ಇದು ಹೊಣೆಗೇಡಿತನಕ್ಕೆ ತೆರುತ್ತಿರುವ ಬೆಲೆ
ತಜ್ಞರ ಭವಿಷ್ಯವಾಣಿ ನಿಜವಾಗಿದೆ. ಕೋವಿಡ್-19ರ ಎರಡನೇ ಅಲೆ ಭೀಕರ ಸುನಾಮಿಯ ರೀತಿಯಲ್ಲಿ ಭಾರತಕ್ಕೆ ಬಂದಪ್ಪಳಿಸಿದೆ. ದೇಶಾದ್ಯಂತ ಆಕ್ಸಿಜನ್, ಔಷಧಿ, ಆಸ್ಪತ್ರೆ ಬೆಡ್‌ಗಳಿಗಾಗಿ ಹಾಹಾಕಾರ ಮುಗಿಲುಮುಟ್ಟಿದೆ. ಸಾವುಗಳ ಸಂಖ್ಯೆ ಎಷ್ಟು ಹೆಚ್ಚಿದೆಯೆಂದರೆ ಶವ ಸಂಸ್ಕಾರಕ್ಕೂ ಸರತಿಯ ಸಾಲಲ್ಲಿ ನಿಲ್ಲಬೇಕಾದ ಊಹಿಸಲಸಾಧ್ಯ ಪರಿಸ್ಥಿತಿ ನಿರ್ಮಾಣವಾಗಿದೆ. ಕೊರೋನ ಸಾಂಕ್ರಾಮಿಕ ವಿರುದ್ಧದ ಸಮರವನ್ನು ಜಯಿಸಿದೆವೆಂದು ಆತ್ಮತೃಪ್ತಿಯಿಂದ ಬೀಗಿ ಕಿವುಡು, ಕುರುಡಾದ ಕೇಂದ್ರ ಸರಕಾರ ವಿವಿಧ ತಜ್ಞರ ಸಮಿತಿ, ಸಂಸದೀಯ ಸಮಿತಿ ಮುಂತಾದವುಗಳು ಎರಡನೆಯ ಅಲೆ ಬಗ್ಗೆ ಕೊಟ್ಟಿದ್ದ ಮುನ್ನೆಚ್ಚರಿಕೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿತು. ಸಾಕಷ್ಟು ಆಕ್ಸಿಜನ್, ಔಷಧಿ, ಆಸ್ಪತ್ರೆ ಬೆಡ್, ಲಸಿಕೆಗಳನ್ನು ಉತ್ಪಾದಿಸಿ ಸಂಗ್ರಹಿಸಿಡುವುದೇ ಮುಂತಾದ ಅವಶ್ಯಕ ಪೂರ್ವಸಿದ್ಧತೆಗಳನ್ನು ಮಾಡುವ ಬದಲು ಸೋಂಕು ಹರಡುವಿಕೆಯನ್ನು ಹೆಚ್ಚಿಸುವಂತಹ ಜನಜಂಗುಳಿಯ ಜಾತ್ರೆಗಳು, ಧಾರ್ಮಿಕ ಉತ್ಸವಗಳು, ಮದುವೆಗಳು, ಚುನಾವಣಾ ರ್ಯಾಲಿಗಳು, ಹಲವಾರು ಹಂತಗಳ ಮತದಾನಗಳೇ ಮೊದಲಾದ ಧಾರ್ಮಿಕ, ಸಾಮಾಜಿಕ ಮತ್ತು ರಾಜಕೀಯ ಕಾರ್ಯಕ್ರಮಗಳಿಗೆ ಮುಕ್ತ ಅವಕಾಶ ನೀಡಿತು. ಈ ರೀತಿಯಾಗಿ ಮಹಾ ಅನಾಹುತವೊಂದನ್ನು ತಾನೇ ಕೈಬೀಸಿ ಬರಮಾಡಿಕೊಂಡ ಭಾರತ ಇಂದು ಕೊರೋನ 2ರ ಸುನಾಮಿಗೆ ತತ್ತರಿಸಿ ವಿಲವಿಲ ಒದ್ದಾಡುತ್ತಿದೆ.
ಕೊರೋನ 2ರ ಸುನಾಮಿಯ ಪರಿಣಾಮವಾಗಿ ದೇಶದೆಲ್ಲೆಡೆ ಜನ ಅನುಭವಿಸುತ್ತಿರುವ ಘನಘೋರ ಸಂಕಷ್ಟಗಳನ್ನು ಮತ್ತು ಕೆಲವು ಮಂತ್ರಿಮಹೋದಯರ ನಡೆನುಡಿಗಳನ್ನು ಗಮನಿಸಿದಾಗ ನಮ್ಮಲ್ಲೊಂದು ಜವಾಬ್ದಾರಿಯುತ, ಪ್ರಜಾತಾಂತ್ರಿಕ ಕೇಂದ್ರ ಸರಕಾರ ಇದೆಯೇ ಎಂಬ ಬಲವಾದ ಅನುಮಾನ ಮೂಡುತ್ತದೆ. ದಿಲ್ಲಿ, ಅಲಹಾಬಾದ್, ಮುಂಬೈ, ಮದ್ರಾಸ್ ಹೈಕೋರ್ಟುಗಳ ಮತ್ತು ಸರ್ವೋಚ್ಚ ನ್ಯಾಯಾಲಯದ ಇತ್ತೀಚಿನ ಟೀಕೆಗಳು ಸಹ ಈ ಅನುಮಾನಕ್ಕೆ ಇಂಬು ನೀಡುವಂತಿವೆ. ಎಲ್ಲಾ ನಿರ್ಧಾರಗಳೂ ಪ್ರಧಾನಿ ಕಚೇರಿಯಿಂದಲೇ ಹೊರಬೀಳುವುದೆಂದಾದರೆ ಭಾರತದಲ್ಲಿಂದು ಜನಾಭಿಪ್ರಾಯಗಳಿಗೆ, ತಜ್ಞರ, ವಿಜ್ಞಾನಿಗಳ, ಪ್ರತಿಪಕ್ಷಗಳ ಸಲಹೆಸೂಚನೆಗಳಿಗೆ ಮನ್ನಣೆ ನೀಡುವ ನಿಜವಾದ ಪ್ರಜಾತಾಂತ್ರಿಕ ವ್ಯವಸ್ಥೆ ಇಲ್ಲವೆಂದೇ ಹೇಳಬೇಕಾಗುತ್ತದೆ. ಒಂದು ನೈಜ ಪ್ರಜಾಪ್ರಭುತ್ವದಲ್ಲಿ ಇಂತಹ ನಿರ್ಲಕ್ಷ್ಯ ಮತ್ತು ಸ್ವಸಂತೃಪ್ತಿಗಳು ಇರಬಾರದು ಮತ್ತು ಇರುವುದಿಲ್ಲ ಕೂಡ.
ನಿಜ ಹೇಳಬೇಕೆಂದರೆ ಇಂತಹ ಅಕ್ಷಮ್ಯ ಹಾಗೂ ಜನದ್ರೋಹಿ ಕೃತ್ಯಗಳು ಆತ್ಮವೈಭವೀಕರಣದ ಗೀಳು ಹಚ್ಚಿಸಿಕೊಂಡ ಏಕವ್ಯಕ್ತಿಕೇಂದ್ರಿತ ನಿರಂಕುಶ ಪ್ರಭುತ್ವಗಳ ವೈಶಿಷ್ಟ್ಯವಾಗಿದೆ. ಸ್ವಪ್ರತಿಷ್ಠೆಯ ಗೀಳು ಹಿಡಿದ ನಾಯಕರಿಗೆ ತಮ್ಮ ಪ್ರತಿಯೊಂದು ಹೆಜ್ಜೆಯೂ ತಮ್ಮ ಪ್ರತಿಷ್ಠೆಯನ್ನು ಹೆಚ್ಚಿಸುವಂತಿರುವುದೇ ಮುಖ್ಯವಾಗುತ್ತದೆ. ಇದಕ್ಕೋಸ್ಕರ ಸಮಾಜದ ವಿವಿಧ ರಂಗಗಳಲ್ಲಿ ವಂದಿಮಾಗಧರ ದೊಡ್ಡ ಪಡೆಯನ್ನೇ ಸಾಕಿ, ಸಲಹಲಾಗುತ್ತದೆ. ಇದೇ ಜನವರಿ 28ರಂದು ದಾವೊಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯ ಸಭೆಯನ್ನು ವೀಡಿಯೊ ಕಾನ್ಫರೆನ್ಸ್ ಮೂಲಕ ಉದ್ದೇಶಿಸಿ ಮಾತನಾಡಿದ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಅಂದು ಕೊರೋನ ವಿರುದ್ಧ ಭಾರತ ಸಾಧಿಸಿದ ವಿಜಯದ ಬಗ್ಗೆ ಕೊಚ್ಚಿಕೊಂಡದ್ದೇ ಕೊಚ್ಚಿಕೊಂಡದ್ದು. ಆತ್ಮವೈಭವೀಕರಣದ ಒಂದು ಬಹುಸ್ಪಷ್ಟ ನಿದರ್ಶನವಿದು. ಭಾಷಣಕೋವಿದ ಮೋದಿ ಮಹಾಶಯರು ಭಾರತದ ಮೂಲಸೌಕರ್ಯಗಳು ಹಾಗೂ ಸನ್ನದ್ಧತೆಯ ಬಗ್ಗೆ ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುತ್ತಾ ಭಾರತ ಸಾಧಿಸಿದ ಯಶಸ್ಸಿನ ಬಗ್ಗೆ ಏನು ಭಾಷಣ ಬಿಗಿದರೆಂದು ಕೊಂಚ ನೋಡೋಣ.
‘‘.......ನಾನು 1.3 ಬಿಲಿಯಕ್ಕೂ ಅಧಿಕ ಭಾರತೀಯರಿಂದ ವಿಶ್ವಾಸ, ಸಕಾರಾತ್ಮಕತೆ ಮತ್ತು ಆಶಾವಾದದ ಸಂದೇಶವನ್ನು ತಂದಿರುವೆನು. ಕಳೆದ ವರ್ಷದ ಫೆಬ್ರವರಿ, ಮಾರ್ಚ್, ಎಪ್ರಿಲ್ ತಿಂಗಳಲ್ಲಿ ವಿಶ್ವದ ಅನೇಕ ಹೆಸರಾಂತ ತಜ್ಞರು, ದೊಡ್ಡ ದೊಡ್ಡ ಸಂಸ್ಥೆಗಳು ಏನೆಲ್ಲಾ ಹೇಳಿದ್ದರು. ಭಾರತ ಇಡೀ ವಿಶ್ವದಲ್ಲಿ ಅತ್ಯಧಿಕ ಕೊರೋನ ಪೀಡಿತ ದೇಶವಾಗಲಿದೆ ಎಂದು ಭವಿಷ್ಯ ನುಡಿಯಲಾಯಿತು; ಅಲ್ಲಿ ಕೊರೋನದ ಸುನಾಮಿ ಬರಲಿದೆ, 700-800 ಮಿಲಿಯ ಜನರಿಗೆ ಕೊರೋನ ತಗಲಲಿದೆ ಎನ್ನಲಾಯಿತು; ಎರಡು ಮಿಲಿಯಕ್ಕೂ ಅಧಿಕ ಜನ ಸಾವಿಗೀಡಾಗಲಿದ್ದಾರೆಂದು ಅಂದಾಜಿಸಲಾಯಿತು....... ಭಾರತ ಪ್ರಗತಿಯ ಹಾದಿಯಲ್ಲಿ ಮುಂದುವರಿಯಿತು. ಭಾರತ ಇಂದು ತಮ್ಮ ಅತ್ಯಧಿಕ ಪ್ರಜೆಗಳನ್ನು ರಕ್ಷಿಸುವಲ್ಲಿ ಸಫಲವಾದ ರಾಷ್ಟ್ರಗಳಲ್ಲೊಂದಾಗಿದೆ. ಜಗತ್ತಿನ ಶೇ. 18ರಷ್ಟಿರುವ ಭಾರತದ ಜನ ಕೊರೋನದ ಮೇಲೆ ಪ್ರಭಾವಪೂರ್ಣ ನಿಯಂತ್ರಣ ಸಾಧಿಸಿ ಇಡೀ ಜಗತ್ತನ್ನು, ಮಾನವಕುಲವನ್ನು ರಕ್ಷಿಸಿದ್ದಾರೆ........’’
ಈ ಹೊತ್ತು ಹೆಸರಾಂತ ತಜ್ಞರು, ದೊಡ್ಡ ದೊಡ್ಡ ಸಂಸ್ಥೆಗಳ ಮುನ್ನೆಚ್ಚರಿಕೆಗಳು ನಿಜವಾಗುತ್ತಿವೆ. ಸರಕಾರಿ ಅಂಕಿಅಂಶಗಳ ಪ್ರಕಾರವೇ ಎಪ್ರಿಲ್ 29, 2021ರ ತನಕ ಒಟ್ಟು ಸೋಂಕಿತರ ಸಂಖ್ಯೆ 18.3 ಮಿಲಿಯದಷ್ಟಿದ್ದರೆ ಮೃತರ ಸಂಖ್ಯೆ 2 ಲಕ್ಷ ದಾಟಿದೆ. ಆದರೆ ಸರಕಾರಿ ಅಂಕಿಅಂಶಗಳು ನಿಜಸಂಖ್ಯೆಗಳನ್ನು ಮರೆಮಾಚುತ್ತಿರುವುದಾಗಿ ಅನೇಕ ಮಾಧ್ಯಮಗಳು ವರದಿ ಮಾಡುತ್ತಿವೆ. ಹೀಗಾಗಿ ಅಸಲಿ ಸಂಖ್ಯೆಗಳು ಖಂಡಿತ ಇದಕ್ಕಿಂತ ಎಷ್ಟೋ ಪಾಲು ಹೆಚ್ಚಿರಬಹುದು. ಕೊರೋನ 2ರ ಅಟ್ಟಹಾಸ ಮೇ ಅಂತ್ಯದ ವರೆಗೂ ಮುಂದುವರಿಯಲಿದೆ ಎನ್ನಲಾಗುತ್ತಿದೆ. ಹೀಗಿರುವಾಗ ಔಷಧಿ, ಆಕ್ಸಿಜನ್, ಲಸಿಕೆ, ಬೆಡ್, ಸಿಬ್ಬಂದಿ ಕೊರತೆ ಇದೇ ರೀತಿ ಮುಂದುವರಿದಲ್ಲಿ ಸಾವುನೋವಿನ ಅಂಕಿಅಂಶಗಳು ಎಲ್ಲಿಗೆ ತಲುಪಲಿವೆಯೋ ಗೊತ್ತಿಲ್ಲ.
ಹೀಗೆ ಕೊರೋನ ಸುನಾಮಿಯ ಅಬ್ಬರಕ್ಕೆ ದೇಶದ ಪ್ರಜೆಗಳು ಕಂಗಾಲಾಗಿದ್ದರೆ ಅತ್ತ ‘‘ರಾಜ್ಯ ಸರಕಾರಗಳು ಆಕ್ಸಿಜನ್ ಬೇಡಿಕೆಯನ್ನು ನಿಯಂತ್ರಿಸಬೇಕು. ಕೋವಿಡ್-19ರ ಹರಡುವಿಕೆಯನ್ನು ತಡೆಯುವುದು ರಾಜ್ಯ ಸರಕಾರಗಳ ಜವಾಬ್ದಾರಿ’’ ಎಂದ ಪ್ರಧಾನಿ ಕೇಂದ್ರ ಸರಕಾರದ ಜವಾಬ್ದಾರಿಯನ್ನು ಕಳಚಿಬಿಟ್ಟು ಎಲ್ಲವನ್ನೂ ರಾಜ್ಯಗಳ ಹೆಗಲಿಗೆ ದಾಟಿಸಿ ತಾನು ಕೇವಲ ಸಲಹೆ ನೀಡುವುದಕ್ಕಷ್ಟೆ ಸೀಮಿತರಾಗಿರುವಂತಿದೆ. ಕೊರೋನ 1 ಮತ್ತು ಕೊರೋನ 2ಕ್ಕೆ ಸಂಬಂಧಿಸಿದ ಈ ಕೆಳಗಿನ ಕೆಲವು ಅಂಶಗಳನ್ನು ಗಮನಿಸಿ:
* 2020ರಲ್ಲಿ ಭಾರತದಲ್ಲಿ ಕೊರೋನ 1 ಪ್ರಾರಂಭವಾದ ನಂತರವೂ ಡೊನಾಲ್ಡ್ ಟ್ರಂಪ್‌ಗೋಸ್ಕರ ನಮಸ್ತೆ ಟ್ರಂಪ್ ಕಾರ್ಯಕ್ರಮ ಏರ್ಪಡಿಸಿ ಆತನ ಸ್ವಾಗತಕ್ಕೆ ಲಕ್ಷಗಟ್ಟಲೆ ಜನರನ್ನು ಸೇರಿಸಲಾಯಿತು.
* 2020ರ ಮಾರ್ಚ್ 24ರಂದು ರಾಷ್ಟ್ರವ್ಯಾಪಿ ಲಾಕ್‌ಡೌನ್ ಘೋಷಿಸಿದಾಗ ಜನರಿಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲು 2 ತಾಸಿಗೂ ಕಡಿಮೆ ಕಾಲಾವಕಾಶ ನೀಡಲಾಯಿತು. ಅಸಂಘಟಿತ ವಲಯ, ವಲಸೆ ಕಾರ್ಮಿಕರನ್ನು ಕೇಳುವವರೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಯಿತು.
* ಮಾರ್ಚ್ 25, 2020ರಂದು ದೇಶವನ್ನು ಉದ್ದೇಶಿಸಿ ಮಾತನಾಡಿದ ಮೋದಿಯವರು, ಮಹಾಭಾರತ ಯುದ್ಧ 18 ದಿನಗಳಲ್ಲಿ ಕೊನೆಗೊಂಡಿತ್ತು, ಕೊರೋನ ವೈರಾಣು ಎಂಬ ರಾಕ್ಷಸನನ್ನು ತಾನು ಬರೀ 21 ದಿನಗಳಲ್ಲಿ ಸಂಹರಿಸುವೆ ಎಂದು ಜಂಬ ಕೊಚ್ಚಿದರು.
* ಎಪ್ರಿಲ್ 3, 2020ರಂದು ಮತ್ತೆ ಟಿವಿ ಪರದೆ ಮೇಲೆ ಕಾಣಿಸಿಕೊಂಡ ಮೋದಿಯವರು ಲೈಟುಗಳನ್ನು ಆರಿಸಿ, ದೀಪ ಹಚ್ಚಿ, ತಟ್ಟೆ ಬಡಿಯಿರಿ ಎಂದು ಜನರಿಗೆ ಕರೆನೀಡಿದರು.
* ಜನವರಿ 17, 2021ರಂದು ಕೊರೋನ 1ರ ತೀವ್ರತೆ ಕಡಿಮೆಯಾದಾಗ ಮನುಕುಲದ ಅತಿದೊಡ್ಡ ಬಿಕ್ಕಟ್ಟನ್ನು ಜಯಿಸಿದುದಕ್ಕಾಗಿ ಅಮಿತ್ ಶಾರವರು ಮೋದಿಯವರನ್ನು ಅಭಿನಂದಿಸಿದರು.
* ಫೆಬ್ರವರಿ 16, 2021ರಂದು ಖುದ್ದು ಮೋದಿಯವರೇ ಮಾತನಾಡಿ, ‘‘ಕೋವಿಡ್-19ರ ವಿರುದ್ಧದ ಯುದ್ಧದಲ್ಲಿ ಭಾರತ ಸಾಧಿಸಿದ ಯಶಸ್ಸು ಇಡೀ ಜಗತ್ತಿಗೇ ಸ್ಫೂರ್ತಿದಾಯಕವಾಗಿದೆ’’ ಎಂದರು.
* ಮಾರ್ಚ್ 7, 2021ರಂದು ‘‘ಭಾರತದಲ್ಲಿ ನಾವೀಗ ಕೋವಿಡ್-19ರ ಕೊನೆಯ ಹಂತದಲ್ಲಿದ್ದೇವೆ’’ ಎಂದ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌ರು, ಭಾರತ ಕೊರೋನ ವಿರುದ್ಧದ ಸಮರವನ್ನು ಹೆಚ್ಚುಕಡಿಮೆ ಗೆದ್ದಿರುವುದಾಗಿ ಘೋಷಿಸಿದರು.
* ಕೊರೋನ 2 ಶುರುವಾಗಲಿರುವುದರ ಕುರಿತ ತಜ್ಞರ ಎಚ್ಚರಿಕೆಗಳನ್ನೆಲ್ಲ ಗಾಳಿಗೆ ತೂರಿ ಆಕ್ಸಿಜನ್, ಲಸಿಕೆ, ಔಷಧಿಗಳನ್ನು ವಿದೇಶಗಳಿಗೆ ರಫ್ತು ಮಾಡಲಾಯಿತು.
* ಮೋದಿಯವರಿಗೆ ಎರಡನೇ ಅಲೆಯ ಪ್ರಾರಂಭದ ಬಗ್ಗೆ ಅರಿವಿತ್ತೆಂಬ ಸತ್ಯಾಂಶವೊಂದನ್ನು ಹಿರಿಯ ಬಿಜೆಪಿ ನಾಯಕ ಅಮಿತ್ ಮಾಲವೀಯ ಹೊರಗೆಡಹಿದ್ದಾರೆ. ಆದರೂ ಕೇಂದ್ರ ಸಚಿವಸಂಪುಟ ಒಮ್ಮೆಯಾದರೂ ಸಭೆ ಸೇರಿ ಈ ಘೋರ ವಿಪತ್ತಿನ ಕುರಿತು ಚರ್ಚಿಸಿದಂತಿಲ್ಲ.
* ಪಶ್ಚಿಮ ಬಂಗಾಳದಲ್ಲಿ 8 ಹಂತಗಳ ಮತದಾನಕ್ಕೆ ಅನುಮತಿ ನೀಡಲಾಯಿತು. ಚುನಾವಣಾ ಕಣದಲ್ಲಿದ್ದ ಎಲ್ಲಾ ರಾಜಕೀಯ ಪಕ್ಷಗಳೂ ರ್ಯಾಲಿ, ರೋಡ್‌ಶೋ ಮುಂತಾದ ಕಾರ್ಯಕ್ರಮಗಳನ್ನು ಎಗ್ಗಿಲ್ಲದೆ ನಡೆಸಿದವು. ಖುದ್ದು ಮೋದಿಯವರೇ 23ಕ್ಕೂ ಅಧಿಕ ರ್ಯಾಲಿಗಳನ್ನು ನಡೆಸಿದರು. ಅಂತಹ ಒಂದು ರ್ಯಾಲಿಯ ವೇಳೆ ನೆೆರೆದ ಜನಸ್ತೋಮವನ್ನು ಕಂಡು ಸಂತಸದಿಂದ ಬೀಗಿದ ಘಟನೆಯೂ ನಡೆದಿದೆ. ಚುನಾವಣೆಗಳು ಘೋಷಣೆಯಾದ ಬಳಿಕ ಪಶ್ಚಿಮ ಬಂಗಾಳದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ 75 ಪಟ್ಟು ಹೆಚ್ಚಳವಾಗಿದೆ.
* ಲಕ್ಷಾಂತರ ಜನ ಸೇರುವ ಕುಂಭಮೇಳವನ್ನು ರದ್ದುಗೊಳಿಸಲಾಗಿಲ್ಲ. ಅದು ಯಥಾಪ್ರಕಾರ ಜನವರಿ 14ರಿಂದ ಪ್ರಾರಂಭವಾಗಿದೆ. ಸುಮಾರು 48 ಲಕ್ಷಕ್ಕೂ ಅಧಿಕ ಜನ ಸೇರಿದ್ದ ಮೇಳವನ್ನು ಅಂತಿಮವಾಗಿ ಎಪ್ರಿಲ್ 17ರಂದು ರದ್ದುಗೊಳಿಸಲಾಯಿತು. ಅಷ್ಟರಲ್ಲಾಗಲೇ ಮೊದಲು ದಿನಕ್ಕೆ 500ರಷ್ಟಿದ್ದ ಸೋಂಕಿತರ ಸಂಖ್ಯೆ 2,757ಕ್ಕೆ ಏರಿಕೆಯಾಗಿತ್ತು. ಈಗ ಕುಂಭಮೇಳ ಆಯೋಜಿಸುವುದು ಉಚಿತವಲ್ಲ, ಕಾರ್ಯಕ್ರಮವನ್ನು ರದ್ದುಪಡಿಸಬೇಕು ಎಂಬ ಹಕ್ಕೊತ್ತಾಯಗಳು ಕೇಳಿಬಂದಾಗ ಉತ್ತರಾಖಂಡದ ಮುಖ್ಯಮಂತ್ರಿ ತೀರಥ್ ಸಿಂಗ್ ರಾವತ್‌ರ ಉತ್ತರ ಹೀಗಿತ್ತು: ‘‘ಗಂಗೆಯ ಹರಿವಿನಲ್ಲಿ ಗಂಗಾ ಮಾತೆಯ ಆಶೀರ್ವಾದ ಇರುವುದರಿಂದ ಕೊರೋನ ತಗಲುವುದಿಲ್ಲ....’’
* ವರದಿಯೊಂದರ ಪ್ರಕಾರ ಕೋವಿಡ್-19ರಿಂದ ಚೇತರಿಸಿಕೊಳ್ಳಲೆಂದು ಉದ್ದಿಮೆಗಳಿಗೆ ಒದಗಿಸಲಾದ ಆರ್ಥಿಕ ನೆರವಿನ ಬಹುಪಾಲು ದೊಡ್ಡ ಕಾರ್ಪೊರೇಟುಗಳ ಜೇಬು ಸೇರಿದೆ.
* ಇಂತಹ ರಾಷ್ಟ್ರೀಯ ವಿಪತ್ತಿನ ನಡುವೆಯೂ ಮೋದಿಯವರ ಸ್ವಪ್ರತಿಷ್ಠೆ ಮೆರೆಯುವುದಕ್ಕಿರುವ ರೂ. 20,000 ಕೋಟಿಗಳ ಸೆಂಟ್ರಲ್ ವಿಸ್ತಾ ಯೋಜನೆಯನ್ನು ಮುಂದುವರಿಸಲಾಗುತ್ತಿದೆ.
* ಲಸಿಕೆಯ ಕೊರತೆ ಇದೆ ಎಂದು ಗೊತ್ತಿದ್ದೂ ವೈಫಲ್ಯವನ್ನು ಮರೆಮಾಚು ವುದಕ್ಕಾಗಿ 2021ರ ಎಪ್ರಿಲ್ 11ರಿಂದ 14ರ ತನಕ ನಾಲ್ಕು ದಿನಗಳ ‘ಲಸಿಕಾ ಉತ್ಸವ’ ಹಮ್ಮಿಕೊಳ್ಳಲಾಯಿತು. ಇದನ್ನೊಂದು ಉತ್ಸವ ಎಂದು ಕರೆದವರಿಗೆ ಲವಲೇಶದಷ್ಟಾದರೂ ಸಂವೇದನೆ ಇದೆಯೇ?
* ಕೇಂದ್ರ ಸರಕಾರ ತಾನು 162 ಆಕ್ಸಿಜನ್ ಘಟಕಗಳನ್ನು ಸ್ಥಾಪಿಸುವುದಾಗಿ ಘೋಷಿಸಿ ಎಂಟು ತಿಂಗಳು ಕಳೆದ ಬಳಿಕ ಕೇವಲ 11 ಘಟಕಗಳನ್ನು ಸ್ಥಾಪಿಸಲಾಗಿದ್ದು ಅವುಗಳ ಪೈಕಿ 5 ಮಾತ್ರ ಆಕ್ಸಿಜನ್ ಉತ್ಪಾದಿಸುತ್ತಿವೆ.
ಇವೆಲ್ಲವೂ ಜನದ್ರೋಹದ ಕೃತ್ಯಗಳಲ್ಲವೇ? ಹಾಗಾದರೆ ಇದಕ್ಕೇನು ಶಿಕ್ಷೆ?