ಕೇರಳದ ಮುಸ್ಲಿಂ, ಕ್ರಿಶ್ಚಿಯನ್ ಮತದಾರರು ಎಲ್ಡಿಎಫ್ಗೆ ಒಲವು ತೋರಿದ್ದೇಕೆ?
ಸಾಂದರ್ಭಿಕ ಚಿತ್ರ
ಕೋಝಿಕ್ಕೋಡ್/ ಕೊಟ್ಟಾಯಂ, ಮೇ 3: ಕೇರಳದಲ್ಲಿ 1970ರಲ್ಲಿ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್(ಯುಡಿಎಫ್) ರಚನೆಯಾದ ಬಳಿಕ ಇದು ಶೇಕಡ 45ರಷ್ಟು ಮತದಾರರನ್ನು ಹೊಂದಿರುವ ಅಲ್ಪಸಂಖ್ಯಾತರಿಗೆ ರಾಜಕೀಯ ವೇದಿಕೆಯಾಗಿ ಮಾರ್ಪಟ್ಟಿತು.
ಈ ವಿಶಿಷ್ಟ ರಾಜಕೀಯ ಪ್ರಯೋಗ ಯುಡಿಎಫ್ಗೆ ಪ್ರಮುಖವಾಗಿ ರಾಜಕೀಯ ನೆಲೆ ಕಲ್ಪಿಸಿಕೊಟ್ಟಿದ್ದಲ್ಲದೇ ಮಲಬಾರ್ ಪ್ರದೇಶದಲ್ಲಿ ಅಧಿಕವಿರುವ ದೊಡ್ಡ ಪ್ರಮಾಣದ ಮುಸ್ಲಿಂ ಮತದಾರರು (ಶೇಕಡ 26.6) ಮತ್ತು ಕೇಂದ್ರ ಕೇರಳದ ಕ್ರೈಸ್ತ ಸಮುದಾಯ (18.4%)ದವರನ್ನು ಒಂದೇ ವೇದಿಕೆಯಡಿ ಕೂಡಿಸಲು ಸಾಧ್ಯವಾಗಿಸಿತು. ಈ ಸಮುದಾಯವನ್ನು ಸಾಂಪ್ರದಾಯಿಕವಾಗಿ ವಿವಿಧ ಸಮುದಾಯಗಳಲ್ಲಿ ಹಂಚಿಹೋಗಿದ್ದ ಕಾಂಗ್ರೆಸ್ನ ಕಮ್ಯುನಿಸ್ಟ್ ವಿರೋಧಿ ಮತಗಳ ಜತೆ ಜೋಡಿಸಲು ಅನುವು ಮಾಡಿಕೊಟ್ಟಿತು. ಈ ರಾಜಕೀಯ ಪ್ರಯೋಗದಿಂದಾಗಿ ಕೇರಳದಲ್ಲಿ ನಾಲ್ಕು ದಶಕಗಳ ಕಾಲ ಎಲ್ಡಿಎಫ್ ಮತ್ತು ಯುಡಿಎಫ್ ಪರ್ಯಾಯವಾಗಿ ಆಡಳಿತ ನಡೆಸುವಂತಾಗಿತ್ತು. ಆದರೆ ನಾಲ್ಕು ದಶಕಗಳ ಸಂಪ್ರದಾಯ ಈ ಬಾರಿಯ ಚುನಾವಣೆಯಲ್ಲಿ ಮುರಿದಿದ್ದು, ಎಲ್ಡಿಎಫ್ ಸತತ ಎರಡನೇ ಬಾರಿಗೆ ಅಧಿಕಾರದ ಗದ್ದುಗೆ ಹಿಡಿದಿದೆ.
ಯುಡಿಎಫ್ನ ಆಸ್ತಿ ಎನಿಸಿದ್ದ ಮತ ಬ್ಯಾಂಕನ್ನು ಬೇಧಿಸುವಲ್ಲಿ ಎಲ್ಡಿಎಫ್ ಯಶಸ್ವಿಯಾಗಿದೆ. ಅಭ್ಯರ್ಥಿಯ ಗೆಲುವಿನಲ್ಲಿ ಮುಸ್ಲಿಮರು ನಿರ್ಣಾಯಕ ಪಾತ್ರ ವಹಿಸುವ 66 ವಿಧಾನಸಭಾ ಕ್ಷೇತ್ರಗಳ ಪೈಕಿ 45 ಸ್ಥಾನಗಳನ್ನು ಎಲ್ಡಿಎಫ್ ಬುಟ್ಟಿಗೆ ಹಾಕಿಕೊಂಡಿದೆ. ಐಯುಎಂಎಲ್ಗೆ ಕೂಡಾ ಹೊಡೆತ ಬಿದ್ದಿದ್ದು, 2016ರ ಚುನಾವಣೆಗಿಂತ ಕಡಿಮೆ ಸ್ಥಾನಗಳನ್ನು ಪಡೆದಿದೆ. ಮುಸ್ಲಿಂ ಮತದಾರರು ನಿರ್ಣಾಯಕವಾಗಿರುವ ಸ್ಥಾನಗಳ ಪೈಕಿ ಯುಡಿಎಫ್ ಗೆದ್ದಿರುವ 21 ಸ್ಥಾನಗಳ ಪೈಕಿ 20 ಮಲಬಾರ್ ಪ್ರದೇಶದಲ್ಲಿವೆ. ಇದು ಕೇಂದ್ರ ಹಾಗೂ ದಕ್ಷಿಣ ಕೇರಳದಲ್ಲಿ ಮುಸ್ಲಿಂ ಮತಗಳು, ಕಾಂಗ್ರೆಸ್ ಮತ್ತು ಎಲ್ಡಿಎಫ್ ನಡುವೆ ಆಯ್ಕೆ ಮಾಡಬೇಕಾಗಿ ಬಂದ ಸಂದರ್ಭದಲ್ಲಿ ಎಲ್ಡಿಎಫ್ನತ್ತ ಕೇಂದ್ರಿತವಾಗಿರುವುದನ್ನು ತೋರಿಸುತ್ತದೆ. ಸಿಎಎಎ/ಎನ್ಆರ್ಸಿ ವಿರುದ್ಧ ನಡೆದ ಪ್ರತಿಭಟನೆಗೆ ಮುಸ್ಲಿಮರು ದೊಡ್ಡ ಪ್ರಮಾಣದ ಬೆಂಬಲ ನೀಡಿದಾಗಲೇ ಎಲ್ಡಿಎಫ್ಗೆ ಈ ಸುಳಿವು ಸಿಕ್ಕಿತ್ತು. ಎಪ್ರಿಲ್ 6ರಂದು ಮತದಾನದ ದಿನ ಮುಸ್ಲಿಮರ ಆಡಳಿತದ ಪತ್ರಿಕೆಗಳಲ್ಲಿ ವಿಶೇಷವಾಗಿ ಪೂರ್ಣ ಪುಟ ಜಾಹೀರಾತು ಪ್ರಕಟಿಸಿ, ಎಲ್ಡಿಎಫ್ ಸಿಎಎ/ಎನ್ಆರ್ಸಿ ಜಾರಿಗೊಳಿಸುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು.
ಅಂತೆಯೇ ಕೇಂದ್ರ ಕೇರಳದಲ್ಲಿ ಚರ್ಚ್ಗಳ ಬೆಂಬಲವಿಲ್ಲದೇ ಎಲ್ಡಿಎಫ್ಗೆ ಇಷ್ಟೊಂದು ದೊಡ್ಡ ಪ್ರಮಾಣದ ಜಯ ಸಾಧ್ಯವಾಗುತ್ತಿರಲಿಲ್ಲ. ಇದು ರಾತ್ರೋರಾತ್ರಿ ಆಗಿಲ್ಲ. ಯುಡಿಎಫ್ನಲ್ಲಿ ಐಯುಎಂಎಲ್ಗೆ ಪ್ರಾಮುಖ್ಯ ನೀಡಲಾಗುತ್ತಿದೆ ಎಂಬ ಅಸಮಾಧಾನ ಚರ್ಚ್ಗಳಲ್ಲಿ ಇತ್ತು. ಉಮ್ಮನ್ ಚಾಂಡಿಯವರ ಪುತ್ರ ತಮ್ಮ ಭಾಷಣದಲ್ಲಿ ಹಗಿಯಾ ಸೋಫಿಯಾವನ್ನು ಟರ್ಕಿಯಲ್ಲಿ ಮಸೀದಿಯಾಗಿ ಪರಿವರ್ತಿಸಲಾಗಿದೆ ಎಂದು ಉಲ್ಲೇಖಿಸಿದ್ದು, ಬಿಷಪ್ಗಳನ್ನು ಕೆರಳಿಸಿತ್ತು. ಜಾಕೋಬ್ ಚರ್ಚ್ಗಳ ಕಠಿಣ ನಿಲುವಿನಿಂದಾಗಿ, ಚಾಂಡಿ ಪುತುಪಲ್ಲಿ ಕ್ಷೇತ್ರದಲ್ಲಿ ಜಯಕ್ಕೆ ಹರಸಾಹಸಪಡಬೇಕಾಯಿತು. ಈ ಚರ್ಚ್ಗಳು ಚುನಾವಣೆ ಪೂರ್ವದಲ್ಲಿ ಬಿಜೆಪಿ ಮುಖಂಡರನ್ನು ಭೇಟಿ ಮಾಡಿದರೂ ಅಂತಿಮ ಕ್ಷಣದಲ್ಲಿ ಎಲ್ಡಿಎಫ್ ಜತೆಗೆ ಉಳಿದರು.