varthabharthi


ಕರ್ನಾಟಕ

ಮೃತರ ಸಂಖ್ಯೆ, ಆಮ್ಲಜನಕದ ಪೂರೈಕೆಯ ಬಗ್ಗೆ ಸಚಿವ ಸುಧಾಕರ್ ಮಾಹಿತಿ ಸಂಪೂರ್ಣ ಸುಳ್ಳು: ಸಿದ್ದರಾಮಯ್ಯ

ವಾರ್ತಾ ಭಾರತಿ : 4 May, 2021

ಚಾಮರಾಜನಗರ, ಮೇ 4: ಕೋವಿಡ್ ಆಸ್ಪತ್ರೆಯಲ್ಲಿ 24 ಮಂದಿ ಕೋವಿಡ್ ಸೋಂಕಿತರು ಆಮ್ಲಜನಕ ಕೊರತೆಯಿಂದಲೇ ಮೃತಪಟ್ಟಿದ್ದಾರೆ. ಆದರೆ ಈ ಕುರಿತು ಆರೋಗ್ಯ ಸಚಿವ ಡಿ.ಸುಧಾಕರ್ ಅವರು ಸುಳ್ಳು ಮಾಹಿತಿ ಕೊಟ್ಟಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಗ್ಯ ಸಚಿವರ ವಿರುದ್ದ ವಾಗ್ದಾಳಿ ನಡೆಸಿದರು. 

ಮಂಗಳವಾರ ಕೋವಿಡ್ ಆಸ್ಪತ್ರೆಗೆ ಭೇಟಿ ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ವೈದ್ಯರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಬಳಿಕ ಜಿಲ್ಲಾಧಿಕಾರಿ, ಜಿಲ್ಲಾ ಸರ್ಜನ್ ಹಾಗೂ ಡೀನ್ ಆಮ್ಲಜನಕ ಕೊರತೆಯಿಂದಲೇ 24 ಮಂದಿ ಮೃತಪಟ್ಟಿದ್ದಾರೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಎಲ್ಲರೂ ರಾತ್ರಿ ಹೊತ್ತಿನಲ್ಲೇ ಮೃತಪಟ್ಟಿದ್ದಾರೆ ಎಂಬ ಆಘಾತಕಾರಿ ವಿಷಯವನ್ನು ಹೇಳಿದರು. ಮೃತರ ಸಂಖ್ಯೆ ಮತ್ತು ಆಮ್ಲಜನಕದ ಪೂರೈಕೆಯ ಬಗ್ಗೆ ಸಚಿವ ಡಾ.ಕೆ.ಸುಧಾಕರ್ ಸಂಪೂರ್ಣ ಸುಳ್ಳು ಮಾಹಿತಿಯನ್ನು ನೀಡಿದ್ದು, ಆಮ್ಲಜನಕ ಕೊರತೆಯಿಂದಲೇ ಅಮಾಯಕ ಜೀವಗಳು ಅಸುನೀಗಿವೆ. ಇದರ ಸಂಪೂರ್ಣ ಹೊಣೆಯನ್ನು ಸಿಎಂ ಯಡಿಯೂರಪ್ಪ, ಆರೋಗ್ಯ ಸಚಿವ ಸುಧಾಕರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್ ಹೊರಬೇಕು ಎಂದು ಕಿಡಿಕಾರಿದರು.

ಜನರ ಜೀವವನ್ನು ಕಾಪಾಡಲಾಗದವರಿಗೆ ಆಡಳಿತದಲ್ಲಿ ಮುಂದುವರಿಯಲು ಯಾವುದೇ ನೈತಿಕತೆ ಇಲ್ಲ. ಸರ್ಕಾರ ನಡೆಸುವವರು ಅದಕ್ಷರು, ಬೇಜವಾಬ್ದಾರಿಯಿಂದ ನಡೆದುಕೊಂಡಿದ್ದಾರೆ. ಉಸ್ತುವಾರಿ ಮಂತ್ರಿ ಬೆಂಗಳೂರಿನಲ್ಲಿ ಮಜಾ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲೇ ಆಮ್ಲಜನಕ ಸಿಲಿಂಡರ್ ಸಿಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

ಸ್ವತಂತ್ರ ಸಂಸ್ಥೆಯೊಂದರ ಮೂಲಕ ಈ ದುರಂತದ ತನಿಖೆ ನಡೆಸಬೇಕು. ಅಧಿಕಾರಿಯಿಂದ ತನಿಖೆ ಮಾಡಿಸುವುದಲ್ಲ. ಆದ್ದರಿಂದ ಈ ಕ್ಷಣವೇ ನ್ಯಾಯಾಂಗ ತನಿಖೆಗೆ ಮುಖ್ಯಮಂತ್ರಿ ಆದೇಶಿಸಬೇಕು. ತಡವಾದರೆ ಪ್ರಕರಣವೇ ಮುಚ್ಚಿಹೋಗಲಿದೆ. ಮೃತ ಕುಟುಂಬಗಳಿಗೆ ತಲಾ 25 ಲಕ್ಷ ರೂ. ಪರಿಹಾರ  ನೀಡಬೇಕು ಎಂದು ಒತ್ತಾಯಿಸಿದರು.

ಮೈಸೂರಿನಿಂದ ಆಮ್ಲಜನಕ ಪೂರೈಕೆ ಮಾಡಿಲ್ಲ ಎಂದು ಚಾಮರಾಜನಗರ ಜಿಲ್ಲಾಧಿಕಾರಿ ಹೇಳುತ್ತಾರೆ. ಆದರೆ ಚಾಮರಾಜನಗರದವರೇ ಆಮ್ಲಜನಕ ತೆಗೆದುಕೊಂಡು ಹೋಗಿಲ್ಲ ಎಂದು ಮೈಸೂರಿನ ಜಿಲ್ಲಾಧಿಕಾರಿ ಹೇಳುತ್ತಿದ್ದಾರೆ. ಈ ಕುರಿತು ಕೂಡ ತನಿಖೆಯಾಗಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ನಿಮ್ಮ ತಪ್ಪಿಲ್ಲ ಎಂದ ಮೇಲೆ ಅವರ ಹೇಳಿಕೆ ವಿರುದ್ಧ ಪ್ರತಿಕ್ರಿಯೆ ಕೊಡಿ ಎಂದಿದ್ದು, ಸರ್ಕಾರಕ್ಕೆ ಈ ಕುರಿತು ಪತ್ರ ಬರೆಯುತ್ತೇನೆ ಎಂದಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆಯೂ ತನಿಖೆ ನಡೆಯಲಿ ಎಂದು ಆಗ್ರಹಿಸಿದರು.

ಈ ಸಂದರ್ಭ ನಂಜನಗೂಡು ತಾಲೂಕಿನ ದೊಡ್ಡಹೊಮ್ಮ ಗ್ರಾಮದ ಮೃತ ಸುರೇಂದ್ರ ಅವರ ಪತ್ನಿ ರಾಣಿ ಅವರು, 'ಸ್ವಲ್ಪ ಉಸಿರಾಟದ ಸಮಸ್ಯೆಯಿಂದ ಆಕ್ಸಿಜೆನೇಟೆಡ್ ಬೆಡ್‌ನಲ್ಲಿದ್ದ ಪತಿ ಸುರೇಂದ್ರ ಅವರಿಗೆ ಊಟ ಮಾಡಿಸಿ ಮನೆಗೆ ಹೋಗಿದ್ದೆ, ಆದರೆ ರಾತ್ರಿ 11.30ರ ಸುಮಾರಿಗೆ ಆಮ್ಲಜನಕ ಪೂರೈಕೆಯಾಗುತ್ತಿಲ್ಲ ಎಂದು ಕರೆ ಮಾಡಿ ತಿಳಿಸಿದರು. ನನ್ನ ಪತಿ ಆಮ್ಲಜನಕ ಸಿಗದೇ ಮೃತಪಟ್ಟಿದ್ದಾರೆ. ನಮಗಾದ ಅನ್ಯಾಯ ಮತ್ತೊಬ್ಬರಿಗೆ ಆಗಬಾರದು ಹಾಗಾಗಿ ನ್ಯಾಯ ಕೊಡಿಸಬೇಕು' ಎಂದು ಮನವಿ ಮಾಡಿದರು. ಮೃತ ಕುಟುಂಬಸ್ಥರ ಸಮಸ್ಯೆಗಳನ್ನು ಆಲಿಸಿದ ನಂತರ  ನ್ಯಾಯ ದೊರಕಿಸಿಕೊಡುವುದಾಗಿ ಸಿದ್ದರಾಮಯ್ಯ ಭರವಸೆ ಕೊಟ್ಟರು.

ಇದೇ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್, ಶಾಸಕರಾದ ಪುಟ್ಟರಂಗಶೆಟ್ಟಿ, ಆರ್.ನರೇಂದ್ರ, ರಿಝ್ವಾನ್ ಅರ್ಷದ್, ಮಾಜಿ ಶಾಸಕ ಎ.ಆರ್.ಕೃಷ್ಣಮೂರ್ತಿ, ಜಿಪಂ ಸದಸ್ಯ ಕೆರೆಹಳ್ಳಿ ನವೀನ್, ಮುಖಂಡ ಬಿ.ಕೆ.ರವಿಕುಮಾರ್ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)