varthabharthi


ಓ ಮೆಣಸೇ

ಓ ಮೆಣಸೇ...

ವಾರ್ತಾ ಭಾರತಿ : 17 May, 2021
ಪಿ.ಎ.ರೈ

ಕೋವಿಡ್ ವಿರುದ್ಧದ ಹೋರಾಟದಲ್ಲಿ ಇಡೀ ಭಾರತವೇ ಒಂದಾಗಿ ಕೆಲಸ ಮಾಡುತ್ತಿದೆ- ನರೇಂದ್ರ ಮೋದಿ, ಪ್ರಧಾನಿ

ಹೌದು, ಸರಕಾರ ಒಂದನ್ನು ಬಿಟ್ಟು.


ಮಠ-ಮಂದಿರಗಳು ಕೊರೋನ ರೋಗಿಗಳ ಸೇವೆಗೆ ಧಾವಿಸಬೇಕು - ಕೆ.ಎಸ್.ಈಶ್ವರಪ್ಪ, ಸಚಿವ

ಆದರೆ ಕೋಮು ಸೋಂಕಿತ ನಿಮ್ಮಂಥವರನ್ನು ಏನು ಮಾಡುವುದು?


ರೋಗಗ್ರಸ್ತ ಬಿಜೆಪಿ ಸರಕಾರದ ಆಡಳಿತದಿಂದ ಗ್ರಾಮೀಣ ಜನತೆ ದಂಗೆ ಎದ್ದರೂ ಆಶ್ಚರ್ಯವಿಲ್ಲ - ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

ಜನರು ಬದುಕಿ ಉಳಿದ ಬಳಿಕವಲ್ಲವೇ ದಂಗೆಯೇಳುವ ಪ್ರಶ್ನೆ ಬರುವುದು.


ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಜನರಿಗೆ ಪಂಪ್ ಹೊಡೆದು ಧೈರ್ಯ ತುಂಬಲು ಸಾಧ್ಯವೇ? - ಉಮೇಶ್ ಕತ್ತಿ, ಆಹಾರ ಸಚಿವ

ಜನರ ತಲೆ ಒಡೆದು ಖಜಾನೆ ತುಂಬುವುದಷ್ಟೇ ನಿಮಗೆ ಗೊತ್ತಿರುವುದು.


ಹೊಸ ಸಂಸತ್ ಭವನ ಮತ್ತು ಪ್ರತಿಮೆ ನಿರ್ಮಿಸಲು 20 ಸಾವಿರ ಕೋಟಿ ರೂ. ಖರ್ಚು ಮಾಡುತ್ತಿರುವ ಬಿಜೆಪಿ ಲಸಿಕೆಗಾಗಿ 30 ಸಾವಿರ ಕೋಟಿ ರೂ. ಯಾಕೆ ಖರ್ಚು ಮಾಡುತ್ತಿಲ್ಲ - ಮಮತಾ ಬ್ಯಾನರ್ಜಿ, ಪ.ಬಂ.ಮುಖ್ಯಮಂತ್ರಿ

ಅವರು ಲಸಿಕೆಯ ಮೂಲಕ 30,000 ಕೋಟಿ ರೂಪಾಯಿ ಸಂಗ್ರಹಿಸುವ ಗುರಿ ಹೊಂದಿದ್ದಾರೆ.


ನಮ್ಮ ದೇಶದ ಜನರು ಸಾಯುತ್ತಿರುವಾಗ ತನ್ನ ವರ್ಚಸ್ಸು ಹೆಚ್ಚಿಸಿಕೊಳ್ಳುವುದಕ್ಕಾಗಿ ಕೇಂದ್ರ ಸರಕಾರ ಲಸಿಕೆಯನ್ನು ಬೇರೆ ದೇಶಗಳಿಗೆ ಮಾರಾಟ ಮಾಡುವುದು ಗಂಭೀರ ಅಪರಾಧ - ಮನೀಶ್ ಸಿಸೋಡಿಯಾ, ದಿಲ್ಲಿ ಉಪಮುಖ್ಯಮಂತ್ರಿ

ಸಾಯಿಸುವುದು ವರ್ಚಸ್ಸು ಹೆಚ್ಚಿಸುವ ಸುಲಭ ಮಾರ್ಗ ಎನ್ನುವುದನ್ನು ಪ್ರಧಾನಿಯವರು ಗುಜರಾತಿನಲ್ಲೇ ಕಲಿತುಕೊಂಡಿದ್ದಾರೆ.


ಕೊರೋನ ವೈರಸ್ ನನ್ನ ದೇಹದೊಳಗೆ ಪಾರ್ಟಿ ಮಾಡುತ್ತಿರುವುದು ನನಗೆ ಗೊತ್ತೇ ಇರಲಿಲ್ಲ - ಕಂಗನಾ ರಣಾವತ್, ನಟಿ

ನೀವೇ ಕೊರೋನ ಒಳಗೆ ನುಗ್ಗಿದ್ದೀರಿ ಎನ್ನುವುದು ಕೊರೋನ ವೈರಸ್ ಆರೋಪ.


ತಮ್ಮ ಮತದ ಹಕ್ಕು ಚಲಾಯಿಸಿದವರ ಮೇಲೆ ಹಿಂಸೆ ಎಸಗುವುದು ನೊಬೆಲ್ ಪುರಸ್ಕೃತ ರವೀಂದ್ರನಾಥ್ ಟಾಗೋರ್ ಅವರ ಕನಸಾಗಿರಲಿಲ್ಲ - ಜಗದೀಪ್ ದಿನಕರ್, ಪ.ಬಂ.ರಾಜ್ಯಪಾಲ

ಸೇನೆಯ ಮೂಲಕ ಗೋಲಿಬಾರ್ ನಡೆಸುವುದು ಟಾಗೋರ್ ಕನಸಾಗಿತ್ತೇ?


ಕಳೆದ ಬಾರಿ ಕೊರೋನ ಬಗ್ಗೆ ಜನರಿಗಿದ್ದ ಭಯ ಈ ಬಾರಿ ಇಲ್ಲ - ಎಸ್.ಅಂಗಾರ, ಸಚಿವ

ಮೋದಿಯ ರ್ಯಾಲಿಯಿಂದ ಅವರಿಗೆ ಆತ್ಮವಿಶ್ವಾಸ ಬಂದಿರಬೇಕು.


ಕೊರೋನ ಹಾವಳಿಯಿಂದಾಗಿ ದಿಢೀರ್ ಸ್ಥಗಿತಗೊಂಡಿರುವ ಐಪಿಎಲ್‌ನ ಉಳಿದ ಭಾಗ ಭಾರತದಲ್ಲಿ ನಡೆಯುವುದಿಲ್ಲ - ಸೌರವ್ ಗಂಗೂಲಿ, ಬಿಸಿಸಿಐ ಅಧ್ಯಕ್ಷ \

ಜನರು ಸ್ಥಗಿತಗೊಂಡಿರುವ ಬಿಪಿಎಲ್ ಅಕ್ಕಿಯ ಬಗ್ಗೆ ಯೋಚಿಸುತ್ತಿದ್ದಾರೆ.


ಎಲ್ಲರೂ ಕೋವಿಡ್ ಲಸಿಕೆಗೆ ತಮ್ಮ ಸರದಿಗಾಗಿ ತಾಳ್ಮೆಯಿಂದ ಕಾಯಬೇಕು - ಡಾ.ಸುಧಾಕರ್, ಸಚಿವ

ನಿಮ್ಮ ಮಾತನ್ನು ನಂಬಿದ ಅವರೆಲ್ಲ ಈಗ ಸ್ಮಶಾನದಲ್ಲಿ ತಮ್ಮ ಸರದಿಗಾಗಿ ಕಾಯುತ್ತಿದ್ದಾರೆ.


ರಾಜ್ಯದಲ್ಲಿ ಕೋವಿಡ್ 2ನೇ ಅಲೆ ತೀವ್ರ ಪರಿಣಾಮ ಬೀರುವುದರಿಂದ ಕಠಿಣ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯ- ಯಡಿಯೂರಪ್ಪ, ಮುಖ್ಯಮಂತ್ರಿ

ಕಠಿಣ ಕ್ರಮ ತೆಗೆದುಕೊಳ್ಳಬೇಕಾದುದು ಕೊರೋನ ವಿರುದ್ಧ, ಜನರ ವಿರುದ್ಧವಲ್ಲ.


ದಶಕಗಳ ಹಿಂದೆ ನಾನು ಬಾಲಿವುಡ್‌ನಲ್ಲಿ ನಾಯಕಿಯಾಗಿ ನಟಿಸುತ್ತಿದ್ದ ದಿನಗಳಲ್ಲಿ ನಟಿಯರಿಗೆ ಬಾಯ್ ಫ್ರೆಂಡ್ ಇರುವ ಹಾಗಿರಲಿಲ್ಲ - ಪೂಜಾ ಬೇಡಿ, ನಟಿ 

ಆದರೂ ನೀವು ಮಾಡಿರುವ ಸಾಧನೆ ಕಡಿಮೆಯೇನೂ ಇಲ್ಲ ಬಿಡಿ.


ವದಂತಿಗಳಿಗೆ ಕಿವಿಗೊಡದೆ ಲಸಿಕೆ ಹಾಕಿಸಿಕೊಂಡು ಕೊರೋನ ಆಪತ್ತಿನಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ - ಯೋಗಿ ಆದಿತ್ಯನಾಥ್, ಉ.ಪ್ರ.ಮುಖ್ಯಮಂತ್ರಿ
ಲಸಿಕೆ ಹಾಕಿಸಿಕೊಂಡರೆ, ಪೊಲೀಸರಿಂದ ಕೇಸು ಹಾಕಿಸಿಕೊಳ್ಳುವುದರಿಂದಲೂ ಪಾರಾಗಲು ಸಾಧ್ಯವೇ?


ಕೊರೋನ ಸಾವಿಗಾಗಿ ದುಃಖಬೇಡ. ನಮಗೆ ಪುನರ್ಜನ್ಮವಿದೆ - ಮೋಹನ್ ಭಾಗವತ್, ಆರೆಸ್ಸೆಸ್ ಮುಖಂಡ

ಒಟ್ಟಿನಲ್ಲಿ, ಈ ಜನ್ಮದಲ್ಲಿ ಕೊರೋನ ಲಸಿಕೆಯನ್ನು ನಿರೀಕ್ಷಿಸಬೇಡಿ ಎಂಬ ಸೂಚನೆ ನೀಡುತ್ತಿದ್ದಾರೆ.


ಜಿಎಸ್‌ಟಿ ವಿನಾಯಿತಿಯಿಂದ ದೇಶೀಯ, ಆಮದು ಕೋವಿಡ್ ಔಷಧಿಗಳು ದುಬಾರಿಯಾಗುತ್ತವೆ - ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವೆ
ಈಗ ದೇಶದಲ್ಲಿ ದುಬಾರಿಯಲ್ಲದೇ ಇರುವ ವಸ್ತುಗಳು ಯಾವುವು ಎನ್ನುವುದನ್ನು ಹೇಳುತ್ತೀರಾ?


ಬೆಡ್ ಮಾರಾಟ ದಂಧೆ ಪ್ರಕರಣಕ್ಕೆ ವಾಸ್ತವವಾಗಿ ಕೋಮುವಾದದ ಸ್ಪರ್ಶ ನೀಡಿದ್ದು ಕಾಂಗ್ರೆಸ್ ಮತ್ತು ಆ ಪಕ್ಷದ ಕೃಪಾ ಪೋಷಿತ ಬುದ್ಧಿ ಜೀವಿಗಳು - ತೇಜಸ್ವಿ ಸೂರ್ಯ, ಸಂಸದ

17 ಜನ ಸಿಬ್ಬಂದಿಯ ಹೆಸರು ಬರೆದು ಕೊಟ್ಟಿರುವುದು ಕಾಂಗ್ರೆಸ್ ಮತ್ತು ಬುದ್ಧಿಜೀವಿಗಳೇ ಆಗಿರಬೇಕು.


ಈಗ ಬಿಜೆಪಿಯ ಶಾಸಕರು, ಸಚಿವರು, ಕೇಂದ್ರ- ರಾಜ್ಯ ಸರಕಾರಗಳಿಗೆ ಒಂದೇ ಕೆಲಸ ಜನರ ಪ್ರಾಣ ಉಳಿಸುವುದು- ನಳಿನ್ ಕುಮಾರ್ ಕಟೀಲು, ಸಂಸದ

ಮತ್ತೆ ಪ್ರಾಣ ಹೋಗುತ್ತಿರುವುದು ಯಾವ ಕಾರಣದಿಂದ?


ಲಾಕ್‌ಡೌನ್ ಎಂದರೆ ಹೊರಗೆ ಬರುವ ಜನರಿಗೆ ದನಕ್ಕೆ ಬಡಿದಂತೆ ಬಡಿಯುವುದಲ್ಲ - ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

ಪೊಲೀಸರೇನಾದರೂ ದನಕ್ಕೆ ಹಾಗೆ ಬಡಿದರೆ, ಸರಕಾರ ಅವರನ್ನು ಗೋ ಹತ್ಯೆ ಕಾನೂನಿನಡಿ ಜೈಲಿಗೆ ತಳ್ಳೀತು.


ಸಿದ್ದರಾಮಯ್ಯ, ಡಿಕೆಶಿ ಮತ್ತು ಕುಮಾರಸ್ವಾಮಿ 14 ದಿನ ಬಾಯಿಗೆ ಬೀಗ ಹಾಕಿಕೊಂಡರೆ ಲಾಕ್‌ಡೌನ್ ಯಶಸ್ವಿಯಾಗುತ್ತದೆ - ಕೆ.ಎಸ್.ಈಶ್ವರಪ್ಪ, ಸಚಿವ

ಮೊದಲು, ಸರಕಾರ ತನ್ನ ಬಾಯಿಗೆ ಹಾಕಿದ ಬೀಗವನ್ನು ತೆರೆಯಲಿ.


ಬಿಜೆಪಿ ಎಂದರೆ ‘ಭಾರತೀಯ ಜನ ಲೂಟ್ ಪಾರ್ಟಿ’ - ರಣದೀಪ್ ಸುರ್ಜೇವಾಲಾ, ಕಾಂಗ್ರೆಸ್ ಪ್ರ.ಕಾರ್ಯದರ್ಶಿ

ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಮತಗಳನ್ನು ಲೂಟಿ ಮಾಡಿದ ಕಾರಣಕ್ಕಾಗಿಯೇ?


ಕೋವಿಡ್ ಲಸಿಕೆ ವಿಚಾರದಲ್ಲಿ ಹೇಳಿಕೆ ನೀಡಿರುವ ನ್ಯಾಯಾಧೀಶರು ಸರ್ವಜ್ಞರಲ್ಲ - ಸಿ.ಟಿ.ರವಿ, ಶಾಸಕ
ಅವರು ಸರ್ವಜ್ಞರಲ್ಲ, ಸಂವಿಧಾನ ತಜ್ಞರು ಎನ್ನುವುದು ನಿಮಗೆ ಗೊತ್ತಿದ್ದರೆ ಸಾಕು.


ಪಂಚರಾಜ್ಯಗಳ ಚುನಾವಣಾ ಫಲಿತಾಂಶಗಳು ಪಕ್ಷದ ನಾಯಕರ ಪ್ರಮಾದಗಳಿಗೆ ಹಿಡಿದ ಕೈಗನ್ನಡಿ - ಸೋನಿಯಾ ಗಾಂಧಿ, ಕಾಂಗ್ರೆಸ್ ಅಧ್ಯಕ್ಷೆ

ಪ್ರಮಾದಗಳನ್ನು ಜನರು ಈ ಬಾರಿ ಒಂದಾಗಿ ದೂರ ಇಟ್ಟಿದ್ದಾರೆ.


ಪ್ರತಿದಿನ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಗೋಮೂತ್ರ ಸೇವಿಸುವ ಮೂಲಕ ಕೊರೋನ ವೈರಸ್‌ನಿಂದ ರಕ್ಷಣೆ ಪಡೆಯಬಹುದು - ಸುರೇಂದ್ರ ಸಿಂಗ್, ಉತ್ತರ ಪ್ರದೇಶ ಶಾಸ

 ಖಾಲಿ ಹೊಟ್ಟೆಗೆ ಅನ್ನ ಉಣಿಸುವ ಬದಲು, ಮೂತ್ರ ಕುಡಿಸುವ ಪ್ರಯತ್ನ.


 ಸರಕಾರ ನಡೆಸುವುದೇ ಕಷ್ಟವಾಗಿರುವಾಗ ಕೊರೋನ ವಿಶೇಷ ಪ್ಯಾಕೇಜ್ ಘೋಷಣೆ ಅಸಾಧ್ಯ - ಎಂ.ಪಿ.ರೇಣುಕಾಚಾರ್ಯ, ಶಾಸಕ

ಕೊರೋನ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವುದು ಸರಕಾರ ನಡೆಸುವ ಒಂದು ಭಾಗವಾಗಿದೆ 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)

ಇನ್ನಷ್ಟು ಓ ಮೆಣಸೇ ಸುದ್ದಿಗಳು