ನಾನು ಪ್ರತಿ ದಿನ ಗೋಮೂತ್ರ ಕುಡಿಯುವುದರಿಂದ ನನಗೆ ಕೋವಿಡ್ ಸೋಂಕು ತಗಲಿಲ್ಲ: ಪ್ರಜ್ಞಾ ಠಾಕೂರ್
ಭೋಪಾಲ್: ಕೋವಿಡ್‍ನಿಂದಾಗಿ ಉಂಟಾಗುವ ಶ್ವಾಸಕೋಶದ ಸೋಂಕನ್ನು ಗೋಮೂತ್ರ ಗುಣಪಡಿಸಬಲ್ಲುದು, ಎಂದು ಬಿಜೆಪಿಯ ಭೋಪಾಲ್ ಸಂಸದೆ ಪ್ರಜ್ಞಾ ಠಾಕೂರ್ ಹೇಳಿದ್ದಾರೆ. ಅಷ್ಟೇ ಅಲ್ಲದೆ ತಾನು ಪ್ರತಿ ದಿನ ಗೋಮೂತ್ರ ಸೇವಿಸುತ್ತಿದ್ದೇನೆ ಹಾಗೂ ಅದು ತನಗೆ ಕೊರೋನಾ ವೈರಸ್‍ನಿಂದ ರಕ್ಷಣೆ ನೀಡಿದೆ ಎಂದೂ ಅವರು ಹೇಳಿಕೊಂಡಿದ್ದಾರೆ.
"ನಾವು ದೇಸೀ ಗೋಮೂತ್ರವನ್ನು ಪ್ರತಿ ದಿನ ಕುಡಿದರೆ ಅದು ಕೋವಿಡ್‍ನಿಂದ ಉಂಟಾಗುವ ಶ್ವಾಸಕೋಶದ ಸೋಂಕನ್ನು ಗುಣಪಡಿಸುತ್ತದೆ. ನನಗೆ ಬಹಳಷ್ಟು ನೋವು ಇರುವುದರಿಂದ ಪ್ರತಿದಿನ ಗೋಮೂತ್ರ ಸೇವಿಸುತ್ತೇನೆ. ಆದುದರಿಂದ ನಾನು ಕೊರೋನಾ ವಿರುದ್ಧ ಏನಾದರೂ ಔಷಧಿ ತೆಗೆದುಕೊಳ್ಳುವ ಅಗತ್ಯವಿಲ್ಲ ಹಾಗೂ ನನಗೆ ಕೊರೋನಾ ಉಂಟಾಗಿಲ್ಲ" ಎಂದು ಪಕ್ಷದ ಸಭೆಯೊಂದರಲ್ಲಿ ಮಾತನಾಡುತ್ತಾ ಪ್ರಜ್ಞಾ ಠಾಕುರ್ ಹೇಳಿದ್ದಾರೆ. ``ಗೋಮೂತ್ರ ಜೀವರಕ್ಷಕ'' ಎಂದೂ ಅವರು ಹೇಳಿದ್ದಾರೆ.
ತಾನು ಗೋಮೂತ್ರ ಮತ್ತು ಇತರ ಗೋ ಉತ್ಪನ್ನಗಳನ್ನು ಸೇವಿಸಿದ್ದರಿಂದ ಕ್ಯಾನ್ಸರ್‍ನಿಂದ ಮುಕ್ತಳಾಗಿರುವುದಾಗಿ ಎರಡು ವರ್ಷಗಳ ಹಿಂದೆ ಪ್ರಜ್ಞಾ ಠಾಕೂರ್ ಹೇಳಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.