ಪಿಎಲ್ಒ: ಅರಫಾತ್ ಮುಂದೆ ಎರಡು ಕಠಿಣ ಸವಾಲು
ಫೆಲೆಸ್ತೀನ್ನಲ್ಲಿ ನಡೆಯುತ್ತಿರುವುದೇನು?
ಭಾಗ-16
ಪಿಎಲ್ಒ ಎಂಬುದು ಮೂಲತಃ 1964ರಲ್ಲಿ, 22 ಸದಸ್ಯ ದೇಶಗಳಿರುವ ಅರಬ್ ಲೀಗ್ ಒಕ್ಕೂಟವು ಇಸ್ರೇಲ್ ವಿರುದ್ಧ ಸಶಸ್ತ್ರ ಹೋರಾಟಕ್ಕಾಗಿ ಜನ್ಮಕೊಟ್ಟ ಸಂಘಟನೆಯಾಗಿತ್ತು. 1969 ರಲ್ಲಿ ಅರಬ್ ಲೀಗ್ನವರು ಅರಫಾತ್ರನ್ನು ಆ ಸಂಘಟನೆಯ ಮುಖ್ಯಸ್ಥರಾಗಿಸಿದರು. ಆದರೆ ಆ ಬಳಿಕವೂ, ಅರಫಾತ್ ಮುಂದೆ ಎರಡು ಪ್ರಮುಖ ಸವಾಲುಗಳಿದ್ದವು:
1. ಅವರಿಗೆ ಪಿಎಲ್ಒ ನ ಎಲ್ಲ ಘಟಕಗಳ ಮೇಲೆ ಸಂಪೂರ್ಣ ಹತೋಟಿ ಪ್ರಾಪ್ತವಾಗಿರಲಿಲ್ಲ. ಕೆಲವು ಬಂಡುಕೋರ ಘಟಕಗಳು ಅರಫಾತ್ರ ನಿಯಂತ್ರಣ ಮೀರಿ ಹಲವು ಕಾರ್ಯಾಚರಣೆಗಳನ್ನು ನಡೆಸುತ್ತಿದ್ದವು. ಆ ಪೈಕಿ ಕೆಲವು ಅಪರಾಧ ಸ್ವರೂಪದ ಭೂಗತ, ಹಿಂಸಾತ್ಮಕ ಚಟುವಟಿಕೆಗಳು ಅರಫಾತ್ರನ್ನು ಪೇಚಿಗೆ ಸಿಲುಕಿಸಿದ್ದಲ್ಲದೆ ಜಾಗತಿಕ ವೇದಿಕೆಗಳಲ್ಲಿ ಅವರ ವಿರುದ್ಧ ಅಪಪ್ರಚಾರ ನಡೆಸುವುದಕ್ಕೆ ಇಸ್ರೇಲ್ ಮತ್ತು ಅಮೆರಿಕಕ್ಕೆ ಧಾರಾಳ ಸಬೂಬುಗಳನ್ನು ಒದಗಿಸಿದವು.
2. ಪಿಎಲ್ಒ, ‘ಅರಬ್ ಲೀಗ್’ ಎಂಬ ಒಕ್ಕೂಟದ ಅಧೀನ ದಲ್ಲಿತ್ತು. ಒಕ್ಕೂಟದಲ್ಲಿದ್ದ ಹಲವು ದೇಶ ಹಾಗೂ ಸರಕಾರಗಳ ಮಧ್ಯೆ ಯಾವುದೇ ಸಮಾನ ವಿಚಾರಧಾರೆಯಾಗಲಿ, ಅಜಂಡಾ ಆಗಲಿ, ಸಮನ್ವಯವಾಗಲಿ ಇರಲಿಲ್ಲ. ಒಂದೊಂದು ದೇಶದವರಿಗೂ ಪಿಎಲ್ಒ ನಿಂದ ತಮ್ಮದೇ ಆದ ನಿರೀಕ್ಷೆಗಳಿದ್ದವು. ಈ ಬಗೆಯ ತದ್ವಿರುದ್ಧ ನಿರೀಕ್ಷೆಗಳನ್ನು ಈಡೇರಿಸುವುದು ಸುಲಭದ ಕೆಲಸವಾಗಿರಲಿಲ್ಲ.
ಈ ಪೈಕಿ ಎರಡನೆಯ ಸವಾಲನ್ನು ಅರಫಾತ್ ಬಹಳ ಚೆನ್ನಾಗಿ ನಿಭಾಯಿಸಿದರು. ತನ್ನ ವರ್ಚಸ್ಸು, ಪ್ರಭಾವಗಳನ್ನು ಬಳಸಿ ಪಿಎಲ್ಒವನ್ನು ಸಾಕಷ್ಟು ಮಟ್ಟಿಗೆ ಅರಬ್ ಲೀಗ್ ಸದಸ್ಯರ ಮುಷ್ಟಿಯಿಂದ ಮುಕ್ತಗೊಳಿಸಿದರು. ಪಿಎಲ್ಒ ಗೆ ನಾಡಿಲ್ಲದ ಒಂದು ಸರಕಾರ ಎಂಬ ಸ್ಥಾನ ಮಾನವನ್ನು ಗಟ್ಟಿಗೊಳಿಸಿದರು. ತಾನು ಎಲ್ಲೇ ಇದ್ದರೂ ಫೆಲೆಸ್ತೀನ್ ಎಂಬ ದೇಶ ಮತ್ತು ಸರಕಾರದ ಮುಖ್ಯಸ್ಥ ತಾನೇ ಆಗಿರುತ್ತೇನೆ ಎಂಬುದು ಅರಫಾತ್ ಅವರ ಸಂಕಲ್ಪವಾಗಿತ್ತು. ಅದನ್ನವರು ತಕ್ಕ ಮಟ್ಟಿಗೆ ಸಾಧಿಸಿದರು. ಆದರೆ ಮೊದಲ ಸವಾಲು ಬಹುಕಾಲ ಹಾಗೆಯೇ ಉಳಿದಿತ್ತು. ಪಿಎಲ್ಒ ಒಳಗಿನ ಕೆಲವು ಬಂಡುಕೋರ ಗುಂಪುಗಳು ಮುಂದೆಯೂ ಹಲವು ವರ್ಷಗಳ ಕಾಲ ಅರಫಾತ್ರನ್ನು ಲೆಕ್ಕಿಸದೆ ತಮ್ಮ ಇಚ್ಛಾನುಸಾರ ಸಕ್ರಿಯವಾಗಿದ್ದವು.
► 3 ದಶಕಗಳ ಅಲೆದಾಟ-ಎಲ್ಲೂ ಸಲ್ಲದಾದ ಪಿಎಲ್ಒ
ಸೋತವರಿಗೆ ಮಿತ್ರರೆಲ್ಲಿರುತ್ತಾರೆ? ಇಸ್ರೇಲ್ನ ಕೆಂಗಣ್ಣಿಗೆ ತುತ್ತಾಗಿ 1970ರಲ್ಲಿ ಜೋರ್ಡನ್ನಲ್ಲಿ ಆಶ್ರಯ ಪಡೆದಿದ್ದ ಪಿಎಲ್ಒ, ಇಸ್ರೇಲ್ ಕಾರ್ಯಾಚರಣೆಯಲ್ಲಿ ಭಾರೀ ನಾಶ ನಷ್ಟ ಅನುಭವಿಸಿ ಸೋಲುಂಡಿತು. ಅದರ ಬೆನ್ನಿಗೆ ಜೋರ್ಡನ್ ದೊರೆ ಮತ್ತು ಪಿಎಲ್ಒ ನಡುವೆ ಜಗಳವಾಯಿತು. ಪಿಎಲ್ಒ ಅನ್ನು ಜೋರ್ಡನ್ ನಿಂದ ಹೊರದಬ್ಬಲಾಯಿತು. ಕೊನೆಗೆ ಲೆಬನಾನ್ ನಲ್ಲಿ ಆಶ್ರಯ ಪಡೆದ ಅರಫಾತ್ ಪಡೆಗಳು ಅಲ್ಲಿಂದ ಇಸ್ರೇಲ್ ಗಡಿಗಳ ಮೇಲೆ ದಾಳಿಗಳ ಸರಮಾಲೆಯನ್ನು ಆರಂಭಿಸಿದವು. ಜೊತೆಗೆ ಲೆಬನಾನ್ ನಲ್ಲಿ ನಡೆಯುತ್ತಿದ್ದ ವಿವಿಧ ಬಗೆಯ ಅಂತಃಕಲಹಗಳಲ್ಲೂ, ಭಾಗವಹಿಸಲು ಆರಂಭಿಸಿದವು.
1970ರಿಂದ 82ರ ಮಧ್ಯೆ ಇಸ್ರೇಲ್ ಮತ್ತು ಪಿಎಲ್ಒ ನಡುವೆ ಲೆಬನಾನ್ ಮತ್ತು ಇತರ ಕಡೆಗಳಲ್ಲಿ ಹಲವು ದಾಳಿ, ಪ್ರತಿ ದಾಳಿಗಳು ನಡೆದವು. ಆದರೆ 1982 ರಲ್ಲಿ ಇಸ್ರೇಲ್ ನಡೆಸಿದ ದಾಳಿಗಳು ತುಂಬಾ ವ್ಯಾಪಕ ಹಾಗೂ ತೀವ್ರ ಪ್ರಮಾಣದ್ದಾಗಿದ್ದವು. ಆ ವರ್ಷವಂತೂ ಇಸ್ರೇಲ್ ಪಡೆಗಳು ಲೆಬನಾನ್ ಗಡಿಗಳ ಒಳನುಗ್ಗಿ ಪಿಎಲ್ಒ ನೆಲೆಗಳನ್ನೆಲ್ಲಾ ಸಂಪೂರ್ಣ ಧ್ವಂಸಗೊಳಿಸಿ ಬಿಟ್ಟವು. ಅದು ಅರಫಾತ್ ಮತ್ತವರ ಪಡೆಗಳ ಪಾಲಿಗೆ ತೀರಾ ಅಸಹಾಯಕತೆಯ ಸನ್ನಿವೇಶವಾಗಿತ್ತು. ಆ ಸನ್ನಿವೇಶದಲ್ಲಿ ಯಾವ ಒಂದು ಅರಬ್ ದೇಶ ಕೂಡ ಪಿಎಲ್ಒ ಗೆ ಆಶ್ರಯ ನೀಡಲು ಮುಂದೆ ಬರಲಿಲ್ಲ. ಕೊನೆಗೆ ಬಹಳಷ್ಟು ವಾದ, ಒತ್ತಡಗಳ ಬಳಿಕ ಸಿರಿಯಾದಲ್ಲಿ ಪಿಎಲ್ಒ ಗೆ ಆಶ್ರಯ ದಕ್ಕಿತು.
ಯಾಸಿರ್ ಅರಫಾತ್, ತಾನೆಲ್ಲೇ ಇರಲಿ, ಅಲ್ಲಿನ ಆಂತರಿಕ ರಾಜಕೀಯದಲ್ಲಿ ಆಸಕ್ತಿ ವಹಿಸುತ್ತಿದ್ದರು. ಜೋರ್ಡನ್ನಂತೆ ಸಿರಿಯಾದಲ್ಲೂ ಈ ಅಭ್ಯಾಸ ಅರಫಾತ್ಗೆ ದುಬಾರಿಯಾಯಿತು. 1983ರಲ್ಲಿ ಸಿರಿಯಾದ ಹಾಫಿಝ್ ಅಲ್ ಅಸದ್ ಬಹಳ ಹೀನಾಯವಾಗಿ ಅರಫಾತ್ರನ್ನು ತನ್ನ ನಾಡಿನಿಂದ ಹೊರಗೆಸೆದರು. ಆಗ ಅರಫಾತ್ ಲೆಬನಾನ್ಗೆ ಮರಳಲು ಪ್ರಯತ್ನಿಸಿದರು. ಆದರೆ ಲೆಬನಾನ್ ನಲ್ಲಿದ್ದ ಅವರದೇ ಫತಹ್ ಬಣದ ಗುಂಪೊಂದು ಸಿರಿಯಾದ ಅಸದ್ ಜೊತೆ ಸೇರಿ ಅರಫಾತ್ ಪಡೆಗಳ ವಿರುದ್ಧ ಯುದ್ಧ ಸಾರಿದವು. ಬೇರೆ ದಾರಿ ಕಾಣದೆ ಅರಫಾತ್ ತಮ್ಮ ಅಳಿದುಳಿದ ಪಡೆಯ ಒಂದು ಭಾಗದೊಂದಿಗೆ, ಟ್ಯುನೀಶಿಯಾದಲ್ಲಿ ಆಶ್ರಯ ಪಡೆಯಬೇಕಾಯಿತು. ಅವರ ಇತರ ಕೆಲವು ತುಕಡಿಗಳು ಯಮನ್, ಅಲ್ಜೀರಿಯ, ಇರಾಕ್ ಮುಂತಾದ ಕಡೆಗಳಲ್ಲಿ ಆಶ್ರಯ ಪಡೆದವು.
ಇದರಿಂದ ಇಸ್ರೇಲ್ಗೆ ಆದ ನಷ್ಟವೇನೆಂದರೆ, 1982ರ ತನಕ ಕೇವಲ ಲೆಬನಾನ್ಗೆ ಸೀಮಿತವಾಗಿದ್ದು ಅಲ್ಲಿಂದ ಮಾತ್ರ ಇಸ್ರೇಲ್ ಮೇಲೆ ಧಾಳಿ ಮಾಡುತ್ತಿದ್ದ ಪಿಎಲ್ಒ ಪಡೆಗಳು ಇದೀಗ ಹಲವು ನೆರೆದೇಶಗಳಲ್ಲಿ ನೆಲೆಯೂರಿ, ಸ್ಥಳೀಯ ಸಂಪನ್ಮೂಲಗಳನ್ನು ಸಂಘಟಿಸಿ, ಇಸ್ರೇಲ್ ವಿರುದ್ಧ ವ್ಯವಸ್ಥಿತ ದಾಳಿಗಳನ್ನು ಮಾಡಲಾರಂಭಿಸಿದ್ದವು.
ಯಾಸಿರ್ ಅರಫಾತ್ರ ಅಲೆಮಾರಿ ಯುಗ ಮುಗಿಯ ಲಿಲ್ಲವಾದರೂ, ಈ ಮಧ್ಯೆ ಅನೇಕ ಅಂತರ್ರಾಷ್ಟ್ರೀಯ ವೇದಿಕೆಗಳಲ್ಲಿ ಅವರು, ಫೆಲೆಸ್ತೀನ್ನ ರಾಷ್ಟ್ರೀಯ ಪ್ರತಿನಿಧಿಯಾಗಿ ಮನ್ನಣೆ ಗಳಿಸಲಾರಂಭಿದರು. ಆದರೆ ಕೊನೆಗೂ ಅವರಿಗೆ ತನ್ನ ತಾಯಿನಾಡಿಗೆ ಮರಳಲು ಸಾಧ್ಯವಾದದ್ದು 1994ರಲ್ಲಿ, ಅಂದರೆ ಇಸ್ರೇಲ್ಗೆ ಮನ್ನಣೆ ನೀಡುವ 1993ರ ಓಸ್ಲೋ ಒಪ್ಪಂದಕ್ಕೆ ಅವರು, ಹೆಬ್ಬೆಟ್ಟೊತ್ತಿದ ಬಳಿಕ ಮಾತ್ರ!
► ಆಲಿವ್ ಗೆಲ್ಲು ಮತ್ತು ಸ್ವಾತಂತ್ರ ಹೋರಾಟಗಾರನ ಗನ್ನು
1974 ನವೆಂಬರ್ 13ರ ಆ ಘಟನೆ, ವಿಶ್ವಸಂಸ್ಥೆಯ ಇತಿಹಾಸದ ಒಂದು ಅನನ್ಯ ಘಟನೆಯಾಗಿತ್ತು. ಯಾವುದೇ ನಿರ್ದಿಷ್ಟ, ಅಧಿಕೃತ ದೇಶದ ಪ್ರಮುಖನಲ್ಲದ, ಪಿಎಲ್ಒ ಅಧ್ಯಕ್ಷ ಯಾಸಿರ್ ಅರಫಾತ್ ಅಂದು ವಿಶ್ವ ಸಂಸ್ಥೆಯ ಮಹಾಸಭೆಯನ್ನುದ್ದೇಶಿಸಿ ಮಾತನಾಡಿದರು. ಅಂದು ವಿಶ್ವಸಂಸ್ಥೆಯು ಪಿಎಲ್ಒ ಸಂಸ್ಥೆಗೆ, ತಮ್ಮದೇ ದೇಶದಲ್ಲಿ ಆಕ್ರಮಿತರೂ ನಿರಾಶ್ರಿತರೂ ಆಗಿದ್ದ ಫೆಲೆಸ್ತೀನ್ ಜನತೆಯ ಅಧಿಕೃತ ಪ್ರತಿನಿಧಿ ಎಂಬ ಸ್ಥಾನ ಮಾನ ನೀಡಿತ್ತು. ಇದು ಫೆಲೆಸ್ತೀನ್ ಜನತೆಯ ಪಾಲಿಗೆ, ಅವರ ಹಲವು ದಶಕಗಳ ವಿಮೋಚನಾ ಹೋರಾಟದಲ್ಲಿ ಒಂದು ಪ್ರಮುಖ ಮುನ್ನಡೆಯಾಗಿತ್ತು. ಅರಫಾತ್ ಆ ದಿನ ಅಧಿವೇಶನಕ್ಕೆ ಬಂದ ಶೈಲಿ, ಅವರು ಧರಿಸಿದ್ದ ಉಡುಗೆ, ಅವರ ಆವೇಶಭರಿತ ಧ್ವನಿ ಮತ್ತು ಅರ್ಥಪೂರ್ಣ ಹಾವ ಭಾವ ಇವೆಲ್ಲವನ್ನೂ ಜಗತ್ತಿನ ವಿವಿಧೆಡೆಯ ವೀಕ್ಷಕರು ವಿಶೇಷವಾಗಿ ಗುರುತಿಸಿ ಪ್ರಶಂಸಿಸಿದರು. ಅಂದು ಅವರು ಅರಬಿ ಭಾಷೆಯಲ್ಲಿ ಮಾಡಿದ 90 ನಿಮಿಷಗಳ ಆ ಭಾಷಣದಲ್ಲಿ ಹೇಳಿದ ಹೆಚ್ಚಿನೆಲ್ಲ ಮಾತುಗಳು ಐತಿಹಾಸಿಕವಾಗಿದ್ದವು.
‘‘ನಾನು ಒಂದು ಕೈಯಲ್ಲಿ (ಶಾಂತಿಯ ಸೂಚಕ) ಆಲಿವ್ ಗೆಲ್ಲು ಮತ್ತು ಇನ್ನೊಂದು ಕೈಯಲ್ಲಿ ಸ್ವಾತಂತ್ರ ಹೋರಾಟಗಾರನ ಗನ್ನು ಹಿಡಿದುಕೊಂಡು ನಿಮ್ಮ ಬಳಿಗೆ ಬಂದಿದ್ದೇನೆ. ದಯವಿಟ್ಟು ಆಲಿವ್ ಗೆಲ್ಲನ್ನು ನನ್ನ ಕೈಯಿಂದ ಬೀಳಲು ಬಿಡಬೇಡಿ’’ - ಎಂಬ ಅರಫಾತ್ರಅಂದಿನ ಮಾತುಗಳು ಮುಂದಿನ ದಿನಗಳಲ್ಲಿ, ಫೆಲೆಸ್ತೀನ್ ಭೂಪಟವನ್ನು ಹೋಲುವ ಅರಫಾತ್ರ ವಿಶಿಷ್ಟ ಶಿರವಸ್ತ್ರದಂತೆ, ಫೆಲೆಸ್ತೀನ್ ವಿಮೋಚನಾ ಹೋರಾಟದ ಹೆಗ್ಗುರುತುಗಳಾದವು.
► ಭ್ರಷ್ಟಾಚಾರದ ಪರ್ವ
ಒಂದು ಹಂತದಲ್ಲಿ ಅರಫಾತ್ ಮತ್ತು ಪಿಎಲ್ಒ ಬಳಿ ಬೇರೇನಿಲ್ಲದಿದ್ದರೂ ದುಡ್ಡು ಮಾತ್ರ ಧಾರಾಳವಾಗಿತ್ತು. ಫೆಲೆಸ್ತೀನ್ ಜನತೆಯ ಪರವಾಗಿ ಯಾವುದೇ ಅರಬ್ ಸರಕಾರ ಏನೂ ಮಾಡುತ್ತಿಲ್ಲ, ಅರಫಾತ್ ಮತ್ತವರ ಪಿಎಲ್ಒ ಮಾತ್ರ ಅಪಾರ ತ್ಯಾಗ ಬಲಿದಾನಗಳನ್ನು ನೀಡುತ್ತಿದೆ ಎಂದು ಅರಬ್ ದೇಶಗಳಲ್ಲಿ ಜನರು ನಂಬಿದ್ದರು. ಅವರಲ್ಲಿನ ಈ ವ್ಯಾಪಕ ಸಹಾನುಭೂತಿಯ ಫಲವಾಗಿ ಭಾರೀ ಆರ್ಥಿಕ ಸಹಾಯ ಅರಫಾತ್ ಕಡೆಗೆ ಹರಿದು ಬಂತು. 1991ರತನಕ ಕೊಲ್ಲಿಯ ಹೆಚ್ಚಿನೆಲ್ಲ ಸರಕಾರಗಳು, ವಿಶೇಷವಾಗಿ ಕುವೈತ್ ಮತ್ತು ಸೌದಿ ಅರೇಬಿಯಾ ಪಿಎಲ್ಒ ಗೆ ಬೃಹತ್ ವಾರ್ಷಿಕ ದೇಣಿಗೆಗಳನ್ನು ನೀಡುತ್ತಿದ್ದವು. ಈ ಮೂಲಕ ತಮ್ಮ ಸಮಾಜಗಳಲ್ಲಿ ಫೆಲೆಸ್ತೀನ್ ಪರ ಮತ್ತು ಇಸ್ರೇಲ್ ವಿರುದ್ಧ ಇದ್ದ ಆವೇಶದ ಭಾವನೆಗಳನ್ನು ತಣ್ಣಗಿಡುವುದು ಪ್ರಸ್ತುತ ಸರಕಾರಗಳ ಉದ್ದೇಶವಾಗಿತ್ತು. ಕೊಲ್ಲಿ ಪ್ರದೇಶದ ಹಲವು ದೊಡ್ಡ ಉದ್ಯಮಿಗಳು ಮತ್ತು ಕಂಪೆನಿಗಳು ಕೂಡಾ ಪಿಎಲ್ಒ ಪಾಲಿಗೆ ತುಂಬಾ ಉದಾರವಾಗಿದ್ದವು. ಕುವೈತ್ ಮೇಲಿನ ಇರಾಕ್ ಆಕ್ರಮಣದ ಬಳಿಕ, ಅರಫಾತ್ ಪಾಳಯಕ್ಕೆ ಅರಬ್ ದೇಶಗಳ ನೆರವಿನ ಹರಿವು ನಿಂತು ಬಿಟ್ಟಿತ್ತು. ಆದರೆ 1993ರಲ್ಲಿ ಓಸ್ಲೋ ಒಪ್ಪಂದಕ್ಕೆ ತೆರೆ ಮರೆಯ ತಯಾರಿ ಆರಂಭವಾದ ಬೆನ್ನಿಗೆ, ಅಮೆರಿಕ ಮತ್ತು ಇಸ್ರೇಲ್ನ ಮಿತ್ರರಾಷ್ಟ್ರಗಳ ಕಡೆಯಿಂದ ನೆರವಿನ ನೆರೆ ಬರ ತೊಡಗಿತು. ಈ ರೀತಿ ಅರಫಾತ್ ರಿಗೆ ವಿವಿಧೆಡೆಯ ಲಕ್ಷಾಂತರ ಫೆಲೆಸ್ತೀನ್ ನಿರಾಶ್ರಿತರ ಯೋಗ ಕ್ಷೇಮ ನೋಡಿಕೊಳ್ಳುವುದಕ್ಕೆ, ತನ್ನ ಯೋಧರನ್ನು ಪೋಷಿಸುವುದಕ್ಕೆ ಮತ್ತು ಅವರಿಗೆ ಶಸ್ತ್ರಾಸ್ತ್ರ ಹಾಗೂ ಸವಲತ್ತುಗಳನ್ನು ಒದಗಿಸುವುದಕ್ಕೆ ಎಂದೂ ಯಾವುದೇ ಆರ್ಥಿಕ ಕೊರತೆ ಉಂಟಾಗಲಿಲ್ಲ. ಮುಂದೆ ಕೂಡಾ ಬಿಕ್ಕಟ್ಟು ತಲೆದೋರಿದ್ದು ಪ್ರಸ್ತುತ ಸಂಪತ್ತಿನ ಆಧಿಕ್ಯದಿಂದಲೇ ಹೊರತು ಅದರ ಕೊರತೆಯಿಂದಲ್ಲ!
ಅರಫಾತ್ ಎಂದೂ ಒಂಟಿಯಾಗಿರಲಿಲ್ಲ. ಅವರ ಸುತ್ತ ಮುತ್ತ ಭಟ್ಟಂಗಿಗಳು ಮತ್ತು ಆಸ್ಥಾನಿಗರ ಒಂದು ದೊಡ್ಡ ಪಟಾಲಮ್ ಸದಾ ಇರುತ್ತಿತ್ತು. ಅವರಲ್ಲಿ ಹೆಚ್ಚಿನವರು ತಮ್ಮ ಯವ್ವನದಲ್ಲಿ ಕ್ರಾಂತಿಕಾರಿಗಳಾಗಿದ್ದು ಕ್ರಮೇಣ ಎಲ್ಲ ಬಗೆಯ ದುಶ್ಚಟಗಳನ್ನು ಬೆಳೆಸಿಕೊಂಡು, ಪರಮ ಭ್ರಷ್ಟರಾಗಿ ಬದಲಾಗಿದ್ದವರು. ಅವರು ಎಲ್ಲ ಬಗೆಯ ಸುಖ ಭೋಗ, ಅಪರಾಧ, ಅವ್ಯವಹಾರ ಮತ್ತು ಹಗರಣಗಳಲ್ಲಿ ಶಾಮೀಲಾಗಿದ್ದರು. ವೈಯಕ್ತಿಕವಾಗಿ ಅರಫಾತ್ರ ಜೀವನ ಶೈಲಿ ಸರಳವಾಗಿತ್ತು. ಅವರನ್ನು ಯಾರೂ ಭ್ರಷ್ಟನೆಂದು ಕರೆದಿರಲಿಕ್ಕಿಲ್ಲ. ಆದರೆ ತಮ್ಮ ನಿಕಟವರ್ತಿಗಳನ್ನು ಲಗಾಮಿಲ್ಲದೆ ಮೇಯಲು ಬಿಟ್ಟ ಅರಫಾತ್, ಆ ಮಂದಿಯ ಕುಕೃತ್ಯಗಳ ಪರಿಣಾಮಗಳನೆಲ್ಲ ನೇರವಾಗಿ ತಾನೇ ಎದುರಿಸಬೇಕಾಯಿತು. ಶಿಷ್ಯರ ತಪ್ಪಿಗೆ ಗುರುವೇ ಬೆಲೆ ತೆರಬೇಕಾಯಿತು. ಅರಫಾತ್ ಸಕ್ರಿಯರಾಗಿದ್ದ ದಿನಗಳಲ್ಲೇ ಅವರ ಪಕ್ಷ, ಪ್ರಾಧಿಕಾರ ಮತ್ತು ಆಪ್ತವಲಯದಲ್ಲಿ ದೊಡ್ಡ ಪ್ರಮಾಣದ ಆರ್ಥಿಕ ಅವ್ಯವಹಾರಗಳು ಹೊರಬರಲು ಆರಂಭಿಸಿದ್ದವು. ಅರಫಾತ್ರ ಇಮೇಜು ಕಳಂಕಿತವಾಗಿತ್ತು. ಅವರ ಪತ್ನಿಯ ವಿಲಾಸಿ ಜೀವನ ಶೈಲಿಯಿಂದಾಗಿ ಗಾಸಿಪ್ ಕೋರರು ಹಬ್ಬ ಆಚರಿಸಿದರು. ಒಟ್ಟು ಸನ್ನಿವೇಶವು ಅರಫಾತ್ರ ನಿಯಂತ್ರಣ ತಪ್ಪಿತ್ತು. ಅವರ ಆಪ್ತ ವಲಯದ ಬಳಿ ಇದ್ದ ಅಕ್ರಮ ಸಂಪತ್ತಿನ ಪ್ರಮಾಣ ನಾಲ್ಕರಿಂದ ಎಂಟು ಬಿಲಿಯನ್ ಡಾಲರ್ಗಳಷ್ಟಿರಬಹುದೆಂಬ ಅಂದಾಜುಗಳು ಪ್ರಚಾರ ಪಡೆದವು. ಅವರ ಮರಣದ ವೇಳೆ ಅವರು ಬಿಟ್ಟು ಹೋದ, ಅನಧಿಕೃತ ಸಂಪತ್ತಿನ ಒಟ್ಟು ಪ್ರಮಾಣ ಎಷ್ಟು? ಅದೆಲ್ಲ ಎಲ್ಲಿದೆ ? ಇತ್ಯಾದಿ ಪ್ರಶ್ನೆಗಳ ಉತ್ತರಕ್ಕಾಗಿ ಇಂದು ಕೂಡಾ ಹುಡುಕಾಟ ಮುಂದುವರಿದಿದೆ. ಅರಫಾತ್ರ ವರ್ಚಸ್ಸು, ಅವರ ಪಿಎಲ್ಒ ಸಂಘಟನೆಯ ಪ್ರತಿಷ್ಠೆ, ಅವರ ಪ್ರಾಧಿಕಾರದ ವಿಶ್ವಾಸಾರ್ಹತೆ ಮತ್ತು ಅವರ ಪಾಳಯದ ಏಕತೆ ಇವೆಲ್ಲವನ್ನೂ ನಾಶ ಮಾಡುವುದರಲ್ಲಿ ಬೇರಾವುದೇ ಶತ್ರುವಿಗಿಂತ ಪ್ರಸ್ತುತ ಆರ್ಥಿಕ ಅವ್ಯವಹಾರದ ಪಾತ್ರವೇ ಅತಿದೊಡ್ಡದಾಗಿತ್ತು.
► ಸದ್ದಾಮ್ ಬಾವಿಗೆ ಧುಮುಕಿದಾಗ ಬಾಲ ಹಿಡಿದಿದ್ದ ಅರಫಾತ್
1990ರಲ್ಲಿ ಸದ್ದಾಮ್ ಹುಸೈನ್ ಕುವೈತ್ ಮೇಲೆ ಆಕ್ರಮಣ ಮಾಡಿದಾಗ ಅರಫಾತ್, ಆಗ ತಾನೇ ವಿವಾಹವಾದ ಸಂಭ್ರಮದಲ್ಲಿದ್ದರು. ಆಕ್ರಮಣಕ್ಕಿಂತ ಮೂರು ವಾರ ಹಿಂದಷ್ಟೇ ಅವರ ವಿವಾಹ ನಡೆದಿತ್ತು.
ಯಾಸಿರ್ ಅರಫಾತ್ ಎಷ್ಟೋ ವರ್ಷಗಳಿಂದ ಸದ್ದಾಮ್ ಹುಸೈನ್ರ ಮಿತ್ರರು. ಆದರೆ ಆ ಮೈತ್ರಿಯನ್ನು ಬಳಸಿ ಇಸ್ರೇಲ್ ವಿರುದ್ಧ ಏನಾದರೂ ಕಾರ್ಯಾಚರಣೆ ನಡೆಸುವಂತೆ ಸದ್ದಾಮ್ರ ಮನ ಒಲಿಸಲು ಅರಫಾತ್ರಿಗೆ ಸಾಧ್ಯವಾಗಲಿಲ್ಲ. ತಾನು ಕುವೈತ್ ಮೇಲೆ ಕುರುಡು ಆಕ್ರಮಣ ನಡೆಸಿದಾಗ, ಅದಕ್ಕೆ ಅರಫಾತ್ ಬೆಂಬಲ ಪಡೆಯಲು ಸದ್ದಾಮ್ಗೆ ಮಾತ್ರ ಸಾಧ್ಯವಾಯಿತು!ಇಸ್ರೇಲ್ ಮತ್ತು ಆಕ್ರಮಿತ ಫೆಲೆಸ್ತೀನ್ನ ಹಲವೆಡೆ ಕೆಲವು ಜನಸಾಮಾನ್ಯರು ಕೂಡ ಸದ್ದಾಮ್ರನ್ನು ಬೆಂಬಲಿಸಿ, ಕುವೈತ್ ಮೇಲಿನ ಆಕ್ರಮಣವನ್ನು ಸಂಭ್ರಮಿಸಿದರು. ಸದ್ದಾಮ್ ಆಕ್ರಣಕ್ಕೆ ಅರಫಾತ್ ಘೋಷಿಸಿದ ಬೆಂಬಲವು ಸದ್ದಾಮ್ ರನ್ನೇನೂ ಉಳಿಸಲಿಲ್ಲ. ಆದರೆ ಅದು ಅರಫಾತ್ ಮತ್ತವರ ಪಿಎಲ್ಒ ಗೆ ಮಾತ್ರವಲ್ಲ, ಒಟ್ಟು ಫೆಲೆಸ್ತೀನ್ ಜನತೆ ಮತ್ತವರ ಆಂದೋಲನದ ಪಾಲಿಗೆ ಘೋರ ಹಿನ್ನಡೆಯನ್ನು ತಂದೊಡ್ಡಿತು. ಹೆಚ್ಚಿನೆಲ್ಲ ಕೊಲ್ಲಿ ರಾಷ್ಟ್ರಗಳು ಪಿಎಲ್ಒ ಗೆ ಮಾತ್ರವಲ್ಲ ಫೆಲೆಸ್ತೀನ್ ನಿರಾಶ್ರಿತರಿಗೂ ತಮ್ಮ ಬೆಂಬಲವನ್ನು ಹಿಂದೆಗೆದು ಕೊಂಡವು, ಎಷ್ಟೋ ದೇಶಗಳಲ್ಲಿ ನೌಕರಿ ಮಾಡುತ್ತಿದ್ದ ಲಕ್ಷಾಂತರ ಫೆಲೆಸ್ತೀನ್ ಮೂಲದ ಮಂದಿಯನ್ನು ಅಲ್ಲಿಂದ ಹೊರದಬ್ಬಲಾಯಿತು.
► ರಾಜಿಸ್ತಾನದಲ್ಲಿ ಆಶ್ರಯ ಪಡೆದ ಅರಫಾತ್
ಅರಫಾತ್ ಅವರ ಹೋರಾಟ ಜೀವನದಲ್ಲಿ ದೊಡ್ಡ ರಾಜಿಗಳ ಪರ್ವ ಬಹಳ ತಡವಾಗಿ ಆರಂಭವಾಯಿತು. ಅವರು ಹಠಾತ್ತನೆ ರಾಜಿಗೆ ಧುಮುಕಿದವರಲ್ಲ. ಕಾಲಕ್ರಮೇಣ, ಮೆಲ್ಲ ಮೆಲ್ಲನೆ ರಾಜಿಯ ಕಡೆಗೆ ಹೆಜ್ಜೆ ಇಟ್ಟವರು. ಈ ವಿಷಯದಲ್ಲಿ ಅವರ ಪ್ರಯಾಣದ ಮೈಲುಗಲ್ಲುಗಳನ್ನು ಗಮನಿಸಿ:
‘‘ನಮ್ಮ ಮಟ್ಟಿಗೆ ಶಾಂತಿ ಅಂದರೆ ಇಸ್ರೇಲ್ ಸರಕಾರದ ನಿರ್ಮೂಲನವಲ್ಲದೆ ಬೇರೇನಲ್ಲ. ನಾವು ಒಂದು ಸರ್ವಾಂಗೀಣ ಯುದ್ಧಕ್ಕೆ ಸಜ್ಜಾಗುತ್ತಿದ್ದೇವೆ. ಹಲವು ತಲೆಮಾರುಗಳ ಕಾಲ ಮುಂದುವರಿಯಲಿರುವ ಯುದ್ಧ ಅದು’’ - ಇದು ಯಾಸಿರ್ ಅರಫಾತ್ ತನ್ನ ಹೋರಾಟದ ಆರಂಭದಿಂದ ಹಲವು ವರ್ಷಗಳ ತನಕ ತಾಳಿದ್ದ ಗಟ್ಟಿ ನಿಲುವಾಗಿತ್ತು.
► 1970ರಲ್ಲಷ್ಟೇ ಅವರು ಹೀಗೆ ಹೇಳಿದ್ದರು
‘‘ಮೆಡಿಟರೇನಿಯನ್ ಸಮುದ್ರದಿಂದ ಜೋರ್ಡನ್ ನದಿಯವರೆಗಿನ ಭೂಮಿಯನ್ನು ವಿಮೋಚಿಸುವುದೇ ನಮ್ಮ ಗುರಿ. 1967 ರ ಯುದ್ಧದಲ್ಲಿ ಏನಾಯಿತು ಅಥವಾ ಅದರ ಪರಿಣಾಮ ಏನಾಯಿತು ಎಂಬುದು ನಮಗೆ ಮುಖ್ಯವಲ್ಲ. ಝಿಯೋನಿಸ್ಟ್ ಸರಕಾರವನ್ನು ಇಲ್ಲವಾಗಿಸಿ ನಮ್ಮ ನೆಲವನ್ನು ಮುಕ್ತಗೊಳಿಸಬೇಕೆಂಬುದೇ ಫೆಲೆಸ್ತೀನ್ ಕ್ರಾಂತಿಯ ಮೂಲ ಧ್ಯೇಯ.’’
ಆದರೆ ತಮ್ಮ ಆಂದೋಲನದ ಅಸ್ತಿತ್ವಕ್ಕಾಗಿ ಹಲವು ಅರಬ್ ಸರಕಾರಗಳನ್ನು ಅವಲಂಬಿಸಿದ್ದ ಅರಫಾತ್ ಆ ಸರಕಾರಗಳ ಧೋರಣೆಗಳನ್ನು ಕಡೆಗಣಿಸುವಂತಿರಲಿಲ್ಲ. 1973ರ ಯುದ್ಧದ ಬಳಿಕ ಅವರ ನಿಲುವು ಸಡಿಲವಾಗತೊಡಗಿತು. 1973-74ರ ನಡುವೆ ನಡೆದ ಹಲವು ಅರಬ್ ಶೃಂಗ ಸಭೆಗಳಲ್ಲಿ ಅವರು ಸಂಪೂರ್ಣ ಫೆಲೆಸ್ತೀನ್ ಬೇಕೆಂದು ಆಗ್ರಹಿಸುವ ಬದಲು, ಇಸ್ರೇಲ್ ನ ಅಸ್ತಿತ್ವವನ್ನು ಅಂಗೀಕರಿಸಿ, ಅದರ ಗಡಿಗಳ ಪೈಕಿ ಯಾವುದು ಅಕ್ರಮ ಮತ್ತು ಯಾವುದು ಸಕ್ರಮ ಎಂದು ಚರ್ಚಿಸುವ ಈಜಿಪ್ಟ್ನ ಧೋರಣೆಗೆ ನಿಕಟವಾಗತೊಡಗಿದರು.
ಈ ಬದಲಾವಣೆ ವ್ಯರ್ಥವಾಗಲಿಲ್ಲ. ಪಿಎಲ್ಒ ಬಳಿ ಸರಕಾರವಿಲ್ಲದಿದ್ದರೂ ಹೆಚ್ಚಿನ ಅರಬ್ ದೇಶಗಳಲ್ಲಿ, ಅದಕ್ಕೆ ಫೆಲೆಸ್ತೀನ್ ಜನತೆಯ ಪ್ರತಿನಿಧಿ ಎಂಬ ನೆಲೆಯಲ್ಲಿ ರಾಯಭಾರ ಕಚೇರಿಗಳನ್ನು ತೆರೆಯುವ ಅವಕಾಶ ಸಿಕ್ಕಿತು. ಅರಫಾತ್ರಿಗೆ ವಿಶ್ವಸಂಸ್ಥೆಯ ಮಹಾ ಅಧಿವೇಶನದಲ್ಲಿ ಮಾತನಾಡುವ ಗೌರವ ಪ್ರಾಪ್ತವಾಯಿತು. ಅನೇಕ ಯುರೋಪಿಯನ್ ದೇಶಗಳು ಕೂಡಾ ಪಿಎಲ್ಒ ಗೆ ಮಾನ್ಯತೆ ನೀಡಿ ಅದರ ಜೊತೆ ಮಾತುಕತೆ ಆರಂಭಿಸಿದವು. ಆದರೆ ಇಸ್ರೇಲ್ ವಿರುದ್ಧ ಸಶಸ್ತ್ರ ಹೋರಾಟ ನಡೆಸುವ ಪಡೆ ಎಂಬ ನೆಲೆಯಲ್ಲಿ ಪಿಎಲ್ಒ ಪಾತ್ರ ಮುಂದುವರಿಯಿತು.
1976ರಲ್ಲಿ ಅಮೆರಿಕದ ಪ್ರತಿನಿಧಿಯೊಬ್ಬರ ಜೊತೆ ಮಾತನಾಡಿದ ಅರಫಾತ್ ‘‘ಇಸ್ರೇಲ್ ಸರಕಾರ ಪಶ್ಚಿಮ ದಂಡೆ ಮತ್ತು ಗಾಝಾ ಪಟ್ಟಿಯಿಂದ ಕೆಲವು ಮೈಲುಗಳಷ್ಟಾದರೂ ಹಿಂದೆ ಸರಿದು ಆ ಪ್ರದೇಶಗಳನ್ನು ವಿಶ್ವಸಂಸ್ಥೆಯ ಉಸ್ತುವಾರಿಗೆ ಬಿಟ್ಟುಕೊಡಲಿ. ಇಸ್ರೇಲ್ ಅಷ್ಟನ್ನೂ ಮಾಡದಿದ್ದರೆ, ಅದರ ಅಸ್ತಿತ್ವಕ್ಕೆ ಮಾನ್ಯತೆ ಕೊಡುವ ನಮ್ಮ ನಿರ್ಧಾರವನ್ನು ನಾವು ನಮ್ಮ ಜನರ ಮುಂದೆ ಸಮರ್ಥಿಸುವುದು ಹೇಗೆ?’’ ಎಂದು ಕೇಳಿದ್ದರು. ಎಷ್ಟೊಂದು ಹತಾಶೆ ಇದೆ ಈ ಪ್ರಶ್ನೆಯಲ್ಲಿ! 1982ರಲ್ಲಿ ಪಿಎಲ್ಒ ಪಡೆಗಳನ್ನು ಸದೆಬಡಿದ ಇಸ್ರೇಲ್ ಸೇನೆ ಎಷ್ಟು ಬಲಿಷ್ಠವಾಗಿತ್ತು ಎಂದು ಯಾರೋ ಪ್ರಶ್ನಿಸಿದಾಗ ಅರಫಾತ್ ಹೇಳಿದರು: ‘‘ಅಲ್ಲಾಹನಾಣೆ, ಅದು ಸೋಲಿಸಲಿಕ್ಕಾಗದಷ್ಟು ಬಲಿಷ್ಠ ಸೇನೆಯೇನೂ ಆಗಿರಲಿಲ್ಲ. ನನ್ನ ಜನರೆಲ್ಲಾ ನನ್ನ ಜೊತೆ ನಿಂತಿರುತ್ತಿದ್ದರೆ, ಅದು ಎಷ್ಟು ಕ್ಷೀಣ ಸೇನೆಯಾಗಿತ್ತು ಎಂಬುದನ್ನು ನಾನು ಜಗತ್ತಿಗೆ ತೋರಿಸಿ ಕೊಡುತ್ತಿದ್ದೆ.’’
1988 ನವೆಂಬರ್ 15ರಂದು ಪಿಎಲ್ಒ, ಸ್ವತಂತ್ರ ಫೆಲೆಸ್ತೀನ್ ದೇಶದ ಸ್ಥಾಪನೆಯನ್ನು ಘೋಷಿಸಿತು. ಮುಂದಿನ ತಿಂಗಳ ತಮ್ಮ ಭಾಷಣಗಳಲ್ಲಿ ಅರಫಾತ್ ‘‘ಸರಕಾರಿ ಭಯೋತ್ಪಾದನೆಯ ಸಹಿತ, ಭಯೋತ್ಪಾದನೆಯ ಎಲ್ಲ ಪ್ರಕಾರಗಳನ್ನು ನಾನು ಖಂಡಿಸುತ್ತೇನೆ’’ ಎಂದು ಹೇಳಿದರು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ 242 ನೇ ಗೊತ್ತುವಳಿಯನ್ನು ತಾನು ಒಪ್ಪುವುದಾಗಿ ಘೋಷಿಸಿದರು ಮತ್ತು ಶಾಂತಿ ಹಾಗೂ ಭದ್ರತೆಯೊಂದಿಗೆ ಅಸ್ತಿತ್ವದಲ್ಲಿರಲು ಇಸ್ರೇಲ್ಗೆ ಇರುವ ಹಕ್ಕನ್ನು ತಾನು ಅಂಗೀಕರಿಸುವುದಾಗಿ ಸ್ಪಷ್ಟಪಡಿಸಿದರು.
ಈ ರೀತಿ ಅರಫಾತ್ ನ್ಯಾಯದ ಬದಲು ಶಾಂತಿಯ ಕಡೆಗೆ ಹೆಜ್ಜೆ ಇಡಲಾರಂಭಿಸಿದರು. ಇದರೊಂದಿಗೆ ಅವರ ಹಾಗೂ ಪಿಎಲ್ಒ ಕುರಿತು ಅಮೆರಿಕದ ನಿಲುವು ಬದಲಾಗತೊಡಗಿತು. ಪಿಎಲ್ಒ ಅನ್ನು ಕೇವಲ ಒಂದು ಭಯೋತ್ಪಾದಕ ಸಂಘಟನೆ ಎಂದು ಮಾತ್ರ ಗುರುತಿಸುತ್ತಿದ್ದ ಅಮೆರಿಕ, ಅದರ ಜೊತೆ ಮಾತುಕತೆಗೆ ಒಲವು ತೋರಿತು. ಒಮ್ಮೆ ಭಯೋತ್ಪಾದಕರಾಗಿದ್ದವರು ಯಾವಾಗಲೂ ಭಯೋತ್ಪಾದಕರಾಗಿರಬೇಕಾಗಿಲ್ಲ ಎಂಬ ಫಿಲಾಸಫಿ ಚರ್ಚೆಗೆ ಬಂತು. ಕೆಲವೇ ತಿಂಗಳಲ್ಲಿ, ಅಂದರೆ 1989 ಎಪ್ರಿಲ್ನಲ್ಲಿ ಫೆಲೆಸ್ತೀನ್ ರಾಷ್ಟ್ರೀಯ ಸಮಿತಿ ಎಂಬ ಪಿಎಲ್ಒ ಆಡಳಿತ ಮಂಡಳಿಯು ಅರಫಾತ್ರನ್ನು ಘೋಷಿತ ಫೆಲೆಸ್ತೀನ್ ಸರಕಾರದ ಅಧ್ಯಕ್ಷರಾಗಿ ಆರಿಸಿತು.
1990-91ರಲ್ಲಿ ಸದ್ದಾಮ್ ಹುಸೈನ್ರನ್ನು ಬೆಂಬಲಿಸುವ ತನ್ನ ನಿಲುವಿನಿಂದಾಗಿ ಅರಫಾತ್ ಹಲವು ಮಿತ್ರರನ್ನು ಕಳೆದುಕೊಳ್ಳಬೇಕಾಯಿತು. ಈ ಹಿಂದೆ ಅವರನ್ನು ಬೆಂಬಲಿಸಿದ್ದ ಅನೇಕ ಕೊಲ್ಲಿ ದೇಶಗಳು ಅವರ ವಿರುದ್ಧ ತಿರುಗಿ ಬಿದ್ದವು. ಕೆಲವು ದೇಶಗಳು ಪಿಎಲ್ಒಗೆಂದು ನಿಗದಿ ಪಡಿಸಿದ್ದ ಅನುದಾನಗಳನ್ನು ಫೆಲೆಸ್ತೀನ್ನಲ್ಲಿರುವ ಅದರ ಪ್ರತಿಸ್ಪರ್ಧಿ ಹಮಾಸ್ಗೆ ಪಾವತಿಸಿದವು. ಸ್ವತಃ ಅರಫಾತ್ ರ ಪಿಎಲ್ಒ ಮತ್ತು ಫತಹ್ ಸಂಘಟನೆಗಳ ಒಳಗೆ ಭಾರೀ ಅಸಮಾಧಾನ ಭುಗಿಲೆದ್ದಿತು. ಪಕ್ಷದೊಳಗೆ ಬಂಡುಕೋರ ಚಟುವಟಿಕೆಗಳು ಮಾತ್ರವಲ್ಲ, ಪದಾಧಿಕಾರಿಗಳ ಹತ್ಯೆಯ ಪ್ರಕರಣಗಳೂ ನಡೆದವು.