‘ಬ್ಲ್ಯಾಕ್ ಫಂಗಸ್’: ನಿರ್ಲಕ್ಷ ಸಲ್ಲದು
ಕೊರೋನ ಈಗಾಗಲೇ ಜನರನ್ನು ಹೈರಾಣ ಮಾಡಿದೆ, ಅದರ ಜೊತೆಗೆ ಗಾಯದ ಮೇಲೆ ಬರೆ ಎಂಬಂತೆ ‘ಬ್ಲ್ಯಾಕ್ ಫಂಗಸ್’ ಅಥವಾ ‘ಕಪ್ಪು ಶಿಲೀಂಧ್ರ’ದ ಸೋಂಕು ಕೇಳಿ ಬರುತ್ತಿರುವುದರಿಂದ ವೈದ್ಯಕೀಯ ವಲಯ ಮತ್ತು ಆಡಳಿತ ವರ್ಗದಲ್ಲಿ ಅದರ ನಿರ್ವಹಣೆ ಮತ್ತು ಸಮಗ್ರ ಹತೋಟಿ ಬಗ್ಗೆ ಕಳವಳವೆದ್ದಿದೆ. ಅದರಲ್ಲೂ ದಿನೇ ದಿನೇ ಈ ‘ಬ್ಲ್ಯಾಕ್ ಫಂಗಸ್’ ಕೊರೋನ ಸೋಂಕಿತರಿಗೆ ಹೆಚ್ಚು ತಗಲುತ್ತಿರುವುದು ಆತಂಕಕ್ಕೆ ಎಡೆ ಮಾಡಿದೆ. ಹಾಗಾಗಿ, ಈ ಸಂದಿಗ್ಧ ಸ್ಥಿತಿಯಲ್ಲಿ ಅದರ ಬಗ್ಗೆ ಒಂದು ಪಕ್ಷಿ ನೋಟದ ಪ್ರಯತ್ನ.
ಈ ‘ಬ್ಲ್ಯಾಕ್ ಫಂಗಸ್’ ಹೆಸರೇ ಹೇಳುವಂತೆ ಫಂಗಸ್‌ನಿಂದ ತಗಲುವ ಒಂದು ಸೋಂಕು. ಈ ಫಂಗಸ್ ಎನ್ನುವ ಪದಕ್ಕೆ ‘ಬೂಸ್ಟ್’ ಎನ್ನುವುದು ಪರ್ಯಾಯವಾಗಿರುವ ಆಡುಭಾಷೆ. ಇದರ ಒಟ್ಟು ಹೆಸರೇ... ಫಂಗಸ್ (ಶಿಲೀಂಧ್ರ). ಪ್ರಕೃತಿಯಲ್ಲಿ ಸುಮಾರು 6 ಮಿಲಿಯನ್ ಬಗೆಯ ಶಿಲೀಂಧ್ರಗಳಿವೆ ಎಂದು ಅಂದಾಜಿಸಿದ್ದರೂ ಇವರೆಗೆ ಸುಮಾರು 200 ಮಾತ್ರ ಮಾನವರಲ್ಲಿ ಸೋಂಕನ್ನುಂಟು ಮಾಡಬಲ್ಲವು ಎಂದು ಪಟ್ಟಿ ಮಾಡಲಾಗಿದೆ. ಆಶ್ಚರ್ಯವೆಂದರೆ ನಾವು ತಿನ್ನಲು ಉಪಯೋಗಿಸುವ ಅಣಬೆ ಕೂಡಾ ಇದೇ ಫಂಗಸ್ ಜಾತಿಗೆ ಸೇರಿದೆ.
ಕೆಲವರಿಗೆ ತಲೆ ನೋವಾಗಿರುವ, ತಲೆ ಹೊಟ್ಟು ಸಹ ಒಂದು ಬಗೆಯ ಫಂಗಸ್‌ನಿಂದಲೇ ಬರವಂತಹದು. ಪ್ರಕೃತಿಯಲ್ಲಿ ಇತರ ಜೀವಿಗಳಂತೆ ಫಂಗಸ್‌ಗಳಿಗೆ ತನ್ನ ಆಹಾರವನ್ನು ತಾವೇ ಉತ್ಪತ್ತಿ ಮಾಡಿಕೊಳ್ಳುವ ಸಾಮರ್ಥ್ಯವಿಲ್ಲ. ಹಾಗಾಗಿ ಅವು ತಮ್ಮ ಉಳಿವಿಗಾಗಿ ಬೇರೆ ಆಹಾರದ ಮೂಲಗಳನ್ನು ಅವಲಂಬಿಸಬೇಕಾಗಿದೆ. ಸಾಮಾನ್ಯವಾಗಿ ಇವು ಸತ್ತ ಅಥವಾ ಕೊಳೆಯುತ್ತಿರುವ ಸಸ್ಯಗಳ ಭಾಗಗಳ ಮೇಲೆ ಕಾಣಬಹುದು. ಯಾವುದೇ ಜೀವಿಯೂ ಸತ್ತ ನಂತರ ಅವುಗಳ ದೇಹದ ಭಾಗಗಳ ಮೇಲೆ ಬೆಳೆದು ಅವುಗಳನ್ನು ಸರಳೀಕರಿಸಿ ಗೊಬ್ಬರವಾಗಿ ಪರಿವರ್ತಿಸುವ ಸಾಮಾರ್ಥ್ಯವಿರುವುದು ಈ ಫಂಗಸ್ ಮತ್ತು ಇತರ ಸೂಕ್ಷ್ಮಾಣು ಜೀವಿಗಳಿಗೆ ಮಾತ್ರ. ಅಸಲಿಗೆ ಈ ಫಂಗಸ್‌ಗಳು ಇಲ್ಲದೇ ಇದ್ದಲ್ಲಿ ಎಲ್ಲೆಲ್ಲೂ ಕಸದ ರಾಶಿಯೇ ಅಥವಾ ಗಿಡ-ಮರಗಳ ಒಣಗಿದ ಭಾಗವೇ ತುಂಬಿರುತ್ತಿತ್ತು. ತೆಂಗಿನಕಾಯಿಯನ್ನು ಹೋಳು ಮಾಡಿ ಗಾಳಿಯಲ್ಲಿಟ್ಟರೆ ಒಂದೆರಡು ದಿನದಲ್ಲಿ ಬೂಸ್ಟ್ ಬೆಳೆಯುದನ್ನು ನಾವೆಲ್ಲಾ ಗಮನಿಸಿದ್ದೇವೆ. ಆದರೆ ಅದೇ, ಬೂಸ್ಟ್ ನಮ್ಮ ಮೈ ಮೇಲೆ ಬೆಳೆದರೆ ಹೇಗಿರುತ್ತೆ? ಈ ‘ಬ್ಲ್ಯಾಕ್ ಫಂಗಸ್’ ವಿಚಾರದಲ್ಲಿ ಆಗುತ್ತಿರುವುದು ಅದೇ.
ಹೌದು, ಇವು ಬಹಳ ಅವಕಾಶವಾದಿಯಾಗಿರುವುದರಿಂದ ಒಮ್ಮಿಮ್ಮೆ ಪ್ರಾಣಿಗಳ ಮೇಲೆ (ನಾವೂ ಸೇರಿದಂತೆ) ಸವಾರಿ ಮಾಡುವುದುಂಟು. ಪ್ರಸ್ತುತ, ಬ್ಲಾಕ್ ಫಂಗಸ್‌ನಿಂದ ಬರುವ ಕಾಯಿಲೆಗೆ ಮ್ಯೂಕೋರ್ಮೈಕೋಸಿಸ್(Mucormycosis) ಎಂದು ಹೇಳುತ್ತಾರೆ. ಜಗತ್ತಿನಲ್ಲಿ ‘ಬ್ಲ್ಯಾಕ್ ಫಂಗಸ್’ ಸೋಂಕನ್ನುಂಟುಮಾಡುವ ಫಂಗಸ್‌ಗಳಲ್ಲಿ ರೈಜೋಫಸ್ಸ್ ಒರೈಝೆ (Rhizophus oryzae)ದೇ ಸಿಂಹಪಾಲು (ಶೇ. 70). ಈ ಫಂಗಸ್‌ಗಳ ಜೊತೆ ಕೊರೋನ ಸಮಯದಲ್ಲಿ ಅಸ್ಪೆರ್ಜಿಲ್ಲೋಸಿಸ್ ಎಂಬ ಕಾಯಿಲೆಯೂ ಅಸ್ಪೆರ್ಜಿಲ್ಲುಸ್ (Aspergillus) ಎನ್ನುವ ಫಂಗಸ್‌ಗಳಿಂದ ಕಾಣಿಸಿಕೊಂಡಿದೆ. ಇವು ಸಾಮಾನ್ಯವಾಗಿ ಸತ್ತ ಅಥವಾ ಕೊಳೆಯುತ್ತಿರುವ ಸಾವಯವ ವಸ್ತುಗಳ ಮೇಲೆ ವಾಸಿಸುತ್ತಿರುತ್ತವೆ. ಆದರೆ, ಇವು ಅವಕಾಶವಾದಿ ರೋಗಕಾರಕವಾಗಿರುವುದರಿಂದ ಮಣ್ಣಿನಲ್ಲಿ, ಗಾಳಿಯಲ್ಲಿ ಮತ್ತು ಧೂಳಿನಲ್ಲಿ ತೇಲುತ್ತಿರುವ ಇವುಗಳ ಬೀಜಕಗಳು (spores) ಉಸಿರಾಟದ ಮೂಲಕ ಅಥವಾ ಗಾಯದ ಮೂಲಕ ನಮ್ಮನ್ನು ಪ್ರವೇಶ ಮಾಡುತ್ತವೆ. ಇವುಗಳು ಯಶಸ್ವಿಯಾಗಿ ರೋಗ ತರುವ ಮಟ್ಟಕ್ಕೆ ಬೆಳೆಯಲು ಬಹು ಮುಖ್ಯ ಕಾರಣವೆಂದರೆ ಅವುಗಳ ಆಹಾರದ ಮೂಲ. ಬಹುತೇಕ ಜಾತಿಯ ಫಂಗಸ್‌ಗಳು ಸರಳವಾದ ಶರ್ಕರಪಿಷ್ಟ (carbohydrates) ಅಥವಾ ಸಕ್ಕರೆಯಂತಹ ಅಂಶ ಹೆಚ್ಚಾಗಿರುವ ಮೂಲಗಳ ಮೇಲೆ ಅವಲಂಬಿತವಾಗಿರುವುದು (ಆದರೆ, ಬ್ಯಾಕ್ಟಿರಿಯಾಗಳಿಗೆ ಪ್ರೊಟೀನ್ ಅಂಶವು ಹೆಚ್ಚು ಪ್ರಿಯ). ಮಧುಮೇಹಿಗಳಲ್ಲಿ ಅತಿಯಾದ ಸಕ್ಕರೆ ಅಂಶ ಅಥವಾ ಅದರಲ್ಲಿನ ವ್ಯತ್ಯಯವಾಗುವುದರಿಂದ ಈ ‘ಬ್ಲ್ಯಾಕ್ ಫಂಗಸ್’ಗಳ ಸೋಂಕು ಹರಡಲು ರತ್ನಕಂಬಳಿ ಹಾಸಿದಂತಾಗಿದೆ. ಅಂದರೆ, ಸಿಹಿಯೆಂದರೆ ಈ ಜಾತಿಯ ಫಂಗಸ್‌ಗೆ ಪ್ರಾಣ, ಆದರೆ, ಇದು ನಮಗಂತೂ ಕಹಿ ವಿಚಾರವೇ...!.
ಅದಲ್ಲದೆ ಕೊರೋನ ಸೋಂಕಿತರು ಸ್ಟಿರಾಯ್ಡಿ ಔಷಧಗಳನ್ನು ಉಪಯೋಗಿಸುವುದರಿಂದ ಸಹ ಈ ‘ಬ್ಲ್ಯಾಕ್ ಫಂಗಸ್’ಗಳಿಗೆ ರಹದಾರಿಯಾಗಿದೆ. ಇದರ ಜೊತೆಗೆ ವ್ಯಕ್ತಿಯಲ್ಲಿ ರೋಗ ನಿರೋಧಕ ಶಕ್ತಿಯು ಸಹಜವಾಗಿ ಕುಂದಿದ್ದಲ್ಲಿ ಅಥವಾ ಏಡ್ಸ್‌ನಂತಹ ಕಾಯಿಲೆಯಿಂದ ಬಳಲುತ್ತಿದ್ದಲ್ಲಿ ಈ ಬ್ಲಾಕ್ ಫಂಗಸ್‌ಗಳ ಹಾವಳಿಗೆ ತುತ್ತಾಗುವ ಸಂಭವವೂ ಹೆಚ್ಚಾಗಿರುತ್ತದೆ. ಈ ರೀತಿಯ ಆಹಾರ ಮೂಲ ಮತ್ತು ರೋಗ ನಿರೋಧಕ ಶಕ್ತಿಯೇ ರೋಗ ಹರಡಲು ಸಹಾಯವಾಗುವ ಅಂಶ. ಪ್ರಾರಂಭದಲ್ಲಿ, ನಮ್ಮ ಹಣೆಯ, ಮೂಗು, ಕೆನ್ನೆಯ ಮೂಳೆಗಳ ಹಿಂದೆ, ಕಣ್ಣು ಮತ್ತು ಹಲ್ಲುಗಳ ನಡುವೆ ಇರುವ ಗಾಳಿಯ ಪಾಕೆಟ್‌ಗಳಲ್ಲಿ ಮ್ಯೂಕೋರ್ಮೈಕೋಸಿಸ್ ಸೋಂಕಾಗುತ್ತದೆ.
ಸೋಂಕಿಗೆ ಒಳಗಾದ ನಂತರ ಕಣ್ಣುಗಳು ಮತ್ತು ಮೂಗಿನ ಸುತ್ತ ಕೆಂಪಾಗಿ ಊದಿಕೊಂಡಂತಾಗಿ ನೋವು ಕಾಣಿಸುವುದು, ಜ್ವರ, ತಲೆನೋವು, ಕೆಮ್ಮು, ಉಸಿರಾಟದ ತೊಂದರೆ, ರಕ್ತ ಸಿಕ್ತ ವಾಂತಿ, ಇದರ ಜೊತೆಗೆ ಮಾನಸಿಕ ಸ್ಥಿತಿಯು ಬದಲಾಗುತ್ತದೆ. ಮೂಗಿನ ಹೊಳ್ಳೆಗಳಲ್ಲಿ ಅತಿಯಾದ ನೋವು ಅಥವಾ ಮೂಗು ಕಟ್ಟಿಕೊಂಡಂತಾಗುವುದು, ನಿರಂತರವಾಗಿ ಮೂಗು ಸೋರುವುದು, ಮುಖದ ಒಂದು ಬದಿಯಲ್ಲಿ ನೋವು, ಕೆನ್ನೆಗಳು ಮರಗಟ್ಟಿದಂತಾಗುತ್ತದೆ. ರೋಗ ಉಲ್ಬಣವಾದಂತೆ, ಕಣ್ಣು ಮಂಜಾಗುತ್ತದೆ ಮತ್ತು ವಿಪರೀತವಾದ ಎದೆನೋವು ಕಾಣಿಸಿಕೊಳ್ಳಬಹುದು. ಕ್ರಮೇಣ ಸೋಂಕಿತ ಜಾಗ ಕಪ್ಪುಬಣ್ಣಕ್ಕೆ ತಿರುಗಿ, ಶ್ವಾಸಕೋಶಗಳಿಗೆ ಮತ್ತು ಮೆದುಳಿಗೆ ಸಹ ಹರಡುತ್ತದೆ. ತದನಂತರ, ರಕ್ತದ ಮೂಲಕ ಸೋಂಕು ದೇಹದ ಇತರ ಭಾಗಗಳಿಗೂ ಹರಡಬಹುದು.
ಈಗಾಗಲೇ, ‘ಬ್ಲ್ಯಾಕ್ ಫಂಗಸ್’ ಅನ್ನು ತಡೆಗಟ್ಟಲು European Confederation of Medical Mycology ಮತ್ತು Indian Council Medical Research (ICMR) ಕೆಲವೊಂದು ಮಾರ್ಗ ಸೂಚಿಗಳನ್ನು ನೀಡಿದೆ. ಅದರಂತೆ ಕೆಲವೊಂದು ಔಷಧಿಗಳನ್ನು ಹೆಸರಿಸಿದ್ದಾರೆ. ರೋಗ ವಿಪರೀತವಾದಲ್ಲಿ ಶಸ್ತ್ರಚಿಕಿತ್ಸೆ ಮಾಡಿ ಸೋಂಕಿಗೆ ತುತ್ತಾದ ಅಂಗವನ್ನು ತೆಗೆಯಬೇಕಾಗುತ್ತದೆ. ಆದರೆ, ‘ಬ್ಲ್ಯಾಕ್ ಫಂಗಸ್’ ಸೋಂಕಿನ ಉಲ್ಬಣವನ್ನು ತಡೆಯುವ ಒಂದು ಮಾರ್ಗವೆಂದರೆ ಕೋವಿಡ್-19 ರೋಗಿಗಳು ಚಿಕಿತ್ಸೆ ಪಡೆಯುವಾಗ ಮತ್ತು ಚೇತರಿಕೆಯ ನಂತರ ಸರಿಯಾದ ಪ್ರಮಾಣದ ಮತ್ತು ಅವಧಿಗೆ ಸ್ಟಿರಾಯ್ಡಿಗಳ ಉಪಯೋಗವನ್ನು ಖಚಿತಪಡಿಸಿಕೊಳ್ಳುವುದು. ಮಧುಮೇಹ, ಕ್ಯಾನ್ಸರ್, ಮೂತ್ರಪಿಂಡ ಮತ್ತು ಪಿತ್ತಜನಕಾಂಗದ ಕಾಯಿಲೆಗಳು ಮತ್ತು ಅಂಗಾಂಗ ಕಸಿ ಮಾಡಿಸಿಕೊಂಡಿರುವ ವ್ಯಕ್ತಿಗಳು ಕಾಲಕಾಲಕ್ಕೆ ಅವರ ಗ್ಲೂಕೋಸ್ ಮಟ್ಟವನ್ನು ಪರೀಕ್ಷಿಸುವುದು ಅತಿ ಜರೂರಾಗಿದೆ.
ಹಾಗೆಯೇ, ಎಲ್ಲದಕ್ಕಿಂತ ಮುಖ್ಯವಾಗಿ, ಅತಿ ತೇವಾಂಶವಿರುವ ಸ್ಥಳಗಳಿಂದ ದೂರವಿರುವುದು, ಕಸದ ಗುಂಡಿಯ ಆಸುಪಾಸು ಅಲೆದಾಡದ ಹಾಗೆ ನೋಡಿಕೊಳ್ಳುವುದು ಅಥವಾ ಸಾಧ್ಯವಾದಲ್ಲಿ ಕಸದ ಗುಂಡಿಗಳನ್ನು ತೆರವು ಮಾಡುವುದಾಗಿದೆ. ಹಾಗೆಯೇ, ರೋಗದ ಲಕ್ಷಣಗಳ ಬಗೆ ಅನುಮಾನ ಬಂದ ಕೂಡಲೇ ವೈದ್ಯಕೀಯ ನೆರವು ಪಡೆಯುವುದರಿಂದ ‘ಬ್ಲ್ಯಾಕ್ ಫಂಗಸ್’ ರೋಗವನ್ನು ಯಶಸ್ವಿಯಾಗಿ ನಿರ್ವಹಣೆ ಮಾಡಬಹುದು. ರೋಗ ಬಂದ ಮೇಲೆ ಅಥವಾ ಉಲ್ಬಣವಾದ ಮೇಲೆ ಪರಿತಪಿಸುವುದಕ್ಕಿಂತ ಅದು ಬಾರದಂತೆ ಎಚ್ಚರ ವಹಿಸುವುದು ಪ್ರತಿ ನಾಗರಿಕನ ಜವಾಬ್ದಾರಿಯಾಗಿದೆ.