ಕೊರೋನ ಕರ್ಫ್ಯೂ: ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿದ್ದ ಕಾರ್ಮಿಕರು ಮತ್ತೆ ಊರಿನತ್ತ
ಬೆಂಗಳೂರು, ಎ.26: ಕೋವಿಡ್-19 ಸೋಂಕಿನ ಎರಡನೆ ಅಲೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರಕಾರ ಎ.27ರಿಂದ 14 ದಿನಗಳ ಕಾಲ ರಾಜ್ಯಾದ್ಯಂತ ಕೊರೋನ ಕರ್ಫ್ಯೂ ಜಾರಿ ಮಾಡುವ ತೀರ್ಮಾನ ಕೈಗೊಂಡ ಬೆನ್ನಲ್ಲೇ, ಉದ್ಯೋಗ ಅರಸಿ ನಗರಕ್ಕೆ ಬಂದಿದ್ದ ಜನರು ಸಾಲು ಸಾಲಾಗಿ ಬೆಂಗಳೂರನ್ನು ತೊರೆಯಲಾರಂಭಿಸಿದ್ದಾರೆ.
ಬೆಂಗಳೂರಿನಲ್ಲಿ ಕೊರೋನ ಸೋಂಕು ಮತ್ತು ಸಾವಿನ ಸಂಖ್ಯೆ ಉಲ್ಬಣಿಸುತ್ತಿದ್ದು, ಸರಕಾರ ಕಠಿಣ ನಿಯಮಗಳನ್ನು ಜಾರಿಗೊಳಿಸುತ್ತಿದೆ ಎಂಬ ಹಿನ್ನೆಲೆಯಲ್ಲಿ ಬದುಕು ಕಟ್ಟಿಕೊಳ್ಳಲು ನಗರಕ್ಕೆ ಬಂದಿದ್ದ ಜನ ಈಗ ಮತ್ತೆ ತಮ್ಮ ತಮ್ಮ ಊರುಗಳ ಕಡೆಗೆ ಮುಖ ಮಾಡುತ್ತಿದ್ದಾರೆ. ಕಳೆದ ಬಾರಿ ಏಕಾಏಕಿ ಲಾಕ್‍ಡೌನ್ ಘೋಷಣೆಯಾದಾಗ ತಮ್ಮ ಊರುಗಳಿಗೆ ತಲುಪಲು ಸಾಧ್ಯವಾಗದೆ ತಮ್ಮ ಮಕ್ಕಳೊಂದಿಗೆ ನೂರಾರು ಕಿ.ಮೀ ನಡೆದೆ ಹೋಗಿದ್ದರು. ಕೆಲಸವಿಲ್ಲದೆ ಆಹಾರದ ಅಭಾವದಿಂದ ಎಷ್ಟೋ ಜನ ನಲುಗಿದ್ದರು. ಈಗ ಮತ್ತೆ ಕೊರೋನ ಸೋಂಕು ಹೆಚ್ಚಾಗುತ್ತಿದೆ. ಸಾವಿನ ಪ್ರಮಾಣವು ಹೆಚ್ಚಾಗುತ್ತಿದೆ. ಜೀವ ಇದ್ದರೆ ಜೀವನ ಮಾಡಬಹುದು ಎಂದು ತಮ್ಮ ತಮ್ಮ ಊರುಗಳಿಗೆ ತೆರಳಲು ಮುಂದಾಗುತ್ತಿದ್ದಾರೆ.
ಎ.27ರಿಂದ ಹದಿನಾಲ್ಕು ದಿನಗಳ ಕಾಲ ಕೊರೋನ ಕರ್ಫ್ಯೂ ಜಾರಿ ಎನ್ನುತ್ತಿದ್ದಂತೆಯೇ ಇನ್ನಷ್ಟು ಜನರು ಸೋಮವಾರ ಬೆಂಗಳೂರಿನ ವಿವಿಧೆಡೆಯಿಂದ ಖಾಸಗಿ ಬಸ್, ಕ್ರೂಸರ್, ಟೆಂಪೋ, ಗೂಡ್ಸ್ ವಾಹನಗಳ ಮೂಲಕ ಲಗೇಜ್‍ಗಳನ್ನು ತುಂಬಿಕೊಂಡು ಊರುಗಳಿಗೆ ಜನ ತೆರಳುತ್ತಿದ್ದದ್ದು ಕಂಡುಬಂತು.
ಕಳೆದ ಬಾರಿ ಲಾಕ್‍ಡೌನ್ ಆದಾಗ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹೋಗಲು ಕಠಿಣ ನಿಯಮಾವಳಿಗಳನ್ನು ಜಾರಿ ಮಾಡಲಾಗಿತ್ತು. ಬೆಂಗಳೂರಿನಿಂದ ಹಳ್ಳಿಗಳಿಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಗ್ರಾಮಗಳಿಗೆ, ಬೇರೆ ಪ್ರದೇಶಗಳಿಗೆ ಹೋಗಬೇಕಾದರೆ ಕೊರೋನ ತಪಾಸಣೆ ಮಾಡಿಸಿಕೊಂಡು ದೃಢೀಕರಣ ಪತ್ರ ಪಡೆದು ಹೋಗಬೇಕಾಗಿತ್ತು. ಆದರೆ ಸದ್ಯ ಈಗ ಅಂಥ ಪರಿಸ್ಥಿತಿ ಇಲ್ಲ. ಸರಕಾರ ಅಂಥ ನಿಯಮಗಳೇನಾದರೂ ಮತ್ತೆ ಜಾರಿಗೊಳಿಸಿದರೆ ನಾವು ನಮ್ಮ ಹಳ್ಳಿಗಳನ್ನು ಸೇರಿಕೊಳ್ಳುವುದು ಕಷ್ಟವಾಗುತ್ತದೆ. ಅದಕ್ಕಾಗಿ ಈಗಲೇ ಹೋಗುವುದು ಸೂಕ್ತ ಎಂದು ಜನರು ತಮ್ಮ ಊರುಗಳತ್ತ ಮುಖ ಮಾಡಿದ್ದಾರೆ.
ಕೊರೋನ ಮೊದಲ ಅಲೆ ಶುರುವಾಗಿ, ಲಾಕ್‍ಡೌನ್ ಘೋಷಣೆಯಾಗಿ, ನಿಧಾನವಾಗಿ ಅನ್ ಲಾಕ್ ಆದಾಗ ಊರುಗಳಲ್ಲಿದ್ದ ಜನರು ಬೆಂಗಳೂರಿಗೆ ಬಂದಿದ್ದರು. ಕೆಲವರು ಬೆಂಗಳೂರಿಗೆ ಬರದೆ ಅಲ್ಲೆ ನೆಲೆ ಕಂಡುಕೊಂಡಿದ್ದರು. ಕೊರೋನ ಮುಗಿದೇ ಹೋಯಿತು, ಇನ್ನೇನು ಸಾಂಕ್ರಾಮಿಕ ರೋಗದ ಭೀತಿಯಿಲ್ಲ, ಇದರಿಂದ ನಾವು ಮುಕ್ತವಾದವು ಎಂದು ಜನ ನಿರ್ಭೀತಿಯಿಂದ ಓಡಾಡುತ್ತಿದ್ದ ಸಂದರ್ಭದಲ್ಲಿ 2ನೆ ಅಲೆಯ ಆರ್ಭಟ ಜೋರಾಯಿತು.
ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಸೋಂಕಿತರ ಪ್ರಮಾಣ ಪ್ರತಿದಿನ 15ರಿಂದ 20 ಸಾವಿರದಷ್ಟು ಹೆಚ್ಚಳವಾಗತೊಡಗಿದೆ. ಈಗಾಗಲೇ ಸಾವಿನ ಪ್ರಮಾಣ ಪ್ರತಿದಿನ 100ರ ಗಡಿ ದಾಟಿದೆ. ಇದೇ ರೀತಿ ಮುಂದುವರಿದರೆ ನಮ್ಮ ಗತಿಯೇನು ಎಂಬ ಆತಂಕದಿಂದ ಜನ ತಮ್ಮ ತಮ್ಮ ಊರುಗಳಿಗೆ ಹೋಗಲು ಅಣಿಯಾಗಿದ್ದಾರೆ.
ಜನ ಏಕಾಏಕಿ ಸ್ವಂತ ಊರುಗಳಿಗೆ ಹೋಗುತ್ತಿರುವುದರಿಂದ ಕೊರೋನ ಗ್ರಾಮೀಣ ಪ್ರದೇಶದಲ್ಲೂ ಹೆಚ್ಚಳ ಆಗುವ ಸಾಧ್ಯತೆ ಇದೆ. ರಾಜಧಾನಿ ಬೆಂಗಳೂರು ಜಿಲ್ಲಾ ಮಟ್ಟದಲ್ಲಿ, ಜಿಲ್ಲಾ ಕೇಂದ್ರಗಳಲ್ಲಿ ಕಂಡುಬರುತ್ತಿದೆ. ಈಗ ಜನ ಗ್ರಾಮೀಣ ಪ್ರದೇಶಗಳಿಗೆ ಹೋದರೆ ಅಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.