ಮನುಷ್ಯನೊಳಗಿನ ಕಾಡಿನ ಕ್ರೌರ್ಯವನ್ನು ತೆರೆದಿಡುವ ‘ಕಳ’
ಕಾಡಿನ ನಡುವೆ ಒಂದು ಮನೆ. ಕೃಷಿಯನ್ನೇ ನೆಚ್ಚಿಕೊಂಡಿರುವ ಮನೆಯ ಹಿರಿಯ ರವೀಂದ್ರನ್ (ಲಾಲ್). ಆ ಕಾಡಿನ ಒರಟು ಗುಣಲಕ್ಷಣಗಳನ್ನೆಲ್ಲ ಮೈಗೂಡಿಸಿಕೊಂಡಿರುವ, ತಂದೆಯ ಪಾಲಿಗೆ ಕೈಲಾಗದ ಮಗನೆಂದು ಗುರುತಿಸಿಕೊಂಡಿರುವ ಶಾಜಿ (ತೋವಿನೋ ಥೋಮಸ್). ಮಾವನ ನಿರ್ಲಕ್ಷ, ಪತಿಯ ಮುಂಗೋಪ ಇವುಗಳ ನಡುವೆ ಆ ಕಾಡಿನೊಳಗೆ ಹೊಂದಾಣಿಕೆಗೆ ಯತ್ನಿಸುತ್ತಿರುವ ಪತ್ನಿ ವಿದ್ಯಾ(ದಿವ್ಯಾ ಪಿಳ್ಳೈ). ತನ್ನ ಪರಿಸರದ ನಿಗೂಢತೆಗಳನ್ನು ಆತಂಕದಿಂದ ಗಮನಿಸುತ್ತಿರುವ ಶಾಜಿಯ ಪುಟ್ಟ ಮಗು. ಜೊತೆಗೆ ಶಾಜಿಯ ದೈನಂದಿನ ಬದುಕಿನ ಆತ್ಮೀಯ ಒಡನಾಡಿ ಒಂದು ಮುದ್ದಾದ ಕಪ್ಪು ವಿದೇಶಿ ನಾಯಿ ಬ್ಲಾಕಿ. ಒಂದು ದಿನ, ಆ ಮನೆಗೆ ಅಡಿಕೆ ಕೀಳಲು ಎಂದು ನಾಲ್ಕೈದು ಕಾರ್ಮಿಕರ ಆಗಮನವಾಗುತ್ತದೆ. ಶಾಜಿಯೇ ಅವರ ವ್ಯವಸ್ಥೆ ಮಾಡಿರುತ್ತಾನೆ. ಅದಾಗಲೇ ತಂದೆಗೆ ಮುಚ್ಚಿಟ್ಟು ಹಲವು ವ್ಯಾಪಾರಗಳನ್ನು ಮಾಡಿ ಸಾಲ ಸೋಲಕ್ಕೀಡಾಗಿರುವ ಶಾಜಿ, ಅವರನ್ನು ಬಳಸಿಕೊಂಡು ತಂದೆ ಕೂಡಿಟ್ಟ ಕರಿಮೆಣಸನ್ನು ಕದ್ದು ಸಾಗಿಸಿ ಹಣ ಹೊಂದಾಣಿಕೆ ಮಾಡುವ ದುರುದ್ದೇಶವನ್ನೂ ಹೊಂದಿದ್ದಾನೆ. ಆದರೆ ಆ ದಿನ ಶಾಜಿಯ ಎಲ್ಲ ಎಣಿಕೆಗಳನ್ನು ಬುಡಮೇಲು ಮಾಡುವಂತೆ ಒಬ್ಬ ವಿಶೇಷ ಅತಿಥಿ (ಸುಮೇಶ್ ಮೂರ್) ಆ ಕಾರ್ಮಿಕರ ಜೊತೆಗೆ ಅಲ್ಲಿಗೆ ಆಗಮಿಸಿದ್ದ.
ತನ್ನ ಮೈಕಟ್ಟಿನ ಕುರಿತ ಶಾಜಿಯ ಹೆಮ್ಮೆ, ಅವನ ಪ್ರತಿಷ್ಠೆ, ದುರಹಂಕಾರ, ಸ್ವಾರ್ಥ, ಉಂಡಾಡಿತನ ಎಲ್ಲವೂ ಆ ಅತಿಥಿಯ ಮುಖಾಮುಖಿಯೊಂದಿಗೆ ಪರೀಕ್ಷೆಗೀಡಾಗುತ್ತದೆ. ಆನಂತರ ನಡೆಯುವುದೆಲ್ಲ ಹಿಂಸೆಯ ಪರಮಾವಧಿ. ಮೃಗಗಳಂತೆ ಪರಸ್ಪರರ ಮೇಲೆ ಎರಗುವ ಎರಡು ವಿಕ್ಷಿಪ್ತ ಮನಸ್ಥಿತಿಗಳನ್ನು ಇಟ್ಟುಕೊಂಡು ನಿರ್ದೇಶಕ ರೋಹಿತ್ ವಿ. ಎಸ್. ಅವರು ಬೆಚ್ಚಿ ಬೀಳಿಸುವ ಥ್ರಿಲ್ಲರ್ ಚಿತ್ರವೊಂದನ್ನು ಮಲಯಾಳಂನಲ್ಲಿ ಕಟ್ಟಿಕೊಟ್ಟಿದ್ದಾರೆ.
ಮನುಷ್ಯ ಮೂಲತಃ ಮೃಗ. ಪ್ರತಿಯೊಬ್ಬನೂ ತನ್ನೊಳಗೊಂದು ಕಾಡನ್ನು ಬಚ್ಚಿಟ್ಟುಕೊಂಡು ಬದುಕುತ್ತಾನೆ. ಸಂದರ್ಭ ಬಂದಾಗ ಆ ಕಾಡಿನ ಕ್ರೌರ್ಯ ತೆರೆದುಕೊಳ್ಳುತ್ತದೆ. ಕಥಾನಾಯಕ ಶಾಜಿ ಒಂದು ಅಮಾಯಕ ಬೇಟೆ ನಾಯಿಯನ್ನು ತನ್ನ ಬೇಜವಾಬ್ದಾರಿ ಪ್ರಯೋಗಕ್ಕಾಗಿ ಕೊಂದು ಹಾಕುತ್ತಾನೆ. ಆದಿವಾಸಿ ತಮಿಳನೊಬ್ಬನ ಬೇಟೆ ನಾಯಿ ಅದು, ಎನ್ನುವುದು ಗೊತ್ತಾಗುವಷ್ಟರಲ್ಲಿ ತಡವಾಗಿರುತ್ತದೆ. ತನ್ನ ನಾಯಿಯನ್ನು ಕೊಂದವನ ನಾಯಿಯನ್ನು ಕೊಂದೇ ತೀರುತ್ತೇನೆ ಎಂದು ಸಿದ್ಧನಾಗಿ ಬಂದಿರುವ ಆ ಆಗಂತುಕನ ಜೊತೆಗಿನ ಸಂಘರ್ಷ ಭೀಕರ ಹಂತ ತಲುಪುತ್ತದೆ. ಯಾವನೋ ಒಬ್ಬ ಸಾಮಾನ್ಯ ಕಾರ್ಮಿಕನೆಂದು ನಂಬಿ ಆತನ ಜೊತೆಗೆ ಹೊಡೆದಾಟಕ್ಕಿಳಿಯುವ ನಾಯಕನಿಗೆ ನಿಧಾನಕ್ಕೆ ತನ್ನ ಸೋಲು ಅರಿವಿಗೆ ಬರುತ್ತದೆ. ಸಂಘರ್ಷವನ್ನು ತಪ್ಪಿಸುವ ಅವನ ಪ್ರಯತ್ನವೂ ವಿಫಲವಾಗುತ್ತದೆ. ಕೆರಳಿದ ಮೃಗಗಳಂತೆ ಪರಸ್ಪರ ಎರಗುತ್ತಾರೆ. ಉಗುರುಗಳಿಂದ ಒಬ್ಬರನೊಬ್ಬರು ಸೀಳಿಕೊಳ್ಳುತ್ತಾರೆ. ಇಬ್ಬರು ನೋವುಗಳಿಂದ ಚೀರುತಾರೆ ಮತ್ತೂ ಪರಸ್ಪರ ಒಬ್ಬರ ಮೇಲೆ ಒಬ್ಬರು ಬಿದ್ದು ಗುದ್ದಾಡಿಕೊಳ್ಳುತ್ತಾರೆ. ಈ ಎರಡು ಬೇಟೆ ನಾಯಿಗಳ ಕಚ್ಚಾಟಗಳೇ ಇಡೀ ಚಿತ್ರವನ್ನು ಆವಾಹಿಸಿಕೊಂಡಿದೆ.
ಆರಂಭದಲ್ಲಿ ತನ್ನ ಮೃಗೀಯ ನೋಟದಿಂದಲೇ ಪ್ರೇಕ್ಷಕರ ಎದೆ ಝಲ್ಲೆನಿಸುವಂತೆ ಮಾಡುವ ಆಗಂತುಕ(ಸುಮೇಶ್ ಮೂರ್) ನಾಯಕನನ್ನು ಮೀರಿ ಬೆಳೆಯುತ್ತಿರುವುದು ನಮ್ಮಿಳಗೆ ಸಣ್ಣ ಕಸಿವಿಸಿ ಉಂಟು ಮಾಡುತ್ತದೆ. ಚಿತ್ರದ ಕ್ಲೈಮಾಕ್ಸ್ ಒಂದು ಅಪರೂಪದ ಸಂದೇಶವನ್ನು ನಮ್ಮ್‌ಳಗೆ ಬಿತ್ತಿ ಹೋಗುತ್ತದೆ. ಮೃಗದಂತೆ ಆರ್ಭಟಿಸಿ ಕಣಕ್ಕಿಳಿಯುವ ಆಗಂತುಕ ತನ್ನ ಕೃತ್ಯವನ್ನು ಮುಗಿಸಿ ಸಂತೃಪ್ತಿಯ ಮುಗುಳ್ನಗುವಿನೊಂದಿಗೆ ಶಾಂತವಾಗಿ ಮರಳುತ್ತಿದ್ದಂತೆಯೇ, ನಮ್ಮಿಳಗಿನ ಹೆಡೆ ಎತ್ತಿ ಬುಸುಗುಡುವ ಈಗೋ ಕೂಡ ನಿಧಾನಕ್ಕೆ ತೆವಲುತ್ತಾ ಬಿಲ ಸೇರುತ್ತದೆ. ಹಿಂಸೆಯ ತುರ್ಯಾವಸ್ಥೆಯಲ್ಲಿ ತನ್ನೆಲ್ಲ ಪ್ರತಿಷ್ಠೆ, ಸ್ವಾರ್ಥ, ದುರಹಂಕಾರಗಳನ್ನು ಕಳಚಿ ಬೆತ್ತಲಾಗುವ ನಾಯಕ, ಭಯ ಭೀತಿಯಿಂದ ಸಂಪೂರ್ಣ ಶರಣಾಗಿ ತನ್ನ ಎದುರಾಳಿಯನ್ನು ನೋಡುವ ಬಗೆ ನಮ್ಮನ್ನು ಚಿತ್ರ ಮುಗಿದ ಬಳಿಕವೂ ತೀವ್ರವಾಗಿ ಕಾಡುತ್ತದೆ. ಆ ಒಂದು ದಿನದ ಬೆಳವಣಿಗೆ ಇಡೀ ಕುಟುಂಬವನ್ನು ವಿವಿಧ ರೀತಿಯಲ್ಲಿ ಕಾಡುತ್ತಾ ಅವರನ್ನು ಬದಲಿಸುತ್ತದೆ.
ಕಾಡಿನ ಕ್ರೌರ್ಯ, ನಿಗೂಢತೆಯನ್ನು ಕಟ್ಟಿಕೊಡುವ ದೃಶ್ಯಗಳೇ ಈ ಚಿತ್ರವನ್ನು ನಮಗೆ ದಾಟಿಸುವ ನಿಜವಾದ ಭಾಷೆ. ಅಖಿಲ್ ಜಾರ್ಜ್ ಅವರ ಸಿನೆಮಾಟೋಗ್ರಫಿ ಚಿತ್ರವನ್ನು ನಮ್ಮಿಳಗೆ ಪರಿಣಾಮಕಾರಿಯಾಗಿ ಇಳಿಸುತ್ತದೆ. ಚಿತ್ರದ ಅರ್ಧ ಭಾಗವನ್ನು ನಾಯಕ-ಪ್ರತಿನಾಯಕರ ನಡುವಿನ ಹೊಡೆದಾಟಗಳೇ ತುಂಬಿಕೊಂಡಿವೆ. ಇವು ಕೇವಲ ಸ್ಟಂಟ್‌ಗಳಷ್ಟೇ ಅಲ್ಲ. ಹಿಂಸೆಯನ್ನು ಇಲ್ಲಿ ರೂಪಕವಾಗಿ ಬಳಸಲಾಗಿದೆ. ಒಳಗಿನ ಸೇಡು, ಈಗೋ, ಕ್ರೌರ್ಯಗಳನ್ನು ಕಣ್ಣು, ಮುಖಗಳು ಅತ್ಯಂತ ಪರಿಣಾಮಕಾರಿಯಾಗಿ ಸಂವಾದಿಸಬೇಕು. ಇವೆಲ್ಲವನ್ನು ಫಿಯೋನಿಕ್ಸ್ ಪ್ರಭು ನಿಭಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕ್ಲೈಮಾಕ್ಸಿನ ತೀವ್ರತೆಗೆ ಪೂರಕವಾಗಿರುವ ಸಂಗೀತವೂ ಚಿತ್ರವನ್ನು ಬಹುಕಾಲ ನಮ್ಮಲ್ಲಿ ಉಳಿಯುವಂತೆ ಮಾಡುತ್ತದೆ. ಒಂದೆಳೆಯ ಕತೆಯನ್ನು ಇಟ್ಟುಕೊಂಡು ಕಾಡು, ಮೃಗ ಮತ್ತು ಮನುಷ್ಯರ ನಡುವಿನ ಸಂವಾದಿ ರೂಪದಲ್ಲಿ ನಮ್ಮನ್ನು ಆವರಿಸುವ ‘ಕಳ’ ಚಿತ್ರ ಒಂದು ಭಿನ್ನ ಪ್ರಯೋಗ. ಖಳನಾಯಕನಾಗಿ ಚಿತ್ರದೊಳಗೆ ಕಾಲಿಡುವ ಆಗಂತುಕ ಪ್ರತಿನಾಯಕನಾಗಿ ಉಳಿಸಿಹೋಗುವ ಸಂದೇಶ, ನಾಗರಿಕನೆಂದು ಹೇಳಿಕೊಳ್ಳುವ ಮನುಷ್ಯರಿಗೆೆ ಒಂದು ಪಾಠವೂ ಆಗಿದೆ