ಸೌರವ್ಯೂಹದಲ್ಲಿ ಇನ್ನೊಂದು ಸೂರ್ಯ ಇದ್ದಿದ್ದರೆ...
ನಮ್ಮ ಬ್ರಹ್ಮಾಂಡದಲ್ಲಿ ಸಾವಿರಾರು ಸೌರವ್ಯೆಹಗಳಿವೆ. ಪ್ರತಿ ಸೌರವ್ಯೂಹಕ್ಕೆ ಒಂದೊಂದು ನಕ್ಷತ್ರ ಅಧಿಪತಿಯಾಗಿದೆ. ಹಾಗೆಯೇ ಪ್ರತಿ ಸೌರವ್ಯೂಹದಲ್ಲಿ ಗ್ರಹಗಳು, ಉಪಗ್ರಹಗಳು, ಕ್ಷುದ್ರಗ್ರಹಗಳು, ಧೂಮಕೇತುಗಳು ಇವೆ. ಗ್ರಹ ಮತ್ತು ಉಪಗ್ರಹಗಳು ನಿಯಮಿತ ಕಕ್ಷೆಯಲ್ಲಿ ಚಲಿಸುತ್ತವೆ. ಆದರೆ ಧೂಮಕೇತುಗಳಿಗೆ ನಿಯಮಿತ ಚಲನಾ ಕಕ್ಷೆ ಇಲ್ಲ. ನಮ್ಮ ಸೌರವ್ಯೆಹಕ್ಕೆ ಸೂರ್ಯನೇ ಅಧಿಪತಿ. ಪ್ರಸ್ತುತ ನಮ್ಮ ಸೌರವ್ಯೂಹದಲ್ಲಿ ಎಂಟು ಗ್ರಹಗಳು, 205 ಉಪಗ್ರಹಗಳು, ಧೂಮಕೇತುಗಳು ಹಾಗೂ ಕ್ಷುದ್ರಗ್ರಹಗಳು ಇವೆ. ಬ್ರಹ್ಮಾಂಡದಲ್ಲಿನ ಊರ್ಟ್ ಮೋಡಗಳು ಹೊಸ ಹೊಸ ನಕ್ಷತ್ರಗಳನ್ನು ಹೊರಹಾಕುತ್ತಲೇ ಇರುತ್ತವೆ. ಹೀಗೆ ಹೊರಬಂದ ನಕ್ಷತ್ರಗಳು ತಮ್ಮದೇ ಆದ ಹೊಸ ಸೌರವ್ಯೂಹಹವನ್ನು ನಿರ್ಮಿಸಿಕೊಳ್ಳುತ್ತಲೇ ಇವೆ. ಹೀಗೆ ರೂಪಗೊಂಡ ಹೊಸ ನಕ್ಷತ್ರವು ನಮ್ಮ ಸೌರವ್ಯೂಹಹವನ್ನು ಪ್ರವೇಶಿಸಿದರೆ ಏನಾಗುತ್ತೆ? ಎಂಬ ಪ್ರಶ್ನೆ ಮೂಡದೇ ಇರದು. ಒಂದು ವೇಳೆ ಇನ್ನೊಂದು ನಕ್ಷತ್ರ ಅಥವಾ ಸೂರ್ಯ ನಮ್ಮ ಸೌರವ್ಯೆಹವನ್ನು ಪ್ರವೇಶಿಸಿದರೆ ಏನೇನು ಬದಲಾವಣೆಗಳು ಆಗುತ್ತವೆ? ಗ್ರಹಗಳ ಚಲನೆಯ ಮೇಲೆ ಹೊಸ ಸೂರ್ಯನು ಪ್ರಭಾವ ಬೀರುವನೇ? ಅಥವಾ ಅವನೂ ನಮ್ಮೆಳಗೊಬ್ಬನಾಗುವನೇ? ಎಂದು ತಿಳಿಯುವ ಕಾತುರತೆ ಮೂಡುತ್ತದೆ. ಪ್ರಸ್ತುತ ಲೇಖನದಲ್ಲಿ ಇನ್ನೊಬ್ಬ ಸೂರ್ಯ ನಮ್ಮ ಸೌರವ್ಯೂಹ ಪ್ರವೇಶಿಸಿದರೆ ಏನಾಗುತ್ತದೆ? ಎಂಬುದರ ಕುರಿತು ಚರ್ಚಿಸೋಣ.
ಒಂದು ಲೆಕ್ಕಾಚಾರದ ಪ್ರಕಾರ 40 ಸಾವಿರ ನಕ್ಷತ್ರಗಳು ಊರ್ಟ್ ಮೋಡಗಳಿಂದ ಹೊರಟಿವೆ ಎಂದು ಅಂದಾಜಿಸಲಾಗಿದೆ. ಆದರೆ ಇವೆಲ್ಲವೂ ಭೂಮಿಗೆ ಬರದೆ ಇರಬಹುದು. ಕೆಲವಾದರೂ ಬರುತ್ತವೆ. ಸುಮಾರು 70,000 ವರ್ಷಗಳ ಹಿಂದೆ ಸ್ಕೋಲ್ಜ್ ಎಂದು ಕರೆಯುವ ಕೆಂಪು ದೈತ್ಯ ನಕ್ಷತ್ರವೊಂದು ಊರ್ಟ್ ಮೋಡಗಳಿಂದ ನಮ್ಮ ಸೌರವ್ಯೆಹದ ಕಡೆ ಹೊರಟಿತ್ತು. ಇದು ಸೂರ್ಯನಿಂದ ಕೇವಲ 0.8 ಬೆಳಕಿನ ವರ್ಷಗಳ ದೂರದಲ್ಲಿತ್ತು. ಆದರೆ ಕಾರಣಾಂತರಗಳಿಂದ ಸ್ಕೋಲ್ಜ್ ತನ್ನ ಪಥವನ್ನು ಬದಲಿಸಿ ಸೂರ್ಯನ ವಿರುದ್ಧ ದಿಕ್ಕಿಗೆ ಸಾಗಿತು. ಇದರಿಂದ ನಮ್ಮ ಸೌರವ್ಯೂಹಕ್ಕೆ ಆಗಮಿಸಬೇಕಾಗಿದ್ದ ಆಗಂತುಕ ನಕ್ಷತ್ರವೊಂದು ದೂರ ಸರಿದು ಆಗುವ ಅನಾಹುತಗಳನ್ನು ತಪ್ಪಿಸಿತು. ಇದೀಗ ಇನ್ನೊಂದು ದೈತ್ಯ ನಕ್ಷತ್ರ ನಮ್ಮ ಸೌರವ್ಯೆಹದತ್ತ ಚಲಿಸುತ್ತಿದೆ. ನಮ್ಮ ಸೂರ್ಯನ ಶೇ. 60 ದ್ರವ್ಯರಾಶಿ ಹೊಂದಿದ ಗ್ಲೈಸಿ710 ಹೆಸರಿನ ನಕ್ಷತ್ರವು ಗಂಟೆಗೆ 52,000 ಕಿ.ಮೀ. ವೇಗದಲ್ಲಿ ಪ್ರಯಾಣಿಸುತ್ತಿದೆ. ಈ ಆಕ್ರಮಣಕಾರಿ ನಕ್ಷತ್ರವು ನಮ್ಮ ಸೌರವ್ಯೂಹಕ್ಕೆ ಕಾಲಿಡಲು ಎಷ್ಟು ಸಮಯ ಬೇಕಾಗುತ್ತದೆ ಮತ್ತು ಅದರಿಂದ ಆಗುವ ತೊಂದರೆಗಳೇನು? ಎಂಬುದನ್ನು ಕುರಿತು ಚರ್ಚಿಸುವುದು ತುಂಬಾ ಮುಖ್ಯ.
ನಮ್ಮ ಸೌರವ್ಯೂಹಕ್ಕೆ ಆಗಮಿಸುವ ಆಗಂತುಕ ನಕ್ಷತ್ರವು ಏನೇನು ತೊಂದರೆ ಮಾಡುತ್ತದೆ ಎಂಬುದು ಆ ನಕ್ಷತ್ರದ ಗಾತ್ರ ಮತ್ತು ಅದರ ಪಥವನ್ನು ಅವಲಂಬಿಸಿದೆ. ಸ್ಕೋಲ್ಜ್ ನಕ್ಷತ್ರವು ಊರ್ಟ್ ಮೋಡದಿಂದ ಹೊರಟು ಪ್ರಾಕ್ಸಿಮಾ ಸೆಂಟರಿಗಿಂತ ಐದು ಪಟ್ಟು ಸಮೀಪದಲ್ಲಿ ಬಂದು ಹೋಗಿತ್ತು. ಹಾಗಾಗಿ ಅದು ಭೂಮಿಯ ಮೇಲೆ ಹೆಚ್ಚು ಪರಿಣಾಮ ಬೀರಲಿಲ್ಲ. ಅದು ಬಂದು ಹೋದ ಕಾಲಕ್ಕೆ ಭೂಮಿಯ ಮೇಲೆ ಆರಂಭಿಕ ಮಾನವರು ಬೃಹತ್ ಜ್ವಾಲಾಮುಖಿ ಸ್ಫೋಟದಿಂದ ನಾಶವಾಗಿದ್ದರು. ಇದು ಕಾಕತಾಳೀಯ ಎಂಬಂತೆ ಸ್ಕೋಲ್ಜ್ ನಕ್ಷತ್ರದ ಪ್ರಭಾವದಿಂದ ಹೀಗಾಯಿತು ಎಂಬ ಕೂಗು ಕೇಳಿಬಂದಿತ್ತು. ಸ್ಕೋಲ್ಜ್ ನಕ್ಷತ್ರವು ಮಾನವರ ಮೇಲೆ ಯಾವುದೇ ಪ್ರಭಾವ ಬೀರದಿದ್ದರೂ ಶೇ.10ರಷ್ಟು ಧೂಮಕೇತುಗಳು ಮತ್ತು ಕ್ಷುದ್ರಗ್ರಹಗಳ ಕಕ್ಷೆಗಳನ್ನು ಬದಲಾಯಿಸಿತ್ತು. ಪ್ರಸ್ತುತ ನಮ್ಮ ಸೌರವ್ಯೂಹದೆಡೆಗೆ ಆಗಮಿಸುತ್ತಿರುವ ಗ್ಲೈಸಿ710 ನಕ್ಷತ್ರವು ಸ್ಕೋಲ್ಜ್‌ಗಿಂತ ಗಾತ್ರದಲ್ಲಿ ದೊಡ್ಡದಿದೆ. ಗ್ಲೈಸಿ710 ಚಲಿಸುತ್ತಿರುವ ವೇಗಕ್ಕೆ ಅನುಸಾರವಾಗಿ ಲೆಕ್ಕಾಚಾರ ಹಾಕಿದರೆ ಅದು ನಮ್ಮ ಸೌರವ್ಯೂಹದ ಅಂಚನ್ನು ತಲುಪಲು ಇನ್ನೂ 1.29 ದಶಲಕ್ಷ ವರ್ಷಗಳು ಬೇಕಾಗುತ್ತದೆ. ಅದು ನಮ್ಮ ಸೌರವ್ಯೆಹದ ಸಂಪರ್ಕ ಪಡೆದ ಕೂಡಲೇ ಭೂಮಿಯನ್ನು ಸ್ವಲ್ಪಮಟ್ಟಿಗೆ ಅಲುಗಾಡಿಸಬಹುದೆಂಬ ಶಂಕೆ ಇದೆ.
ಒಂದು ಅಂದಾಜಿನಂತೆ ಪ್ರತಿದಿನ ಸುಮಾರು 170 ಉಲ್ಕೆಗಳು, ಧೂಮಕೇತುಗಳು ಮತ್ತು ಕ್ಷುದ್ರಗ್ರಹಗಳು ಭೂಮಿಗೆ ಬರುತ್ತವೆ. ಆದರೆ ಬಹುತೇಕವಾಗಿ ಇವುಗಳ ಗಾತ್ರ ಮತ್ತು ಪರಿಣಾಮಗಳು ಅಲ್ಪಪ್ರಮಾಣದಲ್ಲಿರುವುದರಿಂದ ದೊಡ್ಡ ವಿಷಯವಾಗಿ ತೋರುತ್ತಿಲ್ಲ. ಕೆಲವು ವೇಳೆ ಅವು ಜನಸಂಖ್ಯೆ ಇಲ್ಲದ ಪ್ರದೇಶದಲ್ಲಿ ಬೀಳುವುದರಿಂದಲೂ ಅವುಗಳ ಪ್ರಭಾವ ತಿಳಿಯುತ್ತಿಲ್ಲ. 1908ರಲ್ಲಿ ಸೈಬೀರಿಯಾದಲ್ಲಿ ಬಿದ್ದ ಕ್ಷುದ್ರಗ್ರಹವು 80 ಸಾವಿರ ಮರಗಳ ನಾಶಕ್ಕೆ ಕಾರಣವಾಗಿತ್ತು. ಸುಮಾರು 60 ಕಿ.ಮೀ. ವಿಸ್ತಾರದ ಪ್ರದೇಶದಲ್ಲಿ ದೊಡ್ಡದಾದ ಕಂದಕವನ್ನು ಉಂಟುಮಾಡಿತ್ತು. ಒಂದು ವೇಳೆ ಇದೇ ಕ್ಷುದ್ರಗ್ರಹವು ನ್ಯೂಯಾರ್ಕ್ ನಗರದ ಮೇಲೆ ಬಿದ್ದಿದ್ದರೆ ಇಡೀ ನಗರವನ್ನು ಅಲ್ಲೋಲಕಲ್ಲೋಲ ಮಾಡಿಬಿಡುತ್ತಿತ್ತು. ಗಾತ್ರದಲ್ಲಿ ಸೂರ್ಯನಿಗಿಂತ ಚಿಕ್ಕದಾದ ನಕ್ಷತ್ರವೇ ಇಷ್ಟೊಂದು ಪ್ರಭಾವ ಬೀರುವುದಾದರೆ ಸೂರ್ಯನ ಗಾತ್ರದ ನಕ್ಷತ್ರದ ಪ್ರಭಾವ ಎಷ್ಟಿರಬಹುದೆಂದು ಅಂದಾಜಿಸಬಹುದು. ಸೂರ್ಯನಿಗಿಂತ ದೊಡ್ಡದಾದ ನಕ್ಷತ್ರವು ಊರ್ಟ್ ಮೋಡ ದಾಟಿ ನಮ್ಮ ಸೌರವ್ಯೂಹ ಪ್ರವೇಶಿಸಿದರೆ ಪ್ರತಿಯೊಂದು ಗ್ರಹದ ಕಕ್ಷೀಯ ಪಥದ ಪ್ರಭಾವ ಬೀರುತ್ತದೆ. ಇದು ಕೇವಲ ಒಮ್ಮೆ ಮಾತ್ರ ಸಂಭವಿಸಿ ಮರೆಯಾಗುವ ಪ್ರಕ್ರಿಯೆ ಅಲ್ಲ. ಲಕ್ಷಾಂತರ ವರ್ಷಗಳ ಅವಧಿಯಲ್ಲಿ ಈ ಅಡ್ಡಿ ಸಂಭವಿಸುತ್ತಲೇ ಇರುತ್ತದೆ.
ಗ್ರಹಗಳ ಕಕ್ಷಾ ಪಥ ಬದಲಾದರೆ ಆಂತರಿಕ ಮತ್ತು ಬಾಹ್ಯದ ಬೃಹತ್ ಘರ್ಷಣೆಯಿಂದ ಏರಿಳಿತದ ಪರಿಣಾಮಗಳು ಗ್ರಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ. ಭೂಮಿಯ ಮೇಲೆ ಬೀಳುವ ಉಲ್ಕೆಗಳು ಘರ್ಷಣೆಯ ಪರಿಣಾಮವಾಗಿ ಬಿರುಗಾಳಿ ಸೃಷ್ಟಿಸಬಹುದು. ಸೌರಮಂಡಲಕ್ಕೆ ಇನ್ನೊಂದು ನಕ್ಷತ್ರ ಪ್ರವೇಶಿಸಿದರೆ ಭೂಮಿ ಮತ್ತು ಅದರ ನೆರೆಯ ಗ್ರಹಗಳು ಕಾಸ್ಮಿಕ್ ಘಟನೆಗಳನ್ನು ಅನುಭವಿಸುವಂತಾಗುತ್ತದೆ. ಅದು ಭೂಮಿಯ ಸಂಪೂರ್ಣ ನಾಶಕ್ಕೂ ಕಾರಣವಾಗಬಹುದು. ನಮ್ಮ ಸೌರವ್ಯೆಹದ ಗ್ರಹಗಳೆಲ್ಲವೂ ಸೂರ್ಯ ಕೇಂದ್ರಿತವಾಗಿದ್ದು, ಸೂರ್ಯನ ಗುರುತ್ವಕ್ಕೆ ಅನುಗುಣವಾಗಿ ನಿರ್ದಿಷ್ಟ ಕಕ್ಷೆಯಲ್ಲಿ ಚಲಿಸುತ್ತಿವೆ. ಆದರೆ ಇನ್ನೊಂದು ಸೂರ್ಯ/ನಕ್ಷತ್ರ ಸೌರವ್ಯೂಹ ಪ್ರವೇಶಿಸಿದರೆ ಗ್ರಹಗಳ ಕಕ್ಷಾ ಪಥ ಬದಲಾಗುತ್ತದೆ ಮತ್ತು ಆಕಾಶಕಾಯಗಳು ಪರಸ್ಪರ ಮುಖಾಮುಖಿಯಾಗಿ ಸ್ಫೋಟಗೊಳ್ಳುತ್ತವೆ. ಇನ್ನೊಂದು ನಕ್ಷತ್ರ ಸೌರವ್ಯೂಹ ಪ್ರವೇಶಿಸಿದರೆ ಧೂಮಕೇತು ಮತ್ತು ಕ್ಷುದ್ರಗ್ರಹಗಳು ಹೆಚ್ಚು ಹೆಚ್ಚು ಸಕ್ರಿಯಗೊಂಡು ಭೂಮಿಗೆ ಅಪ್ಪಳಿಸುತ್ತವೆ. ಪ್ರತಿದಿನ ಭೂಮಿಗೆ ಬರುವ ಉಲ್ಕೆ, ಕ್ಷುದ್ರಗ್ರಹಗಳು ಮತ್ತು ಧೂಮಕೇತುಗಳ ಸಂಖ್ಯೆ ಹೆಚ್ಚುತ್ತದೆ. ಇವುಗಳಿಂದ ಭೂಮಿ ಮತ್ತು ಇನ್ನಿತರ ಗ್ರಹಗಳು ಪರಸ್ಪರ ಅಪಾಯಕ್ಕೆ ಒಳಗಾಗುತ್ತವೆ. ಇನ್ನೊಂದು ಸೂರ್ಯ ಸೌರವ್ಯೂಹ ಪ್ರವೇಶಿಸದರೆ ಈಗಿನ ಗ್ರಹಗಳೆಲ್ಲವೂ ಹೊಸ ಸೂರ್ಯನ ಸುತ್ತ ಸುತ್ತಬಹುದು ಅಥವಾ ಪರಸ್ಪರ ಒಂದಕ್ಕೊಂದು ಢಿಕ್ಕಿ ಹೊಡೆಯಬಹುದು. ಹೊಸ ನಕ್ಷತ್ರದೊಂದಿಗೆ ಹೊಸ ಗ್ರಹಗಳೂ ನಮ್ಮ ಸೌರವ್ಯೂಹವನ್ನು ಪ್ರವೇಶಿಸಬಹುದು. ಆಗ ಗ್ರಹಗಳ ವ್ಯವಸ್ಥೆಯಲ್ಲಿ ಬದಲಾವಣೆಗಳಾಗುತ್ತವೆ. ಗ್ರಹಗಳು ಉಪಗ್ರಹಗಳಾಗುವ ಹಾಗೂ ಉಪಗ್ರಹಗಳು ಗ್ರಹಗಳಾಗುವ ಅವಕಾಶಗಳೂ ಇವೆ. ಹೊಸ ನಕ್ಷತ್ರವು ಈಗಿನ ಎಲ್ಲಾ ಗ್ರಹಗಳನ್ನು ತನ್ನ ಎಳೆತಕ್ಕೆ ಒಳಪಡಿಸಿಕೊಳ್ಳಬಹುದು. ನೆಮೆಸಿಸ್ ಸಿದ್ಧಾಂತ ಹಾಗೂ ಇನ್ನೊಂದು ಸೂರ್ಯ:
ನೆಮೆಸಿಸ್ ಸಿದ್ಧಾಂತದ ಪ್ರಕಾರ ನಮ್ಮ ಸೌರವ್ಯೂಹಕ್ಕೆ ಇನ್ನೊಂದು ಸೂರ್ಯ ಭೇಟಿಕೊಡುತ್ತಾನೆ. ನೆಮೆಸಿಸ್ ಎಂಬ ಪದವು ಗ್ರೀಕ್ ದೇವತೆಯ ಹೆಸರಿನ ಕುಬ್ಜ ನಕ್ಷತ್ರವಾಗಿದೆ. ಇದರ ಅರ್ಥ ಅವನತಿ ಅಥವಾ ಹಾಳಾಗುವುದನ್ನು ಅರ್ಥೈಸುತ್ತದೆ. ನೆಮೆಸಿಸ್ ಸಿದ್ಧಾಂತದ ಪ್ರಕಾರ ಒಂದು ದಿನ ನಮ್ಮ ಸೌರವ್ಯೆಹ ಅಳಿಸಿಹೋಗುತ್ತದೆ. ಪ್ರತಿ ಇಪ್ಪತ್ತಾರು ದಶಲಕ್ಷ ವರ್ಷಗಳಿಗೊಮ್ಮೆ ಭೂಮಿಗೆ ಸ್ವಲ್ಪಸಮಸ್ಯೆ ಇರುತ್ತದೆ. ಆಗ ಕೆಲವು ಭಯಾನಕ ಹಾಗೂ ಸಾಮೂಹಿಕ ದುರಂತಗಳು ಸಂಭವಿಸುತ್ತವೆ. ಆಗ ಗ್ರಹಗಳಲ್ಲಿನ ಬಹುತೇಕ ಜೀವಿಗಳು ನಾಶ ಹೊಂದುತ್ತವೆ ಮತ್ತು ಪ್ರಕೃತಿಯು ತನ್ನ ಸಮತೋಲನವನ್ನು ಕಾಯ್ದುಕೊಳ್ಳುತ್ತದೆ. ಇದು ಅರವತ್ತೈದು ದಶಲಕ್ಷ ವರ್ಷಗಳ ಹಿಂದೆ ಡೈನೋಸಾರ್‌ಗಳ ಸಾವಿಗೆ ಕಾರಣವಾಗಿತ್ತು. ನಮ್ಮ ಸೂರ್ಯನಿಗೆ ನೆಮೆಸಿಸ್ ಎಂಬ ಪುಟ್ಟ ದುಷ್ಟ ಸಹೋದರನಿದ್ದಾನೆ. ಅವನು ಬಹಳ ದೂರದಲ್ಲಿದ್ದು, ಪ್ರತಿ ಇಪ್ಪತ್ತಾರು ವರ್ಷಗಳಿಗೊಮ್ಮೆ ಸೌರವ್ಯೆಹದ ಸಮೀಪಕ್ಕೆ ಬರುತ್ತಾನೆ. ಅವನು ಬಂದಾಗಲೆಲ್ಲಾ ಸೌರವ್ಯೆಹದ ಗ್ರಹಗಳ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಬೀರುತ್ತಾನೆ ಎನ್ನುತ್ತಾರೆ ಕೆಲ ಖಗೋಳಶಾಸ್ತ್ರಜ್ಞರು. ಅವನು ಊರ್ಟ್ ಮೋಡದಿಂದ ಬಂದಾಗಲೆಲ್ಲಾ ಧೂಮಕೇತುಗಳ ಚಲನೆಯ ಮೇಲೆ ಪರಿಣಾಮ ಬೀರಿ, ಅವು ವೇಗವಾಗಿ ಸೌರವ್ಯೂಹದ ಗ್ರಹಗಳಿಗೆ ಢಿಕ್ಕಿ ಹೊಡೆಯುವಂತೆ ಮಾಡುತ್ತದೆ. ದಶಕಗಳ ಕಾಲದವರೆಗೂ ಗ್ರಹಗಳಿಗೆ ಆಂತರಿಕ ನೋವನ್ನುಂಟು ಮಾಡುತ್ತದೆ. ನೆಮೆಸಿಸ್ ಸೂರ್ಯನಂತೆ ದೊಡ್ಡ ಗಾತ್ರ ಹೊಂದಿಲ್ಲದಿದ್ದರೂ ದೂರದಿಂದಲೇ ಹಾನಿಯನ್ನುಂಟು ಮಾಡುತ್ತದೆ ಎಂದು ಕೆಲ ಖಗೋಳ ಶಾಸ್ತ್ರಜ್ಞರು ವಾದಿಸಿದ್ದರು. ಇತ್ತೀಚಿನ ವರ್ಷಗಳಲ್ಲಿ ನೆಮೆಸಿಸ್‌ನ ಪರಿಕಲ್ಪನೆ ತಣ್ಣಗಾಗಿದೆ.