ಸಿಬಿಎಸ್ ಇ ವಿದ್ಯಾರ್ಥಿಗಳು, ಹೆತ್ತವರೊಂದಿಗೆ ಸಂವಾದ ನಡೆಸಿದ ಪ್ರಧಾನಿ ಮೋದಿ
ಹೊಸದಿಲ್ಲಿ: ಕೇಂದ್ರ ಶಿಕ್ಷಣ ಸಚಿವಾಲಯವು ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಸಿಬಿಎಸ್ಇ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರ ಗುಂಪಿನೊಂದಿಗೆ ಸೇರಿಕೊಂಡ ಪ್ರಧಾನಿ ನರೇಂದ್ರ ಮೋದಿ ಇಂದು ಅಚ್ಚರಿಗೊಳಿಸಿದ್ದಾರೆ.
ಪ್ರಧಾನಿ ಅವರು ವಿದ್ಯಾರ್ಥಿಗಳೊಂದಿಗೆ ಪ್ರೋತ್ಸಾಹದಾಯಕ ಮಾತುಗಳನ್ನು ಹಂಚಿಕೊಂಡರು. ಅವರ ಆತಂಕಗಳನ್ನು ಆಲಿಸಿದರು. 2021 ರ ಶೈಕ್ಷಣಿಕ ವರ್ಷದ 12 ನೇ ತರಗತಿ ಮಂಡಳಿಯ ಪರೀಕ್ಷೆಗಳನ್ನು ರದ್ದುಗೊಳಿಸಿದ್ದಕ್ಕಾಗಿ ಪ್ರಧಾನಿಯವರು ಹೃತ್ಪೂರ್ವಕ ಧನ್ಯವಾದಗಳನ್ನು ಸ್ವೀಕರಿಸಿದರು.
ಈಗಿರುವ ಕೋವಿಡ್ ಪರಿಸ್ಥಿತಿಗಳು ಹಾಗೂ ವಿದ್ಯಾರ್ಥಿಗಳ ಆರೋಗ್ಯ ಹಾಗೂ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಿ ಮೋದಿಯವರು ಜೂನ್ 1 ರಂದು ಸಿಬಿಎಸ್ ಇ ಮಂಡಳಿ ಪರೀಕ್ಷೆಯನ್ನು ರದ್ದುಪಡಿಸುವ ನಿರ್ಧಾರವನ್ನು ಕೈಗೊಂಡಿದ್ದರು.
"ನಾನು ಇದ್ದಕ್ಕಿದ್ದಂತೆ ನಿಮ್ಮೊಂದಿಗೆ ಸೇರಿಕೊಂಡೆ ... ನಾನು ನಿಮ್ಮನ್ನು ತೊಂದರೆಗೊಳಿಸಲಿಲ್ಲ ಎಂಬ ವಿಶ್ವಾಸವಿದೆ. ನೀವು ಮೋಜು ಮಾಡುತ್ತಿದ್ದೀರಿ ಎಂದು ಭಾವಿಸುತ್ತೇನೆ ... ಪರೀಕ್ಷೆ ರದ್ದಾದ ಕಾರಣ ನಿಮ್ಮ ಸಂತೋಷವು ಮಿತಿಯಿಲ್ಲವೆಂದು ಕಾಣುತ್ತಿದೆ" ಎಂದು ಪ್ರಧಾನಿ ಇಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಪಂಚಕುಲ ವಿದ್ಯಾರ್ಥಿ ಹಿತೇಶ್ವರ ಶರ್ಮಾ ಅವರನ್ನು ಉದ್ದೇಶಿಸಿ ಮಾತನಾಡಿದ ಪಿಎಂ ಮೋದಿ, "ನೀವು 10 ನೇ ತರಗತಿಯಲ್ಲಿ ಅಗ್ರಸ್ಥಾನದಲ್ಲಿದ್ದೀರಿ ಹಾಗೂ 12 ನೇ ತರಗತಿಯಲ್ಲೂ ಅಗ್ರಸ್ಥಾನ ಪಡೆಯುವ ನಿರೀಕ್ಷೆ ಇಟ್ಟುಕೊಂಡಿದ್ದೀರಿ. ಆದರೆ ಈಗ ಯಾವುದೇ ಪರೀಕ್ಷೆಯಿಲ್ಲ. ಅದು ಆಗುವುದಿಲ್ಲ" ಎಂದು ಹೇಳಿದರು.
ಪ್ರಧಾನಿ ಮಾತಿಗೆ ಪ್ರತಿಕ್ರಿಯಿಸಿದ ಮಾಸ್ಟರ್ ಶರ್ಮಾ "ನಾನು ಪಟ್ಟ ಪ್ರಯತ್ನಗಳು ವ್ಯರ್ಥವಾಗುವುದಿಲ್ಲ. ಜ್ಞಾನವು ನಮ್ಮೊಂದಿಗೆ ಉಳಿಯುತ್ತದೆ. ಈಗ ಹೊಸ ಮಾನದಂಡಗಳನ್ನು ಬಳಸಿದರೂ ಸ್ಥಿರವಾಗಿ ಉಳಿದಿರುವ ಯಾರಾದರೂ ಅಗ್ರಸ್ಥಾನದಲ್ಲಿರುತ್ತಾರೆ'' ಎಂದರು.