ನರೇಂದ್ರ ಮೋದಿ ಸರಕಾರದ 7 ವರ್ಷಗಳು- ಒಂದು ಸಮೀಕ್ಷೆ
ಪತನದೆಡೆಗೆ ದೇಶದ ಆರ್ಥಿಕತೆ
► ಸ್ವಾಯತ್ತೆ ಕಳಕೊಂಡ ಸಂಸ್ಥೆಗಳು, ಬಿಕರಿಯಾಗಲಿರುವ ‘ನವರತ್ನಗಳು’
ಈ ಏಳು ವರ್ಷಗಳಲ್ಲಿ ಆರ್ಥಿಕ ವ್ಯವಸ್ಥೆಯ ಬಗ್ಗೆ ಕೂಲಂಕಷ ಮಾಹಿತಿ ಇರುವ ಸಂಸ್ಥೆಗಳನ್ನು ಸರಕಾರದ ಕೈಗೊಂಬೆಗಳಾಗಿ ಪರಿವರ್ತಿಸಲಾಯಿತು. ಹಣಕಾಸು ವ್ಯವಸ್ಥೆಯ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ಶಾಸನಪ್ರಕಾರ ಹೊತ್ತಿರುವ ಭಾರತೀಯ ರಿಸರ್ವ್ ಬ್ಯಾಂಕಿನ (ಆರ್ಬಿಐ) ಜೊತೆ ಮುಂದಾಗಿ ಚರ್ಚಿಸದ ಸರಕಾರ, ನೋಟು ರದ್ದತಿಯ ತನ್ನ ಏಕಪಕ್ಷೀಯ ನಿರ್ಧಾರಕ್ಕೆ ಆ ಸಂಸ್ಥೆಯು ಬದ್ಧವಾಗುವಂತೆ ಮಾಡಿತು. ವರ್ಷಂಪ್ರತಿ ಅದು ನೀಡುವ ಲಾಭಾಂಶ ಸಾಲದೆಂದು ಒತ್ತಡ ಹೇರಿ ಅಗೋಸ್ಟ್ 2019ರಲ್ಲಿ ಆರ್ಬಿ ಐಯ ಮೀಸಲುನಿಧಿಯಿಂದ ರೂ. 1,76,000 ಕೋಟಿಯಷ್ಟು ಹಣವನ್ನು ಒತ್ತಾಯಪೂರ್ವಕ ಪಡೆದುಕೊಂಡಿತು. ಸ್ವಾತಂತ್ರಪೂರ್ವದಲ್ಲಿ ಸುಭಾಶ್ಚಂದ್ರ ಬೋಸ್ ಅವರು ಕಲ್ಪಿಸಿದ್ದ ರಾಷ್ಟ್ರೀಯ ಯೋಜನಾ ಆಯೋಗವನ್ನು 1950ರಲ್ಲಿ ನೆಹರೂ ಸರಕಾರವು ಸ್ಥಾಪಿಸಿತು. ಆಯೋಗವು ದೇಶದ ಆರ್ಥಿಕ ವಿಕಾಸದ ನೀಲನಕಾಶೆಯನ್ನು ತಯಾರಿಸಿ, ಹಾಕಬೇಕಾದ ಗುರಿ ಮತ್ತು ತುಳಿಯಬೇಕಾದ ದಾರಿಗಳ ಬಗ್ಗೆ ಆಮೂಲಾಗ್ರವಾಗಿ ತಜ್ಞರೊಂದಿಗೆ ಸಮಾಲೋಚಿಸಿ, ತಾನು ರೂಪಿಸಿದ ಪಂಚವಾರ್ಷಿಕ ಯೋಜನೆಗಳನ್ನು ಸರಕಾರಕ್ಕೆ ನೀಡುವ ಘನಜವಾಬ್ದಾರಿಯನ್ನು ಹೊಂದಿತ್ತು. ಮೋದಿ ಸರಕಾರ ಜನವರಿ 2015ರಲ್ಲಿ ಈ ಯೋಜನಾ ಆಯೋಗವನ್ನು ವಿಸರ್ಜಿಸಿತು. ಅದರ ಬದಲಾಗಿ ‘ನೀತಿ’ ಆಯೋಗ (ಬದಲಾವಣೆಗಾಗಿರುವ ಭಾರತದ ರಾಷ್ಟ್ರೀಯ ಸಂಸ್ಥೆ - National Institution for Transforming India–NITI) ಎಂಬ ಹೊಸ ಸಂಸ್ಥೆಯನ್ನು ಸ್ಥಾಪಿಸಿತು. ಸಂಸ್ಥೆಯ ಉಪಾಧ್ಯಕ್ಷರಾಗಿ ಅಂತರ್ರಾಷ್ಟ್ರೀಯ ಖ್ಯಾತಿಯ ಅರ್ಥಶಾಸ್ತ್ರಜ್ಞ ಅರವಿಂದ ಪಣಗಾರಿಯ ನೇಮಕವಾಗಿದ್ದರು. ಆದರೆ ಎರಡೇ ವರ್ಷದಲ್ಲಿ ಅವರು ಪದತ್ಯಾಗ ಮಾಡಿದರು. ಸರಕಾರದಿಂದಲೇ ಆಯ್ಕೆಯಾದ ಕೆಲವು ಆರ್ಥಿಕ ತಜ್ಞರು - ಉದಾ: ಆರ್ಬಿಐ ಗವರ್ನರ್ ಊರ್ಜಿತ್ ಪಟೇಲ್, ಉಪಗವರ್ನರ್ ವಿ.ವಿ. ಆಚಾರ್ಯ, ಮುಖ್ಯ ಆರ್ಥಿಕ ಸಲಹಾಗಾರರಾಗಿದ್ದ ಅರವಿಂದ ಸುಬ್ರಹ್ಮಣಿಯನ್ - ತಮ್ಮ ಸ್ಥಾನಗಳಿಂದ ಹಿಂದೆ ಸರಿದರು.
ಅನೂಚಾನವಾಗಿ ಬಂದಿದ್ದ ಇನ್ನೊಂದು ವ್ಯವಸ್ಥೆಯನ್ನೂ ಮೋದಿ ಸರಕಾರ ಕಿತ್ತೆಸೆಯಿತು. ದೇಶದ ವಿಸ್ತಾರ ಮತ್ತು ಅಗತ್ಯವನ್ನು ಮನಗಂಡು ಅನೇಕ ದಶಕಗಳಿಂದ ರೈಲ್ವೇ ವಿಭಾಗದ ಬಜೆಟನ್ನು ಕೇಂದ್ರದ ಸಾಮಾನ್ಯ ಬಜೆಟಿನಿಂದ ಬೇರೆಯಾಗಿ ಸಂಸತ್ತಿನಲ್ಲಿ ಮಂಡಿಸಲಾಗುತ್ತಿತ್ತು. ರೈಲ್ವೇ ಬಜೆಟಿನ ಬಗ್ಗೆ ಸಂಸತ್ತಿನಲ್ಲಿ ಚರ್ಚೆಗಳು ನಡೆಯುತ್ತಿದ್ದವು. ಸಂಸದರು ತಮ್ಮ ಪ್ರದೇಶದ ಅವಶ್ಯಕತೆಗಳನ್ನು ಗಮನಕ್ಕೆ ತರುವ ಅವಕಾಶವಿರುತ್ತಿತ್ತು. ಚಾರಿತ್ರಿಕ ಮತ್ತು ತಾರ್ಕಿಕ ಹಿನ್ನೆಲೆ ಇದ್ದ ರೈಲ್ವೇ ಬಜೆಟನ್ನು ಮೋದಿ ಸರಕಾರ 2017ರಲ್ಲಿ ಸಾಮಾನ್ಯ ಬಜೆಟಿನ ಜೊತೆ ವಿಲೀನಗೊಳಿಸಿ ರೈಲ್ವೇ ರಂಗದ ಪ್ರಾಮುಖ್ಯವನ್ನು ಕಡೆಗಣಿಸಿತು. ಇದರ ಪರಿಣಾಮ ಜನಸಾಮಾನ್ಯರಿಗೆ ಮತ್ತು ಸರಕು ಸಾಗಾಟಕ್ಕೆ ಅತೀ ಅಗತ್ಯವಾದ ರೈಲು ಸಂಪರ್ಕದ ಸುಧಾರಣೆಗಳ ಮೇಲೆ ಆಗಲಿದೆ. ವಿಮಾನಯಾನ ಮತ್ತು ಬುಲೆಟ್ ಟ್ರೈನುಗಳ ಮುಂದೆ ಓಬೀರಾಯನ ರೈಲುಗಾಡಿ ಯಾವ ಲೆಕ್ಕಕ್ಕೆ!
ಇದ್ದ ವ್ಯವಸ್ಥೆಯನ್ನು ಕಿತ್ತೆಸೆಯುವ ಜೊತೆಗೆ ಮಹತ್ವಾ ಕಾಂಕ್ಷೆಯ ಯೋಜನೆಗಳನ್ನು ಸರಕಾರ ಕೈಗೆತ್ತಿಕೊಂಡಿತು. ಮುಂಬೈ-ಅಹಮದಾಬಾದ್ ನಡುವೆ ಶರವೇಗದಲ್ಲಿ ಓಡಬಲ್ಲ ‘ಬುಲೆಟ್ ಟ್ರೈನ್’, ಗುಜರಾತಿನ ಕೆವಾಡಿಯದಲ್ಲಿ ವಿಶ್ವದಲ್ಲಿಯೇ ಅತ್ಯಂತ ಎತ್ತರವಾದ ಸರ್ದಾರ ಪಟೇಲರ ಪ್ರತಿಮೆ ಮತ್ತು ಅದರ ಸುತ್ತಲೂ ಪ್ರವಾಸಿಗಳ ವಿಹಾರಕ್ಕಾಗಿ ಸಾವಿರಾರು ಎಕರೆಗಳ ಕೃತಕವಾದ ಸರೋವರ, ಎರಡನೆಯ ಮತ್ತು ಮೂರನೆಯ ಸ್ತರದ ನಗರಗಳಲ್ಲಿ ವಿಮಾನ ನಿಲ್ದಾಣಗಳ ನಿರ್ಮಾಣ, ನಗರಗಳನ್ನು ‘ಸ್ಮಾರ್ಟ ಸಿಟಿ’ಗಳಾಗಿ ಮೇಲ್ದರ್ಜೆಗೇರಿಸುವ ಯೋಜನೆಗಳು ಮುನ್ನೆಲೆಗೆ ಬಂದವು.
ಸರಕಾರದ ಇನ್ನೊಂದು ಆದ್ಯತೆಯ ವಿಷಯವೆಂದರೆ ಸಾರ್ವಜನಿಕ ರಂಗದ ಉದ್ದಿಮೆಗಳನ್ನು ಖಾಸಗೀ ಉದ್ಯೋಗಪತಿಗಳಿಗೆ ಮಾರುವುದು. ಅನೇಕ ದಶಕಗಳಿಂದ ಅಗತ್ಯವಸ್ತುಗಳ ಉತ್ಪಾದನೆ, ಗಣಿಗಾರಿಕೆ, ತೈಲಶುದ್ಧೀಕರಣ, ರೈಲ್ವೇ ಸಾರಿಗೆ, ವಿಮೆ ಮತ್ತು ಬ್ಯಾಂಕಿಂಗ್ ಸೇವೆ - ಹೀಗೆ ವಿಭಿನ್ನ ರಂಗಗಳಲ್ಲಿ ದೇಶದ ಸ್ವಾವಲಂಬನೆಯ ದ್ಯೋತಕಗಳಾಗಿದ್ದ ‘ನವರತ್ನ, ಮಹಾರತ್ನ, ಮಿನಿರತ್ನ’ವೆಂದು ಖ್ಯಾತಿ ಗಳಿಸಿದ ಅನೇಕ ಸರಕಾರೀ ಉದ್ದಿಮೆಗಳನ್ನು ಖಾಸಗೀರಂಗಕ್ಕೆ ಬಿಟ್ಟುಕೊಡುವ ಯೋಜನೆಯನ್ನು ಈಗ ರೂಪಿಸಲಾಗುತ್ತಿದೆ. ಇದರ ಪರಿಣಾಮ ದೂರಗಾಮಿಯಾಗಲಿದೆ.
► ‘ಕೊರೋನಾಘಾತ’ ಮತ್ತು ಹೊಸ ಘೋಷಣೆಗಳು
2019ರಲ್ಲಿ ಪ್ರಧಾನಿಯಾಗಿ ಮರು ಆಯ್ಕೆಯಾದ ಬೆನ್ನಲ್ಲೇ ಕುಸಿಯುತ್ತಿರುವ ಆರ್ಥಿಕತೆಯ ಚೇತರಿಕೆ ಮತ್ತು ವಿಕಾಸಕ್ಕೆ ಅಗತ್ಯವಾದ ದೂರಗಾಮಿ ಯೋಜನೆಗಳನ್ನು ಮೋದಿಯವರು ಕೈಗೊಂಡಾರು ಎಂಬ ಆಶೆ ಅವರ ಬೆಂಬಲಿಗರಲ್ಲದೆ, ಉಳಿದವರಲ್ಲಿಯೂ ಇತ್ತು. ಜನಬೆಂಬಲ ಬೇಕಾದಷ್ಟಿತ್ತು, ಆದರೆ 2019-20ರಲ್ಲಿ ಈ ದಿಕ್ಕಿನಲ್ಲಿ ಕಾರ್ಯಕ್ರಮಗಳು ಆರಂಭವಾಗಲಿಲ್ಲ. ಏನು ಯೋಜನೆಗಳು ಇವೆ ಎಂಬುದರ ಬಗೆಗೂ ಸಾರ್ವಜನಿಕವಾಗಿ ಚರ್ಚೆ ನಡೆಯಲಿಲ್ಲ. ಆ ವರ್ಷದ ಬಜೆಟಿನಲ್ಲಿ ಕಂಪೆನಿಗಳು ತಮ್ಮ ಲಾಭದ ಮೇಲೆ ಕೊಡಬೇಕಾದ ತೆರಿಗೆಗಳನ್ನು ಕಡಿತಗೊಳಿಸಲಾಯಿತು.
ಅರ್ಥವ್ಯವಸ್ಥೆ ತಾನಾಗಿಯೇ ಹಳಿಗೇರುವ ಮೊದಲೇ, 2020 ಮಾರ್ಚ್ ತಿಂಗಳಿನಲ್ಲಿ ಕೊರೋನ ಸೋಂಕಿನ ನಿಯಂತ್ರಣಕ್ಕೆಂದು ರಾಷ್ಟ್ರವ್ಯಾಪಿ ಲಾಕ್ಡೌನ್ನ್ನು ಕೇವಲ ನಾಲ್ಕು ಗಂಟೆಯ ಮುನ್ಸೂಚನೆ ನೀಡಿ ಹೇರಲಾಯಿತು. ಸಣ್ಣ- ಸಣ್ಣ ಉದ್ದಿಮೆಗಳು, ಕುಶಲಕರ್ಮಿಗಳು, ಸ್ವಂತ ಉದ್ದಿಮೆದಾರರು ತಮ್ಮ ವ್ಯವಹಾರಗಳನ್ನು ಮುಚ್ಚಿದರು; ಮಧ್ಯಮ ಮತ್ತು ದೊಡ್ಡ ಕೈಗಾರಿಕೆಗಳು ಆಂಶಿಕವಾಗಿ ಮುಚ್ಚಿ, ಲಕ್ಷಾಂತರ ಕೆಲಸಗಾರರಿಗೆ ಉದ್ಯೋಗವಿಲ್ಲದಂತಾಯಿತು. ರೈತರ ಉತ್ಪನ್ನಗಳನ್ನು ಮಾರಲು ಅವಕಾಶವಿಲ್ಲದಾಯಿತು. ನಗರಗಳಲ್ಲಿ ಕೂಲಿಕೆಲಸ ಮಾಡಿ ಜೀವನ ನಡೆಸುತ್ತಿದ್ದ ಲಕ್ಷಾಂತರ ಕಾರ್ಮಿಕರು ಅವರವರ ಊರಿಗೆ ಮರಳಿದರು. ದೇಶದ ಎಲ್ಲಾ ಆರ್ಥಿಕ ರಂಗಗಳು ತೀವ್ರವಾದ ಆಘಾತಕ್ಕೆ ಗುರಿಯಾದವು.
ಲಾಕ್ಡೌನ್ ಮುಗಿದ ಬಳಿಕ ಆರ್ಥಿಕತೆಗೆ ಉತ್ತೇಜನ ನೀಡಲೆಂದು ಒಟ್ಟು 20 ಲಕ್ಷಕೋಟಿ ರೂಪಾಯಿ ವೌಲ್ಯದ ‘ಆತ್ಮನಿರ್ಭರ ಭಾರತ’ ಯೋಜನೆಯನ್ನು ಮೋದಿ ಸರಕಾರ ಘೋಷಿಸಿತು. ಇದರ ಮೂಲ ಗುರಿ ಎಲ್ಲಾ ರಂಗಗಳಲ್ಲಿಯೂ ಭಾರತವು ಸ್ವಾವಲಂಬನೆಯನ್ನು ಸಾಧಿಸುವುದು (ಸ್ವಾವಲಂಬನೆ ಇಂದಿರಾ ಗಾಂಧಿಯವರ ಆರ್ಥಿಕ ನೀತಿಯ ದೀರ್ಘಕಾಲೀನ ಗುರಿಯಾಗಿತ್ತು). ಈ ಯೋಜನೆಯನ್ನು ಕಾರ್ಯರೂಪಕ್ಕೆ ತರುವಲ್ಲಿ ಯಾವುದೇ ಸ್ಪಷ್ಟತೆ ಇರಲಿಲ್ಲ. ಚಟುವಟಿಕೆ ನಿಲ್ಲಿಸಿ, ಪಡಕೊಂಡ ಸಾಲಗಳನ್ನು ಮರುಪಾವತಿ ಮಾಡಲು ಅಸಾಧ್ಯವಾದ ಕಿರು, ಸಣ್ಣ, ಮಧ್ಯಮ ಉದ್ದಿಮೆಗಳಿಗೆ, ಸಾಲ ವಾಪಸಾತಿಯ ಕಂತುಗಳನ್ನು ಪುನಾರಚಿಸಲಾಯಿತು; ಆದರೆ ಬಡ್ಡಿಯಲ್ಲಿ ವಿನಾಯಿತಿ ಸಿಗಲಿಲ್ಲ. ಬ್ಯಾಂಕುಗಳು ನಷ್ಟದಲ್ಲಿದ್ದು, ಹೊಸ ಉದ್ದಿಮೆಗಳಿಗೆ ಸಾಲ ನೀಡಲು ಅವುಗಳಲ್ಲಿ ಸಂಪನ್ಮೂಲಗಳಿರಲಿಲ್ಲ. ವಿಲೀನದ ಪ್ರಕ್ರಿಯೆ ಇನ್ನೂ ನಡೆಯುತ್ತಿದ್ದ ಬ್ಯಾಂಕುಗಳಿಗೆ ಹೊಸ ವ್ಯವಹಾರಗಳನ್ನು ಆಮಂತ್ರಿಸುವ ಸಾಮರ್ಥ್ಯವೂ ಇರಲಿಲ್ಲ. ಹೊಸ ಉದ್ದಿಮೆಗಳನ್ನು ಆರಂಭಿಸಲು ಆರ್ಥಿಕತೆ ಚೇತರಿಕೆಯ ಸೂಚನೆಗಳು ಕಂಡುಬರುತ್ತಿರಲಿಲ್ಲ. ಇವೂ ಅಲ್ಲದೆ, ಉದ್ದಿಮೆಗಳ ಸ್ಥಾಪನೆಗೆ ಪೂರ್ವಭಾವಿ ನೀತಿ ಮತ್ತು ರಿವಾಜುಗಳ ಸರಳೀಕರಣ ಇನ್ನೂ ಆಗಿಯೇ ಇರಲಿಲ್ಲ. ಆಡಳಿತದ ತಳಮಟ್ಟದ ಪದರುಗಳಲ್ಲಿ ಹಿಂದಿನಿಂದ ಬಂದ ಕೆಂಪು ಪಟ್ಟಿಯ ಬಲೆಗಳು ಬೇಕಾದಷ್ಟಿದ್ದವು. ವಸ್ತುಸ್ಥಿತಿ ಹೀಗಿರುವಾಗ ಆತ್ಮನಿರ್ಭರತೆ ಘೋಷಣೆಯಲ್ಲಿಯೇ ಉಳಿಯಿತು. ಸ್ವಾವಲಂಬನೆಯನ್ನು ಪ್ರೋತ್ಸಾಹಿಸಲು ‘ಆತ್ಮನಿರ್ಭರ ಭಾರತ’ದ ಯೋಜನೆಯು ಸುಸ್ಥಿರ ಅಭಿವೃದ್ಧಿಯ (ಸಸ್ಟೈನೆಬಲ್ ಡೆವೆಲಪ್ಮೆಂಟ್) ಆಧಾರಸ್ತಂಭಗಳತ್ತ ಕನಿಷ್ಠ ಗಮನವನ್ನೂ ಹರಿಸಲಿಲ್ಲ. ಉದಾಹರಣೆಗಾಗಿ ಸದ್ಯದ ಅವಶ್ಯಕತೆಯಾದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಸುಧಾರಣೆ ಮತ್ತು ಅಭಿವೃದ್ಧಿ ಮುನ್ನೆಲೆಗೆ ಬರಲಿಲ್ಲ. ಇದರಿಂದಾಗಿ ಈಗ ಬೀಸುತ್ತಿರುವ ಎರಡನೇ ಕೋವಿಡ್ ಅಲೆಗೆ ದೇಶವು ವಿಪರೀತ ಬೆಲೆಯನ್ನು ಕೊಡುತ್ತಿದೆ.
► ಹೆಚ್ಚುತ್ತಿರುವ ನಿರುದ್ಯೋಗ, ಬಡತನ ಮತ್ತು ಆರ್ಥಿಕ ಅಸಮಾನತೆ
ಅಧಿಕಾರಕ್ಕೆ ಬರುವ ಮುನ್ನ ವರ್ಷಕ್ಕೆ ಎರಡು ಕೋಟಿ ಉದ್ಯೋಗಗಳನ್ನು ಸೃಷ್ಟಿಮಾಡುತ್ತೇವೆ ಎಂದು ನರೇಂದ್ರ ಮೋದಿ ಘೋಷಿಸಿದ್ದರು. ವಸ್ತುಸ್ಥಿತಿ ಇದರಿಂದ ಭಿನ್ನವಾಗಿ ಮೂಡಿ ಬಂತು. ಮೇಲೆ ಉಲ್ಲೇಖಿಸಿದ ಕಾರಣಗಳಿಂದಾಗಿ ಇರುವ ಉದ್ಯೋಗಗಳೂ ನಷ್ಟವಾದವು; ಹೊಸ ಉದ್ಯೋಗಗಳು ಸೃಷ್ಟಿಯಾಗಲಿಲ್ಲ. ನಿರ್ದಿಷ್ಟವಾದ ಯೋಜನೆಗಳನ್ನೂ ಸರಕಾರ ಜನರ ಮುಂದಿಡಲಿಲ್ಲ. ನ್ಯಾಶನಲ್ ಸ್ಯಾಂಪಲ್ ಸರ್ವೆ ಸಂಸ್ಥೆಯ ಪ್ರಕಾರ 2012-18ರ ಅವಧಿಯಲ್ಲಿ ಕೃಷಿಯೇತರ ರಂಗಗಳಲ್ಲಿ ವಾರ್ಷಿಕ ಉದ್ಯೋಗಗಳ ಸೃಷ್ಟಿ 75 ಲಕ್ಷದಿಂದ 29 ಲಕ್ಷಕ್ಕೆ ಇಳಿದಿತ್ತು. ಇದರಿಂದಾಗಿ ನೈಜ ಆದಾಯವೂ ಕುಂಠಿತವಾಗಿತ್ತು. 2019ರ ಚುನಾವಣೆಯ ಬಳಿಕ ಲೋಕಸಭೆಯಲ್ಲಿ ಪ್ರಸ್ತುತ ಪಡಿಸಿದ ರಾಷ್ಟ್ರೀಯ ಸಾಂಖ್ಯಿಕ ಕಚೇರಿಯ ಸರ್ವೆಯ ಪ್ರಕಾರ 2017-18ರಲ್ಲಿ ನಿರುದ್ಯೋಗಿಗಳ ಪ್ರಮಾಣ 6.1ಶೇ. ರಷ್ಟಿತ್ತು - ಇದು 45 ವರ್ಷಗಳಲ್ಲಿಯೇ ಅತ್ಯಂತ ಹೆಚ್ಚಿನ ಪ್ರಮಾಣದ್ದು. ಈ ವರದಿಯಂತೆ ಗ್ರಾಮೀಣ ಮತ್ತು ನಗರದ ನಿರುದ್ಯೋಗದ ಪ್ರಮಾಣವು ಗರಿಷ್ಠಮಟ್ಟಕ್ಕೆ ತಲಪಿತ್ತು. ಇದನ್ನು ಆರಂಭದಲ್ಲಿ ಸರಕಾರ ಪ್ರಕಟಿಸಲು ಹಿಂದೇಟು ಹಾಕಿತ್ತು ಎಂಬುದೂ ಇಲ್ಲಿ ಪ್ರಸ್ತುತವಾಗುತ್ತದೆ. ಚುನಾವಣೆಯ ಬಳಿಕವೂ ಸರಕಾರ ಸಮಸ್ಯೆಯತ್ತ ಗಮನ ಹರಿಸಲಿಲ್ಲ.
ಯುಎನ್ಡಿಪಿ (ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ) ಮತ್ತು ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯದ 2018ರ ಜಂಟಿ ಅಧ್ಯಯನದ ಪ್ರಕಾರ ಬಿಹಾರ, ಜಾರ್ಖಂಡ್, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶಗಳು 19 ಕೋಟಿ ಕಡುಬಡವರನ್ನು ಹೊಂದಿದ ರಾಜ್ಯಗಳಾಗಿದ್ದವು - ಇಡೀ ದೇಶದ ಬಡವರ ಸಂಖ್ಯೆಯಲ್ಲಿ ಅರ್ಧದಷ್ಟು ಜನ ಈ ನಾಲ್ಕು ರಾಜ್ಯಗಳಲ್ಲಿಯೇ ಇದ್ದರು. ‘ನೀತಿ’ ಆಯೋಗದ 2019ರ ಅಧ್ಯಯನದ ಪ್ರಕಾರ ಬಡತನ, ಹಸಿವು ಮತ್ತು ಆದಾಯದ ಅಸಮಾನತೆಗಳು ಮತ್ತಷ್ಟು ತೀವ್ರವಾಗಿವೆ.
‘ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಇಕಾನಮಿ’ಯ (ಸಿಎಂಐಇ) ವರದಿಯಂತೆ 2019-20ರಲ್ಲಿ ವೇತನ ಪಡೆಯುತ್ತಿರುವ ಉದ್ಯೋಗಿಗಳ ಸಂಖ್ಯೆ 8.6 ಕೋಟಿಯಷ್ಟಿತ್ತು. 2020ರ ಕೊರೋನದ ಲಾಕ್ಡೌನ್ನ ಬಳಿಕ ಈ ಸಂಖ್ಯೆ 6.5 ಕೋಟಿಗೆ ಕುಸಿಯಿತು. ಅಂದರೆ ಸುಮಾರು 2.1 ಕೋಟಿ ಉದ್ಯೋಗಿಗಳು ಕೆಲಸ ಕಳೆದುಕೊಂಡರು. ಅಮೆರಿಕದ ‘ಪ್ಯೂ ಸಂಶೋಧನಾ ಸಂಸ್ಥೆ’ಯ ಮಾಹಿತಿಯ ಪ್ರಕಾರ ದಿನಕ್ಕೆ 2 ಡಾಲರು (ಇಂದಿನ ವಿನಿಮಯದ ದರದ ಪ್ರಕಾರ ಸುಮಾರು ರೂ. 140) ಅಥವಾ ಕಡಿಮೆ ಸಂಪಾದನೆ ಇರುವವರು ಕಡುಬಡವರು; 2020ರ ಆರ್ಥಿಕ ಹಿಂಜರಿತದ ಮೊದಲು ಅವರ ಸಂಖ್ಯೆ 5.9 ಕೋಟಿ ಎಂದು ಅಂದಾಜಿಸಲಾಗಿತ್ತು - ಹಿಂಜರಿತದ ಬಳಿಕ, 13.4 ಕೋಟಿ ಆಗಿರಬಹುದು ಎಂದು ಹೇಳಿದೆ.
► ಕೋವಿಡ್ 2ನೇ ಅಲೆಯಿಂದ ಮತ್ತಷ್ಟು ಹಾನಿ
ಈಗಾಗಲೇ ಬರುತ್ತಿರುವ ವರದಿಗಳಂತೆ ವೇಗವಾಗಿ ಹರಡುತ್ತಿರುವ ಕೋವಿಡ್ ಎರಡನೇ ಅಲೆಯನ್ನು ನಿವಾರಿಸಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಮತ್ತೆ ಲಾಕ್ಡೌನ್, ಕರ್ಫ್ಯೂ ಮುಂತಾದ ಕ್ರಮಗಳನ್ನು ಕೈಗೊಂಡಿವೆ. 2020ರ ಲಾಕ್ಡೌನ್ನ ಕಹಿ ಅನುಭವದ ಹಿನ್ನೆಲೆಯಲ್ಲಿ ಅನೇಕ ವಲಸೆ ಕಾರ್ಮಿಕರ ಮರುವಲಸೆ ತಡೆಯಿಲ್ಲದೆ ನಡೆಯುತ್ತಿದೆ. ಕೈಗಾರಿಕಾ ಚಟುವಟಿಕೆಗಳಿಗೆ, ವ್ಯಾಪಾರ ವಹಿವಾಟುಗಳಿಗೆ, ಕಟ್ಟಡ ನಿರ್ಮಾಣ ಕೆಲಸಗಳಿಗೆ ಮತ್ತೆ ಕಡಿವಾಣ ಬಿದ್ದಿದೆ. ಸಿಎಂಐಇಯ ಇತ್ತೀಚೆಗಿನ ಅಧ್ಯಯನದ ಪ್ರಕಾರ ನಿರುದ್ಯೋಗಿಗಳ ಪ್ರಮಾಣ ಎಪ್ರಿಲ್ ತಿಂಗಳಲ್ಲಿ 8ಶೇ.ಕ್ಕೆ ಏರಿದೆ. 90ಶೇ. ಕುಟುಂಬಗಳ ಆದಾಯ 2020ರ ಮಟ್ಟಕ್ಕಿಂತ ಕೆಳಗೆ ಕುಸಿದಿದೆ; ಸರಕು ಮತ್ತು ಸೇವೆಗಳಿಗಿರುವ ಬೇಡಿಕೆ ನೆಲ ಕಚ್ಚಿದೆ. ಜೊತೆಗೆ ದೇಶದ ಎಲ್ಲೆಡೆಗಳಲ್ಲಿಯೂ ಆರೋಗ್ಯ ರಕ್ಷಣೆಗೆ ಬೇಕಾದ ಮೂಲ ಸೌಲಭ್ಯಗಳ ಕೊರತೆಯಿಂದಾಗಿ ಸಾವಿರಾರು ಕುಟುಂಬಗಳು ಸಂಕಷ್ಟಕ್ಕೆ ಗುರಿಯಾಗಿವೆ, ಅವರ ಬವಣೆ ಇನ್ನೂ ತೀವ್ರವಾಗಲಿದೆ. 2021ರ ಆರ್ಥಿಕ ಸಮೀಕ್ಷೆಯಲ್ಲಿ ನೀಡಿದ ಆರ್ಥಿಕತೆಯ ಚೇತರಿಕೆಯ ಲೆಕ್ಕಾಚಾರಗಳು ಬುಡಮೇಲಾಗಿವೆ.
ಅಗತ್ಯದ ಪರಿಹಾರಗಳು
ಹದಗೆಟ್ಟ ಆರ್ಥಿಕತೆಯನ್ನು ಸ್ಥಿರಗೊಳಿಸಿ ದೇಶವನ್ನು ಮತ್ತೆ ವಿಕಾಸದತ್ತ ಒಯ್ಯಲು ಸಮಗ್ರವಾದ ಕಾರ್ಯಪ್ರಣಾಳಿಯನ್ನು ರೂಪಿಸಬೇಕು. ಇದು ಸರಕಾರದಲ್ಲಿ ಇಂದು ಇರುವ ಸೀಮಿತ ಮಾನವಸಂಪನ್ಮೂಲಗಳಿಂದ ಸಾಧ್ಯವಿಲ್ಲ. ಪಕ್ಷಭೇದವನ್ನು ಬದಿಗಿಟ್ಟು ಸರಕಾರೇತರ ರಂಗಗಳಿಂದ ವಿಭಿನ್ನ ಕ್ಷೇತ್ರಗಳ ತಜ್ಞರನ್ನು ಒಳಗೊಂಡ ಆರ್ಥಿಕ ಕಾರ್ಯಪಡೆಯ ರಚನೆಯಾಗಬೇಕು.
ಈ ಸಮಿತಿ ಕೆಳಗೆ ಗುರುತಿಸಿದ ನಾಲ್ಕು ಪ್ರಮುಖ ಗುರಿಗಳನ್ನು ಹಮ್ಮಿಕೊಂಡು ಕಾರ್ಯಪ್ರವೃತ್ತವಾಗಬೇಕು:
1. ಸಮಗ್ರ ಅಭಿವೃದ್ಧಿಗೆ ಪೂರಕವಾದ ಸಾರಿಗೆ, ಸಂಪರ್ಕ, ವಿಮಾನಯಾನ, ರೈಲು ಸಂಪರ್ಕ, ರಸ್ತೆಗಳು, ನೀರಾವರಿ, ಇಂಧನ, ಶಕ್ತಿ ಪೂರೈಕೆ, ಮುಂತಾದ ಮೂಲಸೌಕರ್ಯಗಳ ಅಭಿವೃದ್ಧಿಗೆ ಉತ್ತೇಜನ.
2. ಆರ್ಥಿಕ ವ್ಯವಸ್ಥೆಯ ಮುಖ್ಯ ಕ್ಷೇತ್ರಗಳಾದ ಕೃಷಿ, ಕೈಗಾರಿಕೆ, ಸೇವೆಗಳು, ವ್ಯಾಪಾರ-ವ್ಯವಹಾರ, ವಿದೇಶ ವ್ಯಾಪಾರಗಳ ಬೆಳವಣಿಗೆ.
3. ಜನಸಾಮಾನ್ಯರ ಬದುಕನ್ನು ಸುಧಾರಿಸಲು ಅಗತ್ಯವಾದ ಆರೋಗ್ಯ, ಶಿಕ್ಷಣ, ಕುಡಿಯುವ ನೀರು, ಆಸರೆ ಒದಗಿಸಲು ಒತ್ತು.
4. ಎಲ್ಲರನ್ನು ಒಳಗೊಂಡಿರುವ ವಿಕಾಸ. ಈಗ ದೇಶದ ಮುಂದಿರುವ ಕಠಿಣವಾದ ಸವಾಲುಗಳನ್ನು ಎದುರಿಸುವ ದೂರದೃಷ್ಟಿ ಪ್ರಸಕ್ತ ರಾಜಕೀಯ ನಾಯಕರಿಗೆ ಇದೆಯೇ? ಸಮಯವೇ ಈ ಯಕ್ಷಪ್ರಶ್ನೆಗೆ ಉತ್ತರ ನೀಡಬೇಕು.