varthabharthi


ಕಾಲಂ 9

ಕೋವಿಡ್ ವೈಫಲ್ಯ-ಬಿಜೆಪಿಯ 11 ಸುಳ್ಳು ಸಮರ್ಥನೆಗಳು

ವಾರ್ತಾ ಭಾರತಿ : 19 May, 2021
ಶಿವಸುಂದರ್

ಟೀಕೆಯನ್ನು ಮತ್ತು ವಿಮರ್ಶೆಯನ್ನು ಪಟ್ಟಭದ್ರ ಹಿತಾಸಕ್ತಿಗಳು ಮತ್ತು ದೇಶದ್ರೋಹಿಗಳು ಮೋದಿ ಸರಕಾರದ ವಿರುದ್ಧ ಮಾಡುವ ಅಪಪ್ರಚಾರ ಮಾತ್ರ ಎಂದು ಭಾವಿಸುವ ಬಿಜೆಪಿ ಸರಕಾರ ತನ್ನ ತಪ್ಪುಗಳ ಬಗ್ಗೆ ಯಾವುದೇ ಆತ್ಮಾವಲೋಕನ ಮಾಡಿಕೊಳ್ಳದೆ ಇಂದು ಭಾರತವನ್ನು ಮೂರನೇ ಅಲೆಯ ಅಪಾಯಕ್ಕೆ ದೂಡುತ್ತಿದೆ.
ಇದರ ಭಾಗವಾಗಿಯೇ, ಬಿಜೆಪಿಯ ಐಟಿ ಸೆಲ್ ಕೋವಿಡ್ ನಿರ್ವಹಣೆಯ ಬಗ್ಗೆ ತನ್ನ ಮೇಲೆ ಮಾಡುತ್ತಿರುವ ಎಲ್ಲಾ ಆಪಾದನೆಗಳನ್ನು ನಿರಾಕರಿಸುತ್ತಾ 11 ಸಮರ್ಥನೆಗಳನ್ನು ನೀಡಿ ಟ್ವೀಟ್ ಮಾಡಿದೆ.


ಕೋವಿಡ್ ನಿರ್ವಹಣೆಯಲ್ಲಿ ಅತ್ಯಂತ ಬೇಜವಾಬ್ದಾರಿಯಾಗಿ ನಡೆದು ಕೊಂಡಿರುವ ಮೋದಿ ಸರಕಾರ ವಿಶ್ವ ಆರೋಗ್ಯ ಸಂಸ್ಥೆಯಿಂದ ಮೊದಲುಗೊಂಡು ಜಗತ್ತಿನ ಎಲ್ಲಾ ಸರಕಾರಗಳು ಹಾಗೂ ಪತ್ರಿಕೆಗಳಿಂದ ಛೀಮಾರಿ ಹಾಕಿಸಿಕೊಳ್ಳುತ್ತಿದೆ. ಆದರೇನಂತೆ..? ಟೀಕೆಯನ್ನು ಮತ್ತು ವಿಮರ್ಶೆಯನ್ನು ಪಟ್ಟಭದ್ರ ಹಿತಾಸಕ್ತಿಗಳು ಮತ್ತು ದೇಶದ್ರೋಹಿಗಳು ಮೋದಿ ಸರಕಾರದ ವಿರುದ್ಧ ಮಾಡುವ ಅಪಪ್ರಚಾರ ಮಾತ್ರ ಎಂದು ಭಾವಿಸುವ ಬಿಜೆಪಿ ಸರಕಾರ ತನ್ನ ತಪ್ಪುಗಳ ಬಗ್ಗೆ ಯಾವುದೇ ಆತ್ಮಾವಲೋಕನ ಮಾಡಿಕೊಳ್ಳದೆ ಇಂದು ಭಾರತವನ್ನು ಮೂರನೇ ಅಲೆಯ ಅಪಾಯಕ್ಕೆ ದೂಡುತ್ತಿದೆ. ಇದರ ಭಾಗವಾಗಿಯೇ, ಬಿಜೆಪಿಯ ಐಟಿ ಸೆಲ್ ಕೋವಿಡ್ ನಿರ್ವಹಣೆಯ ಬಗ್ಗೆ ತನ್ನ ಮೇಲೆ ಮಾಡುತ್ತಿರುವ ಎಲ್ಲಾ ಆಪಾದನೆಗಳನ್ನು ನಿರಾಕರಿಸುತ್ತಾ 11 ಸಮರ್ಥನೆಗಳನ್ನು ನೀಡಿ ಟ್ವೀಟ್ ಮಾಡಿದೆ.

(https://pbs.twimg.com/media/E1QSOC_UYAEflpo?format=jpg&name=large)

ಇದು ಆಳುವ ಪಕ್ಷವಾದ ಬಿಜೆಪಿಯು ಸಾಂಕ್ರಾಮಿಕದ ಸವಾಲನ್ನು ಹಾಗೂ ತನ್ನ ನಿರ್ವಹಣೆಯನ್ನು ಮತ್ತು ಬರಲಿರುವ ಅಪಾಯಗಳನ್ನು ಎದುರಿಸಲು ಯಾವ ಬಗೆಯ ಧೋರಣೆಯನ್ನು ಇಟ್ಟುಕೊಂಡಿದೆ ಎಂಬುದನ್ನು ಸ್ಪಷ್ಟ ಪಡಿಸುವುದರಿಂದ ಆ 11 ಸಮರ್ಥನೆಗಳನ್ನು ಹಾಗೂ ಅದರ ಸತ್ಯಾಸತ್ಯತೆಗಳನ್ನು ದೇಶದ ಜನ ಅರ್ಥಮಾಡಿಕೊಳ್ಳುವ ಅಗತ್ಯವಿದೆ.

ಸಮರ್ಥನೆ-1: ಮೋದಿ ಸರಕಾರಕ್ಕೆ ಎರಡನೇ ಅಲೆಯ ಬಗ್ಗೆ ಮಾಹಿತಿ ಮತ್ತು ತಯಾರಿ ಇರಲಿಲ್ಲ ಎಂಬುದು ಸುಳ್ಳು. ಮಾರ್ಚ್ 17ರಂದೇ ಪ್ರಧಾನಿಗಳು ಮುಖ್ಯಮಂತ್ರಿಗಳ ಸಭೆ ಕರೆದು ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದರು. 

ವಾಸ್ತವ: ಮಾರ್ಚ್ 17ರಂದು ಸಭೆ ಕರೆದಿದ್ದು ನಿಜ. ಆದರೆ ಕೇಳಬೇಕಿರುವ ಪ್ರಶ್ನೆ ವಿಶ್ವ ಆರೋಗ್ಯ ಸಂಸ್ಥೆ 2020ರ ಅಕ್ಟೋಬರ್‌ನಲ್ಲೇ ಭಾರತದಲ್ಲಿ 1.617 ಕೊರೋನ ಮ್ಯುಟೆಂಟ್ ವೈರಸ್ ಪತ್ತೆಯಾಗಿರುವುದನ್ನು ಗಮನಕ್ಕೆ ತಂದಿದ್ದರೂ ಮಾರ್ಚ್ ಕೊನೆಯ ತನಕ ಸುಮ್ಮನಿದ್ದಿದ್ದೇಕೆ? ಮತ್ತು ಮಾರ್ಚ್ ನಂತರವಾದರೂ ಕೇಂದ್ರ ಸರಕಾರ ಎಷ್ಟು ಗಂಭೀರವಾಗಿತ್ತು? ಏನು ಕ್ರಮಗಳನ್ನು ತೆಗೆದುಕೊಂಡಿತು? ವಾಸ್ತವದಲ್ಲಿ ಬದಲಾಗುತ್ತಿರುವ ಈ ಕೊರೋನ ವೈರಸ್‌ಗಳ ಜಿನೋಮ್ ಸೀಕ್ವೆನ್ಸಿಂಗ್ ಮಾಡಿ ಜಾಗತಿಕ ಸಮುದಾಯಕ್ಕೆ ಮಾಹಿತಿ ನೀಡುವುದು ಭಾರತ ಸರಕಾರದ ಕರ್ತವ್ಯವಾಗಿತ್ತು. ಆದರೆ ಅಂತಹ ಅಧ್ಯಯನ ಮಾಡುವ ಸಮಿತಿಯನ್ನು (INSACOG) ರಚಿಸಿದ್ದೇ ಡಿಸೆಂಬರ್‌ನಲ್ಲಿ. ಆದರೂ ಮಾರ್ಚ್ ಕೊನೆಯತನಕ ನಿಯಮಿತವಾಗಿ ಹಾಗೂ ವಿಸ್ತೃತವಾಗಿ ಜಿನೋಮ್ ಸೀಕ್ವೆನ್ಸಿಂಗ್ ಮಾಡಲು ಬೇಕಾದ ಸಂಪನ್ಮೂಲಗಳನ್ನೇ ಒದಗಿಸಲಿಲ್ಲ. ಆದರೂ ವಿಜ್ಞಾನಿಗಳು ಫೆಬ್ರವರಿಯಲ್ಲೇ ಭಾರತಕ್ಕೆ ಎರಡನೇ ಅಲೆ ಅಪ್ಪಳಿಸುವ ಬಗ್ಗೆ ಮಾಹಿತಿ ನೀಡಿದ್ದರು. ಸರಕಾರ ಅದನ್ನು ಒಪ್ಪಿಕೊಳ್ಳಲು ತಯಾರಿರಲಿಲ್ಲ.
ಮೊದಲ ಅಲೆಯ ದಾಳಿಯಿಂದ ಬಚಾವಾದ ದೇಶಗಳಲ್ಲಿ ಆಗಲೇ ಎರಡನೇ ಅಲೆಯು ಕಾಣಿಸಿಕೊಳ್ಳುತ್ತಿದ್ದರೂ ಭಾರತದ ನಾಯಕತ್ವ ಮಾತ್ರ ಭಾರತವು ಇತರ ದೇಶಗಳಿಗಿಂತ ಭಿನ್ನ ಎಂದು ಭಾವಿಸಿಕೊಂಡಿತ್ತು.

ಬಿಜೆಪಿ ಸರಕಾರದ ಮತ್ತು ನಾಯಕರ ಈ ಧೋರಣೆಗಳು ಜನವರಿಯಲ್ಲಿ ವಿಶ್ವ ಆರ್ಥಿಕ ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾರತ ಕೊರೋನ ವಿರುದ್ಧದ ಯುದ್ಧದಲ್ಲಿ ಗೆಲುವು ಸಾಧಿಸಿದೆ ಎಂದು ಕೊಚ್ಚಿಕೊಂಡಿದ್ದರಲ್ಲಿ, INSACOG ಎಚ್ಚರಿಕೆ ನೀಡಿದ ನಂತರವೂ ಮಾರ್ಚ್ 7ರಂದು ಭಾರತ ಸರಕಾರದ ಆರೋಗ್ಯ ಮಂತ್ರಿ ‘‘ಭಾರತ ಕೊರೋನ ವಿರುದ್ಧದ ಯುದ್ಧದ ಅಂತ್ಯದಲ್ಲಿದೆ’’ ಎಂದು ಕೊಚ್ಚಿಕೊಂಡಿದ್ದರಲ್ಲಿ ಸ್ಪಷ್ಟವಾಗಿ ಬಯಲಾಗಿತ್ತು. ಇನ್ನು ಮಾರ್ಚ್ 17ರಂದು ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಿದ್ದು ನಿಜವಾದರೂ ಮೋದಿ ಸರಕಾರ ಹಾಗೂ ಬಿಜೆಪಿ ಪಕ್ಷದ ರಾಜ್ಯ ಸರಕಾರಗಳು ಮತ್ತು ನಾಯಕರು ಯಾವ ತಯಾರಿ ಅಥವಾ ಎಚ್ಚರಿಕೆಗಳನ್ನು ಪಾಲಿಸಿದರು?

ಐದು ರಾಜ್ಯಗಳ ಚುನಾವಣೆಯಲ್ಲಿ ಅದರಲ್ಲೂ ಅಸ್ಸಾಂ ಮತ್ತು ಬಂಗಾಳ ಚುನಾವಣೆಯಲ್ಲಿ ಗೆಲ್ಲುವುದು ಅತ್ಯಗತ್ಯವಾಗಿದ್ದರಿಂದ ಕೊರೋನ ಅಪಾಯವನ್ನು ಸಾಧ್ಯವಾದಷ್ಟು ಮರೆಮಾಚುವ ಅಥವಾ ಕಡೆಗಣಿಸುವ ಧೋರಣೆ ಹಾಗೂ ಕ್ರಮಗಳನ್ನೇ ಬಿಜೆಪಿ ಅನುಸರಿಸಿತು. ‘‘ಅಸ್ಸಾಮಿನಲ್ಲಿ ಕೊರೋನ ಇಲ್ಲ, ಮಾಸ್ಕ್ ಕೂಡಾ ಹಾಕಬೇಕಿಲ್ಲ’’ ಎಂದು ಅಸ್ಸಾಮಿನ ಬಿಜೆಪಿ ಆರೋಗ್ಯ ಮಂತ್ರಿ, ‘‘ಉತ್ತರಾಖಂಡದಲ್ಲಿ ತಾಯಿ ಗಂಗಾ ಹರಿಯುವುದರಿಂದ ಕುಂಭಮೇಳ ನಡೆದರೂ ಕೋವಿಡ್ ಹರಡುವುದಿಲ್ಲ’’ ಎಂದು ಅಲ್ಲಿನ ಬಿಜೆಪಿ ಮುಖ್ಯಮಂತ್ರಿ, ಚುನಾವಣಾ ರ್ಯಾಲಿಗಳಿಗೂ, ಕುಂಭಮೇಳಕ್ಕೂ, ಕೋವಿಡ್ ಹರಡುತ್ತಿರುವುದಕ್ಕೂ ಯಾವ ಸಂಬಂಧವೂ ಇಲ್ಲವೆನ್ನುವ ಬಿಜೆಪಿಯ ಗೃಹಮಂತ್ರಿ, ಕೋವಿಡ್ ಎಚ್ಚರಿಕೆಯನ್ನು ಪಾಲಿಸದೆ ಲಕ್ಷಾಂತರ ಜನ ಚುನಾವಣಾ ರ್ಯಾಲಿಗಳಲ್ಲಿ ಭಾಗವಹಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಬಿಜೆಪಿಯ ಪ್ರಧಾನ ಮಂತ್ರಿ.. ಹೀಗಾಗಿ ಮಾರ್ಚ್ 17 ಕ್ಕೆ ಸರಕಾರದ ಗಮನಕ್ಕೆ ಬಂದಿದ್ದರೂ ಬಿಜೆಪಿ ಸರಕಾರ ಅದನ್ನು ಸಂಪೂರ್ಣ ನಿರ್ಲಕ್ಷಿಸಿದ್ದೇ ಇಂದಿನ ಅಪಾಯಕ್ಕೆ ಕಾರಣವಲ್ಲವೇ?

ಸಮರ್ಥನೆ 2: ಭಾರತದ ಜನಸಂಖ್ಯೆ ಜಾಸ್ತಿ ಇರುವುದರಿಂದ ಕೋವಿಡ್ ಸೋಂಕಿತರ ಸಂಖ್ಯೆಯು ಜಾಸ್ತಿ ಇರುತ್ತೆ. ಆದರೆ ಪ್ರತಿ ಹತ್ತು ಲಕ್ಷ ಜನರಿಗೆ ಸೋಂಕಿತರ ಮತ್ತು ಸಾವಿನ ಸಂಖ್ಯೆಯಲ್ಲಿ ಭಾರತ ಉತ್ತಮ ಸ್ಥಾನದಲ್ಲಿದೆ.

ವಾಸ್ತವ:  ಭಾರತಕ್ಕಿಂತ ಚೀನಾದ ಜನಸಂಖ್ಯೆ ಜಾಸ್ತಿ. ಆದರೆ ಮೊದಲನೇ ಅಲೆಯಲ್ಲಿ ಮೊದಲ ಸ್ಥಾನದಲ್ಲಿದ್ದ ಚೀನಾ ಈಗ ಎರಡನೇ ಅಲೆಯಲ್ಲಿ ಬಾಧಿತರ ಪಟ್ಟಿಯಲ್ಲಿ 97 ಸ್ಥಾನದಲ್ಲಿದೆ. ಆದರೆ ಭಾರತ ಎರಡನೇ ಅಲೆಯಲ್ಲಿ ಅನುದಿನದ ಸೋಂಕಿತರ ಹಾಗೂ ಮರಣದ ಸಂಖ್ಯೆಯಲ್ಲಿ ಮೊದಲನೇ ಸ್ಥಾನದಲ್ಲಿದೆ! ಎರಡನೆಯದಾಗಿ ಭಾರತದಲ್ಲಿ ಸೋಂಕಿತರ ಸಂಖ್ಯೆ ಪ್ರತಿ ಹತ್ತು ಲಕ್ಷದ ಅನುಪಾತದಲ್ಲಿ ಈಗ ಹಾಲಿ ಕಡಿಮೆ ಇರುವುದು ನಿಜ. ಆದರೆ ಅದಕ್ಕೆ ಕಾರಣ ಭಾರತದಲ್ಲಿ ಸೋಂಕು ಹರಡುವುದು ಕಡಿಮೆಯಾಗಿರುವುದೋ? ಅಥವಾ ಸೋಂಕಿನ ಟೆಸ್ಟುಗಳೇ ಕಡಿಮೆಯಾಗಿರುವುದೋ? ಉದಾಹರಣೆಗೆ, 2020ರಿಂದ ಒಟ್ಟಾರೆ ಸೋಂಕುಗಳ ಪ್ರಮಾಣವನ್ನು ಗಮನಿಸಿದರೆ 33 ಕೋಟಿ ಜನಸಂಖ್ಯೆ ಇರುವ ಅಮೆರಿಕದಲ್ಲಿ ಒಟ್ಟಾರೆ 3.37 ಕೋಟಿ ಜನ ಸೋಂಕು ಪೀಡಿತರಾದರೆ, 140 ಕೋಟಿ ಜನಸಂಖ್ಯೆ ಇರುವ ಭಾರತದಲ್ಲಿ ಈವರೆಗೆ ಕೇವಲ 2.52 ಕೋಟಿ ಜನರಿಗೆ ಸೋಂಕು ತಗಲಿದೆ ಎಂಬುದು ಬಿಜೆಪಿ ಸರಕಾರ ತನ್ನ ಬೆನ್ನು ಚಪ್ಪರಿಸಿಕೊಳ್ಳಲು ಬಳಸುವ ವಾದ. ಆದರೆ ವಾಸ್ತವವೇನು? 33 ಕೋಟಿ ಜನಸಂಖ್ಯೆ ಇರುವ ಅಮೆರಿಕ 46 ಕೋಟಿ ಟೆಸ್ಟುಗಳನ್ನು ಮಾಡಿದೆ. ಅಂದರೆ ಅಲ್ಲಿನ ಎಲ್ಲಾ ಜನರಿಗೂ ಟೆಸ್ಟು ಮಾಡಿದ ನಂತರ ಅಮೆರಿಕದಲ್ಲಿ 3.37 ಕೋಟಿ ಸೋಂಕಿತರೆಂದು ಗೊತ್ತಾಗಿದೆ. ಆದರೆ 140 ಕೋಟಿ ಜನಸಂಖ್ಯೆ ಇರುವ ಭಾರತದಲ್ಲಿ ಮಾಡಿರುವ ಟೆಸ್ಟುಗಳು ಕೇವಲ 31 ಕೋಟಿ. ಅಂದರೆ ಈ ದೇಶದ ಶೇ. 78ರಷ್ಟು ಜನರಿಗೆ ಇನ್ನೂ ಟೆಸ್ಟುಗಳೇ ಆಗಿಲ್ಲ. ಹೀಗಾಗಿ ಟೆಸ್ಟುಗಳ ಸಂಖ್ಯೆಯನ್ನು ಹೆಚ್ಚಿಸಿದರೆ ಮಾತ್ರ ನಿಜವಾದ ಅಂದಾಜು ಸಿಗುತ್ತದೆ. ಸರಕಾರಿ ಅಂಕಿ-ಅಂಶದಂತೆ ನೋಡಿದರೂ ಟೆಸ್ಟುಗಳು ಆರುಪಟ್ಟು ಹೆಚ್ಚಾಗುವಂತೆ ಸೋಂಕುಗಳು ಆರು ಪಟ್ಟು ಹೆಚ್ಚಾದರೆ ಭಾರತದಲ್ಲಿ ಸೋಂಕಿತರ ಸಂಖ್ಯೆ ಅಧಿಕೃತವಾಗಿ 14 ಕೋಟಿಗೂ ಹೆಚ್ಚಿರುತ್ತದೆ.

ಸಮರ್ಥನೆ 3: ಎರಡನೇ ಅಲೆಯಲ್ಲಿ ಕೋವಿಡ್ ಹೆಚ್ಚಿರುವುದು ಪಂಜಾಬ್, ಕೇರಳ, ಮಹಾರಾಷ್ಟ್ರದಲ್ಲಿ. ಅಲ್ಲಿ ಕುಂಭಮೇಳವೂ ಇರಲಿಲ್ಲ. ಚುನಾವಣೆಯೂ ಇರಲಿಲ್ಲ.

ವಾಸ್ತವ: ಮೊನ್ನೆ ಪ್ರಧಾನಿಯವರೇ ಹೇಳಿರುವಂತೆ ಎರಡನೇ ಅಲೆಯು ಗ್ರಾಮೀಣ ಪ್ರದೇಶದಲ್ಲಿ, (ಅದರಲ್ಲೂ ಉತ್ತರ ಭಾರತದ ಗ್ರಾಮೀಣ ಪ್ರದೇಶದಲ್ಲಿ) ವಿಶೇಷವಾಗಿ ಹೆಚ್ಚುತ್ತಿದೆ. ಕುಂಭಮೇಳ ನಡೆದ ಉತ್ತರಾಖಂಡದಲ್ಲಿ ಮಾರ್ಚ್‌ಗೆ ಮುಂಚೆ ಕೇವಲ 95,000 ಪ್ರಕರಣಗಳು ದಾಖಲಾಗಿದ್ದರೂ ಮೇ ಮೊದಲ ವಾರದಲ್ಲಿ ಅದು ಮೂರು ಲಕ್ಷವನ್ನು ಮುಟ್ಟಿದೆ. ಚುನಾವಣೆ ನಡೆದ ಎಲ್ಲಾ ರಾಜ್ಯಗಳಲ್ಲೂ ಕೋವಿಡ್ ಸೋಂಕಿತರ ಪ್ರಮಾಣ ಎರಡರಿಂದ ಮೂರುಪಟ್ಟು ಹೆಚ್ಚಾಗಿದೆ. ಮೊನ್ನೆ ಕುಂಭಮೇಳದಿಂದ ಬೆಂಗಳೂರಿಗೆ ಹಿಂದಿರುಗಿದ 67 ವಯಸ್ಸಿನ ಮಹಿಳೆಯಿಂದ 33 ಜನರಿಗೆ ಕೋವಿಡ್ ಸೋಂಕು ಹರಡಿದೆ ಎಂದು ಎಲ್ಲಾ ಪತ್ರಿಕೆಗಳು ವರದಿ ಮಾಡಿದವು. ಕುಂಭಮೇಳಕ್ಕೆ ಪಂಜಾಬ್, ಹರ್ಯಾಣ, ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಕೇರಳ, ಉತ್ತರ ಪ್ರದೇಶ ರಾಜ್ಯಗಳ ಗ್ರಾಮೀಣ ಹಾಗೂ ನಗರ ಪ್ರದೇಶಗಳಿಂದ ಒಟ್ಟು 90 ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸಿದ್ದರು. ಕುಂಭಮೇಳದಲ್ಲಿ ಭಾಗವಹಿಸಿದ ಒಬ್ಬ ಮಹಿಳೆಯಿಂದ ದೂರದ ಬೆಂಗಳೂರಿನಲ್ಲಿ 33 ಜನರಿಗೆ ಕೋವಿಡ್ ಸೋಂಕು ತಗಲಿದರೆ ಒಟ್ಟಾರೆ ಚುನಾವಣೆ ಹಾಗೂ ಕುಂಭಮೇಳದ ಪರಿಣಾಮಗಳು ಏನಾಗಿರಬಹುದು? ತಬ್ಲೀಗಿಗಳಿಂದ ಬಿಜೆಪಿ ಪಕ್ಷ ಮತ್ತು ಸರಕಾರ ಇಷ್ಟೇ ಉದಾರವಾಗಿರುತ್ತಿತ್ತೇ?

ಸಮರ್ಥನೆ 4: ಕೊರೋನ ವ್ಯಾಕ್ಸಿನ್ ರಫ್ತಾಗುವುದು ಕೇವಲ ಮೂರನೇ ಒಂದು ಭಾಗ. ಉಳಿದದ್ದನ್ನು ಭಾರತೀಯರಿಗೇ ಕೊಡಲಾಗಿದೆ.

ವಾಸ್ತವ: ಭಾರತ ಸರಕಾರದ ಈ ಅಧಿಕೃತ ಟ್ವೀಟಿನಲ್ಲಿರುವ ವೀಡಿಯೊವನ್ನು ಗಮನಿಸಿ. https://twitter.com/IndiaUNNewYork/status/1375562896642605059>

 ಇದು 2021ರ ಮಾರ್ಚ್ 27ರಂದು ವಿಶ್ವ ಸಂಸ್ಥೆಯಲ್ಲಿ ಭಾರತ ಸರಕಾರದ ಪ್ರತಿನಿಧಿ ನಾಗರಾಜ್ ನಾಯ್ಡು ಅವರು ಮಾಡಿರುವ ಭಾಷಣ. ಅದರಲ್ಲಿ ಅವರು ಭಾರತವು ಮಾರ್ಚ್ 27ರ ವೇಳೆಗೆ ತನ್ನ ಜನರಿಗೆ ಕೊಟ್ಟ ವ್ಯಾಕ್ಸಿನ್‌ಗಿಂತಲೂ ಹೆಚ್ಚಿನ ವ್ಯಾಕ್ಸಿನ್ ಅನ್ನು ಜಗತ್ತಿನ 70 ದೇಶಗಳಿಗೆ ರಫ್ತು ಮಾಡಿದೆ ಎಂದು ಸ್ಪಷ್ಟವಾಗಿ ಹಾಗೂ ಅಧಿಕೃತವಾಗಿ ಹೇಳಿದ್ದರು. ಅಷ್ಟು ಮಾತ್ರವಲ್ಲ. ಎಪ್ರಿಲ್ ಕೊನೆಯ ವೇಳೆಗೆ ಕೋವಿಶೀಲ್ಡ್ ಉತ್ಪಾದಿಸಿದ 10 ಕೋಟಿ ವ್ಯಾಕ್ಸಿನ್‌ನಲ್ಲಿ 6.5 ಕೋಟಿ ವ್ಯಾಕ್ಸಿನ್‌ಗಳು ಅಂದರೆ ಮುಕ್ಕಾಲು ಪಾಲು ಹೊರದೇಶಕ್ಕೆ ರಫ್ತಾಗಿದ್ದವು.

ಸಮರ್ಥನೆ 5: ಬಡವರಿಗೆ ವ್ಯಾಕ್ಸಿನ್ ಉಚಿತವಾಗಿ ಕೊಡುವುದಿಲ್ಲ ಅನ್ನೋದು ಸುಳ್ಳು. ಕೇಂದ್ರ ಶೇ. 50 ಕೊಡುತ್ತೆ. ಬಿಜೆಪಿ ಆಳ್ವಿಕೆಯಲ್ಲಿರುವ ರಾಜ್ಯಗಳು ಉಚಿತವಾಗಿ ಕೊಡುತ್ತವೆ.
ವಾಸ್ತವ: ಭಾರತದಲ್ಲಿ ವ್ಯಾಕ್ಸಿನೀಕರಣ ಪ್ರಾರಂಭಿಸುವಾಗಲೇ ಮೋದಿ ಸರಕಾರದ ಟಾಸ್ಕ್‌ಫೋರ್ಸ್ ಅಧ್ಯಕ್ಷ ಡಾ. ವಿ. ಕೆ. ಪಾಲ್ ಅವರು ಸರಕಾರ 30 ಕೋಟಿ ಜನರಿಗೆ ಮಾತ್ರ ಉಚಿತವಾಗಿ ವ್ಯಾಕ್ಸಿನ್ ಕೊಡಲಿದೆಯೇ ಹೊರತು ಎಲ್ಲಾ ಜನರಿಗೂ ಅಲ್ಲ ಎಂದು ಸ್ಪಷ್ಟಪಡಿಸಿದ್ದರು. ಕೆಳಗಿನ ಪತ್ರಿಕಾ ವರದಿಯನ್ನು ಗಮನಿಸಿ: https://www.freepressjournal.in/india/govt-will-bear-cost-of-vaccinating-30-crore-individuals-not-the-entire-population-covid-19-task-force-head-dr-vinod-paul>

ಅಲ್ಲದೆ ಬಿಜೆಪಿ ಸರಕಾರ ಎಪ್ರಿಲ್‌ನಲ್ಲಿ ಪ್ರಕಟಿಸಿದ ವ್ಯಾಕ್ಸಿನ್ ದರ ನೀತಿಯ ಪ್ರಕಾರ 18-44 ವಯೋಮಾನದ ಯುವಜನರಿಗೆ ಭಾರತ ಸರಕಾರ ಉಚಿತವಾಗಿ ವ್ಯಾಕ್ಸಿನ್ ಸರಬರಾಜು ಮಾಡುವುದಿಲ್ಲ. ಅವರು ಅದನ್ನು ಖಾಸಗಿ ಆಸ್ಪತ್ರೆಗಳಲ್ಲಿ ಕಂಪೆನಿಗಳು ವಿಧಿಸುವ ದರ ತೆತ್ತು (ಕೋವಿಶೀಲ್ಡ್- 300 ರೂ., ಕೋವ್ಯಾಕ್ಸಿನ್ 1,200, ಸ್ಪುಟ್ನಿಕ್- 1,000 ರೂ.) ಪಡೆದುಕೊಳ್ಳಬೇಕು. ಇಂದು ಬಿಜೆಪಿ ರಾಜ್ಯ ಸರಕಾರಗಳು ಮಾತ್ರವಲ್ಲದೆ, ತ.ನಾಡು, ಕೇರಳ, ಆಂಧ್ರ ಇನ್ನಿತ್ಯಾದಿ ವಿರೋಧಿ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳು ಉಚಿತವಾಗಿ ವ್ಯಾಕ್ಸಿನ್ ಕೊಡುವುದಾಗಿ ಹೇಳಿವೆ. ಆದರೆ ಅವು ಕಂಪೆನಿಗಳು ನಿಗದಿ ಮಾಡಿದ ದರಕ್ಕೆ ತೆಗೆದು ವ್ಯಾಕ್ಸಿನ್ ಖರೀದಿಸಬೇಕಿದೆ. ಮೋದಿ ಸರಕಾರವು ಉಪಾಯವಾಗಿ ಇಡೀ ಹೊರೆಯನ್ನು ಈಗಾಗಲೇ ಆರ್ಥಿಕ ಬಿಕ್ಕಟ್ಟಿನಿಂದ ಕಂಗಾಲಾಗಿರುವ ರಾಜ್ಯ ಸರಕಾರಗಳ ಮೇಲೆ ವರ್ಗಾಯಿಸಿ ಕೈ ತೊಳೆದುಕೊಂಡಿದೆ.

ಸಮರ್ಥನೆ 6: ವ್ಯಾಕ್ಸಿನ್ ದರ ಕೇಂದ್ರಕ್ಕೊಂದು- ರಾಜ್ಯಕ್ಕೊಂದು ಆಗಲು ಕಾರಣ ದರ ನಿಗದಿ ಮಾಡುವುದು ಖಾಸಗಿ ಕಂಪೆನಿಗಳು. ಕೇಂದ್ರ ಸರಕಾರವಲ್ಲ.

ವಾಸ್ತವ: ಎಪ್ರಿಲ್ 2021ಕ್ಕೆ ಮುಂಚೆ ವ್ಯಾಕ್ಸಿನ್ ಕಂಪೆನಿಗಳು ಎರಡು ದರಗಳನ್ನು ವಿಧಿಸುವ ಅವಕಾಶವಿರಲಿಲ್ಲ. ಆದರೆ ಎಪ್ರಿಲ್ 19ರಂದು ಮೋದಿ ಸರಕಾರವು ಕಂಪೆನಿಗಳ ಲಾಭವನ್ನು ಹೆಚ್ಚಿಸುವ ಸಲುವಾಗಿ ಹೊಸ ವ್ಯಾಕ್ಸಿನ್ ನೀತಿ ಘೋಷಿಸಿತು. (https://pib.gov.in/PressReleseDetail.aspx?PRID=1712710). ಈ ನೀತಿಯಿಂದಾಗಿಯೇ ವ್ಯಾಕ್ಸಿನ್ ಕಂಪೆನಿಗಳಿಗೆ ತಮಗೆ ಬೇಕಾದ ದರವನ್ನು ನಿಗದಿಪಡಿಸುವ ಅವಕಾಶ ನೀಡಲಾಯಿತು. ಮೋದಿ ಸರಕಾರದ ಬದಲಾದ ನೀತಿಯೇ ದುಬಾರಿ ಹಾಗೂ ಭಿನ್ನ ವ್ಯಾಕ್ಸಿನ್ ದರಗಳಿಗೆ ಕಾರಣ.

ಸಮರ್ಥನೆ 7: ಸರಕಾರ ಅಸಮರ್ಥ ಎನ್ನುವ ಕೆಲವು ಮಾಧ್ಯಮಗಳೇ ಸಾವಿನ ಸಂಖ್ಯೆಯನ್ನು ಕಡಿಮೆ ಮಾಡಿ ತೋರಿಸುವ ದಂಧೆ ನಡೆಸುವಲ್ಲಿ ಸರಕಾರ ಸಮರ್ಥವಾಗಿದೆ ಎನ್ನುವುದು ಹಾಸ್ಯಾಸ್ಪದ.

ವಾಸ್ತವ: ಕೋವಿಡ್ ಕಾರಣಗಳಿಗೆ ಸತ್ತವರ ಸಂಖ್ಯೆಯನ್ನು ಕಡಿಮೆ ಮಾಡಿ ತೋರಿಸುತ್ತಿರುವುದು ವಿಶೇಷವಾಗಿ ಬಿಜೆಪಿ ಆಳ್ವಿಕೆಯಲ್ಲಿರುವ ರಾಜ್ಯಗಳೇ. ಕಳೆದ ಕೆಲವು ವಾರಗಳಲ್ಲಿ ಗುಜರಾತ್, ಉತ್ತರ ಪ್ರದೇಶಗಳಲ್ಲಿ ಕೋವಿಡ್ ವಿಧಿವಿಧಾನದಂತೆ ಅಂತ್ಯಕ್ರಿಯೆ ನಡೆಸಿದ ಹೆಣಗಳ ಸಂಖ್ಯೆ ಹಾಗೂ ಅಧಿಕೃತವಾಗಿ ಆಯಾ ಬಿಜೆಪಿ ಸರಕಾರಗಳು ಪ್ರಕಟಿಸಿರುವ ಕೋವಿಡ್ ಸಾವುಗಳ ಸಂಖ್ಯೆಗಳ ವರದಿಗಳಲ್ಲಿರುವ ವ್ಯತ್ಯಾಸಗಳ ಬಗ್ಗೆ ಸಂಶೋಧನಾ ವರದಿಗಳು ಪ್ರಕಟವಾಗುತ್ತಿವೆ. ಒಂದು ಅಂದಾಜಿನ ಪ್ರಕಾರ ಬಿಜೆಪಿ ಆಳ್ವಿಕೆಯಲ್ಲಿರುವ ಸರಕಾರಗಳು ನೈಜ ಸಾವಿನ ಸಂಖ್ಯೆಯನ್ನು 3ರಿಂದ 30ಪಟ್ಟು ಕಡಿಮೆ ಮಾಡಿ ತೋರಿಸುತ್ತಿವೆ.

ಉದಾಹರಣೆಗೆ ಗುಜರಾತಿನ ‘ದಿವ್ಯಾ ಭಾಸ್ಕರ್’ ಪತ್ರಿಕೆಯ ಈ ವರದಿ:
https://twitter.com/deepakpatel_91/status/1390158373841113089

ಹಾಗೂ ‘ಆರ್ಟಿಕಲ್ 14’ ಎಂಬ ವೆಬ್ ಪತ್ರಿಕೆ ಗುಜರಾತ್, ಉ.ಪ್ರದೇಶ ಮತ್ತು ಬಿಹಾರಗಳ ಕೋವಿಡ್ ಸಾವುಗಳ ಸಂಖ್ಯೆಯ ಬಗ್ಗೆ ಮಾಡಿರುವ ಈ ವರದಿಗಳನ್ನು ಗಮನಿಸಿ
https://www.article-14.com/post/bjp-states-hiding-covid-19-deaths-are-endangering-india-s-health-response

ಸಮರ್ಥನೆ 8: ಸೆಂಟ್ರಲ್ ವಿಸ್ತಾ ಯೋಜನೆಗೂ ವ್ಯಾಕ್ಸಿನೇಷನ್ನಿಗೂ ಸಂಬಂಧವಿಲ್ಲ. ಭಾರತದ ಆರೋಗ್ಯ ಬಜೆಟ್ ವಿಸ್ತಾ ಯೋಜನೆಯ ಹತ್ತುಪಟ್ಟು.

ವಾಸ್ತವ: ಅಸಲಿ ಪ್ರಶ್ನೆ ಕೋವಿಡ್ ನಿಭಾಯಿಸಲು ಸಂಪನ್ಮೂಲಗಳಿಲ್ಲ ಎಂದು ಸರಕಾರಗಳು ಹೇಳುತ್ತಿರುವಾಗ ಸೆಂಟ್ರಲ್ ವಿಸ್ತಾ, ಬುಲೆಟ್ ಟ್ರೈನ್‌ನಂತಹ ತುರ್ತಿಲ್ಲದ ಮತ್ತು ಅನಗತ್ಯವಾದ ವೆಚ್ಚಗಳು ಬೇಕೇ ಎಂಬುದು. ಇಂದು ದೇಶಾದ್ಯಂತ ಜನ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಸಿಲಿಂಡರ್‌ಗಳಿಲ್ಲದೆ, ವೆಂಟಿಲೇಟರ್‌ಗಳಿಲ್ಲದೆ, ಕನಿಷ್ಠ ವೈದ್ಯಕೀಯ ಸೌಕರ್ಯಗಳಿಲ್ಲದೆ, ದುಬಾರಿ ವ್ಯಾಕ್ಸಿನ್‌ಗಳನ್ನು ಹಾಕಿಸಿಕೊಳ್ಳಲಾಗದೆ ಸಾಯುತ್ತಿರುವಾಗ ಅನಗತ್ಯವಾದ ಅಥವಾ ತುರ್ತಿಲ್ಲದ ಎಲ್ಲಾ ವೆಚ್ಚಗಳನ್ನು ನಿಲ್ಲಿಸಿ ಅಥವಾ ಮುಂದೂಡಿ ಅದನ್ನು ಕೋವಿಡ್ ನಿಗ್ರಹಕ್ಕೆ ಬೇಕಿರುವ ಸೌಲಭ್ಯಗಳಿಗಾಗಿ ವಿನಿಯೋಗಿಸುವ ಯಾವುದೇ ಜವಾಬ್ದಾರಿ ಸರಕಾರದ ಕರ್ತವ್ಯ.

 ಸಮರ್ಥನೆ 9: ಭಾರತದ ಎಲ್ಲರಿಗೂ ವ್ಯಾಕ್ಸಿನ್ ಹಾಕಲು ವರ್ಷಗಳಾಗುತ್ತವೆ ಅನ್ನೋದು ತಪ್ಪು. ಮೇ 1ರಿಂದ ಎಲ್ಲರಿಗೂ ಕೊಡಲಾಗುತ್ತಿದೆ.
ವಾಸ್ತವ: ಮೊದಲನೆಯದಾಗಿ ವ್ಯಾಕ್ಸಿನ್ ಕೊರತೆಯಿಂದಾಗಿ ಕರ್ನಾಟಕವನ್ನೂ ಒಳಗೊಂಡಂತೆ ಬಹುಪಾಲು ರಾಜ್ಯಗಳಲ್ಲಿ 18 ವಯಸ್ಸಿನ ಮೇಲ್ಪಟ್ಟವರಿಗೆ ವ್ಯಾಕ್ಸಿನ್ ನಿಲ್ಲಿಸಲಾಗಿದೆ. ಎರಡನೆಯದಾಗಿ, ಭಾರತದಲ್ಲಿ ಕೋವಿಡ್ ನಿಯಂತ್ರಣಕ್ಕೆ ಬರಲು ಕನಿಷ್ಠ 100 ಕೋಟಿ ಜನರಿಗಾದರೂ ವ್ಯಾಕ್ಸಿನ್ ಅನ್ನು ಮುಂದಿನ ಕೆಲವು ತಿಂಗಳಲ್ಲಿ ಹಾಕಬೇಕು. ಅಂದರೆ 200 ಕೋಟಿ ಡೋಸುಗಳಷ್ಟು ವ್ಯಾಕ್ಸಿನ್ ಬೇಕು. ಭಾರತದಲ್ಲಿ ವ್ಯಾಕ್ಸಿನ್ ಉತ್ಪಾದಿಸುತ್ತಿರುವ ಕೋವಿಶೀಲ್ಡ್‌ನ ಉತ್ಪಾದನಾ ಸಾಮರ್ಥ್ಯ ತಿಂಗಳಿಗೆ 10 ಕೋಟಿ. ಅದರಲ್ಲಿ ಅದು ಕನಿಷ್ಠ 4-5 ಕೋಟಿಯನ್ನು ವಿದೇಶಕ್ಕೆ, ಭಾರತ ಸರಕಾರ ಮೊದಲು ಒಪ್ಪಂದ ಮಾಡಿಕೊಂಡಿದ್ದ ದೇಶಗಳಿಗೆ ರಫ್ತು ಮಾಡಬೇಕು. ಕೋವ್ಯಾಕ್ಸಿನ್ ಸಾಮರ್ಥ್ಯ ತಿಂಗಳಿಗೆ 1 ಕೋಟಿ. ಅವೆರಡು ಹೆಚ್ಚೆಂದರೆ ತಮ್ಮ ಸಾಮರ್ಥ್ಯಗಳನ್ನು ಜಂಟಿಯಾಗಿ ತಿಂಗಳಿಗೆ 15 ಕೋಟಿಗೆ ವಿಸ್ತರಿಸಿಕೊಳ್ಳಬಹುದು. ಅದರಲ್ಲಿ ಭಾರತಕ್ಕೆ ದಕ್ಕುವುದು ಮತ್ತೆ 10 ಕೋಟಿ ಮಾತ್ರ. ಅದರಲ್ಲಿ ಕನಿಷ್ಠ ಶೇ. 6ರಷ್ಟು ವೇಸ್ಟೇಜ್ ಆಗುತ್ತದೆ. ಅಂದರೆ 200 ಕೋಟಿ ವ್ಯಾಕ್ಸಿನ್ ಸಿಗಲು 20 ತಿಂಗಳು ಅಂದರೆ ಹೆಚ್ಚೂ ಕಡಿಮೆ ಎರಡು ವರ್ಷ ಬೇಕು. ಆದರೆ ಮೊನ್ನೆ ಸರಕಾರ ಇನ್ನೂ ಐದು ಹೊಸ ವ್ಯಾಕ್ಸಿನ್‌ಗಳಿಗೆ (Bio e Sub Vaacine, Zydus Cadilla, SII Novavax, BB Nasal, Genova mRna)ಅವಕಾಶ ಮಾಡಿಕೊಟ್ಟಿದ್ದು ಒಟ್ಟಾರೆ ಸೆಪ್ಟಂಬರ್ ವೇಳೆಗೆ ಭಾರತಕ್ಕೆ 216 ಕೋಟಿ ವ್ಯಾಕ್ಸಿನ್ ಲಭ್ಯವಾಗಲಿದೆ ಎಂದು ಹೇಳಿದೆ. ಅದರೆ ಈ ಐದು ಹೊಸ ವ್ಯಾಕ್ಸಿನ್‌ಗಳು ಅತ್ಯಗತ್ಯವಾದ ಹ್ಯೂಮನ್ ಟ್ರಯಲ್‌ಗಳನ್ನೇ ಪೂರ್ತಿ ಮಾಡಿಲ್ಲ. ಟ್ರಯಲ್‌ಗಳ ಫಲಿತಾಂಶ ಏನಾಗುವುದೋ ಗೊತ್ತಿಲ್ಲ. ಹಾಗಿದ್ದಲ್ಲಿ ಸೂಕ್ತ ಫಲಿತಾಂಶ ಬರುವ ಮುನ್ನವೇ ಭಾರತೀಯರ ಮೇಲೆ ಬಿಜೆಪಿ ಸರಕಾರ ಅದನ್ನು ಪ್ರಯೋಗಿಸಲಿದೆಯೇ?

ಸಮರ್ಥನೆ 10: ಕೋವಿಡ್ ವ್ಯಾಕ್ಸಿನ್ ಬಗ್ಗೆ ವಿರೋಧ ಪಕ್ಷಗಳು ಪ್ರಾರಂಭದಲ್ಲಿ ಅನಗತ್ಯ ಸಂದೇಹಗಳನ್ನು ಹುಟ್ಟಿಹಾಕಿದವು.

ವಾಸ್ತವ: ವ್ಯಾಕ್ಸಿನ್‌ಗಳನ್ನು ಸಾರ್ವಜನಿಕರಿಗೆ ಕೊಡುವ ಮುನ್ನ ಅವನ್ನು ಪ್ರಾಣಿಗಳ ಮೇಲೆ ಮತ್ತು ಆ ನಂತರ ಮೂರು ಹಂತದಲ್ಲಿ ಮನುಷ್ಯರ ಮೇಲೆ ಪ್ರಯೋಗ ಮಾಡಬೇಕು. ಅವುಗಳ ರೋಗ ನಿರೋಧಕ ಸಾಮರ್ಥ್ಯ, ಪರಿಣಾಮ ಇನ್ನಿತ್ಯಾದಿಗಳ ವರದಿಗಳನ್ನು ಸಾರ್ವಜನಿಕಗೊಳಿಸಬೇಕು. ಪರಿಣಿತರಿಗೆ ಒದಗಿಸಿ ಒಪ್ಪಿಗೆ ಪಡೆಯಬೇಕು. ಆ ನಂತರವೇ ಅದನ್ನು ಸಾರ್ವಜನಿಕ ಬಳಕೆಗೆ ಬಿಡಬೇಕು. ಆದರೆ ಕೋವ್ಯಾಕ್ಸಿನ್ ಮೂರನೇ ಟ್ರಯಲ್ ಅನ್ನು ಪ್ರಾರಂಭಿಸಿದ್ದೇ ಜನವರಿಯಲ್ಲಿ. ಆದರೂ ಬಿಜೆಪಿ ಸರಕಾರ ದೇಶೀ ವ್ಯಾಕ್ಸಿನ್ ಎಂಬ ಹುಸಿ ಹೆಮ್ಮೆಯನ್ನು ಕೊಚ್ಚಿಕೊಳ್ಳಲು ಜನವರಿಯಲ್ಲೇ ಅದಕ್ಕೆ ಅನುಮತಿಯನ್ನು ಕೊಡುವ ಅಪಾಯಕಾರಿ ನಿರ್ಧಾರವನ್ನು ತೆಗೆದುಕೊಂಡಿತು. ಅದನ್ನು ವಿರೋಧಿಸಿ ವಿರೋಧ ಪಕ್ಷಗಳು ಮಾತ್ರವಲ್ಲ, ಇಂದು ಕರ್ನಾಟಕದ ಬಿಜೆಪಿ ಸರಕಾರ ರಚಿಸಿರುವ ಕೋವಿಡ್ ಮೂರನೇ ಅಲೆ ನಿಗ್ರಹ ಸಮಿತಿಯ ಸದಸ್ಯರಾದ ಭಾರತದ ಪ್ರಖ್ಯಾತ ವೈರಾಣು ತಜ್ಞೆ ಗಗನ್ ದೀಪ್ ಕಾಂಗ್ ಅವರೂ ಎಲ್ಲಿಯ ತನಕ ಕೋವ್ಯಾಕ್ಸಿನ್ ಮೂರನೇ ಟ್ರಯಲ್ಲಿನ ಫಲಿತಾಂಶ ಹೊರಬರುವುದಿಲ್ಲವೋ ಅಲ್ಲಿಯವರೆಗೆ ಅದನ್ನು ಬಳಸಬಾರದು ಎಂದು ಸೂಚಿಸಿದ್ದರು. ಇದು ಅನಗತ್ಯ ಸಂದೇಹವಲ್ಲ. ಅತ್ಯಗತ್ಯ ಮುನ್ನೆಚ್ಚರಿಕೆ.

ಸಮರ್ಥನೆ 11: ನ್ಯೂಝಿಲ್ಯಾಂಡ್ ಪ್ರಧಾನಿಯೇ ಭಾರತದ ಪ್ರಧಾನಿಯಾಗಿದ್ದರೆ ಭಾರತ ಬಚಾವಾಗುತ್ತಿತ್ತು ಎಂಬುದು ಹಾಸ್ಯಾಸ್ಪದ. ಏಕೆಂದರೆ ಅಲ್ಲಿನ ಜನಸಂಖ್ಯೆ ಕಡಿಮೆ.

ವಾಸ್ತವ: ನ್ಯೂಝಿಲ್ಯಾಂಡ್ ಪ್ರಧಾನಿಯವರು ಹಾಗೂ ಅವರಂತೆ ಜಗತ್ತಿನ ಇನ್ನೂ ಕೆಲವು ಪ್ರಜಾತಾಂತ್ರಿಕ ದೇಶಗಳ ಪ್ರಧಾನಿಗಳು-ಅಧ್ಯಕ್ಷರು ತಮ್ಮ ದೇಶವನ್ನು ಕೋವಿಡ್ ದಾಳಿಯಿಂದ ಬಚಾವು ಮಾಡಲು ವೈಜ್ಞಾನಿಕ ದೃಷ್ಟಿಕೋನ, ದೂರಗಾಮಿ ಮುನ್ನೆಚ್ಚರಿಕೆಯನ್ನೂ, ವ್ಯಾಕ್ಸಿನ್ ಇನ್ನಿತ್ಯಾದಿ ಸೌಲಭ್ಯಗಳಿಗೆ ಮುಂಚಿತವಾಗಿ ತಯಾರಿಯನ್ನು, ಕೋವಿಡ್ ವಿರುದ್ಧ ವರ್ಣ-ಧರ್ಮ ಬೇಧಗಳಿಲ್ಲದ ರಾಷ್ಟ್ರೀಯ ಒಗ್ಗಟ್ಟನ್ನೂ ರೂಪಿಸಿ ಇಂದು ಎರಡನೇ ಅಲೆಯಿಂದ ತಮ್ಮ ದೇಶವನ್ನು ಪಾರು ಮಾಡಿಕೊಂಡರು. ಈ ದೇಶಗಳು ಬಚಾವಾಗಿದ್ದು ಅದರ ಜನಸಂಖ್ಯೆ ಕಡಿಮೆ ಇದ್ದದ್ದರಿಂದಲ್ಲ. ಆ ದೇಶಗಳ ರಾಜಕೀಯ ನಾಯಕತ್ವ ಕೋವಿಡ್ ಯುದ್ಧದಲ್ಲಿ ಅನುಸರಿಸಿದ ವೈಜ್ಞಾನಿಕ-ಪ್ರಜಾತಾಂತ್ರಿಕ ಧೋರಣೆಗಳಿಂದಾಗಿ. ಆದರೆ ಭಾರತದಲ್ಲಿ ಮೋದಿ ನೇತೃತ್ವದ ಬಿಜೆಪಿ ಸರಕಾರ ಕೋವಿಡ್ ಯುದ್ಧದಲ್ಲಿ ಗೆದ್ದೆವೆಂಬ ಹುಸಿ ಅತ್ಮರತಿಯಲ್ಲಿ ತೊಡಗಿ ಯಾವ ಮುನ್ನೆಚ್ಚರಿಕೆ ಹಾಗೂ ತಯಾರಿಗಳನ್ನೂ ಮಾಡಿಕೊಳ್ಳಲಿಲ್ಲ. ವೈಜ್ಞಾನಿಕ ಧೋರಣೆಗೆ ಬದಲಾಗಿ ಜಾಗಟೆ ವೈದ್ಯ, ದೀಪ ಬೆಳಗುವ, ‘ಗೋ ಕೊರೋನ ಗೋ’ ಮಂತ್ರ ಪಠಿಸುವ, ಗಂಜಲ-ಸೆಗಣಿ ಬಳಸುವ ಮೂಲಕ ಕೋವಿಡ್ ಗೆಲ್ಲುತ್ತೇವೆಂಬ, ಕೋವಿಡ್‌ಗೂ ಬದುಕುವ ಹಕ್ಕಿದೆ ಎಂದು ವಾದಿಸುವ ಮೌಢ್ಯಕ್ಕೆ ದೇಶವನ್ನು ತಳ್ಳಿತು.

ಮತ್ತೊಂದೆಡೆ ಕೊರೋನವನ್ನೂ ಕೋಮುವಾದೀಕರಿಸುವ ಹಾಗೂ ಕೋವಿಡ್ ನಿರ್ಬಂಧದ ನೆಪದಲ್ಲಿ ವಿರೋಧಿಗಳನ್ನು ಬಗ್ಗುಬಡಿಯುವ ಅಪ್ರಜಾತಾಂತ್ರಿಕ ಫ್ಯಾಶಿಸ್ಟ್ ಕ್ರಮವನ್ನು ಅನುಸರಿಸಿ ಕೋವಿಡ್ ಎರಡನೇ, ಮೂರನೇ, ನಾಲ್ಕನೇ ಅಲೆಗಳಿಗೆ ಸೂಕ್ತವಾದ ವಾತಾವರಣವನ್ನು ನಿರ್ಮಿಸಿದೆ. ರಾಜಕೀಯ ಬದಲಾಗದೆ ಭಾರತ ಮೂರನೇ ಅಲೆಯಿಂದ ಪಾರಾಗುವುದಿಲ್ಲ. ಏಕೆಂದರೆ ಭಾರತದಲ್ಲಿ ಕೋವಿಡ್ ವೈದ್ಯಕೀಯ ಸಮಸ್ಯೆಗಿಂತ ಹೆಚ್ಚಾಗಿ ರಾಜಕೀಯ ಸಮಸ್ಯೆಯೇ ಹೆಚ್ಚಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)