ಮರೆಯಾದ ಬ್ಯಾರಿ ಇತಿಹಾಸ ಸಂಸ್ಕೃತಿಯ ಹಿರಿಯ ಸಂಶೋಧಕ ಪ್ರೊ. ಬಿ. ಎಂ. ಇಚ್ಲಂಗೋಡು
ಪ್ರೊ. ಬಿ. ಎಂ. ಇಚ್ಲಂಗೋಡು ಇನ್ನಿಲ್ಲ ಎನ್ನುವ ಸುದ್ದಿ ಬೆಳಗ್ಗೆ ಗೊತ್ತಾದಾಗ ಒಮ್ಮೆಲೇ ಮನಸ್ಸು ಭಾರವಾಯಿತು. ಹೊರಜಗತ್ತಿಗೆ ಅವರು ಇತಿಹಾಸ ಪ್ರಾಧ್ಯಾಪಕ, ಬ್ಯಾರಿ ಇತಿಹಾಸ ಸಂಸ್ಕೃತಿಯ ಹಿರಿಯ ಸಂಶೋಧಕ, ತುಳುನಾಡಿನ ಸ್ಥಳೀಯ ಇತಿಹಾಸದ ಬರಹಗಾರ, ಗ್ರಾಹಕರ ರಕ್ಷಣೆಯ ಸಂಸ್ಥೆಯ ನೇತಾರ - ಮುಂತಾದ ಎಲ್ಲಾ ಸಾಧನೆಯ ಹಿರಿಯರು ಎನ್ನುವುದು ಗೊತ್ತಿರುವ ಸಂಗತಿ. ಆದರೆ ನನ್ನ ಪಾಲಿಗೆ ಇವು ಎಲ್ಲವುಗಳ ಜೊತೆಗೆ ಕಳೆದ ಅನೇಕ ವರ್ಷಗಳಿಂದ ಆಪ್ತ ಹಿರಿಯ ಸ್ನೇಹಿತರೂ ಆಗಿದ್ದರು ಪ್ರೊ. ಇಚ್ಲಂಗೋಡು.
ಅವರ ಮನೆಯಿಂದ ನನ್ನ ಮನೆಗೆ ಕಾಲ್ನಡಿಗೆಯಲ್ಲಿ ಸುಮಾರು ಹದಿನೈದು ನಿಮಿಷದ ದಾರಿ. ನಾವು ಸಂಜೆಯ ವಾಕಿಂಗ್‌ನಲ್ಲಿ ಸಾಮಾನ್ಯವಾಗಿ ಮಾರ್ನಮಿಕಟ್ಟೆ ಸರ್ಕಲ್‌ನಲ್ಲಿ ಅಥವಾ ಅಲ್ಲಿಂದ ನಂದಿಗುಡ್ಡೆಯ ದಾರಿಯಲ್ಲಿ ನಡುವೆ ಪರಸ್ಪರ ಭೇಟಿ ಆಗುತ್ತಿದ್ದೆವು. ಸ್ವಲ್ಪಹೊತ್ತು ಇಬ್ಬರದೂ ದಾರಿಬದಿಯಲ್ಲಿ ನಿಂತುಕೊಂಡು ಯೋಗಕ್ಷೇಮ ಮಾತುಕತೆ. ಅವರು ನಮ್ಮ ಮನೆಗೆ ಬರುವುದು ಸಾಮಾನ್ಯವಾಗಿ ಬೆಳಗ್ಗಿನ ಹೊತ್ತಿಗೆ. ಸದಾ ಶ್ವೇತವಸನಧಾರಿ. ನಮ್ಮ ಮನೆಗೆ ಬರುವಾಗ ಅವರ ಚೀಲದಲ್ಲಿ ಕೆಲವು ಪುಸ್ತಕಗಳು, ಕೆಲವು ಹಸ್ತಪ್ರತಿಗಳು; ಜೊತೆಗೆ ಗ್ರಾಹಕ ಸಂರಕ್ಷಣೆಯ ವಾರ್ತಾಪತ್ರದ ಒಂದು ಮುದ್ರಿತಪ್ರತಿ ನನಗೆ ಕೊಡುವುದಕ್ಕೆ. ಇತ್ತೀಚೆಗಿನ ವರ್ಷಗಳಲ್ಲಿ ಅವರು ಏನೇ ಬರೆದು ಪ್ರಕಟಿಸುವುದಿದ್ದರೂ ನನಗೆ ಒಂದು ಬಾರಿ ತೋರಿಸಿದರೆ ಅವರಿಗೆ ಸಮಾಧಾನ. ಒಮ್ಮೆ ಮನೆಗೆ ಬಂದವರು ಬ್ಯಾರಿ ಒಗಟುಗಳ ಸಂಕಲನವೊಂದನ್ನು ಹೊರತರುವ ಬಗ್ಗೆ ನನ್ನ ಸಲಹೆಯನ್ನು ಕೇಳಿದರು. ನಾನು ಕೆಲವು ಅಭಿಪ್ರಾಯಗಳನ್ನು ಕೊಟ್ಟೆ. ಆಮೇಲೆ ಆ ಗ್ರಂಥಕ್ಕೆ ನಾನೇ ಮುನ್ನುಡಿ ಬರೆಯಬೇಕು ಎಂದು ಹೇಳಿದರು. ಬ್ಯಾರಿ ಒಗಟುಗಳ ಕನ್ನಡ ಅನುವಾದವನ್ನು ಓದಿಕೊಂಡು ಮುನ್ನುಡಿ ಬರೆದುಕೊಟ್ಟೆ. ಆ ಪುಸ್ತಕ ‘ಬ್ಯಾರಿ ಎದ್ರ್ ಮಸಲೆಙ’ ಅದನ್ನು ಕೊಡುವುದಕ್ಕಾಗಿಯೇ ಮನೆಗೆ ಬಂದರು. ಆ ಪುಸ್ತಕದ ಮುನ್ನುಡಿಯಲ್ಲಿ ನಾನು ಬರೆದ ಕೆಲವು ಮಾತುಗಳು : ‘‘ಪ್ರೊ. ಬಿ. ಎಂ. ಇಚ್ಲಂಗೋಡು ಬ್ಯಾರಿಜನಾಂಗದ ಇತಿಹಾಸ, ಬ್ಯಾರಿಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ವಿಷಯಗಳಿಗೆ ಸಂಬಂಧಿಸಿದಂತೆ ವಿಶೇಷ ಅಧ್ಯಯನ ನಡೆಸಿ, ಗ್ರಂಥ ಮತ್ತು ಲೇಖನಗಳನ್ನು ರಚಿಸಿರುವ ಹಿರಿಯ ವಿದ್ವಾಂಸರು. ‘ಬ್ಯಾರಿ- ಕನ್ನಡ-ಇಂಗ್ಲಿಷ್ ನಿಘಂಟು’ವಿನ ಸಂಪಾದಕರಾಗಿ ಅವರ ಸಾಧನೆ ವಿಶಿಷ್ಟವಾದುದು. ಈಗ ಪ್ರಕಟವಾಗುತ್ತಿರುವ ಅವರ ‘ಬ್ಯಾರಿ ಎದ್ರ್ ಮಸಲೆ ಙ’(ಬ್ಯಾರಿ ಒಗಟುಗಳು) ಬ್ಯಾರಿ ಜನಪದ ಸಾಹಿತ್ಯದ ಅಧ್ಯಯನದ ದೃಷ್ಟಿಯಿಂದ ಪ್ರಕಟವಾಗುತ್ತಿರುವ ಮೊತ್ತಮೊದಲನೆಯ ಬ್ಯಾರಿ ಒಗಟುಗಳ ಸಂಕಲನ. ಈ ಸಂಕಲನದಲ್ಲಿ 773 ಬ್ಯಾರಿ ಒಗಟುಗಳನ್ನು ಕೊಟ್ಟು, ಪ್ರತಿಯೊಂದು ಬ್ಯಾರಿ ಒಗಟಿನ ಜೊತೆಗೆ ಅವುಗಳ ಕನ್ನಡ ಅನುವಾದವನ್ನು ಕೊಡಲಾಗಿದೆ.’’
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ವತಿಯಿಂದ 2014ರಲ್ಲಿ ‘ಬ್ಯಾರಿ -ಕನ್ನಡ -ಇಂಗ್ಲಿಷ್ ನಿಘಂಟು’ ಯೋಜನೆಯನ್ನು ಆರಂಭಿಸಿದಾಗ ಪ್ರೊ. ಬಿ. ಎಂ. ಇಚ್ಲಂಗೋಡು ಅವರನ್ನು ಅದರ ಸಂಪಾದಕರಾಗಿ ನೇಮಕಮಾಡಲಾಯಿತು. ಆಗ ಅಕಾಡಮಿಯ ಅಧ್ಯಕ್ಷರಾಗಿದ್ದ ಬಿ. ಎ. ಮುಹಮ್ಮದ್ ಹನೀಫ್ ಅವರ ಒತ್ತಾಸೆಗೆ ಮಣಿದು ನಾನು ಅದರ ಸಲಹಾ ಮಂಡಳಿಯಲ್ಲಿ ಇರಲು ಒಪ್ಪಿಕೊಂಡೆ. ಅಷ್ಟು ದೊಡ್ಡಪ್ರಮಾಣದಲ್ಲಿ ಬ್ಯಾರಿಭಾಷೆಗೆ ನಿಘಂಟು ಸಿದ್ಧಮಾಡಬೇಕಾಗಿದ್ದ ಕಾರಣ ಸಹಜವಾಗಿಯೇ ಅನೇಕ ಸವಾಲುಗಳು ಇದ್ದವು. ನಿಘಂಟುಶಾಸ್ತ್ರ ಮತ್ತು ಭಾಷಾವಿಜ್ಞಾನದ ನೆಲೆಯಲ್ಲಿ ನಾನು ಕೊಟ್ಟ ಸಲಹೆಗಳನ್ನು ಸಂಪಾದಕರಾದ ಇಚ್ಲಂಗೋಡು ಸ್ವೀಕರಿಸುತ್ತಿದ್ದರು ಮತ್ತು ತಮ್ಮ ಸಹೋದ್ಯೋಗಿಗಳಿಗೆ ಮನವರಿಕೆ ಮಾಡಿಕೊಡುತ್ತಿದ್ದರು. ಬ್ಯಾರಿ ನಿಘಂಟಿನಲ್ಲಿ ಅವರ ಜೊತೆಗೆ ಸುಮಾರು ಮೂರು ವರ್ಷಗಳ ಕಾಲ, ಅನೇಕ ಬಾರಿ ಸಭೆ ಸೇರಿ ಕೆಲಸಮಾಡಿದ್ದು ನನಗೆ ವಿಶಿಷ್ಟವಾದ ಅನುಭವ.(ಪ್ರಕಟನೆ 2017). ನಾನು ಸ್ವಲ್ಪಅನಾರೋಗ್ಯದಲ್ಲಿ ಇದ್ದಾಗ ನಮ್ಮ ಮನೆಯಲ್ಲೇ ಬ್ಯಾರಿ ನಿಘಂಟಿನ ಸಭೆ ನಡೆದಾಗ ರಮಝಾನ್‌ನ ಉಪವಾಸದ ದಿನಗಳಲ್ಲಿ ಅಕಾಡಮಿಯ ಅಧ್ಯಕ್ಷರ ಜೊತೆಗೆ ಪ್ರೊ. ಇಚ್ಲಂಗೋಡು ಭಾಗವಹಿಸಿ ತಮ್ಮ ಕರ್ತವ್ಯನಿಷ್ಠೆಯನ್ನು ತೋರಿಸಿದ್ದಾರೆ. ಅವರಿಂದ ಬ್ಯಾರಿ ಸಂಸ್ಕೃತಿಯ ಬಗ್ಗೆ ಅನೇಕ ವಿಷಯಗಳನ್ನು ಕಲಿತುಕೊಳ್ಳಲು ನನಗೆ ಸಾಧ್ಯವಾಯಿತು. ಇಂತಹ ವಿದ್ವತ್ ಕೆಲಸಗಳ ಮಹತ್ವ ತತ್ಕಾಲದಲ್ಲಿ ಹೆಚ್ಚು ಜನರ ಗಮನಕ್ಕೆ ಬಾರದಿರಬಹುದು, ಆದರೆ ಇನ್ನು ಐವತ್ತು ನೂರು ವರ್ಷಗಳ ಬಳಿಕ ಇದರ ಒಂದು ಪ್ರತಿಯನ್ನು ಪಡೆಯಲು ಸಂಶೋಧಕರು ಹಾತೊರೆಯುವ ಕಾಲ ಬರುತ್ತದೆ ಎಂದು ನಾವು ಮಾತಾಡಿಕೊಳ್ಳುತ್ತಿದ್ದೆವು.
ಪ್ರೊ. ಇಚ್ಲಂಗೋಡು ಸದಾ ಅಧ್ಯಯನಶೀಲರೂ ಜನಪರಕಾಳಜಿಯವರೂ ಆಗಿದ್ದರು. ಇವೆಲ್ಲವುಗಳ ಜೊತೆಗೆ ಅವರ ಸಜ್ಜನಿಕೆ ಸರಳತೆ ಪ್ರೀತಿಸ್ವಭಾವ ಅಪೂರ್ವವಾದುದು. ವಯಸ್ಸಿನಲ್ಲಿ ನನಗಿಂತ ಸುಮಾರು ಒಂಭತ್ತು ವರ್ಷ ಹಿರಿಯರಾಗಿದ್ದ ಅವರು ನನ್ನೊಡನೆ ಇಟ್ಟುಕೊಂಡಿದ್ದ ವಿಶ್ವಾಸ ಮತ್ತು ಸ್ನೇಹ ನನ್ನ ಬದುಕಿನ ಅಪೂರ್ವ ಭಾಗ್ಯವೆಂದು ತಿಳಿಯುತ್ತೇನೆ. ಇನ್ನು ಮಾರ್ನಮಿಕಟ್ಟೆ -ನಂದಿಗುಡ್ಡೆಯ ದಾರಿಯಲ್ಲಿ ಅವರನ್ನು ಕಂಡು ಮಾತಾಡಲು ಸಿಗಲಾರರು; ಆದರೆ ಅವರು ನಡೆದ ದಾರಿ ಮಾತ್ರ ಸವೆಸಲು ನಮ್ಮ ಪಾಲಿಗೆ ಸಾಕಷ್ಟು ಉಳಿದಿದೆ.