ಭಾರತ ಜಿಎಸ್ಟಿಯಿಂದ ಸಾಧಿಸಿದ್ದೇನು?
ರಾಜ್ಯಗಳು ಒಕ್ಕೂಟ ವ್ಯವಸ್ಥೆ ರಕ್ಷಿಸಿಕೊಳ್ಳಬೇಕೆಂದರೆ, ತಮ್ಮ ಜನರ ಹಿತಾಸಕ್ತಿ ಕಾಪಾಡಿಕೊಳ್ಳಬೇಕೆಂದರೆ, ಆರ್ಥಿಕವಾಗಿ ದಿವಾಳಿಯಾಗುವುದರಿಂದ ತಪ್ಪಿಸಿಕೊಳ್ಳಬೇಕೆಂದರೆ ಪಕ್ಷಭೇದ ಮರೆತು ‘‘ಜಿಎಸ್ಟಿಯನ್ನು ರದ್ದುಗೊಳಿಸಿ’’ ಎನ್ನುವ ಒಗ್ಗಟ್ಟಿನ ಮಂತ್ರ ಜಪಿಸಬೇಕಿದೆ. ಬಿಜೆಪಿಗೆ ಸಾಧ್ಯವಾಗದೆ ಹೋದರೂ 14 ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ವಿರೋಧ ಪಕ್ಷಗಳು ಜಿಎಸ್ಟಿ ರದ್ದುಗೊಳಿಸಿ, ರಾಜ್ಯ ಉಳಿಸಿ ಎನ್ನುವ ಹಕ್ಕೊತ್ತಾಯ ಮಂಡಿಸಲೇಬೇಕು ಮತ್ತು ಅದು ಗುರಿ ಮುಟ್ಟುವವರೆಗೂ ಪ್ರಜಾತಾಂತ್ರಿಕವಾಗಿ ಅಸಹಕಾರ ಚಳವಳಿಯ ಸಂಘರ್ಷವನ್ನು ಮುಂದುವರಿಸಲೇಬೇಕು. ಬೇರೆ ದಾರಿಯಿಲ್ಲ.
ಪ್ರಸಕ್ತ ಬಿಕ್ಕಟ್ಟು
ನಾಲ್ಕು ವರ್ಷಗಳ ಹಿಂದೆ 2017ರಲ್ಲಿ ಆಗಿನ ಹಣಕಾಸು ಮಂತ್ರಿ ಅರುಣ್ ಜೇಟ್ಲಿ ಯಾವುದೇ ಪೂರ್ವ ತಯಾರಿ ಇಲ್ಲದೆ, ಆರ್ಥಿಕ ಪರಿಣಿತರ, ವಿರೋಧ ಪಕ್ಷಗಳ ತೀವ್ರವಾದ ಆಕ್ಷೇಪಣೆಗಳನ್ನು ನಿರ್ಲಕ್ಷಿಸಿ ಕೇವಲ ರಾಜಕೀಯ ಲಾಭಕ್ಕಾಗಿ ಜಿಎಸ್ಟಿಯನ್ನು ಜಾರಿಗೊಳಿಸಿದರು. ಮೋದಿ ಸರಕಾರವು ನೋಟಿನ ಅಮಾನ್ಯೀಕರಣದ ಗಾಯದ ಮೇಲೆ ಈ ಜಿಎಸ್ಟಿ ಬರೆ ಎಳೆದು ಭಾರತದ ಆರ್ಥಿಕ ನೀತಿಯನ್ನು ಮತ್ತಷ್ಟು ಹದಗೆಡಲು ಕಾರಣರಾದರು. ಇಲ್ಲಿನ ಉತ್ಪಾದಕರಿಗೆ, ಮಾರಾಟಗಾರರಿಗೆ ಈ ಜಿಎಸ್ಟಿ ತೆರಿಗೆ ನೀತಿಯ ಕುರಿತು ಸಣ್ಣ ಮಟ್ಟದ ಜ್ಞಾನವೂ ಇಲ್ಲದಂತಾಗಿ ಈ ತೆರಿಗೆ ಭಯೋತ್ಪಾದನೆಯಲ್ಲಿ ಜರ್ಜರಿತರಾಗಿದ್ದಾರೆ. ಈ ಹಿಂದೆ ಯುಪಿಎ ಕಾಲದಲ್ಲಿ ಅನೇಕ ಮಿತಿಗಳ ನಡುವೆಯೂ ಬಂಡವಾಳ ಹೂಡಿಕೆ ಮತ್ತು ರಫ್ತಿನ ಮೂಲಕ ಗಳಿಸಿದ ವಿದೇಶಿ ವಿನಿಮಯ ಕಾರಣಕ್ಕೆ ಆರ್ಥಿಕ ಹಿಂಜರಿಕೆ ಉಂಟಾಗಿರಲಿಲ್ಲ. ಕಳೆದ ಏಳು ವರ್ಷಗಳಲ್ಲಿ ಮೋದಿ ಕೃಪೆಯಿಂದ ನೋಟು ರದ್ದತಿಯಿಂದಾಗಿ ಬೇಡಿಕೆ ವಲಯವು ನಾಶಗೊಂಡಿತು ಮತ್ತು ಜಿಎಸ್ಟಿ ಜಾರಿಯಿಂದ ಪೂರೈಕೆ ವಲಯದಲ್ಲಿ ಹೊಡೆತ ಕೊಟ್ಟಿದೆ. ಹಳೆಯ ತೆರಿಗೆ ಪದ್ಧತಿಯಲ್ಲಿ ಉತ್ಪಾದನೆ, ಉತ್ಪನ್ನ ತೆರಿಗೆಯ ಕೇಂದ್ರ ಬಿಂದುವಾಗಿತ್ತು. ಆದರೆ ಈ ಜಿಎಸ್ಟಿ ಬಂದ ನಂತರ ಉತ್ಪನ್ನಗಳ, ಸೇವೆಗಳ ಬಳಕೆಯು ಕೇಂದ್ರ ಬಿಂದುವಾಗುತ್ತದೆ ಮತ್ತು ಉತ್ಪಾದಿಸುವ, ಸೇವೆ ಒದಗಿಸುವ ರಾಜ್ಯಗಳು ಆ ತೆರಿಗೆ ರೆವಿನ್ಯೂ ಮೇಲಿನ ತಮ್ಮ ಹಕ್ಕನ್ನು ಕಳೆದುಕೊಳ್ಳುತ್ತಾರೆ. ಈ ಮೂಲಕ ಒಕ್ಕೂಟ ವ್ಯವಸ್ಥೆ ಸಂಪೂರ್ಣ ಕಣ್ಮರೆಯಾಗಿ ಕೇಂದ್ರೀಕರಣಗೊಂಡ ಸರ್ವಾಧಿಕಾರ ಜಾರಿಯಾಗಿದೆ. ಆಗ ಬಿಜೆಪಿಯನ್ನು ಬೆಂಬಲಿಸಿದ ಬಲಪಂಥೀಯ ಆರ್ಥಿಕ ಪಂಡಿತರು ಈ ಜಿಎಸ್ಟಿಯಿಂದಾಗಿ ಜಿಡಿಪಿಯ ಪ್ರಮಾಣ ಶೇ.2ರಷ್ಟು ಹೆಚ್ಚುತ್ತದೆ ಎಂದು ಕೊಚ್ಚಿಕೊಂಡಿದ್ದು ಇನ್ನೂ ಹಸಿಹಸಿಯಾಗಿದೆ. ಆದರೆ ನಾಲ್ಕು ವರ್ಷಗಳ ನಂತರ ಜಿಡಿಪಿ ಶೇ.-8.0 ಪ್ರಮಾಣಕ್ಕೆ ಕುಸಿದ ಇಂದಿನ ಸಂದರ್ಭದಲ್ಲಿ ಆ ಪಂಡಿತರು ಜಾಗ ಖಾಲಿ ಮಾಡಿದ್ದಾರೆ. ಅವರ ಮಾತನ್ನು ನಂಬಿ ಬಿಜೆಪಿಯನ್ನು ಬೆಂಬಲಿಸಿದವರು ವೌನವಾಗಿದ್ದಾರೆ ಮತ್ತು ಇದನ್ನು ವಿರೋಧಿಸಿದವರು ಕಿಂಕರ್ತವ್ಯ ಮೂಢರಂತೆ ದಿಕ್ಕೇಡಿಗಳಾಗಿದ್ದಾರೆ.
ನಾಲ್ಕು ವರ್ಷಗಳ ನಂತರ ಎತ್ತು ಏರಿಗೆ, ಕೋಣ ನೀರಿಗೆ ಎಳೆದಂತೆ ಸಂಪೂರ್ಣ ನಿಯಂತ್ರಣ ತಪ್ಪಿದ ಆರ್ಥಿಕ ಪರಿಸ್ಥಿತಿಯಿದೆ. ಈ ಜಿಎಸ್ಟಿ ಸಂಗ್ರಹದಲ್ಲಿ ವಿರೋಧ ಪಕ್ಷಗಳು ಅಧಿಕಾರದಲ್ಲಿರುವ 14 ರಾಜ್ಯಗಳ ಪಾಲು ಶೇ. 60ರಷ್ಟಿದೆ. ಅಂದರೆ 17 ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಮತ್ತು ಮಿತ್ರಪಕ್ಷಗಳ ಪಾಲು ಕೇವಲ 40ರಷ್ಟು ಮಾತ್ರ. ಇನ್ನು ದಕ್ಷಿಣ ಹಾಗೂ ಮಹಾರಾಷ್ಟ್ರ ರಾಜ್ಯಗಳು ಕೇಂದ್ರಕ್ಕೆ ತೆರಿಗೆ ರೂಪದಲ್ಲಿ 100ರೂ. ಕೊಟ್ಟರೆ ಮರಳಿ ಅವರಿಗೆ ಕೇವಲ 30 ರೂ. ಸಿಗುತ್ತದೆ. ಅಂದರೆ ಈ ರಾಜ್ಯಗಳ ಪಾಲಿನ ಮೊತ್ತ 70ರೂ. ಅವರಿಗೆ ಖೋತವಾಗುತ್ತದೆ. ಆದರೆ ಉತ್ತರ ಭಾರತದ ರಾಜ್ಯಗಳಿಗೆ 150, 200ರೂ. ದೊರಕುತ್ತಿದೆ. ಕೇಂದ್ರ ಸರಕಾರ ಅಧಿಕೃತವಾಗಿಯೇ ಉತ್ತರ ಮತ್ತು ದಕ್ಷಿಣ ರಾಜ್ಯಗಳ ನಡುವೆ ತಾರತಮ್ಯ ಮಾಡುತ್ತಿದೆ. ಮೋದಿ ಸರಕಾರದ ಈ ಹಗರಣಗಳಿಗೆ ಕೊನೆಯಿಲ್ಲ. ಆದರೆ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳ ಪ್ರತಿನಿಧಿಗಳೂ ಒಂದೇ ಪಕ್ಷ ಎನ್ನುವ ಅವಕಾಶವನ್ನು ಬಳಸಿಕೊಂಡು ತಮಗೆ ಬರಬೇಕಾದ ಬಾಕಿಯನ್ನು ಮೋದಿ ಸರಕಾರಕ್ಕೆ ಪ್ರಶ್ನಿಸುವುದಿಲ್ಲ, ಕೇಂದ್ರದ ಮುಂದೆ ತಮ್ಮ ಹಕ್ಕನ್ನು ಮಂಡಿಸುವುದಿಲ್ಲ. ಬಾಲ ಮುದುರಿಕೊಂಡಿರುವ ಅವರ ಗುಲಾಮಿ ವರ್ತನೆ ಅಸಹ್ಯ ಹುಟ್ಟಿಸುತ್ತದೆ.
ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಸರಕಾರವಿದ್ದರೆ ಅದು ಡಬಲ್ ಇಂಜಿನ್ ಇದ್ದಂತೆ ಎಂದು ಬಿಜೆಪಿ ನಾಯಕರು ಪ್ರಚಾರ ಮಾಡಿ ವೋಟು ಗಿಟ್ಟಿಸಿಕೊಂಡರು, ಆದರೆ ಒಮ್ಮೆ ಅಧಿಕಾರಕ್ಕೆ ಬಂದ ನಂತರ ತಮ್ಮ ಪಕ್ಷವೇ ಅಧಿಕಾರದಲ್ಲಿರುವ ರಾಜ್ಯಗಳಿಗೂ ಯಾವುದೇ ಬಗೆಯ ನ್ಯಾಯ ಒದಗಿಸಲಿಲ್ಲ. ಉದಾಹರಣೆಗೆ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಡಿಸೆಂಬರ್ 2020ರ ವೇಳೆಗೆ ಕರ್ನಾಟಕಕ್ಕೆ ಕೇಂದ್ರದಿಂದ ರೂ. 18,671 ಕೋಟಿ ಜಿಎಸ್ಟಿ ಮೊತ್ತ ಬಾಕಿಯಿತ್ತು. ಆದರೆ ಇದುವರೆಗೂ ಕೇಂದ್ರದಿಂದ ರೂ. 5,157 ಕೋಟಿ ಪರಿಹಾರ ರೂಪದಲ್ಲಿ ಮತ್ತು ರೂ.1,776 ಕೋಟಿ ಜಿಎಸ್ಟಿ ರೆವಿನ್ಯೂ ರೂಪದಲ್ಲಿ ಪಾವತಿಯಾಗಿದೆ. ಆದರೆ ಇನ್ನೂ ರೂ. 11,738 ಕೋಟಿ ಬಾಕಿಯಿದೆ. 840 ಕೋಟಿ ಕೊಡುವುದಾಗಿ ಕೇಂದ್ರ ಭರವಸೆ ನೀಡಿತ್ತು. ಅಂದರೆ ಕೇಂದ್ರ ಮತ್ತು ರಾಜ್ಯದಲ್ಲಿ ಈ ಡಬಲ್ ಇಂಜಿನ್ ಬಿಜೆಪಿ ಸರಕಾರವಿದ್ದರೂ ರಾಜ್ಯಕ್ಕೆ ಕೊಡಬೇಕಾದ ನ್ಯಾಯಯುತವಾದ ಅದರ ತೆರಿಗೆ ಮೊತ್ತ ಕೊಡದೆ ಸತಾಯಿಸುತ್ತಿರುವುದು ವಂಚನೆಯ ರಾಜಕಾರಣ. ಇನ್ನು ವಿರೋಧ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಜಿಎಸ್ಟಿಯನ್ನು ಜಾರಿಗೊಳಿಸುವ ಸಂದರ್ಭದಲ್ಲಿ ವಿರೋಧ ಪಕ್ಷಗಳನ್ನು ಒಳಗೊಂಡಂತೆ ಎಲ್ಲ ರಾಜ್ಯಗಳೂ 2015-16ರ ಹಣಕಾಸು ವರ್ಷದ ರೆಫೆರೆನ್ಸ್ ಗೆ ಮುಂದಿನ ವರ್ಷಗಳಲ್ಲಿ ವಾರ್ಷಿಕ ಶೇ.14 ರೆವಿನ್ಯೂ ಬೆಳವಣಿಗೆಯ ಭರವಸೆ ನೀಡಿದ್ದರು ಅಥವಾ ಕೇಂದ್ರವೇ ರಾಜ್ಯಗಳಿಗೆ ಈ ಶೇ.14ರ ಕ್ಯಾರೆಟ್ ತೋರಿಸಿ ಅವರಿಗೆ ಮಂಕುಬೂದಿ ಎರಚಿತು ಎನ್ನುವುದು ಹೆಚ್ಚು ಸೂಕ್ತ.
ಈ ನಿಗದಿಪಡಿಸಿದ ರೆವಿನ್ಯೂ ಗಳಿಕೆಯ ಪ್ರಮಾಣದಲ್ಲಿ ಕೊರತೆ ಉಂಟಾದರೆ ಮುಂದಿನ 5 ವರ್ಷಗಳವರೆಗೆ ಕೇಂದ್ರ ಸರಕಾರವು ಅದಕ್ಕೆ ಪರಿಹಾರ ತುಂಬಿ ಕೊಡಬೇಕೆಂದು ಒಪ್ಪಂದವಾಯಿತು. ಇದೂ ರಾಜ್ಯಗಳನ್ನು ದಿಕ್ಕು ತಪ್ಪಿಸಿತು. ಏಕೆಂದರೆ ಮೋದಿ ಸರಕಾರವು ತನ್ನ ವಚನವನ್ನು ಕಾಯ್ದುಕೊಳ್ಳಲಿಲ್ಲ. ಯಾವುದೇ ಪರಿಹಾರವನ್ನು ಕೊಡಲಿಲ್ಲ ಮತ್ತು ಮುಖ್ಯವಾಗಿ ಈ ಒಪ್ಪಂದವು 2022ರಲ್ಲಿ ಕೊನೆಯಾಗುತ್ತದೆ. ನಂತರ ರಾಜ್ಯಗಳ ರೆವಿನ್ಯೂ ಕೊರತೆಗೆ ಕೇಂದ್ರದಿಂದ ಯಾವುದೇ ಬಗೆಯ ಪರಿಹಾರವೂ ದೊರಕುವುದಿಲ್ಲ. ಎಲ್ಲಾ ಮುಗಿದ ಕತೆ. 2019-20ರ ಜಿಎಸ್ಟಿ ಗಳಿಕೆಯಲ್ಲಿ ಕರ್ನಾಟಕ, ಮಧ್ಯಪ್ರದೇಶ ಸರಕಾರಗಳು ಶೇ.10 ಪ್ರಮಾಣದಲ್ಲಿ, ತೆಲಂಗಾಣ ಶೇ. 9.4, ಮಹಾರಾಷ್ಟ್ರ ಶೇ. 9.2, ಪಶ್ಚಿಮ ಬಂಗಾಳ ಶೇ.9.1, ಇತರ ರಾಜ್ಯಗಳು ಶೇ. 6-8ಪ್ರಮಾಣದಲ್ಲಿ ಬೆಳವಣಿಗೆಯಾಗಿತ್ತು. ಆದರೆ ನ್ಯಾಯಯುತವಾಗಿ ಬರಬೇಕಾದ ರೆವಿನ್ಯೂ ಮೊತ್ತವೂ ಈ ರಾಜ್ಯಗಳಿಗೆ ದೊರಕಲಿಲ್ಲ ಮತ್ತು ಶೇ. 14 ಪ್ರಮಾಣದ ಗುರಿಯನ್ನು ತಲುಪದೆ ಉಂಟಾದ ಶೇ. 4-6 ಪ್ರಮಾಣದ ಕೊರತೆಗೆ ಪರಿಹಾರ ಮೊತ್ತವನ್ನೂ ಸಹ ಒಪ್ಪಂದದ ಪ್ರಕಾರ ಕೇಂದ್ರವು ಭರಿಸುತ್ತಿಲ್ಲ. ಒಂದು ಅಂದಾಜಿನ ಪ್ರಕಾರ 2020-21ರ ಹಣಕಾಸು ವರ್ಷದ ಆರಂಭದಲ್ಲಿ ಕೇಂದ್ರವು ರಾಜ್ಯಗಳಿಗೆ ಸುಮಾರು 3 ಲಕ್ಷ ಕೋಟಿ ರೂ. ನಷ್ಟ ಪರಿಹಾರ ಭರ್ತಿ ಮಾಡಿ ಕೊಡಬೇಕಿತ್ತು. ಅದರ ಹಣೆಬರಹ ಏನಾಯಿತೋ? ಆದರೆ ಸಂಗ್ರಹವಾಗಿದ್ದು ಕೇವಲ ರೂ. 70,000 ಕೋಟಿ. (ಇದಕ್ಕೆ ಕೋವಿಡ್ ಕಾಯಿಲೆಯಿಂದಾಗಿ ಯಾವುದೇ ಪೂರ್ವ ತಯಾರಿ ಇಲ್ಲದೆ ಹೇರಿದ ಲಾಕ್ಡೌನ್ ಸಹ ಒಂದು ಕಾರಣ) ಉಳಿದ ರೂ. 2.5 ಲಕ್ಷ ಕೋಟಿಯನ್ನು ಮೋದಿಯವರು ಎಲ್ಲಿಂದ ತರುತ್ತಾರೆ? ಅದಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಾಜ್ಯಗಳಿಗೆ ನೀವು ಮಾರುಕಟ್ಟೆಯಿಂದ ರೂ. 2.35 ಲಕ್ಷ ಕೋಟಿಯನ್ನು ಸಾಲ ಮಾಡಿ, ಬಡ್ಡಿಯನ್ನು ನೀವೇ ತೀರಿಸಿ ಎಂದು ಹೇಳಿದಾಗ ರಾಜ್ಯಗಳಿಗೆ ಜಂಘಾಬಲವೇ ಉಡುಗಿಹೋಗಿತ್ತು. ಹಾಗಿದ್ದಲ್ಲಿ ಮತ್ಯಾವ ಘನಂದಾರಿಕೆಗೆ ಈ ಜಿಎಸ್ಟಿ?. 2020-21ರ ಹಣಕಾಸು ವರ್ಷದಲ್ಲಿ ಆಗಿನ ಕೇಂದ್ರ ಹಣಕಾಸು ಕಾರ್ಯದರ್ಶಿ ಅಜಯ್ ಭೂಷಣ್ ಪಾಂಡೆ ಜಿಎಸ್ಟಿ ಸಂಗ್ರಹದಲ್ಲಿ ರಾಜ್ಯಗಳಿಗೆ ಉಂಟಾದ ಆರ್ಥಿಕ ಕೊರತೆಯ ನಷ್ಟ ಪರಿಹಾರವನ್ನು ತುಂಬಿಕೊಡಲು ಸಾಧ್ಯವಿಲ್ಲ. ಏಕೆಂದರೆ ವಿಶೇಷ ಸೆಸ್ ಮೂಲಕ ಕೇಂದ್ರಕ್ಕೆ ಬರಬೇಕಿದ್ದ ತೆರಿಗೆ ಸಂಗ್ರಹವಾಗಿಲ್ಲ ಎಂದು ತಾರಮ್ಮಯ್ಯ ಆಡಿ ಕೈ ತೊಳೆದುಕೊಂಡು ಬಿಟ್ಟರು. ಇನ್ನು ರಾಜ್ಯಗಳು ಯಾರನ್ನು ಕೇಳಬೇಕು? ಇದನ್ನು ಜಾರಿಗೊಳಿಸಿದ ಅರುಣ್ ಜೇಟ್ಲಿ ನಿಧನರಾಗಿದ್ದಾರೆ. ಆಗ ಸಮರ್ಥಿಸಿಕೊಂಡ ಆರ್ಥಿಕ ತಜ್ಞರು ದೇಶದಲ್ಲಿಯೇ ಇಲ್ಲ. ಇನ್ನು ಮೋದಿ ಸಾಹೇಬರು?? ಇಂತಹ ದುರಂತಕ್ಕೆ ಜಿಎಸ್ಟಿ ಬೇಕಿತ್ತೆ?
ಹಿನ್ನೆಲೆ
ಮೋದಿ ಮತ್ತವರ ಕ್ಯಾಬಿನೆಟ್ ಯಾಕೆ ಈ ಸಮಸ್ಯಾತ್ಮಕ ಜಿಎಸ್ಟಿ ಕುರಿತು ಹಠ ಸಾಧಿಸುತ್ತಿದೆ? ಮೊದಲಿಗೆ ಅವರಿಗೆ ಭಾರತದಂತಹ ಸಂಕೀರ್ಣ, ಬಹುಸಂಸ್ಕೃತಿಯ ವೈವಿಧ್ಯವುಳ್ಳ ದೇಶದ ಸಾಮಾಜಿಕ-ಸಾಂಸ್ಕೃತಿಕ-ಆರ್ಥಿಕತೆ ಕುರಿತಾದ ಅಜ್ಞಾನ ಈ ಬಿಕ್ಕಟ್ಟಿಗೆ ಕಾರಣ. ಎರಡನೆಯದಾಗಿ ದೇಶವನ್ನು ಹಾಳುಗೆಡವಿದರೂ ಸರಿಯೇ ತಾನು ಮಾತ್ರ ವೋಟು ಬ್ಯಾಂಕ್ ರಾಜಕಾರಣ ಬಿಟ್ಟುಕೊಡಲ್ಲ ಎನ್ನುವ ಪ್ರತಿಗಾಮಿ ನಿಲುವುಗಳು. ಹೀಗೆ ಈ ಪಟ್ಟಿ ಬರೆಯುತ್ತಾ ಹೋಗಬಹುದು. ಈ ಜಿಎಸ್ಟಿಯಿಂದ ಪರೋಕ್ಷ ತೆರಿಗೆ ಸಂಗ್ರಹದಲ್ಲಿ ಹೆಚ್ಚಳವಾಗುತ್ತದೆ ಮತ್ತು ಇದು ಜಿಡಿಪಿ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದು ಮೋದಿ ಸರಕಾರ ಊಹಿಸಿದಂತಿದೆ. ಆದರೆ ಈ ಜಿಎಸ್ಟಿ ಎನ್ನುವುದು ಮೂಲದಲ್ಲಿ ಒಂದು ಸರಾಸರಿ ತೆರಿಗೆ (flat tax). ಅಸಮಾನ ವರ್ಗ, ಜಾತಿಗಳಿರುವ ಭಾರತದಂತಹ ಶ್ರೇಣೀಕೃತ ದೇಶದಲ್ಲಿ, 28 ರಾಜ್ಯಗಳು, 8 ಕೇಂದ್ರಾಡಳಿತ ಪ್ರದೇಶಗಳಿರುವ ಈ ಒಕ್ಕೂಟ ವ್ಯವಸ್ಥೆಯಲ್ಲಿ ಈ ‘ಒಂದು ದೇಶ ಒಂದು ತೆರಿಗೆ’ ಎನ್ನುವ ಅವೈಜ್ಞಾನಿಕ ಮತ್ತು ವಿಕೇಂದ್ರೀಕರಣವನ್ನು ನಾಶ ಮಾಡುವ ತೆರಿಗೆಯನ್ನು ಜಾರಿಗೊಳಿಸಲೇಬಾರದು. ಇದು ಪ್ರಾಥಮಿಕ ಜ್ಞಾನ. ಆದರೆ ಈ ತಿಳುವಳಿಕೆ ಇಲ್ಲದಿದ್ದರೂ ಸಹ ಬಹುಸಂಖ್ಯಾತರ ಮೌಢ್ಯದ, ಮತಾಂಧತೆಯ ಕಾರಣಕ್ಕೆ ದೊರಕಿದ ನಿರಂಕುಶ ಅಧಿಕಾರದ ಮದದಿಂದ ಯಾರ ಮಾತನ್ನೂ ಆಲಿಸದೆ ಜಿಎಸ್ಟಿಯನ್ನು ಬಲವಾಗಿ ಸಮರ್ಥಿಸಿಕೊಂಡವರು ಕನಿಷ್ಠ ಇದನ್ನು ಪ್ರಯೋಗಾತ್ಮಕವಾಗಿ ಜಾರಿಗೊಳಿಸಿ ಅದರ ಸಾಧಕ ಬಾಧಕಗಳನ್ನಾದರೂ ಅರಿತುಕೊಳ್ಳಬೇಕಿತ್ತು. ಆದರೆ ಯಾವುದೇ ಪೂರ್ವಸಿದ್ಧತೆ ಇಲ್ಲದೆ ನೇರವಾಗಿ ಜನತೆಯ ಮೇಲೆ ಹೇರಿದ್ದು ಮೋದಿ ಸರಕಾರ ಮಾಡಿದ ಮೊದಲ ತಪ್ಪು. ಇದರಿಂದಾಗಿ ಅನೇಕ ಸರಕುಗಳ ಎಂಆರ್ಪಿ ದರ ಕಡಿಮೆಯಾಗಲಿಲ್ಲ. ಈ ಕಾರಣದಿಂದ ಬಡ ಜನರು ಬಳಸುವ ವಸ್ತುಗಳಿಗೆ ಹೆಚ್ಚಿನ ತೆರಿಗೆಯನ್ನು ಮತ್ತು ಶ್ರೀಮಂತರು ಬಳಸುವ ವಸ್ತುಗಳಿಗೆ ಕಡಿಮೆ ತೆರಿಗೆಯನ್ನು ನಿಗದಿಪಡಿಸಿದ್ದು ಇಡೀ ದುರಂತದ ಮೂಲ ಕಾರಣವಾಗಿದೆ.
ಜೊತೆಗೆ ಸಿಜಿಎಸ್ಟಿಯ ಸೆಕ್ಷನ್ 171ರ ಅಡಿಯಲ್ಲಿ ಬರುವ ಲಾಭ ವಿರೋಧಿ ಶರತ್ತುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲೇ ಇಲ್ಲ. ಹೀಗಾಗಿ ಬಂಡವಾಳಶಾಹಿಗಳು, ನಿರ್ದಿಷ್ಟ ವ್ಯಾಪಾರಿಗಳಿಗೆ ಹಣ ಹರಿದು ಬಂದರೆ ಗ್ರಾಹಕರು ರೊಕ್ಕ ಕಳೆದುಕೊಳ್ಳತೊಡಗಿದರು. ಈ ಕಾರಣದಿಂದಲೇ ಆರ್ಥಿಕ ತುರ್ತುಪರಿಸ್ಥಿತಿ ನಿರ್ಮಾಣಗೊಂಡಿತು. ಇದರ ಫಲವಾಗಿ ಕಳೆದ ನಾಲ್ಕು ವರ್ಷಗಳಲ್ಲಿ ಬಡವರು ಮತ್ತು ಶ್ರೀಮಂತರ ನಡುವಿನ ಕಂದಕ ಮತ್ತಷ್ಟು ವಿಸ್ತಾರವಾಗಿ ಬೆಳೆದುಕೊಂಡಿದೆ. ಎರಡನೆಯ ತಪ್ಪೆಂದರೆ ಪೆಟ್ರೋಲಿಯಂ ಉತ್ಪನ್ನಗಳು, ಮದ್ಯ, ತಂಬಾಕನ್ನು ಜಿಎಸ್ಟಿಯಿಂದ ಹೊರಗಿರಿಸಿದ್ದು. ಇದರಿಂದ ರಾಜ್ಯಗಳಿಗೆ ಸಿಗಬೇಕಾದ ರೆವಿನ್ಯೂ ಹರಿದು ಬರಲಿಲ್ಲ ಮತ್ತು ಜನಸಾಮಾನ್ಯರು ಅತಿ ಹೆಚ್ಚಿನ ಪರೋಕ್ಷ ತೆರಿಗೆ ಪಾವತಿಸುವಂತಾಯಿತು. ಮತ್ತೊಂದೆಡೆ ಮೋದಿ ಸರಕಾರವು ಶೇ.100ರಷ್ಟು ನೇರವಾಗಿ ತನ್ನ ಖಜಾನೆಯಲ್ಲಿ ತುಂಬಿಕೊಳ್ಳುವ ಸೆಸ್ ಮತ್ತು ಸರ್ಚಾರ್ಜ್ ತೆರಿಗೆಗಳನ್ನು ಹೆಚ್ಚಿಸುತ್ತಿದೆ ಹಾಗೂ ಈ ಮೂಲಕ ರಾಜ್ಯಗಳಿಗೆ ನೇರವಾಗಿ ವಂಚಿಸುತ್ತಿದೆ. 2010-11ರಲ್ಲಿ ಶೇ.10ರಷ್ಟಿದ್ದ ಸೆಸ್ ಮತ್ತು ಸರ್ಚಾರ್ಜ್ನ ಪ್ರಮಾಣ 2019ರ ವೇಳೆಗೆ ಶೇ.19.9ಕ್ಕೇರಿದೆ. ರಾಜ್ಯಗಳಿಗೆ ಇದರಿಂದ ಬಿಡಿಕಾಸು ದೊರಕುವುದಿಲ್ಲ ಮತ್ತು ಹಣಕಾಸು ಮುಗ್ಗಟ್ಟಿನಿಂದ ನರಳುತ್ತವೆ. ಐಜಿಎಸ್ಟಿ ಕಾಯ್ದೆ-2017, (ಸಮಗ್ರ ಜಿಎಸ್ಟಿಕಾಯ್ದೆ -2017) ಸೆಕ್ಷನ್ 18ರ ಪ್ರಕಾರ ಸರಕು ಮಾರಾಟವಾದ ತಕ್ಷಣ ರಾಜ್ಯಗಳಿಗೆ ಅದರ ಎಸ್ಜಿಎಸ್ಟಿ (ರಾಜ್ಯ ಜಿಎಸ್ಟಿ) ಪಾಲು ದೊರಕುವುದಿಲ್ಲ.
ಏಕೆಂದರೆ ಅಂತರ್ರಾಜ್ಯ ವಹಿವಾಟು ನಡೆಸುವ ವಿತರಕ ತಾನು ಮಾರಿದ ಸರಕಿನ output ತೆರಿಗೆಯನ್ನು ಪಾವತಿಸಬೇಕು, ರಿಟರ್ನ್ಸನ್ನು ಫೈಲ್ ಮಾಡಬೇಕು ಮತ್ತು ತನ್ನ input ತೆರಿಗೆಯನ್ನು ಮರಳಿ ಪಡೆದುಕೊಳ್ಳಬೇಕು. ಆದರೆ ಈ ವಿತರಕ ಇದನ್ನು ಮಾಡದೇ ಹೋದರೆ (ಆತನಿಗೆ ಸರಕು ಮಾರಾಟವಾಗದಿದ್ದರೆ, ಸಾಲ ಕೊಟ್ಟಿದ್ದರೆ, ಇತ್ಯಾದಿ ಸಂದರ್ಭಗಳು) ರಾಜ್ಯದ ಪಾಲಿನ ಐಜಿಎಸ್ಟಿ (ಸಿಜಿಎಸ್ಟಿ+ಎಸ್ಜಿಎಸ್ಟಿ) ತೆರಿಗೆ ಕೇಂದ್ರದ ಬಳಿಯೇ ಉಳಿದುಕೊಳ್ಳುತ್ತದೆ ಮತ್ತು ಕೇಂದ್ರವು ರಾಜ್ಯಗಳಿಗೆ ಅವರ ಪಾಲಿನ ತೆರಿಗೆಯನ್ನು ಕೊಡುವುದೂ ಇಲ್ಲ. ಇತ್ತ ರಾಜ್ಯಗಳು ಹಣಕಾಸಿನ ಮುಗ್ಗಟ್ಟನ್ನು ಸರಿದೂಗಿಸಲು ಅಧಿಕ ಬಡ್ಡಿ ತೆತ್ತು ಸಾಲ ಮಾಡುತ್ತಾರೆ. ಈ ವಿಷಚಕ್ರ ಹೀಗೆ ಬೆಳೆಯುತ್ತಾ ರಾಜ್ಯಗಳ ಪಾಲಿಗೆ ಮಾರಕವಾಗುತ್ತಲೇ ಹೋಗುತ್ತದೆ. ವ್ಯಂಗ್ಯವೆಂದರೆ ಈ ಜಿಎಸ್ಟಿಯನ್ನು ಜಾರಿಗೊಳಿಸುವ ಸಂದರ್ಭದಲ್ಲಿ ಮೋದಿ ಮಂತ್ರಿಮಂಡಲದ ಪ್ರತಿಯೊಬ್ಬ ಸಚಿವರು ಈ ತೆರಿಗೆಯು ಸಹಕಾರಿ ಒಕ್ಕೂಟ ವ್ಯವಸ್ಥೆಯನ್ನು ಬಲಗೊಳಿಸುತ್ತದೆ ಎಂದು ಎದೆ ತಟ್ಟಿಕೊಂಡು ಮಾತನಾಡಿದ್ದರು. ಆದರೆ ಇವರಾರಿಗೂ ಈ ಬರ್ಬರ ಕಾಯ್ದೆಯ ಹಿಂದೂ ಮುಂದೂ ಗೊತ್ತಿರಲಿಲ್ಲ ಎಂಬುದು ಒಂದೆಡೆಯಾದರೆ ಮೋದಿಯವರ ಸರ್ವಾಧಿಕಾರವನ್ನು ಸಂತೃಪ್ತಿಗೊಳಿಸಲು ತಮ್ಮ ರಾಜ್ಯಗಳ ಹಿತಾಸಕ್ತಿಯನ್ನು ಬಲಿಗೊಡಲು ತಯಾರಾಗಿದ್ದು ಮಾತ್ರ ಅಪರಾಧ ಎನ್ನದೆ ವಿಧಿಯಿಲ್ಲ. ಆದರೆ ಮೇಲಿನ ಹೇಳಿಕೆಯೂ ಈ ಮುಂಚಿನ ‘ಕನಿಷ್ಠ ಸರಕಾರ, ಗರಿಷ್ಠ ಆಡಳಿತ’, ‘ಎಲ್ಲರ ಜೊತೆ ಎಲ್ಲರ ವಿಕಾಸ’, ‘ಮೇಕ್ ಇನ್ ಇಂಡಿಯಾ’ದಂತಹ ಟೊಳ್ಳು ಹೇಳಿಕೆಗಳ ಮುಂದುವರಿದ ಭಾಗವಾಗಿದೆ. ಈ ಜಿಎಸ್ಟಿಯಿಂದಾಗಿ ಇಡೀ ಒಕ್ಕೂಟ ವ್ಯವಸ್ಥೆಯೇ ಛಿದ್ರಗೊಂಡಿದೆ, ರಾಜ್ಯಗಳು ಆರ್ಥಿಕವಾಗಿ ದಿವಾಳಿಯಾಗಿವೆ ಮತ್ತು ದೇಶವು ಸಂಪೂರ್ಣವಾಗಿ ಕೇಂದ್ರೀಕರಣಗೊಂಡಿದೆ.
ಉಪಸಂಹಾರ
ಚಾಲ್ತಿಯಲ್ಲಿರುವ ವ್ಯವಸ್ಥೆಯ (ಸ್ಟೇಟಸ್ ಕೋ) ಲೋಪದೋಷಗಳನ್ನು ಸರಿಪಡಿಸಿ ಅದನ್ನು ಉತ್ತಮಗೊಳಿಸುವ ಮಾತು ದೂರ ಉಳಿಯಿತು. ಬದಲಿಗೆ ಇಡೀ ವ್ಯವಸ್ಥೆಯನ್ನೇ ಬುಡಮೇಲುಗೊಳಿಸಿ ಧ್ವಂಸಗೊಂಡ ದೇಶವನ್ನು ಸೃಷ್ಟಿಸುವ ಮೋದಿ ಸರಕಾರದ ಮೇಲೆ ಇಂದು ಯಾವುದೇ ವಿಶ್ವಾಸಾರ್ಹತೆ ಉಳಿದಿಲ್ಲ. ಕಳೆದ ಏಳು ವರ್ಷಗಳಲ್ಲಿ ಮೋದಿ ತನ್ನ ಜನವಿರೋಧಿ ನೀತಿಗಳಿಂದ ಪ್ರಜೆಗಳ ನಂಬಿಕೆ ಕಳೆದುಕೊಂಡಿದ್ದಾರೆ. ಇದರಲ್ಲಿ ಅನುಮಾನವೇ ಇಲ್ಲ. ಈಗ ಅವರು ನಂಬಿಗಸ್ಥ ಪ್ರಧಾನಿಗಳು ಎಂದು ಹೇಳುವ ಎದೆಗಾರಿಕೆ ಅವರ ಅಭಿಮಾನಿಗಳಿಗೂ ಇದ್ದಂತಿಲ್ಲ. ಭಾರತವನ್ನು ಮುಳುಗುತ್ತಿರುವ ಹಡಗಿನ ಸ್ಥಿತಿಗೆ ತಂದಿರುವ ಮೋದಿಯವರ ಅರ್ಥಹೀನ ನೀತಿಗಳಲ್ಲಿ ಈ ಜಿಎಸ್ಟಿ ಸಹ ಒಂದು. ಆದರೆ ಈ ದೇಶದ ದುರಂತವೆಂದರೆ ಈ ರೀತಿಯ ಅವಘಡ ನಡೆದ ಪ್ರತಿ ಸಂದರ್ಭದಲ್ಲಿಯೂ ಇಲ್ಲಿನ ಶೇ.38 ಪ್ರಮಾಣದ ಬಹುಸಂಖ್ಯಾತರು ಈ ದೇಶಕ್ಕೆ ಕೇಂದ್ರೀಕರಣ ಮತ್ತು ಬಲಿಷ್ಠ ನಾಯಕನೇ ಮದ್ದು ಎಂದು ಪುನರುಚ್ಚರಿಸುತ್ತಾರೆ ಹಾಗೂ ಇತರರನ್ನು ನಂಬಿಸುತ್ತಾರೆ. ಹೀಗಾಗಿಯೇ ಮೋದಿಯವರ ಸರ್ವಾಧಿಕಾರ ಆಡಳಿತಕ್ಕೆ ‘ಒಂದು ದೇಶ, ಒಂದು ತೆರಿಗೆ’ ಎನ್ನುವ ಸ್ಲೋಗನ್ನ್ನು ಅಭೂತಪೂರ್ವವಾಗಿ ಮಾರಾಟ ಮಾಡಲು ಸಾಧ್ಯವಾಯಿತು. ಈಗ ರಾಜ್ಯಗಳು ಒಕ್ಕೂಟ ವ್ಯವಸ್ಥೆ ರಕ್ಷಿಸಿಕೊಳ್ಳಬೇಕೆಂದರೆ, ತಮ್ಮ ಜನರ ಹಿತಾಸಕ್ತಿ ಕಾಪಾಡಿಕೊಳ್ಳಬೇಕೆಂದರೆ, ಆರ್ಥಿಕವಾಗಿ ದಿವಾಳಿಯಾಗುವುದರಿಂದ ತಪ್ಪಿಸಿಕೊಳ್ಳಬೇಕೆಂದರೆ ಪಕ್ಷಭೇದ ಮರೆತು ‘‘ಜಿಎಸ್ಟಿಯನ್ನು ರದ್ದುಗೊಳಿಸಿ’’ ಎನ್ನುವ ಒಗ್ಗಟ್ಟಿನ ಮಂತ್ರ ಜಪಿಸಬೇಕಿದೆ. ಬಿಜೆಪಿಗೆ ಸಾಧ್ಯವಾಗದೆ ಹೋದರೂ 14 ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ವಿರೋಧ ಪಕ್ಷಗಳು ಜಿಎಸ್ಟಿ ರದ್ದುಗೊಳಿಸಿ, ರಾಜ್ಯ ಉಳಿಸಿ ಎನ್ನುವ ಹಕ್ಕೊತ್ತಾಯ ಮಂಡಿಸಲೇಬೇಕು ಮತ್ತು ಅದು ಗುರಿ ಮುಟ್ಟುವವರೆಗೂ ಪ್ರಜಾತಾಂತ್ರಿಕವಾಗಿ ಅಸಹಕಾರ ಚಳವಳಿಯ ಸಂಘರ್ಷವನ್ನು ಮುಂದುವರಿಸಲೇಬೇಕು. ಬೇರೆ ದಾರಿಯಿಲ್ಲ.