varthabharthi


ವಿಶೇಷ-ವರದಿಗಳು

ಆರೆಸ್ಸೆಸ್ ನೆಟ್ವರ್ಕ್‌ ನಿಂದ ನಿರಂತರವಾಗಿ ಸುಳ್ಳುಗಳ ಸೃಷ್ಟಿ ನಮ್ಮ ಮಿದುಳುಗಳಿಗೆ ಹೇಗೆ ಹಾನಿಯನ್ನುಂಟು ಮಾಡಿದೆ?

ವಾರ್ತಾ ಭಾರತಿ : 16 May, 2021
ಅಲಿಶಾನ್ ಜಾಫ್ರಿ, (ಫ್ರೀಲಾನ್ಸ್ ಪತ್ರಕರ್ತ) ಮತ್ತು ಅಪೂರ್ವಾನಂದ (ಪ್ರಾಧ್ಯಾಪಕರು, ದಿಲ್ಲಿ ವಿವಿ) - Thewire.in

ಒಳ್ಳೆಯ ವಿಜ್ಞಾನ, ಸತ್ಯದ ಸ್ವೀಕೃತಿ ಮತ್ತು ಏಕತೆ ಇವು ಮಾತ್ರ ಕೋವಿಡ್-19 ಸಾಂಕ್ರಾಮಿಕವು ಸೃಷ್ಟಿಸಿರುವ ಬಿಕ್ಕಟ್ಟಿನಿಂದ ನಮ್ಮನ್ನು ಪಾರು ಮಾಡಬಲ್ಲವು; ಇದು ವಿಪ್ರೋದ ಸ್ಥಾಪಕ ಅಝೀಂ ಪ್ರೇಮ್‌ ಜಿ ಅವರು ಆರೆಸ್ಸೆಸ್ ಮೇ 12ರಂದು ಆನ್ಲೈನ್ನಲ್ಲಿ ಆಯೋಜಿಸಿದ್ದ ‘ಪಾಸಿಟಿವಿಟಿ ಕಾನ್ಫರೆನ್ಸ್ ’ನ ವೇದಿಕೆಯಿಂದ ಸಭಿಕರಿಗೆ ಹೇಳಿದ್ದ ಕಿವಿಮಾತು.

ಸಾಮಾನ್ಯ ಸಂದರ್ಭಗಳಲ್ಲಾದರೆ ಇದನ್ನೊಂದು ಕಂತೆ ಪುರಾಣ ಎಂದು ನಾವು ಕಡೆಗಣಿಸಬಹುದಿತ್ತು. ಆದರೆ ಈಗ ಈ ಶಬ್ದಗಳು ಗಹನವಾದ ಅರ್ಥವನ್ನು ಪಡೆದುಕೊಂಡಿವೆ. ಸತ್ಯದ ಸ್ವೀಕೃತಿ ಮತ್ತು ಸತ್ಯಕ್ಕಾಗಿ ಅನ್ವೇಷಣೆಯ ಹೊರತು ವಿಜ್ಞಾನವು ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ. ಈ ಸಂಕಷ್ಟದ ಘಳಿಗೆಯಲ್ಲಿ ನಮಗೆ ವಿಜ್ಞಾನದ ಅಗತ್ಯವಿದೆ. ನಮ್ಮನ್ನು ರಕ್ಷಿಸುವುದು ಒಳ್ಳೆಯ ವಿಜ್ಞಾನ ಮಾತ್ರವಲ್ಲ,ಜೀವನ ಮತ್ತು ವಿಶ್ವದ ಕುರಿತು ವೈಜ್ಞಾನಿಕ ನಿಲುವು ಕೂಡ ಅಗತ್ಯವಾಗಿದೆ. ವೈಜ್ಞಾನಿಕ ಮನೋಭಾವವು ಆರೋಗ್ಯದ ವಿಷಯಗಳಲ್ಲಿ ಮಾತ್ರವಲ್ಲ, ನಮ್ಮ ಸಾಮಾಜಿಕ ವ್ಯವಹಾರಗಳಲ್ಲಿಯೂ ನಮಗೆ ನೆರವಾಗುತ್ತದೆ. 

ಉದಾಹರಣೆಗೆ ವೈಜ್ಞಾನಿಕ ಮನೋಭಾವವು ಜನಾಂಗೀಯ ಅಥವಾ ಧಾರ್ಮಿಕ,ಅಷ್ಟೇ ಏಕೆ...ರಾಷ್ಟ್ರೀಯ ಪರಮೋಚ್ಚತೆಯ ಸಿದ್ಧಾಂತಗಳಿಂದಲೂ ನಮ್ಮನ್ನು ದೂರವಿರಿಸುತ್ತದೆ. ವೈಜ್ಞಾನಿಕ ಮನೋಭಾವ ಮತ್ತು ನಮ್ಮ ದೇಶವು ವಿಶಿಷ್ಟವಾಗಿದೆ ಹಾಗೂ ವಿಶ್ವಕ್ಕೆ ಕೊಡುಗೆ ನೀಡುವಷ್ಟು ಉನ್ನತ ದೇಶವಾಗಿದೆ ಎಂದು ಕಲ್ಪಿಸುವುದಕ್ಕಿಂತ ದೊಡ್ಡ ಮೂರ್ಖತನ ಇನ್ನೊಂದಿಲ್ಲ ಎಂಬ ಜವಾಹರಲಾಲ್ ನೆಹರು ಅವರ ಸ್ಪಷ್ಟ ಅಭಿಪ್ರಾಯದಿಂದಾಗಿ ಯುವಕ ಭಗತ್ ಸಿಂಗ್ ಅವರು ನೆಹರುರನ್ನು ಭಾರತದ ಯುವಜನರ ನಾಯಕ ಎಂದು ಪರಿಗಣಿಸಿದ್ದರು.

ಸ್ಪಷ್ಟವಾಗಿ ಹೇಳುವುದಾದರೆ,ತಾನು ಬುದ್ಧಿವಂತ ಸಭಿಕರನ್ನುದ್ದೇಶಿಸಿ ಮಾತನಾಡುತ್ತಿದ್ದೇನೆ ಮತ್ತು ತನ್ನ ಚುಟುಕಾದ ಸಂದೇಶವನ್ನು ಅವರೇ ಹಿಗ್ಗಿಸಿಕೊಳ್ಳುತ್ತಾರೆ ಮತ್ತು ಅರ್ಥೈಸಿಕೊಳ್ಳುತ್ತಾರೆ ಎಂದು ಪ್ರೇಮ್‌ ಜಿ ಭಾವಿಸಿದ್ದರು ಮತ್ತು ಅದು ಹೀಗೆಯೇ ಇರಬೇಕಿತ್ತು. ನೀವು ಯಾರೊಂದಿಗೂ ಅವಹೇಳನಕಾರಿಯಾಗಿ ಮಾತನಾಡಬಾರದು ಅಥವಾ ಇನ್ನೊಬ್ಬರಿಗೆ ಅವಕಾಶ ನೀಡದೆ ನೀವೇ ಮಾತನಾಡುತ್ತಿರಬಾರದು. ನೀವು ಜನರೊಂದಿಗೆ ಮಾತನಾಡುವಾಗ ಅವರಿಗೆ ಗೌರವವನ್ನು ನೀಡಬೇಕು. ಕನಿಷ್ಠ,ಗೌರವಯುತ ವ್ಯಕ್ತಿಗಳು ಈ ಕೆಲಸವನ್ನು ಮಾಡುತ್ತಾರೆ.

ಸತ್ಯ ಮತ್ತು ವಿಜ್ಞಾನದ ನಡುವಿನ ಸಂಬಂಧವನ್ನು ಯಾರೂ ಅರ್ಥ ಮಾಡಿಕೊಳ್ಳಬಹುದು. ಆದರೆ ಸತ್ಯ ಮತ್ತು ಏಕತೆಯ ನಡುವಿನ ಸಂಬಂಧವೇನು? ಪ್ರೇಮ್‌ ಜಿ ಅವರು ಒಳ್ಳೆಯ ವಿಜ್ಞಾನ,ಸತ್ಯ ಮತ್ತು ಏಕತೆಯ ಬಗ್ಗೆ ಒಂದೇ ಉಸುರಿನಲ್ಲಿ ಮಾತನಾಡಿದ್ದರು. ಆದರೆ ಅವರು ಸಾಮಾನ್ಯ ಶಬ್ದಗಳಲ್ಲಿ ಮಾತನಾಡಿದ್ದರು.
ನಮಗೆ ನಿರಾಕರಿಸಲಾಗುತ್ತಿರುವ ಸತ್ಯದ ಕುರಿತು ನಿರ್ದಿಷ್ಟತೆಗಳನ್ನು ಸಮ್ಮೇಲನದ ಸಂಘಟಕರೊಂದಿಗೆ ಮತ್ತು ಸಭಿಕರೊಂದಿಗೆ ಹಂಚಿಕೊಳ್ಳುವ ಅಪಾಯವನ್ನು ಪ್ರೇಮಜಿ ಮೈಮೇಲೆಳೆದುಕೊಳ್ಳುವಂತಿರಲಿಲ್ಲ ಎನ್ನುವುದನ್ನು ಯಾರೂ ಅರ್ಥ ಮಾಡಿಕೊಳ್ಳಬಹುದು. ಅದು ಭಿನ್ನಾಭಿಪ್ರಾಯಕ್ಕೆ ಕಾರಣವಾಗುತ್ತಿತ್ತು. ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಬೇಕಿತ್ತು ಎಂದು ನಮಗನ್ನಿಸಬಹುದು. ಆದರೆ ಅವರು ಆ ಸ್ಥಿತಿಯಲ್ಲಿರಲಿಲ್ಲ.

ಒಂದು ಮಾನಸಿಕ ರೋಗ
 
 ಸತ್ಯವನ್ನು ಗ್ರಹಿಸುವುದನ್ನು ತಡೆಯುತ್ತಿರುವುದು ನಮ್ಮ ಗ್ರಹಣ ಶಕ್ತಿಯ ಮಿತಿಗಳಲ್ಲ. ನಿರಂತರವಾಗಿ ಸುಳ್ಳುಗಳನ್ನು ಸೃಷ್ಟಿಸುವ ಮೂಲಕ ,ನಮ್ಮ ಮೇಲೆ ಸುಳ್ಳುಗಳ ವ್ಯಾಪಕ ದಾಳಿಯನ್ನು ನಡೆಸುವ ಮೂಲಕ ನಮ್ಮ ಅರಿವಿನ ಶಕ್ತಿಗೆ ಹಾನಿಯನ್ನುಂಟು ಮಾಡಲಾಗುತ್ತಿದೆ. ಇದು ನಮ್ಮ ಜ್ಞಾನಗ್ರಹಣ ವ್ಯವಸ್ಥೆಯನ್ನು ನುಚ್ಚುನೂರಾಗಿಸುತ್ತದೆ ಮತ್ತು ತನ್ಮೂಲಕ ನಮ್ಮ ಪರಿಣಾಮಕಾರಿ ಸಾಮರ್ಥ್ಯಗಳನ್ನು ಕುಂದಿಸುತ್ತದೆ. ಸತ್ಯವನ್ನು ಗ್ರಹಿಸುವ ಅಸಾಮರ್ಥ್ಯವು ಬೇರೆಯೇ ವಿಷಯವಾಗಿದೆ ಮತ್ತು ಅದನ್ನು ಗೆಲ್ಲಬಹುದು ಎಂದು ಪ್ರೇಮ್‌ ಜಿ ತನ್ನ ಸಭಿಕರಿಗೆ ಹೇಳಬಹುದಿತ್ತು. ಆದರೆ ನೀವು ಉದ್ದೇಶಪೂರ್ವಕವಾಗಿ ಮತ್ತು ಗೊತ್ತಿದ್ದೂ ಸುಳ್ಳುಗಳನ್ನು ಸೃಷ್ಟಿಸುವಾಗ ನಿಮಗೆ ಸತ್ಯದಲ್ಲೆ ಆಸಕ್ತಿ ಇಲ್ಲವೇ ಇಲ್ಲ ಎನ್ನುವುದನ್ನು ನೀವು ಸ್ಪಷ್ಟಪಡಿಸುತ್ತೀರಿ. 

ನೀವು ಸಮಾಜದ ಮೇಲೆ ಮಾನಸಿಕ ರೋಗವೊಂದನ್ನು ಹೇರುತ್ತಿದ್ದೀರಿ. ಪ್ರೇಮ್‌ ಜಿ ಅವರು ವಿಷಯವನ್ನು ಇನ್ನಷ್ಟು ಕೆದಕಬೇಕಿತ್ತೆಂಬ ನಿರೀಕ್ಷೆಯು ಖ್ಯಾತ ವಿಜ್ಞಾನಿ ಐನ್‌ ಸ್ಟೀನ್‌  ಅವರು ಹಿಟ್ಲರ್ನಿಗೆ ಆತ ಯಹೂದಿಗಳ ಕುರಿತು ಹರಡುತ್ತಿದ್ದ ಸುಳ್ಳುಗಳು ಜರ್ಮನಿಯ ಏಕತೆಗೆ ಅಪಾಯಕಾರಿಯಾಗಿವೆ ಎಂದು ಹೇಳಬೇಕಿತ್ತು ಎಂಬ ನಿರೀಕ್ಷೆಯಂತಿದೆ. ಹಾಗೇನಾದರೂ ಹೇಳುತ್ತಿದ್ದರೆ ಐನ್ ಸ್ಟೈನ್ ಗತಿ ಏನಾಗುತ್ತಿತ್ತು ಎನ್ನುವುದು ನಮಗೆ ಗೊತ್ತು. ಹೀಗಾಗಿ ಆರೆಸ್ಸೆಸ್ ನ ವೇದಿಕೆಯಿಂದ ಪ್ರೇಮ್‌ ಜಿ ಆ ಕೆಲಸವನ್ನು ಮಾಡಬೇಕಿತ್ತು ಎಂದು ನಾವು ನಿರೀಕ್ಷಿಸುವುದು ಬೇಡ.

ಆದರೆ ಪ್ರೇಮ್‌ ಜಿ ತಮ್ಮ ಮಾತುಗಳನ್ನು ಎಲ್ಲಿಗೆ ನಿಲ್ಲಿಸಿದ್ದರೋ ಅಲ್ಲಿಂದ ಮುಂದೆ ಮಾತನಾಡುವ ಸ್ವಾತಂತ್ರ್ಯ ನಮಗಿದೆ. ಉದಾಹರಣೆಗೆ ಪ್ರೇಮ್‌ ಜಿ ಸುಳ್ಳುಗಳು ಏನು ಮಾಡುತ್ತವೆ ಎನ್ನುವುದರ ನಿದರ್ಶನಗಳನ್ನು ಹಂಚಿಕೊಳ್ಳಬಹುದಿತ್ತು. ಭವಿಷ್ಯದ ನಗರವಾಗಲು ಹಂಬಲಿಸಿದ್ದ ತನ್ನ ನಗರ (ಬೆಂಗಳೂರು)ದಿಂದ ಅವರು ಆರಂಭಿಸಬಹುದಿತ್ತು. ಸುಳ್ಳುಗಳು ಈ ಹಂಬಲಕ್ಕೆ ಏನನ್ನು ಮಾಡುತ್ತಿವೆ, ಸುಳ್ಳುಗಳು ಅದನ್ನು ಹೇಗೆ ತಡೆಯುತ್ತಿವೆ, ಅದು ಒಂದಾಗಿ ಬಲಿಷ್ಠವಾಗಿರಬೇಕಾದ ಸಮಯದಲ್ಲಿ ಈ ಸುಳ್ಳುಗಳು ಅದನ್ನು ಹೇಗೆ ಟೊಳ್ಳಾಗಿಸುತ್ತಿವೆ ಎನ್ನುವುದನ್ನು ಅವರು ಎತ್ತಿ ತೋರಿಸಬಹುದಿತ್ತು.

ಬೆಂಗಳೂರಿನ ಸಂಸದರೂ ಆಗಿರುವ ಬಿಜೆಪಿ ಯುವಮೋರ್ಚಾದ ಅಧ್ಯಕ್ಷರು ಇತ್ತೀಚಿಗೆ ಮಾಡಿದ್ದ ಸುಳ್ಳಿನ ಆವಿಷ್ಕಾರವು ಪ್ರೇಮ್‌ ಜಿಯವರ ನಿದರ್ಶನಗಳಲ್ಲಿ ಒಂದಾಗಬಹುದಿತ್ತು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ದಕ್ಷಿಣ ವಲಯ ಕೋವಿಡ್ ವಾರ್ ರೂಮ್ ಗೆ ನುಗ್ಗಿದ್ದ ಸಂಸದ ತೇಜಸ್ವಿ ಸೂರ್ಯ ಅಲ್ಲಿ ಕೆಲಸ ಮಾಡುತ್ತಿದ್ದ ಮುಸ್ಲಿಂ ಉದ್ಯೋಗಿಗಳ ಹೆಸರುಗಳನ್ನು ಓದಿ ಹೇಳಿದ್ದರು. ಏನಿದು ಇಷ್ಟೊಂದು ಮುಸ್ಲಿಮರಿದ್ದಾರೆ? ಇದೇನು ಮದರಸವೇ ಎಂದು ಅವರು ಪ್ರಶ್ನಿಸಿದ್ದರು. ಇದು ಯಾವುದೇ ವಿಚಾರಣೆಯೂ ಇಲ್ಲದೆ 17 ಉದ್ಯೋಗಿಗಳ ಅಮಾನತಿಗೆ ಕಾರಣವಾಗಿತ್ತು. ಇಷ್ಟು ಮಾತ್ರವಲ್ಲ,ಅವರನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಅವರ ವಿಚಾರಣೆಯನ್ನೂ ಆರಂಭಿಸಲಾಗಿತ್ತು.


 
ಇದು ಸರ್ವತ್ರ ಆಕ್ರೋಶಕ್ಕೆ ಕಾರಣವಾದಾಗ ವಾರ್ ರೂಮ್ಗೆ ಸಂಸದರ ಪ್ರವೇಶಕ್ಕೆ ಕುತಂತ್ರದಿಂದ ಜಾತ್ಯತೀತ ಕಾರಣವನ್ನು ಸೃಷ್ಟಿಸಲಾಗಿತ್ತು. ಉದ್ಯೋಗಿಗಳ ನೇಮಕಾತಿಗಳನ್ನು ಸಂಸದರು ಪ್ರಶ್ನಿಸಲು ಅವರ ಧರ್ಮ ಕಾರಣವಾಗಿರಲಿಲ್ಲ, ಆಸ್ಪತ್ರೆಗಳಲ್ಲಿ ಬೆಡ್ ಬ್ಲಾಕಿಂಗ್ ದಂಧೆಯ ಆರೋಪವು ಕಾರಣವಾಗಿತ್ತು ಎಂಬ ಹೇಳಿಕೆಯು ಹೊರಬಿದ್ದಿತ್ತು. ತಾನು ಸುಳ್ಳು ಹೇಳುತ್ತಿದ್ದೇನೆ ಮತ್ತು ಅದಕ್ಕೆ ಸಮಜಾಯಿಷಿ ನೀಡುತ್ತಿದ್ದೇನೆ ಎನ್ನುವುದು ತೇಜಸ್ವಿಗೆ ಮತ್ತು ಅವರ ಜೊತೆಯಲ್ಲಿದ್ದವರಿಗೆ ಗೊತ್ತಿತ್ತು.

ತೇಜಸ್ವಿಯ ಸುಳ್ಳುಗಳು, ಸುಳ್ಳುಗಳ ಅವರ ಇತಿಹಾಸ ಬೆಂಗಳೂರಿನಲ್ಲಿ ಮಾತ್ರವಲ್ಲ, ರಾಜ್ಯದಲ್ಲಿ ಮತ್ತು ದೇಶದಲ್ಲಿಯೂ ಮುಸ್ಲಿಮರ ವಿರುದ್ಧ ಶಂಕೆ ಮತ್ತು ದ್ವೇಷದ ವಾತಾವರಣ ಸೃಷ್ಟಿಯಾಗಲು ಕಾರಣವಾಗಿವೆ. ಇದು ಪರಿಣಾಮಗಳನ್ನೂ ಹೊಂದಿದೆ. ತ್ವರಿತ ವಿಚಾರಣೆಯು ತೇಜಸ್ವಿಯ ಗುರಿಯಾಗಿದ್ದ 17 ಜನರಿಗೆ ಕ್ಲೀನ್ ಚಿಟ್ ನೀಡಿದೆ ನಿಜ,ಆದರೆ ಈ ಘಟನೆಯು ಅವರಲ್ಲಿ ಕಳಂಕದ ಕಲೆಯನ್ನುಳಿಸಿದೆ. ಅವರು ಅವಮಾನವನ್ನು ಅನುಭವಿಸುತ್ತಿದ್ದಾರೆ. ಅವರ ಪೈಕಿ ಐವರು ಉದ್ಯೋಗಕ್ಕೆ ಮರಳಲು ನಿರಾಕರಿಸಿದ್ದಾರೆ. ಇತರರಿಗೆ ಅಗತ್ಯವಾದಾಗೆಲ್ಲ ಪೊಲೀಸರೆದುರು ಹಾಜರಾಗುವಂತೆ ಸೂಚಿಸಲಾಗಿದೆ.

ಈ ಸುಳ್ಳು ತಮ್ಮ ನಗರದ ಜನರಿಗಾಗಿ ಹಗಲುರಾತ್ರಿ ದುಡಿಯುವ ಜನರ ಏಕತೆಗೆ ಹಾನಿಯನ್ನುಂಟು ಮಾಡಿದೆ ಎನ್ನುವುದನ್ನು ನಿರಾಕರಿಸಲಾಗದು. ಈ ಸುಳ್ಳು ಹೆಚ್ಚಿನ ಏಕತೆಗೂ, ಅದು ಇದ್ದಿದ್ದರೆ....ಹಾನಿಯನ್ನುಂಟು ಮಾಡಿದೆ.

ಸತ್ಯತೆ ಮತ್ತು ನಂಬಿಕೆ

ತೇಜಸ್ವಿ ಸೂರ್ಯ ಭಾರತವನ್ನು ಮತ್ತು ವಿಶ್ವಾದ್ಯಂತದ ಭಾರತೀಯ ಸಮುದಾಯವನ್ನು ಆವರಿಸಿರುವ ಸುಳ್ಳುಗಳ ವ್ಯವಸ್ಥೆಯ ಒಂದು ಉತ್ಪನ್ನವಾಗಿದ್ದಾರಷ್ಟೇ. ಆರೆಸ್ಸೆಸ್ ನೆಟ್ವರ್ಕ್ ಈ ಸುಳ್ಳುಗಳ ವ್ಯವಸ್ಥೆಯನ್ನು ಸೃಷ್ಟಿಸುತ್ತಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಏನು ಮಾಡಲಾಗುತ್ತಿದೆ ಎನ್ನುವುದನ್ನು ನೋಡೋಣ.

ವಿಧಾನಸಭಾ ಚುನಾವಣಾ ಫಲಿತಾಂಶಗಳು ಪ್ರಕಟಗೊಂಡ ಮತ್ತು ಬಿಜೆಪಿಗೆ ಕೇವಲ 75 ಸ್ಥಾನಗಳು ಲಭಿಸಿದ ಬಳಿಕ ಪ.ಬಂಗಾಳದಲ್ಲಿಯ ಅರ್ಥಹೀನ ರಾಜಕೀಯ ಹಿಂಸಾಚಾರಗಳಲ್ಲಿ 15ಕ್ಕೂ ಹೆಚ್ಚು ಜನರು ಕೊಲ್ಲಲ್ಪಟ್ಟಿದ್ದಾರೆ. ಈ ರಾಜಕೀಯ ಹಿಂಸಾಚಾರವು ಹಿಂದುಗಳು ಮತ್ತು ಮುಸ್ಲಿಮರ ನಡುವಿನ ಘರ್ಷಣೆಗಳಾಗಿದ್ದವು ಎನ್ನುವುದನ್ನು ಸಾಬೀತುಗೊಳಿಸುವ ಯಾವುದೇ ಪುರಾವೆಗಳಿಲ್ಲ. ಆದರ ಹಿಂಸಾಚಾರವು ಕೋಮು ಸ್ವರೂಪದ್ದಾಗಿತ್ತು ಎಂದು ಪ್ರತಿಪಾದಿಸುವುದನ್ನು ಬಿಜೆಪಿಯು ಮುಂದುವರಿಸಿದೆ.

ನಾವೇನನ್ನು ಸುಳ್ಳು ಎಂದು ಹೇಳುತ್ತಿದ್ದೇವೆಯೋ ಅದನ್ನು ತಮ್ಮ ನಂಬಿಕೆಯೆಂದು ಆರೆಸ್ಸೆಸ್ ಮತ್ತು ಬಿಜೆಪಿ ಮಂಡಿಸುತ್ತಿವೆ. ಅದು ಅವರ ನಂಬಿಕೆಯಾಗಿರುವುದರಿಂದ ಅದಕ್ಕೆ ಪುರಾವೆಯ ಅಗತ್ಯವಿಲ್ಲ. ನೀವು ಸುಳ್ಳನ್ನು ಬಯಲಿಗೆಳೆದರೆ ನೀವು ಅವರ ನಂಬಿಕೆಯನ್ನು ಅವಮಾನಿಸುತ್ತಿದ್ದೀರಿ ಎಂದು ಅರ್ಥ. ಆದರೆ ಈ ‘ನಂಬಿಕೆಗಳು ’ ಇತರರ ಜೀವಗಳನ್ನು ಅಪಾಯಕ್ಕೊಡ್ಡಬಲ್ಲವು. ಈ ಸಲ ಮುಸ್ಲಿಂ ವಿರೋಧಿ ಸುಳ್ಳುಗಳ ಪ್ರಮಾಣ ಮತ್ತು ಹರಡುವಿಕೆ ಎಷ್ಟೊಂದು ವ್ಯಾಪಕವಾಗಿದೆ ಎಂದರೆ ಕೈಬೆರಳೆಣಿಕೆಯ ಸಂಖ್ಯೆಯಲ್ಲಿರುವ ಸ್ವತಂತ್ರ ಮಾಧ್ಯಮಗಳು ಸತ್ಯಾಂಶಗಳನ್ನು ಆಧರಿಸಿ ಸುಳ್ಳುಗಳನ್ನು ಅಲ್ಲಗಳೆಯಲು ಪ್ರಯತ್ನಿಸಿದರೂ ಈ ಸುಳ್ಳುಗಳು ಸೃಷ್ಟಿಸಿರುವ ದ್ವೇಷವನ್ನು ಶಮನಿಸಲು ಅವುಗಳಿಂದ ಸಾಧ್ಯವಾಗುತ್ತಿಲ್ಲ. 

ಅಲ್ಲದೆ ಮುಸ್ಲಿಮರ ವಿರುದ್ಧ ತಕ್ಷಣದ ಪ್ರತೀಕಾರ ಮತ್ತು ಅವರ ಸಾಮೂಹಿಕ ಹತ್ಯೆಗಳಿಗೂ ನೇರ ಕರೆಗಳನ್ನು ನೀಡಲಾಗಿದೆ. ಬಿಜೆಪಿಯ ಬೃಹತ್ ಮಾಹಿತಿ ಮತ್ತು ತಂತ್ರಜ್ಞಾನ(ಐಟಿ) ಘಟಕದ ಜೊತೆಗೆ ಭಾರತದ ಮುಖ್ಯವಾಹಿನಿ ಮಾಧ್ಯಮಗಳೂ ಉದ್ದೇಶಪೂರ್ವಕವಾಗಿ ಈ ಸುಳ್ಳುಗಳನ್ನು ಸತ್ಯವೆಂದೇ ಬಿಂಬಿಸುತ್ತ ತಮ್ಮ ಪಾಲಿನ ಕೊಡುಗೆಯನ್ನು ಸಲ್ಲಿಸುತ್ತಿವೆ. ಸುಳ್ಳು ‘ಹಿಂದು ನರಮೇಧ’ದ ವಿರುದ್ಧ ಹಲವಾರು ದೇಶಗಳಲ್ಲಿಯ ಬಿಜೆಪಿ ಪರ ಭಾರತೀಯರ ಗುಂಪುಗಳು ಪ್ರತಿಭಟನೆಗಳನ್ನು ನಡೆಸಿರುವ ವರದಿಗಳೂ ಇವೆ.

ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿಯವರ ಕೃಪಾಶ್ರಯದಲ್ಲಿ ‘ಜಿಹಾದಿ ’ಗಳು ಹಿಂದು ಮಹಿಳೆಯರ ಮೇಲೆ ಅತ್ಯಾಚಾರಗಳನ್ನು ನಡೆಸುತ್ತಿದ್ದಾರೆ ಎನ್ನುವುದು ಬಿಜೆಪಿ ನಿರಂತರವಾಗಿ ಹರಡುತ್ತಿರುವ ಇನ್ನೊಂದು ಸುಳ್ಳು ಆಗಿದೆ. ತಮ್ಮ ಎಲ್ಲ ಸಂದೇಶಗಳು ‘ಹಲವಾರು ಅತ್ಯಾಚಾರಗಳ ವರದಿಗಳನ್ನು ’ಉಲ್ಲೇಖಿಸುತ್ತವೆ ಎನ್ನುವುದನ್ನು ಹಿರಿಯ ಬಿಜೆಪಿ ನಾಯಕರು ಖಚಿತಪಡಿಸಿಕೊಂಡಿದ್ದಾರೆ. ‘ಹಿಂದು ಸೋದರಿಯರ ’ಮೇಲೆ ದಾಳಿಗಳನ್ನು ನಡೆಸುತ್ತಿರುವ ‘ಜಿಹಾದಿ’ಗಳನ್ನು ಹಿಂಸಾಚಾರಕ್ಕೆ ಹೊಣೆಯಾಗಿಸಿರುವ ವಿಶ್ವ ಹಿಂದು ಪರಿಷತ್ ‘ಆತ್ಮರಕ್ಷಣೆಗಾಗಿ ತಮ್ಮ ಹಕ್ಕುಗಳನ್ನು ಚಲಾಯಿಸುವಂತೆ ’ ಹಿಂದುಗಳಿಗೆ ಸೂಚಿಸಿದೆ. ಗಮನಾರ್ಹವೆಂದರೆ ಟಿಎಂಸಿಯ ಗೂಂಡಾಗಳೂ ಮುಸ್ಲಿಮರ ಮೇಲೆ ದಾಳಿಗಳನ್ನು ನಡೆಸುತ್ತಿದ್ದಾರೆ ಮತ್ತು ಪ್ರಾಸಂಗಿಕವಾಗಿ,ಬಿಜೆಪಿ ಪರ ಗುಂಪುಗಳಿಂದ ಕೊಲ್ಲಲ್ಪಟ್ಟಿರುವ ಐವರು ಟಿಎಂಸಿ ಕಾರ್ಯಕರ್ತರು ಹಿಂದುಗಳಾಗಿದ್ದರು.

ಪ್ರತಿಯೊಂದಕ್ಕೂ ಕೋಮುಬಣ್ಣ

ಹಿಂಸೆಗೆ ಕೋಮು ಬಣ್ಣವನ್ನು ನೀಡುವ ಅವಕಾಶವನ್ನು ಆರೆಸ್ಸೆಸ್ ನೆಟ್ವರ್ಕ್ ಎಂದಿಗೂ ತಪ್ಪಿಸಿಕೊಳ್ಳುವುದಿಲ್ಲ. ಲೈಂಗಿಕ ಹಿಂಸೆಗೆ, ಅದು ನಿಜವಾಗಿರಲಿ ಅಥವಾ ಸುಳ್ಳಾಗಿರಲಿ, ಕೋಮು ಬಣ್ಣವನ್ನು ನೀಡುವುದು ಹಿಂದುಗಳಲ್ಲಿ ಸಾಮೂಹಿಕ ಧ್ರುವೀಕರಣವನ್ನು ಸುಲಭವಾಗಿಸುತ್ತದೆ. ಪ.ಬಂಗಾಳವೊಂದರಲ್ಲೇ ಹಿಂದು ಮಹಿಳೆಯರ ಮೇಲೆ ‘ಜಿಹಾದಿ’ಗಳ ದಾಳಿ ಕುರಿತು ನೂರಾರು ವದಂತಿಗಳು ಇತ್ತೀಚಿನ ವರ್ಷಗಳಲ್ಲಿ ಹರಿದಾಡಿವೆ.

 
ಉದಾಹರಣೆಗೆ ಬಂಗಾಳದಲ್ಲಿ 2017ರ ಬದುರಿಯಾ ದಂಗೆಗಳ ಬಳಿಕ ಮುಸ್ಲಿಮರು ಆರೋಪಿಯ ತಾಯಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಬಿಜೆಪಿ ಬೆಂಬಲಿಗರು ಹೇಳಿಕೊಂಡಿದ್ದರು. ಆರೋಪಿಯ ತಾಯಿ ಹಲವಾರು ವರ್ಷಗಳ ಹಿಂದೆಯೇ ನಿಧನಳಾಗಿದ್ದಾಳೆ ಎನ್ನುವುದು ನಂತರ ಬೆಳಕಿಗೆ ಬಂದಿತ್ತು. ಇತ್ತೀಚಿಗಷ್ಟೇ ‘ಮುಸ್ಲಿಂ ಗೂಂಡಾಗಳು ಹಿಂದು ಮಹಿಳೆಯರ ಮೇಲೆ ದಾಳಿ ನಡೆಸುತ್ತಿರುವ ’ದಾರಿ ತಪ್ಪಿಸುವ ವೀಡಿಯೊವೊಂದನ್ನು ಶೇರ್ ಮಾಡಿಕೊಂಡಿದ್ದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಷ ವಿಜಯವರ್ಗೀಯ ಅವರು 2017ರಲ್ಲಿಯೂ ‘ಹಿಂದು ಪುತ್ರಿಯರ ಮೇಲೆ ಅತ್ಯಾಚಾರ ನಡೆಯುತ್ತಿದೆ ’ಎಂಬ ಅಡಿಬರಹದೊಡನೆ ಬಾಂಗ್ಲಾದೇಶದಲ್ಲಿ ನಿರ್ಮಾಣಗೊಂಡಿದ್ದ ಭೋಜಪುರಿ ಚಿತ್ರವೊಂದರ ಸ್ಕ್ರೀನ್ ಶಾಟ್ ಅನ್ನು ಶೇರ್ ಮಾಡಿಕೊಂಡಿದ್ದರು.
  
ಜಮ್ಮುವಿನ ಕಥುವಾ ಜಿಲ್ಲೆಯಲ್ಲಿ ಎಂಟರ ಹರೆಯದ ಬಾಲಕಿಯ ಅತ್ಯಾಚಾರಿಗಳು ಮತ್ತು ಹಂತಕರಿಗೆ ದೊರಕಿದ್ದ ಬೆಂಬಲವನ್ನು ನೆನಪಿಸಿಕೊಳ್ಳಿ. ಮೊದಲಿಗೆ ಘಟನೆ ನಡೆದಿದ್ದೇ ಸುಳ್ಳು ಎಂದು ಸಾಬೀತುಗೊಳಿಸಲು ಅವರು ತಮ್ಮ ಬಲವನ್ನೆಲ್ಲ ಕ್ರೋಢೀಕರಿಸಿದ್ದರು. ಝೀ ನ್ಯೂಸ್ ಮತ್ತು ದೈನಿಕ ಜಾಗರಣ್ ಆ ಕುರಿತು ಸುಳ್ಳುಸುದ್ದಿಗಳನ್ನು ಪ್ರಕಟಿಸಿದ್ದವು. ಬಳಿಕ ಬಿಜೆಪಿಯ ಹಿರಿಯ ಸಚಿವರು ಜಮ್ಮುವಿನಲ್ಲಿ ಅತ್ಯಾಚಾರಿಗಳನ್ನು ಬೆಂಬಲಿಸಿ ತಿರಂಗಾ (ತ್ರಿವರ್ಣ) ರ್ಯಾಲಿಗಳನ್ನು ನಡೆಸಿದ್ದರು. ‘ಹಿಂದುಗಳು ಅತ್ಯಾಚಾರ ನಡೆಸುವುದಿಲ್ಲ ’ಎನ್ನುವುದು ಅವರ ತರ್ಕವಾಗಿತ್ತು.

ಆರೋಪಿಗಳ ಪೈಕಿ ಓರ್ವ ಮುಸ್ಲಿಮನಾಗಿದ್ದರಿಂದ ಹೈದರಾಬಾದ್ನಲ್ಲಿ ಮಹಿಳೆಯೋರ್ವಳ ಕ್ರೂರ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಕ್ಕೆ ಹೇಗೆ ಕೋಮುಬಣ್ಣವನ್ನು ನೀಡಲಾಗಿತ್ತು ಎನ್ನುವುದನ್ನು ನೆನಪಿಸಿಕೊಳ್ಳಿ. ಹೆಚ್ಚುಕಡಿಮೆ ದಂಗೆಗಳನ್ನು ಪ್ರಚೋದಿಸಿದ್ದ, ಅಲಿಗಡದ ಟಪ್ಪಾಲ್ ಪಟ್ಟಣದಲ್ಲಿ ತರುಣಿಯೋರ್ವಳ ಹತ್ಯೆ ಕುರಿತು ನಡೆದಿದ್ದ ಸುಳ್ಳು ಪ್ರಚಾರವನ್ನು ನೆನಪಿಸಿಕೊಳ್ಳಿ.
   
ಇವೆಲ್ಲವೂ ಮುಸ್ಲಿಮರನ್ನು ಹಿಂದು ಮಹಿಳೆಯರ ಮೇಲೆ ಕಣ್ಣಿಟ್ಟಿರುವ ಕಿರಾತಕರು ಎಂದು ಬಿಂಬಿಸಲು ಅವರನ್ನು ಎಲ್ಲ ರೀತಿಗಳಲ್ಲಿಯೂ ಸಾಮಾಜಿಕ ಜೀವನದಿಂದ ಹೊರಗಿಡುವ ಅಜೆಂಡಾಕ್ಕೆ ಅನುಗುಣವಾಗಿದ್ದವು. ಅದು ತಿರುಗಿ ಬೀಳಲು ಸಾಧ್ಯವಿರದ ದುರ್ಬಲ ಮುಸ್ಲಿಮರನ್ನು ಗುಂಪಿನಿಂದ ಥಳಿಸಿ ಹತ್ಯೆ ಮತ್ತು ಇತರ ಹಿಂಸೆಗಳ ರೂಪದಲ್ಲಿ ಹಿಂಸಾತ್ಮಕ ಹಿಂದು ಪುರುಷತ್ವದ ಪ್ರದರ್ಶನದ ಸಮರ್ಥನೆಯೂ ಆಗಿದೆ. ಈ ಹೇಡಿತನವನ್ನೇ ನಂತರ ಸಹಜ ಪ್ರತೀಕಾರ ಎಂದು ವೈಭವೀಕರಿಸಲಾಗಿತ್ತು. 

ಕಳೆದ ತಿಂಗಳಷ್ಟೇ ಹಿಂದು ದೇವಾಲಯವನ್ನು ಪ್ರವೇಶಿಸಿದ್ದಕ್ಕಾಗಿ ಹದಿಹರೆಯದ ಮುಸ್ಲಿಂ ಬಾಲಕನೋರ್ವನನ್ನು ಬರ್ಬರವಾಗಿ ಥಳಿಸಿದ್ದನ್ನು ನಾವು ನೋಡಿದ್ದೇವೆ. ಆತನ ಮೇಲೆ ದಾಳಿ ನಡೆಸಿದ್ದ ವ್ಯಕ್ತಿ ತನ್ನ ಅಪರಾಧಿ ಕೃತ್ಯವನ್ನು ಸಮರ್ಥಿಸಿಕೊಂಡಿದ್ದ. ಶಂಭುಲಾಲ ರೈಗರ್ ಎಂಬ ವ್ಯಕ್ತಿ ಮುಸ್ಲಿಂ ಕಾರ್ಮಿಕ ಅಪ್ರಝುಲ್ ಎಂಬಾತನನ್ನು ಕೊಂದು ಆತನ ಶವವನ್ನು ಸುಟ್ಟುಹಾಕಿದ್ದ. ಅಫ್ರಝುಲ್ ‘ಲವ್ ಜಿಹಾದ್ ’ನಡೆಸಿದ್ದ ಎನ್ನುವುದು ಆತ ತನ್ನ ರಕ್ಷಣೆಗೆ ಮುಂದೊಡ್ಡಿದ್ದ ವಾದವಾಗಿತ್ತು. ರೈಗರ್ಗೆ ಉಗ್ರಗಾಮಿಗಳ ಶೈಲಿಯಲ್ಲಿ ಜನಬೆಂಬಲ ವ್ಯಕ್ತವಾಗಿತ್ತು. ಆದರೆ ಆತ ಸುಳ್ಳು ಹೇಳಿದ್ದ. ಆತ ಸುಳ್ಳು ಹೇಳುತ್ತಿದ್ದಾನೆಂದು ಆತನ ಬೆಂಬಲಿಗರಿಗೆ ಗೊತ್ತಿತ್ತು.

ಇತ್ತೀಚಿನವರೆಗೂ ‘ಲವ್ ಜಿಹಾದ್’ಗೆ ಸಂಬಂಧಿಸಿದ ಸುಳ್ಳುಗಳು ವಾಟ್ಸ್ಆ್ಯಪ್ ಸಂಭಾಷಣೆಗಳಿಗೆ ಮತ್ತು ಬಲಪಂಥೀಯ ಗುಂಪುಗಳ ಕರಪತ್ರಗಳಿಗೆ ಸೀಮಿತವಾಗಿದ್ದವು. ಈಗ ಭಾರತದಲ್ಲಿಯ ಆರು ರಾಜ್ಯಗಳು ತಮ್ಮ ಕುಖ್ಯಾತ ‘ಲವ್ ಜಿಹಾದ್ ’ಕಾನೂನುಗಳ ಬುನಾದಿಯಾಗಿ ಈ ಸುಳ್ಳುಗಳನ್ನೇ ನೆಚ್ಚಿಕೊಂಡಿವೆ. ಈ ಕಾನೂನುಗಳು ಹಲವಾರು ಅಸಹಾಯಕ ಮುಸ್ಲಿಂ ಯುವಕರನ್ನು ಜೈಲುಗಳಿಗೆ ತಳ್ಳಿವೆ. ವಿಷಾದವೆಂದರೆ ಅಂತಿಮವಾಗಿ ಮುಸ್ಲಿಂ ಪುರುಷರ ವಿರುದ್ಧದ ಅಸ್ತ್ರಗಳಾಗಿರುವ ಈ ರಾಜಾರೋಷ ಸುಳ್ಳುಗಳ ಬಗ್ಗೆ ಹಿಂದುಗಳಲ್ಲಿ ಯಾವುದೇ ಸಾಮೂಹಿಕ ಹೇವರಿಕೆ ಕಂಡು ಬರುತ್ತಿಲ್ಲ. 

ಜನಾಂಗೀಯ ಕಿರುಕುಳವನ್ನು ಉತ್ತೇಜಿಸಲು ‘ದುರ್ಬಲ ಹಿಂದು ಮಹಿಳೆಯರ ’ ಸುಳ್ಳಿನ ಬಳಕೆ ಮತ್ತು ಮುಸ್ಲಿಂ ಪುರುಷರನ್ನು ರಾಕ್ಷಸರಂತೆ ಬಿಂಬಿಸುವುದು ಭಾರತದಲ್ಲಿ ಹೊಸದೇನಲ್ಲ. ಗುಜರಾತ್ ಸಮಾಚಾರ್ನ 2002,ಫೆ.28ರ ಸಂಚಿಕೆಯ ಮುಖಪುಟದಲ್ಲಿ ‘3-4 ಯುವತಿಯರ ಅಪಹರಣ ’ಎಂಬ ಶೀರ್ಷಿಕೆಯಡಿ ಪ್ರಧಾನ ವರದಿ ಪ್ರಕಟಗೊಂಡಿತ್ತು. ಈ ವರದಿಗೆ ಯಾವುದೇ ಮೂಲಗಳಿರಲಿಲ್ಲ. ಅದೇ ಸಂಚಿಕೆಯ 10ನೇ ಪುಟದಲ್ಲಿಯ ವರದಿಯು ವಿಹಿಂಪ ನಾಯಕ ಕೌಶಿಕ್ ಪಟೇಲ್ 10 ಯುವತಿಯರನ್ನು ಅಪಹರಿಸಲಾಗಿದೆ ಎಂದು ಹೇಳಿದ್ದನ್ನು ಉಲ್ಲೇಖಿಸಿತ್ತು. 

ಪತ್ರಿಕೆಯು ಮಾಹಿತಿಯ ಸತ್ಯಾಸತ್ಯತೆಯನ್ನು ಪೊಲೀಸರಿಂದ ಖಚಿತಪಡಿಸಿಕೊಳ್ಳುವ ಗೋಜಿಗೆ ಹೋಗಿರಲಿಲ್ಲ. ವರದಿಯು ಅಪಹೃತ ಯುವತಿಯರ ಹೆಸರುಗಳನ್ನು ಉಲ್ಲೇಖಿಸಿರಲಿಲ್ಲ. ಅದರ ನಿಕಟ ಪ್ರತಿಸ್ಪರ್ಧಿ ‘ಸಂದೇಶ ’ಕೂಡ ಹಿಂಸೆಯನ್ನು ಪ್ರಚೋದಿಸುವಲ್ಲಿ ಹಿಂದೆ ಬಿದ್ದಿರಲಿಲ್ಲ.‘ಬುಡಕಟ್ಟು ಮಹಿಳೆಯರನ್ನು ಅಪಹರಿಸುತ್ತಿರುವ ಧಾರ್ಮಿಕ ಮತಾಂಧರ (ಮುಸ್ಲಿಮರು ಎಂದು ಓದಿಕೊಳ್ಳಿ) ಗುಂಪು ಜನತೆಯ ಆಕ್ರೋಶವನ್ನು ಎದುರಿಸಬೇಕಿತ್ತು ’ಎಂಬಂತಹ ಉಲ್ಲೇಖಗಳಿದ್ದ ವರದಿಗಳನ್ನು ಅದು ಪ್ರಕಟಿಸಿತ್ತು.
 
ಸತ್ಯಶೋಧನಾ ಸಮಿತಿಯೊಂದು ಗೋಧ್ರಾದಲ್ಲಿ ದುಷ್ಕರ್ಮಿಗಳ ಗುಂಪು ಇಬ್ಬರು ಹಿಂದು ಮಹಿಳೆಯರ ಸ್ತನಗಳನ್ನು ಕತ್ತರಿಸಿರುವ ಕುರಿತು ಸಂದೇಶದ ಬ್ಯಾನರ್ ಹೆಡ್ಲೈನ್ ಬಗ್ಗೆ ಪತ್ರಿಕೆಯ ಸಿಎಂಡಿ ಮತ್ತು ಪ್ರಧಾನ ಸಂಪಾದಕರನ್ನು ಪ್ರಶ್ನಿಸಿದಾಗ,ಪಂಚಮಹಲ್ನ ಡಿಎಸ್ಪಿಯಿಂದ ಈ ಬಗ್ಗೆ ಮಾಹಿತ ಲಭಿಸಿತ್ತು ಎಂದು ಉತ್ತರಿಸಿದ್ದರು. ಇದನ್ನು ಡಿಎಸ್ಪಿ ನಿರಾಕರಿಸಿದ್ದರು ಮತ್ತು ಈ ನಿರಾಕರಣೆ ಗುಜರಾತ್ ಸಮಾಚಾರ್ನಲ್ಲಿ ಪ್ರಕಟಗೊಂಡಿತ್ತು. ಇದು ಎರಡು ಪ್ರತಿಸ್ಪರ್ಧಿ ಪತ್ರಿಕೆಗಳ ನಡುವಿನ ‘ಸ್ಪರ್ಧೆ ’ಯ ಪರಿಣಾಮ ಎಂದು ನಮಗೆ ಹೇಳಲಾಗಿತ್ತು. 

ಯಾವುದೇ ತಿದ್ದುಪಡಿಗಳನ್ನು ಮಾಡದಿರುವುದು ಮತ್ತು ಸ್ಪಷ್ಟನೆಗಳನ್ನು ಪ್ರಕಟಿಸದಿರುವುದು ಸಂದೇಶದ ಸ್ವಂತ ನೀತಿಯಾಗಿತ್ತು. ಸುಳ್ಳುಗಳನ್ನು ಉದ್ದೇಶಪೂರ್ವಕವಾಗಿ ಹರಡಲಾಗುತ್ತಿದೆ ಮತ್ತು ಮುಸ್ಲಿಮರ ಮೇಲೆ ಅವುಗಳ ಪರಿಣಾಮಗಳ ಬಗ್ಗೆ ಸಂಪಾದಕರು ಎಂದೂ ವಿಷಾದ ವ್ಯಕ್ತಪಡಿಸುವುದಿಲ್ಲ ಎನ್ನುವುದು ಅತ್ಯಂತ ಸ್ಪಷ್ಟವಾಗಿತ್ತು.

ಅದು ನಡೆದಿದ್ದು 2002ರಲ್ಲಿ. ಈಗ 2021 ನಡೆಯುತ್ತಿದೆ. 2002ರಲ್ಲಿ ಗುಜರಾತನ್ನು ಆಳಿದ್ದವರು ಇಂದು ಭಾರತವನ್ನು ಆಳುತ್ತಿದ್ದಾರೆ. ತಮ್ಮ ಕೈಯಲ್ಲಿ ಬೃಹತ್ ಐಟಿ ಘಟಕವನ್ನು ಹೊಂದಿರುವ ಅವರು ನಿಜವಾಗಿರಲಿ ಅಥವಾ ಸುಳ್ಳಾಗಿರಲಿ,ಯಾವುದೇ ಸಂದೇಶವನ್ನು ವೈರಲ್ ಆಗಿಸುವ ತಮ್ಮ ಸಾಮರ್ಥ್ಯವನ್ನು ಕೊಚ್ಚಿಕೊಳ್ಳುತ್ತಿದ್ದಾರೆ ಮತ್ತು ‘2002ನ್ನು ಪುನರಾವರ್ತಿಸಿ ’ಎನ್ನುವುದು ಅವರ ಬೆಂಬಲಿಗರ ಏಕಮೇವ ಬೇಡಿಕೆಯಾಗಿದೆ. 

ಮನೋವಿಕೃತರ ಸಮಾಜ
 
ಬಂಗಾಳದ ಹೊರಗೆ ಬಿಜೆಪಿಯು ಪ್ರತಿಕ್ಷಗಳು ಅಧಿಕಾರಕ್ಕೆ ಬಂದರೆ ತಮ್ಮ ಶತ್ರುಗಳು (ಮುಸ್ಲಿಮರು) ತಮ್ಮನ್ನು ನಿರ್ನಾಮ ಮಾಡುತ್ತಾರೆ ಎಂದು ಹಿಂದುಗಳು ನಂಬಬೇಕು ಎಂದು ಬಯಸುತ್ತದೆ. ಹಿಂದು ಮತದಾರರು ಬಿಜೆಪಿಗೇ ಮತ ಹಾಕುವಂತೆ ಅವರನ್ನು ಭಯದಲ್ಲಿರಿಸಲು ಇದೊಂದೇ ಮಾರ್ಗವಾಗಿದೆ. ದಿಲ್ಲಿ ಚುನಾವಣೆಗಳಿಗೆ ಮೊದಲು ಬಿಜೆಪಿ ನಾಯಕರು ಹೇಗೆ ಇಂತಹುದೇ ತಂತ್ರಗಳನ್ನು ಬಳಸಿದ್ದರು ಎನ್ನುವುದನ್ನು ನಾವು ನೆನಪಿಸಿಕೊಳ್ಳಬಹುದು. ದಿಲ್ಲಿ ಚುನಾವಣೆಗಳಿಗೆ ಮುನ್ನ ಹಿರಿಯ ಬಿಜೆಪಿ ನಾಯಕ ಹಾಗೂ ಸಂಸದ ಪ್ರವೇಶ ಶರ್ಮಾ ಅವರು,‘ನೀವು ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರಿಗೆ ಮತ ನೀಡದಿದ್ದರೆ ನಿಮ್ಮನ್ನು ರಕ್ಷಿಸಲು ಯಾರೂ ಬರುವುದಿಲ್ಲ ’ಎಂದು ಹೇಳಿದ್ದರು. ಶಾಹೀನ್ ಭಾಗ್‌ ನಲ್ಲಿ ಧರಣಿ ಕುಳಿತಿರುವ ಲಕ್ಷಾಂತರ ಜನರು ನಿಮ್ಮ ಮನೆಗಳಿಗೆ ನುಗ್ಗುತ್ತಾರೆ ಮತ್ತು ನಿಮ್ಮ ಸೋದರಿಯರು ಹಾಗೂ ಪುತ್ರಿಯರ ಮೇಲೆ ಅತ್ಯಾಚಾರ ನಡೆಸುತ್ತಾರೆ ಎಂದು ಅವರು ಹೇಳಿದ್ದರು.
 
ಪ.ಬಂಗಾಳ ಮತ್ತು ದಿಲ್ಲಿಗಳಲ್ಲಿಯ ಚುನಾವಣಾ ಸೋಲುಗಳು ಮೋದಿಯ ಅಜೇಯತೆಗೆ ಭಾರೀ ಪೆಟ್ಟು ನೀಡಿವೆ. ಇವೆರಡು ಕಹಿ ಸೋಲುಗಳನ್ನು ಹಿಂದು ವಿರೋಧಿ ಘಟನೆಗಳೆಂದು ಬಿಂಬಿಸುವ ಮೂಲಕ ಇವುಗಳನ್ನು ಸಾರ್ವಜನಿಕರ ನೆನಪಿನಿಂದ ಅಳಿಸಿ ಹಾಕಿದರೂ ಅಚ್ಚರಿಯೇನಿಲ್ಲ. ಯಾವುದೇ ರೂಪದಲ್ಲಿ ಸತ್ಯದಲ್ಲಿ ಆರೆಸ್ಸೆಸ್ಗೆ ಆಸಕ್ತಿಯಿಲ್ಲದಿರುವುದು ಮಾತ್ರವಲ್ಲ,ತಾನು ಹಿಂದುಗಳಿಗಾಗಿ ಸೃಷ್ಟಿಸುತ್ತಿರುವ ಸುಳ್ಳುಗಳನ್ನು ಅವರು ಸ್ವೀಕರಿಸಬೇಕು ಎಂದೂ ಅದು ಬಯಸುತ್ತಿದೆ. 

ಕೆಲವೊಂದು ಮೂಲಭೂತ ಸುಳ್ಳುಗಳು ಆರೆಸ್ಸೆಸ್ ನಿರಂತರವಾಗಿ ಸೃಷ್ಟಿಸುತ್ತಿರುವ ಸುಳ್ಳುಗಳ ಬುನಾದಿಯಾಗಿವೆ. ಭಾರತದಲ್ಲಿಯ ಜನರು ಮೊದಲು ಹಿಂದುಗಳಾಗಿದ್ದಾರೆ, ಮುಸ್ಲಿಮರು ಮತ್ತು ಕ್ರೈಸ್ತರು ಆಕ್ರಮಣಕೋರರಾಗಿದ್ದು, ಅವರು ಮುಖ್ಯ ಭಾರತೀಯ ಸಂಸ್ಕೃತಿಯ ಭಾಗವಲ್ಲ. ಒಂದು ಕಾಲದಲ್ಲಿ ಇಡೀ ವಿಶ್ವದ ಜ್ಞಾನವು ನಮ್ಮ ಬಳಿಯೇ ಇತ್ತು. ಸಂಸ್ಕೃತವು ಎಲ್ಲ ಭಾರತೀಯ ಭಾಷೆಗಳ ತಾಯಿಯಾಗಿದೆ. ಅನಾದಿಯಿಂದಲೂ ನಾವು ಆಧುನಿಕರಾಗಿದ್ದೇವೆ;ಇವೆಲ್ಲ ಇಂತಹ ಮೂಲಭೂತ ಸುಳ್ಳುಗಳಾಗಿವೆ.
 
ಇವೆಲ್ಲ ಸುಳ್ಳುಗಳು ನಮ್ಮ ಮಿದುಳುಗಳನ್ನು ಹದಗೊಳಿಸಿವೆ. ಅವು ಆರೆಸ್ಸೆಸ್ ನ ಸಕ್ರಿಯ ಹಿಂಬಾಲಕರನ್ನು ಸಂಭಾವ್ಯ ಕ್ರಿಮಿನಲ್ಗಳನ್ನಾಗಿ ಪರಿವರ್ತಿಸಿವೆ. ಅವರಲ್ಲಿ ಹೆಚ್ಚಿನವರು ತಮ್ಮ ಸಹಜೀವಿಗಳ ಕುರಿತು ಘಾತಕ ಚಿಂತನೆಗಳನ್ನು ಹೊಂದಿರುತ್ತಾರೆ. ಅವು ಮನೋವಿಕೃತರಾಗಿ ಬದಲಾಗಿದ್ದಾರೆ. ಇಂತಹ ಅಸ್ವಸ್ಥ ಹೃದಯಗಳ ಮತ್ತು ದುರ್ಬಲ ಮನಸ್ಸಿನ ಭಾರೀ ಜನಸಂಖ್ಯೆಯು ಇದನ್ನಿಂದು ಮಹಾನ್ ದೇಶವನ್ನಾಗಿಸಲು ಸಾಧ್ಯವಿಲ್ಲ. ಸಮಾಜದಲ್ಲಿ ಉದ್ದೇಶಪೂರಕವಾಗಿ ಇಂತಹ ಸುಳ್ಳುಗಳ ಬಿತ್ತನೆಯು ಯಾವುದೇ ಧನಾತ್ಮಕ ಪರಿಣಾಮಗಳನ್ನು ನೀಡುವುದಿಲ್ಲ.

ತಾವು ಎಂತಹ ಜನರಾಗಬೇಕು ಎನ್ನುವುದನ್ನು ಹಿಂದುಗಳೇ ನಿರ್ಧರಿಸಬೇಕು. ಆದರೆ ಇತರರು ಈ ಸುಳ್ಳುಗಳಿಗೆ ತಮ್ಮನ್ನು ಬಲಿಪಶುಗಳನ್ನಾಗಿಸುವಂತಿಲ್ಲ. ಅದು ಭಾರತೀಯ ಸಮಾಜವನ್ನು ‘ಸತ್ಯ’ದ ಪ್ರತ್ಯೇಕ ಶಬ್ದಗಳಲ್ಲಿ ಒಡೆಯುತ್ತದೆ. ಆರೆಸ್ಸೆಸ್ ಸೃಷ್ಟಿಸುತ್ತಿರುವ ‘ಸತ್ಯ ’ವು ಮುಸ್ಲಿಮರು,ಕ್ರೈಸ್ತರು ಮತ್ತು ದಲಿತರ ಪ್ರತ್ಯೇಕತೆ ಮತ್ತು ಅವರ ನಿರ್ಮೂಲನಕ್ಕೂ ಕಾರಣವಾಗುತ್ತದೆ. ಆರೆಸ್ಸೆಸ್ನ ಸುಳ್ಳುಗಳು ನಿಲ್ಲಬೇಕು,ಸಾಂಕ್ರಾಮಿಕದಲ್ಲಿ ಮಾತ್ರವಲ್ಲ,ಭವಿಷ್ಯದಲ್ಲಿಯೂ ಅವು ನಿಲ್ಲಬೇಕು.

ಕೃಪೆ: thewire.in

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)