ಆಧುನಿಕ ಭಾರತದ ಮೊದಲ ಕ್ರಾಂತಿಕಾರಿ: ಅಯೋದಿ ದಾಸ್
ಇಂದು ಪಂಡಿತ್ ಅಯೋದಿ ದಾಸ್ ಅವರ ಜನ್ಮದಿನ
ಭಾರತದ ದಲಿತ ರಾಜಕೀಯ ಇತಿಹಾಸದಲ್ಲಿ ತಮಿಳುನಾಡು ವಿಶೇಷ ಸ್ಥಾನಮಾನವನ್ನು ಹೊಂದಿದೆ. 19ನೇ ಶತಮಾನದ ಅಂತ್ಯ ಕಾಲದಲ್ಲಿ ವಿವಿಧ ಬುದ್ಧಿ ಜೀವಿಗಳು, ಚಳವಳಿಗಾರರು, ಸಂಘಟನಾ ನಾಯಕರು ಹುಟ್ಟಿಕೊಂಡರು. ಅವರಲ್ಲಿ ಪ್ರಮುಖರು ಪಂಡಿತ್ ಅಯೋದಿ ದಾಸ್. ತಮಿಳುನಾಡಿನಲ್ಲಿ ಪರೈಯ(ಹೊಲೆಯ) ಜಾತಿಗೆ ಸೇರಿದ ಅಯೋದಿ ದಾಸ್, ತಂದೆ ಕಂದಸಾಮಿ, ತಾಯಿ ಆದಿಲಕ್ಷ್ಮ್ಮೀ ಅವರ ಮಗನಾಗಿ 20 ಮೇ, 1845ರಲ್ಲಿ ಜನಿಸಿದರೆ, ಅವರು ಮರಣ ಹೊಂದಿದ್ದು 1914ರಲ್ಲಿ. ಅವರ ಒಟ್ಟು ಬದುಕಿನ ಪಯಣ 69 ವರ್ಷಗಳು. ಇಂದು ಅವರ 176ನೇ ಜನ್ಮದಿನ. ಅಯೋದಿ ದಾಸ್ ಜನಿಸಿದ್ದು ಚೆನ್ನೈನ ಸಿದ್ಧ ಔಷಧ ಮಾಡುವ ಕುಟುಂಬದಲ್ಲಿ. ಇಡೀ ಚೆನ್ನೈನ ಹಲವು ರೋಗ ರುಜಿನಗಳಿಗೆ ಔಷಧಿ ಕೊಡುತ್ತಿದ್ದವರೇ ಅಯೋದಿ ದಾಸ್. ಇದರ ಜೊತೆಗೆ ಶಾಸ್ತ್ರೀಯ ತಮಿಳು ಸಾಹಿತ್ಯ, ತತ್ವಶಾಸ್ತ್ರ, ಇಂಗ್ಲಿಷ್, ಸಂಸ್ಕೃತ ಮತ್ತು ಪಾಲಿ ಭಾಷೆಗಳನ್ನು ಕರಗತ ಮಾಡಿಕೊಂಡಿದ್ದರು. ಅಯೋದಿ ದಾಸ್ ಅವರದು ಸಿದ್ಧ ಔಷಧ ಕುಟುಂಬವಾದರೂ, ಇವರ ತಾತ ಕಂದಪ್ಪನ್ ಮಾತ್ರ ಬ್ರಿಟಿಷ್ ಕಮಿಷನರ್ ನಿವಾಸಗಳಲ್ಲಿ ಸರಕಾರಿ ಬಟ್ಲರ್ (ಅಡುಗೆ ಮಾಡುವ) ಕೆಲಸದಲ್ಲಿದ್ದರು. ಅಂದಿನ ವಸಾಹತು ಕಾಲದ ಸಂದರ್ಭದಲ್ಲಿ ಬಂಗಾಳ, ತಮಿಳುನಾಡು ಪ್ರಾಂತಗಳಲ್ಲಿ ಏಕರೂಪವಾಗಿ ಬ್ರಿಟಿಷರ ನಿವಾಸಗಳಲ್ಲಿ ಕೆಲಸ ಮಾಡುತ್ತಿದ್ದವರು ದಲಿತರೇ ಆಗಿದ್ದರು.
ಮದ್ರಾಸ್ ಅನ್ನು ಬೇಸಿಗೆಯ ರಾಜಧಾನಿ ಎಂದು ಕರೆಯುತ್ತಿದ್ದರು. ಬ್ರಿಟಿಷರ ಬಳಿ ಸೇವೆ ಸಲ್ಲಿಸುತ್ತಿದ್ದ ನೌಕರರನ್ನು ವರ್ಗಾವಣೆ ಮಾಡುವ ಸಂದರ್ಭ ಬಂದಾಗ, ಮದ್ರಾಸ್ನಿಂದ ತಾತ ಕಂದಪ್ಪನ್ ಅವರನ್ನು ಉದಕಮಂಡಲ (ಈಗಿನ ಊಟಿ)ದ ಗಿರಿಧಾಮವೊಂದಕ್ಕೆ ವರ್ಗಾಯಿಸಲಾಯಿತು. ಈ ಕಾರಣದಿಂದ ಅಯೋದಿ ದಾಸ್ ಊಟಿಯಲ್ಲಿಯೇ ಬೆಳೆದರು. ಅವರ ಸಾಮಾಜಿಕ ಹೋರಾಟದ ಬದುಕು ಕೂಡ ಅಲ್ಲಿಂದಲೇ ಪ್ರಾರಂಭವಾಯಿತು. 1870ರಲ್ಲಿ ಊಟಿಯ ನೀಲಗಿರೀಸ್ನಲ್ಲಿ ತೋಡ ಬುಡಕಟ್ಟು ಜನಾಂಗವನ್ನು ಸಂಘಟಿಸುವ ಮೂಲಕ ಅವರ ಹೋರಾಟ ಆರಂಭವಾಗಿತ್ತು. ಈ ಹೋರಾಟವು 1885ರಲ್ಲಿ ದ್ರಾವಿಡ ಪಾಂಡಿಯನ್ ನಿಯತಕಾಲಿಕೆ ಮತ್ತು ಜನರಿಗೆ ಭೂಮಿ, ಶಿಕ್ಷಣ ಹಾಗೂ ಇತರೆ ನಾಗರಿಕ ಹಕ್ಕುಗಳಿಗೆ ಕೆಲಸ ಮಾಡಲು 1891ರಲ್ಲಿ 'ದ್ರಾವಿಡ ಮಹಾಜನ ಸಭಾ' ಸ್ಥಾಪಿಸಲು ಕಾರಣವಾಯಿತು.
ಸಾಂಸ್ಕೃತಿಕವಾಗಿ ಅಯೋದಿ ದಾಸ್ ಅವರು ನೀಡಿರುವ ಕೊಡುಗೆ ಅಪಾರವಾದದ್ದು. 1881ರ ಜನಗಣತಿಯಲ್ಲಿ ಅಸ್ಪಶ್ಯ ಜಾತಿಗಳನ್ನು ತಮ್ಮ ಉಪಜಾತಿಗಳನ್ನು ನಮೂದಿಸದೆ ಮೂಲ ತಮಿಳಿಗರೆಂದು ಬರೆಯಿಸಿ ಎಂದು ಕರೆಕೊಟ್ಟಿದ್ದರು. 1886ರಲ್ಲಿ ಅಸ್ಪಶ್ಯರು ಹಿಂದೂಗಳಲ್ಲ ಎಂದು ಘೋಷಿಸಿದ್ದರು. 1911ರ ಜಾತಿ ಜನಗಣತಿಯಲ್ಲಿ ಅಸ್ಪಶ್ಯರು ತಮ್ಮನ್ನು ಜಾತಿರಹಿತ ದ್ರಾವಿಡರು ಎಂದು ನೋಂದಾಯಿಸಿಕೊಳ್ಳುವಂತೆ ಒತ್ತಾಯಿಸಿದರು. ಇದರ ಜೊತೆಗೆ ಬೌದ್ಧ ಧರ್ಮದ ನವಯಾನ ಪಂಥದ ಉಗಮಕ್ಕೂ ಕಾರಣರಾದರು. 1898ರಲ್ಲಿ ಪ್ರಮುಖ ದಲಿತ ನಿಯೋಗದೊಂದಿಗೆ ಥಿಯೋಸಫಿಕಲ್ ಸೊಸೈಟಿಯ ಕರ್ನಲ್ ಓಲ್ಕಾಟ್ ಅವರನ್ನು ಭೇಟಿಯಾಗಿ ತಮಿಳುನಾಡಿನಲ್ಲಿ ಬೌದ್ಧರನ್ನು ಮರುಸ್ಥಾಪಿಸಲು ಸಹಾಯ ಕೋರಿದರು. ಕರ್ನಲ್ ಸಹಾಯದಿಂದ ಶ್ರೀಲಂಕಾಕ್ಕೆ ಭೇಟಿ ನೀಡಿದ ಅಯೋದಿ ದಾಸ್ 1898ರಲ್ಲಿಯೇ ಸುಮಂಗಲ ಎನ್ನುವ ಬೌದ್ಧ ಭಿಕ್ಕುವಿನಿಂದ ಬೌದ್ಧ ಧೀಕ್ಷೆ ಪಡೆದರು. ಬೌದ್ಧ ಧರ್ಮದ ಹೀನಾಯಾನ ಮತ್ತು ಮಹಾಯಾನ ಪಂಥಗಳು ಭಾರತದಲ್ಲಿ ಬುದ್ಧರ ತತ್ವಗಳಿಗೆ ವಿರುದ್ಧವಾಗಿ ಚಲಿಸುತ್ತಿದ್ದವು. ಈ ಕಾರಣದಿಂದಲೇ ನವಯಾನವನ್ನು ಇವರೇ ಪ್ರಾರಂಭಿಸಿದರು. ಮದ್ರಾಸ್ನಲ್ಲಿ ನವಯಾನದ ಕಾರ್ಯಕ್ರಮವೊಂದನ್ನು ಆಯೋಜಿಸಿ ಅದರ ಅಧ್ಯಕ್ಷತೆಯನ್ನು ಅವರೇ ವಹಿಸಿದ್ದರು. ನಂತರದಲ್ಲಿ ಶಾಕ್ಯ ಬುದ್ಧಿಸ್ಟ್ ಸೊಸೈಟಿಯನ್ನು ಸ್ಥಾಪಿಸಿದರು. ಚೆನ್ನೈ (ಮದ್ರಾಸ್) ಅನ್ನು ಕೇಂದ್ರವಾಗಿಟ್ಟುಕೊಂಡು ಬರ್ಮಾ (ಈಗಿನ ಮ್ಯಾನ್ಮಾರ್), ಮಲೇಷಿಯಾ, ಶ್ರೀಲಂಕಾ ಮತ್ತು ದಕ್ಷಿಣಾ ಆಫ್ರಿಕಾಗಳಿಗೆ ಭೇಟಿಕೊಟ್ಟು ಅಲ್ಲಿಯೂ ಶಾಕ್ಯ ಸೊಸೈಟಿ ಯ ಉಪ ಶಾಖೆಗಳನ್ನು ತೆರೆದರು. ಕರ್ನಾಟಕದಲ್ಲಿ ಬೆಂಗಳೂರು, ಕೆಜಿಎಫ್ ಮತ್ತು ಹುಬ್ಬಳಿಯಲ್ಲಿಯೂ ಇದರ ಉಪಶಾಖೆಗಳು ಅಸ್ಥಿತ್ವದಲ್ಲಿವೆ.
ಬೌದ್ಧ ಧರ್ಮದ ಜ್ಞಾನಶಾಸ್ತ್ರವನ್ನು ಅದರ ಸಿದ್ಧಾಂತವನ್ನು ಅಭಿವ್ಯಕ್ತಿಗೊಳಿಸಲು 1907ರಲ್ಲಿ 'ತಮಿಳನ್' ಎಂಬ ಸಾಪ್ತಾಹಿಕ ಪತ್ರಿಕೆಯನ್ನು ತೆರೆದರು. ಅಯೋದಿ ದಾಸ್ ಅವರು ಸ್ಪಷ್ಟವಾದ ಮಾಹಿತಿಗಾಗಿ ಕಾರ್ಯನಿರ್ವಹಿಸುವ ಶಾಸನಗಳು, ಪ್ರತಿಮೆಗಳು ಮತ್ತು ಸಾಹಿತ್ಯದ ಲಿಪಿಗಳ ಹೊರತಾಗಿ ಸಾಂಪ್ರದಾಯಿಕ ಜನಪದ ಹಬ್ಬಗಳು ಮತ್ತು ನಂಬಿಕೆಗಳಲ್ಲಿಯೂ ಬೌದ್ಧ ಪರಂಪರೆಯಿದೆ ಎಂಬುದನ್ನು ಹಾಗೂ ಭಾರತದಾದ್ಯಂತ ಹರಡಿರುವ ಬೌದ್ಧ ಧರ್ಮವು ಜನರಲ್ಲಿ ಗ್ರಹಿಸಲಾಗದ ರೂಪಕಗಳಾಗಿ ಮತ್ತು ಜೀವನ ಪದ್ಧತಿಯಲ್ಲಿಯು ಉಳಿದುಕೊಂಡಿದೆ ಎಂಬುದನ್ನು ಆ ಪತ್ರಿಕೆಯಲ್ಲಿ ವ್ಯಾಖ್ಯಾನಿಸುತ್ತಾರೆ. ಇದಲ್ಲದೆ ತಮ್ಮ ಪತ್ರಿಕೆಯಲ್ಲಿ ಮಹಿಳೆಯರಿಗಾಗಿಯೂ ಪ್ರತ್ಯೇಕ ಕಾಲಂ ಇಡುವ ಮೂಲಕ ಮಹಿಳೆಯರನ್ನು ಕೂಡ ಸಾಮಾಜಿಕವಾಗಿ ಒಳಗೊಳ್ಳುತ್ತಾರೆ. ಧಾರ್ಮಿಕ ಆಕ್ರಮಣಗಳಿಂದ ಪಠ್ಯಗಳು ಮತ್ತು ಪ್ರತಿಮೆಗಳು ನಾಶವಾಗುತ್ತವೆ. ಹೀಗೆ ಗೋಚರಿಸಲ್ಪಡುವ ಪುರಾವೆಗಳು ಮುಂದೊಂದು ದಿನ ನಾಶವಾಗಬಹುದು. ಆದರೆ ಬೌದ್ಧ ಧರ್ಮದಿಂದ ಪ್ರೇರೇಪಿತವಾದ ಜೀವನ ಪದ್ಧತಿಯನ್ನು ಯಾರೂ ನಾಶ ಮಾಡಲಾರರು. ಬೌದ್ಧ ಧರ್ಮದ ವಿರೋಧಿಗಳು ಅದರ ಕುರುಹುಗಳನ್ನು ಸಂಪೂರ್ಣವಾಗಿ ನಾಶ ಮಾಡಲಾಗದೆ ಹೋದರೂ ಹೊಸ ಸ್ವರೂಪಗಳ ಮೂಲಕ ಅಸ್ಥಿತ್ವದಲ್ಲಿರುವ ಚೌಕಟ್ಟನ್ನು ಮುರಿಯುತ್ತಾರೆ ಎಂದು ದಾಸ್ ಅಭಿಪ್ರಾಯಿ ಸುತ್ತಾರೆ.
ತಮಿಳುನಾಡಿನಲ್ಲಿ ಮಧುರೈ ಪಾಂಡಿ ಮುನ್ನಿ ಮತ್ತು ಸೇಲಂ ತಲೈವೆಟ್ಟಿ ಮುನ್ನೇಶ್ವರಂ ಮುಂತಾದ ದೇವಾಲಯಗಳು ಮೂಲತಃ ಬೌದ್ಧ ಕೇಂದ್ರಗಳಾಗಿದ್ದವು. ಅಲ್ಲಿನ ಪ್ರತಿಮೆಯಲ್ಲಿನ ಶಿರವನ್ನು ಕತ್ತರಿಸಿ ಸ್ಥಳೀಯ ದೇವತೆಗಳೊಂದಿಗೆ ಬದಲಾಯಿಸಲಾಗಿದೆ. ತಲೆಯನ್ನು ಬದಲಾಯಿಸಿದರೂ ಪ್ರತಿಮೆಯ ದೇಹವೂ ಬುದ್ಧನ ಧ್ಯಾನಾಸಕ್ತ ಭಂಗಿ ಹಾಗೆಯೇ ಉಳಿದಿದೆ ಎಂಬುದನ್ನು ಕೂಡ ತಮ್ಮ ಪತ್ರಿಕೆಯಲ್ಲಿ ಉಲ್ಲೇಖಿಸುತ್ತಾರೆ.
ಅವರ ಸತತ ಪ್ರಯತ್ನದಿಂದ ತಮಿಳಿನಲ್ಲಿ ಮೊದಲಿಗೆ ದಲಿತ ಸಾಹಿತ್ಯವೂ ಉಗಮವಾಯಿತು. ಅಯೋದಿ ದಾಸ್ ಅವರು ಪೌರಾಣಿಕ ಸಾಹಿತ್ಯವನ್ನು ವಿಮರ್ಶಿಸುತ್ತಲೇ ದಲಿತರ ಪರ್ಯಾಯ ಇತಿಹಾಸಕ್ಕಾಗಿ 1912ರಲ್ಲಿ 'ಇಂದ್ರ ದೇಶ ಸರಿತರಮ್' ಎಂಬ ಪುಸ್ತಕವನ್ನು ಪ್ರಕಟಿಸುತ್ತಾರೆ. 'ಇಂದ್ರ ದೇಶ ಸರಿತರಮ್' ಎಂದರೆ ಬುದ್ಧ ಭಾರತದ ಚರಿತ್ರೆ, ಬುದ್ಧನನ್ನು ಪೂರ್ವದಲ್ಲಿ ಇಂದ್ರ ಎಂದು ಕರೆಯುತ್ತಿದ್ದ ಕಾರಣಕ್ಕಾಗಿ ಅವರು ತಮ್ಮ ಪುಸ್ತಕಕ್ಕೆ ಅದೇ ಹೆಸರನ್ನು ಬಳಸಿಕೊಂಡಿದ್ದರು. ನಂತರ ಅದೇ ವರ್ಷದಲ್ಲಿ ಬುದ್ಧನ ಜೀವನ ಚರಿತ್ರೆಯನ್ನೊಳಗೊಂಡ 'ಆದಿವೇದಂ' ಎಂಬ ಪುಸ್ತಕವನ್ನು ಪ್ರಕಟಿಸುತ್ತಾರೆ. ಈ ಎರಡೂ ಪುಸ್ತಕಗಳನ್ನು ಇಂದಿಗೂ ಸಬಾಲ್ಟರ್ನ್ ದೃಷ್ಟಿಕೋನದಿಂದಲೇ ಚರ್ಚಿಸಲಾಗುತ್ತಿದೆ.
ಅಯೋದಿ ದಾಸ್ ತಿರುವಳ್ಳುವರ್ ಅವರನ್ನು ತಮಿಳು ಸಾಹಿತ್ಯದ ಪ್ರವರ್ತಕ ಎಂದು ಕರೆಯುತ್ತಾರೆ. ಜೊತೆಗೆ ತಿರುವಳ್ಳುವರ್ ಅವರನ್ನು ಆರಂಭಿಕ ಬೌದ್ಧರನ್ನಾಗಿ ಜೋಡಿಸುವುದರೊಂದಿಗೆ ಅವರನ್ನು ತಮಿಳಿನ ಆದಿ ಬೌದ್ಧ ಎಂದು ಕರೆಯುತ್ತಾರೆ. ಪ್ರಸ್ತುತದಲ್ಲಿ ಇರುವ ತಿರುವಳ್ಳುವರ್ ಅವರ ಪ್ರತಿಮೆ ವಿರೂಪವಾಗಿದೆ. ನಿಜವಾದ ಅವರ ಪ್ರತಿಮೆಯನ್ನು ಕಂದಪ್ಪನ್ ಅವರು ಬ್ರಿಟೀಷರಿಗೆ ನೆನಪಿಗಾಗಿ ನೀಡಿದ್ದರು. ಅದು ಇಂದಿಗೂ ಸಹ ಬ್ರಿಟೀಷ್ ಮ್ಯೂಸಿಯಂನಲ್ಲಿದೆ. ಅವರ ಮೂಲ ಪ್ರತಿಮೆಯು ಬುದ್ಧರ ಭಂಗಿಯನ್ನೇ ಹೋಲುತ್ತದೆ.
ಅಯೋದಿ ದಾಸ್ ಅವರ ದಲಿತ ಚಳವಳಿ ಮತ್ತು ಬೌದ್ಧ ಧಾರ್ಮಿಕ ಪುನರುತ್ಥಾನವು ಸೇರಿದಂತೆ ಅನೇಕ ಬಗೆಯ ಹೋರಾಟಗಳು ಡಾ. ಬಿ. ಆರ್. ಅಂಬೇಡ್ಕರ್ ಅವರಿಗೆ ಪ್ರೇರಣೆಯಾಗಿವೆ. ಅಯೋದಿ ದಾಸ್ ಅವರ ಧಾರ್ಮಿಕ ಚಳವಳಿ ಅಂಬೇಡ್ಕರ್ ಅವರನ್ನು ಇನ್ನಷ್ಟು ವಿಸ್ತರಿಸಿತು. ಅಯೋದಿ ದಾಸ್ ಅವರು ಬೌದ್ಧ ಧರ್ಮ ಸ್ವೀಕರಿಸಿದ 58 ವರ್ಷಗಳ ನಂತರ ಅಂಬೇಡ್ಕರ್ ಅವರು ದೀಕ್ಷೆ ಪಡೆಯುವುದರ ಹಿಂದೆ ಅವರ ಪ್ರಭಾವವಿತ್ತು. ಅದು ಬೌದ್ಧ ಧರ್ಮದ ಮರು ಪುನರುತ್ಥಾನಕ್ಕೂ ದಾರಿಯಾಯಿತು. ಇವರಲ್ಲದೆ ಪೆರಿಯಾರ್ ರಾಮಸ್ವಾಮಿ ನಾಯ್ಕರ್ ಅವರಿಗೂ ಅಯೋದಿ ದಾಸ್ ಅವರೇ ಪ್ರೇರಣೆಯಾಗಿದ್ದರು. ಪೆರಿಯಾರ್ ಅವರು ಬಹುತೇಕವಾಗಿ ಅಯೋದಿ ದಾಸ್ ಅವರಿಂದಲೇ ಸಲಹೆ ಪಡೆಯುತ್ತಿದ್ದರು. 1914ರಲ್ಲಿ ದಾಸ್ ಮರಣ ಹೊಂದಿದಾಗ ಅವರು ಕಟ್ಟಿದ ದ್ರಾವಿಡ ಚಳವಳಿಯನ್ನು 1920ರ ನಂತರ ಕೈಗೆತ್ತಿಕೊಂಡು ಮುಂದುವರಿಸಿದರು.