ಭಾರತವು ಚೀನಾದಿಂದ ಕಲಿತುಕೊಳ್ಳಬೇಕು,ಬಲವಂತದ ಜನಸಂಖ್ಯಾ ನೀತಿಗಳಿಂದ ಉಪಯೋಗವಿಲ್ಲ: ಎನ್‌ಜಿಒ
ಹೊಸದಿಲ್ಲಿ,ಜೂ.1: ಚೀನಾ ತನ್ನ ಎರಡು ಮಕ್ಕಳ ನೀತಿಯನ್ನು ಪರಿಷ್ಕರಿಸಿರುವುದು ಮಹಿಳೆಯರ ಸಬಲೀಕರಣ ಮತ್ತು ಅವರ ಸಾಮರ್ಥ್ಯಗಳನ್ನು ಹೆಚ್ಚಿಸುವುದು ಬಲವಂತದ ಜನಸಂಖ್ಯಾ ನೀತಿಗಳಿಗಿಂತ ಚೆನ್ನಾಗಿ ಕೆಲಸ ಮಾಡುತ್ತದೆ ಎನ್ನುವುದನ್ನು ತೋರಿಸಿದೆ ಎಂದು ಎನ್‌ಜಿಒ ಪಾಪ್ಯುಲೇಷನ್ ಫೌಂಡೇಷನ್ ಆಫ್ ಇಂಡಿಯಾ ಹೇಳಿದೆ. ಭಾರತವು ಮಕ್ಕಳ ಸಂಖ್ಯೆಯ ಮೇಲೆ ಮಿತಿ ಹೇರಬೇಕೆಂದು ಆಗ್ರಹಿಸುತ್ತಿರುವವರು ತಮ್ಮ ಸಲಹೆ ಸರಿಯಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳಲಿದ್ದಾರೆ ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.
ಕುಟುಂಬಕ್ಕೆ ಒಂದು ಮಗು ನೀತಿಯನ್ನು ಪಾಲಿಸುತ್ತಿದ್ದ ಚೀನಾ 2016ರಲ್ಲಿ ಈ ಮಿತಿಯನ್ನು ಎರಡಕ್ಕೆ ಹೆಚ್ಚಿಸಿತ್ತು. ಈ ನೀತಿಯನ್ನು ಪರಿಷ್ಕರಿಸಿರುವ ಅದು ಈಗ ದಂಪತಿಗಳು ಮೂರು ಮಕ್ಕಳನ್ನು ಹೊಂದಬಹುದು ಎಂದು ಮೇ 31ರಂದು ಪ್ರಕಟಿಸಿದೆ. ಇತ್ತೀಚಿಗೆ ಪ್ರಕಟಗೊಂಡ ಜನಗಣತಿ ವರದಿಯು ಜನನ ಸಂಖ್ಯೆಯಲ್ಲಿ ಭಾರೀ ಇಳಿಕೆ ಮತ್ತು ದಶಕಗಳಲ್ಲಿ ಜನಸಂಖ್ಯೆಯ ಬೆಳವಣಿಗೆಯು ತೀರ ಮಂದಗತಿಯಲ್ಲಿ ಸಾಗುತ್ತಿರುವುದನ್ನು ತೋರಿಸಿದೆ.
2000ರಲ್ಲಿ ಒಟ್ಟು ಜನಸಂಖ್ಯೆಯ ಶೇ.22.9ರಷ್ಟಿದ್ದ 15ರಿಂದ 59 ವರ್ಷ ವಯೋಮಾನದವರ ಪ್ರಮಾಣ 2020ರಲ್ಲಿ ಶೇ.9.8ಕ್ಕೆ ಕುಸಿದಿರುವುದು ಚೀನಾದ ನೆಮ್ಮದಿಯನ್ನು ಕೆಡಿಸಿದೆ. ಚೀನಾದಲ್ಲಿ ವೃದ್ಧರ ಸಂಖ್ಯೆ ಹೆಚ್ಚುತ್ತಿದ್ದು,2010ರಲ್ಲಿ ಒಟ್ಟು ಜನಸಂಖ್ಯೆಯ ಶೇ.13.26ರಷ್ಟಿದ್ದ ಅವರ ಪ್ರಮಾಣ 2020ರಲ್ಲಿ ಶೇ.18.70ಕ್ಕೆ ಏರಿಕೆಯಾಗಿದೆ ಎಂದು ಪಾಪ್ಯುಲೇಷನ್ ಫೌಂಡೇಷನ್ ಆಫ್ ಇಂಡಿಯಾ ಬೆಟ್ಟು ಮಾಡಿದೆ. ಕಟ್ಟುನಿಟ್ಟಿನ ಜನನ ಮಿತಿಗಳು ತ್ವರಿತವಾಗಿ ವಯಸ್ಸಾಗುತ್ತಿರುವ ಜನಸಂಖ್ಯೆಯನ್ನು ಹೆಚ್ಚಿಸಿದೆ ಮತ್ತು ದುಡಿಯುವವರ ಸಂಖ್ಯೆ ಕುಗ್ಗುತ್ತಿದೆ. ಇದು ಚೀನಾದ ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮಕ್ಕೆ ಕಾರಣವಾಗಿದೆ ಎಂದು ಅದು ಹೇಳಿದೆ. ಬಲವಂತದ ಜನಸಂಖ್ಯಾ ನೀತಿಗಳ ಜಾರಿಯಿಂದ ಚೀನಾದ ವಿಫಲ ಅನುಭವದಿಂದ ಭಾರತ ಮತ್ತು ಅದರ ರಾಜ್ಯಗಳು ಪಾಠ ಕಲಿತುಕೊಳ್ಳಬೇಕಿದೆ ಎಂದಿರುವ ಅದು,ಫಲವತ್ತತೆಯ ಮಟ್ಟಕ್ಕೂ ಧರ್ಮಕ್ಕೂ ಸಂಬಂಧವಿಲ್ಲ,ಆದರೆ ಶಿಕ್ಷಣ,ಉದ್ಯೋಗಾವಕಾಶಗಳು ಮತ್ತು ಗರ್ಭನಿರೋಧಕಗಳ ಲಭ್ಯತೆ ವ್ಯತ್ಯಾಸವನ್ನುಂಟು ಮಾಡುತ್ತವೆ ಎಂದಿದೆ.