varthabharthi


ಕಾಲಮಾನ

ಅಧಿಕಾರದ ದರ್ಪ ಹಾಗೂ ದೇಶಭಕ್ತಿಯ ಸೋಗು

ವಾರ್ತಾ ಭಾರತಿ : 1 May, 2021
ರಾಮಚಂದ್ರ ಗುಹಾ

ದುರ್ಬಲವಾಗಿರುವ ನಮ್ಮ ಆರ್ಥಿಕತೆ ಹಾಗೂ ಶಿಥಿಲವಾದ ಸಾಮಾಜಿಕ ಚೌಕಟ್ಟಿನ ಬೆನ್ನಿಗೇ ಕೊರೋನ ಸಾಂಕ್ರಾಮಿಕ ಹಾಗೂ ಅದರ ಅಲೆಗಳು ಅಪ್ಪಳಿಸಿವೆ. ದೇಶವಿಭಜನೆಯ ಆನಂತರ ಭಾರತವು ಕಂಡಂತಹ ಅತ್ಯಂತ ಘೋರವಾದ ಬಿಕ್ಕಟ್ಟು ಇದಾಗಿದೆ. ಹಿಂದೆಂದಿಗಿಂತಲೂ ಈಗ ಹೆಚ್ಚಾಗಿ ನಮಗೆ ಒಂದು ಪಕ್ಷ ಹಾಗೂ ಧರ್ಮದ ಅಥವಾ ಒಂದು ನಾಯಕನ ಹಿತಾಸಕ್ತಿಗಳಿಗಾಗಿ ಕೆಲಸ ಮಾಡದೆ, ಇತರರ ಮಾತನ್ನೂ ಆಲಿಸಿ, ಕೆಲಸ ಮಾಡುವಂತಹ ಸರಕಾರದ ಅಗತ್ಯವಿದೆ. ಅಂತಹ ಸರಕಾರವನ್ನು ನಾವು ಯಾವಾಗ ಪಡೆಯುತ್ತೇವೆ ಅಥವಾ ಪಡೆಯಲು ಸಾಧ್ಯವಾಗುವುದೇ ಎಂಬುದರ ಆಧಾರದಲ್ಲಿ ನಮ್ಮ ಗಣರಾಜ್ಯದ ಭವಿಷ್ಯವು ನಿರ್ಧರಿಸಲ್ಪಡುತ್ತದೆ.


2020ರ ಎಪ್ರಿಲ್‌ನಲ್ಲಿ ಅಂದರೆ ನಿಖರವಾಗಿ ಒಂದು ವರ್ಷದ ಹಿಂದೆ, ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಯಲ್ಲಿ ನಾನು ಪ್ರಕಟಿಸಿದ ಪ್ರಬಂಧವೊಂದರಲ್ಲಿ ನಿರ್ಧಾರ ತಳೆಯುವಾಗ ಹೆಚ್ಚು ಸಮಾಲೋಚನಾತ್ಮಕ ನಿಲುವನ್ನು ಅಳವಡಿಸಿಕೊಳ್ಳುವಂತೆ ಪ್ರಧಾನಿಯವರನ್ನು ಆಗ್ರಹಿಸಿದ್ದೆ. ಕೊರೋನ ವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಬಹುಶಃ ದೇಶವು, ರಾಷ್ಟ್ರವಿಭಜನೆಯ ಆನಂತರ ಅತಿ ದೊಡ್ಡ ಸವಾಲನ್ನು ಎದುರಿಸುತ್ತಿದೆ. ಈ ಸಾಂಕ್ರಾಮಿಕ ಹಾಗೂ ಅದರ ಪರಿಣಾಮಗಳು, ಈಗಾಗಲೇ ಮಾನವಕುಲಕ್ಕೆ ಅಪಾರ ಯಾತನೆಯುಂಟು ಮಾಡಿದ್ದು, ಅದು ಇನ್ನೂ ದುಪ್ಪಟ್ಟುಗೊಳ್ಳಲಿದೆ. ಇಂತಹ ಸನ್ನಿವೇಶದಲ್ಲಿ ಸಾಮಾಜಿಕ ವಿಶ್ವಾಸದ ಮರುಸ್ಥಾಪನೆ ಹಾಗೂ ಆರ್ಥಿಕ ಪುನರ್‌ನಿರ್ಮಾಣವು ಓರ್ವ ವ್ಯಕ್ತಿಯ ಸಾಮರ್ಥ್ಯವನ್ನು ಮೀರಿದ್ದಾಗಿದೆ ಹಾಗೂ ಆತನ ನಂಬಿಕಸ್ಥ ಸಲಹೆಗಾರರ ಸಣ್ಣ ವೃಂದದ ಸಾಮರ್ಥ್ಯವನ್ನು ಮೀರಿದ್ದಾಗಿದೆ.

ಈ ವಿಸ್ತೃತವಾದ ಸಮಸ್ಯೆಯಿಂದ ಹೊರಬರಲು ನಿರ್ದಿಷ್ಟ ಸರಣಿ ಶಿಫಾರಸುಗಳನ್ನು ಮುಫತ್ತಾಗಿ ನೀಡಲು ನಾನು ಮುಂದಾಗಿದ್ದೆ. ನಾನು ಹೀಗೆ ಬರೆದಿದ್ದೆ. ‘‘ಪ್ರಧಾನಿಯವರು ಬಿಕ್ಕಟ್ಟು ನಿರ್ವಹಣೆಯಲ್ಲಿ ಅನುಭವ ಹೊಂದಿರುವಂತಹ ಮಾಜಿ ಹಣಕಾಸು ಸಚಿವರ ಜೊತೆ ಅವರು ಕಾಂಗ್ರೆಸ್ ಪಕ್ಷಕ್ಕೆ ನಿಷ್ಠರಾಗಿದ್ದರೂ ಕೂಡಾ ಅವರ ಜೊತೆ ಸಮಾಲೋಚನೆ ಮಾಡದೆ ಇದ್ದಲ್ಲಿ ಕೆಡುಕುಂಟಾಗಬಹುದಾಗಿದೆ. ಈ ವಿಷಯದಲ್ಲಿ ಪರಿಣತಿಯನ್ನು ಹೊಂದಿರುವ ಮಾಜಿ ಹಣಕಾಸು ಕಾರ್ಯದರ್ಶಿಗಳು ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್‌ನ ಗವರ್ನರ್‌ಗಳು ಕೂಡಾ ಸಮಾಲೋಚಿಸಬಹುದಾಗಿದೆ. ಸರಕಾರವು ಸಕ್ರಿಯವಾಗಿ ವಿದ್ವಾಂಸರನ್ನು ತಲುಪಬೇಕಾಗಿದೆ. ರೈತರು ಹಾಗೂ ಕಾರ್ಮಿಕರ ಕಷ್ಟಗಳನ್ನು ಅರಿತುಕೊಂಡಿರುವ ಈ ವಿದ್ವಾಂಸರು ನಾರ್ತ್ ಬ್ಲಾಕ್‌ನಲ್ಲಿರುವ ಹಾಲಿ ಅರ್ಥಶಾಸ್ತ್ರಜ್ಞರಿಗಿಂತ ಎಷ್ಟೋ ಪಾಲು ಉತ್ತಮವಾಗಿದ್ದಾರೆ. ಸರಕಾರವು ವೈದ್ಯ ಸಮುದಾಯದೊಂದಿಗೆ ಶ್ರಮಿಸಿ, ಏಡ್ಸ್ ಬಿಕ್ಕಟ್ಟನ್ನು ನಿರ್ವಹಿಸಿರುವ, ಎಚ್1ಎನ್1 ಭೀತಿಯನ್ನು ನಿಯಂತ್ರಿಸಲು ನೆರವಾಗಿದ್ದ ಹಾಗೂ ಭಾರತದಲ್ಲಿ ಪೋಲಿಯೊವನ್ನು ಮೂಲೋತ್ಪಾಟನೆಗೊಳಿಸಿದಂತಹ ದಕ್ಷ ಮಾಜಿ ಆರೋಗ್ಯ ಕಾರ್ಯದರ್ಶಿಗಳ ಸೇವೆಯನ್ನು ಬಳಸಿಕೊಳ್ಳುವ ಬಗ್ಗೆ ಪರಿಶೀಲಿಸಬೇಕು.’’

ಹೀಗೆ ಬರೆಯುವ ಮೂಲಕ ಡಾ.ಜಾನ್ಸನ್ ಅವರು ಹೇಳಿರುವಂತೆ, ಅನುಭವದಲ್ಲಿ ನಾನು ನಂಬಿಕೆಯನ್ನು ಇರಿಸಿದ್ದೇನೆ. ಪ್ರಧಾನಿಯಾಗಿ ತನ್ನ ಕಾಲಾವಧಿಯಲ್ಲಿ ತಜ್ಞರ ಬಗ್ಗೆ ನರೇಂದ್ರ ಮೋದಿಯವರಿಗೆ ಅನಾದರವಿರುವುದು ಈಗಾಗಲೇ ಸ್ಪಷ್ಟವಾಗಿ ಗೋಚರವಾಗಿದೆ. ತಾನು ಕಠಿಣ ಪರಿಶ್ರಮದಲ್ಲಿ ನಂಬಿಕೆಯಿರಿಸಿದ್ದೇನೆಯೇ ಹೊರತು ಹಾರ್ವರ್ಡ್‌ನಲ್ಲಿಲ್ಲವೆಂಬ ಅವರ ಹೇಳಿಕೆಯಲ್ಲಿ ಈ ಅನಾದರವು ಸೈದ್ಧಾಂತಿಕವಾಗಿ ಪ್ರದರ್ಶಿತವಾಗಿದೆ. ಆಚರಣೆಯಲ್ಲಿಯೂ ಸಹ ಅವರು ನಗದು ಅಮಾನ್ಯತೆಯಂತಹ ಪ್ರಳಯಾಂತಕಾರಿ ಪ್ರಯೋಗವನ್ನು ಅರ್ಥಶಾಸ್ತ್ರಜ್ಞರ ಎಚ್ಚರಿಕೆಯನ್ನು ಲೆಕ್ಕಿಸದೆ ಮುನ್ನಡೆಸಿದ್ದರು. ಇತರ ಪಕ್ಷಗಳ ರಾಜಕಾರಣಿಗಳ ವಿರುದ್ಧವೂ ಅವರು ಅವಿವೇಕಯುತವಾದ ದ್ವೇಷವನ್ನು ಪ್ರದರ್ಶಿಸಿದ್ದರು. ಮಾತು ಮತ್ತು ಕೃತಿಯಲ್ಲಿ ಅವರೊಂದಿಗೆ ಧಾರ್ಷ್ಟದಿಂದ ನಡೆದುಕೊಂಡಿದ್ದರು.

ನನ್ನ ಲೇಖನವು ಪ್ರಕಟವಾದ ವರ್ಷದಿಂದ, ಪ್ರಧಾನಿಯ ನಡವಳಿಕೆಯಲ್ಲಿ ಈ ಎರಡು ಗುಣಲಕ್ಷಣಗಳು ಸ್ಪಷ್ಟವಾಗಿ ಗೋಚರವಾಗುತ್ತವೆ. ಹಾಗೆಯೇ, ತನ್ನ ವೈಯಕ್ತಿಕ ಬ್ರಾಂಡ್ ನಿರ್ಮಿಸುವ ಹಂಬಲವು ಮತ್ತಷ್ಟು ಹೆಚ್ಚಾಗಿದೆ. ಕಳೆದ ಕೆಲವು ತಿಂಗಳುಗಳಲ್ಲಿ ಈ ಎರಡು ಕ್ರಿಯೆಗಳು ಪ್ರಧಾನಿಯವರ ಬಿಗುಮಾನದ ಅಸಾಧಾರಣ ಮಿತಿಯನ್ನು ತೋರಿಸಿಕೊಟ್ಟಿವೆ. ಕೋವಿಡ್-19 ನಿರೋಧಕ ಲಸಿಕೆ ಪಡೆದುಕೊಂಡವರಿಗೆ ನೀಡಲಾಗುವ ಪ್ರತಿಯೊಂದು ಪ್ರಮಾಣಪತ್ರದಲ್ಲಿಯೂ ತನ್ನ ಛಾಯಾಚಿತ್ರವನ್ನು ಛಾಪಿಸುವ ನಿರ್ಧಾರ ಹಾಗೂ ದೇಶದ ಅತಿ ದೊಡ್ಡ ಕ್ರೀಡಾಂಗಣಕ್ಕೆ ನರೇಂದ್ರ ಮೋದಿ ಕ್ರೀಡಾಂಗಣವೆಂದು ಮರುನಾಮಕರಣ ಮಾಡುವುದಕ್ಕೆ ಸಮ್ಮತಿಸುವ ಮೂಲಕ ತನ್ನ ಜೀವಿತಾವಧಿಯಲ್ಲಿಯೇ ಕ್ರೀಡಾಂಗಣಕ್ಕೆ ತನ್ನದೇ ಹೆಸರನ್ನಿಟ್ಟಂತಹ ಮುಸ್ಸಲೋನಿ, ಹಿಟ್ಲರ್, ಸ್ಟಾಲಿನ್, ಗಡ್ಡಾಫಿ ಹಾಗೂ ಸದ್ದಾಂ ಹುಸೈನ್ ಅವರ ಸಾಲಿಗೆ ಸೇರ್ಪಡೆಗೊಂಡಿದ್ದಾರೆ.

ಅಹ್ಮದಾಬಾದ್‌ನಲ್ಲಿರುವ ಸರ್ದಾರ್ ಪಟೇಲ್ ಸ್ಟೇಡಿಯಂಗೆ ನರೇಂದ್ರ ಮೋದಿಯವರ ಹೆಸರನ್ನಿಡುವ ಚಿಂತನೆಯು ಭಾರತೀಯ ಕ್ರಿಕೆಟ್ ಆಡಳಿತದಲ್ಲಿ ಬಲವಾದ ಕೌಟುಂಬಿಕ ಹಿತಾಸಕ್ತಿಯನ್ನು ಹೊಂದಿರುವ ವ್ಯಕ್ತಿಯಿಂದ ಬಂದಿರಬಹುದೆಂದು ನನ್ನ ಅಂಕಣವೊಂದರಲ್ಲಿ ನಾನು ಬರೆದಿದ್ದೆ. ತನ್ನ ಧಣಿಯನ್ನು ಓಲೈಸುವ ಹಾಗೂ ತನ್ನ ವಂಶದಕುಡಿಯ ವಿರುದ್ಧ ವ್ಯಕ್ತವಾದ ಟೀಕೆಗಳನ್ನು ಅಡಗಿಸಲು ಆತ ಬಯಸಿರಬಹುದಾಗಿದೆ ಎಂದು ನಾನು ಅಂಕಣದಲ್ಲಿ ಸಂಶಯ ವ್ಯಕ್ತಪಡಿಸಿದ್ದೆ. ನಾನು ಲೇಖನವನ್ನು ಬರೆದ ದಿನವೇ (22 ಎಪ್ರಿಲ್ ಗುರುವಾರ) ಸ್ಥಳೀಯ ದಿನಪತ್ರಿಕೆಯ ಮುಖಪುಟವಿಡೀ ಪ್ರಕಟವಾದ ಜಾಹೀರಾತು ನನ್ನ ಈ ಸಂದೇಹಕ್ಕೆ ಪುಷ್ಟಿ ನೀಡಿತ್ತು. ಆ ಜಾಹೀರಾತಿನಲ್ಲಿ ಕರ್ನಾಟಕದ ಮುಖ್ಯಮಂತ್ರಿಯವರು ಪ್ರಧಾನಿಯವರಿಗೆ ಪ್ರಶಂಸೆಗಳ ಸುರಿಮಳೆಯನ್ನೇ ಸುರಿಸಿದ್ದರು. ಜಗತ್ತಿನೆಡೆಗೆ ಸೌಮ್ಯವಾಗಿ ಮುಗುಳ್ನಗೆ ಬೀರುತ್ತಿರುವ ಮೋದಿಯವರ ಬೃಹತ್ ಛಾಯಾಚಿತ್ರವು ಈ ಜಾಹೀರಾತಿನಲ್ಲಿ ಪ್ರಾಬಲ್ಯವನ್ನು ಸ್ಥಾಪಿಸಿತ್ತು. ಈ ಜಾಹೀರಾತಿನಲ್ಲಿ ‘‘ನಮ್ಮ ಮೆಟ್ರೋದ 2 ಎ ಹಾಗೂ 2 ಬಿ ಹಂತಕ್ಕೆ ಅನುಮೋದನೆ ನೀಡಿದ ಭಾರತದ ಗೌರವಾನ್ವಿತ ಪ್ರಧಾನಿ ಶ್ರೀ ನರೇಂದ್ರ ಮೋದಿಯವರಿಗೆ ಎಲ್ಲಾ ಬೆಂಗಳೂರಿಗರಿಂದ ಹೃತ್ಪೂರ್ವಕವಾದ ಧನ್ಯವಾದಗಳು’’ ಎಂದು ಬರೆಯಲಾಗಿತ್ತು.

ಅದೇ ಜಾಹೀರಾತನ್ನು ಹೊಸದಿಲ್ಲಿಯಲ್ಲಿ ಪ್ರಕಟವಾದ ಇಂಗ್ಲಿಷ್ ಹಾಗೂ ಹಿಂದಿ ದಿನಪತ್ರಿಕೆಗಳಿಗೂ ನೀಡಲಾಗಿರುವುದನ್ನು ನಾನು ಪತ್ತೆಹಚ್ಚಿದೆ. ಮುಖ್ಯಮಂತ್ರಿಯವರು ಈ ಜಾಹೀರಾತುಗಳನ್ನು ತಮ್ಮ ಧಣಿಯನ್ನು ಮೆಚ್ಚಿಸಲು ಹಾಗೂ ತನ್ನ ಪಕ್ಷದ ಶಾಸಕರಿಂದ ತನ್ನ ಆಡಳಿತದ ಬಗೆಗಿನ ಟೀಕೆಗಳಿಂದ ತನ್ನ ಪಕ್ಷದ ಶಾಸಕರ ಟೀಕೆಗಳನ್ನು ವೌನವಾಗಿಸಲು, ಸಾರ್ವಜನಿಕರ ಹಣದ ಖರ್ಚಿನಲ್ಲಿ ಚಮಚಾಗಿರಿ ನಡೆಸಲಾಗಿದೆ. ಸಾಮಾನ್ಯ ಪಕ್ಷ ಕಾರ್ಯಕರ್ತನಾಗಿರಲಿ ಅಥವಾ ಪ್ರಮುಖ ರಾಜ್ಯದ ಮುಖ್ಯಮಂತ್ರಿಯಾಗಿರಲಿ, ಬಿಜೆಪಿಯಲ್ಲಿ ಪ್ರತಿಯೊಬ್ಬರೂ ತಮ್ಮ ಸರ್ವೋಚ್ಚ ನಾಯಕನ ಮಹಾ ಅಹಮಿಕೆಯನ್ನು ಪೋಷಿಸುವ ಮಹತ್ವವನ್ನು ಅರಿತುಕೊಂಡಿದ್ದಾರೆ.

ಭಾರತವು ಕೊರೋನ ವೈರಸ್ ವಿರುದ್ಧ ಸಮರ ಸಾರಿದ ವರ್ಷದಲ್ಲಿ ಪ್ರಧಾನಿಯ ವ್ಯಕ್ತಿಪೂಜೆ ಸ್ಥಿರವಾಗಿ ವಿಸ್ತರಿಸತೊಡಗಿತು. ಪ್ರತಿಪಕ್ಷಗಳ ಬಗ್ಗೆ ಕೇಂದ್ರ ಸರಕಾರದ ನಿಲುವು ಹಿಂದೆಂದಿಗಿಂತಲೂ ಹೆಚ್ಚು ಸಂಘರ್ಷಯುತವಾಗತೊಡಗಿತು. ಖಂಡಿತವಾಗಿಯೂ ಕೇಂದ್ರ ಸಚಿವರು ಹಾಗೂ ಬಿಜೆಪಿಯ ಸಂಸದರು, ಮಹಾರಾಷ್ಟ್ರ ಹಾಗೂ ದಿಲ್ಲಿಯ ಮುಖ್ಯಮಂತ್ರಿಗಳ ವಿರುದ್ಧ ವಿಷಕಾರುತ್ತಿದ್ದುದು ಹಾಗೂ ಅವರನ್ನು ಭಿಕ್ಷುಕರೆಂದು ಮೂದಲಿಸಿರುವುದು ಇದಕ್ಕೆ ಸಾಕ್ಷಿಯಾಗಿದೆ. ದಿಲ್ಲಿ ಹಾಗೂ ಮುಂಬೈ ದೇಶದ ಅತ್ಯಂತ ಬೃಹತ್ ಹಾಗೂ ಪ್ರಮುಖ ನಗರಗಳಾಗಿವೆ. ಇವುಗಳಲ್ಲಿ ಒಂದು ನಮ್ಮ ರಾಜಕೀಯ ರಾಜಧಾನಿಯಾಗಿದ್ದರೆ, ಇನ್ನೊಂದು ನಮ್ಮ ವಾಣಿಜ್ಯ ರಾಜಧಾನಿಯಾಗಿದೆ. ಈ ಎರಡೂ ನಗರಗಳು ತಲಾ 1 ಕೋಟಿಗೂ ಅಧಿಕ ಭಾರತೀಯರಿಗೆ ಮನೆಯಾಗಿವೆ. ಬಿಜೆಪಿಯೇತರ ಪಕ್ಷಗಳು ಆಡಳಿತ ನಡೆಸುತ್ತಿವೆಯೆಂಬ ಕಾರಣಕ್ಕಾಗಿ ಈ ನಗರಗಳ ನಾಗರಿಕರನ್ನು ಬವಣೆಗೀಡು ಮಾಡುತ್ತಿರುವುದು ಯಾವ ರೀತಿಯ ದೇಶಭಕ್ತಿಯಾಗಿದೆ?.

ಈ ರೀತಿಯ ಪಕ್ಷಪಾತವು ಕೇವಲ ಬಿಜೆಪಿಯ ಟ್ರೋಲ್ ಸೇನೆಗೆ ಸೀಮಿತವಾಗಿದ್ದರೆ ಆ ಬಗ್ಗೆ ಚಿಂತಿಸಬೇಕಾಗುತ್ತಿರಲಿಲ್ಲ. ದುರಂತವೆಂದರೆ ಕೇಂದ್ರ ಸರಕಾರದಲ್ಲಿರುವ ಅತ್ಯಂತ ಪ್ರಭಾವಿ ವ್ಯಕ್ತಿಗಳೇ ಅದನ್ನು ಅನುಸರಿಸುತ್ತಿದ್ದಾರೆ. ಕೊರೋನ ಸಾಂಕ್ರಾಮಿಕ ಆರಂಭವಾದಾಗಿನಿಂದ ಭಾರತದ ಗೃಹಸಚಿವರ ಕ್ಯತ್ಯಗಳು ಹಾಗೂ ಪ್ರವಾಸಗಳಿಂದ ಅವರ ಆದ್ಯತೆಯೇನೆಂಬುದು ಸ್ಪಷ್ಟವಾಗಿ ತಿಳಿದುಬರುತ್ತದೆ. (1) ಬಿಜೆಪಿಯನ್ನು ಪಶ್ಚಿಮಬಂಗಾಳದಲ್ಲಿ ಅಧಿಕಾರಕ್ಕೇರಿಸುವುದು. (2) ಮಹಾರಾಷ್ಟ್ರದಲ್ಲಿ ಬಿಜೆಪಿ ಮರಳಿ ಅಧಿಕಾರ ಹಿಡಿಯುವಂತೆ ಮಾಡುವುದಾಗಿದೆ. ಇವೆರಡೂ ಅವರು ವಹಿಸಿಕೊಂಡಿರುವ ಸಚಿವ ಖಾತೆಗೆ ಸಂಬಂಧಪಡದ ವಿಷಯಗಳಾಗಿವೆ. ಆದಾಗ್ಯೂ ಅವರಿಗೆ ಈ ಎರಡು ಸಂಗತಿಗಳು ಉಳಿದೆಲ್ಲಕ್ಕಿಂತಲೂ ಅಗತ್ಯವಾಗಿವೆ.

 ಈ ಮಧ್ಯೆ ಪ್ರಧಾನಿಯವರು ಪಶ್ಚಿಮಬಂಗಾಳದ ಅಸಾನ್‌ಸೊಲ್‌ನಲ್ಲಿ 2021ರ ಎಪ್ರಿಲ್ 17ರಂದು ಚುನಾವಣಾ ಪ್ರಚಾರ ನಡೆಸಿದ ಸಂದರ್ಭದಲ್ಲಿ ‘ಮೈನೆ ಐಸಾ ಸಭಾ ಪೆಹ್ಲಿ ಬಾರ್ ದೇಖಿ ಹೈ’ ಎಂದು ಹೇಳಿರುವುದು ಅವರಿಗೆ ಯಾವುದು ಮುಖ್ಯವಾದುದೆಂಬುದನ್ನು ತೋರಿಸಿಕೊಡುತ್ತದೆ.

ಖಂಡಿತವಾಗಿಯೂ ನಾವು ಭಾರತೀಯ ರಾಜಕಾರಣಿಯಿಂದ ಇಂತಹ ಅಸಂವೇದನೆ ಹಾಗೂ ಬೇಜವಾಬ್ದಾರಿತನವನ್ನು ಕಂಡಿಲ್ಲ. 17ನೇ ಎಪ್ರಿಲ್‌ನ ವೇಳೆಗೆ ಕೊರೋನ ಸೋಂಕಿನ ಎರಡನೇ ಅಲೆಯು ನಮ್ಮ ಮೇಲೆ ಘೋರವಾಗಿ ಅಪ್ಪಳಿಸಿದೆ. ಆಸ್ಪತ್ರೆಗಳು ತುಂಬಿತುಳುಕುತ್ತಿವೆ. ಅದೇ ರೀತಿ ಸ್ಮಶಾನಗಳು ಕೂಡಾ. ಆದರೆ ಇಲ್ಲಿ (ಪ.ಬಂಗಾಳದಲ್ಲಿ) ನಮ್ಮ ಪ್ರಧಾನಿಯವರು ‘‘ನನ್ನ ಭಾಷಣವನ್ನು ಆಲಿಸಲು ಎಷ್ಟೊಂದು ಜನರು ಬಂದಿದ್ದಾರೆ’’ ಎಂದು ಸಾರ್ವಜನಿಕವಾಗಿ ಕೊಚ್ಚಿಕೊಳ್ಳುತ್ತಿದ್ದಾರೆ.

ದುರ್ಬಲವಾಗಿರುವ ನಮ್ಮ ಆರ್ಥಿಕತೆ ಹಾಗೂ ಶಿಥಿಲವಾದ ಸಾಮಾಜಿಕ ಚೌಕಟ್ಟಿನ ಬೆನ್ನಿಗೇ ಕೊರೋನ ಸಾಂಕ್ರಾಮಿಕ ಹಾಗೂ ಅದರ ಅಲೆಗಳು ಅಪ್ಪಳಿಸಿವೆ. ದೇಶವಿಭಜನೆಯ ಆನಂತರ ಭಾರತವು ಕಂಡಂತಹ ಅತ್ಯಂತ ಘೋರವಾದ ಬಿಕ್ಕಟ್ಟು ಇದಾಗಿದೆ. ಹಿಂದೆಂದಿಗಿಂತಲೂ ಈಗ ಹೆಚ್ಚಾಗಿ ನಮಗೆ ಒಂದು ಪಕ್ಷ ಹಾಗೂ ಧರ್ಮದ ಅಥವಾ ಒಂದು ನಾಯಕನ ಹಿತಾಸಕ್ತಿಗಳಿಗಾಗಿ ಕೆಲಸ ಮಾಡದೆ, ಇತರರ ಮಾತನ್ನೂ ಆಲಿಸಿ, ಕೆಲಸ ಮಾಡುವಂತಹ ಸರಕಾರದ ಅಗತ್ಯವಿದೆ. ಅಂತಹ ಸರಕಾರವನ್ನು ನಾವು ಯಾವಾಗ ಪಡೆಯುತ್ತೇವೆ ಅಥವಾ ಪಡೆಯಲು ಸಾಧ್ಯವಾಗುವುದೇ ಎಂಬುದರ ಆಧಾರದಲ್ಲಿ ನಮ್ಮ ಗಣರಾಜ್ಯದ ಭವಿಷ್ಯವು ನಿರ್ಧರಿಸಲ್ಪಡುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)