ಇವರಿಗೆ ಇಸ್ರೇಲ್ ಇತಿಹಾಸ ಎಳ್ಳಷ್ಟಾದರೂ ತಿಳಿದಿದೆಯೇ ?
ಇತ್ತೀಚೆಗಷ್ಟೇ ಬೆಂಗಳೂರಿನ ಬ್ರಾಹ್ಮಣ ಯುವ ನಾಯಕರೊಬ್ಬರು ಕೋವಿಡ್ ಸೇರಿದಂತೆ ಎಲ್ಲ ರಂಗಗಳಲ್ಲಿ ತನ್ನ ಪಕ್ಷ ಮತ್ತು ಸರಕಾರವು ಎದುರಿಸುತ್ತಿರುವ ದಾರುಣ ಸೋಲುಗಳ ಸರಮಾಲೆಯನ್ನು ಮರೆಮಾಚಲಿಕ್ಕಾಗಿ ಒಂದು ಕಳಪೆ ಕೋತಿಯಾಟ ಆಡಲು ಹೋಗಿ ತನ್ನ ಡೈಪರ್ ಸುಟ್ಟುಕೊಂಡು ಸಾರ್ವಜನಿಕರ ಅನುಕಂಪಕ್ಕೆ ಪಾತ್ರರಾಗಿದ್ದರು. ಅದೇ ಅಪ್ರಬುದ್ಧ ಬಾಲನಾಯಕ ಒಂದು ಅವಿವೇಕಿ ಟ್ವೀಟ್ ಮಾಡಿ ಇದೀಗ ಡೈಪರ್ನಿಂದ ಮುಖ ಮುಚ್ಚಿಕೊಂಡು ಅಡಗಿ ಕೂರುವ ಫಜೀತಿಗೆ ಸಿಕ್ಕಿಕೊಂಡಿದ್ದಾರೆ. ಮೊನ್ನೆ ಸೋಮವಾರ ‘ನಾವು ನಿಮ್ಮ ಜೊತೆಗಿದ್ದೇವೆ. ಇಸ್ರೇಲ್, ನೀವು ಗಟ್ಟಿಯಾಗಿರಿ’ ಎಂದು ಟ್ವೀಟ್ ಮಾಡಿ ಇಸ್ರೇಲ್ಗೆ ಶುಭ ಹಾರೈಸಿರುವ ಈ ಪೆದ್ದು ಮಗುವಿನ ಕೃತ್ಯ ಹಲವು ಸ್ವಾರಸ್ಯಕರ ಪ್ರಶ್ನೆಗಳಿಗೆ ಜನ್ಮ ನೀಡಿದೆ.
ಇಂದು ಇಸ್ರೇಲ್ನೊಡನೆ, ‘ನಾವು ನಿಮ್ಮಜೊತೆಗಿದ್ದೇವೆ’ ಎಂದು ಹೇಳುತ್ತಿರುವ ಈ ಬಡಗೂಸಿಗೆ ಇಸ್ರೇಲ್ನ ಇತಿಹಾಸವಾಗಲಿ ಸ್ವತಃ ತನ್ನ ಜನಾಂಗವಾದಿ ಪರಿವಾರದ ಇತಿಹಾಸವಾಗಲಿ ಎಳ್ಳಷ್ಟಾದರೂ ತಿಳಿದಿದ್ದರೆ ಆತ ಖಂಡಿತ ಹೀಗೆ ಹೇಳುತ್ತಿರಲಿಲ್ಲ. ಈ ಮೂಲಕ ತಾನು ಜಗತ್ತಿನ ಮುಂದೆ ಮಾತ್ರವಲ್ಲ, ಇತಿಹಾಸದ ಪ್ರಜ್ಞೆ ಇರುವ ಸ್ವತಃ ಇಸ್ರೇಲಿನ ಯಹೂದಿಗಳ ಮುಂದೆ ನಗೆಪಾಟಲಿಗೆ ಈಡಾಗುತ್ತಿದ್ದೇನೆಂಬುದು ಆತನಿಗೆ ಮೊದಲೇ ತಿಳಿದಿರುತ್ತಿತ್ತು. ಆದರೆ ಅಪ್ಪಟ ಅಜ್ಞಾನಕ್ಕೇನು ಮಾಡೋಣ? ಸದ್ಯ ಇಸ್ರೇಲ್ನ ಭೀಕರ ವಿಮಾನದಾಳಿಗೆ ತುತ್ತಾಗಿ ಸಾಯುತ್ತಿರುವವರು ಅಲ್ಲಿನ ಮೂಲ ನಿವಾಸಿಗಳಾದ ಅರಬ್ ಮುಸ್ಲಿಮರು ಎಂಬ ಒಂದು ತುಂಡು ಮಾಹಿತಿ ಮಾತ್ರ ಆತನಿಗೆ ಸಿಕ್ಕಿರಬೇಕು. ಅಷ್ಟಕ್ಕೇ ಆತ ಮದೋನ್ಮತ್ತನಾಗಿ, ಸಾಯುತ್ತಿರುವವರು ಮುಸ್ಲಿಮರಾಗಿದ್ದರೆ, ಕೊಲ್ಲುತ್ತಿರುವವರು ಯಾರೋ ನಮ್ಮವರೇ ಆಗಿರಬೇಕು ಎಂದು ತರ್ಕಿಸಿ ರಂಗಕ್ಕಿಳಿದಿದ್ದಾರೆ. ಮೊನ್ನೆ ಬಿಬಿಎಂಪಿಯಲ್ಲೂ ಆತ ಮಾಡಿದ್ದು ಇಷ್ಟನ್ನೇ ತಾನೇ? ಕೈಗೆ ಸಿಕ್ಕ ತೀರಾ ಆಂಶಿಕ ಹಾಗೂ ಅಸಂಗತ ಮಾಹಿತಿಯ ತುಣುಕೊಂದನ್ನು ಹೆಕ್ಕಿಕೊಂಡು ಸಂಚುಗಳ ಕಾಮಿಕ್ ಕಥೆಕಟ್ಟಿ, ಮುಂದೆ ಕ್ಷಮೆಕೇಳಲಿಕ್ಕೂ ಮುಖತೋರಿಸಲಾಗದೆ ಭೂಗತನಾದದ್ದಲ್ಲವೇ? ಕಳೆದ ಶತಮಾನದಲ್ಲಿ ಯುರೋಪಿನಲ್ಲಿ ಯಹೂದಿಗಳ ಸಾಮೂಹಿಕ ಹತ್ಯಾಕಾಂಡ ನಡೆಯಿತು. ಅದಕ್ಕೆ ಪ್ರಾಯಶ್ಚಿತವಾಗಿ ಮತ್ತು ತಮ್ಮ ನಾಡುಗಳಿಂದ ಯಹೂದಿಗಳನ್ನು ಸಾಗಹಾಕಲಿಕ್ಕಾಗಿ, ಯೂರೋಪ್ ಮತ್ತು ಇತರ ಪಶ್ಚಿಮದ ದೇಶಗಳು, ಯಹೂದಿಗಳಿಗೆ ಮರು ವಸತಿ ಕಲ್ಪಿಸಿಕೊಡುವ ಹೆಸರಲ್ಲಿ ಏಶ್ಯದಲ್ಲಿನ ಕೆಲವು ಅರಬ್ ನಾಡುಗಳನ್ನು ಅಕ್ರಮವಾಗಿ ವಶಪಡಿಸಿಕೊಂಡು ಬಲವಂತವಾಗಿ ಸ್ಥಾಪಿಸಿದ ದೇಶ ಇಸ್ರೇಲ್. ಇಂದು ಆ ಇಸ್ರೇಲ್ನೊಡನೆ, ‘ನಾವು ನಿಮ್ಮ ಜೊತೆಗಿದ್ದೇವೆ’ ಎಂದು ಹೇಳುತ್ತಿರುವ ಈ ಬಡಗೂಸಿಗೆ ಅದು ತಿಳಿದಿದೆಯೇ? ಯಹೂದಿಗಳಿಗೆ ಸಹಾಯ ಸಹಾನುಭೂತಿಗಳ ಅತ್ಯಧಿಕ ಅಗತ್ಯವಿದ್ದ ದಿನಗಳಲ್ಲಿ ಈ ಯುವನಾಯಕನ ಪರಿವಾರವು ಯಹೂದಿಗಳ ಹಂತಕರ ಜೊತೆ ನಿಂತಿತ್ತು. ಯುರೋಪಿನಲ್ಲಿ ಲಕ್ಷಗಟ್ಟಲೆ ಯಹೂದಿಗಳ ಹತ್ಯೆ ನಡೆಯುತ್ತಿದ್ದಾಗ ಸಂಘ ಪರಿವಾರದ ನಾಯಕರು ಯಹೂದಿಗಳ ಹಂತಕರಾಗಿದ್ದ ಮುಸ್ಸೋಲಿನಿ ಮತ್ತಾತನ ಫ್ಯಾಶಿಸಮ್ ಅನ್ನು ಹಾಗೂ ಹಿಟ್ಲರ್ ಮತ್ತಾತನ ನಾಝಿಝಮ್ ಅನ್ನು ಮನಸಾರೆ ಹೊಗಳಿ, ವೈಭವೀಕರಿಸಿ ಅವರೇ ನಮ್ಮ ಪಾಲಿಗೆ ಮಾದರಿ ಎಂದು ಘೋಷಿಸಿ ಬಿಟ್ಟಿದ್ದರು. ಪ್ರಸ್ತುತ ಹೀನ ಪರಂಪರೆಯ ಯಾವ ಅರಿವೂ ಈ ಬಾಲ ಸಂಸದನಿಗೆ ಇದ್ದಂತಿಲ್ಲ. ಇತಿಹಾಸವನ್ನು ಬದಿಗಿಟ್ಟು ಕೇವಲ ವರ್ತಮಾನವನ್ನೇ ಗಣನೆಗೆ ತೆಗೆದು ನೋಡಿದರೆ ಅಲ್ಲೂ ಪ್ರಸ್ತುತ ಶಿಶುನಾಯಕನ ಅಜ್ಞಾನ ಕೇಕೆ ಹಾಕಿ ಕುಣಿಯುತ್ತಿರುವುದು ಕಾಣಿಸುತ್ತದೆ. ಕೆಲವು ವಾರಗಳ ಹಿಂದಷ್ಟೇ ಜಿನೇವಾದಲ್ಲಿ ನಡೆದ (ಮಾರ್ಚ್ 24ರಂದು ಸಮಾರೋಪಗೊಂಡ) ವಿಶ್ವಸಂಸ್ಥೆಯ ಮಾನವ ಹಕ್ಕು ಪರಿಷತ್ತಿನ (UNHRC ) 46ನೇ ಅಧಿವೇಶನದಲ್ಲಿ ಇಸ್ರೇಲ್ ಸರಕಾರದ ವಿರುದ್ಧ ಕೆಲವು ಕಠಿಣ ಠರಾವುಗಳನ್ನು ಬಹುಮತದಿಂದ ಮಂಜೂರು ಮಾಡಲಾಗಿತ್ತು. ಆಕ್ರಮಿತ ಫೆಲೆಸ್ತೀನ್ ಮತ್ತು ಪೂರ್ವ ಜೆರುಸಲೇಮ್ನಲ್ಲಿ ಇಸ್ರೇಲ್ ಸರಕಾರ ನಡೆಸುತ್ತಿರುವ ಹಲವು ಅಕ್ರಮ ಚಟುವಟಿಕೆಗಳು, ಮಾನವ ಹಕ್ಕುಗಳ ವ್ಯಾಪಕ ಉಲ್ಲಂಘನೆ ಮತ್ತು ವಿಶ್ವಸಂಸ್ಥೆಯ ಈ ಹಿಂದಿನ ಗೊತ್ತುವಳಿಗಳ ಉಲ್ಲಂಘನೆಯನ್ನು ಪ್ರಸ್ತುತ ಠರಾವುಗಳಲ್ಲಿ ಅತ್ಯುಗ್ರ ಶಬ್ದಗಳಲ್ಲಿ ಖಂಡಿಸಲಾಗಿತ್ತು. ಇಸ್ರೇಲ್ ಸರಕಾರವನ್ನು ಕೆಂಡಾಮಂಡಲವಾಗಿಸಿದ ಪ್ರಸ್ತುತ ಠರಾವುಗಳ ಪರವಾಗಿ ಮತಚಲಾಯಿಸಿದ ಪ್ರಮುಖ ದೇಶಗಳ ಸಾಲಲ್ಲಿ ಭಾರತವೂ ಸೇರಿತ್ತು. ಯಾವ ಧೋರಣೆಗಳಿಗಾಗಿ ಸ್ವತಃ ತನ್ನದೇ ಸರಕಾರವು ಇಸ್ರೇಲ್ ಸರಕಾರವನ್ನು ಒಂದು ಜಾಗತಿಕ ವೇದಿಕೆಯಲ್ಲಿ ಖಂಡಿಸಿತ್ತೋ, ಅದೇ ಇಸ್ರೇಲ್ ಸರಕಾರಕ್ಕೆ ಬೆಂಬಲ ಸೂಚಿಸಿದ ಈ ಬೇಬಿ ರಾಯರಿಗೆ ಸ್ವತಃ ತನ್ನದೇ ಸರಕಾರದ ಧೋರಣೆಗಳ ಅರಿವು ಇಲ್ಲವಾಗಿ ಬಿಟ್ಟಿತೇ?