varthabharthi


ರಾಷ್ಟ್ರೀಯ

ದೇಶದಲ್ಲಿ ಕೊರೋನ ಪ್ರಕರಣ ಹೆಚ್ಚಳ: ಒಂದೇ ದಿನ 3,460 ಸಾವು

ವಾರ್ತಾ ಭಾರತಿ : 5 May, 2021

ಹೊಸದಿಲ್ಲಿ: ಎರಡು ದಿನಗಳ ಇಳಿಕೆ ಪ್ರವೃತ್ತಿ ಬಳಿಕ ಮಂಗಳವಾರ ದೇಶದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಮತ್ತು ಸಾವಿನ ಸಂಖ್ಯೆ ಹೆಚ್ಚಿದೆ. ದಿಲ್ಲಿ ಹೊರತುಪಡಿಸಿ ದೇಶದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 3,460 ಮಂದಿ ಸೋಂಕಿತರು ಬಲಿಯಾಗಿದ್ದಾರೆ. ದಿಲ್ಲಿಯಲ್ಲಿ ಹಿಂದಿನ ಎರಡು ದಿನಗಳಲ್ಲಿ ತಲಾ 400 ಸೋಂಕಿತರು ಜೀವ ಕಳೆದುಕೊಂಡಿದ್ದರು. ಇದುವರೆಗೆ ದೇಶದಲ್ಲಿ ಒಂದೇ ದಿನ ಗರಿಷ್ಠ ಅಂದರೆ 3,728 ಮಂದಿ ಶನಿವಾರ ಮೃತಪಟ್ಟಿದ್ದರು.
ದಿಲ್ಲಿ ತಡರಾತ್ರಿವರೆಗೂ ದೈನಿಕ ಕೋವಿಡ್ ಅಂಕಿ ಅಂಶಗಳನ್ನು ಪ್ರಕಟಿಸಿಲ್ಲ. ದಿಲ್ಲಿ ಹೊರತುಪಡಿಸಿ ದೇಶದಲ್ಲಿ ಮಂಗಳವಾರ 3,62,577 ಹೊಸ ಪ್ರಕರಣಗಳು ವರದಿಯಾಗಿವೆ. ಸೋಮವಾರ 3.56 ಪ್ರಕರಣ ಬೆಳಕಿಗೆ ಬಂದಿತ್ತು. ಸೋಮವಾರ ರಾಜಧಾನಿಯಲ್ಲಿ 18,043 ಪ್ರಕರಣಗಳು ವರದಿಯಾಗಿದ್ದವು. ಕಳೆದ ಎಂಟು ದಿನಗಳಿಂದ ಹೊಸ ಪ್ರಕರಣಗಳ ಸಂಖ್ಯೆ 3.5 ಲಕ್ಷಕ್ಕಿಂತ ಅಧಿಕವಿದ್ದು, ಎಪ್ರಿಲ್ 30ರಂದು ಗರಿಷ್ಠ ಅಂದರೆ 4,02,351 ಪ್ರಕರಣಗಳು ದಾಖಲಾಗಿದ್ದವು.

ಮಂಗಳವಾರ ಉತ್ತರ ಪ್ರದೇಶ (352), ಕರ್ನಾಟಕ (292), ಪಂಜಾಬ್ (173), ಹರ್ಯಾಣ (153) ಹಾಗೂ ಬಂಗಾಳ (107) ಹೀಗೆ ಐದು ರಾಜ್ಯಗಳು ಇದುವರೆಗಿನ ಗರಿಷ್ಠ ಸಾವನ್ನು ದಾಖಲಿಸಿವೆ. ಮಹಾರಾಷ್ಟ್ರದಲ್ಲಿ ಕೂಡಾ ಸಾವಿನ ಸಂಖ್ಯೆ ಹೆಚ್ಚಿದ್ದು, ಒಂದೇ ದಿನ 891 ಮಂದಿ ಬಲಿಯಾಗಿದ್ದಾರೆ. ಸೋಮವಾರ ರಾಜ್ಯದಲ್ಲಿ 567 ಮಂದಿ ಮೃತಪಟ್ಟಿದ್ದರು. ಛತ್ತೀಸ್‌ಗಢ (210), ರಾಜಸ್ಥಾನ (154), ತಮಿಳುನಾಡು (144), ಜಾರ್ಖಂಡ್ (132), ಮತ್ತು ಗುಜರಾತ್ (131) ರಾಜ್ಯಗಳಲ್ಲೂ ಅಧಿಕ ಸಂಖ್ಯೆಯ ಸಾವು ಮುಂದುವರಿದಿದೆ. ಒಟ್ಟು 13 ರಾಜ್ಯಗಳಲ್ಲಿ ಒಂದೇ ದಿನ ತಲಾ 100ಕ್ಕಿಂತ ಅಧಿಕ ಸಾವು ಸಂಭವಿಸಿದೆ.

ದೇಶದಲ್ಲಿ ಸೋಂಕಿತರ ಸಾವಿನ ಪ್ರಮಾಣ ಹಿಂದಿನ ವಾರಕ್ಕೆ ಹೋಲಿಸಿದರೆ ಶೇಕಡ 22ರಷ್ಟು ಹೆಚ್ಚಿದೆ. ತಮಿಳುನಾಡು (21,228) ಸೇರಿದಂತೆ ಒಂಭತ್ತು ರಾಜ್ಯಗಳಲ್ಲಿ ಮಂಗಳವಾರ ಇದುವರೆಗಿನ ಗರಿಷ್ಠ ಪ್ರಕರಣಗಳು ವರದಿಯಾಗಿವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)