ಬಿಹಾರ: ತ್ಯಾಜ್ಯ ಸಾಗಿಸುವ ಗಾಡಿಯಲ್ಲಿ ಶಂಕಿತ ಕೊರೋನ ಪೀಡಿತನ ಮೃತದೇಹ
ಪಾಟ್ನ, ಮೇ 17: ಮೇ 13ರಂದು ಬಿಹಾರದ ನಳಂದಾ ಜಿಲ್ಲೆಯ ಜಲಾಲ್ಪುರ ಗ್ರಾಮದಲ್ಲಿ ಮೃತಪಟ್ಟ ಮಧ್ಯವಯಸ್ಕ ವ್ಯಕ್ತಿಯ ಮೃತದೇಹವನ್ನು ನಗರಪಾಲಿಕೆಯ ಕಸ ಸಾಗಿಸುವ ಕೈಗಾಡಿಯಲ್ಲಿ ಸ್ಮಶಾನಕ್ಕೆ ಸಾಗಿಸಿದ ಘಟನೆ ವರದಿಯಾಗಿದ್ದು, ಪ್ರಕರಣದ ಬಗ್ಗೆ ತನಿಖೆ ನಡೆಸುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಮನೋಜ್ ಕುಮಾರ್ ಎಂಬಾತ ಅಸ್ವಸ್ಥಗೊಂಡಿದ್ದು ಈತನನ್ನು ಮೇ 11ರಂದು ಬಿಹಾರ್ಶರೀಫ್ನ ಸದಾರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಎರಡು ದಿನದ ಬಳಿಕ ಆಸ್ಪತ್ರೆಯವರು ಮನೆಗೆ ಕಳುಹಿಸಿದ್ದು ಕೆಲ ಗಂಟೆಯ ಬಳಿಕ ಆತ ಮೃತಪಟ್ಟಿರುವುದಾಗಿ ಆತನ ಮಾವ ರಾಮಾವತಾರ್ ಪ್ರಸಾದ್ ಹೇಳಿದ್ದಾರೆ. ಈತನ ಕೊರೋನ ಪರೀಕ್ಷೆಯ ವರದಿ ಬಂದಿಲ್ಲ ಎಂದವರು ಹೇಳಿದ್ದಾರೆ. ಮನೋಜ್ ಕೊರೋನ ಸೋಂಕಿನಿಂದ ಮೃತಪಟ್ಟಿರುವ ಶಂಕೆಯಿರುವುದರಿಂದ ಆ್ಯಂಬುಲೆನ್ಸ್ಗೆ ಕರೆ ಮಾಡಿದರೂ ಅವರು ಬರಲಿಲ್ಲ. ಬಳಿಕ ನಗರಪಾಲಿಕೆಯ ಸ್ಥಳೀಯ ಸದಸ್ಯ ಸುಶೀಲ್ ಕುಮಾರ್ ಎಂಬವರನ್ನು ಸಂಪರ್ಕಿಸಿದಾಗ ಆತ 22,000 ರೂ. ಕೇಳಿದ್ದಾನೆ. ಕಡೆಗೆ ಚೌಕಾಶಿ ಮಾಡಿ 16,500 ರೂ.ಗೆ ಒಪ್ಪಿಸಲಾಗಿದೆ.
ನಂತರ ಪಿಪಿಇ ಧರಿಸಿದ್ದ ಇಬ್ಬರು ವ್ಯಕ್ತಿಗಳು ಕಸ ಸಾಗಿಸುವ ತಳ್ಳುಗಾಡಿಯಲ್ಲಿ ಮೃತದೇಹವನ್ನು ಸ್ಮಶಾನಕ್ಕೆ ಸಾಗಿಸಿದ್ದಾರೆ ಎನ್ನಲಾಗಿದೆ. ಈ ದೃಶ್ಯದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ನಗರಪಾಲಿಕೆ ಸದಸ್ಯನ ವಿರುದ್ಧ ಕ್ರಮಕ್ಕೆ ಸ್ಥಳೀಯರು ಆಗ್ರಹಿಸಿದ್ದಾರೆ. ಆ್ಯಂಬುಲೆನ್ಸ್ ಕೊರತೆ ಘಟನೆಗೆ ಕಾರಣ ಎಂದು ಅಧಿಕಾರಿಗಳು ಹೇಳಿದ್ದರೆ, ಆಸ್ಪತ್ರೆಯವರು ಇದನ್ನು ನಿರಾಕರಿಸಿದ್ದಾರೆ ಎಂದು ಮೂಲಗಳು ಹೇಳಿವೆ.