ಚುನಾವಣಾ ಆಯೋಗದ ವಿಶ್ವಸನೀಯತೆ ಕಳಂಕಿತವಾಗಿದೆಯೇ?
ಈ ಹಿಂದೆ, ಕೆಲವು ಮುಖ್ಯ ಚುನಾವಣಾ ಆಯುಕ್ತರು ಸಾಂದರ್ಭಿಕವಾಗಿ ಸಚಿವರ ಅಥವಾ ಪ್ರಧಾನಿಯವರ ಒತ್ತಡಕ್ಕೆ ಮಣಿದಿದ್ದ ನಿದರ್ಶನಗಳೂ ಇವೆ. ಆದರೆ 2014ರೀಚೆಗಿನ ಮಟ್ಟದಷ್ಟು ಹಿಂದೆಂದೂ ಅವರು ಮಣಿದಿರಲಿಲ್ಲ. ಸರಕಾರದೊಂದಿಗಿನ ಚುನಾವಣಾ ಆಯೋಗದ ಶಾಮೀಲಾತಿಯು ಪಶ್ಚಿಮ ಬಂಗಾಳದ ಚುನಾವಣೆಗೆ ಮೊದಲೇ ಕಂಡುಬಂದಿತ್ತು. ದೇಶಾದ್ಯಂತ ಆಳುವ ಪಕ್ಷದ ಅಭ್ಯರ್ಥಿಗಳು ಸುಳ್ಳುವದಂತಿಗಳನ್ನು ಹರಡಲು ಹಾಗೂ ಕೋಮುವಾದದ ವಿಷವನ್ನು ಹರಡಲು ಚುನಾವಣಾ ಆಯೋಗವು ಅವಕಾಶವನ್ನು ನೀಡಿತ್ತು. ಅಷ್ಟೇ ಏಕೆ ಕೇದಾರನಾಥಕ್ಕೆ ತೀರ್ಥಯಾತ್ರೆ ಕೈಗೊಳ್ಳುವ ಸೋಗಿನಲ್ಲಿ ಪ್ರಧಾನಿಯವರು ನಿರ್ಲಜ್ಜೆಯಿಂದ ಮತಯಾಚನೆ ಮಾಡುವುದಕ್ಕೂ ಅನುಮತಿ ನೀಡಿತ್ತು. ಹಗರಣಭರಿತವಾದ ಚುನಾವಣಾ ಬಾಂಡ್‌ಗಳ ಯೋಜನೆಯು ಪಕ್ಷಪಾತಕ್ಕೆ ಇನ್ನೊಂದು ನಿದರ್ಶನವಾಗಿದೆ.
ಚು
ನಾವಣಾ ದಿನದಂದು ಟಿವಿ ವೀಕ್ಷಣೆಯು ಹಿರಿಯ ನಾಗರಿಕರಿಗೆ ಅನಪೇಕ್ಷಣೀಯ ವಾದುದಾಗಿದೆ. ಯಾಕೆಂದರೆ ಅಂದು ಟಿವಿ ವಾಹಿನಿಗಳಲ್ಲಿ ಕಿರುಚಾಟದ ಧ್ವನಿಗಳ ಕೋಲಾಹಲವೇ ನಡೆಯುತ್ತದೆ ಹಾಗೂ ಪರದೆಯುದ್ದಕ್ಕೂ ಎಲ್ಲಾ ರೀತಿಯ ಅಂಕಿಸಂಖ್ಯೆಗಳು ಹಾಗೂ ದೃಶ್ಯಾವಳಿಗಳ ಉನ್ಮಾದಭರಿತವಾಗಿ ಪ್ರದರ್ಶಿಸಲಾಗುತ್ತದೆ. ಹೀಗಾಗಿ, ಈಗ ಕೆಲವು ವರ್ಷಗಳಿಂದ ನಾನು ಮತಎಣಿಕೆ ದಿನದಂದು ಅಪ್‌ಡೇಟ್ ಆಗಿರಲು ಟ್ವಿಟರ್ ಅನ್ನು ಬಳಸಿಕೊಳ್ಳುವುದಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇನೆ. ಇದು ನೆಮ್ಮದಿಯುತವಾದುದು ಮತ್ತು ಕಣ್ಣಿಗೆ ಕಡಿಮೆ ಹಾನಿಕರವಾದುದು ಹಾಗೂ ನಮ್ಮ ನರನಾಡಿಗಳನ್ನು ಪ್ರಶಾಂತವಾಗಿಡುತ್ತದೆ.
ಮೇ 2ರಂದು ರವಿವಾರ, ನಾಲ್ಕು ಪ್ರಮುಖ ರಾಜ್ಯಗಳು ಹಾಗೂ ಪುಟ್ಟ ಕೇಂದ್ರಾಡಳಿತ ಪ್ರದೇಶದ ಮತಗಳ ಎಣಿಕೆ ನಡೆದಾಗ ಟ್ವಿಟರ್ ಮೂಲಕ ನಾನು ಸುದ್ದಿಗಳನ್ನು ಫಾಲೋ ಮಾಡತೊಡಗಿದೆ. ರವಿವಾರ ಬೆಳಗ್ಗೆ ನಾನು ವೆಬ್‌ಸೈಟ್‌ಗೆ ತೆರಳಿದಾಗ ನನ್ನ ಕಣ್ಣಿಗೆ ಬಿದ್ದ ಮೊದಲ ಟ್ವೀಟ್ ಏನೆಂದರೆ ಅಭ್ಯರ್ಥಿಗಳು ಅಥವಾ ಪಕ್ಷಗಳ ಮತಗಳು ಅಥವಾ ಮುನ್ನಡೆಯ ಕುರಿತಾಗಿಯಲ್ಲ. ಆದರೆ ಈ ಚುನಾವಣೆಗಳನ್ನು ಪಕ್ಷಭೇದರಹಿತವಾಗಿ ಹಾಗೂ ಸಾಂವಿಧಾನಿಕವಾಗಿ ಮೇಲ್ವಿಚಾರಣೆ ಮಾಡಬೇಕಾದಂತಹ ಸಂಸ್ಥೆಯ ಕುರಿತಾಗಿತ್ತು. ಇದು ದ್ವೇಷರಹಿತವಾದ ಹಾಗೂ ವಿಡಂಬನಾತ್ಮಕ ಹಾಸ್ಯದಿಂದಾಗಿ ಗಮನಸೆಳೆಯುವಂತಹ ಟ್ವೀಟ್‌ಗಳಿಂದ ಜನಪ್ರಿಯರಾಗಿರುವ ಸಿಡಿನ್ ವಡುಕುಟ್ ಅವರ ಬರಹವಾಗಿತ್ತು ‘‘ಬ್ರೇಕಿಂಗ್ ನ್ಯೂಸ್: ತನ್ನ ವಿರುದ್ಧ ಮದ್ರಾಸ್ ಹೈಕೋರ್ಟ್‌ನ ‘ಕೊಲೆ ಮೊಕದ್ದಮೆ’ ಅನಿಸಿಕೆಗಳ ವಿರುದ್ಧ ಚುನಾವಣಾ ಆಯೋಗವು ಸುಪ್ರೀಂಕೋರ್ಟ್‌ನ ಮೆಟ್ಟಲೇರಿದೆ. ಇದಕ್ಕೆ ಅವರು ತನ್ನದೇ ಆದ ಪ್ರತಿಕ್ರಿಯೆಯನ್ನು ನೀಡುತ್ತಾ 15 ವರ್ಷಕ್ಕೂ ಅಧಿಕ ಸಮಯದವರೆಗೆ 35 ಹಂತಗಳಲ್ಲಿ ಸುಪ್ರೀಂಕೋರ್ಟ್ ಈ ಪ್ರಕರಣದ ವಿಚಾರಣೆ ನಡೆಸಬೇಕು’’ ಎಂದು ವ್ಯಂಗ್ಯವಾಡಿದ್ದಾರೆ.
ಪಶ್ಚಿಮಬಂಗಾಳದಲ್ಲಿ ಒಂದು ತಿಂಗಳಿಗೂ ಅಧಿಕ ಸಮಯದವರೆಗೆ ಎಂಟು ಹಂತಗಳಲ್ಲಿ ಚುನಾವಣೆಯನ್ನು ನಡೆಸುವ ಚುನಾವಣಾ ಆಯೋಗದ ವಿಲಕ್ಷಣ ನಿರ್ಧಾರವನ್ನು ಇಲ್ಲಿ ಪ್ರಸ್ತಾವಿಸಲಾಗಿದೆ. ಪಶ್ಚಿಮಬಂಗಾಳ ವಿಧಾನಸಭಾ ಚುನಾವಣೆಯ ಮೊದಲ ಹಂತವು ಮಾರ್ಚ್ 27ರಂದು ನಡೆದಿದ್ದು, ಕೊನೆಯ ಹಂತ ಎಪ್ರಿಲ್ 29ರಂದು ನಡೆದಿತ್ತು. ತಮಿಳುನಾಡು ರಾಜ್ಯದಲ್ಲಿ ನಡೆದ ಚುನಾವಣೆಗಿಂತ ಇದು ತೀರಾ ವ್ಯತಿರಿಕ್ತವಾಗಿದೆ. ತಮಿಳುನಾಡು ವಿಧಾನಸಭೆಗೆ ಮಾರ್ಚ್ 31ರಂದು ಒಂದೇ ಹಂತದ ಮತದಾನ ನಡೆಸಲು ಚುನಾವಣಾ ಆಯೋಗ ನಿರ್ಧರಿಸಿತ್ತು.
ಪ್ರಾದೇಶಿಕ ವಿಸ್ತೀರ್ಣದಲ್ಲಿ ಪಶ್ಚಿಮ ಬಂಗಾಳವು ತಮಿಳುನಾಡಿಗಿಂತ ಚಿಕ್ಕ ರಾಜ್ಯವೆಂಬುದನ್ನು ಗೂಗಲ್ ನಮಗೆ ತಿಳಿಸುತ್ತದೆ. ತಮಿಳುನಾಡು 1,30,000 ಚ.ಕಿ.ಮೀ. ವಿಸ್ತೀರ್ಣವನ್ನು ಹೊಂದಿದ್ದರೆ, ಪಶ್ಚಿಮಬಂಗಾಳದ ವಿಸ್ತೀರ್ಣ 79 ಸಾವಿರ ಚದರ ಕಿ.ಮೀ. ಆಗಿದೆ. ಆದಾಗ್ಯೂ ಪಶ್ಚಿಮ ಬಂಗಾಳವು ಅಧಿಕ ಜನಸಂಖ್ಯೆಯನ್ನು ಹೊಂದಿರುವ ರಾಜ್ಯವಾಗಿದೆ. ಪಶ್ಚಿಮ ಬಂಗಾಳದಲ್ಲಿ ಹೆಚ್ಚುಕಮ್ಮಿ 10 ಕೋಟಿ ನಿವಾಸಿಗಳಿದ್ದರೆ, ತಮಿಳುನಾಡಿನ ಜನಸಂಖ್ಯೆ 7.90 ಕೋಟಿ ಆಗಿದೆ ಮತ್ತು ಅದು ತಮಿಳುನಾಡಿಗಿಂತ ಹೆಚ್ಚು ವಿಪ್ಲವಕಾರಿ ರಾಜಕೀಯ ಇತಿಹಾಸ ಮತ್ತು ಪ್ರತಿಸ್ಪರ್ಧಿ ಪಕ್ಷಗಳ ನಡುವೆ ಸಂಘರ್ಷ, ಹಿಂಸಾಚಾರದಿಂದ ಕೂಡಿದೆ. ಒಂದು ವೇಳೆ ಹಿಂಸಾಚಾರದ ಸಾಧ್ಯತೆಯ ಕಾರಣಕ್ಕಾಗಿ ಚುನಾವಣೆಯನ್ನು ಎರಡು ಅಥವಾ ಮೂರು ಹಂತಗಳಲ್ಲಿ ನಡೆಸುವುದೇನೋ ಸರಿ. ಆದರೆ ಎಂಟು ಹಂತಗಳಲ್ಲಿ ನಡೆಸುವುದು ತೀರಾ ಅತಿಯಾಯಿತೆನಿಸುತ್ತದೆ.
ಪಶ್ಚಿಮ ಬಂಗಾಳದ ವಿಷಯದಲ್ಲಿ ಚುನಾವಣಾ ಆಯೋಗವು ಯಾಕೆ ಮತದಾನದ ಪ್ರಕ್ರಿಯೆಯನ್ನು ಸಂಕಟಕರ ರೀತಿಯಲ್ಲಿ ವಿಸ್ತರಿಸಿತು?. ಇದಕ್ಕೆ ನಿಶ್ಚಿತವಾದ ಕಾರಣ ನಮಗೆ ಯಾವತ್ತೂ ತಿಳಿಯಲಾರದು. ಮೋದಿ ಸರಕಾರವು ಪರಿಣಾಮಕಾರಿಯಾಗಿ ಮಾಹಿತಿ ಹಕ್ಕು ಕಾಯ್ದೆಯನ್ನು ಮೂಲೆಗುಂಪು ಮಾಡಿದೆ ಮತ್ತು ವೌಖಿಕ ಸಂಭಾಷಣೆಗಳ ಮೂಲಕವಷ್ಟೇ ಪಶ್ಚಿಮ ಬಂಗಾಳದಲ್ಲಿ ಎಂಟು ಹಂತಗಳ ಚುನಾವಣೆಯನ್ನು ನಡೆಸುವ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಆದಾಗ್ಯೂ ಬಿಜೆಪಿಯ ಸ್ಟಾರ್ ಪ್ರಚಾರಕರಾದ ನರೇಂದ್ರ ಮೋದಿಯವರಿಗೆ ಆ ರಾಜ್ಯಕ್ಕೆ ಸಾವಕಾಶವಾಗಿ ಹಲವಾರು ಸಲ ಪ್ರವಾಸಗಳನ್ನು ಕೈಗೊಳ್ಳುವುದಕ್ಕೆ ಮತ್ತು ಚುನಾವಣಾ ರ್ಯಾಲಿಗಳಲ್ಲಿ ಭಾಷಣ ಮಾಡುವುದಕ್ಕೆ ಸಾಧ್ಯವಾಗುವಂತೆ ಮಾಡಲು ಚುನಾವಣಾ ಆಯೋಗವು ನಾಲ್ಕು ಹಂತಗಳ ಚುನಾವಣೆಯ ಬದಲು ಎಂಟು ಹಂತಗಳ ಚುನಾವಣೆಗೆ ಅವಕಾಶ ನೀಡಿರಬಹುದೆಂಬುದನ್ನು ನಮಗೆ ಖಚಿತವಾಗಿ ಹೇಳಲು ಸಾಧ್ಯವಿಲ್ಲ.
ಪಶ್ಚಿಮ ಬಂಗಾಳದಲ್ಲಿ ಅಧಿಕಾರಕ್ಕೇರಲು ಬಿಜೆಪಿಯು ಶತಾಯಗತಾಯ ಯತ್ನಿಸುತ್ತಿರುವುದು ಎಲ್ಲರಿಗೂ ತಿಳಿದಿದೆ. 2014ರಿಂದೀಚೆಗೆ ಅಮಿತ್ ಶಾ ಅವರು ಪಶ್ಚಿಮ ಬಂಗಾಳಕ್ಕೆ ಲೆಕ್ಕವಿಲ್ಲದಷ್ಟು ಬಾರಿ ಪ್ರಯಾಣಿಸಿದ್ದಾರೆ. ಆ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಭೇಟಿ ನೀಡಿದ್ದಾರೆ, ಒಂದರ ಬೆನ್ನ ಹಿಂದೆ ಒಂದರಂತೆ ರ್ಯಾಲಿಗಳನ್ನು ನಡೆಸಿದ್ದಾರೆ.
ತನ್ನ ಭಾಷಣಗಳಲ್ಲಿ ಅಮಿತ್ ಶಾ ಅವರು ಪಶ್ಚಿಮಬಂಗಾಳದ ‘ಭದ್ರಲೋಕ್’ ( ಸುಶಿಕ್ಷಿತ, ಆರ್ಥಿಕವಾಗಿ ಸಬಲರಾದ ಬಂಗಾಲಿಗಳು) ಮತ್ತು ‘ಛೋಟೋಲೋಕ್’ (ಬಡ ಹಾಗೂ ಅಶಿಕ್ಷಿತ ಬೆಂಗಾಲಿಗಳು)ಗಳ ಬದುಕು, ಬವಣೆಗಳಿಗೆ ಸ್ಪಂದಿಸಿದ್ದಾರೆ. ಅವರು ಟಾಗೋರ್‌ರ ಗುಣಗಾನ ಮಾಡಿದ್ದಾರೆ (ಆದರೆ ಈ ಮಹಾಕವಿಯ ಜನ್ಮಸ್ಥಳವನ್ನು ಅವರು ತಪ್ಪಾಗಿ ತಿಳಿದಿದ್ದಾರೆ) ಹಾಗೂ ಈಶ್ವರಚಂದ್ರ ವಿದ್ಯಾಸಾಗರ್‌ರನ್ನು ಪ್ರಶಂಸಿಸಿದ್ದಾರೆ (ಆದರೆ ಅವರದೇ ಆದ ಪಕ್ಷದ ಬೆಂಬಲಿಗರು ಈ ಸಮಾಜಸುಧಾರಕನ ಪ್ರತಿಮೆಯನ್ನು ಭಗ್ನಗೊಳಿಸಿದ್ದಾರೆ). ಸ್ವತಃ ಅವರು ದಲಿತನೊಬ್ಬನ ನಿವಾಸದಲ್ಲಿ ಭೋಜನ ಸೇವಿಸಿದ್ದಾರೆ ಮತ್ತು ಬುಡಕಟ್ಟು ಜನಾಂಗದ ಮಹಾನ್ ವ್ಯಕ್ತಿ ಬಿರ್ಸಾ ಮುಂಡಾನದ್ದೆಂದು ಭಾವಿಸಿ ಪ್ರತಿಮೆಯೊಂದರ ಮುಂದೆ ಶಿರಬಾಗಿದ್ದರು (ಆನಂತರ ಅದು ಇನ್ನೋರ್ವ ವ್ಯಕ್ತಿಯ ಪ್ರತಿಮೆಯೆಂದು ಗೊತ್ತಾಗಿತ್ತು).
2019ರಲ್ಲಿ ಗೃಹ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಅಮಿತ್ ಶಾ ಅವರು ತನ್ನ ಪಕ್ಷವು ಪಶ್ಚಿಮಬಂಗಾಳದಲ್ಲಿ ಗೆಲ್ಲುವಂತೆ ಮಾಡಲು ಕೇಂದ್ರ ಸರಕಾರದ ನೀತಿಗಳನ್ನು ಮನಬಂದಂತೆ ರೂಪಿಸಿದರು. ಪೌರತ್ವ ತಿದ್ದುಪಡಿ ಕಾಯ್ದೆಯ ಮೂಲಕ ಹಿಂದೆ ಪೂರ್ವ ಪಾಕಿಸ್ತಾನವಾಗಿದ್ದು, ಈಗ ಬಾಂಗ್ಲಾದೇಶದಲ್ಲಿದ್ದ ಹಿಂದೂ ನಿರಾಶ್ರಿತರಿಗೆ ಭರವಸೆಯನ್ನು ನೀಡುವ ಉದ್ದೇಶವನ್ನು ಅವರು ಹೊಂದಿದ್ದರು. ಆನಂತರ ಅವರ ಧಣಿ ನರೇಂದ್ರ ಮೋದಿಯವರು ಪಶ್ಚಿಮ ಬಂಗಾಳಕ್ಕೆ ಹಲವಾರು ಸಲ ಪ್ರವಾಸಗಳನ್ನು ಕೈಗೊಂಡರು. ಅದರೆ ಮೋದಿಯವರ ಗಣನೀಯ ಭಾಗದಷ್ಟು ಪ್ರವಾಸಗಳು ಅವರ ಪ್ರಧಾನಿ ಕರ್ತವ್ಯಕ್ಕೆ ಸಂಬಂಧಿಸದಿದ್ದವುಗಳಾಗಿದ್ದವು. ಶಾ ಅವರಂತೆ ಮೋದಿ ಕೂಡಾ ಈ ಪಕ್ಷಕ್ಕಾಗಿ ವಿಧಾನಸಭಾ ಚುನಾವಣೆಯನ್ನು ಗೆಲ್ಲುವ ಕಾತರದಲ್ಲಿದ್ದರು. ಬಾಂಗ್ಲಾದೇಶಕ್ಕೆ ತನ್ನ ಅಧಿಕೃತ ಪ್ರವಾಸದ ಸಂದರ್ಭದಲ್ಲೂ ಅವರು ಅದಕ್ಕಾಗಿ ಪ್ರಚಾರ ಮಾಡಿದರು. ಚುನಾವಣಾ ಆಯೋಗದ ಬೃಹತ್ ಬಹುಹಂತದ ಚುನಾವಣೆಯು ಬಿಜೆಪಿಯ ಇಚ್ಛೆಯಿಂದ ಪ್ರಭಾವಿತವಾದುದೇ ಎಂಬುದು ಬಿಜೆಪಿಗೆ ನಿಶ್ಚಿತವಾಗಿ ತಿಳಿದಿರಲಾರದು. ಮಾರ್ಚ್ 16ರಂದು ವಿಧಾನಸಭಾ ಚುನಾವಣೆ ಘೋಷಣೆಯಾದಾಗ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯು ‘‘ದೀರ್ಘಾವಧಿಯ ಚುನಾವಣಾ ವೇಳಾಪಟ್ಟಿಯಿಂದಾಗಿ ಆಡಳಿತಾರೂಢ ಟಿಎಂಸಿಗೆ ಹಿನ್ನಡೆಯಾಗಲಿದೆ’’ ಎಂದು ನಾಜೂಕಾಗಿ ಅಭಿಪ್ರಾಯಿಸಿತ್ತು.
‘‘ಇಂತಹ ಪಕ್ಷಪಾತದಿಂದ ಕೂಡಿದ ಚುನಾವಣಾ ಆಯೋಗವನ್ನು ನಾನು ಹಿಂದೆಂದೂ ನೋಡಿಲ್ಲ’’ ಎಂದು ಟಿಎಂಸಿಯ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಹೇಳುತ್ತಾರೆ. ಚುನಾವಣಾ ಆಯೋಗವು ಬಿಜೆಪಿಯ ವಿಸ್ತೃತ ಭಾಗವೆಂದು ಬಣ್ಣಿಸುವ ಅವರು ‘‘ಧರ್ಮದ ಬಳಕೆಯಿಂದ ಹಿಡಿದು ಚುನಾವಣಾ ದಿನಾಂಕವನ್ನು ನಿಗದಿಪಡಿಸಲು ಅಥವಾ ಕಾನೂನುಗಳನ್ನು ತಿರುಚುವ ಮೂಲಕ ಚುನಾವಣಾ ಆಯೋಗವು ಬಿಜೆಪಿಗೆ ಎಲ್ಲಾ ರೀತಿಯಲ್ಲೂ ಸಹಾಯ ಮಾಡಿದೆ’’ ಎಂದಿದ್ದರು.
ಕಿಶೋರ್ ಅವರ ಕಠಿಣೋಕ್ತಿಗಳಿಗೆ ಚುನಾವಣಾ ಆಯೋಗದ ಪ್ರತಿಕ್ರಿಯೆಯನ್ನು ಕಾಯಬೇಕಾಗಿದೆ. ಆದಾಗ್ಯೂ ಕೊರೋನ ಸೋಂಕಿನ ಹಾವಳಿಯ ಹಿನ್ನೆಲೆಯಲ್ಲಿ ಇಂತಹದ್ದೊಂದು ಸುದೀರ್ಘವಾದ ಚುನಾವಣಾ ಪ್ರಚಾರವನ್ನು ನಡೆಸುವ ಹಾಗೂ ಹಲವಾರು ಸಾಮೂಹಿಕ ರ್ಯಾಲಿಗಳನ್ನು ಆಯೋಜಿಸುವುದು ಗಂಭೀರವಾದ ಕೆಟ್ಟ ಚಿಂತನೆಯಾಗಿತ್ತು. ಕೊರೋನ ಸೋಂಕಿನ ಹಾವಳಿ ಹೆಚ್ಚುತ್ತಲೇ ಇದ್ದರೂ ಆನಂತರದ ಹಂತಗಳ ಚುನಾವಣೆಗಳನ್ನು ಒಟ್ಟಾಗಿ ನಡೆಸದೆ ಇರುವುದು ಕ್ರಿಮಿನಲ್ ನಿರ್ಲಕ್ಷವಾಗಿದೆ. ಪಶ್ಚಿಮ ಬಂಗಾಳದಲ್ಲಿ ಸಾವಿನ ಪ್ರಕರಣಗಳು ಹೆಚ್ಚುತ್ತಲೇ ಹೋದರೂ ರಾಜ್ಯದಲ್ಲಿ ಚುನಾವಣಾ ಆಯೋಗವು ವೈರಸ್‌ನ ಪ್ರಧಾನ ಸಹವರ್ತಿಯಾಗಿ ವರ್ತಿಸಿರುವುದು ಢಾಳಾಗಿ ಎದ್ದುಕಾಣುತ್ತಿತ್ತು.
ಅಂದು ರವಿವಾರ ಸಂಜೆಯಿಂದ ಚುನಾವಣಾ ಫಲಿತಾಂಶ ಬರುತ್ತಲೇ ಮಾಧ್ಯಮಗಳು ಸಂಬಂಧಪಟ್ಟ ವ್ಯಕ್ತಿಗಳು ಹಾಗೂ ರಾಜಕೀಯ ಪಕ್ಷಗಳಿಗೆ ಪಾಠ ಬೋಧಿಸಲು ಸಾಕಷ್ಟು ಸಮಯವನ್ನು ಮೀಸಲಿಟ್ಟವು. ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ನ ಗೆಲುವು ಮಮತಾ ಬ್ಯಾನರ್ಜಿಯವರ ಪ್ರಧಾನಿ ಪಟ್ಟದ ಆಕಾಂಕ್ಷೆಗೆ ತುಪ್ಪ ಸುರಿಯಲಿದೆಯೇ?. ಕೇರಳದಲ್ಲಿ ಎಡರಂಗದ ಗೆಲುವು ಉತ್ತಮ ಆಡಳಿತಕ್ಕೆ ದೊರೆತ ಪುರಸ್ಕಾರವೇ?. ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಿ, ಚುನಾವಣಾ ಪ್ರಚಾರದಲ್ಲಿ ಅಪಾರ ಹಣ ಸುರಿದರೂ ಪಶ್ಚಿಮ ಬಂಗಾಳದಲ್ಲಿ ಗೆಲ್ಲಲು ವಿಫಲವಾದ ಬಿಜೆಪಿಗೆ ಅಸ್ಸಾಮಿನಲ್ಲಿ ಅಧಿಕಾರ ಉಳಿಸಿಕೊಂಡಿರುವುದು ಸಾಂತ್ವನ ನೀಡಿದೆಯೇ?. ಅಸ್ಸಾಂ, ಕೇರಳಗಳಲ್ಲಿ ಕಾಂಗ್ರೆಸ್ ಪಕ್ಷ ಪರಾಜಯ ಮತ್ತು ಪಶ್ಚಿಮ ಬಂಗಾಳದಲ್ಲಿ ಆ ಪಕ್ಷವು ಧೂಳೀಪಟಗೊಂಡಿರುವುದು ಗಾಂಧಿ ಕುಟುಂಬವು ಕೊನೆಗಾದರೂ ಬೇರೊಬ್ಬ ಪರಿಣಾಮಕಾರಿ ನಾಯಕನಿಗೆ ಪಕ್ಷದ ಉನ್ನತ ಸ್ಥಾನವನ್ನು ಅಲಂಕರಿಸಲು ದಾರಿ ಬಿಟ್ಟುಕೊಡಲಿದೆಯೇ ಹೀಗೆ ದಿನವಿಡೀ ಮಾಧ್ಯಮಗಳಲ್ಲಿ ಬಿಡುವಿಲ್ಲದೆ ಚರ್ಚೆಗಳು ನಡೆದವು.
ಆದರೆ ಈ ಎಲ್ಲಾ ಪ್ರಶ್ನೆಗಳ ಬಗ್ಗೆ ಚರ್ಚೆಯಾಗುತ್ತಿರುವ ನಡುವೆಯೇ ಈ ಅಂಕಣದಲ್ಲಿ ನಾನು ಇನ್ನೊಂದು ಅತ್ಯಂತ ಮಹತ್ವದ ಪ್ರಶ್ನೆಯನ್ನು ಕೇಳಬಯಸುತ್ತೇನೆ. ಚುನಾವಣಾ ಆಯೋಗದ ವಿಶ್ವಾಸಾರ್ಹತೆಯು ಈಗ ಇರುವುದಕ್ಕಿಂತ ಹಿಂದೆದಾದರೂ ಕೆಳಮಟ್ಟಕ್ಕೆ ಕುಸಿದಿತ್ತೆ? ಎಂಬುದೇ ನಾನು ಕೇಳುವ ಪ್ರಶ್ನೆಯಾಗಿದೆ. ನನ್ನ ಪುಸ್ತಕವೊಂದರಲ್ಲಿ ಚರ್ಚಿಸಿರುವ ಹಾಗೆ, ಭಾರತವು ತನ್ನ ಪ್ರಪ್ರಥಮ ಚುನಾವಣಾ ಆಯುಕ್ತರಾಗಿ ಸುಕುಮಾರ್ ಸೇನ್ ಅವರನ್ನು ಹೊಂದಿದ್ದುದು, ಗಾಂಧೀಜಿ ಬಳಿಕ ದೇಶಕ್ಕೆ ದೊರೆತ ಅತಿ ದೊಡ್ಡ ಭಾಗ್ಯವಾಗಿದೆ. ದೇಶದ ಪ್ರಥಮ ಹಾಗೂ ದ್ವಿತೀಯ ಸಾರ್ವತ್ರಿಕ ಚುನಾವಣೆಗಳನ್ನು ಸಂಘಟಿಸಿದ ಸುಕುಮಾರ್ ಸೇನ್ ಅವರು ಇಡೀ ಚುನಾವಣಾ ವ್ಯವಸ್ಥೆಯನ್ನು ಸುಸಜ್ಜಿತಗೊಳಿಸಿ, ಮತದಾನವು ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಯುವಂತೆ ಮಾಡಿದರು. ಚುನಾವಣಾ ಕಣದಲ್ಲಿರುವ ಎಲ್ಲಾ ಪಕ್ಷಗಳು ಹಾಗೂ ಅಭ್ಯರ್ಥಿಗಳ ಬಗ್ಗೆ ಅವರು ನಿಷಕ್ಷಪಾತವಾಗಿ ವರ್ತಿಸಿದರು.
‘ಶಂಕರ್ಸ್ ವೀಕ್ಲಿ’ ಪತ್ರಿಕೆಯ 1957ರ ಫೆಬ್ರವರಿಯಲ್ಲಿ ಪ್ರಕಟವಾದ ಲೇಖನದಲ್ಲಿ ನಮಗೆ ಸ್ವಾತಂತ್ರ ದೊರೆತ ಮೊದಲ ದಶಕದಲ್ಲಿ ನಾವು ಏಶ್ಯಕ್ಕೆ ನೀಡಿದ ಅತ್ಯಂತ ಮೆಚ್ಚುಗೆಯ ಉಡುಗೊರೆಯೆಂದರೆ ಈ ದೇಶವನ್ನು ಪರಿಪೂರ್ಣಗೊಳಿಸಿರುವ ಚುನಾವಣೆಯಾಗಿದೆ. ಇದಕ್ಕೆ ಸುಕುಮಾರ್ ಸೇನ್ ಬಹುಮಟ್ಟಿಗೆ ಕಾರಣರಾಗಿದ್ದಾರೆ ಎಂದು ಹೇಳಿತ್ತು. ಸುಕುಮಾರ್ ಸೇನ್ ಹಾಗೂ ಇತ್ತೀಚೆಗೆ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಗಳನ್ನು ಆಯೋಜಿಸಿರುವಂತಹ ಸುನೀಲ್ ಅರೋರ ಅವರ ಮಧ್ಯದ ಅಧಿಕಾರಾವಧಿಯಲ್ಲಿ 21 ಮುಖ್ಯ ಚುನಾವಣಾ ಅಧಿಕಾರಿಗಳು ಬಂದು ಹೋಗಿದ್ದಾರೆ ಅವರಲ್ಲಿ ಕೆಲವರು ಸಮರ್ಥರಾಗಿದ್ದರು. ಇನ್ನು ಕೆಲವರು ಗುರುತಿಸಲ್ಪಡದೆ ಹೋದರು ಮತ್ತು ಇನ್ನೂ ಕೆಲವರು ಅಸಾಧಾರಣವಾದ ಸಾಮರ್ಥ್ಯವನ್ನು ಪ್ರದರ್ಶಿಸಿದರು. ತುರ್ತು ಪರಿಸ್ಥಿತಿ ಜಾರಿಯಲ್ಲಿದ್ದಾಗಲೂ 1977ರ ಲೋಕಸಭಾ ಚುನಾವಣೆಯನ್ನು ಯಶಸ್ವಿಯಾಗಿ ನಿರ್ವಹಿಸಿದ ಟಿ. ಸ್ವಾಮಿನಾಥನ್, ಭ್ರಷ್ಟಾಚಾರ ಹಾಗೂ ಮತಗಟ್ಟೆ ವಶಪಡಿಸುವಿಕೆಯಿಂದ ಬೆಂಡಾಗಿದ್ದ ಚುನಾವಣಾ ವ್ಯವಸ್ಥೆಯನ್ನು ಶುದ್ಧೀಕರಿಸಿದ್ದ ಟಿ. ಎನ್. ಶೇಷನ್ ಸ್ಮರಣೀಯರಾಗಿದ್ದಾರೆ. ತೀರಾ ಇತ್ತೀಚಿನ ವರ್ಷಗಳ ಚುನಾವಣಾ ಆಯುಕ್ತರಲ್ಲಿ ಎನ್. ಗೋಪಾಲಸ್ವಾಮಿ, ಜೆ.ಎಂ. ಲಿಂಗ್ಡೊ ಹಾಗೂ ಎಸ್.ವೈ. ಖುರೇಷಿ ಗಮನ ಸೆಳೆಯುತ್ತಾರೆ.
ಶೇಷನ್ ಅವರ ಆಗಮನದವರೆಗೂ, ಅಲ್ಲಿ ಒಬ್ಬನೇ ಒಬ್ಬ ಚುನಾವಣಾ ಆಯುಕ್ತರಿದ್ದರು. ಆದಾಗ್ಯೂ 1990ರ ದಶಕದಲ್ಲಿ ಚುನಾವಣಾ ಆಯೋಗವನ್ನು ತ್ರಿಸದಸ್ಯ ಘಟಕವಾಗಿ ರೂಪಿಸಲಾಯಿತು. ಯಾಕೆಂದರೆ ಆಗ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷವು ಶೇಷನ್ ಅವರನ್ನು ‘ಹದ್ದುಬಸ್ತಿನಲ್ಲಿಡಲು’ ಹೀಗೆ ಮಾಡಿತ್ತು. ಆದರೂ ಸಂವಿಧಾನವು ಚುನಾವಣಾ ಆಯೋಗಕ್ಕೆ ರಾಜಕೀಯ ಹಸ್ತಕ್ಷೇಪದಿಂದ ರಕ್ಷಣೆ ನೀಡಿದೆ. ಆದರೆ ಚುನಾವಣಾ ಆಯೋಗವು ತನ್ನ ಸ್ವಾಯತ್ತೆಯನ್ನು ಯಾವ ಮಟ್ಟದ ವರೆಗೆ ಕಾಪಾಡಿಕೊಳ್ಳುತ್ತದೆ ಹಾಗೂ ರಾಜಕೀಯ ಸ್ಥಾಪನೆಯಿಂದ ಎಷ್ಟರ ಮಟ್ಟಿಗೆ ಒತ್ತಡವನ್ನು ಪ್ರತಿರೋಧಿಸುತ್ತದೆ ಎಂಬುದು ಅಧಿಕಾರದಲ್ಲಿರುವ ವ್ಯಕ್ತಿಯನ್ನು ಆಧರಿಸಿದೆ.
ಸೇನ್, ಸ್ವಾಮಿನಾಥನ್, ಶೇಷನ್, ಗೋಪಾಲಸ್ವಾಮಿ, ಲಿಂಗ್ಡೊ ಹಾಗೂ ಖುರೇಷಿ ಅವರು ಚುನಾವಣಾ ಆಯೋಗವನ್ನು ಸಂಪೂರ್ಣವಾಗಿ ಸ್ವತಂತ್ರವಾಗಿರಿಸುವಲ್ಲಿ ಸಫಲರಾಗಿದ್ದರು ಹಾಗೂ ಅವರು ತಮ್ಮ ಕರ್ತವ್ಯದ ಬಗ್ಗೆ ಸಂಪೂರ್ಣ ಗಮನವನ್ನು ಕೇಂದ್ರೀಕರಿಸಿದ್ದರು. ಗಮನಾರ್ಹವೆಂದರೆ, ನಿವೃತ್ತಿಯ ಆನಂತರ ಸರಕಾರದಿಂದ ಇವರ್ಯಾರೂ ಆರಾಮದಾಯಕವಾದ ಉದ್ಯೋಗವನ್ನು ಸ್ವೀಕರಿಸಲಿಲ್ಲ. ಅವರ ಋಜುತ್ವವು, ಮುಖ್ಯ ಚುನಾವಣಾ ಆಯುಕ್ತರಾಗಿ ಸೇವೆ ಸಲ್ಲಿಸಿದ ಎಂ.ಎಸ್.ಗಿಲ್ ಅವರ ನಡವಳಿಕೆಗಿಂತ ತೀರಾ ವ್ಯತಿರಿಕ್ತವಾಗಿತ್ತು. ಗಿಲ್ ಅವರು ಮುಖ್ಯ ಚುನಾವಣಾ ಆಯುಕ್ತ ಹುದ್ದೆಯನ್ನು ತ್ಯಜಿಸಿದ ಬಳಿಕ ರಾಜ್ಯಸಭಾ ಸದಸ್ಯ ಸ್ಥಾನವನ್ನು ಸ್ವೀಕರಿಸಿದ್ದರು ಹಾಗೂ ಕಾಂಗ್ರೆಸ್ ನೇತೃತ್ವದ ಸರಕಾರದಲ್ಲಿ ಸಚಿವ ಸ್ಥಾನವನ್ನು ಕೂಡಾ ಪಡೆದುಕೊಂಡರು.
ಈ ಹಿಂದೆ, ಕೆಲವು ಮುಖ್ಯ ಚುನಾವಣಾ ಆಯುಕ್ತರು ಸಾಂದರ್ಭಿಕ ವಾಗಿ ಸಚಿವರ ಅಥವಾ ಪ್ರಧಾನಿಯವರ ಒತ್ತಡಕ್ಕೆ ಮಣಿದಿದ್ದ ನಿದರ್ಶನಗಳೂ ಇವೆ. ಆದರೆ 2014ರೀಚೆಗಿನ ಮಟ್ಟದಷ್ಟು ಹಿಂದೆಂದೂ ಅವರು ಮಣಿದಿರಲಿಲ್ಲ. ಸರಕಾರದೊಂದಿಗಿನ ಚುನಾವಣಾ ಆಯೋಗದ ಶಾಮೀಲಾತಿಯು ಪಶ್ಚಿಮ ಬಂಗಾಳದ ಚುನಾವಣೆಗೆ ಮೊದಲೇ ಕಂಡುಬಂದಿತ್ತು. ದೇಶಾದ್ಯಂತ ಆಳುವ ಪಕ್ಷದ ಅಭ್ಯರ್ಥಿಗಳು ಸುಳ್ಳು ವದಂತಿಗಳನ್ನು ಹರಡಲು ಹಾಗೂ ಕೋಮುವಾದದ ವಿಷವನ್ನು ಹರಡಲು ಚುನಾವಣಾ ಆಯೋಗವು ಅವಕಾಶವನ್ನು ನೀಡಿತ್ತು. ಅಷ್ಟೇ ಏಕೆ ಕೇದಾರನಾಥಕ್ಕೆ ತೀರ್ಥಯಾತ್ರೆ ಕೈಗೊಳ್ಳುವ ಸೋಗಿನಲ್ಲಿ ಪ್ರಧಾನಿಯವರು ನಿರ್ಲಜ್ಜೆಯಿಂದ ಮತಯಾಚನೆ ಮಾಡುವುದಕ್ಕೂ ಅನುಮತಿ ನೀಡಿತ್ತು. ಹಗರಣಭರಿತವಾದ ಚುನಾವಣಾ ಬಾಂಡ್‌ಗಳ ಯೋಜನೆಯು ಪಕ್ಷಪಾತಕ್ಕೆ ಇನ್ನೊಂದು ನಿದರ್ಶನವಾಗಿದೆ.
ಮುಂದಿನ ಸಾರ್ವತ್ರಿಕ ಚುನಾವಣೆಗೆ ಇನ್ನೂ ಮೂರು ವರ್ಷಗಳು ಉಳಿದಿವೆ. ಮಮತಾ ಬ್ಯಾನರ್ಜಿಯವರ ಮನಸ್ಸಿನಲ್ಲಿ ಏನಿದೆ, ಕಾಂಗ್ರೆಸ್ ಪಕ್ಷವು ಪುನಶ್ಚೇತನಗೊಳ್ಳಲಿದೆಯೇ ಹಾಗೂ ಪ್ರಧಾನಿ ನರೇಂದ್ರ ಮೋದಿ ಮೂರನೇ ಅವಧಿಗೆ ಗೆಲುವು ಸಾಧಿಸಲಿರುವರೇ ಎಂದೆಲ್ಲಾ ಚರ್ಚಿಸುತ್ತೇವೆ. ಆದರೆ ಪಕ್ಷಗಳು ಹಾಗೂ ರಾಜಕಾರಣಿಗಳನ್ನು ಮೀರಿದ ಸಾಂಸ್ಥಿಕ ಸಂಸ್ಥೆಗಳ ಬಗ್ಗೆ ಚರ್ಚಿಸುವುದನ್ನು ಕೂಡಾ ನಾವು ಮರೆಯಬಾರದು. ಸ್ವತಂತ್ರತೆ ಹಾಗೂ ದಕ್ಷತೆಗಾಗಿ ಒಂದು ಕಾಲದಲ್ಲಿ ತಾನು ಹೊಂದಿದ್ದ ಅತ್ಯುನ್ನತವಾದ ಪ್ರತಿಷ್ಠೆಯನ್ನು ಚುನಾವಣಾ ಆಯೋಗವು ಯಾವ ಮಟ್ಟದವರೆಗೆ ಮರುಪಡೆಯಲಿದೆ ಎಂಬುದರ ಮೇಲೆ ಭಾರತದ ಪ್ರಜಾಪ್ರಭುತ್ವದ ಭವಿಷ್ಯವು ನಿರ್ಣಾಯಕವಾಗಿ ಅವಲಂಬಿಸಿದೆ.