varthabharthi


ಮುಂಬೈ ಸ್ವಗತ

ಅಸಹಾಯಕರಿಗೆ ಅಕ್ಷರ ಕಲಿಸಿದ ಮುಂಬೈ ರಾತ್ರಿಶಾಲೆಗಳು

ವಾರ್ತಾ ಭಾರತಿ : 4 Jun, 2021
ದಯಾನಂದ ಸಾಲ್ಯಾನ್

ಅಂದಿನ ಆ ರಾತ್ರಿ ಶಾಲೆಗಳ ವಿದ್ಯಾರ್ಥಿಗಳು ವೈದ್ಯರಾಗಿ, ವಕೀಲರಾಗಿ, ಉದ್ಯಮಪತಿಗಳಾಗಿ ಇಂಜಿನಿಯರ್‌ಗಳಾಗಿ, ಪ್ರಾಧ್ಯಾಪಕರಾಗಿ, ಶಿಕ್ಷಣತಜ್ಞರಾಗಿ ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಗುರುತಿಸಲ್ಪಟ್ಟಿದ್ದಾರೆ. ಕ್ರೀಡಾ ರಂಗಕ್ಕಂತೂ ಈ ರಾತ್ರಿ ಶಾಲೆಗಳ ಕೊಡುಗೆ ಅಪಾರ. ಆದರೆ ಒಂದೊಮ್ಮೆ ಇಪ್ಪತ್ತರಷ್ಟು ಇದ್ದ ರಾತ್ರಿಶಾಲೆಗಳು ಕಾಲನ ಹೊಡೆತಕ್ಕೆ ಸಿಲುಕಿ ಕಣ್ಮರೆಯಾಗಿ ಇಂದಿರುವುದು ಕೇವಲ ಬೆರಳೆಣಿಕೆಯಷ್ಟು. ಅಂದರೆ ಕೇವಲ ಎರಡು. ಒಂದು ಶತಮಾನದ ಅಂಚಿನಲ್ಲಿರುವ ‘ವಿದ್ಯಾದಾಯಿನಿ ರಾತ್ರಿಶಾಲೆ’ಯಾದರೆ ಇನ್ನೊಂದು ‘ಗುರುನಾರಾಯಣ ರಾತ್ರಿ ಶಾಲೆ’.


ಅವಿಭಜಿತ ದಕ್ಷಿಣ ಕನ್ನಡದ ಬಡವರ್ಗದ ಜನರಿಗೆ ಮುಂಬಾಪುರಿ ಕಾಯಕ ಭೂಮಿ. ಈ ಜಿಲ್ಲೆಯ ಅಭಿವೃದ್ಧಿಗೆ ಮುಂಬೈ ತನ್ನದೇ ಆದ ಕೊಡುಗೆಗಳನ್ನು ನೀಡಿದೆ. ಆದರೆ ಕಳೆದ ವರ್ಷ ಕೊರೋನದಿಂದ ಮುಂಬೈ ಕನ್ನಡಿಗರು ದಿಕ್ಕೆಟ್ಟಾಗ ತಮ್ಮೂರಿನ ಅದರಲ್ಲೂ ದಕ್ಷಿಣ ಕನ್ನಡದ ಕೆಲವರು ಮುಂಬೈ ಕನ್ನಡಿಗರ ಬಗ್ಗೆ ಕೀಳುಮಟ್ಟದ ಹಾಸ್ಯ, ವ್ಯಂಗ್ಯಗಳ ಮೂಲಕ ಪರಕೀಯರನ್ನಾಗಿಸಿದರು. ಈ ವರ್ಷವೂ ಮುಂಬೈಯನ್ನು ಕೊರೋನ ತನ್ನ ಕಬಂಧಬಾಹುಗಳಿಂದ ಬಂಧಿಸಿದೆ. ಊರಿಗೂ ಕೊರೋನ ಬಾಧಿಸಿದೆ. ಆದರೆ ಅದೇ ಮುಂಬೈ ತುಳು-ಕನ್ನಡಿಗರು ತಮ್ಮ ಕಷ್ಟ, ನಷ್ಟ, ಅಸಹಾಯಕತೆಯನ್ನು ಮರೆತು ಇಲ್ಲಿನ ನೂರಾರು ಸಹೃದಯ ಬಂಧುಗಳು ಊರಿನಲ್ಲಿರುವ ತಮ್ಮವರ ಸ್ಥಿತಿಗಾಗಿ ಮರುಗಿ, ಇಲ್ಲಿನ ನೂರಾರು ಕೊಡುಗೈ ದಾನಿಗಳ ಸಹಾಯದಿಂದ ಊರಿನ ತಮ್ಮವರಿಗಾಗಿ ಸಹಾಯಹಸ್ತ ನೀಡುತ್ತಿರುವುದನ್ನು ಗಮನಿಸಬೇಕು. ಇವರು ಯಾರೂ ತಮ್ಮ ಹೆಸರನ್ನು ಉಲ್ಲೇಖಿಸಲು ಇಚ್ಛಿಸದವರು. ಆದರೂ ಶಶಿಧರ್ ಕೆ. ಶೆಟ್ಟಿ ಎಂಬ ಉದ್ಯಮಿಯೋರ್ವರ ಹೆಸರನ್ನು ಇಲ್ಲಿ ಉಲ್ಲೇಖಿಸಲೇಬೇಕು.

ಮೂಲತಃ ಕಾಪುವಿನ ಇನ್ನಂಜೆಯವರಾದ ಶಶಿಧರ ಶೆಟ್ಟಿ, ಇಲ್ಲಿನ ಬಂಟರ ಸಂಘದ ಪಶ್ಚಿಮ ವಲಯದ ಮುಖ್ಯ ಸಂಘಟನಾ ಕಾರ್ಯದರ್ಶಿ. ಕಳೆದ ವರ್ಷದ ಕೊರೋನ ಸಂದರ್ಭ ಮುಂಬೈ ಪೀಡಿತರಿಗೆ ತಮ್ಮ ಸಂಸ್ಥೆಯ ಮೂಲಕ ಸುಮಾರು ರೂ. 15 ಲಕ್ಷ ಮೊತ್ತದ ದವಸ ಧಾನ್ಯ ನೀಡಿ ಸಹಕರಿಸಿದ್ದಾರೆ. ಅದರಲ್ಲಿ ಸುಮಾರು ಹತ್ತು ಲಕ್ಷ ರೂ. ಮೊತ್ತವನ್ನು ತಾವೇ ಕೈಯಿಂದ ಭರಿಸಿದ್ದು, ಈ ವರ್ಷದ ಕಷ್ಟದ ಸಂದರ್ಭದಲ್ಲೂ ಕೇವಲ ಮುಂಬೈಗೆ ಮಾತ್ರವಲ್ಲದೆ, ಊರಿನ ಹಲವು ಸಂಕಷ್ಟಕ್ಕೀಡಾದವರಿಗೆ ಸಹಾಯಹಸ್ತ ನೀಡಿ ಮಾನವೀಯತೆ ಮೆರೆದಿದ್ದಾರೆ. ಇಲ್ಲಿ ಈ ರೀತಿಯ ಸಂಸ್ಕೃತಿ ಇರಲು ಇಲ್ಲಿನ ರಾತ್ರಿ ಶಾಲೆಗಳ ಕೊಡುಗೆ ಅನುಪಮ. ಇಂದು ಮುಂಬೈಯಲ್ಲಿ ಕನ್ನಡ ಉಳಿದಿದ್ದರೆ ಅದರ ಶ್ರೇಯಸ್ಸು ಹೊಟೇಲ್‌ಗಳು, ಮುನ್ಸಿಪಲ್ ಶಾಲೆಗಳು ಮತ್ತು ರಾತ್ರಿ ಶಾಲೆಗಳಿಗೆ ಸಲ್ಲುತ್ತದೆ. ಒಂದೊಮ್ಮೆ ಕೇವಲ ಕೋಟೆ ಪರಿಸರದಲ್ಲೇ ಹತ್ತರಷ್ಟು ರಾತ್ರಿ ಶಾಲೆಗಳಿದ್ದವು. ಕಳೆದ ಶತಮಾನದ ತೊಂಭತ್ತರ ದಶಕದವರೆಗೆ ಸಾಯಂಕಾಲ ಕಚೇರಿ ಬಿಟ್ಟು ಮನೆಯ ಹಾದಿ ತುಳಿಯುತ್ತಿದ್ದ ದಣಿದ ಮನಸ್ಸುಗಳಿಗೆ ಕೋಟೆ ಪರಿಸರದ ಗಲ್ಲಿಗಳಲ್ಲಿ, ಸಿಟಿ ರೈಲು ನಿಲ್ದಾಣದ ಎದುರಿನ ಗಲ್ಲಿಯಲ್ಲಿ ‘‘ಸುವಿಚಾರಗಳ ಧಾರೆ ಹರಿಯಲೆಮ್ಮೆಡೆಗೆ’’ ಅನ್ನುವ ಪ್ರಾರ್ಥನೆಯು ಮಕ್ಕಳ ಕಂಠದಿಂದ ಹೊರಟು ಮುದಕೊಡುತ್ತಿತ್ತು. ಹೌದು! ಅದು ರಾತ್ರಿಶಾಲೆಗಳು ಕೇಂದ್ರವಾಗಿದ್ದ ದಿನಗಳು.

ತಮ್ಮ ಬಾಲ್ಯದ ಬದುಕನ್ನು ಊರಿನ ತಮ್ಮವರಿಗಾಗಿ ಹೊಟೇಲ್‌ಗಳ ಮೋರಿಗಳಲ್ಲಿ, ಕಚೇರಿಗಳ ಕ್ಯಾಂಟೀನ್‌ಗಳಲ್ಲಿ ಒತ್ತೆ ಇಟ್ಟು ರಾತ್ರಿ ಶಾಲೆಗೆ ಹೋಗಿ ವಿದ್ಯಾರ್ಜನೆ ಮಾಡಿ ಮುಂದೆ ರಾಷ್ಟ್ರ, ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ್ದ ಪ್ರತಿಭೆಗಳನ್ನು ಮುಂಬೈಯಲ್ಲಿ ಕಾಣಬಹುದು. ಮುಂದೆ ಅಂತಹವರೇ ಇಲ್ಲಿನ ನೂರಾರು ಸಾಂಘಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಜಾತಿ ಸಂಘಟನೆಗಳಲ್ಲೂ ಗುರುತಿಸಲ್ಪಟ್ಟಿದ್ದಾರೆ. ಅಂದಿನ ಆ ರಾತ್ರಿ ಶಾಲೆಗಳ ವಿದ್ಯಾರ್ಥಿಗಳು ವೈದ್ಯರಾಗಿ, ವಕೀಲರಾಗಿ, ಉದ್ಯಮಪತಿಗಳಾಗಿ ಇಂಜಿನಿಯರ್‌ಗಳಾಗಿ, ಪ್ರಾಧ್ಯಾಪಕರಾಗಿ, ಶಿಕ್ಷಣತಜ್ಞರಾಗಿ ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಗುರುತಿಸಲ್ಪಟ್ಟಿದ್ದಾರೆ. ಕ್ರೀಡಾ ರಂಗಕ್ಕಂತೂ ಈ ರಾತ್ರಿ ಶಾಲೆಗಳ ಕೊಡುಗೆ ಅಪಾರ. ಆದರೆ ಒಂದೊಮ್ಮೆ ಇಪ್ಪತ್ತರಷ್ಟು ಇದ್ದ ರಾತ್ರಿಶಾಲೆಗಳು ಕಾಲನ ಹೊಡೆತಕ್ಕೆ ಸಿಲುಕಿ ಕಣ್ಮರೆಯಾಗಿ ಇಂದಿರುವುದು ಕೇವಲ ಬೆರಳೆಣಿಕೆಯಷ್ಟು. ಅಂದರೆ ಕೇವಲ ಎರಡು. ಒಂದು ಶತಮಾನದ ಅಂಚಿನಲ್ಲಿರುವ ‘ವಿದ್ಯಾದಾಯಿನಿ ರಾತ್ರಿಶಾಲೆ’ಯಾದರೆ ಇನ್ನೊಂದು ‘ಗುರು ನಾರಾಯಣ ರಾತ್ರಿ ಶಾಲೆ’.

ರಾತ್ರಿ ಶಾಲೆಗಳ ಬಗ್ಗೆ ಉಲ್ಲೇಖಿಸುವಾಗ ಮುಂಬೈಯಲ್ಲಿ ಶಿಕ್ಷಣ ಕ್ರಾಂತಿಯನ್ನು ಮಾಡಿದ ಮೊಗವೀರ ರಾತ್ರಿ ಶಾಲೆಯನ್ನು ಮರೆಯುವಂತಿಲ್ಲ. 1904ರಲ್ಲಿ ವಿದ್ಯಾರ್ಥಿ ವೇತನ ನೀಡುವ ಮೂಲಕ ಶೈಕ್ಷಣಿಕ ರಂಗಕ್ಕೆ ಪ್ರವೇಶಿಸಿದ ‘ಮೊಗವೀರ ವ್ಯವಸ್ಥಾಪಕ ಮಂಡಳಿ’(‘ಮೊಗೇರ ವ್ಯವಸ್ಥಾಪಕ ಮಂಡಳಿ’ ಅಂದಿನ ಹೆಸರು) ಮುಂದೆ 1908ರಲ್ಲಿ ಮೊಗವೀರ ಬಡಮಕ್ಕಳ ರಾತ್ರಿಶಾಲೆ ಪ್ರಾರಂಭಿಸಿತು. ಕೇವಲ ಹದಿನೆಂಟು ವಿದ್ಯಾರ್ಥಿಗಳಿಂದ ಪ್ರಾರಂಭಗೊಂಡ ಶಾಲೆ, ಮುಂದೆ ಸಾವಿರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕು ತೋರಿದೆ. ದೊಂದಿ ಅಥವಾ ಚಿಮಣಿ ಬೆಳಕಿನ ಸಹಾಯದಿಂದ ನಡೆಯುತ್ತಿದ್ದ ಶಾಲೆ ಮುಂದೆ ಪರಿವರ್ತನೆಯ ಹಾದಿಯಲ್ಲಿ ಮಹತ್ತರವಾದ ಬೆಳವಣಿಗೆ ಕಂಡಿತು. ಜೊತೆಗೆ ಮಂಡಳಿಯು ಬಾಲಕಿಯರ ಶಾಲೆಯನ್ನೂ ತೆರೆದು ಮತ್ತೊಂದು ಇತಿಹಾಸ ನಿರ್ಮಿಸಿತು. ಬಾಲಕಿಯರ ಶಾಲೆಯನ್ನು ಮುನ್ಸಿಪಲ್ ಅಧೀನಕ್ಕೆ ಒಪ್ಪಿಸಿದ ಮಂಡಳಿ, ರಾತ್ರಿ ಶಾಲೆಯನ್ನು ಹಗಲು ಶಾಲೆಯನ್ನಾಗಿಸಲು ಪ್ರಯತ್ನಿಸುತ್ತಿತ್ತು.

ಅಂದಿನ ದಿನಗಳಲ್ಲಿ ಹೈಸ್ಕೂಲ್ ಮಟ್ಟದಲ್ಲಿ ಬುಕ್ ಕೀಪಿಂಗ್ ಮತ್ತು ಹುಡುಗಿಯರ ತರಗತಿಗಳಲ್ಲಿ ಟೈಲರಿಂಗ್ ವಿಷಯವನ್ನು ಅಳವಡಿಸಿಕೊಂಡಿರುವುದು ಮಂಡಳಿಯ ದೂರದೃಷ್ಟಿಗೆ ಹಿಡಿದ ಕನ್ನಡಿ. ಶಾಲೆಯ ಸ್ಕೌಟ್‌ದಳ ರಾಷ್ಟ್ರಮಟ್ಟದಲ್ಲಿ ಮನ್ನಣೆ ಪಡೆದಿತ್ತು. 1962ರಲ್ಲಿ ರಾಷ್ಟ್ರಾಧ್ಯಕ್ಷರಿಂದ 7 ಮಂದಿ ವಿದ್ಯಾರ್ಥಿಗಳು ಭಾರತ ಸ್ಕೌಟ್ ಪದಕ ಪಡೆದಿರುವುದು ಉಲ್ಲೇಖನೀಯ. ಆ ರಾತ್ರಿ ಶಾಲೆಯಿಂದ ಹೊರಬಂದ ಪ್ರತಿಭೆಗಳು ರಾಷ್ಟ್ರ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವುದನ್ನು ನಾವು ಗಮನಿಸಬೇಕು ಉದಾಹರಣೆಯೆಂಬಂತೆ ಆಲ್ ಇಂಡಿಯಾ ಫುಟ್‌ಬಾಲ್ ಫೆಡರೇಶನ್ ರೆಫ್ರಿ ಬೋರ್ಡ್‌ನ ಕಾರ್ಯದರ್ಶಿ, ಮ್ಯಾಚ್ ಕಮಿಷನರ್ ಇನ್‌ಸ್ಪೆಕ್ಟರ್‌ರಾಗಿ, ರೆಫ್ರಿಗಳ ನಿರ್ಣಾಯಕರಾಗಿ ‘ಎಸ್‌ಎಫ್‌ಐಎಫ್‌ಎ’ಯಲ್ಲಿ ಕಾರ್ಯ ನಿರ್ವಹಿಸಿದವರು ಮೊಗವೀರ ರಾತ್ರಿ ಶಾಲೆಯ ವಿದ್ಯಾರ್ಥಿಯಾಗಿದ್ದ ಮಾಧವ ಜಿ. ಸುವರ್ಣ. ರಾಷ್ಟ್ರಮಟ್ಟದ ಟೇಬಲ್ ಟೆನಿಸ್ ಆಟಗಾರ ಎನ್. ವಿ. ಸಾಲ್ಯಾನ್; ಸಾಹಿತಿ, ಅಂತರ್‌ರಾಷ್ಟ್ರೀಯ ಮಟ್ಟದ ‘ವಾಕರ್’ (ನಡಿಗೆ) ಖ್ಯಾತಿಯ ರಮೇಶ್ ಕೆ. ಪುತ್ರನ್, ಮಹಾರಾಷ್ಟ್ರ ರಾಜ್ಯದ ಛತ್ರಪತಿ ಪುರಸ್ಕಾರ ಪಡೆದ ಖ್ಯಾತ ವೈಟ್ ಲಿಫ್ಟರ್, ಸೌತ್ ಕೊರಿಯಾ ಮತ್ತು ಜಕಾರ್ತದಲ್ಲಿ ನಡೆದ ಏಶ್ಯನ್ ಶಾಟ್‌ಪುಟ್‌ನಲ್ಲಿ ಚಿನ್ನದ ಪದಕ ಗಳಿಸಿದ ಪುಂಡಲೀಕ ವಿ. ಪುತ್ರನ್, ಅಪರೂಪದ ಶ್ರೇಷ್ಠ ರಂಗನಿರ್ದೇಶಕ ತಮ್ಮ ಚಿತ್ರಗಳಿಗಾಗಿ ರಾಷ್ಟ್ರಮಟ್ಟದಲ್ಲಿ ಗುರುತಿಸಲ್ಪಟ್ಟ ‘ಗುಡ್ಡೆದ ಭೂತ’ ಖ್ಯಾತಿಯ ಸದಾನಂದ ಸುವರ್ಣ ಅವರು ಮೊಗವೀರ ರಾತ್ರಿ ಶಾಲೆಯಲ್ಲಿ ಕಲಿತವರು. ಮುಂದೆ ಅದೇ ರಾತ್ರಿ ಶಾಲೆಯಲ್ಲಿ ಶಿಕ್ಷಕರಾಗಿಯೂ ಕಾರ್ಯ ನಿರ್ವಹಿಸಿದವರು. ಹುಡುಕುತ್ತಾ ಹೋದರೆ ಇಲ್ಲಿ ಅರಳಿದ ಕನ್ನಡದ ಪ್ರತಿಭೆಗಳು ಒಂದಲ್ಲ ಎರಡಲ್ಲ.

ಶತಮಾನದ ಹಿಂದೆ (1920) ಕೋಟೆ ಪರಿಸರದಲ್ಲಿ ಅಸ್ತಿತ್ವಕ್ಕೆ ಬಂದ ‘ವಿದ್ಯಾದಾಯಿನಿ ಸಭಾ’ ಮಹಾನಗರದ ಮಹತ್ವದ ಗುರುತಿಸಲೇಬೇಕಾದ ಸಂಘಟನೆ. ಈ ಸಂಸ್ಥೆಯ ಆಶ್ರಯದಲ್ಲಿ ಜನ್ಮತಾಳಿದ್ದು ಕೆನರಾ ವಿದ್ಯಾದಾಯಿನಿ ರಾತ್ರಿಶಾಲೆ. ಸುಮಾರು ತೊಂಭತ್ತೈದು ವರ್ಷಗಳ ಇತಿಹಾಸವನ್ನು ಹೊಂದಿರುವ ಈ ಶಾಲೆ ಸರಕಾರದಿಂದ ಅಧಿಕೃತ ಮನ್ನಣೆಗೆ ಪಾತ್ರವಾದದ್ದು 1933ಕ್ಕೆ. ವಿದ್ಯಾರ್ಥಿಗಳ ಸಂಖ್ಯೆ, ಶಾಲೆಯ ಗುಣಮಟ್ಟ ಏರುತ್ತಾ ಹೋದಂತೆ ಸ್ಥಳದ ಕೊರತೆ ಬಾಧಿಸತೊಡಗಿತು. ಕುಮಟಾ ಸ್ಟ್ರೀಟ್‌ನಿಂದ ಮೋದಿ ಸ್ಟ್ರೀಟ್, ಮೋದಿ ಸ್ಟ್ರೀಟ್‌ನಿಂದ ಕೊಲಬಾ, ಕೊಲಬಾದಿಂದ ವಿಶಾಲವಾದ ಸ್ಥಳ ಇರುವ ಬಾರ್ಡದ ನ್ಯೂ ಹೈಸ್ಕೂಲ್ (ವಿ.ಟಿ. ರೈಲ್ವೆ ನಿಲ್ದಾಣದ ಎದುರು)ಗೆ ಸ್ಥಳಾಂತರ. ಹೀಗೆ ಈ ಪಯಣದೊಂದಿಗೆ ಶಾಲೆ ಗೈದ ಸಾಧನೆ, ಏರಿದ ಎತ್ತರ ಉತ್ಕೃಷ್ಟವಾದುದು. ಆದರೆ ಕೊರೋನದಿಂದಾಗಿ ಈ ಎರಡು ವರ್ಷಗಳಲ್ಲಿ ಎಲ್ಲವೂ ಅಸ್ತವ್ಯಸ್ತವಾಗಿದೆ.

ಈ ಮಧ್ಯೆ ಬಾರ್ಡಾ ನ್ಯೂಹೈಸ್ಕೂಲ್‌ನ ಸ್ಥಳವೂ ಶಾಲೆಗೆ ದೊರಕದೆ ಕೆಲವು ದಾನಿಗಳ ನೆರವಿನಿಂದ ಅಲ್ಲಿ ಇಲ್ಲಿ ತರಗತಿಗಳು ನಡೆದು, ಕೊನೆಗೆ ತಮ್ಮದೇ ಸ್ವಂತ ನೆಲೆಯಲ್ಲಿ (ಮಾತೃ ಸಂಸ್ಥೆಯ ಕಚೇರಿ) ತರಗತಿಗಳು ಪ್ರಾರಂಭವಾಗುತ್ತಿದ್ದಂತೆ ಕೊರೋನದ ಉಪಟಳ. ಆದರೂ ಎದೆಗುಂದದ ವಿದ್ಯಾದಾಯಿನಿ ಸಭಾದ ಪದಾಧಿಕಾರಿಗಳು ಎಲ್ಲ ಸವಲತ್ತುಗಳನ್ನು ಶಾಲೆಗೆ ಒದಗಿಸಿ ಈ ದಿನಗಳಲ್ಲಿ ಆನ್ ಲೈನ್ ಮೂಲಕ ಮಕ್ಕಳು ಅಭ್ಯಾಸ ನಿರತರಾಗಿದ್ದಾರೆ. ಕೆನರಾ ವಿದ್ಯಾದಾಯಿನಿ ರಾತ್ರಿ ಶಾಲೆಯ ಸ್ಕೌಟ್ ದಳವು ರಾಷ್ಟ್ರ ಮಟ್ಟದಲ್ಲಿ ಮಿಂಚಿದ್ದು ಸ್ಕೌಟು ದಳ ಸುವರ್ಣ ಮಹೋತ್ಸವ (2009)ವನ್ನು ಆಚರಿಸಿದೆ. ಪ್ರತಿಷ್ಠಿತ ಸಾಫಲ್ಯ ಸೇವಾ ಸಂಘದ ಅಧ್ಯಕ್ಷ ಶ್ರೀನಿವಾಸ ಸಾಫಲ್ಯ ಸೆಂಟ್ರಲ್ ಬ್ಯಾಂಕ್‌ನ ಫುಟ್ಬಾಲ್ ತಂಡದ ಕ್ಯಾಪ್ಟನ್ ಆಗಿದ್ದ ಸಮಾಜಸೇವಕ ಶೇಖರ್ ಎಂ. ಕೋಟ್ಯಾನ್, ಖ್ಯಾತ ಯಕ್ಷಗಾನ ಕಲಾವಿದ ಉದ್ಯಮಿ ವಾಸು ಶೆಟ್ಟಿ, ಮಾರ್ನಾಡ್, ಶಿವಸೇನೆಯ ದಕ್ಷಿಣ ಭಾರತೀಯ ವಿಭಾಗದ ಮುಖ್ಯಸ್ಥ ಹಾಗೂ ‘ನಮ ಜವನೆರ್’ ಸಂಘಟನೆಯ ಸಂಸ್ಥಾಪಕ ಚೇತನ್ ಎಸ್. ಶೆಟ್ಟಿ ಮೂಡುಬಿದಿರೆ ಮೊದಲಾದ ಪ್ರತಿಭೆಗಳಾದ ಈ ರಾತ್ರಿ ಶಾಲೆಯ ವಿದ್ಯಾರ್ಥಿಗಳು ಶಾಲೆಗೆ ಬೆನ್ನೆಲುಬಾಗಿ ನಿಂತಿದ್ದಾರೆ.

ಹಲವು ಎಡರು ತೊಡರುಗಳಿಂದ ಏಳುಬೀಳುಗಳನ್ನು ಕಂಡು ಇದೀಗ ಸಾಂತಾಕ್ರೂಸ್ ಪರಿಸರದಲ್ಲಿ ಕಂಪು ಸೂಸುತ್ತಿರುವ ಶಾಲೆ, ‘ಗುರು ನಾರಾಯಣ ರಾತ್ರಿಶಾಲೆ’. ಇದು ಬಿಲ್ಲವರ ಅಸೋಸಿಯೇಶನ್, ಮುಂಬೈ ಇದರ ಮುಂದಾಲೋಚನೆಯ ಪ್ರತೀಕ. ಕೋಟೆ ಪರಿಸರದ ಬೋರಾ ಬಜಾರ್‌ನಲ್ಲಿ 1961ರಲ್ಲಿ ಸ್ಥಾಪನೆಗೊಂಡ ಗುರುನಾರಾಯಣ ರಾತ್ರಿಶಾಲೆಗೆ ಮುಖ್ಯೋಪಾಧ್ಯಾಯರು ದೊರೆತದ್ದು ಎರಡು ವರ್ಷಗಳ ಆನಂತರ, 1963ರಲ್ಲಿ ಎಸ್. ರಾಮಚಂದ್ರರಾವ್ ಅವರ ಮೂಲಕ. ಸುಮಾರು 23 ವರ್ಷಗಳ ಸುದೀರ್ಘಕಾಲ ಮುಖ್ಯೋಪಾಧ್ಯಾಯರಾಗಿ ಕಾರ್ಯನಿರ್ವಹಿಸಿದ್ದ ಎಸ್. ಆರ್. ರಾವ್, ಶಾಲೆಯನ್ನು ಗುಣಮಟ್ಟದಲ್ಲಿ ಎತ್ತರಕ್ಕೆ ಕೊಂಡೊಯ್ಯುವಲ್ಲಿ ಅವಿರತ ಶ್ರಮಿಸಿದವರು. ಸುಮಾರು ನಾಲ್ಕೂವರೆ ಸಾವಿರ ವಿದ್ಯಾರ್ಥಿಗಳು ಇಲ್ಲಿ ವಿದ್ಯಾರ್ಜನೆಗೈದು ತಮ್ಮ ಬದುಕಿನಲ್ಲಿ ಹೊಸ ದಿಕ್ಕನ್ನು ಕಂಡುಕೊಂಡಿದ್ದಾರೆ. ಕೋಟೆ ಪರಿಸರದಿಂದ ತೊಂಭತ್ತರ ದಶಕದಲ್ಲಿ ಸಾಂತಾಕ್ರೂಸ್ ಪೂರ್ವದ ಪ್ರಭಾತ್ ಕಾಲನಿಯ ಸ್ಥಳಾಂತರಗೊಂಡ ಆನಂತರ ಶಾಲೆಯ ಹೊಸ ಅಧ್ಯಾಯ ಪ್ರಾರಂಭ ಗೊಂಡಿದ್ದು. ಅಲ್ಲಿನ ಕಾರ್ಮಿಕ ವರ್ಗದ ಹುಡುಗರ ಜೊತೆ ಜೊತೆಗೆ ಹುಡುಗಿಯರೂ ಈ ಶಾಲೆಯಲ್ಲಿ ವಿದ್ಯಾರ್ಜನೆ ಗೈಯಲು ಅವಕಾಶವನ್ನು ಮಾತೃಸಂಸ್ಥೆಯು ಒದಗಿಸಿಕೊಟ್ಟಿತು.

ಕರ್ನಾಟಕದ ಯಾದಗಿರಿ, ಬೀದರ್, ಬಿಜಾಪುರ, ಕಲಬುರಗಿ ಮುಂತಾದ ಪ್ರದೇಶಗಳ ಕಾರ್ಮಿಕ ವರ್ಗದ ಈ ವಿದ್ಯಾವಂಚಿತ ಮಕ್ಕಳು ರಾತ್ರಿ ಶಾಲೆಯ ಮೂಲಕ ಈಗ ಶಿಕ್ಷಣ ಪಡೆಯುತ್ತಿದ್ದಾರೆ. 2016ರಲ್ಲಿ ಆಂಗ್ಲ ದೈನಿಕವೊಂದು ‘‘ಬಡತನದಿಂದಾಗಿ ಹಣದ ತೀವ್ರ ಕೊರತೆಯಿಂದ ಶಾಲೆಗೆ ಹೋಗದೆ ಎಂಟನೇ ತರಗತಿಯಲ್ಲೇ ವಿದ್ಯೆ ಅಪೂರ್ಣಗೊಳಿಸಿ ಕರ್ನಾಟಕಕ್ಕೆ, ತನ್ನ ತಾಯ್ನೆಲಕ್ಕೆ ಹೋದ ಸುನೀಲ್ ದಂಗಾಪುರ, ಹೊಟ್ಟೆಪಾಡಿಗೆ ಮತ್ತೆ ಮರಳಿ ಮುಂಬೈಗೆ ಬಂದು ವರೋವಾದ ಹೊಟೇಲೊಂದರಲ್ಲಿ ವೈಟರ್ ಆಗಿ ಸೇರಿಕೊಳ್ಳುತ್ತಾನೆ. ಆತ ತನ್ನ ಮಿತ್ರರ ಒತ್ತಾಯದಿಂದ ಗುರುನಾರಾಯಣ ರಾತ್ರಿ ಶಾಲೆಗೆ ಸೇರಿ, ಬೆಳಗ್ಗೆ 9ರಿಂದ ಸಾಯಂಕಾಲ 5ರತನಕ ಹೊಟೇಲ್‌ನಲ್ಲಿ ವೈಟರ್ ಕೆಲಸ ಮಾಡಿ ಮತ್ತೆ ರಾತ್ರಿ ಶಾಲೆಗೆ ಹೋಗಿ ಕಲಿತು, 2015-16ರ ಸಾಲಿನ ಹತ್ತನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಮಹಾರಾಷ್ಟ್ರ ರಾಜ್ಯದ ರಾತ್ರಿ ಪ್ರೌಢಶಾಲೆಗಳಲ್ಲಿಯೇ ಪ್ರಥಮ ಸ್ಥಾನ ಪಡೆದಿದ್ದಾನೆ. ಇದು ಶ್ಲಾಘನೀಯ’’ ಎಂದು ವಿದ್ಯಾರ್ಥಿಯನ್ನು, ಶಾಲೆಯನ್ನು ಮೆಚ್ಚಿ ಬರೆದ ಬರಹ ಕನ್ನಡಿಗರಿಗೆ ಹೆಮ್ಮೆ ತರುವಂತಹದ್ದು. ಹಾಗೆ ನೋಡಿದರೆ ಗುರುನಾರಾಯಣ ರಾತ್ರಿಶಾಲೆಯ ದಾಖಲೆಯಲ್ಲಿ ಇಂತಹ ಹಲವು ಪ್ರತಿಭೆಗಳನ್ನು ನಾವು ಗಮನಿಸಬಹುದು.

ಇತ್ತೀಚೆಗೆ ಅಂದರೆ 2019-20ರ ಸಾಲಿನ ಎಸ್.ಎಸ್.ಸಿ. ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಪ್ರಥಮ ಹಾಗೂ ಸರ್ವಮಾಧ್ಯಮ ರಾತ್ರಿ ಶಾಲೆಗಳಲ್ಲಿ ತೃತೀಯ ಸ್ಥಾನ ಪಡೆದದ್ದು ಐಶ್ವರ್ಯ ರೇವಣ್ಣ ಸಿದ್ದಪ್ಪಪೂಜಾರಿ ಎಂಬ ಪ್ರತಿಭಾನ್ವಿತೆ. ಮೂಲತಃ ಕಲಬುರಗಿ ಜಿಲ್ಲೆಯ ಶಿರೂರ ಪೇಟೆಯ ಬಡ ವರ್ಗದ ಕುಟುಂಬಕ್ಕೆ ಸೇರಿದವಳು. ಕೊರೋನದಿಂದಾಗಿ ಈ ಶಾಲೆಯಲ್ಲೀಗ ತರಗತಿಗಳು ಆನ್‌ಲೈನ್‌ನಲ್ಲಿ ಜರುಗುತ್ತಿವೆ. ಗುರುನಾರಾಯಣ ರಾತ್ರಿ ಶಾಲಾ ವಿದ್ಯಾರ್ಥಿಗಳಲ್ಲಿ ಎಸ್‌ಎಸ್‌ಸಿಯಲ್ಲಿ ಪ್ರತಿವರ್ಷ ಪ್ರಥಮ ಬರುವ ವಿದ್ಯಾರ್ಥಿಗೆ, ‘ಅಕ್ಷಯ’ದ ಸಂಪಾದಕರಾಗಿದ್ದ ಎಂ. ಡಿ. ಕೋಟ್ಯಾನ್ ಅವರು ಚಿನ್ನದ ಪದಕವನ್ನು ನೀಡುವುದಕ್ಕಾಗಿ ರೂ. 2ಲಕ್ಷದ ಮೊತ್ತವನ್ನು ಠೇವಣಿ ಇಟ್ಟಿದ್ದಾರೆ. ಇವರೂ ರಾತ್ರಿ ಶಾಲೆಯಲ್ಲಿ ವಿದ್ಯೆ ಕಲಿತು ಬೆಳೆದು ಉದ್ಯಮಿಯಾದವರು. ಠೇವಣಿಯಿಂದ ಬರುವ ಬಡ್ಡಿಯ ಮೊತ್ತದಿಂದ ಪ್ರತಿವರ್ಷ ಚಿನ್ನದ ಪದಕವನ್ನು ನೀಡುವುದಕ್ಕೆ ಅವಕಾಶ ಕಲ್ಪಿಸಿದ್ದಾರೆ. ಅರುಣ ಮೊಗವೀರ, ಸ್ವಾತಿ ಮೂಲ್ಯ, ಶಿವ ಧನಗರ, ಶರಣ ಪಾಟೀಲ, ಸುನೀಲ್ ದಂಗಾಪುರ, ಪ್ರೀತಿ ಮೂಲ್ಯ, ಕಿಶೋರ್ ಪವಾರ್, ಪೂಜಾ ಚವ್ಹಾಣ, ಐಶ್ವರ್ಯ ಆರ್. ಪೂಜಾರಿ ಮೊದಲಾದವರು ಚಿನ್ನದ ಪದಕಗಳನ್ನು ಪಡೆದ ಪ್ರತಿಭಾನ್ವಿತರು.

ಈ ಮೂರು ಶಾಲೆಗಳ ಬಗ್ಗೆ ಬರೆಯುವಾಗ ಮುಂಬೈ ಫೋರ್ಟ್ ರಾತ್ರಿಶಾಲೆಯನ್ನು ಉಲ್ಲೇಖಿಸುವುದು ಅಗತ್ಯ. 2007ರಲ್ಲಿ ತೊಂಭತ್ತರ ಸಂಭ್ರಮವನ್ನು ಆಚರಿಸಿದ ಈ ಶಾಲೆ, ಈಗ ಇಲ್ಲವಾದರೂ ಈ ಶಾಲೆಯನ್ನು 1937ರಲ್ಲಿ ಅಂದಿನ ಪ್ರಾಂತೀಯ ಸರಕಾರ ಹಾಗೂ ಮುಂಬೈ ವಿಶ್ವವಿದ್ಯಾನಿಲಯ ಪೂರ್ಣ ಪ್ರಮಾಣದ ಪ್ರೌಢಶಾಲೆಯೆಂದು ಮಾನ್ಯತೆ ನೀಡಿದ್ದು ಹಾಗೂ 1938ರಲ್ಲಿ ತನ್ನ 5 ವಿದ್ಯಾರ್ಥಿಗಳ ತಂಡವನ್ನು ಮೆಟ್ರಿಕ್ ಪರೀಕ್ಷೆಗೆ ಕಳುಹಿಸಿದ್ದ ಮುಂಬೈಯ ಪ್ರಥಮ ರಾತ್ರಿ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಎಂ. ಬಿ. ಕುಕ್ಯಾನ್, ಉದ್ಯಮಿ, ಸಂಘಟಕ ಡಿ. ಜಿ. ಬೋಳಾರ್ ಮೊದಲಾದವರು ಈ ಶಾಲೆಯ ಪ್ರತಿಭಾ ಸಂಪತ್ತು.

ಒಟ್ಟಾರೆಯಾಗಿ ಹೇಳುವುದಾದರೆ ಮುಂಬೈಯಲ್ಲಿ ರಾತ್ರಿ ಶಾಲೆ ಅದೂ ಕನ್ನಡದಲ್ಲಿ ರಾತ್ರಿ ಶಾಲೆ ನಡೆಸುವುದು ಸಾಹಸದ ಕಾರ್ಯ. ಆದರೆ ಮುಂಬೈ ಕನ್ನಡಿಗರು ಅದನ್ನು ಸಾಧಿಸಿ ತೋರಿಸಿದ್ದಾರೆ. ರಾತ್ರಿ ಶಾಲೆಗಳನ್ನು ನಡೆಸುವ ಸಂಸ್ಥೆಗಳಿಗೆ ಇಲ್ಲಿನ ಸರಕಾರ ಒಂದೆರಡು ಶಿಕ್ಷಕರನ್ನು ಒದಗಿಸಿದರೆ ಉಳಿದ ಶಿಕ್ಷಕರನ್ನು ಹಾಗೂ ಶಿಕ್ಷಕೇತರ ಸಿಬ್ಬಂದಿಯನ್ನು ಆಯಾ ರಾತ್ರಿ ಶಾಲೆಗಳನ್ನು ನಡೆಸುವ ಸಂಸ್ಥೆಗಳೇ ತಮ್ಮ ವೆಚ್ಚದಿಂದ ನಿಭಾಯಿಸುತ್ತವೆ. ವಿದ್ಯಾರ್ಥಿಗಳ ರೈಲು ಪಾಸು, ಪಠ್ಯ ಹಾಗೂ ಪಠ್ಯೇತರ ಪುಸ್ತಕಗಳನ್ನು ಒದಗಿಸಿಕೊಡುವುದರ ಜೊತೆಗೆ ವಿದ್ಯಾರ್ಥಿಗಳಲ್ಲಿ ಶುಲ್ಕಗಳನ್ನು ಪಡೆಯದೆಯೇ ಶಿಕ್ಷಣವನ್ನು ಇಲ್ಲಿನ ರಾತ್ರಿ ಶಾಲೆಗಳು ಪ್ರಾಮಾಣಿಕವಾಗಿ ನೀಡುತ್ತಾ ಬಂದಿವೆ.

ಇತ್ತೀಚೆಗಂತೂ ಹಗಲು ಶಾಲೆಗಳಿಗೆ ಪೈಪೋಟಿಗಿಳಿದು ಕಂಪ್ಯೂಟರ್ ಮೊದಲಾದ ತಾಂತ್ರಿಕ ಸೌಲಭ್ಯಗಳನ್ನೂ ಈ ಶಾಲೆಗಳು ಕಲ್ಪಿಸಿಕೊಡುತ್ತವೆ. ಈ ರಾತ್ರಿಶಾಲೆಗಳಿಂದ ಮೂಡಿಬಂದ ಕನ್ನಡದ ಪ್ರತಿಭೆಗಳು ದೇಶದಲ್ಲಿ ಮಾತ್ರವಲ್ಲದೆ, ವಿದೇಶಗಳಲ್ಲೂ ಮಿಂಚಿವೆ. ‘ಫೋರೆಸ್ ಇಂಡಿಯಾ’ದ ಸದಾನಂದ ಶೆಟ್ಟಿ ರಾತ್ರಿ ಶಾಲೆಯ ಪ್ರತಿಭೆ. ಅವರು ಕರ್ನಾಟಕ ಸಂಘ, ಮಾಟುಂಗ ಇದರ ಅಧ್ಯಕ್ಷರಾಗಿಯೂ ಗೌರವ ಪಡೆದವರು. ಕೋ-ಆಪರೇಟಿವ್ ಬ್ಯಾಂಕ್‌ಗಳಲ್ಲಿ ಕ್ರಾಂತಿ ಮಾಡಿದ ಜಾನ್ ಡಿ’ಸಿಲ್ವ ಓರ್ವ ರಾತ್ರಿಶಾಲೆಯ ವಿದ್ಯಾರ್ಥಿಯಾಗಿದ್ದವರು. ಫೈಟರ್ ಶೆಟ್ಟಿ ಖ್ಯಾತಿಯ ರಾಮ್ ಶೆಟ್ಟಿ ರಾತ್ರಿ ಶಾಲೆಯಲ್ಲಿ ಕಲಿತವರು. ಮುಂಬೈ, ಬೆಂಗಳೂರು, ದುಬೈ ಮೊದಲಾದೆಡೆ ತಮ್ಮ ‘ಸುಖ್ ಸಾಗರ್ ಗ್ರೂಪ್’ ಹೊಟೇಲ್ ಉದ್ಯಮವನ್ನು ಹರಡಿಕೊಂಡಿರುವ ಸುರೇಶ್ ಎಸ್. ಪೂಜಾರಿ ಓರ್ವ ರಾತ್ರಿ ಶಾಲೆಯ ಹಳೆ ವಿದ್ಯಾರ್ಥಿ. ಹೀಗೆ ಕಲೆಹಾಕಿದರೆ ಮುಂಬೈ ರಾತ್ರಿ ಶಾಲಾ ಹಳೆ ವಿದ್ಯಾರ್ಥಿಗಳ ಕೇವಲ ಹೆಸರಿನ ಬೃಹದ್ಗಂಥವೇ ರಚಿಸಬಹುದು.

ಆದರೆ..! ಈ ಶಾಲೆಗಳು ಉಳಿಯುವಲ್ಲಿ, ಬೆಳೆಯುವಲ್ಲಿ ನಮ್ಮ ಕರ್ನಾಟಕ ಸರಕಾರದ ಕೊಡುಗೆ ಏನು? ನಮ್ಮ ಸರಕಾರ ಇಲ್ಲಿನ ಶೈಕ್ಷಣಿಕ ಬೆಳವಣಿಗೆಯ ಬಗ್ಗೆ ಕಣ್ಣುಮುಚ್ಚಿ ಕುಳಿತಿದೆ. ಇಲ್ಲಿಗೆ ಅಲ್ಲಿನ ಮಂತ್ರಿವರ್ಯರನ್ನು ಆಮಂತ್ರಿಸಿದಾಗ ಶಾಲೆಯ ನೆನಪಿನ ಸಮಾರಂಭಗಳಿಗೆ ಆಗಮಿಸಿ ಭರವಸೆ ಕೊಟ್ಟು ಮರೆತು ಬಿಡುವುದು ಸಾಮಾನ್ಯವಾಗಿದೆ. ಒಂದು ವೇಳೆ ಅವರು ಸ್ಪಂದಿಸಿದ್ದರೆ ಇಂದು ಜೀವಂತವಿರುವ ಕನ್ನಡದ ಎರಡು ರಾತ್ರಿ ಶಾಲೆಗಳ ಬದಲಿಗೆ ಹತ್ತು-ಹದಿನೈದು ರಾತ್ರಿ ಶಾಲೆಗಳು ಈ ನಗರದಲ್ಲಿರುತ್ತಿದ್ದವು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)