ಮುಗಿದ ಗಡುವು: ಫೇಸ್ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಂ ವಿರುದ್ಧ ಕ್ರಮ ಸಾಧ್ಯತೆ
ಆರು ತಿಂಗಳ ಕಾಲಾವಕಾಶ ಕೋರುತ್ತಿರುವ ಜಾಲತಾಣ ಕಂಪೆನಿಗಳು
ಹೊಸದಿಲ್ಲಿ, ಮೇ 25: ಸಾಮಾಜಿಕ ಜಾಲತಾಣಗಳಿಗೆ ಕೇಂದ್ರ ಸರಕಾರ ನಿಗದಿಪಡಿಸಿರುವ ನೂತನ ಮಾರ್ಗದರ್ಶಿ ಸೂತ್ರಗಳ ಜಾರಿಗೆ ವಿಧಿಸಲಾಗಿದ್ದ ಗಡುವು ಮೇ 25ರಂದು ಕೊನೆಗೊಳ್ಳಲಿದೆ. ಒಂದು ವೇಳೆ ಈ ಮಾರ್ಗದರ್ಶಿ ಸೂತ್ರಗಳನ್ನು ಅನುಸರಿಸಲು ವಿಫಲವಾದಲ್ಲಿ ಫೇಸ್ಬುಕ್, ಟ್ವಿಟ್ಟರ್ ಹಾಗೂ ಇನ್ಸ್ಟಾಗ್ರಾಂಗಳು ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳು ನಿಷೇಧವನ್ನು ಎದುರಿಸುವ ಸಾಧ್ಯತೆಯಿದೆ.
ವಾಟ್ಸ್ಆಪ್, ಫೇಸ್ಬುಕ್, ಟ್ವಿಟ್ಟರ್ಗಳು ನೂತನ ನಿಯಮಾವಳಿಗಳನ್ನು ಈವರೆಗೆ ಅನುಸರಿಸುತ್ತಿಲ್ಲ. ಟ್ವಿಟ್ಟರ್ ಮಾದರಿಯ ಭಾರತೀಯ ಸಾಮಾಜಿಕ ಜಾಲತಾಣ ‘ಕೂ’ ಮಾತ್ರ ಈಗಾಗಲೇ ಕೇಂದ್ರದ ನೂತನ ಮಾರ್ಗದರ್ಶಿ ಸೂತ್ರಗಳನ್ನು ಅಳವಡಿಸಿಕೊಂಡಿದೆ.
2021ರ ಫೆಬ್ರವರಿಯಲ್ಲಿ ಕೇಂದ್ರ ವಿದ್ಯುನ್ಮಾನ ಹಾಗೂ ಮಾಹಿತಿ ತಂತ್ರಜ್ಞಾನ (ಎಂಇಐಟಿವೈ) ಇಲಾಖೆಯು ನೂತನ ಐಟಿ ಕಾನೂನುಗಳನ್ನು ಅನುಸರಿಸಲು ಸಾಮಾಜಿಕ ಜಾಲತಾಣಗಳಿಗೆ ಮೂರು ತಿಂಗಳುಗಳ ಗಡುವು ವಿಧಿಸಿದ್ದು, ಅದು ಮೇ 25ರಂದು ಅಂತ್ಯಗೊಳ್ಳಲಿದೆ.
ಒಂದು ವೇಳೆ ಈ ನೂತನ ನಿಯಮಾವಳಿಗಳನ್ನು ಮೇ 25ರೊಳಗೆ ಅನುಸರಿಸದೆ ಇದ್ದಲ್ಲಿ ಸಾಮಾಜಿಕ ಜಾಲತಾಣ ಕಂಪೆನಿಗಳು ತಮ್ಮ ಸ್ಥಾನಮಾನವನ್ನು ಕಳೆದು ಕೊಳ್ಳಲಿವೆ ಹಾಗೂ ಅವುಗಳ ವಿರುದ್ಧ ಭಾರತೀಯ ಕಾನೂನಿಗೆ ಅನುಗುಣವಾಗಿ ಕ್ರಿಮಿನಲ್ ಕ್ರಮಗಳನ್ನು ಕೈಗೊಳ್ಳಬಹುದಾಗಿದೆ ಎಂದು ಕೇಂದ್ರ ಇಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯ ಎಚ್ಚರಿಕೆ ನೀಡಿದೆ.
ಆದರೆ ತಾವು ತಮ್ಮ ಅಮೆರಿಕದ ಮುಖ್ಯ ಕಾರ್ಯಾಲಯಗಳಿಂದ ಈ ಬಗ್ಗೆ ಉತ್ತರಕ್ಕಾಗಿ ನಿರೀಕ್ಷಿಸುವುದರಿಂದ ತಮಗೆ ಆರು ತಿಂಗಳುಗಳ ಹೆಚ್ಚುವರಿ ಕಾಲಾವಕಾಶ ಬೇಕೆಂದು ಈ ಸಾಮಾಜಿಕ ಜಾಲತಾಣ ಕಂಪೆನಿಗಳು ಈಗಾಗಲೇ ಕೇಂದ್ರ ಸರಕಾರಕ್ಕೆ ಮನವಿ ಮಾಡಿವೆ.
ಕೇಂದ್ರದ ನೂತನ ನಿಯಮಾವಳಿಗಳಲ್ಲಿ ಏನಿದೆ
1. ಸಾಮಾಜಿಕ ಜಾಲತಾಣ ಫ್ಲಾಟ್ ಫಾರಂಗಳು ಭಾರತದಿಂದ ಅನುಸರಣಾ ಅಧಿಕಾರಿಯನ್ನು ನೇಮಿಸಬೇಕು. ಈ ಅಧಿಕಾರಿಯು ಆಯಾ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುವ ವಿಷಯಗಳ ಬಗ್ಗೆ ನಿಗಾವಿರಿಸಬೇಕು ಹಾಗೂ ದೂರುಗಳನ್ನು ಪರಿಶೀಲಿಸಬೇಕು. ಒಂದು ವೇಳೆ ಆಕ್ಷೇಪವೆಂದು ಕಂಡುಬಂದಲ್ಲಿ ಅದನ್ನು ತೆಗೆದುಹಾಕಬೇಕು. ಈ ಕಾನೂನು ಸಾಮಾಜಿಕ ಜಾಲತಾಣಗಳು ಮಾತ್ರವಲ್ಲದೆ ಓಟಿಟಿ ಫ್ಲಾಟ್ ಫಾರಂಗಳಿಗೂ ಅನ್ವಯವಾಗುತ್ತದೆ.
ಅಮೆಝಾನ್ ಪ್ರೈಮ್, ನೆಟ್ ಫ್ಲಿಕ್ಸ್ ಸೇರಿದಂತೆ ಓಟಿಟಿ ಪ್ಲಾಟ್ ಫಾರ್ಮ್ ಗಳು ಭಾರತದಲ್ಲಿ ಅಹವಾಲು ಪರಿಹಾರ ಅಧಿಕಾರಿಯನ್ನು ನೇಮಿಸಬೇಕಾಗಿದ್ದು, ಆತ ಯಾವುದೇ ದೂರುಗಳಿದ್ದಲ್ಲಿ 15 ದಿನಗಳೊಳಗೆ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ.
ಕೇಂದ್ರದ ವಾದ
ಸಾಮಾಜಿಕ ಜಾಲತಾಣ ಪ್ಲಾಟ್ ಫಾರಂಗಳಿಗೆ ಸ್ವಯಂನಿಯಂತ್ರಣಕ್ಕೆ ಸಂಬಂಧಿಸಿದ ಯಾವುದೇ ಸಂಹಿತೆಯಿಲ್ಲ. ಹೀಗಾಗಿ ಅವುಗಳಲ್ಲಿ ಪ್ರಸಾರವಾಗುವ ವಿಷಯ (ಕಂಟೆಂಟ್)ಗಳನ್ನು ನಿಯಂತ್ರಿಸಲು ವಿವಿಧ ಸಚಿವಾಲಯಗಳ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿಯನ್ನು ಈ ಕಂಪೆನಿಗಳು ರಚಿಸಬೇಕೆಂದು ಕೇಂದ್ರ ಸರಕಾರ ಬಯಸುತ್ತಿದೆ.
2. ನೀತಿಸಂಹಿತೆಗಳನ್ನು ಉಲ್ಲಂಘನೆಗೆ ಸಂಬಂಧಿಸಿದ ದೂರುಗಳ ಬಗ್ಗೆ ಕ್ರಮಗಳನ್ನು ಕೈಗೊಳ್ಳಲು ಈ ಸಮಿತಿಗೆ ಏಕಮೇವ ಅಧಿಕಾರವಿರಬೇಕು.
3.ಸಾಮಾಜಿಕ ಜಾಲತಾಣಗಳಲ್ಲಿ ನಿಂದನೆ, ಶೋಷಣೆಗೊಳಗಾದ ಸಂತ್ರಸ್ತರಿಗೆ ತಮ್ಮ ಅಹವಾಲುಗಳನ್ನು ಪರಿಹರಿಸಲು ಯಾರನ್ನು ಸಂಪರ್ಕಿಸಬೇಕೆಂದು ತಿಳಿದಿರುವುದಿಲ್ಲ. ಈ ನಿಟ್ಟಿನಲ್ಲಿ ತಾನು ನಿಗದಿಪಡಿಸಿರುವ ನೂತನ ಮಾರ್ಗದರ್ಶಿ ಸೂತ್ರಗಳ ಅನುಷ್ಠಾನ ಅಗತ್ಯವೆಂದು ಕೇಂದ್ರ ಸರಕಾರದ ವಾದವಾಗಿದೆ.
ನೇಮಕವಾಗಿಲ್ಲ
ಟ್ವಿಟ್ಟರ್ ಮಾದರಿಯ ಭಾರತೀಯ ಸಾಮಾಜಿಕ ಜಾಲತಾಣ ‘ಕೂ’ ಹೊರತುಪಡಿಸಿ ಫೇಸ್ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಂ ಸೇರಿದಂತೆ ಇತರ ಯಾವುದೇ ಫ್ಲಾಟ್ಫಾರಂಗಳು, ನೂತನ ನಿಯಮಾವಳಿಗನುಸಾರವಾಗಿ ಸ್ಥಾನಿಕ ಅಹವಾಲು ಅಧಿಕಾರಿ, ಮುಖ್ಯ ಅನುಸರಣಾ ಅಧಿಕಾರಿ ಹಾಗೂ ನೋಡಲ್ ಸಂಪರ್ಕ ಅಧಿಕಾರಿಯನ್ನು ನೇಮಿಸಿಲ್ಲವೆಂದು ಕೇಂದ್ರ ಸರಕಾರ ಅಸಮಾಧಾನ ವ್ಯಕ್ತಪಡಿಸಿದೆ.
ನೂತನ ನಿಯಮಗಳನ್ನು ಅನುಸರಿಸುವ ಗುರಿಯನ್ನು ಹೊಂದಿದ್ದೇವೆ: ಫೇಸ್ಬುಕ್
ಕೇಂದ್ರ ಸರಕಾರದ ನೂತನ ಮಾಹಿತಿ ತಂತ್ರಜ್ಞಾನ ಕಾನೂನುಗಳಿಗೆ ಅನುಸಾರವಾಗಿ ನಡೆದುಕೊಂಡು ಹೋಗುವ ಧ್ಯೇಯವನ್ನು ತಾನು ಹೊಂದಿರುವುದಾಗಿ ಸಾಮಾಜಿಕ ಜಾಲತಾಣ ಫೇಸ್ಬುಕ್ ಮಂಗಳವಾರ ತಿಳಿಸಿದೆ. ‘‘ಮಾಹಿತಿ ತಂತ್ರಜ್ಞಾನ ಕಾನೂನುಗಳ ನಿಯಮಗಳನ್ನು ಅನುಸರಣೆ ಮಡುವ ಗುರಿಯನ್ನು ನಾವು ಹೊಂದಿದ್ದೇವೆ ಹಾಗೂ ಸರಕಾರದೊಂದಿಗೆ ಹೆಚ್ಚಿನ ಮಾತುಕತೆಯ ಅಗತ್ಯವಿರುವಂತಹ ವಿಷಯಗಳ ಬಗ್ಗೆ ಚರ್ಚಿಸುವುದನ್ನು ಮುಂದುವರಿಸಲಿದ್ದೇವೆ’’ ಎಂದು ಫೇಸ್ಬುಕ್ ವಕ್ತಾರರು ತಿಳಿಸಿದ್ದಾರೆ. ಐಟಿ ಕಾನೂನುಗಳಿಗೆ ಅನುಸಾರವಾಗಿ ನಾವು ಸರಕಾರ ನಿಗದಿಪಡಿಸಿದ ಕಾರ್ಯನಿರ್ವಹಣಾ ಪ್ರಕ್ರಿಯೆಗಳನ್ನು ಜಾರಿಗೊಳಿಸಲು ಹಾಗೂ ದಕ್ಷತೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದೇವೆ’’ ಎಂದವರು ಹೇಳಿದರು.
ಸಾಮಾಜಿಕ ಜಾಲತಾಣ ಕಂಪೆನಿಗಳನ್ನು ನಿಯಂತ್ರಿಸಲು ಕೇಂದ್ರ ಸರಕಾರವು ಈ ವರ್ಷದ ಫೆಬ್ರವರಿಯಲ್ಲಿ ಕಟ್ಟುನಿಟ್ಟಿನ ನಿಯಮಾವಳಿಗಳನ್ನು ಜಾರಿಗೊಳಿಸಿತ್ತು. ಈ ಜಾಲತಾಣ ವೇದಿಕೆಗಳು ಪ್ರಸಾರ ಮಾಡುವ ವಿಷಯಗಳು ಹಾಗೂ ಸುದ್ದಿಗಳನ್ನು ಇದೇ ಮೊದಲ ಬಾರಿಗೆ ಕೇಂದ್ರ ಸರಕಾರದ ಮೇಲ್ವಿಚಾರಣೆಯ ವ್ಯಾಪ್ತಿಗೆ ತರಲಾಗಿತ್ತು.