ತಂದೆಯ ಅಂತ್ಯಕ್ರಿಯೆಯ ವೇಳೆ ಬೆಂಕಿಗೆ ಹಾರಿದ ಪುತ್ರಿ
ತೀವ್ರ ಸುಟ್ಟಗಾಯದೊಂದಿಗೆ ಆಸ್ಪತ್ರೆಗೆ ದಾಖಲು
ಬಾರ್ಮರ್, (ರಾಜಸ್ಥಾನ): ರಾಜಸ್ಥಾನದಲ್ಲಿ ನಡೆದ ದುರಂತದ ಘಟನೆಯೊಂದರಲ್ಲಿ, 34 ವರ್ಷದ ಮಹಿಳೆ ಯೊಬ್ಬರು ಶವಸಂಸ್ಕಾರದ ಸಮಯದಲ್ಲಿ ತನ್ನ ತಂದೆಯ ಅಂತ್ಯಕ್ರಿಯೆಯ ಬೆಂಕಿಯ ಮೇಲೆ ಹಾರಿದ ನಂತರ ತೀವ್ರ ಸುಟ್ಟಗಾಯಗಳಿಗೆ ಒಳಗಾಗಿದ್ದಾರೆ. ಕೋವಿಡ್-19 ಸೋಂಕಿಗೆ ಒಳಗಾದ ನಂತರ ಮಹಿಳೆಯ ತಂದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೋವಿಡ್-19 ಕಾರಣ ರಾಜಸ್ಥಾನದ ಬಾರ್ಮರ್ ಜಿಲ್ಲೆಯ ಆಸ್ಪತ್ರೆಯಲ್ಲಿ 73 ವರ್ಷದ ದಾಮೋದರ್ ದಾಸ್ ಶಾರ್ದಾ ಎಂಬುವವರು ಮಂಗಳವಾರ ನಿಧನರಾದರು ಎಂದು ಪೊಲೀಸರು ತಿಳಿಸಿದ್ದಾರೆ.
ದಾಮೋದರ್ ದಾಸ್ ಅಂತ್ಯಕ್ರಿಯೆ ನಡೆಸುತ್ತಿರುವಾಗ, ಅವರ ಮೂವರು ಹೆಣ್ಣುಮಕ್ಕಳ ಪೈಕಿ ಕಿರಿಯ, ಪುತ್ರಿ ಚಂದ್ರ ಶಾರದಾ ಇದ್ದಕ್ಕಿದ್ದಂತೆ ಬೆಂಕಿಯ ಮೇಲೆ ಹಾರಿದರು. ಸ್ಥಳದಲ್ಲಿದ್ದ ಜನರು ಆಕೆಯನ್ನು ತಕ್ಷಣವೇ ಬೆಂಕಿಯಿಂದ ಹೊರ ಹಾಕಿದರು.ಅಷ್ಟರೊಳಗೆ ಆಕೆಗೆ ಶೇ.70ರಷ್ಟು ಸುಟ್ಟಗಾಯವಾಗಿತ್ತು. ಆಕೆಯನ್ನು ನಂತರ, ಚಿಕಿತ್ಸೆಗಾಗಿ ಜೋಧಪುರದ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಪೊಲೀಸರು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದರು.
"ದಾಮೋದರ್ ಅವರಿಗೆ ಮೂವರು ಪುತ್ರಿಯರಿದ್ದರು. ಅವರ ಪತ್ನಿ ಸ್ವಲ್ಪ ಸಮಯದ ಹಿಂದೆ ನಿಧನರಾಗಿದ್ದರು. ಅವರ ಮೂವರು ಪುತ್ರಿಯರಲ್ಲಿ ಕಿರಿಯ ಮಗಳು ಅಂತ್ಯಕ್ರಿಯೆಯ ಬೆಂಕಿಯ ಮೇಲೆ ಹಾರಿದ್ದಾರೆ" ಎಂದು ಕೊಟ್ವಾಲಿ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಅಧಿಕಾರಿ ಪ್ರೇಮ್ ಪ್ರಕಾಶ್ ಹೇಳಿದ್ದಾರೆ.