ಭೂಗ್ರಹದಿಂದ ಕೀಟಗಳು ಮರೆಯಾದರೆ....
ಬೆಳಗ್ಗೆ ಪತ್ರಿಕೆಯ ಪುಟಗಳನ್ನು ತಿರುವುತ್ತಾ ಕುಳಿತಿದ್ದ ರೈತ ಮಂಜಪ್ಪನ ಕಣ್ಣುಗಳು ‘‘ಮಿಡತೆಗಳ ಹಾವಳಿಯಿಂದ ಬೆಳೆ ನಾಶ’’ ಎಂಬ ಸುದ್ದಿಯಲ್ಲಿ ಕೇಂದ್ರೀಕೃತವಾದವು. ಆ ಸುದ್ದಿ ಓದುತ್ತಾ ಓದುತ್ತಾ ‘‘ಇದೇನು ಬಂತಪ್ಪಾ ದೇವರೇ, ಇಷ್ಟೊಂದು ಮಿಡತೆಗಳು ಒಮ್ಮೆಲೇ ದಾಳಿ ಮಾಡಿದರೆ ಬೆಳೆಗಳನ್ನು ಹೇಗೆ ಕಾಪಾಡಿಕೊಳ್ಳೋದು’’ ಎಂದು ತನಗರಿವಿಲ್ಲದಂತೆ ಉದ್ಗರಿಸಿದ. ಪಕ್ಕದಲ್ಲೇ ಕುಳಿತಿದ್ದ ವಾಗೀಶ ‘‘ಏನಪ್ಪಾಅದು! ಮಿಡತೆ ಕಾಟ ಅಂತ ಏನೋ ಗೊಣಗ್ತಾ ಇದ್ದೀಯಲ್ಲಾ, ಏನಾಯಿತು’’ ಎಂದ. ‘‘ಮಿಡತೆಗಳು ನಮ್ಮ ರಾಜ್ಯಕ್ಕೂ ಕಾಲಿಟ್ಟಿವೆಯಂತೆ. ಹಿಂಗಾದ್ರೆ ನಮ್ಮ ಬೆಳೆಗಳೆಲ್ಲಾ ನಾಶವಾಗಿ ಹೋದಾವು. ಏನು ಮಾಡೋದು ಅಂತಾನೆ ತೋಚ್ತಾ ಇಲ್ಲ’’ ಅಂದ ಮಂಜಪ್ಪ. ‘‘ಅದಕ್ಯಾಕೆ ಯೋಚ್ನೆ ಮಾಡ್ತಿ ಬಿಡಪ್ಪಾ. ಈಗ ಹೆಂಗ ಬಂದಾವ ಹಂಗ ಹೋಗುತ್ತವೆ. ಅವುಗಳಿಗೆ ಎಲ್ಲೂ ಆಹಾರ ಇಲ್ಲದಂಗಾಗೈತಿ. ಅದಕ್ಕೆ ಇತ್ತ ಬಂದಿವೆ’’ ಎಂದು ತನ್ನದೇ ಆದ ಕಾಲೇಜು ಕಲಿಕಾ ಶೈಲಿಯಲ್ಲಿ ಹೇಳಿದ. ‘‘ಅಯ್ಯೋ ಇವ್ನ! ಮಿಡತೆ ದಾಳಿ ಮಾಡಿದ ಮೇಲೆ ಏನಾರ ಬೆಳೆ ಉಳಿದಾವ? ಹೊಲಕ್ಕ ಹಾಕಿದ ಬಂಡವಾಳ ಎಲ್ಲಾ ನಷ್ಟವಾಗಿ ಸಾಲದಲ್ಲೇ ಸಾಯಬೇಕಾಗುತ್ತೆ. ಹಾಳಾದ ಕೀಟಗಳು ನಾಶವಾಗಿ ಹೋಗಬಾರದಾ? ಭೂಮಿ ಯಿಂದ ಮರೆಯಾಗ ಬಾರದಾ?’’ ಎಂದು ಗೊಣಗುಟ್ಟುತ್ತಾ ಹಸುವಿಗೆ ಹುಲ್ಲು ಹಾಕಲು ನಡೆದರು.
‘‘ಅಪ್ಪಾ, ಕೀಟಗಳಿಂದನೂ ನಮಗೆ ಉಪಯೋಗ ಇದೆ. ಅವು ಇಲ್ಲದಾದರೆ ನಮ್ಮ ಬದುಕು ದುಸ್ತರವಾಗುತ್ತಪ್ಪಾ’’ ಎಂದ ವಾಗೀಶ. ‘‘ಅದ್ಕೆ ಹೇಳೋದು, ಓದಿದೋರಿಗೆ ಸ್ವಲ್ಪನೂ ಬುದ್ಧಿ ಇಲ್ಲಾಂತ. ಕೀಟಗಳಿಂದ ಉಪಯೋಗವಿದೆಯಂತೆ. ನೀನು ಅದೇನು ಓದ್ತಿಯೋ, ಕೃಷಿ ಬೆಳೆಗಳ ಬಗ್ಗೆ ಅದೇನು ಕಂಡುಹಿಡಿತಿಯೋ... ನಾ ಕಾಣೆ. ಇಂತಹ ರೋಗದ ಕೀಟಗಳನ್ನಾದ್ರೂ ಓಡ್ಸೋದರ ಬಗ್ಗೆ ಏನಾರ ಮಾಡ್ರಪ್ಪಾ. ಬೆಳೆಗಳಿಗೆ ಔಷಧಿ ಹೊಡ್ದು ಹೊಡ್ದು ಸಾಕಾಗಿ ಹೋಗೈತಿ’’ ಎಂದರು ತಂದೆ. ‘‘ಬೆಳೆಗಳಿಗೆ ಬರುವ ರೋಗಗಳಿಗೆ ಔಷಧ ಕಂಡುಹಿಡಿಯೋದು ಬಿಡುವುದು ಎರಡನೇ ಮಾತು. ಕೀಟಗಳಂತೂ ನಮ್ಮ ಬದುಕಿಗೆ ಮುಖ್ಯ. ಅವು ಇಲ್ಲದೆ ಭೂಮಿಯ ಮೇಲಿನ ಜೀವಿಗಳ ಬದುಕು ತುಂಬಾ ಕಷ್ಟವಾಗುತ್ತೆ’’ಎಂದು ವಾಗೀಶ ಹೇಳತೊಡಗಿದ. ‘‘ಅದ್ಹೇಗೆ ಕೀಟಗಳು ನಮಗೆ ಸಹಾಯಕ ಅಂತ ಹೇಳಪ್ಪ. ನೋಡೋಣ’’ ಎಂದು ಪಕ್ಕದಲ್ಲೇ ಕುಳಿತರು ಮಂಜಪ್ಪ. ಆಗ ತಾನೆ ಬಿ.ಎಸ್ಸಿ. ಅಗ್ರಿಗೆ ಸೇರಿದ್ದ ವಾಗೀಶ ತನ್ನ ಜ್ಞಾನದ ಇತಿಮಿತಿಯಲ್ಲಿ ಕೀಟಗಳು ಇಲ್ಲವಾದ್ರೆ ಏನಾಗುತ್ತೆ ಎಂಬುದನ್ನು ಹೇಳತೊಡಗಿದ.
ಕೆಲವು ಕೀಟಗಳು ಮಾನವರಾದ ನಮಗೂ ರೋಗಗಳನ್ನು ತರುತ್ತವೆ ನಿಜ. ಹಾಗಂತ ಎಲ್ಲಾ ಕೀಟಗಳು ತೊಂದರೆ ನೀಡುವುದಿಲ್ಲ. ಬದಲಿಗೆ ನಮ್ಮ ಬದುಕಿಗೆ ಆಸರೆಯಾಗಿವೆ. ಶೇಕಡಾ 90ರಷ್ಟು ಕೀಟಗಳು ಹಾನಿಯನ್ನುಂಟು ಮಾಡುವುದಿಲ್ಲ. ಅಲ್ಲದೆ ಆಹಾರ ಸರಪಳಿಯಲ್ಲಿ ಕೀಟಗಳು ಮೂಲ ಅಂಶಗಳಾಗಿದ್ದು ಮಹತ್ವ ಪಡೆದಿವೆ. ಒಂದು ವೇಳೆ ಕೀಟಗಳು ಮರೆಯಾದರೆ ಆಹಾರದ ಸರಪಳಿ ಕಳಚುತ್ತದೆ ಮತ್ತು ಬಹುತೇಕ ಪರಾವಲಂಬಿಗಳು ಸಾಯುತ್ತವೆ. ಭೂಮಿಯ ಮೇಲಿನ ಶೇ. 80ರಷ್ಟು ಸಸ್ಯಗಳು ಹೂಬಿಡುವ ಸಸ್ಯಗಳಾಗಿವೆ. ಅವು ಸಂತಾನೋತ್ಪತ್ತಿ ಮಾಡಲು ಪರಾಗಸ್ಪರ್ಶದ ಅಗತ್ಯವಿದೆ. ಪುರುಷ ಪರಾಗದಿಂದ ಹೆಣ್ಣು ಶಲಾಕಾಗ್ರಕ್ಕೆ ವರ್ಗಾಯಿಸಲು ಕೀಟಗಳು ಬೇಕೇ ಬೇಕು. ಗಾಳಿ, ಪಕ್ಷಿಗಳು, ಬಾವಲಿಗಳು ಪರಾಗಸ್ಪರ್ಶ ಮಾಡುತ್ತವೆಯೆಂದು ನೀವು ವಾದಿಸಬಹುದು. ಆದರೆ ದೊಡ್ಡ ಪ್ರಮಾಣದಲ್ಲಿ ಪರಾಗಸ್ಪರ್ಶ ನಡೆಯುವುದು ಕೀಟಗಳಿಂದ. ಜೇನುನೊಣ, ಪತಂಗಗಳು, ಚಿಟ್ಟೆಗಳು, ನೊಣಗಳು ಸಸ್ಯದಿಂದ ಸಸ್ಯಕ್ಕೆ ಹಾರುತ್ತ ಪರಾಗಸ್ಪರ್ಶ ಕ್ರಿಯೆಯನ್ನು ಮಾಡುತ್ತವೆ. ಪರಾಗಸ್ಪರ್ಶವಾಗದ ಹೊರತು ಬೀಜಗಳ ಉತ್ಪತ್ತಿ ಸಾಧ್ಯವೇ?
ನಮ್ಮ ಆಹಾರದಲ್ಲಿ ಬಹುತೇಕ ಸಸ್ಯಗಳು ಪ್ರಮುಖ ಸ್ಥಾನ ಪಡೆದಿವೆ. ನಾವು ಸೇವಿಸುವ ಶೇ. 70-90ರಷ್ಟು ಸಸ್ಯಾಹಾರಗಳೆಲ್ಲವೂ ಹೂಬಿಡುವ ಸಸ್ಯಗಳಾಗಿವೆ. ಪ್ರತಿ ಹಣ್ಣು, ತರಕಾರಿ, ಅಕ್ಕಿ, ಗೋಧಿ, ಜೋಳ, ರಾಗಿ ಮುಂತಾದ ಧಾನ್ಯಗಳೆಲ್ಲವೂ ಪರಾಗಸ್ಪರ್ಶದ ಪರಿಣಾಮವಾಗಿ ರೂಪುಗೊಂಡಿವೆ. ಸಸ್ಯಗಳ ಫಲೀಕರಣದಲ್ಲಿ ಕೀಟಗಳ ಪಾತ್ರ ಅಗಾಧವಾದುದು.
ಇರುವೆಗಳು ಮತ್ತು ಗೆದ್ದಲುಗಳು ಸಹ ಕೀಟಗಳಾಗಿದ್ದು ಮಣ್ಣಿನ ಫಲವತ್ತತೆ ಅಭಿವೃದ್ಧಿಯಲ್ಲಿ ಹೆಚ್ಚು ಸಹಕಾರಿಯಾಗಿವೆ. ಇವುಗಳು ಇಲ್ಲವಾದರೆ ಮಣ್ಣಿನ ಫಲವತ್ತತೆಯ ಪುನರ್ ರಚನೆ ನಿಂತುಹೋಗುತ್ತದೆ. ಕೀಟಗಳು ಇಲ್ಲವಾದರೆ ಅವುಗಳನ್ನೇ ಪ್ರಧಾನ ಆಹಾರವಾಗಿ ಆಶ್ರಯಿಸಿದ ಅನೇಕ ಜೀವಿಗಳು ಸಾಯುತ್ತವೆ. ಉದಾ ಹಲ್ಲಿ, ಕಪ್ಪೆ, ಊಸರವಳ್ಳಿ, ಓತಿಕ್ಯಾತ ಮುಂತಾದ ಜೀವಿಗಳು ಸಾಯುತ್ತವೆ. ಇದರಿಂದ ಜೈವಿಕ ಪರಸರದಲ್ಲಿ ಏರುಪೇರುಗಳಾಗುತ್ತವೆ. ಈಗಾಗಲೇ ಅಮೆರಿಕದ ಉಷ್ಣವಲಯದ ಕಾಡಿನಲ್ಲಿ ಕೀಟಗಳು ಕಡಿಮೆಯಾದ್ದರಿಂದ ಅವುಗಳನ್ನು ತಿಂದು ಬದುಕುತ್ತಿದ್ದ ಕಪ್ಪೆ, ಹಲ್ಲಿ ಮತ್ತು ಕೆಲವು ಜಾತಿಯ ಪಕ್ಷಿಗಳು ಆಹಾರವಿಲ್ಲದೆ ಅವುಗಳ ಸಂಖ್ಯೆಯಲ್ಲಿ ಕುಸಿತವುಂಟಾಗಿದೆ. ಗೆದ್ದಲುಗಳು ವಸ್ತುಗಳು ಕೊಳೆಯುವಂತೆ ಮಾಡಲು ಹೆಚ್ಚು ಸಹಕಾರಿಯಾಗಿವೆ.
ಇರುವೆಗಳಿಲ್ಲದ ಜೀವನವನ್ನು ಊಹಿಸಿಕೊಳ್ಳುವುದು ನಿಜಕ್ಕೂ ಕಷ್ಟಕರ. ಏಕೆಂದರೆ ಇರುವೆಗಳು ಬೀಜಗಳ ಪ್ರಸರಣ ಮತ್ತು ಜೀವವೈವಿಧ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ವಿಭಿನ್ನ ಗುಣಲಕ್ಷಣ ಹೊಂದಿದ 14,000ಕ್ಕೂ ಹೆಚ್ಚು ಜಾತಿಯ ಇರುವೆಗಳಿದ್ದು, ಅವುಗಳಲ್ಲಿ ಕೆಲವು ಇರುವೆಗಳು ಸಸ್ಯಗಳಿಂದ ನೆಲಕ್ಕೆ ಬೀಳುವ ಬೀಜಗಳನ್ನು ಚದುರಿಸುತ್ತವೆ. ಕೆಲವು ಇರುವೆಗಳು ಪರಾಗಸ್ಪರ್ಶದಲ್ಲೂ ಭಾಗಿಯಾಗುತ್ತವೆ. ಕೆಲವು ಇರುವೆಗಳು ಕೊಳೆಯುವ ವಸ್ತುಗಳನ್ನು ತಿಂದು ಸಾವಯವ ತ್ಯಾಜ್ಯವನ್ನು ಸ್ವಚ್ಛಗೊಳಿಸುತ್ತವೆ. ಇಂತಹ ಪರೋಪಕಾರಿ ಇರುವೆಗಳು ಮರೆಯಾದರೆ ಮೇಲಿನ ಬಹುತೇಕ ಕಾರ್ಯಗಳು ಸ್ಥಗಿತಗೊಳ್ಳುತ್ತವೆ. ಜಿರಲೆಯೂ ಸಹ ಕೀಟಗಳ ಜಾತಿಗೆ ಸೇರಿದ್ದು, ಬಹುತೇಕರಿಗೆ ಇದನ್ನು ಕಂಡರೆ ಒಂದು ರೀತಿಯ ಭಯ ಮತ್ತು ಅಸಹ್ಯ ಆವರಿಸುತ್ತದೆ. ಜಿರಲೆಯ ವಾಸನೆ ಮತ್ತು ಮಲ ರೇಜಿಗೆ ಎನಿಸುತ್ತದೆ. ಜಿರಲೆಯ 3,500 ಜಾತಿಗಳಲ್ಲಿ ಕೇವಲ 20 ಜಾತಿಯ ಜಿರಲೆಗಳು ಮಾತ್ರ ಮಾನವರಿಗೆ ಕಿರಿಕಿರಿ ಎನಿಸಿವೆ. ಆದರೆ ಉಳಿದ ಬಹುತೇಕ ಜಿರಲೆಗಳು ತುಂಬಾ ಪ್ರಮುಖವಾದ ಕೀಟಗಳು ಎನಿಸಿವೆ. ಬಹುತೇಕ ಜಿರಲೆಗಳು ಸಣ್ಣ ಸಸ್ತನಿಗಳು, ಪಕ್ಷಿಗಳು ಮತ್ತು ಸರೀಸೃಪಗಳಿಗೆ ಆಹಾರವಾಗಿವೆ. ಅಲ್ಲದೆ ಕೃಷಿ ಜಮೀನು ಮತ್ತು ಇನ್ನಿತರ ಕಡೆಗಳಲ್ಲಿ ಸಾವಯವ ವಸ್ತುಗಳು ಕೊಳೆಯಲು ಸಹಾಯ ಮಾಡುತ್ತವೆ. ಜಿರಲೆಗಳು ವಿಸರ್ಜಿಸುವ ಸಾರಜನಕ ಅಂಶವು ಬೆಳೆಗಳಿಗೆ ಸಹಕಾರಿ. ಮನೆಗಳಲ್ಲಿರುವ ನೊಣಗಳು ಕೆಲವು ವೇಳೆ ಆರೋಗ್ಯಕ್ಕೆ ಮಾರಕ. ರೋಗ ಹರಡುವಿಕೆಯಲ್ಲಿ ಅವುಗಳು ಸಹ ಪಾತ್ರವಹಿಸಿವೆ. ಆದಾಗ್ಯೂ ನೊಣಗಳು ಇರಬೇಕು. ಪ್ರಾಣಿಗಳ ಶವ ಬೇಗನೇ ಕೊಳೆಯುವಂತೆ ಮಾಡುವಲ್ಲಿ ನೊಣಗಳ ಪಾತ್ರ ಮಹತ್ವದ್ದು. ನೊಣಗಳು ಇಲ್ಲದೆಯೂ ಬ್ಯಾಕ್ಟಿರಿಯಾ ಮತ್ತು ಶಿಲಿಂಧ್ರಗಳಿಂದ ಶಗಳು ಕೊಳೆಯುತ್ತವೆ. ಆದರೆ ಆ ಪ್ರಕ್ರಿಯೆಗೆ ತುಂಬಾ ಸಮಯ ಬೇಕಾಗುತ್ತದೆ. ನೊಣಗಳು ಶವಗಳನ್ನು ಬೇಗನೆ ತಿಂದು ಮುಗಿಸಿ ವಾತಾವರಣವನ್ನು ಸ್ವಚ್ಛವಾಗಿಡಲು ಸಹಾಯ ಮಾಡುತ್ತವೆ. ಕೆಲವು ನೊಣಗಳು ಪರಾಗಸ್ಪರ್ಶ ಕಾರ್ಯದಲ್ಲಿ ನೆರವಾಗುತ್ತವೆ. ಕೋಕೋದಂತಹ ಉಷ್ಣವಲಯದ ಬೆಳೆಗಳಿಗೆ ನೊಣ ಪ್ರಮುಖ ಪರಾಗಸ್ಪರ್ಶಕಾರಕವಾಗಿದೆ. ನೊಣಗಳು ಇಲ್ಲದಿದ್ದರೆ ಕೋಕೋ ಹಣ್ಣು ದೊರೆಯಲಾರದು. ಕೋಕೋ ಹಣ್ಣು ಇಲ್ಲದೆ ಚಾಕೋಲೇಟ್ ಕೂಡಾ ಇಲ್ಲ ಅಲ್ಲವೇ?
ವಿಶ್ವದ ಅತ್ಯಂತ ವೈವಿಧ್ಯಮಯ ಕೀಟಗಳಲ್ಲಿ ಜೀರುಂಡೆಯೂ ಒಂದು. ಭೂಗ್ರಹದಲ್ಲಿ ಒಟ್ಟು 3,75,000 ಜಾತಿಯ ಜೀರುಂಡೆಗಳಿವೆ. ಕೆಲವು ಜೀರುಂಡೆಗಳು ಬೆಳೆ ನಷ್ಟ ಮತ್ತು ಮರಗಳ ನಾಶಕ್ಕೆ ಕಾರಣವಾಗಿವೆ. ಆದರೆ ಬಹುತೇಕ ಪ್ರಬೇದಗಳು ಸಕಾರಾತ್ಮಕ ಪರಿಣಾಮ ಬೀರುತ್ತವೆ. ಕೆಲವು ಜೀರುಂಡೆಗಳು ಬೆಳೆಗಳಿಗೆ ಲೇಡಿಬಗ್ ಮತ್ತು ಇನ್ನಿತರ ನುಸಿಗಳನ್ನು ತಿನ್ನುವ ಮೂಲಕ ಬೆಳೆಗಳ ಸಂರಕ್ಷಕವಾಗಿವೆ. ಕಾಂಪೋಸ್ಟ್ ಗೊಬ್ಬರದ ಮರುಬಳಕೆಯಲ್ಲಿ ಅವುಗಳ ಪಾತ್ರ ಮಹತ್ವವಾದದ್ದು. ಜೀರುಂಡೆಗಳು ಮಣ್ಣಿನ ಫಲವತ್ತತೆ ಹೆಚ್ಚಿಸಲು ಸಹಕಾರಿಯಾಗಿವೆ. ಇಂತಹ ಕೀಟಗಳು ಇಲ್ಲದೇ ಕೃತಕವಾಗಿ ಮಣ್ಣಿನ ಫಲವತ್ತತೆ ಸೃಷ್ಟಿಸಲು ಸಾಧ್ಯವೇ? ನೀರವ ರಾತ್ರಿಯಲ್ಲಿ ಕೀರ್ ಕೀರ್ ಎಂದು ಗುಯ್ಯಂಗುಡುವ ಕೀಟಗಳ ಶಬ್ದ ಕಿವಿಗೆ ಬೀಳುವುದು ಸಹಜ. ಬಹುತೇಕ ಮನೆಯ ಮೂಲೆಯಲ್ಲಿ ಅಡಗಿ ಕುಳಿತ ಈ ಕೀಟಗಳು ರಾತ್ರಿಯ ನೀರವತೆಗೆ ಶಬ್ದದ ರೂಪು ನೀಡುತ್ತವೆ. ಗ್ರಿಲ್ಲಿಡೆ ಕುಟುಂಬಕ್ಕೆ ಸೇರಿದ ಕ್ರಿಕೆಟ್‌ಗಳು ಇಂತಹ ಶಬ್ದವುಂಟು ಮಾಡುತ್ತವೆ. ನೋಡಲು ತದ್ರೂಪು ಮಿಡತೆಯಂತಿರುವ ಕ್ರಿಕೆಟ್‌ಗಳು ಭೂಮಿಯ ಆರೋಗ್ಯ ಕಾಪಾಡುವಲ್ಲಿ ತಮ್ಮದೇ ಆದ ಸ್ಥಾನ ಹೊಂದಿವೆ. ಜೊತೆಗೆ ಬಹುತೇಕ ಜೀವಿಗಳಿಗೆ ಆಹಾರವಾಗುವ ಮೂಲಕ ಜೀವವೈವಿಧ್ಯದಲ್ಲಿ ತನ್ನದೇ ಆದ ಸ್ಥಾನ ಪಡೆದಿವೆ.
ಕೀಟಗಳು ಇಲ್ಲದೇ ಹೋದರೆ ಬಹುತೇಕ ಸಾವಯವ ವಸ್ತುಗಳು ಕೊಳೆಯದೇ ಬಹುಕಾಲದವರೆಗೂ ಹಾಗೆಯೇ ಉಳಿಯುತ್ತವೆ. ಕೀಟಗಳು ಬ್ಯಾಕ್ಟೀರಿಯಾ ಮತ್ತು ಶಿಲೀಂದ್ರಗಳ ಜೊತೆಗೆ ಎಲೆಗಳ ಕಸದಿಂದ ಪ್ರಾಣಿಗಳ ಶವದವರೆಗೆ ಸಾವಯವ ವಸ್ತುಗಳ ಪ್ರಮುಖ ವಿಭಜಕಗಳಾಗಿ ಕಾರ್ಯನಿರ್ವಹಿಸುತ್ತವೆ. ಕೀಟಗಳು ಇಲ್ಲದಿದ್ದರೆ ಈ ಜಗತ್ತು ಸತ್ತ ಜೀವಿಗಳಿಂದ ತುಂಬಿರುತ್ತಿತ್ತು. ಕೀಟಗಳು ಇರದೇ ಇದ್ದರೆ ಜೇನುತುಪ್ಪದ ಮಧುರವನ್ನಾಗಲಿ, ರೇಷ್ಮೆಗೆ ಕಾವ್ಯಾತ್ಮಕ ಸ್ಪರ್ಶವನ್ನು ನೀಡಲು ಆಗುತ್ತಿರಲಿಲ್ಲ. ಏಕೆಂದರೆ ಇವೆರಡೂ ಕೀಟಗಳ ಉತ್ಪನ್ನಗಳಾಗಿವೆ. ‘ಅರ್ಥ್ ವಾಚ್’ ಎಂಬ ಪರಿಸರ ದತ್ತಿ ಸಂಸ್ಥೆಯು ಜೇನುನೊಣವನ್ನು ಗ್ರಹದ ಪ್ರಮುಖ ಜೀವಿ ಎಂದು ಘೋಷಿಸಿದೆ. ಜೇನುನೊಣ ಕೇವಲ ಜೇನು ಉತ್ಪತ್ತಿ ಮಾತ್ರವಲ್ಲದೇ ಪರಾಸ್ಪರ್ಶದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಜೇನುನೊಣಗಳು ವಿಶ್ವದ ಕೃಷಿ ಬೆಳೆಯ ಶೇ. 30ರಷ್ಟು ಉತ್ಪತ್ತಿಗೆ ಹಾಗೂ ಹೂಬಿಡುವ ಸಸ್ಯಗಳ ಶೇ. 90ರಷ್ಟು ಅಭಿವೃದ್ಧಿಗೆ ಕಾರಣವಾಗಿವೆ. ಹವಾಮಾನ ಬದಲಾವಣೆ ಮತ್ತು ಕೃಷಿಯಲ್ಲಿ ರಸಾಯನಿಕಗಳ ಬಳಕೆಯಿಂದ ಶೇ. 30ರಷ್ಟು ಜೇನುನೊಣಗಳು ಕಣ್ಮರೆಯಾಗಿವೆ. ಇದೇ ಸ್ಥಿತಿ ಮುಂದುವರಿದರೆ ಬಹುತೇಕ ಕೃಷಿ ಬೆಳೆಗಳೂ ಸಹ ಕಣ್ಮರೆಯಾಗುತ್ತವೆ. ಜೀವ ಸಾಮ್ರಾಜ್ಯದಲ್ಲಿ ಕೀಟಗಳು ಮಹತ್ವದ ಸ್ಥಾನ ಪಡೆದಿವೆ. ಈಗಿನ ಸಮೀಕ್ಷೆಯ ಪ್ರಕಾರ ಕೀಟಗಳು ಅಪಾಯಕಾರಿ ಪ್ರಮಾಣದಲ್ಲಿ ಕುಸಿಯುತ್ತಿವೆ. ಅಂದಾಜಿನಂತೆ ಶೇ. 40ರಷ್ಟು ಕೀಟ ಪ್ರಭೇದಗಳು ಅಳಿದುಹೋಗಿವೆ. ಕೃಷಿಯ ತೀವ್ರ ಕುಸಿತ ಹಾಗೂ ಕೃಷಿಯಲ್ಲಿ ಕೀಟನಾಶಕಗಳ ಬಳಕೆಯಿಂದ ಕೀಟಗಳು ಅಪಾಯದಲ್ಲಿವೆ. ಕೀಟಗಳು ಇಲ್ಲದೆ ನಮ್ಮ ಬದುಕು ತುಂಬಾ ಸಂಕಷ್ಟಕ್ಕೀಡಾಗುವುದರಲ್ಲಿ ಯಾವ ಸಂದೇಹವೂ ಇಲ್ಲ. ಈಗ ಹೇಳಿ ಕೀಟಗಳು ನಿಜಕ್ಕೂ ಭೂಮಿಯಿಂದ ಮರೆಯಾಗಬೇಕಾ?