ಕೋವಿಡ್‌ನಿಂದ ಸಂತ್ರಸ್ತ ಮಕ್ಕಳ ರಕ್ಷಣೆಗಾಗಿ ಮಾರ್ಗಸೂಚಿ ಪ್ರಕಟ
ರಾಜ್ಯಗಳು,ಜಿಲ್ಲಾಧಿಕಾರಿಗಳು,ಪೊಲೀಸ್,ಪಂಚಾಯತ ರಾಜ್ ಸಂಸ್ಥೆಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳ ಹೊಣೆಗಾರಿಕೆಗಳನ್ನು ನಿಗದಿಗೊಳಿಸಿದೆ.
ಈ ಸಂಬಂಧ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿ ರಾಮಮೋಹನ ಮಿಶ್ರಾ ಅವರು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರವನ್ನು ಬರೆದಿದ್ದಾರೆ.
ರಾಜ್ಯಗಳಿಂದ ಸ್ವೀಕರಿಸಿದ ದತ್ತಾಂಶಗಳಂತೆ ತಮ್ಮ ಇಬ್ಬರೂ ಹೆತ್ತವರನ್ನು ಕಳೆದುಕೊಂಡಿರುವ 1,700ಕ್ಕೂ ಅಧಿಕ ಮಕ್ಕಳು ಸೇರಿದಂತೆ 9,346 ಮಕ್ಕಳು ಕೋವಿಡ್‌ನಿಂದಾಗಿ ಕನಿಷ್ಠ ತಮ್ಮ ಓರ್ವ ಹೆತ್ತವರನ್ನು ಕಳೆದುಕೊಂಡಿದ್ದಾರೆ ಎಂದು ಮಕ್ಕಳ ಹಕ್ಕುಗಳ ರಕ್ಷಣೆಯ ರಾಷ್ಟ್ರೀಯ ಆಯೋಗವು ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ತಿಳಿಸಿದೆ.
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸಂಕಷ್ಟದಲ್ಲಿರುವ ಮಕ್ಕಳನ್ನು ಗುರುತಿಸಬೇಕು ಮತ್ತು ಪ್ರತಿ ಮಗುವಿನ ನಿರ್ದಿಷ್ಟ ಅಗತ್ಯಗಳ ವಿವರಗಳೊಡನೆ ಅವರ ವಿವರವಾದ ಮಾಹಿತಿಗಳು ಟ್ರಾಕ್ ಚೈಲ್ಡ್ ಪೋರ್ಟಲ್‌ನಲ್ಲಿ ಅಪ್‌ಲೋಡ್ ಆಗುವಂತೆ ನೋಡಿಕೊಳ್ಳಬೇಕು. ಕೋವಿಡ್‌ನಿಂದ ಬಳಲುತ್ತಿರುವ ಹೆತ್ತವರ ಮಕ್ಕಳನ್ನು ನೋಡಿಕೊಳ್ಳಲು ಸಮೀಪ ಬಂಧುಗಳು ಇಲ್ಲದಿದ್ದರೆ ಅವರಿಗೆ ಆಶ್ರಯ ನೀಡಲು ತಾತ್ಕಾಲಿಕ ಮಕ್ಕಳ ಕಾಳಜಿ ಸಂಸ್ಥೆ (ಸಿಐಐ)ಗಳನ್ನು ಸ್ಥಾಪಿಸಬೇಕು ಮತ್ತು ಅಂತಹ ಮಕ್ಕಳಿಗೆ ಅಗತ್ಯ ಬೆಂಬಲವನ್ನು ಒದಗಿಸಬೇಕು ಎಂದು ಮಿಶ್ರಾ ಪತ್ರದಲ್ಲಿ ಸೂಚಿಸಿದ್ದಾರೆ.
ಕೋವಿಡ್ ರೋಗಿಗಳು ಆಸ್ಪತ್ರೆಗೆ ದಾಖಲಾಗುವ ಸಂದರ್ಭದಲ್ಲಿ ಮುಂದೆ ಏನಾದರೂ ಅಹಿತಕರವಾದದು ಸಂಭವಿಸಿದರೆ ಮಕ್ಕಳ ಕಾಳಜಿಯನ್ನು ವಹಿಸಿಕೊಳ್ಳಲು ಸಂಪರ್ಕಿಸಬಹುದಾದ ನಂಬಿಕಸ್ಥ ವ್ಯಕ್ತಿಗಳ ಮಾಹಿತಿಗಳನ್ನು ಪಡೆದುಕೊಳ್ಳುವಂತೆ ಸೂಚಿಸಿರುವ ಸಚಿವಾಲಯವು,ಸಿಐಐಗಳಲ್ಲಿ ಮಕ್ಕಳಿಗಾಗಿ ಐಸೊಲೇಷನ್ ಸೌಲಭ್ಯ,ಸಮಾಲೋಚಕರಿಂದ ಬಾಲಕರ ಭೇಟಿ,ಸಂಕಷ್ಟದಲ್ಲಿರುವ ಮಕ್ಕಳಿಗಾಗಿ ಸ್ಥಳೀಯ ಸಹಾಯವಾಣಿ ಇತ್ಯಾದಿಗಳನ್ನು ವ್ಯವಸ್ಥೆ ಮಾಡುವಂತೆಯೂ ಅವರು ರಾಜ್ಯಗಳಿಗೆ ಸೂಚಿಸಿದ್ದಾರೆ.
ಕೋವಿಡ್‌ನಿಂದ ಸಂತ್ರಸ್ತ ದುರ್ಬಲ ಮಕ್ಕಳ ಪೋಷಕರ ಹೊಣೆಗಾರಿಕೆಯನ್ನು ಜಿಲ್ಲಾಧಿಕಾರಿಗಳು ವಹಿಸಿಕೊಳ್ಳಬೇಕು. ಕುಟುಂಬದ ಆಸ್ತಿಯಲ್ಲಿ ಇಂತಹ ಮಕ್ಕಳ ಹಕ್ಕು ಅಬಾಧಿತವಾಗಿರುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿರುವ ಸಚಿವಾಲಯವು,ಪೊಲೀಸ್ ಇಲಾಖೆ,ಪಂಚಾಯತ್ ರಾಜ್ ಸಂಸ್ಥೆಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೂ ವಿವಿಧ ಹೊಣೆಗಾರಿಕೆಗಳನ್ನು ವಹಿಸಿದೆ.