varthabharthi


ರಾಷ್ಟ್ರೀಯ

ಕೊರೋನ ಸೋಂಕು; ವಿಶ್ವದ ಒಟ್ಟು ಪ್ರಕರಣದಲ್ಲಿ 46ಶೇ. ಪ್ರಕರಣ ಭಾರತದಲ್ಲಿ ದಾಖಲು: ವಿಶ್ವ ಆರೋಗ್ಯ ಸಂಸ್ಥೆ

ವಾರ್ತಾ ಭಾರತಿ : 5 May, 2021

ಜಿನೆವಾ, ಮೇ 5: ಕಳೆದ ವಾರ ವಿಶ್ವದಾದ್ಯಂತ ವರದಿಯಾಗಿರುವ ಕೊರೋನ ಸೋಂಕಿನ ಹೊಸ ಪ್ರಕರಣಗಳ 46ಶೇ. ದಷ್ಟು ಪ್ರಮಾಣ ಮತ್ತು 25ಶೇ. ದಷ್ಟು ಸಾವಿನ ಪ್ರಕರಣ ಭಾರತದಲ್ಲೇ ದಾಖಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಬುಧವಾರ ಹೇಳಿದೆ.

ಕೊರೋನ ಸೋಂಕಿನ ಹೆಚ್ಚು ಸಾಂಕ್ರಾಮಿಕವಾದ ಹೊಸ ಪ್ರಬೇಧ ಭಾರತದಲ್ಲಿ ಪತ್ತೆಯಾಗಿದ್ದು ಆಮ್ಲಜನಕ ಹಾಗೂ ಇತರ ಅಗತ್ಯದ ಔಷಧಗಳ ಕೊರತೆಯಿಂದ ಹಲವು ಸಾವು ಸಂಭವಿಸಿದೆ. ಕಳೆದ ವಾರ ವಿಶ್ವದಾದ್ಯಂತ 5.7 ಮಿಲಿಯನ್ ಹೊಸ ಪ್ರಕರಣ ವರದಿಯಾಗಿದ್ದು ಇದರಲ್ಲಿ ಸುಮಾರು 2.6 ಮಿಲಿಯನ್ ಪ್ರಕರಣ ಭಾರತದಲ್ಲಿ ದಾಖಲಾಗಿದೆ. ವಿಶ್ವದಾದ್ಯಂತ ಸಂಭವಿಸಿದ 93,000ಕ್ಕೂ ಹೆಚ್ಚು ಸಾವಿನ ಪ್ರಕರಣಗಳಲ್ಲಿ ಭಾರತದಲ್ಲಿ 23,231 ಸಾವು ಸಂಭವಿಸಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿ ಹೇಳಿದೆ.

ಇದು ಅಧಿಕೃತ ಅಂಕಿಅಂಶವಾಗಿದ್ದು ಭಾರತದ ಅನುಪಾತ ಇನ್ನಷ್ಟು ಹೆಚ್ಚಿರಬಹುದು. ಯಾಕೆಂದರೆ ಭಾರತದಲ್ಲಿ ಹಲವು ಸಾವಿನ ಮತ್ತು ಸೋಂಕಿನ ಪ್ರಕರಣ ಅಧಿಕೃತವಾಗಿ ದಾಖಲಾಗಿಲ್ಲ ಎಂದು ತಜ್ಞರು ಹೇಳಿದ್ದಾರೆ. ವಿಶ್ವದ ಜನಸಂಖ್ಯೆಯ 18ಶೇ. ಪ್ರಮಾಣ ಭಾರತದಲ್ಲಿದೆ. ಭಾರತದಲ್ಲಿ ಉಲ್ಬಣಿಸಿರುವ ಸೋಂಕಿನ ದ್ವಿತೀಯ ಅಲೆ ನೆರೆ ದೇಶಗಳಿಗೂ ಹರಡಿರುವ ಲಕ್ಷಣಗಳಿವೆ. ನೇಪಾಳದಲ್ಲಿ ಕಳೆದ ವಾರ ಹೊಸಸೋಂಕಿನ ಪ್ರಕರಣದಲ್ಲಿ 137ಶೇ. ಹೆಚ್ಚಳವಾಗಿದ್ದರೆ (31,088 ಪ್ರಕರಣ) ಶ್ರೀಲಂಕಾದಲ್ಲೂ ಸೋಂಕಿನ ಪ್ರಕರಣ ಭಾರೀ ಹೆಚ್ಚಿದೆ ಎಂದು ವಿಶ್ವಸಂಸ್ಥೆ ಹೇಳಿದೆ. ಮಂಗಳವಾರ ಭಾರತದ ಒಟ್ಟು ಸೋಂಕಿನ ಪ್ರಕರಣ 20 ಮಿಲಿಯನ್ ಗಡಿ ತಲುಪಿದ್ದು ಅಮೆರಿಕದ ಬಳಿಕ ಈ ಗಡಿ ತಲುಪಿದ ದ್ವಿತೀಯ ದೇಶವಾಗಿದೆ. ಬುಧವಾರ ಬೆಳಗ್ಗಿನವರೆಗಿನ ಕಳೆದ 24 ಗಂಟೆಯಲ್ಲಿ ಭಾರತದಲ್ಲಿ 3,82,315 ಹೊಸ ಸೋಂಕು ಪ್ರಕರಣ ಹಾಗೂ 3,780 ಸಾವು ಸಂಭವಿಸಿದೆ ಎಂದು ಆರೋಗ್ಯ ಇಲಾಖೆಯ ಅಂಕಿಅಂಶ ತಿಳಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)