ಸೌದಿ ಅರೇಬಿಯ: ಗುರಿ ಈಡೇರಿದ ಬಳಿಕ ವ್ಯಾಟ್ ಮರುಪರಿಶೀಲನೆ
ದುಬೈ, ಮೇ 2: ಆರ್ಥಿಕತೆ ಮತ್ತು ಹಣಕಾಸು ಬೆಳವಣಿಗೆಗೆ ಸಂಬಂಧಿಸಿದ ನಿರ್ದಿಷ್ಟ ಗುರಿಗಳು ಈಡೇರಿದ ಬಳಿಕ, ಸೌದಿ ಅರೇಬಿಯವು ಮೌಲ್ಯವರ್ಧಿತ ತೆರಿಗೆ (ವ್ಯಾಟ್)ಯ ಬಗ್ಗೆ ಮರುಪರಿಶೀಲನೆ ನಡೆಸುವುದು ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ಕಳೆದ ವರ್ಷ ಸರಕಾರದ ಮುಂದಿದ್ದ ಕಠಿಣ ಆಯ್ಕೆಗಳ ಪೈಕಿ ಮೌಲ್ಯವರ್ಧಿತ ತೆರಿಗೆಯನ್ನು 15 ಶೇಕಡಕ್ಕೆ ಹೆಚ್ಚಿಸುವುದು ಉತ್ತಮ ನಿರ್ಧಾರವಾಗಿತ್ತು ಎಂದು ಸೌದಿ ಅರೇಬಿಯದ ಹಣಕಾಸು ಸಚಿವ ಮುಹಮ್ಮದ್ ಅಲ್ ಜದಾನ್ ಹೇಳಿದರು.
ಸೌದಿ ಅರೇಬಿಯದ ಒಟ್ಟು ದೇಶಿ ಉತ್ಪನ್ನ (ಜಿಡಿಪಿ) ಬೆಳವಣಿಗೆ, ಅರ್ಥವ್ಯವಸ್ಥೆಯ ವಿಸ್ತರಣೆ ಮತ್ತು ತೈಲ ಬೆಲೆಯಲ್ಲಿ ಸ್ಥಿರ ಏರಿಕೆ ಮುಂತಾದ ನಿರ್ದಿಷ್ಟ ಗುರಿಗಳನ್ನು ಸಾಧಿಸಿದ ಬಳಿಕ ಮೌಲ್ಯವರ್ಧಿತ ತೆರಿಗೆಯನ್ನು ಮರುಪರಿಶೀಲಿಸಲಾಗುವುದು ಎಂದು ಅಲ್ ಜದಾನ್ ಹೇಳಿರುವುದಾಗಿ ಸೌದಿ ಗಝೆಟ್ ಹೇಳಿದೆ.
ಸೌದಿ ಅರೇಬಿಯವು 2020 ಜುಲೈ 1ರಂದು ವ್ಯಾಟನ್ನು 5 ಶೇಕಡದಿಂದ 15 ಶೇಕಡಕ್ಕೆ ಹೆಚ್ಚಿಸಿತ್ತು. ಆರ್ಥಿಕತೆ ಮೇಲೆ ಕೊರೋನ ವೈರಸ್ ಬೀರಿದ ಪರಿಣಾಮಗಳು ಹಾಗೂ ಕುಸಿದ ತೈಲ ಬೆಲೆಯಿಂದಾಗಿ ಆದಾಯದಲ್ಲಿ ಸಂಭವಿಸಿದ ಕಡಿತ ಮುಂತಾದ ಅಂಶಗಳ ಹಿನ್ನೆಲೆಯಲ್ಲಿ ಸೌದಿ ಅರೇಬಿಯ ಸರಕಾರವು ಈ ನಿರ್ಧಾರವನ್ನು ತೆಗೆದುಕೊಂಡಿತ್ತು.