ಕೇಂದ್ರ ಜನವಿರೋಧಿ ಚಟುವಟಿಕೆಗಳಲ್ಲಿ ತೊಡಗಿದೆ, ರೈತರನ್ನು ಶೋಷಿಸುತ್ತಿದೆ: ಸೋನಿಯಾ ಗಾಂಧಿ
ಹೊಸದಿಲ್ಲಿ,ಮೇ 21: ಕೇಂದ್ರದ ಬಿಜೆಪಿ ನೇತೃತ್ವದ ಸರಕಾರವು ಜನವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದೆ,ರೈತರ ಭವಿಷ್ಯದೊಂದಿಗೆ ಆಟವಾಡುತ್ತಿರುವ ಅದು ನೂತನ ಕೃಷಿ ಕಾಯ್ದೆಗಳನ್ನು ತರುವ ಮೂಲಕ ಅವರ ಹಿತಾಸಕ್ತಿಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಶುಕ್ರವಾರ ಆರೋಪಿಸಿದ್ದಾರೆ
ಛತ್ತೀಸ್ಗಡದ ಕಾಂಗ್ರೆಸ್ ಸರಕಾರವನ್ನು ಪ್ರಶಂಸಿಸಿರುವ ಅವರು, ಜನಸಾಮಾನ್ಯರನ್ನು, ವಿಶೇಷವಾಗಿ ರೈತರನ್ನು ಆರ್ಥಿಕವಾಗಿ ಸಬಲಗೊಳಿಸುವ ಮೂಲಕ ಅವರ ಬದುಕುಗಳಲ್ಲಿ ಬದಲಾವಣೆಗಳನ್ನು ತರಲು ಅದು ಪ್ರಯತ್ನಿಸುತ್ತಿದೆ ಎಂದಿದ್ದಾರೆ.
ಮಾಜಿ ಪ್ರಧಾನಿ ರಾಜೀವ ಗಾಂಧಿಯವರ ಪುಣ್ಯತಿಥಿಯ ಸಂದರ್ಭದಲ್ಲಿ ರಾಜ್ಯ ಸರಕಾರದ ಎರಡು ಯೋಜನೆಗಳಡಿ ರೈತರು ಮತ್ತು ಜಾನುವಾರು ಸಾಕಣೆದಾರರಿಗೆ ನಗದು ಲಾಭಗಳನ್ನು ವಿತರಿಸಲು ತನ್ನ ಗೃಹಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಛತ್ತೀಸ್ಗಡದ ಮುಖ್ಯಮಂತ್ರಿ ಭೂಪೇಶ ಬಗೇಲ್ ಅವರು ಸೋನಿಯಾರ ಸಂದೇಶವನ್ನು ಓದಿದರು.
ಛತ್ತೀಸ್ಗಡ ಸರಕಾರದ ಇವೆರಡೂ ಯೋಜನೆಗಳು ನಿಜವಾದ ಅರ್ಥದಲ್ಲಿ ರಾಜೀವ ಗಾಂಧಿಯವರಿಗೆ ಸಲ್ಲಿಸಿರುವ ಗೌರವವಾಗಿದೆ ಎಂದೂ ಸೋನಿಯಾ ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಬಾೆಲ್ ಅವರು 2020-21ರ ಮುಂಗಾರು ಬೆಳೆ ಹಂಗಾಮಿನಲ್ಲಿ ಭತ್ತದ ಕೃಷಿಗಾಗಿ ರಾಜೀವ ಗಾಂಧಿ ಕಿಸಾನ್ ನ್ಯಾಯ ಯೋಜನೆಯಡಿ ಕೃಷಿ ವೆಚ್ಚದ ಮೊದಲ ಕಂತಾಗಿ 1,500 ಕೋ.ರೂ.ಗಳನ್ನು ಸುಮಾರು 22 ಲಕ್ಷ ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದರು. ಇದೇ ವೇಳೆ ಗೋಧನ ನ್ಯಾಯ ಯೋಜನೆಯಡಿ ಜಾನುವಾರು ಸಾಕಣೆದಾರರ ಬ್ಯಾಂಕ್ ಖಾತೆಗಳಿಗೂ 7.17 ಕೋ.ರೂ.ಗಳನ್ನು ಅವರು ವರ್ಗಾವಣೆಗೊಳಿಸಿದರು.