ಪಿಎಲ್ಒ: ಅರಫಾತ್ ಮುಂದೆ ಎರಡು ಕಠಿಣ ಸವಾಲು
ಫೆಲೆಸ್ತೀನ್ನಲ್ಲಿ ನಡೆಯುತ್ತಿರುವುದೇನು?
► ಭಾಗ-17
ಇನ್ತಿಫಾದಃವನ್ನು ಹತ್ತಿಕ್ಕಲು ಅರಫಾತ್ ಬೇಕಾದರೇ?
ಮೇಲ್ನೋಟಕ್ಕೆ ಇದು, ಅರಫಾತ್ ರನ್ನು ಮೂಲೆಗುಂಪಾಗಿಸಿ ಬಿಡುವುದಕ್ಕೆ ಇಸ್ರೇಲ್ ಮತ್ತು ಅಮೆರಿಕದವರ ಪಾಲಿಗೆ ಒಂದು ಅತ್ಯಮೂಲ್ಯ ಅವಕಾಶವಾಗಿತ್ತು. ಆಗ ಅವರು ಹಾಗೆ ಮಾಡಿದ್ದರೆ ಅದಕ್ಕೆ ಎಲ್ಲ ಅರಬ್ ದೇಶಗಳ ಸಹಕಾರವೂ ಸಿಕ್ಕಿ ಬಿಡುತ್ತಿತ್ತು. ಆದರೆ ಅತ್ತ ಫೆಲೆಸ್ತೀನ್ನಲ್ಲಿ ಒಂದು ದೊಡ್ಡ ಹೊಸ ಶಕ್ತಿ ತಲೆ ಎತ್ತಲು ಆರಂಭಿಸಿತ್ತು. 1987 ರ ಕೊನೆಯಲ್ಲಿ ‘ಪ್ರಥಮ ಇನ್ತಿಫಾದಃ’ದ ಹೆಸರಲ್ಲಿ ಕಾಣಿಸಿಕೊಂಡ ಆ ಶಕ್ತಿಯ ಅನನ್ಯ ವಿಶೇಷತೆಗಳನ್ನು ಮತ್ತು ಅದರ ಒಳಗೆ ಅವಿತಿದ್ದ ಅಪಾರ ಸಾಧ್ಯತೆಗಳ ಜಗತ್ತೊಂದನ್ನು ಇಸ್ರೇಲ್ ಮತ್ತು ಅಮೆರಿಕಗಳು ಸಕಾಲದಲ್ಲಿ ಗುರುತಿಸಿಕೊಂಡಿದ್ದವು.
ಆ ಶಕ್ತಿಯನ್ನು ಹತ್ತಿಕ್ಕಲು ಅವರಿಗೆ ಅರಫಾತ್ ನೆರವು ಅನಿವಾರ್ಯವಾಗಿತ್ತು. ಆದ್ದರಿಂದಲೇ ಅವರು ಅರಫಾತ್ರನ್ನು ಮತ್ತೆ ತಮ್ಮ ಆಪ್ತರಾಗಿಸಿಕೊಂಡರು. 1988ರಲ್ಲಿ ಇನ್ತಿಫಾದಃ ಕುರಿತು ಅಮೆರಿಕದ ಒಂದು ನಿಯೋಗದವರು ಅನೌಪಚಾರಿಕವಾಗಿ ಪ್ರಸ್ತಾಪಿಸಿದಾಗ ಅರಫಾತ್ ಹೇಳಿದ್ದರು: ‘‘ಅದನ್ನು ತಡೆಯಲು ನನಗಾಗಲಿ ಬೇರೆ ಯಾರಿಗೇ ಆಗಲಿ ಸಾಧ್ಯವಿಲ್ಲ. ನಮ್ಮ ರಾಷ್ಟ್ರೀಯ ಗುರಿಯ ಸಾಧನೆಯ ನಿಟ್ಟಿನಲ್ಲಿ ನಿಜವಾದ ಮುನ್ನಡೆಯ ಕ್ರಮಗಳನ್ನು ಕೈಗೊಂಡಾಗ ಮಾತ್ರ ಅದು ಸ್ಥಗಿತಗೊಂಡೀತು’’.
ಅಮೆರಿಕ, 1993ರಲ್ಲಿ ಓಸ್ಲೋ ಒಪ್ಪಂದಕ್ಕಾಗಿ ಅರಫಾತ್ ಮತ್ತವರ ಬಳಗದ ಜೊತೆ ಗುಪ್ತ ಸಮಾಲೋಚನೆಗಳ ಹೊಸ ಸರಣಿಯೊಂದನ್ನು ಆರಂಭಿಸಿತು. ಹಲವು ಸುತ್ತುಗಳ ಈ ಪ್ರಕ್ರಿಯೆಯಲ್ಲಿ ನಾರ್ವೇ ಸರಕಾರ ಮತ್ತು ಅಮೆರಿಕದ ಕೆಲವು ಪರಮಾಪ್ತ ಅರಬ್ ದೇಶಗಳು ಸಕ್ರಿಯ ಪಾತ್ರ ವಹಿಸಿದವು. ಇದನ್ನು ಕೂಡಾ, ಶಾಂತಿ ಪ್ರಕ್ರಿಯೆ, ಫೆಲೆಸ್ತೀನ್ ಜನತೆಗೆ ಸ್ವನಿರ್ಧಾರದ ಅಧಿಕಾರ ನೀಡುವ ಪ್ರಕ್ರಿಯೆ, ಭದ್ರತಾ ಮಂಡಳಿಯ 242 ಮತ್ತು 338ನೇ ಗೊತ್ತುವಳಿಗಳ ಅನುಷ್ಠಾನ ಪ್ರಕ್ರಿಯೆ ಎಂದೆಲ್ಲಾ ಕರೆಯಲಾಯಿತು. ಜೊತೆಗೆ, ‘‘ಈ ಪ್ರಾಂತದಲ್ಲಿ ಶಾಂತಿ ಸ್ಥಾಪನೆ ಕೇವಲ ಒಬ್ಬ ವ್ಯಕ್ತಿಗೆ ಮಾತ್ರವೇ ಸಾಧ್ಯ. ಅವರೇ ಯಾಸಿರ್ ಅರಫಾತ್’’ ಎಂಬ ಅಪಾರ ಪ್ರಶಂಸೆಯ ಮಾತುಗಳೂ ಕೇಳಿ ಬರಲಾರಂಭಿಸಿದವು.
ಹೀಗೆ ರಂಗ ಸಜ್ಜುಗೊಂಡ ಬೆನ್ನಿಗೆ, 1993 ಸೆಪ್ಟಂಬರ್13ರಂದು ವಾಶಿಂಗ್ಟನ್ನಲ್ಲಿ ಇಸ್ರೇಲ್ ಮತ್ತು ಪಿಎಲ್ಒ ಮಧ್ಯೆ ಪ್ರಥಮ ಅಧಿಕೃತ ಒಪ್ಪಂದವೊಂದು ನಡೆಯಿತು. ಪ್ರತಿಯೊಂದು ಒಪ್ಪಂದವೂ ಕೇವಲ ಇಸ್ರೇಲ್ ಅನ್ನು ಬಲಪಡಿಸಿ ಫೆಲೆಸ್ತೀನ್ ಜನತೆಯ ಅಸಹಾಯಕತೆಯನ್ನು ಹೆಚ್ಚಿಸುವುದು ಬಿಟ್ಟರೆ ಬೇರೇನನ್ನೂ ಸಾಧಿಸುವುದಿಲ್ಲ ಎಂಬ ನಂಬಿಕೆ ಅರಬ್ ನಾಡುಗಳಲ್ಲಿ ಆಳವಾಗಿ ಬೇರೂರಿತ್ತು. ಇದನ್ನು ಮುರಿಯಲು, ‘‘ಪಿಎಲ್ಒ ಜೊತೆ ಯಾವುದೇ ಮಾತುಕತೆಗೆ ಇಸ್ರೇಲ್ನ ರಾಜಕೀಯ ಪಕ್ಷಗಳು ತಯಾರಿಲ್ಲ. ಆದರೂ ಅಧ್ಯಕ್ಷ ಬಿಲ್ ಕ್ಲಿಂಟನ್ರ ಆಗ್ರಹದ ಮೇರೆಗೆ ಇಸ್ರೇಲ್ನ ಇಟ್ಸ್ ಹಾಕ್ ರಾಬಿನ್ ಅವರು ಅರಫಾತ್ ಜೊತೆ ಕೈ ಮಿಲಾಯಿಸಲು ಒಲ್ಲದ ಮನಸ್ಸಿನಿಂದ ಸಮ್ಮತಿಸಿದರು’’ ಎಂದು ಪದೇ ಪದೇ ಜಗತ್ತಿಗೆ ಹೇಳಲಾಯಿತು. ಈ ಮೂಲಕ, ಇಸ್ರೇಲ್ ಸರಕಾರವು ಶಾಂತಿಗಾಗಿ, ಫೆಲೆಸ್ತೀನ್ನ ಸ್ವಾಧಿಕಾರದ ಹಕ್ಕನ್ನು ಸಮ್ಮತಿಸುವ ಔದಾರ್ಯ ತೋರಿದೆ ಎಂದು ಜಗತ್ತನ್ನು ನಂಬಿಸಲಾಯಿತು.
1978ರಲ್ಲಿ, ಪ್ರಥಮ ಕ್ಯಾಂಪ್ ಡೇವಿಡ್ ಒಪ್ಪಂದದ ಬೆನ್ನಿಗೆ, ಈಜಿಪ್ಟ್ ಅಧ್ಯಕ್ಷ ಅನ್ವರ್ ಸಾದಾತ್ ಮತ್ತು ಇಸ್ರೇಲ್ ನಾಯಕ ಬೆಗಿನ್ರಿಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಿದಂತೆ, 1993ರ ಓಸ್ಲೋ ಒಪ್ಪಂದದ ಬೆನ್ನಿಗೆ, 1994ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಅರಫಾತ್ರಿಗೆ ಮತ್ತು ಇಸ್ರೇಲ್ ನಾಯಕದ್ವಯರಾದ ಶಿಮೊನ್ ಪೆರೆಜ್ ಮತ್ತು ಇಟ್ಸ್ ಹಾಕ್ ಸಮೀರ್ರಿಗೆ ನೀಡಲಾಯಿತು.
► ರಾಜಿಯಿಂದ ಸಿಕ್ಕಿದ್ದೇನು?
ಇಸ್ರೇಲ್ ಮಾಡುವ ಯಾವುದೇ ಒಪ್ಪಂದದಿಂದ ಇಸ್ರೇಲ್ ಹೊರತು ಬೇರೆ ಯಾರಿಗೂ ಚಿಕ್ಕಾಸಿನ ಲಾಭವಾದ ಇತಿಹಾಸ ಇಲ್ಲ ಎಂದು 1993ರ ಓಸ್ಲೋ ಒಪ್ಪಂದಕ್ಕೆ ಮುನ್ನವೇ ಅನೇಕ ಮಂದಿ ಅರಫಾತ್ ಮತ್ತು ಅವರ ಬೆಂಬಲಿಗರನ್ನು ಸ್ಪಷ್ಟವಾಗಿ ಎಚ್ಚರಿಸಿದ್ದರು. ಆದರೆ ಅರಫಾತ್ ಕಿವಿಕೊಟ್ಟಿರಲಿಲ್ಲ. ಅವರಂತೂ ಓಸ್ಲೋ ಒಪ್ಪಂದದಿಂದ ಇಸ್ರೇಲ್ಗೆ ಮನ್ನಣೆ ದೊರೆತರೂ, ಫೆಲೆಸ್ತೀನ್ ಜನತೆಗೆ ಅದರಿಂದ ದೂರಗಾಮಿ ಲಾಭಗಳಾಗಲಿವೆ, ಭವಿಷ್ಯದಲ್ಲಿ ಒಂದು ಸ್ವತಂತ್ರ ಮತ್ತು ಸುಭದ್ರ ಫೆಲೆಸ್ತೀನ್ ಸರಕಾರದ ನಿರ್ಮಾಣಕ್ಕೆ ಹಾದಿ ಸುಗಮವಾಗಲಿದೆ - ಎಂದೆಲ್ಲಾ ನಂಬಿದ್ದರು. ಇದೆಲ್ಲ ಭ್ರಮೆ ಮಾತ್ರವಾಗಿತ್ತು ಎಂದು ಸಾಬೀತಾಗಲು ಹೆಚ್ಚು ದಿನ ಬೇಕಾಗಲಿಲ್ಲ.
ಅಂದ ಹಾಗೆ, ಒಪ್ಪಂದಕ್ಕೆ ಸಹಿ ಹಾಕುವ ಕಾರ್ಯ ಅಮೆರಿಕದ ಶ್ವೇತಭವನದಲ್ಲಿ ನಡೆದಿರುವಾಗ ಅದಕ್ಕೆ ‘ಓಸ್ಲೋ ಒಪ್ಪಂದ’ ಎಂಬ ನಾರ್ವೇ ದೇಶದ ರಾಜಧಾನಿಯ ಹೆಸರು ಬರಲು ಕಾರಣವೇನು? ಎಂಬ ಕುತೂಹಲ ಕೆಲವರಿಗಿದೆ.
ನಿಜವಾಗಿ, ಈ ಒಪ್ಪಂದದ ಆರಂಭದಿಂದ ಕೊನೆತನಕವೂ ಇದಕ್ಕೆ ಸಂಬಂಧಿಸಿದ ಎಲ್ಲ ಪೂರ್ವಭಾವಿ ಸಿದ್ಧತೆ, ಮಾತುಕತೆ ಇತ್ಯಾದಿಗಳನ್ನು ನಡೆಸಿದ್ದು ನಾರ್ವೇ ದೇಶದ ‘ಫ್ರೆಂಡ್ಸ್ ಆಫ್ ಇಸ್ರೇಲ್’ ಎಂಬ ಒಂದು ಶಕ್ತಿಶಾಲಿ ಝಿಯೋನಿಸ್ಟ್ ಗುಂಪು. ನಾರ್ವೇಯ ಕನಿಷ್ಠ 60ಶೇ. ಸಂಸದ್ ಸದಸ್ಯರು ಝಿಯೋನಿಸ್ಟ್ ಪಂಥದ ಬೆಂಬಲಿಗರಾಗಿದ್ದು ಎಲ್ಲ ವಿಷಯಗಳಲ್ಲಿ ಅಮೆರಿಕಕ್ಕಿಂತ ಹೆಚ್ಚಿನ ಉತ್ಸಾಹದೊಂದಿಗೆ ಇಸ್ರೇಲನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಹಾಗೆಯೇ, ಎಲ್ಲ ಸಂದರ್ಭಗಳಲ್ಲಿ ಬಹಿರಂಗವಾಗಿ ಫೆಲೆಸ್ತೀನ್ಗೆ ಪ್ರತಿಕೂಲವಾದ ನಿಲುವು ತಾಳುತ್ತಾ ಬಂದಿದ್ದಾರೆ. ಅಂಥವರು ಅಷ್ಟೊಂದು ಮುತುವರ್ಜಿಯಿಂದ ಪ್ರಾಯೋಜಿಸಿದ ಒಪ್ಪಂದದಿಂದ ಫೆಲೆಸ್ತೀನ್ಗೆ ಲಾಭವಾಗದು ಎಂಬುದು ಅರ್ಥವಾಗದಷ್ಟು ಅರಫಾತ್ ಮುಗ್ಧರಾಗಿದ್ದರೇ? ಅರಫಾತ್ ಪರಿಚಯವಿರುವ ಯಾರೂ ಅದನ್ನೊಪ್ಪಲು ಸಿದ್ಧರಿಲ್ಲ.
ಮುಂದೆ 1995ರಲ್ಲಿ ಓಸ್ಲೋ ಒಪ್ಪಂದದ ಉಳಿದ ಭಾಗಗಳಿಗೆ ಸಹಿ ಮಾಡುವ ಪ್ರಕ್ರಿಯೆ ಕೂಡಾ ಪೂರ್ತಿಯಾಯಿತು. ಆದರೆ, ಒಪ್ಪಂದದಲ್ಲಿ ಒಪ್ಪಲಾದ ಕ್ರಮಗಳನ್ನು ಅನುಷ್ಠಾನಿಸುವ ಪ್ರಶ್ನೆ ಬಂದಾಗ ಇಸ್ರೇಲ್ ತನ್ನ ಬಣ್ಣ ಪ್ರದರ್ಶಿಸಿತು. ಇಸ್ರೇಲ್ಗೆ, ತನ್ನ ಕಡೆಯಿಂದ ಒಪ್ಪಂದ ಮುರಿಯುವುದಕ್ಕೆ ಧಾರಾಳ ನೆಪಗಳು ಸಿಕ್ಕವು. 1995 ನವೆಂಬರ್ನಲ್ಲಿ ಉಗ್ರವಾದಿ ಯಹೂದಿ ವಿದ್ಯಾರ್ಥಿಯೊಬ್ಬ ಪ್ರಧಾನಿ ರಾಬಿನ್ರನ್ನು ಗುಂಡೆಸೆದು ಕೊಂದು ಬಿಟ್ಟ. ಈ ದುರಂತ ಮತ್ತು ಮುಂದಿನ ಕೆಲವು ರಾಜಕೀಯ ಬೆಳವಣಿಗೆಗಳ ಹೆಸರಲ್ಲಿ ಇಸ್ರೇಲ್, ಒಪ್ಪಂದದ ವಿವಿಧ ಅಂಶಗಳ ಅನುಷ್ಠಾನವನ್ನು ಅನಿರ್ದಿಷ್ಟಾವಧಿ ವಿಳಂಬಿಸುತ್ತಾ ಹೋಯಿತು. ಒಪ್ಪಂದದ ವೇಳೆ ಎಷ್ಟೋ ನಿರ್ಣಾಯಕ ವಿಷಯಗಳ ಕುರಿತು ಸಂವಾದವನ್ನು ಮುಂದೂಡಲಾಗಿತ್ತು. ಆದರೆ ಒಪ್ಪಂದದ ಬಳಿಕ ಇಸ್ರೇಲ್ ಆ ವಿಷಯಗಳ ಕುರಿತು ಚರ್ಚಿಸಲು ಯಾವ ಆಸಕ್ತಿಯನ್ನೂ ತೋರಲಿಲ್ಲ. ಮಾತ್ರವಲ್ಲ, ಒಪ್ಪಂದದಲ್ಲಿ ಸ್ಪಷ್ಟವಾಗಿ ಒಪ್ಪಲಾದ ಕ್ರಮಗಳನ್ನೂ ಅನುಷ್ಠಾನಿಸದೆ ಒಪ್ಪಂದವನ್ನು ಸಂಪೂರ್ಣ ಉಲ್ಲಂಘಿಸಿತು.
1998ರಲ್ಲಿ ಇಸ್ರೇಲ್ ನಾಗರಿಕರು ತಮ್ಮ ದೇಶದ ಸ್ಥಾಪನೆಯ 50ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದಾಗ, ತಾನು ಮೋಸ ಹೋಗಿದ್ದೇನೆಂಬ ಅರಿವಿನಿಂದ ತೀವ್ರ ನಿರಾಶೆಯ ಸ್ಥಿತಿಯಲ್ಲಿದ್ದ ಅರಫಾತ್ ಹೇಳಿದರು: ‘‘ಓಸ್ಲೋ ಒಪ್ಪಂದದ ಪ್ರಕಾರ 5 ವರ್ಷಗಳ ಹಂಗಾಮಿ ಅವಧಿಯ ಬಳಿಕ ಎಲ್ಲವೂ ಕಾರ್ಯಗತವಾಗಬೇಕು. 1999 ಮೇ 4 ರಂದು ನಾವು ನಮ್ಮದೇ ಆದ ಒಂದು ಸ್ವತಂತ್ರ ಫೆಲೆಸ್ತೀನ್ ದೇಶದ ಸ್ಥಾಪನೆಯನ್ನು ಘೋಷಿಸಬಹುದು. ನೆತನ್ಯಾಹುಗೆ ಅದು ಇಷ್ಟವಿಲ್ಲ ಎಂದಾದರೆ ಆತ ಕಪ್ಪು ಸಮುದ್ರದ ನೀರು ಕುಡಿಯಲಿ.’’
ಆದರೆ ಒಂದು ಸ್ವತಂತ್ರ ದೇಶದ ಸ್ಥಾಪನೆಯನ್ನು ಘೋಷಿಸುವುದಕ್ಕೆ ಬೇಕಾದ ಯಾವುದೇ ತಯಾರಿ ಅಂದೂ ನಡೆದಿರಲಿಲ್ಲ. ಇಂದೂ ನಡೆದಿಲ್ಲ. ಸ್ವಾತಂತ್ರ ಬಯಸುವವರನ್ನು ಅಮಾನುಷವಾಗಿ ತುಳಿಯುವ ಪ್ರಕ್ರಿಯೆ ಮಾತ್ರ ಅಂದೂ ಜಾರಿಯಲ್ಲಿತ್ತು, ಇಂದಿಗೂ ಜಾರಿಯಲ್ಲಿದೆ. ಒಪ್ಪಂದದ ಅನುಷ್ಠಾನದ ಕುರಿತು ಪ್ರಶ್ನೆಗಳನ್ನು ಕೇಳಲು ಆರಂಭಿಸಿದ್ದಕ್ಕಾಗಿ, ‘‘ಫೆಲೆಸ್ತೀನ್ ರಾಷ್ಟ್ರಪತಿ’’ ಅರಫಾತ್ರನ್ನು ಇಸ್ರೇಲಿ ಸೇನೆಯ ಕಣ್ಗಾವಲಿನಲ್ಲಿ ಒಂದು ಬಂಗಲೆಯಲ್ಲಿ ಗೃಹ ಬಂಧನದಲ್ಲಿಡಲಾಯಿತು. ಫೆಲೆಸ್ತೀನ್ಗೆ ವಿಮೋಚನೆ ಕೊಡಿಸಲು ಹೊರಟಿದ್ದ ಅರಫಾತ್ ಸ್ವತಃ ಕೈದಿಯ ಬದುಕು ಬದುಕಬೇಕಾಯಿತು. ಇಸ್ರೇಲ್ ಪಡೆಗಳು ಅವರಿದ್ದ ಆವರಣದೊಳಗಿನ ಇತರ ಅನೇಕ ಮನೆಗಳ ಮೇಲೆ ಭೀಕರ ದಾಳಿಗಳನ್ನು ನಡೆಸಿದ್ದವು. ಕೆಲವು ಮನೆಗಳನ್ನು ಧ್ವಂಸಗೊಳಿಸಿದ್ದವು. ಅವರನ್ನು ಭೇಟಿಯಾಗಲು ಮಾತ್ರವಲ್ಲ ಅವರ ಒಂದು ಫೋಟೊ ಕ್ಲಿಕ್ಕಿಸಲು ಕೂಡಾ ಜಾಗತಿಕ ಮಟ್ಟದ ಮಾಧ್ಯಮ ಪ್ರತಿನಿಧಿಗಳು ಪಾಡು ಪಡಬೇಕಾಗಿತ್ತು.
► ಅರಫಾತ್ ಖಾಸಗಿ ಬದುಕಿನ ನಿಗೂಢ
ಅರಫಾತ್ ತಮ್ಮ ಹೋರಾಟದ ಬದುಕಿನುದ್ದಕ್ಕೂ ಆಹಾರ, ವಿರಾಮಗಳನ್ನು ಲೆಕ್ಕಿಸದೆ ಅವಿಶ್ರಾಂತ ದುಡಿದವರು. ಮದ್ಯ, ತಂಬಾಕುಗಳಿಂದ ದೂರ ಉಳಿದವರು. ಅರಫಾತ್ರಿಗೆ ನಿದ್ದೆ ಮಾಡಲು ಸಾಕಷ್ಟು ಬಿಡುವು ಸಿಗುತ್ತಿರಲಿಲ್ಲ. ಅದೇವೇಳೆ ಅವರು ವಿವಾಹವಾಗುತ್ತಿಲ್ಲವೇಕೆ? ಎಂಬ ಪ್ರಶ್ನೆ ಅವರ ಲಕ್ಷಾಂತರ ಅಭಿಮಾನಿಗಳ ನಿದ್ದೆಗೆಡಿಸಿತ್ತು. ವಯಸ್ಸು 60 ಮೀರುವ ತನಕವೂ ಅವರು ವಿವಾಹವಾಗದೆ ಇದ್ದುದಕ್ಕೆ ಸಮಯಾಭಾವ ಕಾರಣ ಎಂದು ಅವರ ಬೆಂಬಲಿಗರು ಸಮಾಧಾನ ಪಟ್ಟುಕೊಂಡಿದ್ದರು. ಆದರೆ ಅವರ ವಿಮರ್ಶಕರು, ಅವರ ಒಂಟಿತನಕ್ಕೆ ಅವರ ‘ಗೇ’ ಒಲವು ಕಾರಣ ಎಂಬ ವದಂತಿಯನ್ನು ಎಲ್ಲೆಂದರಲ್ಲಿ ವ್ಯಾಪಿಸಿ ಬಿಟ್ಟರು. ಇಂತಹ ‘ಗೇ’ ಗಾಸಿಪ್ ಪ್ರಸಾರದಲ್ಲಿ ಅವರ ಕೆಲವು ಅತೃಪ್ತ ನಿಕಟವರ್ತಿಗಳ ದೊಡ್ಡ ಪಾತ್ರವಿತ್ತು.
ಕೊನೆಗೂ 1990ರಲ್ಲಿ ಅರಫಾತ್ ವಿವಾಹವಾದರು. ಅವರ ಬದುಕಿನ ಬೇರೆಲ್ಲ ಮುಖಗಳಂತೆ ಅವರ ವಿವಾಹ ಕೂಡ ಅಸಾಮಾನ್ಯವಾಗಿತ್ತು. 61ರ ಹರೆಯದ ಯಾಸಿರ್ ಅರಫಾತ್, ಟ್ಯುನೀಷಿಯಾದಲ್ಲಿ ತೀರಾ ಖಾಸಗಿಯಾಗಿ 27ರ ಹರೆಯದ ಸುಹಾ ತವೀಲ್ರನ್ನು ವಿವಾಹವಾದರು. ಮಗಳು ಝಹ್ವಾ ಜನಿಸಿದಾಗ ಅರಫಾತ್ಗೆ 66 ವರ್ಷವಾಗಿತ್ತು. ಮುಂದೆ ಒಂದು ಸಂದರ್ಶನದಲ್ಲಿ ಅವರ ಪತ್ನಿ ಹೇಳಿಕೊಂಡಂತೆ, ಅರಫಾತ್ ಖಂಡಿತ ಪ್ರೀತಿಗೆ ಅರ್ಹ ವ್ಯಕ್ತಿಯಾಗಿದ್ದರೇ ಹೊರತು ವಿವಾಹಕ್ಕಲ್ಲ. ಏಕೆಂದರೆ ಅವರನ್ನು ವಿವಾಹವಾಗುವುದೆಂದರೆ ಒಂದು ದೊಡ್ಡ ಆಂದೋಲನ ಅಥವಾ ಸರಕಾರವನ್ನು ವಿವಾಹವಾದಂತಿತ್ತು. ವಿಶೇಷವಾಗಿ ಅವರು ವಿವಾಹಿತರಾದ ದಿನಗಳು ಅವರ ಬದುಕಿನ ಅತ್ಯಂತ ಒತ್ತಡದ, ಕಠಿಣ ದಿನಗಳಾಗಿದ್ದವು.
ಅರಫಾತ್ರನ್ನು ವಿವಾಹವಾಗುವ ಮುನ್ನ ಸುಹಾ ತವೀಲ್ ಅಧಿಕೃತವಾಗಿ ಇಸ್ಲಾಮ್ ಧರ್ಮ ಸ್ವೀಕರಿಸಿದ್ದರು. ಆದರೆ ಹಿಂದಿನಂತೆ, ವಿವಾಹದ ಬಳಿಕವೂ ಆಕೆ ಮುಕ್ತವಾಗಿಯೇ, ಚರ್ಚ್ಗೆ ಹೋಗುತ್ತಾ, ಕ್ರೈಸ್ತ ಧರ್ಮಾನುಸಾರ ಬದುಕುತ್ತಿದ್ದರು. ಇದರಲ್ಲಿ ಗುಟ್ಟೇನೂ ಇರಲಿಲ್ಲ. ಇಷ್ಟಾಗಿಯೂ, ಅರಫಾತ್ ಅವರ ಎಲ್ಲ ಚಟುವಟಿಕೆಗಳ ಹಿಂದೆ ‘ಯಹೂದಿ ಷಡ್ಯಂತ್ರ’ವನ್ನು ಕಾಣಲು ಕಾತರರಾಗಿದ್ದವರು ಸುಹಾ ಒಬ್ಬ ಯಹೂದಿ ಗೂಢಚಾರೆ ಎಂಬ ವದಂತಿ ಹರಡುವುದನ್ನು ನಿಲ್ಲಿಸಲಿಲ್ಲ. ಒಂದಂತೂ ಸತ್ಯ - ಅರಫಾತ್ ಕೇವಲ ಯಾರನ್ನಾದರೂ ವಿವಾಹವಾಗುವುದಕ್ಕಾಗಿ ತನ್ನ ಧೋರಣೆಗಳನ್ನು ಬದಲಿಸುವ ಮಟ್ಟದ ವ್ಯಕ್ತಿಯಾಗಿರಲಿಲ್ಲ. ಅವರ ಬದುಕಿನ ಕೊನೆಯ ಹಂತದಲ್ಲೂ ಅವರ ಮುಂದೆ ‘ಉನ್ನತ’ ಅಲ್ಲದಿದ್ದರೂ, ‘ದೊಡ್ಡದು’ ಅನ್ನಲೇಬೇಕಾದ ಹಲವು ಗುರಿಗಳಿದ್ದವು.
► ವಿದಾಯದಲ್ಲೂ ವಿವಾದ
ಹತ್ತಾರು ಯುದ್ಧ, ಬಾಂಬ್ ದಾಳಿಗಳು, ಕೊಲೆಯತ್ನ, ಕೊಲೆ ಸಂಚುಗಳು ಮತ್ತು ಮಾರಕ ವಿಮಾನ ಅಪಘಾತಗಳನ್ನು ಮೀರಿ ಬದುಕಿದ್ದ ದೀರ್ಘಾಯುಷಿ ಅರಫಾತ್ 2004 ನವೆಂಬರ್ 10 ರಂದು ಜೆರುಸಲೇಮ್ ಸಮೀಪದ ತಮ್ಮ ರಮಲ್ಲಾ ನಿವಾಸದಲ್ಲಿ ಅಸ್ವಸ್ಥರಾದರು. ಅವರನ್ನು ವಿಶೇಷ ವಿಮಾನದಲ್ಲಿ ಪ್ಯಾರಿಸ್ನ ಆಸ್ಪತ್ರೆಯೊಂದಕ್ಕೆ ಸಾಗಿಸಲಾಯಿತು. ಮರುದಿನ, 75ರ ಹರೆಯದ ಯಾಸಿರ್ ಅರಫಾತ್ ಕೊನೆಯುಸಿರೆಳೆದರು. ಅದಕ್ಕೆ ಮೊದಲ ದಿನ, ಅವರಿಗೆ ಮಿದುಳಿನಲ್ಲಿ ರಕ್ತಸ್ರಾವವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿದ್ದವು.
ಅರಫಾತ್ ಅವರ ಸಾವಿಗೆ ನೈಜ ಕಾರಣ ಏನೆಂಬ ಬಗ್ಗೆ ಇನ್ನೂ ಸರ್ವಾನುಮತ ಮೂಡಿಲ್ಲ. ಈ ಕುರಿತು ಹಲವು ನಿಗೂಢತೆಗಳು, ತರ್ಕಗಳು ಮತ್ತು ವದಂತಿಗಳು ಇಂದು ಕೂಡಾ ಚರ್ಚೆಯಲ್ಲಿವೆ. ರೇಡಿಯೋ ಆಕ್ಟಿವ್ ಗುಣವಿರುವ ಪೊಲೋನಿಯಮ್ ಎಂಬ ಮಾರಕ ದ್ರವ್ಯವನ್ನು ಅರಫಾತ್ ಮೇಲೆ ಪ್ರಯೋಗಿಸಲಾಗಿತ್ತು ಎಂದು ಈ ಕುರಿತು ತನಿಖೆ ನಡೆಸಿರುವ ಅಲ್ ಜಝೀರಾ ತರದ ಸಂಸ್ಥೆಗಳು ಆರೋಪಿಸಿವೆ. ಅರಫಾತ್ ಸಾವಿನ ಕಾರಣವನ್ನು ಅಂತಿಮವಾಗಿ ಖಚಿತ ಪಡಿಸಿಕೊಳ್ಳುವ ಉದ್ದೇಶದಿಂದ, ಅವರ ಶರೀರವನ್ನು ದಫನ ಮಾಡಿದ 8 ವರ್ಷಗಳ ಬಳಿಕ ಅದೇ ಸ್ಥಳದಿಂದ, ಶವವನ್ನು ಹೊರತೆಗೆದು ಅದರ ಮರು ಪರೀಕ್ಷೆ ನಡೆಸಲಾಯಿತು. ಊಹಾಪೋಹಗಳ ಸರಣಿ ಮಾತ್ರ ಇಂದಿಗೂ ಮುಂದುವರಿದಿದೆ.
ಅರಫಾತ್ರ ವಿಶೇಷತೆ ಏನೆಂದರೆ ಅವರೊಬ್ಬ ಸಾಟಿಯಿಲ್ಲದ ನಾಯಕನೆಂದು ಅವರ ಅಭಿಮಾನಿಗಳು ವಾದಿಸಿದರೆ, ಅವರೊಬ್ಬ ಸಾಟಿಯಿಲ್ಲದ ಶತ್ರು ಎಂದು ಅವರ ಶತ್ರುಗಳು ಒಪ್ಪುತ್ತಾರೆ. ಅವರ ಕೆಲವು ಧೋರಣೆ ಮತ್ತು ನಿರ್ಧಾರಗಳ ಬಗ್ಗೆ ತೀವ್ರ ಆಕ್ಷೇಪ ಉಳ್ಳವರು ಕೂಡ ಅವರನ್ನು ವಿಮರ್ಶಿಸುವಾಗ ಎಚ್ಚರ ವಹಿಸುತ್ತಾರೆ. ಅವರು ತಪ್ಪು ಮಾಡಿದರು, ವಿಫಲರಾದರು ಎಂದೆಲ್ಲಾ ಹೇಳುತ್ತಾರೆ. ಆದರೆ ಅವರು ತಮ್ಮ ಸ್ವಾರ್ಥಕ್ಕಾಗಿ ಫೆಲೆಸ್ತೀನ್ ಹಿತವನ್ನು ಮಾರಿದರು ಎಂದು ಯಾರೂ ಆರೋಪಿಸುವುದಿಲ್ಲ.
ರಾಜಿಗಳನ್ನು ಮಾಡಿ ಅರಫಾತ್ರಿಗೆ ದೊಡ್ಡ ಸಾಮ್ರಾಜ್ಯವೇನೋ ಸಿಗಲಿಲ್ಲ. ನಿಜವಾಗಿ ಎಲ್ಲ ರಾಜಿಗಳ ಅಂತ್ಯದಲ್ಲಿ ಅವರಿಗೆ ಸಿಕ್ಕಿದ್ದು ರಮಲ್ಲಾದಲ್ಲಿ ತೀರಾ ಅರಕ್ಷಿತ ಅವರಣವೊಂದರಲ್ಲಿ, ಪದೇ ಪದೇ ದಾಳಿಗೆ ತುತ್ತಾಗುತ್ತಿದ್ದ ಒಂದು ಬಂಗಲೆ ಮಾತ್ರ. ಕೊಲ್ಲಿಯಲ್ಲಿ ದೊಡ್ಡ ದೊಡ್ಡ ಅರಮನೆಗಳಲ್ಲಿ, ಭವ್ಯ ಸಿಂಹಾಸನಗಳಲ್ಲಿ ಕೂತ ರಾಜ ಮಹಾರಾಜರು ಮಾಡಿಕೊಂಡ ರಾಜಿಗಳಿಗೆ ಹೋಲಿಸಿದರೆ, ತೀರಾ ಅಸಹಾಯಕ ಸನ್ನಿವೇಶಗಳಲ್ಲಿ ತನ್ನ ತಂಡವನ್ನು ರಕ್ಷಿಸಲಿಕ್ಕಾಗಿ ಅರಫಾತ್ ಮಾಡಿಕೊಂಡ ರಾಜಿ ಅಷ್ಟು ದೊಡ್ಡ ದ್ರೋಹವಲ್ಲ ಎನಿಸುತ್ತದೆ. ಅರಫಾತ್ರ ಬದುಕಿನ ಕೊನೆಯ ಕೆಲವು ವರ್ಷಗಳು, ತುಂಬಾ ನೋವಿನ ಅಸ್ಥಿರ ವರ್ಷಗಳಾಗಿದ್ದವು. ಅವರು, ನಿಜಲೋಕದಲ್ಲಿ ಅಸ್ತಿತ್ವದಲ್ಲಿಲ್ಲದ ಒಂದು ಸರಕಾರದ ಮುಖ್ಯಸ್ಥರಾಗಿದ್ದರು. ಕೇವಲ ಉಪಚಾರಕ್ಕೆ ಮಾತ್ರ ಅಸ್ತಿತ್ವದಲ್ಲಿದ್ದ ಆ ಹುದ್ದೆಯೊಂದಿಗೆ ಅವರು ರಮಲ್ಲಾದ ಒಂದು ಬಂಗಲೆಯಲ್ಲಿ ಕೈದಿಯಾಗಿದ್ದರು. ಯಾವುದೇ ಕ್ಷಣ ಇಸ್ರೇಲ್ ಬಾಂಬ್ ದಾಳಿಗೆ ತುತ್ತಾಗಿ ಧ್ವಂಸವಾಗಬಹುದಾದ ಕೈದಿ.
ಇಸ್ರೇಲ್ನ ನಾಯಕರಾದ ಇಟ್ಸ್ ಹಾಕ್ ರಾಬಿನ್ ಮತ್ತು ಏರಿಯಲ್ ಶೆರಾನ್ ರಿಗೆ ಅವರು ಅಪೇಕ್ಷಿಸಿದ್ದ ‘ವಿಶಾಲ ಇಸ್ರೇಲ್’ ಸಿಕ್ಕಿತು. ಜೊತೆಗೆ ನೊಬೆಲ್ ಕೂಡಾ ಸಿಕ್ಕಿತು. ರಾಬಿನ್ ಮತ್ತು ಶೆರಾನ್ರ ಸಾಧನೆಯಿಂದ ‘ಗ್ರೇಟರ್ ಇಸ್ರೇಲ್’ನ ಕನಸು ಕಂಡವರಿಗೆಲ್ಲಾ ಸಾರ್ಥಕ್ಯದ ಅನುಭವವಾಯಿತು. ಅವರ ಮಟ್ಟಿಗೆ ನೊಬೆಲ್ ಪ್ರಶಸ್ತಿ ಅಂತಹ ಅಪರೂಪದ ವಸ್ತುವೇನೂ ಆಗಿರಲಿಲ್ಲ. ಏಕೆಂದರೆ ಜಗತ್ತಿನಲ್ಲಿ 1.5 ಕೋಟಿಗಿಂತ ಕಡಿಮೆ ಜನಸಂಖ್ಯೆ ಇರುವ ಯಹೂದಿ ಸಮುದಾಯದ ಸದಸ್ಯರಿಗೆ ಈಗಾಗಲೇ 193 ನೊಬೆಲ್ ಪ್ರಶಸ್ತಿಗಳು ಸಿಕ್ಕಿವೆ.
ಒಂದಂತೂ ನಿಜ. ಫೆಲೆಸ್ತೀನ್ ನಾಯಕ ಯಾಸಿರ್ ಅರಫಾತ್ರಿಗೆ ಅವರು ಬಯಸಿದ್ದ ಫೆಲೆಸ್ತೀನ್ ಸಿಗಲಿಲ್ಲ. ಶಾಂತಿಯೂ ಸಿಗಲಿಲ್ಲ. ನೊಬೆಲ್ ಶಾಂತಿ ಪ್ರಶಸ್ತಿ ಮಾತ್ರ ಸಿಕ್ಕಿತು ಮತ್ತು ಅದು ಮುಸ್ಲಿಮರು ಹಾಗೂ ಅರಬಿಗಳ ಮಟ್ಟಿಗೆ ಅಪರೂಪದ ಪ್ರಶಸ್ತಿಯಾಗಿತ್ತು. 191 ಕೋಟಿ ಜನಸಂಖ್ಯೆ ಇರುವ ಮುಸ್ಲಿಮ್ ಸಮಾಜದ ಸಾಧಕರಿಗೆ ಈವರೆಗೆ ಸಿಕ್ಕಿರುವುದು ಕೇವಲ 12 ಪ್ರಶಸ್ತಿಗಳು.
(ಮುಂದುವರಿಯುವುದು)