ದಿಲ್ಲಿ ಗಡಿಯಿಂದ ಕದಲುವುದಿಲ್ಲ: ಕೇಂದ್ರದ ವಿರುದ್ಧ ರೈತರ ಆಕ್ರೋಶ
ರಾಕೇಶ್ ಟೀಕಾಯತ್ (Photo: PTI)
ದಿಲ್ಲಿ, ಜೂ.4: ರೈತರ ಪ್ರತಿಭಟನೆಯನ್ನು ವಿಫಲಗೊಳಿಸುವ ಉದ್ದೇಶದಿಂದ ಪ್ರತಿಭಟನಾ ಸ್ಥಳವನ್ನು ದಿಲ್ಲಿ ಗಡಿಯಿಂದ ಹರ್ಯಾಣದ ಜಿಂದ್ಗೆ ಸ್ಥಳಾಂತರಿಸಲು ಸರಕಾರ ಹುನ್ನಾರ ಮಾಡಿದೆ ಎಂದು ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟೀಕಾಯತ್ ಆಪಾದಿಸಿದ್ದಾರೆ. ಆದರೆ ಯಾವುದೇ ಕಾರಣಕ್ಕೆ ದಿಲ್ಲಿ ಗಡಿಯಿಂದ ಕದಲುವ ಪ್ರಶ್ನೆಯೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ರೈತರ ಪ್ರತಿಭಟನೆಯನ್ನು ದಿಲ್ಲಿ ಗಡಿಯಿಂದ ಹರ್ಯಾನದ ಜಿಂದ್ಗೆ ವರ್ಗಾಯಿಸಲು ಕೇಂದ್ರ ಪ್ರಯತ್ನಿಸುತ್ತಿದೆ. ಆದರೆ ಅವರ ಹುನ್ನಾರ ಯಶಸ್ವಿಯಾಗಲು ನಾವು ಬಿಡುವುದಿಲ್ಲ ಎಂದು ಅವರು ರೈತರ ಸಭೆಯನ್ನು ಉದ್ದೇಶಿಸಿ ಮಾತನಾಡುವ ವೇಳೆ ಸ್ಪಷ್ಟಪಡಿಸಿದರು. ಹಿಂದಿನಂತೆಯೇ ಟೋಲ್ ಪ್ಲಾಝಾಗಳು ಸೇರಿದಂತೆ ಹರ್ಯಾಣದ ವಿವಿಧೆಡೆ ಪ್ರತಿಭಟನೆ ಮುಂದುವರಿಯಲಿದೆ ಎಂದು ಅವರು ಸ್ಪಷ್ಟಪಡಿಸಿದರು.
ಕೇಂದ್ರ ಸರಕಾರ ಜಾರಿಗೆ ತಂದಿರುವ ಹೊಸ ಕಾಯ್ದೆಗಳನ್ನು ಹಿಂಪಡೆಯುವವರೆಗೂ ಹೋರಾಟ ಮುಂದುವರಿಯಲಿದೆ ಎಂದು ಟೀಕಾಯತ್ ನುಡಿದರು.
ಪ್ರತಿಭಟನಾಕಾರರ ವಿರುದ್ಧ ಹಲವು ಪ್ರಕರಣ ದಾಖಲಿಸಿದ್ದರೂ, ಇದಕ್ಕೆ ಹೆದರಿ ನಾವು ಹಿಂದೆ ಸರಿಯುವುದಿಲ್ಲ. ಜೈಲಿಗೆ ಹೋಗಲೂ ನಾವು ಸಿದ್ಧ ಎಂದು ಹೇಳಿದರು. ಕೃಷಿ ಕಾನೂನುಗಳ ವಿರುದ್ಧ ಶಾಂತಿಯುತ ಹೋರಾಟ ಮುಂದುವರಿಯಲಿದೆ ಎಂದು ವಿವರಿಸಿದರು. ಸರಕಾರ ಯಾವಾಗ ಮಾತುಕತೆ ಬಯಸುತ್ತದೆಯೋ ಆಗ ಸಂಯುಕ್ತ ಕಿಸಾನ್ ಮೋರ್ಚಾ ಮಾತುಕತೆಗೆ ಸಿದ್ಧವಿದೆ ಎಂದು ಸ್ಪಷ್ಟಪಡಿಸಿದರು.