varthabharthi


ಪ್ರಚಲಿತ

ಇವರು ಬದಲಾಗುವುದು ಯಾವಾಗ?

ವಾರ್ತಾ ಭಾರತಿ : 31 May, 2021
ಸನತ್ ಕುಮಾರ್ ಬೆಳಗಲಿ

ಈ ಕಠಿಣ ದಿನಗಳಲ್ಲಿ ರಾಜಕೀಯ ಹಾಗೂ ಸೈದ್ಧಾಂತಿಕ ವಿರೋಧಿಗಳನ್ನು ದಮನ ಮಾಡುವ ನೀತಿಯನ್ನು ಪ್ರಧಾನಿ ಕೈ ಬಿಡಬೇಕಿತ್ತು. ಸುಳ್ಳು ಆರೋಪ ಹೊರಿಸಿ ಬಂಧಿಸಲ್ಪಟ್ಟಿರುವ ಹೆಸರಾಂತ ಚಿಂತಕ, ಲೇಖಕ ಆನಂದ್ ತೇಲ್ತುಂಬ್ಡೆ, ಕವಿ ವರವರರಾವ್, ಪತ್ರಕರ್ತ ಗೌತಮ್ ನವ್ಲಾಖಾ ಸೇರಿದಂತೆ ಬುದ್ಧಿಜೀವಿಗಳು ಹಾಗೂ ಮಾನವ ಹಕ್ಕುಗಳ ಪರ ಹೋರಾಟಗಾರರನ್ನು ಬಿಡುಗಡೆ ಮಾಡಬೇಕಾಗಿತ್ತು.
ಆದರೆ, ದೇಶದ ಹಿತಕ್ಕಿಂತ ರಾಜಕೀಯ, ಸೈದ್ಧಾಂತಿಕ ವಿರೋಧಿಗಳ ಬಾಯಿ ಮುಚ್ಚಿಸುವುದು, ಹತ್ತಿಕ್ಕುವುದು ಇವರಿಗೆ ಮುಖ್ಯವಾಗಿದೆ.ಶತಮಾನಕ್ಕೊಮ್ಮೆ ಅಪ್ಪಳಿಸುವ ಕೊರೋನದಂತಹ ವಿಪತ್ತಿನಿಂದ ಇಡೀ ಮನುಕುಲ ತತ್ತರಿಸಿದೆ. ಕಳೆದ ವರ್ಷ ಬಸವಳಿದು ಹೋಗಿದ್ದ ಪಾಶ್ಚಿಮಾತ್ಯ ರಾಷ್ಟ್ರಗಳು ಈ ಬಾರಿ ಎರಡನೇ ಅಲೆಯನ್ನು ನಿಭಾಯಿಸುವಲ್ಲಿ ಕೊಂಚ ಯಶಸ್ವಿಯಾಗಿರುವ ವರದಿಗಳು ಬರುತ್ತಿವೆ. ಆದರೆ, ವಿಶ್ವ ಗುರುವಾಗಲು ಹೊರಟ ಭಾರತದಲ್ಲಿ ಮಾತ್ರ ನಿತ್ಯ ಸಾವಿನ ಸೂತಕದ ವಾತಾವರಣ ಆವರಿಸಿದೆ. ಸೋಂಕಿನಿಂದ ಸತ್ತವರು ಎಷ್ಟು ಜನ ಎಂಬ ಬಗ್ಗೆ ಖಚಿತ ಅಂಕಿ-ಸಂಖ್ಯೆಗಳು ಲಭ್ಯವಾಗಿಲ್ಲ. ಸರಕಾರ ಕೊಡುವ ಸಾವಿನ ಅಂಕಿ-ಅಂಶಗಳಿಗಿಂತ ಎಷ್ಟೋ ಪಟ್ಟು ಹೆಚ್ಚು ಸಾವುಗಳು ಸಂಭವಿಸಿವೆ ಎಂದು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ. ಅದು ಹೇಳಿದೆ ಎಂದು ನಾವು ಉದಾಹರಿಸಬೇಕಿಲ್ಲ. ನಮ್ಮ ಸುತ್ತಮುತ್ತ ಅದರಲ್ಲೂ ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಸಂಭವಿಸುತ್ತಿರುವ ಸಾವುಗಳಿಗೂ ಅಧಿಕೃತ ಸಾವಿನ ಸುದ್ದಿಗಳಿಗೂ ತಾಳೆಯಾಗುವುದಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಈಗ ಕೊರೋನ ಇಳಿಮುಖದಲ್ಲಿದೆ ಎಂದು ಹೇಳಲಾಗುತ್ತಿದೆ. ಆದರೆ, ಸಾವಿನ ಸಂಖ್ಯೆ ಕಡಿಮೆಯಾಗಿಲ್ಲ.

ಕೇಂದ್ರ ಸರಕಾರ ಕೊಂಚ ಎಚ್ಚರಿಕೆ ವಹಿಸಿದ್ದರೆ ಕೋವಿಡ್ ಸೋಂಕನ್ನು ನಿಭಾಯಿಸಬಹುದಾಗಿತ್ತು ಎಂಬ ವಿಮರ್ಶೆ ಈಗ ಹಳತಾಗಿದೆ. ಆತ್ಮವಿಮರ್ಶೆ ಮಾಡಿಕೊಳ್ಳಬೇಕಾದವರು ಅದಕ್ಕೆ ಮುಂದಾಗುವ ಯಾವ ಸೂಚನೆ ಕಾಣುತ್ತಿಲ್ಲ. ಇಂತಹ ಸನ್ನಿವೇಶದಲ್ಲಿ ಇಡೀ ದೇಶ ಒಂದಾಗಿ ಈ ಪಿಡುಗನ್ನು ಎದುರಿಸಬೇಕು. ಇದರಲ್ಲಿ ರಾಜಕೀಯ ಮಾಡಬಾರದು ಎಂಬ ಉಪದೇಶಗಳು ಧಾರಾಳವಾಗಿ ಕೇಳಿ ಬರುತ್ತಿವೆ.

ತಾವು ಯಾವುದೇ ಗುಂಪಿಗೆ ಸೇರಿದವರಲ್ಲ ಎಂದು ತೋರಿಸಿಕೊಳ್ಳಲು ಹಾತೊರೆಯುತ್ತಿರುವ ಗಣ್ಯ ವ್ಯಕ್ತಿಗಳು ‘ಸರಕಾರವನ್ನು ಟೀಕಿಸಲು ಇದು ಸಮಯವಲ್ಲ’, ‘ವೈರಾಣು ನಮ್ಮ ಶತ್ರು, ಮೋದಿಯಲ್ಲ’ ಎಂಬ ಹಿತೋಪದೇಶವನ್ನು ಪ್ರತಿಪಕ್ಷಗಳಿಗೆ ಹೇಳುತ್ತಿದ್ದಾರೆ.

ಆದರೆ, ಮನುಷ್ಯರನ್ನು ಕೋಮು ಆಧಾರದಲ್ಲಿ ವಿಭಜಿಸಿ ಅಧಿಕಾರಕ್ಕೆ ಬಂದವರು ಬದಲಾಗಿದ್ದಾರೆಯೇ? ನಾವೆಲ್ಲ ಭಾರತೀಯರು, ನಾವೆಲ್ಲ ಮನುಷ್ಯರು ಎಂಬುದನ್ನು ಒಪ್ಪುತ್ತಾರೆಯೇ? ತಮ್ಮ ಹಿಂದೂ ರಾಷ್ಟ್ರದ ಕಾರ್ಯಸೂಚಿ ಬಿಟ್ಟುಕೊಟ್ಟಿದ್ದಾರೆಯೇ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಕೊಡುವ ಗೋಜಿಗೆ ಉಪದೇಶ ನೀಡುವ ಗಣ್ಯ ವ್ಯಕ್ತಿಗಳು ಹೋಗುವುದಿಲ್ಲ.

ಪಶ್ಚಿಮ ಬಂಗಾಳದಲ್ಲಿ ಚುನಾವಣೆ ನಡೆಸಿದ ರೀತಿ, ಆಡಿದ ಪ್ರಚೋದನಾಕಾರಿ ಮಾತುಗಳು ಇವರು ಬದಲಾಗಿಲ್ಲ ಎಂಬುದಕ್ಕೆ ಮೇಲ್ನೋಟದ ಉದಾಹರಣೆಗಳು ಮಾತ್ರ. ಆದರೆ 2024ರೊಳಗೆ ಭಾರತವನ್ನು ಮನುವಾದಿ ಹಿಂದೂರಾಷ್ಟ್ರವನ್ನಾಗಿ ಮಾಡುವ ಯೋಜನೆ ಮತ್ತು ಯೋಚನೆ ಇನ್ನೂ ಚಾಲನೆಯಲ್ಲಿದೆ.

ಅಯೋಧ್ಯೆಯ ರಾಮ ಮಂದಿರ ನಿರ್ಮಾಣದ ಗೆಲುವಿನೊಂದಿಗೆ ಇಂತಹ ವಿವಾದಗಳನ್ನು ಕೊನೆಗೊಳಿಸಿ ಎಲ್ಲರೂ ಒಂದಾಗಿ ಬಲಿಷ್ಠ ಭಾರತ ನಿರ್ಮಾಣದ ಸಂಕಲ್ಪ ಮಾಡಬೇಕಾಗಿತ್ತು. ಆದರೆ, ಮಂದಿರ ನಿರ್ಮಾಣ ಮಾತ್ರ ಇವರ ಗುರಿಯಲ್ಲ. ಅದು ನೆಪ ಮಾತ್ರ. ಅದನ್ನು ಮುಂದೆ ಮಾಡಿ ಹಿಂದೂ ಮತ್ತು ಮುಸಲ್ಮಾನರಲ್ಲಿ ಶಾಶ್ವ್ವತವಾಗಿ ಅಡ್ಡಗೋಡೆ ನಿರ್ಮಿಸಿ ಅದನ್ನು ಇನ್ನಷ್ಟು ಗಟ್ಟಿಗೊಳಿಸಿ ಅಂತಿಮವಾಗಿ ಸಂವಿಧಾನದ ಸಮಾಧಿ ಮಾಡಿ ಜಾತ್ಯತೀತ ಭಾರತವನ್ನು ಹಿಂದೂ ರಾಷ್ಟ್ರ ಮಾಡುವುದು ಅವರ ಅಂತಿಮ ಗುರಿ. ಕೊರೋನದಿಂದ ಅದಕ್ಕೆ ಸದ್ಯ ಹಿನ್ನಡೆಯಾಗಿದ್ದರೂ ಅದನ್ನು ಸಾಧಿಸಲು ಅವರು ಸಂಕಲ್ಪಮಾಡಿದ್ದಾರೆ.

ಈ ಕಾರಣಕ್ಕೆ ಅಯೋಧ್ಯೆಯ ವಿವಾದ ಬಗೆಹರಿದ ನಂತರ, ಸುಮ್ಮನಾಗದೇ ಕಾಶಿ ಮತ್ತು ಮಥುರಾ ವಿವಾದಗಳಿಗೆ ಗಾಳಿ ಬೀಸುತ್ತಿದ್ದಾರೆ. ನ್ಯಾಯಾಲಯಗಳಿಂದಲೂ ಇವುಗಳ ಐತಿಹಾಸಿಕ ವಿವರ ಸಂಗ್ರಹಕ್ಕೆ ಹಸಿರು ನಿಶಾನೆ ಸಿಕ್ಕಿದೆ. ಈ ಕೋವಿಡ್ ಎರಡನೇ ಅಲೆಯ ಅಬ್ಬರ ಕಡಿಮೆಯಾದ ನಂತರ ಮಥುರಾ, ಕಾಶಿ ವಿವಾದಗಳನ್ನು ಕೆರಳಿಸಲು ರಂಗ ಸಜ್ಜಾಗಿದೆ. ಇದು ನಿನ್ನೆ ಮೊನ್ನೆಯ ಅಜೆಂಡಾ ಅಲ್ಲ.

1964ರಷ್ಟು ಹಿಂದೆಯೇ ಆರೆಸ್ಸೆಸ್ ಎರಡನೇ ಸರ ಸಂಘಚಾಲಕ ಮಾಧವ ಸದಾಶಿವ ಗೊಳ್ವಾಲ್ಕರ್ ಇದ್ದಾಗಲೇ ನೀಲ ನಕ್ಷೆ ಸಿದ್ಧವಾಗಿದೆ. ವಿಶ್ವ ಹಿಂದೂ ಪರಿಷತ್ತು ಎಂಬ ಧರ್ಮದ ಹೆಸರಿನ ರಾಜಕೀಯ ಉದ್ದೇಶದ ಸಂಘಟನೆಯನ್ನು ಕಟ್ಟಿದ್ದು ಇದೇ ಉದ್ದೇಶದಿಂದ.
ಹೀಗಾಗಿ ನರೇಂದ್ರ ಮೋದಿ ನೇತೃತ್ವದ ನಾಗಪುರ ನಿಯಂತ್ರಿತ ಬಿಜೆಪಿ ಸರಕಾರದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಮತ್ತೆ ಕೋಮುವಾದಿ, ವಿಭಜನಕಾರಿ ಕಾರ್ಯಸೂಚಿಗೆ ಮರಳಿ ಹೋಗುವ ಎಲ್ಲ ಸೂಚನೆಗಳು ಗೋಚರಿಸುತ್ತಿವೆ.
ತಮ್ಮ ಕಾರ್ಯಸೂಚಿಯ ಜಾರಿಗಾಗಿ ಧಾರ್ಮಿಕ ಗುರುಗಳನ್ನು ಕೋಮುವಾದಿಗಳು ಬಳಸಿಕೊಳ್ಳುತ್ತಿದ್ದಾರೆ. ಈ ಧಾರ್ಮಿಕ ಗುರುಗಳು ಭಿನ್ನರು. ರಾಮಕೃಷ್ಣ ಪರಮಹಂಸ, ವಿವೇಕಾನಂದ, ಅರವಿಂದರಂಥ ನೈಜ ಆಧ್ಯಾತ್ಮಿಕ ಗುರುಗಳಲ್ಲ. ಇವರು ಧಾರ್ಮಿಕ ದಂಧೆಕೋರರು. ಈ ದಂಧೆಯಲ್ಲಿ ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿ ಕೋಟ್ಯಂತರ ರೂ. ಬಾಚಿಕೊಳ್ಳುತ್ತಿದ್ದಾರೆ.

ಪತಂಜಲಿಯ ಬಾಬಾ ರಾಮ್‌ದೇವ್ ಇಂತಹ ಕಾರ್ಪೊರೇಟ್ ಭೈರಾಗಿ. ಅವರ ಯೋಗ, ಆಯುರ್ವೇದ ಎಲ್ಲವೂ ವ್ಯಾಪಾರ. ಅಲೋಪಥಿ ವೈದ್ಯ ಶಾಸ್ತ್ರದ ಬಗ್ಗೆ ಅವಿವೇಕಿಯಂತೆ ಮಾತಾಡಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಬಾಬಾ ರಾಮ್‌ದೇವ್ ಬಂಧನಕ್ಕೆ ಭಾರತೀಯ ವೈದ್ಯಕೀಯ ಮಂಡಳಿ ಪಟ್ಟು ಹಿಡಿದಿದೆ. ಆದರೆ, ಇದರಿಂದ ಇನ್ನಷ್ಟು ತಾಳ್ಮೆ ಕಳೆದುಕೊಂಡ ರಾಮ್‌ದೇವ್, ಅವರಪ್ಪ ಬಂದರೂ ನನ್ನನ್ನು ಬಂಧಿಸಲು ಸಾಧ್ಯವಿಲ್ಲ ಎಂದು ಅರಚಾಡಿದ್ದಾರೆ?.

ರಾಮ್‌ದೇವ್ ಕೋಪಕ್ಕೆ ಕಾರಣವಿದೆ. ಕೊರೋನಕ್ಕೆ ಕೊರೋನಿಲ್’ ಎಂಬ ಆಯುರ್ವೇದ ಔಷಧ ತಯಾರಿಸಿದ್ದ ಅವರು ಅದನ್ನು ಮಾರುಕಟ್ಟೆಗೆ ಬಿಟ್ಟು ಕೋಟಿ ಕೋಟಿ ಬಾಚಿಕೊಳ್ಳಲು ಮಸಲತ್ತು ನಡೆಸಿದ್ದರು. ಅಷ್ಟರಲ್ಲಿ ಕೊರೋನ ಎರಡನೇ ಅಲೆ ಬಂದು ಜನರು ಅನಿವಾರ್ಯವಾಗಿ ಆಧುನಿಕ ಆಸ್ಪತ್ರೆಗಳ ಮೊರೆ ಹೋದರು. ರಾಮ್‌ದೇವ್ ಔಷಧಿ ಕೇಳುವವರು ಇಲ್ಲದಂತಾಯಿತು. ಅಕಸ್ಮಾತ್ ಇದನ್ನೇ ನಂಬಿ ಜನ ಸೇವಿಸಿದ್ದರೆ, ಏನು ಅನಾಹುತ ಆಗುತ್ತಿತ್ತೋ ಗೊತ್ತಿಲ್ಲ. ಹೀಗೆ ಉದ್ಧಟತನದಿಂದ ವರ್ತಿಸುವ ಈ ಬಾಬಾಗೆ ಬಂಧಿಸುವ ತಾಕತ್ತು ವಿಶ್ವಗುರುವಿನ ಸರಕಾರಕ್ಕೆ ಇಲ್ಲ. ಯಾಕೆಂದರೆ, ಅವರ ಪಕ್ಷದ ಮತ್ತು ಪರಿವಾರದ ಕಪ್ಪು ಹಣದ ತಿಜೋರಿ ಈ ಬಾಬಾ.

ಯಾವುದೇ ವೈದ್ಯ ಪದ್ಧತಿಯನ್ನು ಇನ್ನೊಂದು ವೈದ್ಯ ಪದ್ಧತಿಯ ಪ್ರತಿಪಾದಕ ಟೀಕಿಸುವುದು ಸರಿಯಲ್ಲ. ಎಲ್ಲ ವೈದ್ಯ ಪದ್ಧತಿಗಳು ಜನರ ಆರೋಗ್ಯ ರಕ್ಷಣೆಗಾಗಿ ಅಸ್ತಿತ್ವಕ್ಕೆ ಬಂದಿವೆ. ಆಯುರ್ವೇದ, ಯುನಾನಿ, ಹೋಮಿಯೋಪಥಿ, ಸಿದ್ದ, ಅಲೋಪಥಿ ಹೀಗೆ ಹಲವಾರು ವೈದ್ಯ ಪದ್ಧತಿಗಳಿವೆ. ಅವುಗಳ ಮಿತಿಯಲ್ಲಿ ಉಪಯುಕ್ತಕರವಾಗಿಯೂ ಇವೆ. ಇವುಗಳಲ್ಲಿ ಅಲೋಪಥಿ, ವೈದ್ಯ ಪದ್ಧತಿ ನಿರಂತರ ಸಂಶೋಧನೆಗಳ ಮೂಲಕ ಬೆಳೆಯುತ್ತ ಬಂದಿರುವುದರಿಂದ ಜನರು ಅದರ ಮೊರೆ ಹೋಗಿದ್ದಾರೆ. ಭಾರತದಲ್ಲಿ ಕೊರೋನ ಮೊದಲ ಮತ್ತು ಎರಡನೇ ಅಲೆಯಲ್ಲಿ ಅಲೋಪಥಿ ಚಿಕಿತ್ಸೆ ಲಕ್ಷಾಂತರ ಜನರನ್ನು ಬದುಕಿಸಿದೆ.
ಕೋಮುವಾದಿ ಪರಿವಾರ ಬಾಬಾ ರಾಮ್‌ದೇವ್ ಮಾತ್ರವಲ್ಲ ಇಂತಹ ಅನೇಕರನ್ನು ಸಾಕಿದೆ. ಉದಾಹರಣೆಗೆ ರವಿಶಂಕರ್, ಜಗ್ಗಿ ವಾಸುದೇವ ಇವರೆಲ್ಲ ಪರಿವಾರದ ಫಲಾನುಭವಿಗಳು.

ಜಗ್ಗಿ ವಾಸುದೇವ ಇತ್ತೀಚೆಗೆ ತಮಿಳುನಾಡು ಚುನಾವಣೆ ಸಂದರ್ಭದಲ್ಲಿ ಬಿಜೆಪಿಗೆ ಅನುಕೂಲ ಮಾಡಿಕೊಡುವ ಅಭಿಯಾನವೊಂದನ್ನು ನಡೆಸಿದರು. ತಮಿಳುನಾಡು ಸರಕಾರದ ಅಧೀನದಲ್ಲಿ ಇರುವ ದೇವಾಲಯಗಳನ್ನು ಮುಕ್ತ ಗೊಳಿಸಬೇಕೆಂಬುದು ಅವರ ಬೇಡಿಕೆಯಾಗಿತ್ತು. ತಮಿಳುನಾಡು ವಿಧಾನಸಭೆ ಚುನಾವಣೆಗೆ ಮುನ್ನ ಫೆಬ್ರವರಿಯಲ್ಲಿ ಸಂಘಪರಿವಾರದ ಸಹಕಾರದೊಂದಿಗೆ ಈ ಅಭಿಯಾನ ಕೈಗೆತ್ತಿಕೊಂಡ ಜಗ್ಗಿ ವಾಸುದೇವ ಚುನಾವಣಾ ಪ್ರಣಾಳಿಕೆಯಲ್ಲಿ ಈ ಅಂಶವನ್ನು ಸೇರಿಸಲು ಎಲ್ಲ ಪಕ್ಷಗಳನ್ನು ಒತ್ತಾಯಿಸಿದರು.

ಆದರೆ, ಡಿಎಂಕೆಯ ಸ್ಟಾಲಿನ್ ಮತ್ತು ಎಡಪಂಥೀಯ ಪಕ್ಷಗಳು ಇದಕ್ಕೆ ಸೊಪ್ಪು ಹಾಕಲಿಲ್ಲ. ತಮಿಳುನಾಡು ದೇವಾಲಯಗಳ ಭಾರೀ ಪ್ರಮಾಣದ ಆಸ್ತಿ ಮತ್ತು ಸಂಪತ್ತಿನ ಮೇಲೆ ಈ ಆಧುನಿಕ ಆಧ್ಯಾತ್ಮಿಕ ಭೈರಾಗಿ ಕಣ್ಣು ಹಾಕಿದ್ದ. ಸರಕಾರದ ಮುಜರಾಯಿ ಇಲಾಖೆಯ ನಿರ್ವಹಣೆಯಲ್ಲಿ ಇರುವ ಈ ದೇವಾಲಯಗಳು ಅಭಿವೃದ್ಧಿ ಪಥದಲ್ಲಿ ಸಾಗಿವೆ. ಭಕ್ತರು ಇದರ ಬಗ್ಗೆ ಸಂತ್ರಪ್ತಿ ಹೊಂದಿದ್ದಾರೆ. ಹೀಗಾಗಿ ಇವರ ಆಟ ಅಲ್ಲಿ ನಡೆಯಲಿಲ್ಲ. ಚುನಾವಣೆಯಲ್ಲಿ ಬಿಜೆಪಿಯ ಬೇಳೆ ಬೇಯಲಿಲ್ಲ.
ಕೋವಿಡ್ ಬಂದು ಎಲ್ಲರ ಪ್ರಾಣಕ್ಕೆ ಸಂಚಕಾರ ಉಂಟಾದ ನಂತರವಾದರೂ ಇವರು ಪಾಠ ಕಲಿಯಲು ಸಿದ್ಧ್ದವಿಲ್ಲ. ಇವರ ಸಿದ್ಧಾಂತದ ಅಸ್ತಿತ್ವದ ಅಡಿಪಾಯವೇ ಜನಾಂಗ ದ್ವೇಷ ಮತ್ತು ಜನ ವಿಭಜನೆಯಾಗಿದೆ.

ನಿಜವಾಗಿ ಬದಲಾಗುವ ಮನಸ್ಸು ಇವರಿಗಿದ್ದರೆ ಇಡೀ ದೇಶದ ಜನರನ್ನೇ ಬಾಧಿಸುತ್ತಿರುವ ಕೊರೋನ ವಿಪತ್ತನ್ನು ಎದುರಿಸಲು ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು. ಇಂತಹ ಸಂಕಷ್ಟದ ಕಾಲದಲ್ಲೂ ರೈತರು ವಿರೋಧಿಸುತ್ತಿರುವ ಕೃಷಿ ಕಾನೂನುಗಳನ್ನು ಕೈ ಬಿಡಬೇಕಿತ್ತು.
ಕಾರ್ಮಿಕರನ್ನು ಹತ್ತು ತಾಸು ದುಡಿಮೆಗೆ ಬಲತ್ಕರಿಸುವ ಹಾಗೂ ಅವರ ಹಕ್ಕುಗಳನ್ನು ಅಪಹರಿಸುವ ಕರಾಳ ಕಾಯ್ದೆಗಳನ್ನು ಹಿಂಪಡೆಯಬೇಕಿತ್ತು. ಒಕ್ಕೂಟ ವ್ಯವಸ್ಥೆಯ ಮಹತ್ವವನ್ನು ಗೌರವಿಸಿ ಎಲ್ಲ ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೋವಿಡ್ ಎದುರಿಸುವ ಕಾರ್ಯತಂತ್ರ ರೂಪಿಸಬೇಕಾಗಿತ್ತು.
 ಜಿಎಸ್‌ಟಿಯಲ್ಲಿ ರಾಜ್ಯಗಳ ಪಾಲಿನ ನ್ಯಾಯಸಮ್ಮತ ಪಾಲನ್ನು ನೀಡಬೇಕಾಗಿತ್ತು. ಅಯೋಧ್ಯೆ ವಿವಾದದ ನಂತರ ಮತ್ತೆ ಅಂತಹ ಯಾವುದೇ ವಿವಾದಗಳಿಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದರೆ ಪ್ರಧಾನಿ ಮೋದಿ ಅವರ ಸ್ಥಾನಕ್ಕೆ ಘನತೆ ಬರುತ್ತಿತ್ತು. ಈ ದುರಿತ ಕಾಲದಲ್ಲಿ ಎಲ್ಲರನ್ನೂ ಒಟ್ಟು ಗೂಡಿಸಿಕೊಂಡು ಹೋಗುವ ನಾಯಕತ್ವ ಈ ದೇಶಕ್ಕೆ ಬೇಕಾಗಿದೆ. ಅದನ್ನು ನೀಡುವಲ್ಲಿ ಮೋದಿಯವರು ವಿಫಲರಾದರು ಎಂಬುದು ವಿಷಾದದ ಸಂಗತಿಯಾಗಿದೆ.

ಈ ವೈಫಲ್ಯಕ್ಕೆ ಕಾರಣ ಬಾಲ್ಯದಿಂದಲೂ ಆರೆಸ್ಸೆಸ್ ಶಾಖೆಯಲ್ಲಿ ರೂಪುಗೊಂಡ ಅವರ ವ್ಯಕ್ತಿತ್ವ. ಸಹಬಾಳ್ವೆಯ ಸೌಂದರ್ಯದ ಬದುಕಿನ ಪಾಠವನ್ನು ಅಲ್ಲಿ ಅವರು ಕಲಿಯಲಾಗಲಿಲ್ಲ. ಔರಂಗಜೇಬನ ಹಾಗೂ ರಾಣಾ ಪ್ರತಾಪನ ಕಾಲದ ಕಥೆೆಗಳನ್ನು ಕೇಳುತ್ತ ಬೆಳೆದ ಅವರ ವ್ಯಕಿತ್ವ ವಿಕಾಸಗೊಳ್ಳಲಿಲ್ಲ.

ಅಟಲ್ ಬಿಹಾರಿ ವಾಜಪೇಯಿ ಅದೇ ಸಂಘದ ಹಿನ್ನೆಲೆಯಿಂದ ಬಂದಿದ್ದರೂ ಸಂಘಕ್ಕೆ ಸೇರುವ ಮೊದಲು ಅವರು ಎಡಪಂಥೀಯ ವಿದ್ಯಾರ್ಥಿ ಸಂಘಟನೆಯಾದ ಎಐಎಸ್‌ಎಫ್‌ನಲ್ಲಿದ್ದರು. ಜೊತೆಗೆ ನಿರಂತರ ಓದಿನ ಸಂಸ್ಕಾರ ಅವರಿಗಿತ್ತು. 30ನೇ ವಯಸ್ಸಿನಲ್ಲಿ ಮೊದಲ ಬಾರಿ ಸಂಸತ್ತನ್ನು ಪ್ರವೇಶಿಸಿದಾಗ ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ಸೋಷಲಿಸ್ಟ್ ನಾಯಕ ರಾಮ ಮನೋಹರ ಲೋಹಿಯಾ ಮತ್ತು ಕಮ್ಯುನಿಸ್ಟ್ ಸಂಸದ ಪ್ರೊ.ಹಿರೇನ್ ಮುಖರ್ಜಿ ಅವರಿಂದ ಪ್ರಭಾವಿತರಾಗಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ ಎಲ್ಲರ ಮಾತಿಗೂ ಸ್ಪಂದಿಸುವ ತೆರೆದ ಮನಸ್ಸು ಅವರಿಗಿತ್ತು. ಇಷ್ಟೆಲ್ಲ ಇದ್ದರೂ ತನ್ನ ಆತ್ಮ ಆರೆಸ್ಸೆಸ್ ಎಂದು ಹೇಳುತ್ತಿದ್ದ ವಾಜಪೇಯಿ (ಗೋವಿಂದಾಚಾರ್ಯರು ಹೇಳಿದಂತೆ) ಸಂಘದ ಸೌಮ್ಯ ಮುಖವಾಡ ಆಗಿದ್ದರು ಎಂಬುದು ನಿಜ.

ಈ ಕಠಿಣ ದಿನಗಳಲ್ಲಿ ರಾಜಕೀಯ ಹಾಗೂ ಸೈದ್ಧಾಂತಿಕ ವಿರೋಧಿಗಳನ್ನು ದಮನ ಮಾಡುವ ನೀತಿಯನ್ನು ಪ್ರಧಾನಿ ಕೈ ಬಿಡಬೇಕಿತ್ತು. ಸುಳ್ಳು ಆರೋಪ ಹೊರಿಸಿ ಬಂಧಿಸಲ್ಪಟ್ಟಿರುವ ಹೆಸರಾಂತ ಚಿಂತಕ, ಲೇಖಕ ಆನಂದ್ ತೇಲ್ತುಂಬ್ಡೆ, ಕವಿ ವರವರರಾವ್, ಪತ್ರಕರ್ತ ಗೌತಮ್ ನವ್ಲಾಖಾ ಸೇರಿದಂತೆ ಬುದ್ಧಿಜೀವಿಗಳು ಹಾಗೂ ಮಾನವ ಹಕ್ಕುಗಳ ಪರ ಹೋರಾಟಗಾರರನ್ನು ಬಿಡುಗಡೆ ಮಾಡಬೇಕಾಗಿತ್ತು.
ಆದರೆ, ದೇಶದ ಹಿತಕ್ಕಿಂತ ರಾಜಕೀಯ, ಸೈದ್ಧಾಂತಿಕ ವಿರೋಧಿಗಳ ಬಾಯಿ ಮುಚ್ಚಿಸುವುದು, ಹತ್ತಿಕ್ಕುವುದು ಇವರಿಗೆ ಮುಖ್ಯವಾಗಿದೆ.
ಈಗಲೂ ಕಾಲ ಮಿಂಚಿಲ್ಲ. ಪ್ರಧಾನಿ ನರೇಂದ್ರ ಮೋದಿಯವರು ಸರ್ವಪಕ್ಷ ಸಭೆ ಕರೆದು ಎಲ್ಲರ ಜೊತೆಗೂಡಿ ಈ ಕೊರೋನ ಎಂಬ ವಿಪತ್ತಿನ ಎದುರು ಕಾರ್ಯತಂತ್ರ ರೂಪಿಸಲಿ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)