ವಿಠಲನೆಂದರೆ ನಮ್ಮ ವಿಠಲ
ಈ ಸಮಯದಲ್ಲಿ ಬರವಣಿಗೆ ಮಾಡುವುದು ಖುಷಿಯ ವಿಚಾರ ಅಲ್ಲ. ಸುತ್ತಲೂ ಸಂಕಟ, ಕಳವಳ, ಆತಂಕ. ವಿಪತ್ತು ಯಾವಾಗ ಯಾರ ಮೇಲೆರಗುತ್ತದೆಯೋ ಎಂಬ ಭಯ. ಲಾಕ್ಡೌನ್ ದಿನಗಳಲ್ಲಿ ಓದುವುದು ಬಿಟ್ಟರೆ ವಾಟ್ಸ್ಆ್ಯಪ್, ಫೇಸ್ ಬುಕ್ ನೋಡುವುದೊಂದು ಕಾಲಕಳೆಯುವ ದಾರಿ. ಈಗ ಅವುಗಳನ್ನು ತೆಗೆದು ನೋಡುವುದಕ್ಕೇ ಭಯ. ಯಾವುದೇ ಫೋಟೊ ಕಾಣಲಿ ಮತ್ತಿನ್ನೇನು ಕೇಡು ಸುದ್ದಿಯೋ ಎಂದು ಗಾಬರಿಯಾಗುವಷ್ಟು ಭಯ.
ಕೊರೋನ ನಮ್ಮ ಮುಂದೆ ತಂದಿಟ್ಟಿರುವ ಗಂಡಾಂತರ ಬರೀ ಸಾಮಾಜಿಕವಾದುದಲ್ಲ. ವ್ಯಕ್ತಿಗತವಾದುದು, ಖಾಸಗಿಯಾದುದು, ಅಂತರಂಗಕ್ಕೆ ಸಂಬಂಧಪಟ್ಟದ್ದು ಕೂಡ. ಎಷ್ಟೋ ಕುಟುಂಬಗಳ ದುಡಿಮೆಯನ್ನು ಕಿತ್ತುಕೊಂಡಿದೆ. ಕುಟುಂಬದ ದುಡಿಯುವ ವ್ಯಕ್ತಿಗಳನ್ನು ಕಿತ್ತುಕೊಂಡಿದೆ. ಇದ್ದಬದ್ದ ಉಳಿತಾಯ, ಒಡವೆ, ವಾಹನಗಳನ್ನು ಇಲ್ಲದಂತೆ ಮಾಡಿದೆ. ಹೊತ್ತಿನ ಊಟಕ್ಕೆ ಪರದಾಡುತ್ತಿರುವವರ ಸಂಖ್ಯೆಯೂ ಕಡಿಮೆ ಇಲ್ಲ.
ಇದೆಲ್ಲ ಸುತ್ತಲ ಮಾತು ಅಂದುಕೊಳ್ಳುವಷ್ಟರಲ್ಲಿ ತೀರಾ ಕಣ್ಣೆದುರಿಗೇ ಇದ್ದಂತೆ ಇದ್ದ ವಿಠ್ಠಲ ಭಂಡಾರಿ ಕಣ್ಮರೆಯಾಗಿಬಿಟ್ಟದ್ದೊಂದು ಮರೆಯಲಾಗದ ದುಃಖ. ಈ ಮರೆಯಲಾರದ ಗಾಯ, ತುಂಬಿ ಬರಲಾರದ ಶೂನ್ಯ, ಮಾತಿಲ್ಲದೆ ಮೂಕವಾಗಬೇಕಾದಂತಹ ಆಘಾತ ಆಗಿದ್ದು ಕೇವಲ ಯಮುನಾ ಗಾಂವ್ಕರ್ಗೆ ಮಾತ್ರವಲ್ಲ, ಮಾಧವಿ ಭಂಡಾರಿ ಅವರಿಗೆ ಮಾತ್ರವಲ್ಲ, ಅವರ ಕುಟುಂಬಕ್ಕೆ ಇದು ಬರಸಿಡಿಲಿನಂಥ ಸತ್ಯವಾಗಿದ್ದರೂ ನಮಗೆಲ್ಲ ಆಗಿರುವ ಆಘಾತ, ದುಃಖ ಕಡಿಮೆಯಾದುದಲ್ಲ. ಒಡನಾಡಿಗಳಾಗಿದ್ದವರಿಗಂತೂ ಇದು ಭೂಮಿ ಬಾಯ್ದೆರೆಯಿತೆಂಬಂತೆ. ಸುಮ್ಮನೆ ನೋಡಿ ಗೊತ್ತಿದ್ದವರಿಗೂ ಅಯ್ಯಿ ಅನ್ಯಾಯ ಎಂದು ಎದೆಯುಮ್ಮಳಿಸುವ ಸ್ಥಿತಿ.
ನನಗಿಂತ ಹಲವು ವರ್ಷಗಳಿಗೆ ಕಿರಿಯನಾದ ವಿಠಲ ಅಂತಹದೊಂದು ವ್ಯಕ್ತಿ, ವ್ಯಕ್ತಿತ್ವ. ಸದಾ ಕ್ರಿಯಾಶೀಲ. ಆತನನ್ನು ನೋಡಿದಾಗಲೆಲ್ಲ ನನಗೆ ಅನ್ನಿಸುತ್ತಿದ್ದದ್ದು ಇಷ್ಟೊಂದು ಕಾರ್ಯಚೈತನ್ಯ ಆತನಿಗೆ ಎಲ್ಲಿಂದ ಉಕ್ಕುತ್ತದೆ ಎಂದು. ಕೈಯಿಂದ ಹಣ ಕರಗಿಸಿ ಮೈನ ಸತುವೆಲ್ಲಾ ಬಸಿದು ಏನಾದರೂ ಕಾರ್ಯಕ್ರಮ ಮಾಡುತ್ತಲೇ ಇರುವ ಈ ಬದ್ಧತೆಗೆ ಪ್ರೇರಣೆ ಏನು? ಇದು ಕೇವಲ ಸಂಘಟನೆಯ ಹಿನ್ನೆಲೆಯಿಂದ, ಸಿದ್ಧಾಂತದ ನೆಲೆಯಿಂದ ಹುಟ್ಟುವ ಕಾರ್ಯಚೈತನ್ಯವಲ್ಲ. ಸಂಘಟನೆಯಲ್ಲಿ ಇರುವವರು, ಸಿದ್ಧಾಂತಕ್ಕೆ ಒಲಿದವರು ಬೇಕಾದಷ್ಟು ಜನ ಇದ್ದಾರೆ; ಇರುತ್ತಾರೆ. ಅವರೆಲ್ಲ ಹೀಗೆ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಓಡಾಡುವುದಿಲ್ಲ. ತಮ್ಮ ಇಷ್ಟಕ್ಕೆ ಬೇಕಾದ ಸಾಹಿತ್ಯ ಅಥವಾ ಸಿನೆಮಾ ಎಂದು ಒಂದೋ ಎರಡೋ ಕಾರ್ಯಕ್ರಮ ಮಾಡಿ ಸುಮ್ಮನಾಗುವವರ ನಡುವೆ ಸಾಹಿತ್ಯ, ಸಮಾಜ, ಹೋರಾಟ, ಬೋಧನೆ, ವಿದ್ಯಾರ್ಥಿಗಳಿಗೆ ನೆರವು, ಕುಟುಂಬದವರ ಜವಾಬ್ದಾರಿಗಳಿಗೆ ಹೆಗಲು, ಯುವ ಸಂಗಾತಿಯ ಚಟುವಟಿಕೆಗಳಿಗೆ ನೆರವು, ಓದು, ಬರವಣಿಗೆ-ಹಲವು ತೋಳು, ತಲೆ ಇದ್ದ ವ್ಯಕ್ತಿ ಇರಬಹುದು ಅನ್ನಿಸುವಂತಹ ಮೆಚ್ಚುಗೆ ಇತ್ತು ನನಗೆ. ‘ಸಂವಿಧಾನ ಓದು’ ಅಭಿಯಾನವನ್ನು ವಿಠಲನಂತಹವರು ಮಾತ್ರ ಅಷ್ಟು ಪರಿಣಾಮಕಾರಿ ಮಾಡಬಲ್ಲರೆಂದು ನನಗೆ ಅನಿಸುತ್ತದೆ.
ನನಗೆ ವಿಠಲ ಮುಖತಃ ಪರಿಚಯವಾಗಿದ್ದು 6-7ವರ್ಷದ ಹಿಂದೆ. ಆ ಮೊದಲು ಹೆಸರಾಗಿ ಗೊತ್ತಿತ್ತು. ‘ಸಹಯಾನಿ’ಗನೆಂದು ಗೊತ್ತಿತ್ತು. ಉತ್ತರ ಕನ್ನಡ ಜಿಲ್ಲೆ ನನ್ನ ಓಡಾಟದ ಹಳೆಯ ಸ್ಥಳ ಅಲ್ಲ. ಪ್ರವಾಸಿಗನಾಗಿಯೂ ನಾನು ಅಲ್ಲಿ ಹೋದವನಲ್ಲ. ಹಾಗಾಗಿ ವಿಠಲ ಭಂಡಾರಿಯ ವ್ಯಕ್ತಿಗತ ಜೀವನದ ವಿವರಗಳು ಗೊತ್ತಿರಲಿಲ್ಲ. ಕೆರೆಕೋಣಕ್ಕೆ ಸಾಹಿತ್ಯದ ಕಾರ್ಯಕ್ರಮವೊಂದಕ್ಕೆ ಹೋದಾಗಲೇ ವಿಠಲ ದಂಪತಿಯನ್ನು ನೋಡಿದ್ದು. ಅವರು ದಂಪತಿಯೆಂದು ಮೊದಲು ನನಗೆ ಗೊತ್ತೂ ಆಗಲಿಲ್ಲ. ಅವರಿಬ್ಬರೂ ಹಾಗೆ ಪರಿಚಯಿಸಿಕೊಳ್ಳಲಿಲ್ಲ. ನನಗೆ ಗೊತ್ತಿದೆ ಎಂದು ಅವರು ಭಾವಿಸಿರಬೇಕು. ನಿಧಾನವಾಗಿ ಸಂಜೆಯ ಹೊತ್ತಿಗೆ ಇವರು ಜೀವನ ಸಂಗಾತಿಗಳೆಂದು ಪ್ರಾಸಂಗಿಕವಾಗಿ ಗೊತ್ತಾಯಿತು. ದಂಪತಿ ಇಬ್ಬರೂ ಡೆಡಿಕೇಟೆಡ್ ಜೀವನ ಸಂಗಾತಿಗಳು. ಅದೇ ಪ್ರಮಾಣದ ಹೋರಾಟದ ಸಂಗಾತಿಗಳಾಗಿರುವ ಜೋಡಿಗಳು ಇಲ್ಲವೆಂದಲ್ಲ. ಕಡಿಮೆ. ಹೆಂಡತಿ ಉದ್ಯೋಗದಲ್ಲಿದ್ದು ಮನೆ ನೋಡಿಕೊಂಡರೆ ಗಂಡ ಹೋರಾಟದಲ್ಲಿರುವ ಜೋಡಿಗಳು ಹೆಚ್ಚು. ಆದರೆ ವಿಠಲ-ಯಮುನಾ ದಂಪತಿಯದ್ದೇ ಒಂದು ವಿಶಿಷ್ಟತೆ. ಅವರಿಬ್ಬರನ್ನು ನೋಡಿದರೆ ನನಗೆ ಎಂಭತ್ತರ ದಶಕದ ಎಡಪಂಥೀಯ ಹೋರಾಟದ ಜೋಡಿಗಳ ನೆನಪಾಗುತ್ತಿತ್ತು. ಈ ದಶಕಗಳಲ್ಲಿ ಆ ಬಗೆಯ ತೊಡಗಿಸಿಕೊಳ್ಳುವಿಕೆ ಬಹಳ ಕಡಿಮೆಯಾಗಿಬಿಟ್ಟಿದೆ. ಎಡಪಕ್ಷಗಳಲ್ಲಿ ಮಾತ್ರ ಎಲ್ಲೋ ಕೆಲವರು ಹಾಗಿದ್ದಾರೆ. ಉಳಿದ ಸಾಮಾಜಿಕ ಹೋರಾಟಗಳಲ್ಲಿ ಆ ಪ್ರವೃತ್ತಿಯೇ ಕಡಿಮೆ. ಹೋರಾಟವೆನ್ನುವುದು ಕಾಟಾಚಾರವಾಗಿ ಬಿಡುತ್ತದೆಯೇ ಎಂದು ಕಳವಳ ಪಡುವಷ್ಟು ಕಾಲ ಬದಲಾಗುತ್ತಿದೆ.
ವಿಠಲನನ್ನು ಕಂಡರೆ ನನಗೆ ಹುಟ್ಟಿದ ಮೆಚ್ಚುಗೆಗೆ ಇದೂ ಒಂದು ಕಾರಣ. ಉಪನ್ಯಾಸಕರಾಗಿ ಖಾಯಂ ಉದ್ಯೋಗ ದೊರಕಿದವರು, ಯುಜಿಸಿ ಸಂಬಳ ಬರುವವರು ಸಹಾನುಭೂತಿ ಪರವಾಗಿರುವ ಮಟ್ಟಿಗೆ ತಮ್ಮ ಸಾಮಾಜಿಕ ಹೊಣೆಗಾರಿಕೆಯನ್ನು ಮಿತಿ ಗೊಳಿಸುತ್ತಿರುವ ಕಾಲಮಾನವಿದು. ಅವರಾದರೂ ಏನು ಮಾಡಿಯಾರು! ಕೈತುಂಬಾ ಸಂಬಳ, ಊರು ತುಂಬಾ ಕಾರುಗಳು, ಮನೆಕಟ್ಟಲು, ಆಸ್ತಿಕೊಳ್ಳಲು ಬಗೆಬಗೆಯ ಸ್ಕೀಮುಗಳು, ಮಕ್ಕಳ ಓದಿಗೆ ದುಬಾರಿ ಸ್ಕೂಲುಗಳು, ಓಡಾಡಲು ಅಂತರ್ರಾಷ್ಟ್ರೀಯ ಸೆಮಿನಾರುಗಳು, ಜೇಬು ತುಂಬುವಷ್ಟು ಭತ್ತೆಗಳು. ಹುಲುಮಾನವರಿಗೆ ಕಣ್ಣೆದುರು ಅಮಿತ ಆಮಿಷವೊಡ್ಡುವ ಸುಖಭೋಗಿ ಸರಕುಗಳು. ಆರಾಮಕುರ್ಚಿಯ ಬುದ್ಧಿಜೀವಿಗಳು, ಹವ್ಯಾಸಿ ಹೋರಾಟಗಾರರು ಹೆಚ್ಚಾಗದೆ ಇದ್ದಾರೆಯೇ? ಸಮಾಜದಲ್ಲೊಂದು ಮಾನ್ಯತೆಯೂ ಬೇಕು, ಹೆಸರೂ ಬೇಕು, ಸುಖ ಭಾಗ್ಯಗಳೂ ಇರಬೇಕು. ಹೋರಾಟ ನಡೆಯಬಾರದೆಂದಲ್ಲ. ಆದರೆ ವ್ಯಕ್ತಿಗತವಾಗಿ ತಮಗೆ ಬಿಡುವಿಲ್ಲ. ಸೈದ್ಧಾಂತಿಕ ಭಿನ್ನಮತಗಳು ಬೇರೆ!. ಸರಕಾರಿ ನಿಯಮಾವಳಿಯ ಅಡೆತಡೆ ಬೇರೆ ಇದೆಯಲ್ಲ. ವಿಠಲ ಬಹಳ ಭಿನ್ನ ಛಾತಿಯವನು. ಅಪ್ಪಟ ಹೋರಾಟಗಾರ ಪ್ರವೃತ್ತಿಯ ವ್ಯಕ್ತಿ. ಸರಳ ಶಿಸ್ತಾದ ಉಡುಗೆ ತೊಡುಗೆ, ಮುಖದ ಮೇಲೆ ಸದಾ ಮುಡಿದುಕೊಂಡೇ ಇರುವ ಮುಗುಳ್ನಗೆ, ಮಗುವಿನಂತಹ ಮನಸ್ಸು ಎಂದು ಸಾರುವ ಮುಖ, ದೃಢವಾದ ಮೈಕಟ್ಟು, ಎತ್ತರದ ನಿಲುವು, ನೀಟಾಗಿ ಬಾಚಿದ ಕ್ರಾಪು, ಮೆಲುವಾದ ಆದರೆ ಖಚಿತ ನಿಲುವಿನ ಮಾತು. ನೋಡಿದವರಿಗೆ ಮನಸ್ಸಿನಲ್ಲಿ ಅಚ್ಚೊತ್ತಿ ನಿಲ್ಲುವ ರೂಪವಂತ. ಇದಕ್ಕಿಂತ ಹೆಚ್ಚಾಗಿ ಗುಣವಂತ.
ಪರಿಚಿತನಾದ ನನ್ನ ಮುಂದೆ ಖಾಸಗಿಯಾದ ಯಾವ ವಿಷಯಗಳನ್ನೂ ಹೇಳಿಕೊಳ್ಳದ, ಕಾರ್ಯಕ್ರಮದ ನಂತರ ಕಾರ್ಯಕ್ರಮಗಳ ಪಟ್ಟಿಯನ್ನು, ಯೋಚನೆಗಳನ್ನು ಹೇಳುತ್ತಾ ಜೊತೆಗಿದ್ದವರನ್ನು ಜೊತೆಜೊತೆಯಲ್ಲಿ ಕರೆದೊಯ್ಯುತ್ತಿದ್ದ ಸಮರ್ಥ ಸಂಘಟಕ, ಮಾತುಗಾರ, ದಣಿವರಿಯದ ಕ್ರಿಯಾಶೀಲ ಮಾರ್ಗಮಧ್ಯೆಯೇ ಯಾನ ನಿಲ್ಲಿಸಿ ಹೊರಟು ಬಿಟ್ಟಂತಾಯಿತು. ಬರೆದು ಪ್ರಕಟಿಸಿದ್ದು ಕಡಿಮೆಯಿದೆ. ಆದರೆ ಮಾಡಿದ ಕೆಲಸ ಅಗಾಧವಾಗಿದೆ. ನಮ್ಮಂತಹ ಸಾವಿರಾರು ಗೆಳೆಯರಿಗೆ ಇದು ತುಂಬಲಾರದ ನಷ್ಟ. ಯಮುನಾ, ಮಾಧವಿ ಅವರ ಮನಸ್ಸಿಗೆ ಇರಬಹುದಾದ ನೋವಿನ ಅಗಾಧತೆಯನ್ನು ಕಲ್ಪಿಸಿಕೊಳ್ಳಲೂ ಭಯವಾಗುತ್ತದೆ. ಕಣ್ಣಮುಂದೆ ನೋಡುನೋಡುತ್ತಾ ಸಂಗಾತಿಯನ್ನು ಇಷ್ಟಿಷ್ಟೇ ಕಳೆದುಕೊಳ್ಳುತ್ತಾ, ಇನ್ನು ಬರಲಾಗದ, ಮಾತನಾಡಲಾಗದ ಲೋಕಕ್ಕೆ ಕಳುಹಿಸಬೇಕಾಗಿ ಬಂದಿರುವ ಮನೋಯಾತನೆಯನ್ನು ಯಮುನಾ ಅನುಭವಿಸಬಹುದಾದ ಪರಿಯನ್ನು ಊಹಿಸಿಕೊಂಡರೆ ಕಿವಿಚಿದಂತಾಗುತ್ತದೆ.
ಹುಟ್ಟಿದವರೆಲ್ಲ ಸಾಯುತ್ತೇವೆ. ಆದರೆ ವಿಠಲ ಈಗಲೇ ಸಾಯಬಾರದಿತ್ತು. ಬಹಳ ಕೆಲಸ ಆಗುವುದಿತ್ತು; ಆಗಬೇಕಿತ್ತು ಆತನಿಂದ. ಏನು ಮಾಡಲೂ, ಏನು ಹೇಳಲೂ ಆಗದಂತಹ ಕಠೋರ ನಿಸರ್ಗ ಸತ್ಯ. ವಿಠಲ ನಮ್ಮ ನೆನಪುಗಳಲ್ಲಿ ಇದ್ದಾನೆ, ಆತ ಮಾಡಿದ ಕಾರ್ಯಗಳಲ್ಲಿ ಉಳಿದೇ ಇದ್ದಾನೆ, ನೂರಾರು ಜನಕ್ಕೆ ಮಾದರಿಯಾಗಿ, ಸ್ಫೂರ್ತಿಯಾಗಿ ಬದುಕಿರುತ್ತಾನೆ ಎಂಬಂಥ ಮಾತುಗಳನ್ನು ಆಡಬಹುದು. ಇದು ನಮಗೆ ನಾವು ಒಂದು ಬಗೆಯ ಸಬೂಬು. ಯಮುನಾ, ಮಾಧವಿ ಇವರಿಗೆ ಸಂತೈಸಲು ಮಾಡುವ ಪ್ರಯತ್ನ. ಹೀಗಲ್ಲದೆ ಇನ್ನೇನು ಮಾಡಿ ಸಮಾಧಾನ ತಂದುಕೊಳ್ಳಲು ಸಾಧ್ಯ. ಹೀಗೆ ನಂಬಿಯೇ ಈಗ ಉಂಟಾದ ಖಾಲಿ ಸ್ಥಳವನ್ನು ದಾಟಬೇಕು. ಅದು ಮಾತ್ರ ಖಾಲಿಯೇ ಉಳಿದಿರುತ್ತದೆ ಎನ್ನುವುದು ಕಠೋರ ವಾಸ್ತವ. ದೂರ ಯಾನಕ್ಕೆ ಹೋಗಿರುವ ವಿಠಲ ನಮ್ಮೆದೆಗಳಿಗೆ ಮರಳಲಿ.