ಓ ಮೆಣಸೇ...
ವರದಿ ನೆಗೆಟಿವ್ ಇರಲಿ, ಮನಸ್ಸು ಪಾಸಿಟಿವ್ ಇರಲಿ - ಮೋಹನ್ ಭಾಗವತ್, ಆರೆಸ್ಸೆಸ್ ಮುಖಂಡ
ನೆಗೆಟಿವ್‌ಗಳನ್ನು ಬಿತ್ತಿ ಪಾಸಿಟಿವ್‌ಗಳನ್ನು ಕೊಯ್ಯಲು ಹೊರಟರೆ ಹೇಗೆ?
ಪ್ರಾಯೋಜಕತ್ವ ಸಿಕ್ಕರೆ ಎಲ್ಲ ಜಿಲ್ಲೆಗಳಲ್ಲಿ ಆಕ್ಸಿಜನ್ ಬಸ್ ಸೇವೆ ನೀಡಲು ಸಿದ್ಧ - ಲಕ್ಷ್ಮಣ ಸವದಿ, ಉಪಮುಖ್ಯಮಂತ್ರಿ
ಮತ್ತೆ ಸರಕಾರ ಇರುವುದು ಯಾಕೆ?
ಕೊರೋನ ಸೋಂಕಿತರ ಮರಣ ಪ್ರಮಾಣವನ್ನು ಕಡಿಮೆ ಮಾಡಿದರೆ ವೈದಾಧಿಕಾರಿಗಳ ಪಾದ ತೊಳೆಯುವೆ - ವಿ.ಸೋಮಣ್ಣ , ಸಚಿವ
ಮೊದಲು ನಿಮ್ಮ ಕಿವಿ ತೊಳೆದುಕೊಳ್ಳಿ. ವೈದ್ಯರಿಗೆ ಬೇಕಾಗಿರುವ ಸೌಕರ್ಯಗಳನ್ನು ಒದಗಿಸಿಕೊಡಿ.
ಪಿಎಂ ಕೇರ್ಸ್‌ನಿಂದ ಒದಗಿಸಲಾಗಿರುವ ವೆಂಟಿಲೇಟರ್‌ಗಳು ಕೆಲಸಕ್ಕೆ ಬಾರದ ಡಬ್ಬಗಳಂತಾಗಿವೆ - ಎಚ್.ಕೆ ಪಾಟೀಲ್, ಶಾಸಕ
ಖಾಲಿ ಡಬ್ಬ ಸದ್ದು ಮಾಡುತ್ತಿರುವುದು ಇದೇ ಕಾರಣಕ್ಕಿರಬೇಕು.
ಕೊರೋನ ಪರೀಕ್ಷೆ ಹಾಗೂ ಸೋಂಕಿತರ ಸಾವಿನ ವಿಚಾರದಲ್ಲಿ ರಾಜ್ಯ ಸರಕಾರ ಸುಳ್ಳು ಹೇಳುತ್ತಿದೆ - ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ
ಯಾವ ವಿಚಾರದಲ್ಲಿ ಸರಕಾರ ನಿಜ ಹೇಳಿದೆ ಎನ್ನುವುದನ್ನು ಮೊದಲು ಹೇಳಿ.
ಬೆಳಗಾವಿ ಲೋಕಸಭಾ ಚುನಾವಣೆಯನ್ನು ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ ನಾವು ಉತ್ತಮ ಯಶಸ್ಸು ಸಾಧಿಸಿದ್ದೇವೆ- ಸತೀಶ್ ಜಾರಕಿಹೊಳಿ, ಕೆಪಿಸಿಸಿ ಕಾರ್ಯಾಧ್ಯಕ್ಷ
ಹಿಂದಿನ ಸೋಲಿಗೆ ಹೋಲಿಸಿದರೆ ಈ ಬಾರಿಯ ಸೋಲು ತೃಪ್ತಿಕರವಾಗಿರಬೇಕು.
ಯೋಗಿ ಆದಿತ್ಯನಾಥ್ ಪಂಜಾಬ್‌ನ ಕೊರೋನ ಪರಿಸ್ಥಿತಿ ಬಗ್ಗೆ ಮೂಗು ತೂರಿಸುವ ಬದಲು ಅವರ ರಾಜ್ಯದ ಪರಿಸ್ಥಿತಿಯತ್ತ ಗಮನ ಹರಿಸುವುದು ಒಳ್ಳೆಯದು - ಅಮರಿಂದರ್ ಸಿಂಗ್, ಪಂಜಾಬ್ ಮುಖ್ಯಮಂತ್ರಿ
ಉತ್ತರ ಪ್ರದೇಶದಲ್ಲಿ ಕೊರೋನ ದಮನವನ್ನು ಪೊಲೀಸರ ಲಾಠಿಗಳಿಗೆ ವಹಿಸಿ ಬಿಟ್ಟಿದ್ದಾರೆ.
ಪ್ರತಿ ದಿನ ಗೋಮೂತ್ರ ಸೇವಿಸುತ್ತಿರುವುದರಿಂದ ನಾನು ಕೋವಿಡ್ ಸೋಂಕಿಗೆ ಒಳಗಾಗಿಲ್ಲ- ಪ್ರಜ್ಞಾಸಿಂಗ್ ಠಾಕೂರ್, ಸಂಸದೆ
ನಿಮ್ಮಳಗಿರುವ ಕೋಮು ವಿಷ ವೈರಸ್‌ನ ಮುಂದೆ ಕೊರೋನ ವೈರಸ್ ಏನೇನೂ ಅಲ್ಲ ಬಿಡಿ.
ಅತ್ತೆಯ ಒಡವೆ ಅಳಿಯ ದಾನ ಮಾಡಿದಂತೆ ಪ್ರಧಾನಿ ಮೋದಿಯ ನಡೆ - ದಿನೇಶ್ ಗುಂಡೂರಾವ್, ಕಾಂಗ್ರೆಸ್ ಮುಖಂಡ
ದಾನ ಮಾಡಿರುವುದೋ, ಮಾರಿದ್ದೋ ಎನ್ನುವುದನ್ನೊಮ್ಮೆ ಪರಿಶೀಲಿಸಿ.
ಮನೆಗೆ ಮಗನೂ ಆಗಲಿಲ್ಲ ಸ್ಮಶಾನಕ್ಕೆ ಹೆಣವೂ ಆಗಲಿಲ್ಲ ಎಂಬ ಸ್ಥಿತಿಗೆ ಕಾಂಗ್ರೆಸ್ ತಲುಪಿದೆ - ಸಿ.ಟಿ.ರವಿ, ಶಾಸಕ
ಬಹುಶಃ ನಿಮ್ಮ ಸರಕಾರದಿಂದ ಜನರು ಸ್ಮಶಾನಗಳಿಗೆ ಹೆಣವಂತೂ ಆಗುತ್ತಿದ್ದಾರೆ.
ದೇಶದ ಘನತೆ ಹಾಳು ಮಾಡಲು ಕಾಂಗ್ರೆಸ್ ಯಾವ ಮಾರ್ಗವನ್ನೂ ಬಿಟ್ಟಿಲ್ಲ -ಸಂಬಿತ್ ಪಾತ್ರಾ, ಬಿಜೆಪಿ ವಕ್ತಾರ
ಅದಕ್ಕಾಗಿ ಪ್ರಧಾನಿಯವರೇ ಹಗಲಿರುಳು ದುಡಿಯುತ್ತಿರುವಾಗ ಕಾಂಗ್ರೆಸ್‌ನ ಅಗತ್ಯವಿದೆಯೇ?
ನನ್ನ ಪ್ರಕಾರ ಪಿಚ್‌ಗೆ ಇಳಿಯುವ ಎಷ್ಟೋ ಮೊದಲೇ ಆಟ ಶುರುವಾಗಿರುತ್ತದೆ- ಸಚಿನ್ ತೆಂಡುಲ್ಕರ್, ಮಾಜಿ ಕ್ರಿಕೆಟಿಗ
ಆಟ ಮುಗಿಯುವ ಮೊದಲು ಕೊರೋನ ಪಿಚ್‌ಗೆ ಇಳಿದು ಬ್ಯಾಟಿಂಗ್ ಶುರು ಮಾಡಬಾರದೇ?
ರಾಜ್ಯ ಸರಕಾರದ ನೇರ ಖರೀದಿ ಮೂಲಕ ಎರಡು ಲಕ್ಷ ಕೋವಿಶೀಲ್ಡ್ ಲಸಿಕೆಗಳು ಬರಲಿದ್ದು, ಅವುಗಳನ್ನು ಆನಂದ್ ರಾವ್ ವೃತ್ತದ ಬಳಿಯ ಉಗ್ರಾಣದಲ್ಲಿಡಲಾಗುವುದು - ಡಾ.ಕೆ.ಸುಧಾಕರ್, ಸಚಿವ
ಉಗ್ರಾಣದಲ್ಲಿ ಕೆಟ್ಟು ಹೋಗಿರುವ ಕೋವ್ಯಾಕ್ಸಿನ್‌ನ್ನು ಏನು ಮಾಡುತ್ತೀರಿ?
ಜಿಲ್ಲೆಗಳು ‘ಕೊರೋನ ಗೆದ್ದರೆ ದೇಶವೇ ಗೆದ್ದಂತೆ’- ನರೇಂದ್ರ ಮೋದಿ, ಪ್ರಧಾನಿ
ಒಟ್ಟು ಕೊರೋನ ಗೆಲ್ಲುವ ಹೊಣೆಯನ್ನು ಜಿಲ್ಲಾಡಳಿತದ ತಲೆಗೆ ಕಟ್ಟಿ ನೀವು ಬಚಾವಾಗುತ್ತಿದ್ದೀರಿ.
ಕೋಟ್ಯಧಿಪತಿಗಳಿಗೆ ಹೆಚ್ಚಿನ ತೆರಿಗೆ ವಿಧಿಸಿ, ಆ ಹಣವನ್ನು ಕೋವಿಡ್ ನಿರ್ವಹಣೆಗೆ ಬಳಸಬೇಕು - ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ತರಳಬಾಳು ಶಾಖಾಮಠ
ಲಾಕ್‌ಡೌನ್ ಘೋಷಿಸಿ ಜನರಿಂದ ದಂಡ ವಸೂಲಿ ಮಾಡಿ ಕೋಟ್ಯಧಿಪತಿಗಳಿಗೆ ಹಂಚಲಾಗುವುದು ಎಂದರಂತೆ ಪ್ರಧಾನಿ.
ಸದ್ಯ ಬೆಡ್ ಕೊರತೆ ನಿಯಂತ್ರಣಕ್ಕೆ ಬರುತ್ತಿದೆ- ಬಸವರಾಜ ಬೊಮ್ಮಾಯಿ, ಸಚಿವ
ಜನರ ಬ್ರೆಡ್ ಕೊರತೆಯ ಬಗ್ಗೆಯೂ ಒಂದಿಷ್ಟು ಯೋಚಿಸಿ.
ಕೋವಿಡ್ ನಿಯಂತ್ರಣಕ್ಕೆ ಮುಂದಿನ ವಾರ ಇನ್ನಷ್ಟು ಕಠಿಣ ನಿಯಮ ಜಾರಿ ಮಾಡಲು ಉದ್ದೇಶಿಸಲಾಗಿದೆ- ಆರ್.ಅಶೋಕ್, ಸಚಿವ
ಕಠಿಣ ಕ್ರಮ ಕೊರೋನ ವಿರುದ್ಧವೋ, ಜನರ ವಿರುದ್ಧವೋ?
ಹಳ್ಳಿ ಹಳ್ಳಿಗೂ ಕೊರೋನ ಹಬ್ಬಿರುವುದರಿಂದ ಬಿಗಿಯಾದ ಲಾಕ್‌ಡೌನ್ ಅಗತ್ಯವಿದೆ - ಗೋವಿಂದ ಕಾರಜೋಳ, ಉಪ ಮುಖ್ಯಮಂತ್ರಿ
ಹಳ್ಳಿಯನ್ನೂ ನೆಮ್ಮದಿಯಲ್ಲಿರಲು ಬಿಡುವುದಿಲ್ಲವೇ?
ಪ್ರಧಾನಿ ಮೋದಿ ಒಕ್ಕೂಟ ತತ್ವವನ್ನು ಗಾಳಿಗೆ ತೂರಿ ಮುಖ್ಯಮಂತ್ರಿಗಳನ್ನು ಅವಮಾನಿಸುತ್ತಿದ್ದಾರೆ- ಮಮತಾ ಬ್ಯಾನರ್ಜಿ, ಪ.ಬಂ.ಮುಖ್ಯಮಂತ್ರಿ
ಕ್ಕೂಟಗಳನ್ನು ಒಡೆಯುವುದೇ ಅವರ ತತ್ವವಿರಬೇಕು.
ಕೊರೋನ ಲಸಿಕೆ ಒಂದು ಡೋಸ್ ವ್ಯರ್ಥಗೊಳಿಸಿದರೂ ಒಬ್ಬ ವ್ಯಕ್ತಿಯ ಜೀವನ ಸುರಕ್ಷತೆಯನ್ನು ವಂಚಿಸಿದಂತೆ - ನರೇಂದ್ರ ಮೋದಿ, ಪ್ರಧಾನಿ
ಕೊರೋನ ಹೋರಾಟದಲ್ಲಿ ನೀವು ಒಂದು ವರ್ಷವನ್ನು ವ್ಯರ್ಥಗೊಳಿಸಿರುವುದು?
ಒಪ್ಪಂದ ಮಾಡಿಕೊಂಡರೂ ಚೀನಾ ಕುತಂತ್ರ ಮಾಡುತ್ತಿರುವುದರಿಂದ ಭಾರತ- ಚೀನಾ ಸಂಬಂಧ ಇನ್ನೂ ಸರಿಯಾಗಿಲ್ಲ - ಜೈ ಶಂಕರ್, ಕೇಂದ್ರ ಸಚಿವ
ಹೆಚ್ಚಿರುವ ಕೊರೋನದ ಹಿಂದೆಯೂ ಚೀನಾ ಕುತಂತ್ರವಿರಬಹುದೇ?
ನಾವೀಗ ಕೊರೋನ 3ನೇ ಅಲೆ ಎದುರಿಸಲು ಸಜ್ಜಾಗಿದ್ದೇವೆ- ಡಾ.ಅಶ್ವತ್ಥ ನಾರಾಯಣ, ಉಪಮುಖ್ಯಮಂತ್ರಿ
ಹಾಗಾದರೆ ಎರಡನೇ ಅಲೆಯನ್ನು ಯಾರು ಎದುರಿಸಬೇಕು?
ಕೊರೋನ 2ನೇ ಅಲೆಯಲ್ಲಿ ಸಂಭವಿಸುತ್ತಿರುವ ಪ್ರಾಣ ಹಾನಿಗೆ ಕಾಂಗ್ರೆಸ್ ಪಕ್ಷವೇ ನೇರ ಕಾರಣ - ನಳಿನ್ ಕುಮಾರ್ ಕಟೀಲು, ಸಂಸದ
ಕಾಂಗ್ರೆಸ್ ರಾಜೀನಾಮೆ ನೀಡಿ, ಸರಕಾರವನ್ನು ವಿಸರ್ಜಿಸಬೇಕು.
ಬಿಎಸ್‌ವೈ ಪ್ಯಾಕೇಜ್ ಊಟಕ್ಕಿಲ್ಲದ ಉಪ್ಪಿನಕಾಯಿ- ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ
ಉಪ್ಪಿನಕಾಯಿಯನ್ನು ಮೂರನೇ ಅಲೆಗೆ ತೆಗೆದಿಟ್ಟಿದ್ದಾರಂತೆ.
ಪಕ್ಕದ ಮನೆಗೆ ಬೆಂಕಿ ಬಿದ್ದಾಗ ಆರಿಸುವ ಬದಲು ಕಾಂಗ್ರೆಸ್‌ನವರು ಚಳಿ ಕಾಯಿಸಿಕೊಳ್ಳ್ಳುವ ಕೆಲಸ ಮಾಡುತ್ತಿದ್ದಾರೆ - ಶ್ರೀರಾಮುಲು, ಸಚಿವ
ಸ್ವಂತ ಮನೆಗೆ ಬೆಂಕಿ ಹಾಕಿ ಚಳಿ ಕಾಯಿಸುವ ಬಿಜೆಪಿಗಿಂತ ವಾಸಿ