ಕೋವಿಡ್ ಕೊಲೆಗಳು-ಕಾರ್ಪೊರೇಟ್ ರಣಹದ್ದುಗಳು
ಒಂದೆಡೆ ಕೆನಡಾ, ಅಮೆರಿಕಗಳು ಮಾತ್ರವಲ್ಲ ನೇಪಾಳ ಮತ್ತು ಬ್ರೆಝಿಲ್ ಕೂಡಾ ದೂರದೃಷ್ಟಿಯಿಂದ ಯೋಜನೆಗಳನ್ನು ರೂಪಿಸಿಕೊಂಡು ತಮ್ಮ ಜನಸಂಖ್ಯೆಗೆ ಬೇಕಾದಷ್ಟು ಲಸಿಕೆಗಳನ್ನು ಸಂಗ್ರಹಿಸಿಟ್ಟುಕೊಂಡಿವೆ. ಇದರಲ್ಲಿ ಅಮೆರಿಕ, ಕೆನಡಾ ಹಾಗೂ ಯೂರೋಪಿನ ದೇಶಗಳು ವ್ಯಾಕ್ಸಿನ್ ವಸಾಹತುವಾದಿ ಧೋರಣೆಯಿಂದ ಕೂಡಿಟ್ಟುಕೊಳ್ಳುತ್ತಿರುವುದು ಕೂಡಾ ನಿಜ. ಆದರೆ ಭಾರತ ಸರಕಾರ ಮೋದಿಯವರ ನೇತೃತ್ವದಲ್ಲೇ ಕೋವಿಡ್ ಅನ್ನು ಗೆದ್ದೆವೆಂಬ ಸ್ವಭ್ರಾಂತ ಉನ್ಮಾದ ಹಾಗೂ ದ್ವೇಷ ರಾಜಕಾರಣದಲ್ಲಿ ತೊಡಗಿದ್ದರಿಂದ ಇಂದು ಭಾರತದ ಶೇ. 7ರಷ್ಟು ಜನರಿಗೂ ವ್ಯಾಕ್ಸಿನ್ ದೊರೆತಿಲ್ಲ. ಮುಂದಿನ 12 ತಿಂಗಳವರೆಗೂ ಸಿಗುವ ಸಾಧ್ಯತೆಯೂ ಇಲ್ಲವಾಗಿದೆ.
ಇಂದು ಜಗತ್ತಿನ ಬಹುಪಾಲು ಪ್ರಜಾತಾಂತ್ರಿಕ ದೇಶಗಳು-ಕೆಲವು ಭಾರತಕ್ಕಿಂತ ಮುಂದುವರಿದವು-ಕೆಲವು ಭಾರತದಷ್ಟು ಮುಂದುವರಿಯದವು- ಕೋವಿಡ್ ಲಸಿಕೆಯ ಮೂಲಕ ತಮ್ಮ ತಮ್ಮ ದೇಶಗಳನ್ನು ಕೊರೋನ ಮುಕ್ತಗೊಳಿಸಿಕೊಳ್ಳುತ್ತಿದ್ದರೆ ಭಾರತದಲ್ಲಿ ಮಾತ್ರ ಆಕ್ಸಿಜನ್ ಕೊರತೆ, ಐಸಿಯು ಕೊರತೆ, ಚಿತಾಗಾರದ ಕೊರತೆಗಳಿಂದಾಗಿ ಕೋವಿಡ್ ಸಾವುಗಳು ಹೆಚ್ಚಾಗುತ್ತಿವೆ. ಸ್ವಾತಂತ್ರ್ಯಾ ನಂತರದಲ್ಲೇ ಅತ್ಯಂತ ದೊಡ್ಡ ಸರಕಾರಿ ಪ್ರಾಯೋಜಿತ ದುರಂತಕ್ಕೆ ಭಾರತ ಬಲಿಯಾಗುತ್ತಿದೆ.
ಏಕೆಂದರೆ, ಇಡೀ ಜಗತ್ತು ಎರಡನೇ ಕೋವಿಡ್ ಅಲೆಗೆ 2020ರ ಸೆಪ್ಟಂಬರ್ ತಿಂಗಳಿಂದಲೇ ತಯಾರಿ ಮಾಡಿಕೊಳ್ಳುತ್ತಿದ್ದರೆ, ಭಾರತ ಸರಕಾರವು ಮೋದಿ ನೇತೃತ್ವದಲ್ಲಿ ತೆರೆದಿದ್ದ ಕೋವಿಡ್ ಆಸ್ಪತ್ರೆಗಳನ್ನೆಲ್ಲಾ ಮುಚ್ಚಲು ಶುರುಮಾಡಿತ್ತು! ಕೋವಿಡ್ ಲಸಿಕೆಯನ್ನು ಕಂಡುಹಿಡಿದ ಮೇಲೆ ಜಗತ್ತಿನ ಬಹುಪಾಲು ದೇಶಗಳು ತಮ್ಮ ತಮ್ಮ ದೇಶದ ಜನಸಂಖ್ಯೆಗೆ ಬೇಕಿರುವಷ್ಟು ಲಸಿಕೆಯನ್ನು ಪಡೆಯಲು ಬಂಡವಾಳ ಹೂಡಿಕೆ, ಒಪ್ಪಂದಗಳನ್ನು ಮಾಡಿಕೊಳ್ಳುತ್ತಿದ್ದರೆ ಮೋದಿ ಸರಕಾರ ಮಾತ್ರ ಜನರಿಗೆ ದೀಪ ಹಚ್ಚುವ, ಜಾಗಟೆ ಬಡಿಯುವ, ಸೆಗಣಿ ಸೇವಿಸುವ ದೀಕ್ಷೆಯನ್ನು ಕೊಡುತ್ತಾ, ಕೊರೋನವನ್ನು ಕೋಮುವಾದೀಕರಿಸುತ್ತಾ, ದೇವರ ಮುಂದೆ ಕೊರೋನ ಆಟ ನಡೆಯುವುದಿಲ್ಲವೆಂದು ಕುಂಭ ಮೇಳ ನಡೆಸುತ್ತಾ, ಲಕ್ಷಾಂತರ ಜನರನ್ನು ಒಟ್ಟು ಸೇರಿಸಿ ಚುನಾವಣಾ ಜಾತ್ರೆ ನಡೆಸುತ್ತಾ... ಇವೆಲ್ಲವನ್ನೂ ಆತ್ಮರತಿಯಲ್ಲಿ ಸಂಭ್ರಮಿಸುತ್ತಾ ಆತ್ಮಘಾತುಕ ರಾಜಕಾರಣದಲ್ಲಿ ತೊಡಗಿಕೊಂಡಿತ್ತು. ಹೀಗಾಗಿಯೇ ಎರಡನೇ ಅಲೆ ಅಪ್ಪಳಿಸಿದಾಗ ಹೇಗೆ ನಿಭಾಯಿಸಬೇಕೆಂದು ತಿಳಿಯದೆ ಜನರ ಮೇಲೆ ಲಾಕ್ಡೌನ್, ಎನ್ಎಸ್ಎ, ಆರೋಗ್ಯ ಎಮರ್ಜೆನ್ಸಿ ಅಸ್ತ್ರಗಳನ್ನು ಪ್ರಯೋಗಿಸುತ್ತಿದೆ!
ಒಂದೆಡೆ ಕೆನಡಾ, ಅಮೆರಿಕಗಳು ಮಾತ್ರವಲ್ಲ ನೇಪಾಳ ಮತ್ತು ಬ್ರೆಝಿಲ್ ಕೂಡಾ ದೂರದೃಷ್ಟಿಯಿಂದ ಯೋಜನೆಗಳನ್ನು ರೂಪಿಸಿಕೊಂಡು ತಮ್ಮ ಜನಸಂಖ್ಯೆಗೆ ಬೇಕಾದಷ್ಟು ಲಸಿಕೆಗಳನ್ನು ಸಂಗ್ರಹಿಸಿಟ್ಟುಕೊಂಡಿವೆ. ಇದರಲ್ಲಿ ಅಮೆರಿಕ, ಕೆನಡಾ ಹಾಗೂ ಯೂರೋಪಿನ ದೇಶಗಳು ವ್ಯಾಕ್ಸಿನ್ ವಸಾಹತುವಾದಿ ಧೋರಣೆಯಿಂದ ಕೂಡಿಟ್ಟುಕೊಳ್ಳುತ್ತಿರುವುದು ಕೂಡಾ ನಿಜ.
ಆದರೆ ಭಾರತ ಸರಕಾರ ಮೋದಿಯವರ ನೇತೃತ್ವದಲ್ಲೇ ಕೋವಿಡ್ ಅನ್ನು ಗೆದ್ದೆವೆಂಬ ಸ್ವಭ್ರಾಂತ ಉನ್ಮಾದ ಹಾಗೂ ದ್ವೇಷ ರಾಜಕಾರಣದಲ್ಲಿ ತೊಡಗಿದ್ದರಿಂದ ಇಂದು ಭಾರತದ ಶೇ. 7ರಷ್ಟು ಜನರಿಗೂ ವ್ಯಾಕ್ಸಿನ್ ದೊರೆತಿಲ್ಲ. ಮುಂದಿನ 12 ತಿಂಗಳವರೆಗೂ ಸಿಗುವ ಸಾಧ್ಯತೆಯೂ ಇಲ್ಲವಾಗಿದೆ.
ಜೊತೆಗೆ ಇಂದು ಭಾರತ ಜಗತ್ತಿನಲ್ಲೇ ಎರಡನೇ ಅತಿ ಹೆಚ್ಚು ಕೋವಿಡ್ ಸೋಂಕಿತರಿರುವ ದೇಶವಾಗಿದೆ. ನಿತ್ಯ ಸೋಂಕಿತರ ಸಂಖ್ಯೆಯಲ್ಲಿ ಹಾಗೂ ನಿತ್ಯ ಸಾವಿನ ಸಂಖ್ಯೆಯಲ್ಲಿ ವಿಶ್ವದಲ್ಲೇ ಮೊದಲಿನ ಸ್ಥಾನದಲ್ಲಿದೆ. ಎರಡನೇ ಅಲೆಯಲ್ಲಿ ಅತಿ ಹೆಚ್ಚು ಅನಾಹುತಕ್ಕೆ ಗುರಿಯಾಗಿರುವುದು ಭಾರತವೇ ಆಗಿದೆ ಮತ್ತು ಅದಕ್ಕೆ ಪ್ರಧಾನ ಕಾರಣ ಕೋವಿಡ್ ನಿಭಾವಣೆಯ ಬಗ್ಗೆ ಉಡಾಫೆ, ಆತ್ಮರತಿ, ಮೌಢ್ಯ, ಜನರ ಬಗ್ಗೆ ನಿಷ್ಕಾಳಜಿ, ದೂರದೃಷ್ಟಿಯ ಕೊರತೆ ಹಾಗೂ ಕಾರ್ಪೊರೇಟ್ಪರತೆಗಳೇ ಕಾರಣವೆಂಬುದು ಸ್ಪಷ್ಟವಾಗಿದೆ. ಆದ್ದರಿಂದಲೇ ಇಂದು ವಿಶ್ವದ ಹಲವಾರು ಪ್ರತಿಷ್ಠಿತ ಪತ್ರಿಕೆಗಳು ಮೋದಿಯನ್ನು ವಿಶ್ವಕ್ಕೆ ಕೋವಿಡ್ ಅನ್ನು ಹರಡುತ್ತಿರುವ ‘‘ಸೂಪರ್ ಸ್ಪ್ರೆಡರ್’’ ಎಂದು ಬಣ್ಣಿಸುತ್ತಿವೆ.
ಹೀಗಾಗಿ ಭಾರತದಲ್ಲಿ ಇಂದು ನಾವು ಅನುಭವಿಸುತ್ತಿರುವ ಕೋವಿಡ್ ಸಂಕಷ್ಟಗಳನ್ನು-ಸಾವುಗಳನ್ನು ಮೋದಿ ಸರಕಾರ ನಡೆಸುತ್ತಿರುವ ಕೋವಿಡ್ ಕೊಲೆಗಳೆಂದೇ ಪರಿಗಣಿಸಬೇಕು.
ಮೋದಿ ಸರಕಾರವು ಕೋವಿಡ್ ಸಂದರ್ಭದಲ್ಲಿ ತೋರುತ್ತಿರುವುದು ಕೇವಲ ಉಡಾಫೆ ಮಾತ್ರವಲ್ಲ. ಮೋದಿ ಸರಕಾರ ಕೋವಿಡ್ ಸಾವಿನ ಜಾತ್ರೆಯಲ್ಲೂ ಕಾರ್ಪೊರೇಟ್ ಕಂಪೆನಿಗಳಿಗೆ ದುಪ್ಪಟ್ಟು ಲಾಭ ಮಾಡಿಕೊಡುವ ಕಾರ್ಪೊರೇಟ್ ದಲ್ಲಾಳಿಯೂ ಆಗಿದೆ. ಹಾಗೆಯೇ ಅದರ ಬಗ್ಗೆ ಪ್ರಶ್ನಿಸುವವರನ್ನು ಹತ್ತಿಕ್ಕುವ ಫ್ಯಾಶಿಸ್ಟ್ ಪರೋಪಜೀವಿ ಧೋರಣೆಯ ಕ್ರೌರ್ಯವನ್ನೂ ಪ್ರದರ್ಶಿಸುತ್ತಿದೆ.
ಕಾರ್ಪೊರೇಟ್ ರಣಹದ್ದುಗಳಿಗೆ ಮೋದಿಯ ರೆಕ್ಕೆಗಳು
ಹಾಗೆ ನೋಡಿದರೆ ವ್ಯಾಕ್ಸಿನ್ ಉತ್ಪಾದನೆಯಲ್ಲಿ ಹಾಗೂ ಅದನ್ನು ಜನರಿಗೆ ನೀಡುವಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ಕೇಂದ್ರ ಸರಕಾರವೇ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡಿದೆ ಮತ್ತು ಅದರ ಸಂಶೋಧನೆಗೆ ಸರಕಾರಿ ವೈಜ್ಞಾನಿಕ ಸಂಸ್ಥೆಗಳು, ಉತ್ಪಾದನೆಗೆ ಸಾರ್ವಜನಿಕ ವಲಯದ ಉದ್ದಿಮೆಗಳು ಹಾಗೂ ವಿತರಣೆಗೆ ಆಡಳಿತ ಯಂತ್ರಾಂಗಗಳು ಎಲ್ಲವೂ ಕಳೆದ 70 ವರ್ಷಗಳಿಂದ ತಮ್ಮ ಕ್ಷಮತೆಯನ್ನು ಸಾಬೀತುಪಡಿಸಿವೆ. ಆದರೂ ಮೋದಿ ಸರಕಾರ ‘‘ಆತ್ಮ ನಿರ್ಭರತೆ’’ ಇತ್ಯಾದಿ ಬೊಗಳೆಗಳನ್ನು ಬಿಡುತ್ತ ಕೋವಿಡ್ ವ್ಯಾಕ್ಸಿನ್ ಉತ್ಪಾದನೆಯನ್ನು ಭಾರತದ ಮೂರನೇ ಅತಿ ದೊಡ್ಡ ಶ್ರೀಮಂತ ಕಂಪೆನಿಯಾದ ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (SII) ಮತ್ತು ಭಾರತ್ ಬಯೋಟೆಕ್ (BB) ಎಂಬ ಕಂಪೆನಿಗೆ ವಹಿಸಿತು.
ಇದರ ಅರ್ಥ ಇವೆರಡೂ ಕಂಪೆನಿಗಳು ತಮ್ಮದೇ ಬಂಡವಾಳ ಹೂಡಿ ಕೋವಿಡ್ ವೈರಸ್ ಅನ್ನು ಭಾರತದಲ್ಲೇ ಸ್ವತಂತ್ರವಾಗಿ ಸಂಶೋಧನೆ ಮಾಡಿ. ಉತ್ಪಾದಿಸುತ್ತಿದ್ದವು ಎಂದಲ್ಲ. (SII) ಆಧರಿಸಿರುವುದು ಇಂಗ್ಲೆಂಡಿನ ಆ್ಯಸ್ಟ್ರಝೆನೆಕ ಸಂಸ್ಥೆ ಸಂಶೋಧಿಸಿದ ಲಸಿಕೆಯನ್ನು. (BB) ಆಧರಿಸಿರುವುದು ಅಮೆರಿಕದ ಮೆಲಿಂದಾ ಗೇಟ್ಸ್ ನೀಡಿರುವ ಜ್ಞಾನವನ್ನು.
ಇದರಲ್ಲಿ ಬುರುಡೆ ಬಿಟ್ಟರೆ ಯಾವ ಆತ್ಮನಿರ್ಭರತೆಯೂ ಇಲ್ಲ.
ಬೇಡಿಕೆಯಿದ್ದರೂ ಉತ್ಪಾದನಾ ಸಾಮರ್ಥ್ಯವಿಲ್ಲದ ಕಂಪೆನಿಗಳು
ಇನ್ನು ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಭಾರತದಲ್ಲಿ ಕೋವಿಡ್ ನಿಯಂತ್ರಣಕ್ಕೆ ಬರಬೇಕೆಂದರೆ ಭಾರತದ ವಯಸ್ಕ ಜನಸಂಖ್ಯೆಯ ಶೇ. 60ರಷ್ಟಾದರೂ ಅಂದರೆ ಕನಿಷ್ಠ 75 ಕೋಟಿ ಜನರಿಗಾದರೂ ಲಸಿಕೆಯನ್ನು ಕೊಡಬೇಕು. ಅಂದರೆ ಭಾರತಕ್ಕೆ ಕನಿಷ್ಠ 150 ಕೋಟಿ ಲಸಿಕೆಗಳು ಬೇಕು. ಎಷ್ಟು ಬೇಗ ಇದನ್ನು ಜನರಿಗೆ ಒದಗಿಸಲು ಸಾಧ್ಯವೋ ಅಷ್ಟು ಬೇಗ ಭಾರತ ಕೋವಿಡ್ ಮುಕ್ತವಾಗುತ್ತದೆ. ಆದರೆ ಭಾರತವನ್ನು ವಿರೋಧಪಕ್ಷ ಮುಕ್ತವಾಗುವುದನ್ನು ಮಾತ್ರ ಧ್ಯೇಯವಾಗಿಸಿಕೊಂಡಿರುವ ಬಿಜೆಪಿ ಸರಕಾರಕ್ಕೆ ಈ ಭಾರತವನ್ನು ಕೋವಿಡ್ ಮುಕ್ತ ಮಾಡುವ ದೂರಾಲೋಚನೆಯೇ ಇರಲಿಲ್ಲ. ಏಕೆಂದರೆ ಹುಸಿ ಆತ್ಮನಿರ್ಭರತೆಯ ಘೋಷಣೆಯ ಮರೆಯಲ್ಲಿ ಜಗತ್ತಿನ ಬೇರೆ ಯಾವ ದೇಶಗಳಿಂದಲೂ ಕೋವಿಡ್ ಲಸಿಕೆಯನ್ನು ತರಿಸುವ ಆಲೋಚನೆಯನ್ನು ಮಾಡದ ಅಥವಾ ಸರಕಾರದ್ದೇ ಸಂಸ್ಥೆಗಳ ಮೂಲಕ ಲಸಿಕೆಯನ್ನು ಉತ್ಪಾದಿಸುವ ಯೋಜನೆಯನ್ನೂ ಮಾಡದ ಮೋದಿ ಸರಕಾರ ಇಡೀ ಲಸಿಕೋತ್ಪಾದನೆಯನ್ನೂ ಹಾಗೂ ಭಾರತದ ಭವಿಷ್ಯವನ್ನು (SII) ಮತ್ತು (BB) ಎಂಬ ಎರಡು ಖಾಸಗಿ ಕಂಪೆನಿಗಳ ಏಕಸ್ವಾಮ್ಯಕ್ಕೆ ಬಿಟ್ಟುಕೊಟ್ಟಿತು.
ಆದರೆ ಈ ಕಂಪೆನಿಗಳ ಉತ್ಪಾದನಾ ಸಾಮರ್ಥ್ಯವಾದರೂ ಎಷ್ಟು?
SII ಕಂಪೆನಿಗೆ ತಿಂಗಳಿಗೆ 6 ಕೋಟಿ ಲಸಿಕೆಗಳನ್ನು ಉತ್ಪಾದಿಸುವ ಸಾಮರ್ಥ್ಯ ಮಾತ್ರವಿದೆ. (BB) ತಿಂಗಳಿಗೆ ಹೆಚ್ಚೆಂದರೆ ಒಂದು ಕೋಟಿ ಲಸಿಕೆಗಳು ಮಾತ್ರ ಉತ್ಪಾದಿಸಬಲ್ಲವು. ಅಂದರೆ ಇವುಗಳ ಜಂಟಿ ಉತ್ಪಾದಿಸುವ ಸಾಮರ್ಥ್ಯ ತಿಂಗಳಿಗೆ 8 ಕೋಟಿ. ಈಗ ಅವು ಒಟ್ಟು ತಿಂಗಳಿಗೆ 11 ಕೋಟಿ ಉತ್ಪಾದಿಸಬಲ್ಲವು ಎನ್ನುತ್ತಿವೆ. ಆಗಲೂ ಭಾರತದ ಶೇ. 60ರಷ್ಟು ಜನರಿಗೆ ಬೇಕಾದ ಲಸಿಕೆ ಪೂರೈಸಲು 15 ತಿಂಗಳು ಬೇಕಾಗುತ್ತದೆ.
ನವಲಸಿಕೆ ನೀತಿ- ಭಾರತೀಯರ ಪ್ರಾಣಗಳ ಹರಾಜು
ಗಾಯದ ಮೇಲೆ ಬರೆ ಹಾಕುವಂತೆ ಮೊನ್ನೆ ಮೋದಿ ಸರಕಾರ ಕೋವಿಡ್ ಲಸಿಕೆಯನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಿಕೊಳ್ಳಲು ಈ ಎರಡು ಕಂಪೆನಿಗಳಿಗೆ ಪರವಾನಿಗೆ ಕೊಟ್ಟಿರುವುದಲ್ಲದೆ, ರಾಜ್ಯ ಸರಕಾರಗಳು ಕೂಡಾ ಈ ಎರಡು ಮೋದಿಯ ಕ್ರೋನಿ ಶಿಶು ಕಂಪೆನಿಗಳು ನಿಗದಿ ಮಾಡಿದ ದರಕ್ಕೆ ಲಸಿಕೆಯನ್ನು ಮುಕ್ತ ಮಾರುಕಟ್ಟೆಯಿಂದ ಕೊಂಡುಕೊಳ್ಳಬೇಕೆಂಬ ಅತ್ಯಂತ ಜನದ್ರೋಹಿ, ಹಾಗೂ ಕಾರ್ಪೊರೇಟ್ ಗುಲಾಮಿ ನೀತಿಯನ್ನು ಘೋಷಿಸಿವೆ. ಇದರ ಪ್ರಕಾರ ಇನ್ನುಮುಂದೆ SII ತನ್ನ ಕೋವಿಶೀಲ್ಡ್ ಲಸಿಕೆಯನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಈ ಹಿಂದೆ ಕೊಡುತ್ತಿದ್ದಂತೆ 150 ರೂ. ಬದಲಿಗೆ 400 ರೂ.ಗಳಿಗೆ ಮಾರುತ್ತದೆ ಹಾಗೂ ಖಾಸಗಿ ಆಸ್ಪತ್ರೆಗಳಿಗೆ 600 ರೂ. ಗಳಿಗೆ ಮಾರುತ್ತದೆ ಹಾಗೂ ಕ್ರಮೇಣ ಅದನ್ನು 1,000 ರೂ. ಗಳಿಗೆ ಏರಿಸುವ ಇರಾದೆಯನ್ನು ಹೊಂದಿದೆ.
BB ತನ್ನ ಕೋವ್ಯಾಕ್ಸಿನ್ ಲಸಿಕೆಯನ್ನು ರಾಜ್ಯ ಸರಕಾರಗಳಿಗೆ 600 ರೂ. ಹಾಗೂ ಖಾಸಗಿ ಆಸ್ಪತ್ರೆಗಳಿಗೆ 1,200 ರೂ.ಗಳ ದರವನ್ನು ನಿಗದಿ ಮಾಡಿದೆ. ಇದರ ಜೊತೆಗೆ ನಿನ್ನೆ ಕೇಂದ್ರ ಸರಕಾರದ ಆರೋಗ್ಯ ಕಾರ್ಯದರ್ಶಿ ನೀಡಿರುವ ಮಾರ್ಗದರ್ಶಿ ಸೂತ್ರದ ಪ್ರಕಾರ ಮೇ 1ರಿಂದ ಲಸಿಕೆ ಪಡೆಯಬಲ್ಲ 18 -45ರ ನಡುವಿನ ವಯೋಮಾನದವರು ಕಡ್ಡಾಯವಾಗಿ ಖಾಸಗಿ ಆಸ್ಪತ್ರೆಗಳಲ್ಲೇ ಲಸಿಕೆ ಪಡೆದುಕೊಳ್ಳಬೇಕು ಹಾಗೂ ಭಾರತ ಸರಕಾರ 45 ವಯಸ್ಸಿನ ಮೇಲ್ಪಟ್ಟವರಿಗೆ ಮಾತ್ರ ಉಚಿತ ಲಸಿಕೆಯನ್ನು ಸರಕಾರಿ ಆಸ್ಪತ್ರೆಗಳ ಮೂಲಕ ದೊರಕಿಸುತ್ತದೆ.
ಅಷ್ಟು ಮಾತ್ರವಲ್ಲ. ಇನ್ನು ಮುಂದೆ ರಾಜ್ಯ ಸರಕಾರಗಳು ನೇರವಾಗಿ ಆ ಎರಡು ಕಂಪೆನಿಗಳೊಂದಿಗೆ ವ್ಯವಹಾರ ನಡೆಸಿ ತಮ್ಮ ಲಸಿಕೆಗಳನ್ನು ಪಡೆದುಕೊಳ್ಳಬೇಕು. ಆದರೆ, ಯಾವ ರಾಜ್ಯಗಳಿಗೆ ಎಷ್ಟು ಕೊಡಲು ಸಾಧ್ಯ ಎಂಬುದನ್ನು ಆ ಎರಡು ಕಂಪೆನಿಗಳು ತಮ್ಮ ಅದ್ಯತೆಯ ಮೇರೆಗೆ ನಿಗದಿ ಮಾಡುತ್ತವೆ!
ಇದರ ಪರಿಣಾಮವೇನು?
ಮೊದಲನೆಯದಾಗಿ ಯಾವ ರಾಜ್ಯಗಳು ಹೆಚ್ಚು ಹಣವನ್ನು ಹೆಚ್ಚು ಬೇಗ ಕಂಪೆನಿಗಳಿಗೆ ಒದಗಿಸುತ್ತವೋ ಮತ್ತು ಯಾವ ರಾಜ್ಯಗಳಿಗೆ ಲಸಿಕೆ ಸರಬರಾಜು ಮಾಡಲು ಸಾಗಾಟ ಕಷ್ಟವಿಲ್ಲವೋ ಆ ರಾಜ್ಯಗಳಿಗೆ ಕಂಪೆನಿಗಳು ಮೊದಲು ಲಸಿಕೆಯನ್ನು ಒದಗಿಸುತ್ತವೆ. ಈಗಾಗಲೇ ಎರಡು ಕಂಪೆನಿಗಳು ಲಸಿಕೆಗಳನ್ನು ಪೂರ್ವ ಭಾರತಕ್ಕಿಂತ ದಕ್ಷಿಣ ಭಾರತದ ರಾಜ್ಯಗಳಿಗೆ ತ್ವರಿತವಾಗಿ ಕಳಿಸಲು ಆಸಕ್ತಿ ತೋರಿವೆ!
ಎರಡನೆಯದಾಗಿ 18-45 ವಯೋಮಾನದವರೆಲ್ಲರೂ ಎರಡು ಲಸಿಕೆಯನ್ನು ಪಡೆಯಲು ಏನಿಲ್ಲವೆಂದರೂ 1,200-2,000 ರೂ. ಪಾವತಿ ಮಾಡಬೇಕು. ಇದು ಈಗಾಗಲೇ ಲಾಕ್ಡೌನ್ ಮತ್ತು ಆರ್ಥಿಕ ಕುಸಿತಗಳಿಂದ ಎಲ್ಲವನ್ನೂ ಕಳೆದುಕೊಂಡಿರುವ ಈ ದೇಶದ ಶೇ. 70ರಷ್ಟು ಬಡ-ಮಧ್ಯಮ ವರ್ಗಗಳಿಗೆ ಇನ್ನಷ್ಟು ಭಾರವಾಗುವುದಿಲ್ಲವೇ? ಲಸಿಕೆಯನ್ನು ಪಡೆದುಕೊಳ್ಳುವುದು ಪರೋಕ್ಷವಾಗಿ ಕಡ್ಡಾಯವಾದಾಗ ಬೇರೆ ಅಗತ್ಯ ವೆಚ್ಚಗಳಿಂದ ಕಿತ್ತು ಈ ಕಂಪೆನಿಗಳ ಲಾಭಕ್ಕೆ ತೆರಬೇಕಾಗುತ್ತದೆ.
ಬಜೆಟ್ನಲ್ಲಿ ಘೋಷಿಸಿದ ರೂ. 35,000 ಕೋಟಿ ಏನಾಯಿತು?
ಆದರೆ ಕೆಲವೇ ತಿಂಗಳ ಹಿಂದೆ ಮಂಡಿಸಿದ ಬಜೆಟ್ನಲ್ಲಿ ದೇಶದ ಎಲ್ಲರಿಗೂ ಉಚಿತವಾಗಿ ಲಸಿಕೆಯನ್ನು ಒದಗಿಸಲು ರೂ. 35,000 ಕೋಟಿಯನ್ನು ತೆಗೆದಿರಿಸಲಾಗಿತ್ತು. ಒಂದು ಲಸಿಕೆಗೆ 150 ರೂ. ಎಂದಿಟ್ಟುಕೊಂಡರೂ ಈ ದೇಶದ 70 ಕೋಟಿ ಜನಗಳಿಗಲ್ಲ, 116 ಕೋಟಿ ಜನರಿಗೆ ಅದರಿಂದ ಲಸಿಕೆಯನ್ನು ಉಚಿತವಾಗಿ ಒದಗಿಸಬಹುದಿತ್ತು.
ಈಗ ಸರಕಾರ 45 ವಯಸ್ಸಿನ ಮೇಲ್ಪಟ್ಟವರಿಗೆ ಮಾತ್ರ ಉಚಿತವಾಗಿ ಲಸಿಕೆ ಎನ್ನುತ್ತಿದೆ. 2019ರ ಅಂದಾಜಿನ ಪ್ರಕಾರ 45 ವಯಸ್ಸಿನ ಮೇಲ್ಪಟ್ಟವರ ಸಂಖ್ಯೆ 26 ಕೋಟಿ. ಅಷ್ಟು ಜನರಿಗೆ ಉಚಿತವಾಗಿ ಲಸಿಕೆ ಹಂಚಿದರೂ ವೆಚ್ಚವಾಗುವುದು ಕೇವಲ 10,000 ಕೋಟಿಗಳು ಮಾತ್ರ. ಆಗಲೂ ಬಜೆಟ್ನಲ್ಲಿ ಎತ್ತಿಟ್ಟ ಮೊತ್ತದಲ್ಲಿ 25,000 ಕೋಟಿ ಬಾಕಿ ಉಳಿಯುತ್ತದೆ. ರಾಜ್ಯ ಸರಕಾರಗಳು ರೂ. 400 ಕೊಟ್ಟು ಖರೀದಿಸಲು ಕೇಂದ್ರವು ಇದೇ ಮೊತ್ತವನ್ನು ಅನುದಾನ ನೀಡಿದರೂ 18 ವಯಸ್ಸಿನ ಮೇಲ್ಪಟ್ಟ ಅಥವಾ ಬಡತನ ರೇಖೆಗಿಂತ ಕೆಳಗಿರುವ ಎಲ್ಲರಿಗೂ ಹಾಗೂ ಸೌಲಭ್ಯರಹಿತ ಎಲ್ಲಾ ಜನವರ್ಗಗಳಿಗೂ ಉಚಿತವಾಗಿ ಲಸಿಕೆ ಕೊಡಬಹುದು. ಆದರೂ ಕೇಂದ್ರ ಸರಕಾರ ಏಕೆ ಬಜೆಟ್ನಲ್ಲಿ ಎತ್ತಿಟ್ಟ ಹಣದ ಬಗ್ಗೆ ಬಾಯಿ ಬಿಚ್ಚುತ್ತಿಲ್ಲ. ಉತ್ತರ ಸರಳ, ಈ ಬಾಬತ್ತಿನಲ್ಲಿ ಕಾರ್ಪೊರೇಟ್ ಕಂಪೆನಿಗಳಿಗೆ ಸೂಪರ್ ಪ್ರಾಫಿಟ್ ಇಲ್ಲ.
ಸೂಪರ್ ಪ್ರಾಫಿಟ್ನ ಎಮರ್ಜೆನ್ಸಿ
ಹಾಗೆ ನೋಡಿದರೆ ಈ ಕೋವಿಶೀಲ್ಡ್ ಲಸಿಕೆಯ ಮೂಲ ಸಂಶೋಧಕರಾದ ಆ್ಯಸ್ಟ್ರಝೆನೆಕ ಸಂಸ್ಥೆ ಯುರೋಪಿಗೆ ಹಾಗೂ ಇತರ ದೇಶಗಳಿಗೆ ವ್ಯಾಕ್ಸಿನ್ ಅನ್ನು 2.5- 5 ಡಾಲರ್ ಅಂದರೆ 200-300 ರೂ.ಗಳಿಗೆ ಸರಬರಾಜು ಮಾಡುತ್ತಿದೆ. ಅಷ್ಟು ಮಾತ್ರವಲ್ಲ ಇತರ ದೇಶಗಳಿಗೆ ರಫ್ತಾಗುತ್ತಿರುವ ಕೋವಿಶೀಲ್ಡ್ ದರವನ್ನು ಸಹ (TMM) 309 ರೂ.ಗಿಂತ ಹೆಚ್ಚು ನಿಗದಿ ಮಾಡಿಲ್ಲ.
ಆದರೆ ಭಾರತದಲ್ಲಿ ಮಾತ್ರ ಮೋದಿ ಸರಕಾರದ ಕೃಪಾಕಟಾಕ್ಷ ಇರುವುದರಿಂದ 600 ರೂ. ನಿಗದಿ ಮಾಡುವ ಗೈರತ್ತು ತೋರುತ್ತಿದೆ. ಇದಕ್ಕೆ SII ಮಾಲಕ ಆದಾರ್ ಪೂನಾವಾಲ ನೀಡಿರುವ ಕಾರಣ ದೊಡ್ಡ ಪ್ರಮಾಣದ ಉತ್ಪಾದನೆ ಮಾಡಲು ಕಾರ್ಖಾನೆಯ ಉತ್ಪಾದಕ ಸಾಮರ್ಥ್ಯ ಹೆಚ್ಚಿಸಬೇಕು. ಅದಕ್ಕೆ ಬೇಕಿರುವಷ್ಟು ಬಂಡವಾಳ ಕ್ರೋಡೀಕರಿಸಬೇಕೆಂದರೆ ಇಷ್ಟು ದರವನ್ನು ಇಡಲೇ ಬೇಕು ಇತ್ಯಾದಿ..
ಆದರೆ ಅವರು ಮುಚ್ಚಿಡುತ್ತಿರುವ ವಾಸ್ತವ ಸಂಗತಿಯೇನೆಂದರೆ ಭಾರತ ಸರಕಾರವು ತಿಂಗಳ ಹಿಂದೆಯೇ SIIನ ಉತ್ಪಾದಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ರೂ. 3,000 ಕೋಟಿಯನ್ನು ಮತ್ತು ಕೋವಾಕ್ಸಿನ್ ಉತ್ಪಾದಿಸುವ ಭಾರತ್ ಬಯೋಟೆಕ್ ಕಂಪೆನಿಗೆ ರೂ. 1,500 ಕೋಟಿಯನ್ನು ಯಾವುದೇ ಬ್ಯಾಂಕ್ ಗ್ಯಾರಂಟಿಯಿಲ್ಲದೆ ಒದಗಿಸಿದೆ...!
ಇದಕ್ಕೂ ಮುಂಚೆ ಅಂದರೆ 2020ರ ಸೆಪ್ಟ್ಟಂಬರ್ ವೇಳೆಗಾಗಲೇ ಖಐಐ ತನ್ನ ಉತ್ಪಾದಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಅಂತರ್ರಾಷ್ಟ್ರೀಯ ವ್ಯಾಕ್ಸಿನೇಷನ್ ಮತ್ತು ಇಮ್ಯುನೈಸೇಷನ್ ಮೈತ್ರಿಕೂಟವಾದ GAVI (Glonal Alliance For Vaacination and Immunisation-
ಇದು ವಿಶ್ವ ಆರೋಗ್ಯ ಸಂಸ್ಥೆಯನ್ನು ಒಳಗೊಂಡಂತೆ ಪ್ರಪಂಚದ ಶ್ರೀಮಂತ ದೇಶಗಳ ಸರಕಾರಗಳು ಹಾಗೂ ಕಾರ್ಪೊರೇಟ್ ಚಾರಿಟಿ ಸಂಸ್ಥೆಗಳು ಮಾಡಿಕೊಂಡಿರುವ ಒಕ್ಕೂಟ) 300 ಮಿಲಿಯನ್ ಡಾಲರ್ ಅಂದರೆ 2,700 ಕೋಟಿ ರೂ. ಗಳನ್ನು ನೀಡಿತ್ತು. ಅಷ್ಟು ಮಾತ್ರವಲ್ಲ...
ಪೂನಾವಾಲ ಎನ್ಡಿಟಿವಿಗೆ ನೀಡಿದ ಸಂದರ್ಶನ ಒಂದರಲ್ಲಿ ಕೇಂದ್ರಕ್ಕೆ 150ರೂ.ಗಳಿಗೆ ಸರಬರಾಜು ಮಾಡಿದರೂ ತನಗೆ ಲಾಭವಿದೆಯೆಂದೂ... ಆದರೆ ತನಗೆ ಬೇಕಿರುವುದು ಕೇವಲ ಪ್ರಾಫಿಟ್ ಅಲ್ಲ ‘ಸೂಪರ್ ಪ್ರಾಫಿಟ್’ ಎಂದು ಸ್ಪಷ್ಟ ಪಡಿಸಿದ್ದಾರೆ. ಆದ್ದರಿಂದಲೇ, ಕೆಲವು ತಿಂಗಳನಂತರ ವ್ಯಾಕ್ಸಿನ್ ದರವನ್ನು 1,200 ರೂ. ಗೆ ಮಾರುವುದಾಗಿಯೂ ಘೋಷಿಸಿದ್ದಾರೆ. (https://youtube/T6gSk0GsQE4- ಈ ವೀಡಿಯೊವನ್ನು ಪೂರ್ತಿ ನೋಡುವ ವ್ಯವಧಾನವಿಲ್ಲದಿದ್ದರೆ 5.01ನೇ ನಿಮಿಷದಿಂದ 6.28 ನಿಮಿಷದವರೆಗೆ ಕೇಳಿಸಿಕೊಳ್ಳಿ)
ಒಂದು ವ್ಯಾಕ್ಸಿನ್ಗೆ ಪೂನಾವಾಲರ ಲೆಕ್ಕಾಚಾರದಲ್ಲೇ 150 ರೂ. ಗೆ ಮಾರಿದರೂ ಲಾಭವಿದೆ ಎಂದಾದಾಗ 100-125 ರೂ. ಮಾತ್ರ ಅದರ ಉತ್ಪಾದನಾ ವೆಚ್ಚ ಎಂದು ಅಂದಾಜು ಮಾಡಬಹುದು.
ಈಗ ಒಂದು ವ್ಯಾಕ್ಸಿನ್ ಅನ್ನು 400-600 ರೂ. ಗಳಿಗೆ ಮಾರಿದರೆ ಸರಾಸರಿ 500 ರೂ. ಲಾಭ ಎಂದಿಟ್ಟುಕೊಂಡರೆ ವ್ಯಾಕ್ಸಿನ್ ವ್ಯವಹಾರದಲ್ಲಿ ಈ ಕಂಪೆನಿಗಳಿಗೆ ರೂ. 75,000 ಕೋಟಿ ಲಾಭವಿದೆ...
ಲಾಭದ ಉರಿಗೆ ಸಿಕ್ಕು ಈಗಾಗಲೇ ದಿನಕ್ಕೆ ಸಾವಿರಾರು ಜನರು ಸುಟ್ಟು ಬೂದಿಯಾಗುತ್ತಿದ್ದಾರೆ..
ನಮ್ಮ ಪ್ರಧಾನಿಗಳು ಸುಟ್ಟ ಹೆಣದ ಬೆಂಕಿಯ ಮುಂದೆ ಭವ್ಯ ಭಾರತದ ಬೆಳಕಿನ ಚಂದವನ್ನು ಬಣ್ಣಿಸುತ್ತಿದ್ದಾರೆ.. ಇದರ ಜೊತೆಗೆ ಆರೆಸ್ಸೆಸ್ನ ದತ್ತಾತ್ರೇಯ ಹೊಸಬಾಳೆ ಸರಕಾರದ ಮತ್ತು ಕಂಪೆನಿಗಳ ಲಾಭಕೋರತನವನ್ನು ಪ್ರಶ್ನಿಸುವುದು ಹಾಗೂ ಕೋವಿಡ್ ಸಾವುಗಳಿಗಾಗಿ ಅತ್ತು ದೇಶದ ಮಾನ ಹರಾಜು ಮಾಡುವುದು ಭಾರತ ವಿರೋಧಿ ಕುತಂತ್ರವೆಂದು ಬಣ್ಣಿಸಿದ್ದಾರೆ..
ಈ ನಡುವೆ ಆರೋಗ್ಯ ಎಮರ್ಜೆನ್ಸಿಯ ಮಾತು ಚಾಲ್ತಿಯಲ್ಲಿದೆ.
ಸರಕಾರ ತನ್ನ ಆ ಎಮರ್ಜೆನ್ಸಿ ಅಧಿಕಾರವನ್ನು ಬಳಸಿಕೊಂಡು ಭಾರತ್ ಬಯೋಟೆಕ್ ಹಾಗೂ SII ಅನ್ನು ರಾಷ್ಟ್ರೀಕರಿಸಬಹುದು..ಕನಿಷ್ಠ ಪಕ್ಷ ಸರಳ ಲಾಭವನ್ನು ಇಟ್ಟುಕೊಂಡು 150 ರೂ.ಗಳಿಗೇ ಮಾರಲು ಕಡ್ಡಾಯಮಾಡಬಹುದು...
ಅಥವಾ ದತ್ತಾತ್ರೇಯ ಹೊಸಬಾಳೆ ಅವರ ಸೂಚನೆಯಂತೆ ಜನರ ಬಾಯಿಯನ್ನೂ, ಬದುಕನ್ನೂ ಲಾಕ್ಡೌನ್ ಮಾಡಬಹುದು..ಸಬ್ ಚಂಗಾಸಿ ಎಂದು 8 ಗಂಟೆ ಭಾಷಣದಲ್ಲಿ ಘೋಷಿಸಬಹುದು...