸಂಘಟನೆ ‘ಸೃಜನಾ’ ಅಲ್ಲ. ಡಾ. ವಸಂತಕುಮಾರ್ ತಾಳ್ತಜೆಯವರ ‘ಸೃಜನಾ’ ಬಗೆಗಿನ ಅಭಿಪ್ರಾಯ ಗಮನಿಸೋಣ: ‘‘ಕಥೆ, ಕವಿತೆ, ಮುಂದೆ ವಿಮರ್ಶೆಯಲ್ಲೂ ಲೇಖಕಿಯರ ಅಸ್ಮಿತೆಯ ಹುಡುಕಾಟದ ನೆಲೆಯಲ್ಲಿ ‘ಸೃಜನಾ’ದ ಹುಟ್ಟು ಇದೆ.

ಇಲ್ಲಿ ಕೀಳು ಅಭಿರುಚಿ ಇಲ್ಲ. ಗುಣಕ್ಕೆ ಮತ್ಸರವುಂಟೇ ಎಂಬಂತೆ ‘ಗುಣ’ ಇರುವವರೆಲ್ಲರನ್ನೂ ಇಲ್ಲಿ ಗುರುತಿಸಿದ್ದಾರೆ. ಹಿರಿಯರು ಕಿರಿಯರಿಗೆ ಪೂರಕವಾಗಿ ಸ್ಪಂದಿಸುತ್ತಾ ಬಂದಿದ್ದಾರೆ. ‘ಸೃಜನಾ’ ಮುಂಬೈ ಲೇಖಕರಿಗೆ ಒಳ್ಳೆಯ ಉಪಕ್ರಮ. ಈ ಹಿನ್ನೆಲೆಯಲ್ಲೂ, ಡಾ. ರಘುನಾಥ ಅವರ ಈ ಮಾತಿನ ಹಿನ್ನೆಲೆಯಲ್ಲೂ ‘ಸೃಜನಾ’ವನ್ನು ನಾವು ಅರ್ಥೈಸಲು ಸುಲಭ ಸಾಧ್ಯ: ‘‘ಸೃಜನಾ’ಕ್ಕೆ ಮುಖ್ಯವಾಗಿ ಮೂರು ಆಯಾಮಗಳು ಇವೆ- 1. ಮಹಿಳೆಯರಿಗೆ ವೇದಿಕೆಯನ್ನು ಕಲ್ಪಿಸಿ ಕೊಡುವುದು. 2. ಸೃಜನಶೀಲ ಚಟುವಟಿಕೆಗಳನ್ನು ಪ್ರೋತ್ಸಾಹಿಸುವುದು. 3. ಮಾರ್ಗದರ್ಶನ ಹಾಗೂ ಪ್ರಕಾಶನ. ಈ ಮೊದಲು ವೈಯಕ್ತಿಕವಾಗಿ ತಮ್ಮ ತಮ್ಮ ಬರಹಗಳನ್ನು ಪ್ರಕಟಿಸುತ್ತಿದ್ದ ಲೇಖಕಿಯರು ಈಗ ಒಂದು ವೇದಿಕೆ ದೊರೆತಿದ್ದರಿಂದ ಸಂಕಲನಗಳ ರೂಪದಲ್ಲಿ ಪ್ರಕಟಿಸಲು ಸಾಧ್ಯವಾಯಿತು. ಇಲ್ಲಿಯವರೆಗೆ ಪ್ರಕಟಿಸಿದ ಲೇಖನ, ಕವನ, ಕಥಾಸಂಕಲನಗಳು ಇದಕ್ಕೆ ನಿದರ್ಶನ.

ಕಮ್ಮಟಗಳನ್ನು ಹಮ್ಮಿಕೊಂಡು ಹೊಸಬರಿಗೆ ಮಾರ್ಗದರ್ಶನ ನೀಡಿದ್ದು, ಇದರಿಂದಾಗಿ ಇಂದು ಒಳನಾಡಿನ ಲೇಖಕಿಯರ ಸಂಘ ಇಲ್ಲಿನ ಲೇಖಕಿಯರನ್ನು ಗುರುತಿಸುವಂತಾದದ್ದು, ಅಲ್ಲಿಂದ ಬಂದು ಇಲ್ಲಿನ ಲೇಖಕಿಯರ ಸಾಧನೆಗಳನ್ನು ದಾಖಲು ಮಾಡುವಂತಾದುದು ಕೂಡಾ ಇದರ ಇತ್ಯಾತ್ಮಕ ಪರಿಣಾಮಗಳೆಂದೇ ಹೇಳಬೇಕು’’ ಅನ್ನುವಲ್ಲಿ ‘ಸೃಜನಾ’ ಹತ್ತರಲ್ಲಿ ಹನ್ನೊಂದಾಗದೆ ತನ್ನದೇ ದಾರಿಯಲ್ಲಿ ತಾನು ಸಾಗುತ್ತಿರುವುದು ಸ್ಪಷ್ಟವಾಗುತ್ತದೆ. ‘‘ಒಟ್ಟುಗೂಡಿಸುವುದು, ನಮ್ಮ ಸೃಜನ ಶಕ್ತಿಯನ್ನು ಬೆಳೆಸುವುದು; ಬರವಣಿಗೆಗಳನ್ನು ಬೆಳಕಿಗೆ ತರುವುದು’’ ಎನ್ನುವ ಡಾ. ಸುನಿತಾ ಶೆಟ್ಟಿಯವರ ಅಭಿವ್ಯಕ್ತಿಯಾಗಲಿ, ‘‘ನಮ್ಮಿಳಗೆ ನಾವು ಹೇಗೆ ಬೆಳೆಯಬಹುದೆಂಬುದನ್ನು ಕೃತಿಗಳ ಮುಕ್ತ ಚರ್ಚೆ, ಮಾತುಕತೆಯಿಂದ ಸಾಧ್ಯವಾಗಿಸಿದೆ. ಇದು ಮುಂಬೈಯಲ್ಲಿ ಮಾತ್ರ ಸಾಧ್ಯ’’ ಎನ್ನುವ ಮಿತ್ರಾ ವೆಂಕಟ್ರಾಜ ಅವರ ಅಭಿಪ್ರಾಯವಾಗಲಿ ಭಿನ್ನವಲ್ಲ.

‘‘ನಾವು ಪರಸ್ಪರ ಬರಹಗಳನ್ನು ಹಂಚಿ, ಚರ್ಚಿಸಿ ಬೆಳೆಯಲು ಅನುಕೂಲವಾಗುತ್ತದೆ. ಎಲ್ಲಿ ಏನಾಗುತ್ತದೆ? ಒಳನಾಡಿನಲ್ಲಿ ಏನಾಗುತ್ತದೆ? ಯಾವ ಯಾವ ಧೋರಣೆಗಳು ಬರುತ್ತವೆ? ಆ ಧೋರಣೆಗಳನ್ನು ಬರಹ ರೂಪಕ್ಕೆ ತರುತ್ತೇವೆ’’ ಎನ್ನುತ್ತಾರೆ ಡಾ. ಗಿರಿಜಾ ಶಾಸ್ತ್ರಿಯವರು. ಇವೆಲ್ಲ ಮಾತುಗಳನ್ನು ಗಮನಿಸಿದರೆ ನಮಗೆ ಸ್ಪಷ್ಟವಾಗುವ ಚಿತ್ರ ‘ಸೃಜನಾ’ ಯಾವುದೇ ಗುಂಪು, ಪಂಗಡಕ್ಕೆ ಸೇರಿದ್ದಲ್ಲ; ಪ್ರತಿಕ್ರಿಯೆಯ ರೂಪದಲ್ಲಿಯೂ ಜನ್ಮ ತಾಳಿದ್ದಲ್ಲ. ಈ ನಗರದ ಲೇಖಕಿಯರನ್ನು ಒಟ್ಟುಗೂಡಿಸುವುದು, ಇಲ್ಲಿನ ಹೊಸಬರನ್ನು ಆಧರಿಸಿ ಮೇಲೆತ್ತುವುದು ಜೊತೆಗೆ ತಾವೂ ಬೆಳೆಯುತ್ತ ಇತರರನ್ನ್ನೂ ಬೆಳೆಸುವುದು ಇದರ ಮುಖ್ಯ ಗುರಿ.

ಹೌದು!, ಈ ನಿಟ್ಟಿನಲ್ಲಿ ‘ಸೃಜನಾ’ ಪ್ರಾರಂಭದಿಂದಲೇ ಹೆಜ್ಜೆ ಹಾಕುತ್ತ ಮುಂದಡಿ ಇಟ್ಟಿದೆ. ಆದರೆ ಈ ಕಾರ್ಯ ಅಷ್ಟು ಸುಲಭವಲ್ಲ. ಏಕೆಂದರೆ, ‘‘ಕನ್ನಡ ತಾಯ್ನೆಲದಿಂದ ದೂರವಾದ ಮುಂಬೈಯಂತಹ ಮುಖಹೀನ ಮಹಾನಗರದ ನಿವಾಸಿಗಳಾಗಿ ಸಂಪೂರ್ಣ ಕನ್ನಡದ್ದಲ್ಲದ ಬದುಕನ್ನು ಕನ್ನಡದಲ್ಲಿ ರೂಪಿಸುವ ಕೆಲಸ ಸುಲಭ ಸಾಧ್ಯವಲ್ಲ’’ ಎಂಬ ಯಶವಂತ ಚಿತ್ತಾಲರ ಮಾತಿನ ಆಳದಲ್ಲೇ ‘ಸೃಜನಾ’ದ ಯಶಸ್ಸು, ಸಾಧನೆ ಏನು? ಎಂತಹದ್ದು ಎಂಬುದನ್ನು ನಾವು ಗುರುತಿಸಬಹುದು.

ಅಂದಾಕ್ಷಣ ಈ ‘ಸೃಜನಾ’ದ ಆಡಳಿತ ಮಂಡಳಿಯ ಬಂಡವಾಳ (ಹಣ), ಸ್ವಂತ ಸೂರು ಇವುಗಳ ಬಗ್ಗೆ ‘ಎಷ್ಟು’ ಎಂದು ಲೆಕ್ಕ ಹಾಕುವ ಅಗತ್ಯವಿಲ್ಲ. ಏಕೆಂದರೆ ಯಾವುದೇ ಪದಾಧಿಕಾರಿಗಳ ಹಂಗಿಲ್ಲದೆ, ಬಂಡವಾಳ ಇಲ್ಲದೆ ಹುಟ್ಟಿಕೊಂಡ, ನಿರಂತರವಾಗಿ ಈ ಪ್ರಕ್ರಿಯೆಯಲ್ಲಿ ನಡೆದುಬಂದ ಸಂಸ್ಥೆ. ‘ಸೃಜನಾ’ದ ಪ್ರತಿ ತಿಂಗಳ ಒಟ್ಟು ಸೇರುವಿಕೆ, ಚರ್ಚೆ, ಸಭೆ ಸಮಾರಂಭಗಳಿಗೆ ನೆರವಾಗಲು ಮುಂಬೈಯಲ್ಲಿ ಬಹಳಷ್ಟು ಉದಾರ ಮನಸ್ಸಿನ ಸಂಘಸಂಸ್ಥೆಗಳಿವೆ. ಅವರ ಕೃತಿಗಳನ್ನು ಅಚ್ಚು ಮಾಡಲು ಕೊಡುಗೈ ದಾನಿಗಳಿದ್ದಾರೆ. ಆದ್ದರಿಂದ ‘ತಮ್ಮ ನಿಯಮಾವಳಿಗಳನ್ನು ತಮಗೆ ಬೇಕಾದಂತೆ ವ್ಯಾಖ್ಯಾನಿಸುವ ಅಥವಾ ತಿರುಚುವ ತುರ್ತು ‘ಸೃಜನಾ’ ಬಳಗಕ್ಕೆ ಇಲ್ಲ.

 ಈ ನಿಟ್ಟಿನಲ್ಲಿ ‘ಸೃಜನಾ’ದ ನಡೆಯನ್ನು ಗಮನಿಸಿದರೆ ಕಾವ್ಯ-ಕಥಾ ಕಮ್ಮಟ, ಭಾಷಾಭಾರತಿ ಅಕಾಡಮಿ, ಕರ್ನಾಟಕದ ಜತೆಗೂಡಿ ನಡೆಸಿದ ‘ಅನುವಾದ ಕಮ್ಮಟ’, ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ‘ವಿಚಾರ ವಿಮರ್ಶೆ’, ವೈವಿಧ್ಯಮಯ ಗೋಷ್ಠಿಗಳನ್ನು ಅರ್ಥಪೂರ್ಣವಾಗಿ ಆಯೋಜಿಸುತ್ತಾ ಬಂದಿದೆ. ಒಳನಾಡಿನ ಅಥವಾ ಬೇರೆ ಬೇರೆ ಭಾಷೆಗಳ ಸಾಹಿತಿಗಳನ್ನು ಆಹ್ವಾನಿಸಿ, ಅವರೊಂದಿಗೆ ಸಮಾಲೋಚನೆ, ಸಾಹಿತ್ಯ ಚರ್ಚೆಗಳನ್ನು ಅರ್ಥಪೂರ್ಣವಾಗಿ ನಡೆಸಿಕೊಟ್ಟಿದೆ. ‘ಸೃಜನಾ’ ತಮ್ಮ ಬಳಗವನ್ನು ಕಟ್ಟಿಕೊಂಡು ಗುಜರಾತ್, ಪುಣೆ, ಧಾರವಾಡ ಮೊದಲಾದೆಡೆ ತೆರಳಿ ಅಲ್ಲಿಯೂ ತಮ್ಮ ಬಳಗದಿಂದ ವಿವಿಧ ಗೋಷ್ಠಿಗಳ ಆಯೋಜನೆಗೆ ಸಹಭಾಗಿತ್ವ ನೀಡಿದೆ.

‘ಕಥೆ ಹೇಳೇ...’(ಕಥಾಸಂಕಲನ), ‘ನುಡಿನಮನ’, ‘ಬೆಳಕಿನಡೆಗೆ’ (ವೈಚಾರಿಕ ಲೇಖನಗಳ ಸಂಕಲನ), ಅನುಭವ ಕಥನಗಳ ಸಂಗ್ರಹದ ‘ಹಚ್ಚಿಟ್ಟ ಹಣತೆಗಳು’, ‘ಮುಂಬೈ ಬಿಂಬ’ (ಅನುವಾದ ಪರಿಚಯ), ‘ಮಹಿಳಾ ಜಾನಪದ’ (ಕನ್ನಡ, ತುಳು, ಕೊಂಕಣಿ, ಕೊಡವ, ಬ್ಯಾರಿ, ಹವ್ಯಕ, ಮೋಯಾ) ‘ಓದು ಮುಗಿಸಿದ ಮೇಲೆ’ (‘ಸೃಜನಾ’ ಬಳಗದ ಕೃತಿ ವಿಮರ್ಶೆಗಳ ಸಂಕಲನ) ಹಾಗೂ ‘ನಮ್ಮ ಕವಿತೆ’ (ಕನ್ನಡದ ಎರಡು ಹಾಗೂ ತಮ್ಮ ತಮ್ಮ ಮಾತೃಭಾಷೆಗಳಲ್ಲಿ ಒಂದೊಂದು ಕವಿತೆಗಳ ಸಂಕಲನ)-ಹೀಗೆ ಈವರೆಗೆ ಒಟ್ಟು ಎಂಟು ಮೌಲಿಕ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ‘ಸೃಜನಾ’ ನೀಡಿದೆ. ಇಲ್ಲಿ ಮುಖ್ಯವಾಗಿ ಗಮನಿಸತಕ್ಕ ಅಂಶವೆಂದರೆ, ಬೇರೆ ಬೇರೆ ಕೃತಿಗಳನ್ನು ‘ಸೃಜನಾ’ದ ಬೇರೆ ಬೇರೆ ಸಾಹಿತಿಗಳು ಸಂಪಾದಿಸಿರುವುದು. ಇಲ್ಲಿನ ಒಟ್ಟು ಕೃತಿಗಳನ್ನು ಗಮನಿಸಿದಾಗ ‘ಸೃಜನಾ’ ಕೃತಿಗಳಿಗೆ ಸಂಪಾದಕರನ್ನಾಗಿ ನೇಮಿಸುವಾಗ ಆ ಸಂಪಾದಕ ಬಳಗದಲ್ಲಿ ಓರ್ವರಾದರೂ ಪಳಗಿದ, ಅರಿವುಳ್ಳವರನ್ನು ನೇಮಿಸಿದರೆ ಒಳ್ಳೆಯದು. ಇಲ್ಲದಿದ್ದರೆ ಎಂತಹ ಮೌಲಿಕ ಕೃತಿಯಾದರೂ ಅಚ್ಚುಕಟ್ಟುತನ ಅಥವಾ ಮುದ್ರಣ ದೋಷದಿಂದ ಆ ಕೃತಿಯು ಅಪಮೌಲ್ಯ ಹೊಂದುವ ಸಾಧ್ಯತೆಗಳಿವೆ. ಪ್ರಸ್ತುತ ‘ಸೃಜನಾ’ದ ಒಂಭತ್ತನೇ ಕೃತಿಯಾಗಿ ‘ಮುಂಬೈ ಲೇಖಕಿಯರ ಪರಿಚಯ’ ಕೈಪಿಡಿಯ ರೂಪದಲ್ಲಿ ಮುಂಬೈಯಲ್ಲಿರುವ ಎಲ್ಲಾ ಮಹಿಳಾ ಲೇಖಕಿಯರ ಕಿರುಪರಿಚಯಗಳನ್ನೊಳಗೊಂಡು, ಇಂಗ್ಲಿಷ್ ಭಾಷೆಯಲ್ಲಿ ಬೆಳಕು ಕಾಣಲಿದೆ.

ಇಂತಹ ಒಂದು ಕೃತಿಯ ಅವಶ್ಯಕತೆ ಬಹಳಷ್ಟಿದೆ. ಕನ್ನಡೇತರರಿಗೂ ಪರಿಚಯಿಸುವ ನಿಟ್ಟಿನಲ್ಲಿ ಈ ಕೈಪಿಡಿ ಇಂಗ್ಲಿಷ್ ಭಾಷೆಯಲ್ಲಿ ಬೆಳಕು ಕಾಣುವುದು ಉಚಿತವೆ. ಆದರೆ 1990ರಲ್ಲಿ ಚಿ. ನ. ಮಂಗಳಾ ಅವರ ಸಂಪಾದಕತ್ವದಲ್ಲಿ ಎನ್‌ಎಂಕೆಆರ್‌ವಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಹೊರತಂದ ‘ಸಮನ್ವಿತಾ’- ‘ಕರ್ನಾಟಕದ ಮಹಿಳೆಯರು’ ಕೃತಿ ಮಾಲೆಯಲ್ಲಿ ಸಂಪುಟ ಒಂದು ಮಹಿಳಾ ಲೇಖಕಿಯರ ಬಗೆಗಿನದ್ದು ಆಗಿತ್ತು. ಅದು ಇಂಗ್ಲಿಷ್ ಹಾಗೂ ಕನ್ನಡ ಎರಡೂ ಭಾಷೆಗಳನ್ನು ಒಳಗೊಂಡಿತ್ತು. ಅದೇ ರೀತಿ ದ್ವಿಭಾಷೆಯಾಗಿ ‘ಸೃಜನಾ’ದ ಪರಿಚಯಾತ್ಮಕ ಕೃತಿ ಬಂದರೆ ಒಳ್ಳೆಯದು.

ಕವಿ ಅಥವಾ ಸಾಹಿತಿಗಳ ಕೃತಿಗಳನ್ನು ಅಭ್ಯಸಿಸುವುದಕ್ಕಷ್ಟೇ ಸೀಮಿತವಾಗದ ‘ಸೃಜನಾ’ ಬಳಗವು, ಸಾಹಿತಿಗಳ ತಾಣಕ್ಕೆ ಹೋಗಿ ಅಲ್ಲಿ ಸಾಹಿತಿಯ ಕೃತಿಗಳಂತೆ ಸಾಹಿತಿಯನ್ನು ಅರಿತುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಮಾಡಿದೆ. ಕುವೆಂಪು ಅವರ ಕುಪ್ಪಳಿಗೆ ತೆರಳಿ, ಅಲ್ಲಿದ್ದು ಆ ಪರಿಸರ ಮೊದಲಾದುವುಗಳನ್ನು ಅಭ್ಯಸಿಸಿ ಬಂದಿರುವುದನ್ನು ನಾವು ಗಮನಿಸಬಹುದು. ‘ಸೃಜನಾ’ದ ‘ಬೆಳಕಿನಡೆಗೆ’ ಕೃತಿಯ ಬಗ್ಗೆ ಡಾ. ವ್ಯಾಸರಾವ್ ನಿಂಜೂರು ಬರೆಯುತ್ತಾ, ‘‘ಆಳವಾದ ಚಿಂತನೆ, ಚಿಕಿತ್ಸಕ ದೃಷ್ಟಿಕೋನ, ವಿವಿಧ ಪಾತಳಿಗಳಲ್ಲಿ ವಿಷಯವನ್ನು ನಿರೂಪಿಸುವ ವೈಶಿಷ್ಟ್ಯ ಹಾಗೂ ಬೌದ್ಧಿಕ ಕಸುವಿನೊಂದಿಗೆ ಹಲವಾರು ಲೇಖನಗಳು ನಮ್ಮ ಗಮನ ಸೆಳೆಯುತ್ತಿವೆ’’ ಎಂದಿದ್ದಾರೆ. ‘ನಮ್ಮ ಕವಿತೆ’- ಕವಿತಾ ಸಂಕಲನದ ಮುನ್ನುಡಿಯಲ್ಲಿ ಡಾ. ವರದರಾಜ ಚಂದ್ರಗಿರಿ ಅವರು, ‘‘ಕೆಲವೊಂದು ರಚನೆಗಳು ಮುಂಬೈ ನಗರದ ಸಂವೇದನೆಯ ಸೂಕ್ಷ್ಮಗಳನ್ನು ಸ್ತ್ರೀವಾದಿ ಆಶಯವು ಕಳೆದುಕೊಳ್ಳುತ್ತಿರುವ ಹೊಸ ಆಯಾಮವನ್ನೋ, ಎಲ್ಲಾ ಇಸಂಗಳಿಂತಲೂ ಆಚೆ ಇರುವ ಮಾನವೀಯತೆಯೇ ನಾವು ಎತ್ತಿ ಹಿಡಿಯಬೇಕಾದ ಮೌಲ್ಯ ಎನ್ನುವ ಸತ್ಯವನ್ನು ಸಾರುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ’’ ಎಂದು ಅಲ್ಲಿನ ಕವಿತೆಗಳ ಬಗ್ಗೆ ಒಕ್ಕಣಿಸಿದ್ದಾರೆ.

ಡಾ. ಜಯಂತ್ ಕಾಯ್ಕಣಿ, ‘‘ಇಲ್ಲಿ ಆಕೆಯ ಸ್ಥಿತಿ ಮತ್ತು ಸಾಧ್ಯತೆಗಳ ವಿನ್ಯಾಸವೇ ಬೇರೆ. ಕಷ್ಟ ಸುಖಗಳೇ ಬೇರೆ. ಅಂತಹ ವಿವಿಧ ಅಂತರಂಗಗಳ ಟಿಪ್ಪಣಿಗಳನ್ನು ಕಲೆಹಾಕುವ ಮೂಲಕ ‘ಸೃಜನಾ’ ಮುಂಬೈ ಮಹಿಳೆಯರ ಸ್ವರಗಳ ‘ಸಿಂಫನಿ’ಯೊಂದನ್ನು ಇಲ್ಲಿ ಬಿತ್ತರಿಸಿದೆ’’ ಎಂದು ‘ಸೃಜನಾ’ ಬಳಗದ ಅನುಭವ ಕಥನ ‘ಹಚ್ಚಿಟ್ಟ ಹಣತೆಗಳು’ ಕೃತಿಗೆ ಬೆನ್ನುತಟ್ಟಿ ಬರೆದಿರುವ ಮಾತುಗಳಾಗಲೀ ‘ಸೃಜನಾ’ ಹೊರತಂದಿರುವ ಕೃತಿಗಳಲ್ಲಿನ ಮೌಲ್ಯವನ್ನು, ಗಟ್ಟಿತನವನ್ನು ನಾವು ಗುರುತಿಸಬಹುದು.

‘ಸೃಜನಾ’ದ ಈವರೆಗಿನ ಸಂಚಾಲಕರಾಗಿ ಮಿತ್ರಾ ವೆಂಕಟ್ರಾಜ, ಡಾ. ಗಿರಿಜಾ ಶಾಸ್ತ್ರಿ, ಶ್ಯಾಮಲಾ ಮಾಧವ, ಡಾ. ಸುಮಾ ದ್ವಾರಕನಾಥ್, ಡಾ. ದಾಕ್ಷಾಯಿಣಿ ಯಡಹಳ್ಳಿ, ಮೀನಾ ಕಾಳವರ್ ಹಾಗೂ ಶಾರದಾ ಅಂಬೇಸಂಗೆ ಮುನ್ನಡೆಸಿದ್ದಾರೆ; ನಡೆಸುತ್ತಿದ್ದಾರೆ. ‘ಸೃಜನಾ’ಕ್ಕೆ ಈಗಾಗಲೇ ಕರುನಾಡಿನ ಹಾಗೂ ಇತರ ಭಾಷೆಗಳ ಸಾಹಿತಿಗಳು ಭೇಟಿ ನೀಡಿ ಚರ್ಚೆಯಲ್ಲಿ ಪಾಲ್ಗೊಂಡಿದ್ದಾರೆ. ಇವರಲ್ಲಿ ಪ್ರತಿಭಾ ನಂದಕುಮಾರ್, ಡಾ. ಚಿನ್ನಪ್ಪಗೌಡ, ಡಾ. ವಿ.ಬಿ. ಪೂಜಾರ, ಗೀತಾ ನಾಗಭೂಷಣ, ತಾರಾ ಭಟ್, ಶಾರದಾ ಭಟ್, ಎ.ಪಿ. ಮಾಲತಿ, ಗಾಯತ್ರಿ ನಾವಡ, ವರದ ಶ್ರೀನಿವಾಸನ್, ರೋಹಿಣಿ ಸಾಲ್ಯಾನ್, ಚೆನ್ನೈಯ ತಮಿಳು ಲೇಖಕಿ ರಜತಿ ಸಲ್ಮಾ, ಸಂಧ್ಯಾರಾಣಿ, ಶಶಿಕಲಾ ಗುರುಪುರ, ಇಂದಿರಾ ಸಾಲ್ಯಾನ್ ಮೊದಲಾದವರು ಗಮನಾರ್ಹರು.

‘ಹೂವಿನ ಪೂಜೆ’ಯಂತಹ ಅಪರೂಪದ ಕಥೆಗಳನ್ನು ಕಟ್ಟಬಲ್ಲ ಮಿತ್ರಾ ವೆಂಕಟ್ರಾಜ, ತುಳಸಿಯಂತಹ ಕಥೆಗಾರ್ತಿಯರು; ಪ್ರತಿಮೆ ಹಾಗೂ ಧ್ವನಿಪೂರ್ಣವಾದ ರೂಪಕಗಳ ಕವಿತೆಗಳ ಮೂಲಕ ವಿಮರ್ಶಕರ ಮೆಚ್ಚುಗೆ ಮನ್ನಣೆಗೆ ಪಾತ್ರರಾದ ಡಾ. ಗಿರಿಜಾ ಶಾಸ್ತ್ರಿ, ಡಾ. ಜಿ.ಪಿ. ಕುಸುಮಾ ಅವರಂತಹ ಕವಯತ್ರಿಯರು, ಜೀವನಾನುಭವದಿಂದ ಕೂಡಿದ ಗಟ್ಟಿ ಸಾಹಿತ್ಯಗಳನ್ನು ನೀಡಿದ ಡಾ. ಸುನೀತಾ ಎಂ. ಶೆಟ್ಟಿ ಮೊದಲಾಗಿ ಈ ಮಣ್ಣಿನಲ್ಲಿ ಅಸಂಖ್ಯಾತ ಪ್ರತಿಭೆಗಳು ಅರಳಿವೆ, ಆದರೆ ನಮ್ಮ ಒಳನಾಡಿಗೆ ಈ ಪ್ರತಿಭೆಗಳ ಕೃತಿಗಳು ಇನ್ನೂ ಹೊರಗಿನವುಗಳಾಗಿಯೇ ಯಾಕೆ ಕಾಣಿಸುತ್ತಿವೆೆ? ಎಲ್ಲೋ ಒಂದೆರಡು ಬಿಟ್ಟರೆ ಇಲ್ಲಿನ ಪ್ರತಿಭೆಗಳು ಮುಖ್ಯ ಪ್ರಶಸ್ತಿಗಳಲ್ಲಿ, ಗೌರವಗಳಲ್ಲಿ ಯಾಕೆ ಕಾಣಿಸುತ್ತಿಲ್ಲ? ಹಿಂದೊಮ್ಮೆ ಇಲ್ಲಿನ ಹಿರಿಯ ಸಾಹಿತಿ ಹೇಳಿದ ‘‘ನಿಮಗೆ ಅಕಾಡಮಿ-ಗಿಕಾಡಮಿ ಪ್ರಶಸ್ತಿಗಳು ಬರಬೇಕಾದರೆ ನೀವು ಬೆಂಗಳೂರಿಗೆ ಹೋಗಿ ನೆಲೆಸಬೇಕು’’ ಎಂಬ ಮಾತು ನೆನಪಾಗುತ್ತದೆ. ಕರ್ನಾಟಕದ ರಾಜಕಾರಣಿಗಳೇ, ಪ್ರಶಸ್ತಿ ಪುರಸ್ಕಾರದ ಆಯ್ಕೆಗಾರರೇ, ಮುಂಬೈಯಲ್ಲೂ ಪ್ರತಿಭೆಗಳಿವೆ ಆ ಪ್ರತಿಭೆಗಳನ್ನು ಗುರುತಿಸಿ. ಪ್ರತಿಭೆ ಇದೆ ಎಂದಾದರೆ ನಿಜವಾಗಿ ಸಲ್ಲಬೇಕಾದ ಹಕ್ಕಿನ ಗೌರವಗಳನ್ನು ಇಲ್ಲಿನ ಲೇಖಕಿಯರಿಗೂ ನೀಡಿ. ಆಗ ಬಹುಶಃ ಪ್ರಶಸ್ತಿಗೂ ಸಾರ್ಥಕತೆ ಬರುವುದು. ಯಾವುದೇ ರೀತಿಯ ವಶೀಲಿ ಇದ್ದರೆ ಮಾತ್ರ ಪ್ರಶಸ್ತಿ ಪುರಸ್ಕಾರ ಎಂದಾದರೆ ನಮ್ಮ ಇಲ್ಲಿನ ಲೇಖಕಿಯರಿಗೆ ಅಂತಹ ಪ್ರಶಸ್ತಿ ಬೇಡ. ಏಕೆಂದರೆ ಇವರಿಗೆ ಅಥವಾ ‘ಸೃಜನಾ’ಕ್ಕೆ ಆ ಗುಣ ಇನ್ನೂ ಮೈಗಂಟಿಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)