varthabharthi


ರಾಷ್ಟ್ರೀಯ

ರಾಜಕೀಯ ಗಂಧಗಾಳಿಯೂ ಇಲ್ಲದ ಚಿತ್ರನಟರಿಗೆ ಬಿಜೆಪಿ ಟಿಕೆಟ್: ಹಿರಿಯ ಮುಖಂಡ ಅಸಮಾಧಾನ

ವಾರ್ತಾ ಭಾರತಿ : 5 May, 2021

ಕೊಲ್ಕತ್ತಾ, ಮೇ 5: ರಾಜಕೀಯದ ಗಂಧಗಾಳಿಯೂ ಇಲ್ಲದ ಕೆಲ ಚಿತ್ರನಟರಿಗೆ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಸೋಲುವ ಸಲುವಾಗಿಯೇ ಬಿಜೆಪಿಯಿಂದ ಟಿಕೆಟ್ ನೀಡಲಾಗಿದೆ ಎಂದು ಹಿರಿಯ ಬಿಜೆಪಿ ಮುಖಂಡ ತಥಾಗತ ರಾಯ್ ಹೇಳಿಕೆ ನೀಡುವ ಮೂಲಕ ರಾಜ್ಯ ಬಿಜೆಪಿಯೊಳಗಿನ ಅಸಮಾಧಾನ ಸ್ಫೋಟಗೊಂಡಿದೆ.

ಚಿತ್ರರಂಗದಿಂದ ಹೊಸದಾಗಿ ರಾಜಕೀಯ ಪ್ರವೇಶಿಸಿ ಬಿಜೆಪಿಯಿಂದ ಸ್ಪರ್ಧಿಸಿದ ಮೂವರು ದೊಡ್ಡ ಅಂತರದಿಂದ ಸೋಲು ಅನುಭವಿಸಿದ್ದು, "ರಾಜಕೀಯವಾಗಿ ಮೂರ್ಖರು" ಎಂದು ಟ್ವೀಟ್ ಮಾಡಿದ್ದಾರೆ. ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸಬೇಕಾದರೆ ಪ್ರಚಾರಕ್ಕಾಗಿ ದೊಡ್ಡ ಮೊತ್ತದ ಹಣ ಬೇಕಾಗಿದೆ ಎಂದೂ ಅವರು ಬಹಿರಂಗಪಡಿಸಿದ್ದಾರೆ.

"ಬಿಜೆಪಿಯಲ್ಲಿ ಮಾತ್ರವಲ್ಲದೇ ರಾಜಕೀಯದ ಗಂಧಗಾಳಿಯೇ ಇಲ್ಲದ ಪರ್ನೊಮಿತ್ರಾ (ಬಾರಾನಗರ), ಶ್ರಾಬಂತಿ ಚಟರ್ಜಿ (ಬೆಹಾಲಾ ಪಶ್ಚಿಮ), ಪಾಯಲ್ ಸರ್ಕಾರ್ (ಬೆಹಾಲ ಪೂರ್ವ) ಹೀಗೆ ಚಲನಚಿತ್ರ ಮತ್ತು ಟೆಲಿವಿಷನ್ ನಟ-ನಟಿಯರಿಗೆ ಬಿಜೆಪಿ ಚುನಾವಣಾ ನಿರ್ವಹಣೆ ತಂಡ ಟಿಕೆಟ್ ನೀಡಿದೆ. ಈ ಮಹಿಳೆಯರು ರಾಜಕೀಯವಾಗಿ ಎಷ್ಟು ಮೂರ್ಖರು ಎಂದರೆ, ಟಿಎಂಸಿಯ ಪ್ಲೇಬಾಯ್ ಮದನ್ ಮಿತ್ರಾ ಜತೆಗೆ ಚುನಾವಣೆಗೆ ಒಂದು ತಿಂಗಳು ಮೊದಲು ವಿಹಾರಕ್ಕೆ ತೆರಳಿ ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದರು. ಎಲ್ಲರೂ ಹೀನಾಯವಾಗಿ ಸೋತಿದ್ದಾರೆ" ಎಂದು ರಾಯ್ ವಿವರಿಸಿದ್ದಾರೆ.

ಬಳಿಕ ಮತ್ತ ಟ್ವೀಟ್‌ನಲ್ಲಿ ತಿದ್ದುಪಡಿ ಮಾಡಿ, ಮದನ್ ಮಿತ್ರಾ ಜತೆ ಸೆಲ್ಫಿ ಕ್ಲಿಕ್ಕಿಸಿಕೊಂಡದ್ದು ತನುಶ್ರೀ ಚಕ್ರಬರ್ತಿ. ಪರ್ನೊ ಮಿತ್ರಾ ಅಲ್ಲ ಎಂದು ಸ್ಪಷ್ಟನೆ ನೀಡಿ, ದೋಷಕ್ಕಾಗಿ ವಿಷಾದ ವ್ಯಕ್ತಪಡಿಸಿದ್ದರು. ತನುಶ್ರೀ, ಹೌರಾದ ಶ್ಯಾಮ್‌ಪುರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಅನುಭವಿಸಿದ್ದರು.

ಬಿಜೆಪಿಯ ಉನ್ನತ ನಾಯಕರಿಗೆ ಟ್ವೀಟ್ ಟ್ಯಾಗ್ ಮಾಡಿರುವ ಅವರು, "ಈ ಮಹಿಳೆಯರು ಯಾವ ಶ್ರೇಷ್ಠ ಗುಣಗಳನ್ನು ಹೊಂದಿದ್ದಾರೆ? ಕೈಲಾಶ್ ವಿಜಯ್‌ವರ್ಗಿಯಾ, ದಿಲೀಪ್ ಘೋಷ್ ಮತ್ತು ಕಂಪೆನಿ ಇದಕ್ಕೆ ಉತ್ತರಿಸಬೇಕು" ಎಂದು ಆಗ್ರಹಿಸಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸಲು ದೊಡ್ಡ ವೆಚ್ಚ ತಗುಲುತ್ತದೆ ಎಂದು ಅವರು ಹೇಳಿದ್ದಾರೆ.

"ಬಿಜೆಪಿ ಚುನಾವಣಾ ಟಿಕೆಟ್‌ನ ಜತೆಗೆ ಚುನಾವಣಾ ವೆಚ್ಚಕ್ಕಾಗಿ ಅಥವಾ ಇತರ ಉದ್ದೇಶಗಳಿಗಾಗಿ ದೊಡ್ಡ ಮೊತ್ತದ ಹಣದ ಗಂಟೂ ಬೇಕಾಗುತ್ತದೆ" ಎಂದು ವಿವರಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)