ಕೊರೋನ ಕರ್ಫ್ಯೂ: ಒಪ್ಪೊತ್ತಿನ ಊಟಕ್ಕೂ ನಿರ್ಗತಿಕರ ಪರದಾಟ
ಮೈಸೂರು, ಎ.29: ಕೊರೋನ ನಿಯಂತ್ರಣ ಸಂಬಂಧ ರಾಜ್ಯ ಸರಕಾರ ಕರ್ಪ್ಯೂ ಘೋಷಿಸಿರುವ ಹಿನ್ನೆಲೆಯಲ್ಲಿ ಕೂಲಿ ಕಾರ್ಮಿಕರು, ನಿರ್ಗತಿಕರು ಮತ್ತು ರಸ್ತೆ ಬದಿ ವ್ಯಾಪಾರ ಮಾಡುವವರ ಬದುಕು ಮೂರಾಬಟ್ಟೆಯಾಗಿದ್ದು, ಒಂದು ಹೊತ್ತಿನ ಊಟಕ್ಕೂ ಪರಿತಪಿಸುವಂತಾಗಿದೆ.
ಮೈಸೂರು ನಗರದಲ್ಲಿ ನೂರಾರು ಮಂದಿ ದಿನಗೂಲಿ ನೌಕರರು, ರಸ್ತೆ ಬದಿಯಲ್ಲಿ ವ್ಯಾಪಾರಿಗಳಿಗೆ ಕೈಯಲ್ಲಿ ಕೆಲಸವೂ ಇಲ್ಲ, ಊಟವೂ ಇಲ್ಲದಂತಾಗಿದೆ. ಮಲಲು ಸೂರು ಇಲ್ಲದೆ ತೀವ್ರ ಸಂಕಷ್ಟ ಎದುರಿಸುತ್ತಿದ್ದು, ರಾಜ್ಯ ಸರಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ.
‘ಅರಮನೆ, ಮೃಗಾಲಯ, ಬಸ್ ನಿಲ್ದಾಣ ಇಲ್ಲವೆ ದೇವಸ್ಥಾನಗಳ ಬಳಿ ಬಲೂನ್ ಮಾರಿಕೊಂಡು ಬಂದ ಹಣದಲ್ಲಿ ಜೀವನ ಸಾಗಿಸುತ್ತಿದ್ದೆ. ಆದರೆ ಕೊರೋನ ಮಹಾಮಾರಿಯಿಂದ ನನ್ನ ಬದುಕು ಅತಂತ್ರವಾಗಿದೆ’ ಎಂದು ರಾಜಸ್ಥಾನ ಮೂಲದ ಶಂಕರ್ ಅಲವತ್ತು ಕೊಂಡರು.
'ನಾನು ನಾಲ್ಕು ವರ್ಷಗಳಿಂದ ಮೈಸೂರಿನಲ್ಲೆಯೇ ನೆಲೆಸಿದ್ದೇನೆ. ನನಗೆ ಯಾರೂ ಇಲ್ಲ, ಬಲೂನ್ ಮಾರಿಕೊಂಡು ಬಂದ ಹಣದಲ್ಲಿ ಹೊಟ್ಟೆತುಂಬಿಸಿಕೊಂಡು ಬಸ್ ನಿಲ್ದಾಣ ಇಲ್ಲಾ ವಸ್ತುಪ್ರದರ್ಶನ ಆವರಣ ಅಥವಾ ಸಂತೆಪೇಟೆಯ ಅಂಗಡಿಗಳ ಮುಂಭಾಗ ಮಲಗುತ್ತಿದ್ದೆ. ಆದರೆ, ಈಗ ವ್ಯಾಪಾರವೂ ಇಲ್ಲ, ಊಟವೂ ಇಲ್ಲ. ಆಗೊಮ್ಮೆ ಈಗೊಮ್ಮೆ ಯಾವುದೋ ಸಂಘ ಸಂಸ್ಥೇಯವರು ಊಟ ತಂದು ಕೊಡುತ್ತಾರೆ. ಅಲ್ಲಿಗೆ ಹೋಗು ಇಲ್ಲಿಗೆ ಹೋಗು ಎಂದು ಕೆಲವರು ಹೇಳುತ್ತಾರೆ. ನಾನು ಹೋದಾಗಲೆಲ್ಲಾ ಯಾರೂ ಇರುವುದಿಲ್ಲ' ಎಂದು ಕಣ್ಣೀರಾದರು.
ಕೆ.ಆರ್.ಸರ್ಕಲ್ ಸೇರಿದಂತೆ ಹಲವು ಕಡೆ ಕಿವಿಗೆ ಹಾಕುವ ಬಡ್ಸ್ ಮತ್ತು ಮಾಸ್ಕ್ ಮಾರಿ ಜೀವನ ನಡೆಸುತ್ತಿದ್ದ ಬಾಬು ಎಂಬ ವ್ಯಕ್ತಿ ಮಾತನಾಡಿ, ‘ಸ್ವಾಮಿ ನಾನು ಮೂಲತಃ ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ದೇವನೂರು ಗ್ರಾಮದವನು. ಮೈಸೂರಿಗೆ ಬಂದು 40 ವರ್ಷಗಳಾಯಿತು. ಮೈಸೂರು ನಗರದ ಜನತಾ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದೆ. ನನ್ನ ಪತ್ನಿ 5ವರ್ಷಗಳ ಹಿಂದೆ ತೀರಿ ಹೋದಳು. ಇರುವ ಒಬ್ಬನೇ ಮಗ ಸೊಸೆ ಮಾತು ಕೇಳಿ ಮನೆಯಿಂದ ಓಡಿಸಿಬಿಟ್ಟ. ಅಂದಿನಿಂದ ಬೀದಿಯೇ ನನ್ನ ವಾಸಸ್ಥಾನವಾಗಿದೆ ಎಂದು ತಮ್ಮ ನೋವನ್ನು ಹೇಳಿಕೊಂಡರು.
'ನಾನು ಅಷ್ಟೊ ಇಷ್ಟೊ ವ್ಯಾಪಾರ ಮಾಡಿಕೊಂಡು ಹೊಟೇಲ್ ಅಥವಾ ಫುಟ್‌ಪಾತ್‌ಗಳಲ್ಲಿ ಮಾರುವ ಅಂಗಡಿಗಳಲ್ಲಿ ಹೊಟ್ಟೆ ತುಂಬಿಸಿಕೊಂಡು 15 ರೂ. ಕೊಟ್ಟು ಸಿಟಿ ಬಸ್ ಹತ್ತಿ ಕುವೆಂಪು ನಗರ ಬಸ್ ಡಿಪೋಗೆ ಹೋಗಿ ಅಲ್ಲಿ ಮಲಗುತ್ತಿದ್ದೆ. ಆದರೆ, ಈಗ ಬಹಳ ತೊಂದರೆ ಅನುಭವಿಸುತ್ತಿದ್ದೇನೆ. ಸರಕಾರ ನಮ್ಮಂತವರಿಗೆ ಊಟವನ್ನಾದರೂ ನೀಡಲಿ' ಎಂದು ಒತ್ತಾಯಿಸಿದರು.
ಬೆಂಗಳೂರು, ರಾಮನಗರ, ಮಾಗಡಿ, ಮಂಡ್ಯ, ಚಿತ್ರದುರ್ಗ, ಮಂಗಳೂರು ಸೇರಿದಂತೆ ಅನೇಕ ಕಡೆಗಳಿಂದ ಮನೆ ಬಿಟ್ಟು ಬಂದ ಸುಮಾರು 20ಕ್ಕೂ ಹೆಚ್ಚು ಮಂದಿ ಒಂದೇ ಸ್ಥಳದಲ್ಲಿ ತಿರುಗಾಡುತ್ತಿದ್ದರು. ಇದೇ ವೇಳೆ ನಂಜುಂಡ ಎಂಬವರು ಮಾತನಾಡಿ, ಲಾಕ್‌ಡೌನ್ ಇಲ್ಲ ಎಂದರೆ ಹೇಗೋ ಕೂಲಿ ಮಾಡಿಕೊಂಡು ಬದುಕುತ್ತಿದ್ದೆವು. ಆದರೆ, ಈಗ ಕೆಲಸವೂ ಇಲ್ಲ, ಮನೆಯೂ ಇಲ್ಲ. ಮನೆಗಳಲ್ಲಿನ ಕಷ್ಟಕ್ಕೆ ನಾವು ಮನೆ ಬಿಟ್ಟು ಬಂದಿದ್ದೇವೆ. ಸದ್ಯಕ್ಕೆ ಯಾರೂ ನಮಗೆ ಊಟ ಕೊಟ್ಟಿಲ್ಲ. ಕಾರ್ಪೊರೇಷನ್ ಅವರು ಕೊಡುತ್ತೇವೆ ಎಂದು ಹೇಳಿದ್ದಾರೆ, ನೋಡಬೇಕು. ಊಟ ಕೊಟ್ಟರೆ ಕೆ.ಜಿ.ಕೊಪ್ಪಲಿನಲ್ಲಿರುವ ಶ್ರೀಚಾಮುಂಡೇಶ್ವರಿ ದೇವಸ್ಥಾನದ ಬಳಿ ಸ್ವಲ್ಪಜನ ಮಲಗುತ್ತೇವೆ. ಇನ್ನು ಕೆಲವರು ಕೆ.ಆರ್.ಆಸ್ಪತ್ರೆ ಆವರಣದಲ್ಲಿ ಮಲಗುತ್ತಾರೆ ಎಂದು ಹೇಳಿದರು.
ಮೈಸೂರು ನಗರದ ಅನೇಕ ಮಾನವೀಯ ಮನುಷ್ಯರು ಆಹಾರದ ಪೊಟ್ಟಣಗಳನ್ನು ಹಂಚುತ್ತಿದ್ದರಾದರೂ ಅದು ಸಮಪರ್ಕವಾಗಿ ತಲುಪುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಇನ್ನೂ ಮೈಸೂರು ಮಹಾನಗರ ಪಾಲಿಕೆಯವರು ರಸ್ತೆ ಬದಿ ವಾಸಮಾಡುವವರು, ನಿರ್ಗತಿಕರನ್ನು ಪತ್ತೆ ಮಾಡಿ ಅವರ ಹೆಸರುಗಳನ್ನು ದಾಖಲು ಮಾಡಿಕೊಂಡು ಬರೀ ಫೋಟೋಗಳನ್ನು ತೆಗೆದುಕೊಂಡು ಹೋಗುತ್ತಿದ್ದಾರೆ ಹೊರತು ಊಟ ಕೊಟ್ಟಿದ್ದನ್ನು ಯಾರೂ ಹೇಳುತ್ತಿಲ್ಲ. ಒಟ್ಟಾರೆ ರಾಜ್ಯ ಸರಕಾರ ಮತ್ತು ಜಿಲ್ಲಾಡಳಿತ ಲಾಕ್‌ಡೌನ್ ಮುಗಿಯುವವರೆಗೆ ಜವಾಬ್ದಾರಿಯಿಂದ ನಡೆದುಕೊಂಡು ನಿರ್ಗತಿಕರಿಗೆ ಊಟವನ್ನು ನೀಡುವ ಮೂಲಕ ಹಸಿವಿನಿಂದ ಸಾಯುವುದನ್ನು ತಪ್ಪಿಸಬೇಕಿದೆ. ಇಂತಹವರನ್ನು ಗುರುತಿಸಿ ಅವರಿಗೆ ಸ್ವಂತ ಬದುಕನ್ನು ಕಟ್ಟಿಕೊಳ್ಳಲು ಸಹಕಾರ ನೀಡಿದರೆ ಒಳ್ಳೆಯದು ಎಂಬ ಮಾತುಗಳು ಕೇಳಿ ಬರುತ್ತಿದೆ.
ಸ್ವಾಮಿ ನಾನು ನಮ್ಮ ಊರು ಬಿಟ್ಟು 50 ವರ್ಷಗಳಾಯಿತು. ಮೈಸೂರಿನಲ್ಲಿಯೇ ಇದ್ದೇನೆ. ನಗರದ ಮಂಡಿಗಳಲ್ಲಿ ಕೆಲಸ ಮಾಡಿಕೊಂಡು ಅಲ್ಲೇ ಮಲಗುತ್ತಿದ್ದೆ. ಆದರೆ, ಈಗ ಲಾಕ್‌ಡೌನ್ ಮಾಡಿದ್ದಾರೆ. ಕೆಲಸವೂ ಇಲ್ಲ, ಊಟವೂ ಇಲ್ಲ. ನಮ್ಮ ಊರಿನಲ್ಲಿ ಸಂಬಂಧಿಕರು ಇದ್ದಾರೆ. ಅವರ ಬಳಿ ಹೋಗುತ್ತೇನೆ. ಊಟವಾದರೂ ಸಿಗುತ್ತದೆ ಎಂದು ಉರಿ ಬಿಸಿಲಿನಲ್ಲಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ನಂಜನಗೂಡು ತಾಲೂಕಿನ ಹೆಮ್ಮರಗಾಲ ಗ್ರಾಮದ ರಂಗಪ್ಪ ಎಂಬವರು ಪ್ರತಿಕ್ರಿಯಿಸಿದರು.
ಅನೇಕ ಮಂದಿ ಕಾಡಾ ಕಚೇರಿಯ ಮೈದಾನದಲ್ಲಿ ಕುಳಿತು ಕಾಲ ಕಳೆಯುತ್ತಿದ್ದರು. ಅವರನ್ನು ಮಾತನಾಡಿಸಿದರೆ, ಸರ್ ನಾವು ಕಲ್ಯಾಣ ಮಂಟಪಗಳಲ್ಲಿ ಅಡುಗೆ ಕೆಲಸಕ್ಕೆ ಹೋಗುತ್ತಿದ್ದೆವು. ನಿನ್ನೆ ಮೊನ್ನೆ ಅಡುಗೆ ಕಂಟ್ರ್ಯಾಕ್ಟ್ ವಹಿಸಿಕೊಳ್ಳುತ್ತಿದ್ದವರು ಊಟ ಕೊಡಿಸಿದರು. ದಿನಾ ಕೊಡಿ ಎಂದರೆ ಅವರು ಎಲ್ಲಿಂದ ಕೊಡುತ್ತಾರೆ? ನಮಗೆ ಕೆಲಸವೂ ಇಲ್ಲ, ಊಟವೂ ಇಲ್ಲ. ನಾವು ಎಲ್ಲಿಗೆ ಹೋಗಬೇಕು ಎಂದು ತಿಳಿಯುತ್ತಿಲ್ಲ ಎಂದು ತಮ್ಮ ನೋವನ್ನು ಹಂಚಿಕೊಂಡರು.