ದಿಲ್ಲಿ ಆಸ್ಪತ್ರೆಯ ಕೋವಿಡ್ ವಾರ್ಡ್‍ನಲ್ಲಿ ಕೆಲಸ ಮಾಡುತ್ತಿದ್ದ ವೈದ್ಯ ಆತ್ಮಹತ್ಯೆಗೆ ಶರಣು
ಹೊಸದಿಲ್ಲಿ: ಕೋವಿಡ್-19 ಸಾಂಕ್ರಾಮಿಕ ರೋಗದ ಎರಡನೇ ಅಲೆಯ ಮಧ್ಯೆ ತೀವ್ರ ಒತ್ತಡದಿಂದಾಗಿ ದಿಲ್ಲಿಯ ಖಾಸಗಿ ಆಸ್ಪತ್ರೆಯ ನಿವಾಸಿ ವೈದ್ಯರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಉನ್ನತ ವೈದ್ಯಕೀಯ ಸಂಸ್ಥೆಯ ಮಾಜಿ ಮುಖ್ಯಸ್ಥರು ಟ್ವೀಟ್ ಮಾಡಿದ್ದಾರೆ.
ಅವರು ಗೋರಖ್ ಪುರದ(ಉತ್ತರಪ್ರದೇಶ) ಅತ್ಯಂತ ಉತ್ತಮ ವೈದ್ಯರಾಗಿದ್ದರು. ಕೊರೋನ ಸಮಯದಲ್ಲಿ ನೂರಾರು ಜೀವಗಳನ್ನು ಉಳಿಸಲು ಸಹಾಯ ಮಾಡಿದ್ದರು ಎಂದು ಮಾಜಿ ವೈದ್ಯಕೀಯ ಸಂಘದ ಅಧ್ಯಕ್ಷ ಡಾ. ರವಿ ವಾಂಖೇಡ್ಕರ್ ಟ್ವೀಟ್ ಮಾಡಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡಿರುವ ಡಾ.ವಿವೇಕ್ ರೈ ಅವರು ಕಳೆದ ಒಂದು ತಿಂಗಳಿನಿಂದ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳನ್ನು ನೋಡಿಕೊಳ್ಳುತ್ತಿದ್ದರು. ತನ್ನ ಕಣ್ಣ ಮುಂದೆ ನೂರಾರು ಜನರು ಸಾಯುತ್ತಿದ್ದರಿಂದ ಯುವ ವೈದ್ಯ ಖಿನ್ನತೆಗೆ ಒಳಗಾಗಿದ್ದರು. ಇಂತಹ ನಿರಾಶಾದಾಯಕ ಪರಿಸ್ಥಿತಿಯಿಂದಾಗಿ ಅವರು ತಮ್ಮ ಜೀವ ಕಳೆದುಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಮಾಜಿ ಐಎಂಎ ಮುಖ್ಯಸ್ಥರು ತಿಳಿಸಿದ್ದಾರೆ.
ಡಾ. ರೈ ಅವರು ಎರಡು ತಿಂಗಳ ಗರ್ಭಿಣಿ ಪತ್ನಿಯನ್ನು ಅಗಲಿದ್ದಾರೆ.