ಪರಿಸರ ಯೋಧ ಸುಂದರಲಾಲ್ ಬಹುಗುಣ
ಜಗತ್ತು ಅಂತ್ಯಗೊಳ್ಳುತ್ತಿದೆ ಎಂದು ಇಂದು ಎಲ್ಲರೂ ಹೇಳುತ್ತಾರೆ. ಆದರೆ ಅದನ್ನು ಸಂರಕ್ಷಿಸುವ ಕೆಲಸ ಮಾತ್ರ ನಾವ್ಯಾರೂ ಮಾಡುತ್ತಲೇ ಇಲ್ಲ. ಪರಿಸರವನ್ನು ಉಳಿಸದೇ ಹೋದರೆ ನಮಗೆ ಉಳಿವಿಲ್ಲ ಎಂಬುದನ್ನು ಅನೇಕ ದಶಕಗಳ ಹಿಂದೆಯೇ ಮನಗಂಡು, ಅದನ್ನು ಉಳಿಸುವ ಪ್ರಯತ್ನದಲ್ಲಿ ಸಫಲರಾದವರು ಸುಂದರಲಾಲ್ ಬಹುಗುಣ ಅವರು. ಪರಿಸರವಾದಿಗಳು ಎಂಬ ಪದ ಕೇಳಿದಾಕ್ಷಣ ನಮ್ಮ ಮನಸ್ಸಿನಲ್ಲಿ ಮೂಡುವ ಚಿತ್ರಣ ಎಂದರೆ ಬಿಳಿಗಡ್ಡ ಹಾಗೂ ನೆರೆ ತಲೆ ಮಾನವಾಕೃತಿಯ ಹೊಳಪಿನ ಕಂಗಳ ಸುಂದರಲಾಲ್ ಬಹುಗುಣ ಅವರದು. ಪ್ರಕೃತಿಯನ್ನು ಉಳಿಸುವ ಅವರ ಅನೇಕ ಪರಿಸರ ಪರ ಹೋರಾಟಗಳು ಇಲ್ಲದೆ ಇದ್ದರೆ ಇಂದಿನ ಪರಿಸರ ಈಗಿನಂತಿರಲು ಸಾಧ್ಯವೇ ಇರಲಿಲ್ಲ.
ಗಾಂಧಿ ತತ್ವಗಳಿಂದ ಪ್ರೇರಿತರಾದ ಅವರು ಪರಿಸರ ಸಂರಕ್ಷಣೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟವರು. ಕೊರೋನ ಕಾಲದಲ್ಲಿ ನಾವೆಲ್ಲರೂ ಗಿಡಮರ ಸಂರಕ್ಷಣೆ ಬಗ್ಗೆ ಮಾತನಾಡುತ್ತಿದ್ದೇವೆ. ಏಕೆಂದರೆ ಆಮ್ಲಜನಕದ ಮಹತ್ವ ಏನೆಂದು ನಮಗೆ ಈಗ ಅರಿವಾಗಿದೆ. ಆದರೆ ಬಹು ದಶಕಗಳ ಹಿಂದೆಯೇ ಇಂತಹದ್ದೊಂದು ಪರಿಸರ ಕಾಯಕಕ್ಕೆ ಕೈಹಾಕಿ ತಮ್ಮ ಸರ್ವಸ್ವವನ್ನೆಲ್ಲ ಅದಕ್ಕಾಗಿ ಮೀಸಲಿಟ್ಟ ಮಹಾಸಂತ ಸುಂದರಲಾಲ್ ಬಹುಗುಣ ಅವರು.
ತಮ್ಮ 14ನೇ ವಯಸ್ಸಿನಿಂದಲೇ ಪರಿಸರ ಕಾಳಜಿಯತ್ತ ಚಿತ್ತ ಹರಿಸಿದ ಬಹುಗುಣ ಅವರು ಬಹು ದೊಡ್ಡ ಪರಿಸರ ಗುಣವನ್ನು ಬೆಳೆಸಿಕೊಂಡರು. ಮಹಾತ್ಮಾ ಗಾಂಧಿಯವರ ಪ್ರೇರಣೆಯಿಂದ ಸಾಮಾಜಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳತೊಡಗಿದರು. ಪರಿಸರ ಹೋರಾಟದ ಜೊತೆಜೊತೆಗೆ ಅಸ್ಪಶ್ಯತಾ ನಿವಾರಣೆಯ ಬಗ್ಗೆಯೂ ಹೋರಾಟ ಮಾಡಿದರು.
ಪರಿಸರ ಚಳವಳಿ ಎಂದರೆ ನೆನಪಾಗುವುದು ಚಿಪ್ಕೋ ಚಳವಳಿ. 1973ರಲ್ಲಿ ಪ್ರಾರಂಭವಾದ ಈ ಚಳವಳಿ ಬಗ್ಗೆ ಪಠ್ಯಗಳಲ್ಲಿ ಓದುವಾಗ ಕೇವಲ ಪರೀಕ್ಷೆಗಾಗಿ ಆ ವಿಷಯವನ್ನು ಉರು ಹೊಡೆದು ಉತ್ತರಿಸುತ್ತಿದ್ದೆವು. ಕ್ರಮೇಣವಾಗಿ ಬುದ್ಧಿ ಬೆಳೆದಂತೆಲ್ಲ ಇಂತಹದ್ದೊಂದು ಹೋರಾಟದ ಕುರಿತು ಸವಿವರವಾಗಿ ತಿಳಿದುಕೊಂಡೆವು. ವಿಶ್ವಾದ್ಯಂತ ಕೊರೋನದ ಎರಡನೇ ಅಲೆ ತೇಲಿದಾಗ ಮರ ಮತ್ತು ಕಾಡುಗಳ ಮಹತ್ವ ಈಗ ಎಲ್ಲರಿಗೂ ಅರ್ಥವಾಗತೊಡಗಿದೆ. ಬ್ರಿಟಿಷ್ ಸರಕಾರ ಹಿಮಾಲಯದಲ್ಲಿನ ಬೆಲೆಬಾಳುವ ಮರಗಳನ್ನು ಕಡಿದು ಸಾಗಿಸುವ ಕುಕೃತ್ಯದಲ್ಲಿ ತೊಡಗಿಸಿಕೊಂಡಿತು. ಇದನ್ನು ಅರಿತ ಸುಂದರಲಾಲ್ ಬಹುಗುಣ ಅವರು ವಿಭಿನ್ನ ರೀತಿಯಲ್ಲಿ ಚಳವಳಿ ಪ್ರಾರಂಭಿಸಿದರು. ಮರಗಳನ್ನು ಅಪ್ಪಿಕೊಳ್ಳುವ ಮೂಲಕ ಅವುಗಳ ಸಂರಕ್ಷಣೆಗೆ ಮುಂದಾದರು. ಅಧಿಕಾರಿಗಳು ಕಾಡಿನಲ್ಲಿನ ಮರಗಳನ್ನು ಕಡಿಯಲು ಬಂದಾಗ ಅವುಗಳನ್ನು ಅಪ್ಪಿಕೊಂಡು ಕಡಿಯಲು ಅವಕಾಶ ನೀಡದಂತೆ ಮರಗಳನ್ನು ರಕ್ಷಿಸಿದರು. ಮುಂದೆ ಇದು ‘ಅಪ್ಪಿಕೋ’ ಚಳವಳಿ ಎಂಬ ಹೆಸರಿನೊಂದಿಗೆ ಇಡೀ ದೇಶದ ಗಮನ ಸೆಳೆಯಿತು. ಕರ್ನಾಟಕದಲ್ಲೂ ಅಪ್ಪಿಕೋ ಚಳವಳಿಯ ಕಾವು ಫಲ ನೀಡಿತ್ತು. ನಂತರ ದೇಶಾದ್ಯಂತ 5,000ಕ್ಕೂ ಹೆಚ್ಚು ಕಿ.ಮೀ. ಸಂಚರಿಸುವ ಮೂಲಕ ಚಳವಳಿಯನ್ನು ಬಲಪಡಿಸಿದರು. ಚಳವಳಿಗೆ ಒಂದು ಹೊಸ ರೂಪು ನೀಡಿದರು. ತಮ್ಮ ಭಾಷಣ ಮತ್ತು ಪರಿಸರ ಸಂಬಂಧಿ ಕಾರ್ಯಗಳಿಂದ ಸಾವಿರಾರು ಪರಿಸರ ಕಾರ್ಯಕರ್ತರನ್ನು ಸೃಷ್ಟಿಸಿದರು. ತೆಹ್ರಿ ಅಣೆಕಟ್ಟು ನಿರ್ಮಾಣದ ವಿರುದ್ಧ ಧ್ವನಿ ಎತ್ತಿದರು. ಯಾವುದೇ ಹಿಂಸಾಚಾರವನ್ನು ಬಳಸದೆ ಗಾಂಧಿಯವರ ಸತ್ಯಾಗ್ರಹ ಮಾರ್ಗವನ್ನು ಅನುಸರಿಸಿದರು.
ಅರಣ್ಯನಾಶ ಮತ್ತು ನದಿ ತಿರುವು ಯೋಜನೆಗಳಿಂದ ಪರ್ವತಾವಾಸಿಗಳು ಅನುಭವಿಸುವ ನೋವುಗಳನ್ನು ಮನಗಂಡು ಅವುಗಳನ್ನು ತಡೆಯಲು ಶ್ರಮಿಸಿದರು. ಇದಕ್ಕಾಗಿ ಯುವಜನತೆಗೆ ಅಗತ್ಯ ತರಬೇತಿ ಮತ್ತು ಶಿಕ್ಷಣ ನೀಡಿದರು. ಆ ಮೂಲಕ ಅವರಲ್ಲಿ ಪರಿಸರ ಜಾಗೃತಿ ಮೂಡಲು ಕಾರಣರಾದರು. ತಳಮಟ್ಟದಿಂದ ಪರಿಸರ ಜಾಗೃತಿಯ ಬೇರುಗಳನ್ನು ಬೆಳೆಸುವಲ್ಲಿ ಸುಂದರಲಾಲ್ ಬಹುಗುಣ ಅವರ ಪಾತ್ರ ಬಹಳ ಪ್ರಮುಖವಾದದ್ದು. ಹಳ್ಳಿ ಹಳ್ಳಿಗೂ ಸಂಚರಿಸಿ ಅಲ್ಲಿನ ಯುವಕರಿಗೆ ಪರಿಸರದ ಕಾಳಜಿ ಮೂಡಿಸುತ್ತ, ಅವರಲ್ಲಿ ಪರಿಸರ ಪ್ರಜ್ಞೆಯನ್ನು ಬೆಳೆಸಿದರು. ಇದನ್ನು ಒಂದು ರೀತಿಯಲ್ಲಿ ವೃತದಂತೆ ಕೈಗೊಂಡರು. ಈ ಆಂದೋಲನದಲ್ಲಿ ತಮ್ಮ ಹೆಂಡತಿಯನ್ನೂ ಪಾಲ್ಗೊಳ್ಳುವಂತೆ ಮಾಡಿದ್ದರು. ಅವರೂ ಸಹ ಹಳ್ಳಿ ಹಳ್ಳಿಗೆ ತೆರಳಿ ಅಲ್ಲಿನ ಮಹಿಳೆಯರಿಗೆ ಅಗತ್ಯ ಶಿಕ್ಷಣ ಮತ್ತು ತರಬೇತಿ ನೀಡುವ ಮೂಲಕ ಅವರ ಕಷ್ಟಗಳಿಗೆ ಅವರೇ ಮಾರ್ಗವನ್ನು ಕಂಡುಕೊಳ್ಳುವಂತೆ ಮಾಡಿದರು. ಭಾರತದ ಗ್ರಾಮೀಣ ದೇಶದ ಜನರಿಗೆ ಪರಿಸರದ ಬಗ್ಗೆ ಕಾಳಜಿ ಮೂಡಿಸುವಲ್ಲಿ ಸುಂದರಲಾಲ್ ಅವರು ಬಹು ಶ್ರಮಿಸಿದರು.
ಶಿಕ್ಷಣ ವಂಚಿತ ಗ್ರಾಮೀಣರಿಗೆ ಪರಿಸರದ ಮಹತ್ವ ತಿಳಿಸುತ್ತಾ ಅವರನ್ನು ಪರಿಸರ ನಾಶದ ವಿರುದ್ಧ ಧ್ವನಿ ಎತ್ತುವಂತೆ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಹರಿಜನ ಕಲ್ಯಾಣ, ವಸಾಹತುಶಾಹಿ ಆಡಳಿತದ ವಿರುದ್ಧ ಜನರನ್ನು ಸಜ್ಜುಗೊಳಿಸಿದರು. ಅರಣ್ಯ ಲಾಭಿಯ ಹಿಂದಿನ ಹುನ್ನಾರವನ್ನು ಬಯಲಿಗೆಳೆದರು. ಅರಣ್ಯದ ಉತ್ಪನ್ನಗಳಿಂದ ಸಣ್ಣ ಮತ್ತು ಮಧ್ಯಮ ಪ್ರಮಾಣದ ಉಧ್ಯಮಗಳನ್ನು ಕಟ್ಟಿಕೊಳ್ಳುವಲ್ಲಿ ಜನರನ್ನು ಪ್ರೋತ್ಸಾಹಿಸಿ ಪರಿಸರವು ಶಾಶ್ವತ ಆರ್ಥಿಕತೆ ಎಂಬುದನ್ನು ಭಾರತೀಯರಿಗೆ ತೋರಿಸಿಕೊಟ್ಟರು. ಸುಂದರ ಭವಿಷ್ಯಕ್ಕಾಗಿ ನಾಳೆಯನ್ನು ಕಾಯದೆ ಇಂದೇ ಕಾರ್ಯತತ್ಪರರಾಗಿ ಎಂಬುದು ಸುಂದರಲಾಲ್ ಬಹುಗುಣ ಅವರ ತತ್ವವಾಗಿತ್ತು. ಅವರ ಸ್ಫೂರ್ತಿದಾಯಕ ನಾಯಕತ್ವದಿಂದ ಭಾರತದ ಕಾಡುಗಳು ಬಲಿಯಾಗದೆ ಉಳಿದುಕೊಂಡವು. ಮಲಿನಗಂಗೆ ಮತ್ತು ಪರಿಸರದ ಮಾರಣಹೋಮ ಇವರೆಡೂ ಸುಂದರಲಾಲ್ ಬಹುಗುಣ ಅವರಿಗೆ ತುಂಬಾ ನೋವು ನೀಡಿದ್ದ ಸಂಗತಿಗಳಾಗಿದ್ದವು. ಕೊರೋನ ಅಬ್ಬರದಲ್ಲಿ ಇಂತಹ ಮಹಾನ್ ಚೇತನವನ್ನು ಕಳೆದುಕೊಂಡಿರುವುದು ನಮ್ಮ ದೌರ್ಭಾಗ್ಯವೇ ಸರಿ. ಅವರ ದೇಹಕ್ಕೆ ಸಾವಾಗಿರಬಹುದು. ಆದರೆ ಅವರು ಹಾಕಿಕೊಟ್ಟ ಪರಿಸರ ಚಳವಳಿಯ ಕಾವು ನಿರಂತರವಾಗಿರುತ್ತದೆ.