varthabharthi


ಪ್ರಚಲಿತ

ಯಾರದು ದೇಶ? ಯಾವುದು ದ್ರೋಹ?

ವಾರ್ತಾ ಭಾರತಿ : 7 Jun, 2021
ಸನತ್ ಕುಮಾರ್ ಬೆಳಗಲಿ

ದೇಶ ದ್ರೋಹಿಗಳೆಂದರೆ ಯಾರು? ಗಾಂಧೀಜಿಯನ್ನು ಕೊಂದವರು ದೇಶದ್ರೋಹಿಗಳು. ದೇಶದ 130 ಕೋಟಿ ಜನರಿಗೆ ಸೇರಿದ ಸಂಪತ್ತನ್ನು ಅಂಬಾನಿ, ಅದಾನಿಯಂತಹ ಕಾರ್ಪೊರೇಟ್‌ನವರ ಮಡಿಲಿಗೆ ಹಾಕುವವರು ದೇಶದ್ರೋಹಿಗಳು. ದಲಿತರನ್ನು ಮಲದ ಗುಂಡಿಗೆ ಇಳಿಸಿ ಉಸಿರು ಗಟ್ಟಿಸಿ ಸಾಯಿಸುವವರು ದೇಶದ್ರೋಹಿಗಳು. ಆಮ್ಲಜನಕ ನೀಡದೇ ಕೋವಿಡ್ ಪೀಡಿತರನ್ನು ಕೊಲ್ಲುವುದು ದೇಶದ್ರೋಹ. ಹೀಗೆ ದೇಶಭಕ್ತಿ ಹಾಗೂ ದೇಶದ್ರೋಹದ ಮರುವ್ಯಾಖ್ಯಾನ ಮಾಡಬೇಕಾದ ಕಾಲ ಬಂದಿದೆ.

ಪ್ರಭುತ್ವ ಯಾವುದಾದರೇನು, ಯಾರದಾದರೇನು? ಅದು ಪ್ರಜೆಗಳಿಂದ ವಿಧೇಯತೆ ಬಯಸುತ್ತದೆ. ಪ್ರಶ್ನೆ ಮಾಡುವುದನ್ನು, ಮಾಡುವವರನ್ನು ಅದು ಸಹಿಸುವುದಿಲ್ಲ. ಪ್ರತಿರೋಧದ ಸಣ್ಣ ಅಲೆ ಬಂದರೂ ಅದು ಸಹಿಸುವುದಿಲ್ಲ. ಅದರಲ್ಲೂ ಸಂಪತ್ತಿನ ಒಡೆಯರು ತಮ್ಮ ಹಿತಾಸಕ್ತಿ ಕಾಪಾಡಿಕೊಳ್ಳಲು ಕಟ್ಟಿಕೊಂಡ ಪ್ರಭುತ್ವ ಇನ್ನೂ ಭಯಾನಕವಾಗಿರುತ್ತದೆ. ಅದು ಅಭಿವ್ಯಕ್ತಿಯ ಎಲ್ಲ ಸೆಲೆಗಳನ್ನು ಮುಚ್ಚಿ ಬಂದ್ ಮಾಡುತ್ತದೆ. ತನ್ನ ಲೋಪಗಳನ್ನು ಮುಚ್ಚಿಕೊಳ್ಳಲು ನಾನಾ ಕಸರತ್ತುಗಳನ್ನು ನಡೆಸುತ್ತದೆ. ವರ್ಗ ಮತ್ತು ಜಾತಿ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಧರ್ಮ, ದೇವರನ್ನು ಬಳಸಿಕೊಳ್ಳುತ್ತದೆ. ರಾಷ್ಟ್ರವೆಂದರೆ ತಾನು ಎಂದು ಬಿಂಬಿಸಿಕೊಳ್ಳುತ್ತದೆ.

ಈಗ ನಮ್ಮ ಭಾರತದಲ್ಲಿ ಕಾರ್ಪೊರೇಟ್ ಮತ್ತು ಕೋಮುವಾದಿ ಶಕ್ತಿಗಳ ಜಂಟಿ ಪ್ರಭುತ್ವ ಇದೆ. ಇದು ಈಗ ಭಿನ್ನಮತ ಹತ್ತಿಕ್ಕಲು ‘ದೇಶದ್ರೋಹ’ ಎಂಬ ಅಸ್ತ್ರ ಬಳಸುತ್ತಿದೆ. ಬ್ರಿಟಿಷರು ಭಾರತವನ್ನಾಳುವಾಗ ಸ್ವಾತಂತ್ರ ಹೋರಾಟವನ್ನು ಹತ್ತಿಕ್ಕಲು ರೂಪಿಸಿದ ‘ರಾಜದ್ರೋಹ’ ಎಂಬ ಕಾಯ್ದೆಯನ್ನು ಸ್ವಾತಂತ್ರ ನಂತರವೂ ಉಳಿಸಿಕೊಂಡ ಭಾರತದ ಪ್ರಭುತ್ವ ಅದನ್ನು ರಾಜಕೀಯ ಮತ್ತು ಸೈದ್ಧಾಂತಿಕ ವಿರೋಧಿಗಳನ್ನು ಹತ್ತಿಕ್ಕಲು ಬಳಸಿಕೊಳ್ಳುತ್ತಿದೆ.

ಈ ಪ್ರಭುತ್ವದ ದೃಷ್ಟಿಯಲ್ಲಿ ದೇಶವೆಂದರೆ ದೇಶದ ಜನರಲ್ಲ. ದೇಶದ ಕೋಟ್ಯಂತರ ಜನರಿಗೆ ಸೇರಿದ ಸಂಪತ್ತನ್ನು ಕಬಳಿಸಿದ ಕೆಲವೇ ಕೆಲವು ಬಂಡವಾಳಗಾರರು ಮಾತ್ರ ಇವರ ಪ್ರಕಾರ ದೇಶದ ಮಾಲಕರು. ಅದಕ್ಕೆ ಪದೇ ಪದೇ ಅವರು ತೆರಿಗೆದಾರರ ಹಣದಿಂದ ದೇಶ ನಡೆದಿದೆ ಎಂದು ಪ್ರತಿಪಾದಿಸುತ್ತಾರೆ. ಇತ್ತೀಚೆಗೆ ಬಯೊಕಾನ್ ಕಿರಣ ಮಜುಂದಾರ ಅವರು, ‘ತೆರಿಗೆ ಕಟ್ಟುವವರ ಆರೋಗ್ಯ ಮುಖ್ಯ. ಮೊದಲು ಅವರಿಗೆ ಲಸಿಕೆ ಹಾಕಿ’ ಎಂದು ಒತ್ತಾಯಿಸಿದರು. ಆದರೆ, ದೇಶವೆಂದರೆ ಉಳ್ಳವರು ಮಾತ್ರವಲ್ಲ. ತಮ್ಮ ಮೈ ಬೆವರಿನಿಂದ ಈ ಭಾರತವನ್ನು ಕಟ್ಟಿದ ಕಾಯಕ ಜೀವಿಗಳನ್ನು ಹೊರಗಿಟ್ಟು ಒಂದು ದೇಶ ಆಗುವುದಿಲ್ಲ.

 ಆದರೆ, ಈಗ ದೇಶಪ್ರೇಮದ ಮತ್ತು ದೇಶದ್ರೋಹದ ವ್ಯಾಖ್ಯಾನ ಬದಲಾಗಿದೆ. ಈಗ ಸರಕಾರದ ನೀತಿ, ಧೋರಣೆ ಟೀಕಿಸುವುದು ದೇಶದ್ರೋಹದ ಕಾನೂನಿನ ವ್ಯಾಪ್ತಿಗೆ ಬರುತ್ತದೆ. ಪ್ರತಿರೋಧದ ಒಂದು ಸಣ್ಣ ಧ್ವನಿ ದೇಶದ್ರೋಹವಾಗುತ್ತದೆ. ದೇಶವೆಂದರೆ ಈಗ ದೇಶವನ್ನಾಳುವ ಪಕ್ಷ ಮತ್ತು ಅದರ ನಾಯಕ. ಅಷ್ಟೇ ಅಲ್ಲ, ಅದು ಮತ್ತು ಆ ನಾಯಕ ಪ್ರತಿಪಾದಿಸುವ ಸಿದ್ಧಾಂತ.

ಈ ಪಕ್ಷ ಮತ್ತು ಅದರ ನಾಯಕ ಹಾಗೂ ಆತ ಪ್ರತಿಪಾದಿಸುವ ಸಿದ್ಧಾಂತದ ಬಗ್ಗೆ ಭಿನ್ನಮತವನ್ನು ಹೊಂದಿದ್ದರೆ ಅದು ‘ದೇಶದ್ರೋಹ’ ಎಂದು ವ್ಯಾಖ್ಯಾನಿಸಲ್ಪಡುತ್ತದೆ. ರಾಜಕೀಯ ಮತ್ತು ಸೈದ್ಧಾಂತಿಕ ವಿರೋಧಿಗಳನ್ನು ಹತ್ತಿಕ್ಕಲು ಭಾರತೀಯ ಅಪರಾಧ ಸಂಹಿತೆಯ 124(ಎ) ವಿಧಿಯನ್ನು ಪದೇ ಪದೇ ಬಳಸಿಕೊಳ್ಳಲಾಗುತ್ತಿದೆ. ಇದೇ ಕಾಯ್ದೆಯಡಿ ಇತ್ತೀಚೆಗೆ ಹೆಸರಾಂತ ಪತ್ರಕರ್ತ ವಿನೋದ ದುವಾ ಅವರ ವಿರುದ್ಧ ಪ್ರಕರಣ ದಾಖಲಿಸಲಾಯಿತು.

ವಿನೋದ ದುವಾ ಮಾಡಿದ ಅಪರಾಧವೆಂದರೆ, ‘ದೇಶದಲ್ಲಿ ಕೋವಿಡ್-19 ಸೋಂಕು ವ್ಯಾಪಕವಾಗಿ ಹಬ್ಬುತ್ತಿರುವಾಗ ಪರಿಸ್ಥಿತಿಯನ್ನು ನಿಭಾಯಿಸಲು ಸರಕಾರ ವಿಫಲವಾಗಿದೆ’ ಎಂದು ಟೀಕಿಸಿರುವುದು. ಕನಿಷ್ಠ ಚಿಕಿತ್ಸೆಯೂ ಸಿಗದೇ ಕೊವಿಡ್ ಪೀಡಿತರು ಸಾಯುತ್ತಿರುವಾಗಲೂ ಅದಕ್ಕೆ ನೇರವಾಗಿ ಕಾರಣವಾದ ಸರಕಾರವನ್ನು ಟೀಕಿಸಬಾರದು ಎಂಬುದು ಅಧಿಕಾರದಲ್ಲಿ ಇರುವವರ ಹೆಬ್ಬಯಕೆ. ಈ ತಪ್ಪಿಗಾಗಿ ವಿನೋದ ದುವಾ ದೇಶದ್ರೋಹದ ಆರೋಪಕ್ಕೆ ಗುರಿಯಾಗಬೇಕಾಯಿತು. ಆದರೆ, ಈ ಸಲ ಸುಪ್ರೀಂಕೋರ್ಟ್ ಕಾನೂನಿನ ಈ ದುರ್ಬಳಕೆಗೆ ಅವಕಾಶ ನೀಡಲಿಲ್ಲ.

 ದೇಶದ್ರೋಹ ಅಂದರೆ ಯಾವುದು ಎಂಬುದನ್ನು ವ್ಯಾಖ್ಯಾನಿಸಲು 1962ರಲ್ಲಿ ಸುಪ್ರೀಂಕೋರ್ಟ್ ಕೇದಾರನಾಥ ಸಿಂಗ್ ಪ್ರಕರಣದಲ್ಲಿ ನೀಡಿರುವ ತೀರ್ಪನ್ನು ಉಲ್ಲೇಖಿಸಿ ‘ಯಾವುದೇ ಕ್ರಿಯೆ ದೇಶದ್ರೋಹ ಎಂದು ಪರಿಗಣಿಸಲ್ಪಡಬೇಕಾದರೆ, ಅದು ಹಿಂಸಾ ಮಾರ್ಗವನ್ನು ಅನುಸರಿಸಿ ಸರಕಾರವನ್ನು ಬುಡಮೇಲು ಮಾಡಲು ಯತ್ನಿಸಿದರೆ, ಸಾರ್ವಜನಿಕ ಶಾಂತಿ, ಸುವ್ಯವಸ್ಥೆಗೆ ಧಕ್ಕೆ ತಂದರೆ ಅದು ದೇಶದ್ರೋಹದ ಕಾನೂನಿನ ವ್ಯಾಪ್ತಿಗೆ ಬರುತ್ತದೆ ‘ಎಂದು ಸ್ಪಷ್ಟಪಡಿಸಿದ ಸುಪ್ರೀಂಕೋರ್ಟ್ ಐಪಿಸಿಯ 124(ಎ) ಕಲಮಿನ ಬಳಕೆಯ ಮೇಲೆ ಮಿತಿಯನ್ನು ಹೇರಿತು.

ಅಷ್ಟೇ ಅಲ್ಲದೆ, ಯಾರೇ ಪತ್ರಕರ್ತ ಸರಕಾರಕ್ಕೆ ಇಷ್ಟವಾಗದ ಲೇಖನ ಇಲ್ಲವೇ ವರದಿಯನ್ನು ಪ್ರಕಟಿಸಿದರೆ, ಅಥವಾ ಪ್ರಸಾರ ಮಾಡಿದರೆ ಅಂತಹ ಪತ್ರಕರ್ತರ ವಿರುದ್ಧ ದೇಶದ್ರೋಹದ ಕಾಯ್ದೆಯನ್ನು ಬಳಸಕೂಡದು ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದೆ. ಇತ್ತೀಚಿನ 7 ವರ್ಷಗಳಲ್ಲಿ ಸುಪ್ರೀಂಕೋರ್ಟ್ ಇಂತಹದೊಂದು ಅಪರೂಪದ ತೀರ್ಪು ನೀಡಿರುವುದು ಇದೇ ಮೊದಲು ಎಂದರೆ ತಪ್ಪಲ್ಲ. ಅದರಲ್ಲೂ ಕೋವಿಡ್ ನಿಭಾಯಿಸುವಲ್ಲಿ ಸರಕಾರ ಎಡವಿದ ನಂತರ ಅಸಹಾಯಕ ಜನರಿಗೆ ಆಸರೆಯಾಗುವ ತೀರ್ಪುಗಳನ್ನು ಸುಪ್ರೀಂಕೋರ್ಟ್ ನೀಡುತ್ತಿದೆ.

ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನಿಂದ ಸದ್ಯಕ್ಕೆ ಪತ್ರಕರ್ತರಿಗೇನೋ ರಕ್ಷಣೆ ಸಿಕ್ಕಿದೆ. ಆದರೆ, ಇದು ದೇಶದ ಎಲ್ಲ ಪ್ರಜೆಗಳಿಗೂ ಅನ್ವಯಿಸಲ್ಪಡಬೇಕು. ನಮ್ಮ ದೇಶದಲ್ಲಿರುವ ಕೋಮುವಾದಿ ಮತ್ತು ಕಾರ್ಪೊರೇಟ್ ಜಂಟಿ ಪ್ರಭುತ್ವ ಈ ಕಾನೂನನ್ನು ದುರ್ಬಳಕೆ ಮಾಡಿಕೊಂಡು ಅನೇಕ ಚಿಂತಕರನ್ನು ಸೆರೆಮನೆಗೆ ಅಟ್ಟಿದೆ.ಜನಪರ ಹೋರಾಟಗಾರರು ಜೈಲು ಪಾಲಾಗಿದ್ದಾರೆ.ಪರಿಸರ ಕಾರ್ಯಕರ್ತೆ ದಿಶಾ ರವಿ ಪ್ರಕರಣದಲ್ಲಿ ಕೂಡ ಈ ಐಪಿಸಿ 124 (ಎ) ವಿಧಿಯನ್ನು ದುರ್ಬಳಕೆ ಮಾಡಿಕೊಂಡು ಬಂಧನಕ್ಕೆ ಗುರಿಪಡಿಸಲಾಯಿತು.

ನಂತರ ನ್ಯಾಯಾಲಯ ದಿಶಾ ರವಿಗೆ ಜಾಮೀನು ನೀಡಿತು. ರಾಮಚಂದ್ರ ಗುಹಾ ಅವರಂತಹ ಖ್ಯಾತ ವಿದ್ವಾಂಸರು ಪ್ರಧಾನಿಗೆ ಪತ್ರ ಬರೆದರೆಂದು ಅವರ ವಿರುದ್ಧ ಕೂಡ ದೇಶದ್ರೋಹದ ಪ್ರಕರಣ ದಾಖಲಿಸಲಾಯಿತು. ಆದರೆ, ಚಿಂತಕರು ಜೈಲುಪಾಲಾದರೆ ದಾಬೊಲ್ಕರ್, ಪನ್ಸಾರೆ, ಕಲಬುರ್ಗಿ ಮುಂತಾದವರ ಹಂತಕರು ರಾಜಾರೋಷವಾಗಿ ಹೊರಗೆ ಓಡಾಡುತ್ತಿದ್ದಾರೆ.

 ಕೇಂದ್ರದಲ್ಲಿ ನಾಗಪುರದ ಸಂವಿಧಾನೇತರ ಶಕ್ತಿ ಕೇಂದ್ರ ನಿಯಂತ್ರಿಸುವ ನರೇಂದ್ರ ಮೋದಿ ನೇತೃತ್ವದ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ರಾಜಕೀಯ ಭಿನ್ನಾಭಿಪ್ರಾಯ ಹೊಂದಿದವರ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸುವುದು ಸಾಮಾನ್ಯವಾಗಿದೆ. ಪೇಶ್ವೆಗಳ ವಿರುದ್ಧ ದಲಿತರು ಭೀಮಾ ಕೋರೆಗಾಂವ್ ಯುದ್ಧದಲ್ಲಿ ಜಯಗಳಿಸಿದ ವಿಜಯೋತ್ಸವದ 200ನೇ ವರ್ಷಾಚರಣೆಯ ಸಂದರ್ಭದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕವಿ ವರವರರಾವ್, ನ್ಯಾಯವಾದಿ ಸುಧಾ ಭಾರದ್ವಾಜ್, ಚಿಂತಕ ಆನಂದ್ ತೇಲ್ತುಂಬ್ಡೆ, ಪತ್ರಕರ್ತ ಗೌತಮ್ ನವ್ಲಾಖಾ, ಜನಪರ ಹೋರಾಟಗಾರ ಸ್ಟ್ಯಾನ್ ಸ್ವಾಮಿ ಸೇರಿದಂತೆ 19 ಜನರ ವಿರುದ್ಧ ದೇಶದ್ರೋಹದ ಖಟ್ಲೆ ಹಾಕಲಾಗಿದೆ. ಈ ಹಿಂಸಾಚಾರದ ನಿಜವಾದ ಪ್ರಚೋದಕ ಸಂಭಾಜಿ ಭೀಡೆ ರಾಜಾರೋಷವಾಗಿ ಓಡಾಡುತ್ತಾರೆ.

ಇಷ್ಟೇ ಅಲ್ಲ ಕೇಂದ್ರದ ಕೃಷಿ ತಿದ್ದುಪಡಿ ಕಾಯ್ದೆಗಳ ವಿರುದ್ಧ ರಾಜಧಾನಿ ದಿಲ್ಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲವನ್ನು ನೀಡುವವರ ವಿರುದ್ಧವೂ ದೇಶದ್ರೋಹದ ಪ್ರಕರಣ ದಾಖಲಿಸಲಾಗಿದೆ. 2019ರಲ್ಲಿ ಉತ್ತರ ಪ್ರದೇಶದ ಹಾಥರಸ್‌ನಲ್ಲಿ ದಲಿತ ಯುವತಿಯ ಮೇಲೆ ಅತ್ಯಾಚಾರ ನಡೆದು ಆಕೆಯನ್ನು ಕೊಲೆ ಮಾಡಲಾಯಿತು. ಇದರ ವಿರುದ್ಧ ದೇಶ ವ್ಯಾಪಿ ಪ್ರತಿಭಟನೆ ನಡೆಯಿತು. ಉತ್ತರ ಪ್ರದೇಶದಲ್ಲಿ ಕೂಡ ಜನ ರೊಚ್ಚಿಗೆದ್ದರು. ಇದು ಸರಕಾರವನ್ನು ಉರುಳಿಸುವ ಸಂಚು ಎಂದು ಕರೆದ ಆದಿತ್ಯನಾಥ್‌ನ ಸರಕಾರ ಹಲವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿತು. ಇದರಲ್ಲಿ ಕೇರಳದ ಪತ್ರಕರ್ತ ಸಿದ್ದೀಕ್ ಕಪ್ಪನ್ ಕೂಡ ಇದ್ದಾರೆ. ಇವರನ್ನು ಬಿಡುಗಡೆ ಮಾಡಲು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಒತ್ತಾಯಿಸಿದರೂ ಬಿಡುಗಡೆ ಮಾಡಿಲ್ಲ.

  ರೈತರ ಪ್ರತಿಭಟನೆಯನ್ನು ಹತ್ತಿಕ್ಕುವ ಯತ್ನದ ವಿರುದ್ಧ ಟ್ವೀಟ್ ಮಾಡುವುದೂ ದೇಶದ್ರೋಹದ ಅಪರಾಧವಾಗಿದೆ. ಇಂತಹ ಟ್ವೀಟ್ ಮಾಡಿದ ಹಿರಿಯ ಪತ್ರಕರ್ತ ರಾಜದೀಪ್ ಸರ್ದೇಸಾಯಿ, ಲೇಖಕ ರಾಮಚಂದ್ರ ಗುಹಾ, ನ್ಯಾಷನಲ್ ಹೆರಾಲ್ಡ್‌ನ ಮೃಣಾಲ ಪಾಂಡೆ ಮುಂತಾದವರ ವಿರುದ್ಧ ಕೂಡ ಎಫ್‌ಐಆರ್ ದಾಖಲಿಸಲಾಗಿದೆ.

 ಒಂದೆರಡಲ್ಲ ಇಂತಹ ನೂರಾರು ಪ್ರಕರಣಗಳಿವೆ. 2016ರಲ್ಲಿ ದಿಲ್ಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿ ನಡೆದ ಸಭೆಗೆ ಸಂಬಂಧಿಸಿದಂತೆ ಆಗ ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿದ್ದ ಕನ್ಹಯ್ಯಕುಮಾರ್, ಉಮರ್ ಖಾಲೀದ್, ಅನಿರ್ಬನ್ ಭಟ್ಟಾಚಾರ್ಯ ಮುಂತಾದವರ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಲಾಗಿದೆ. ಉಮರ್ ಖಾಲೀದ್ ಈಗ ಜೈಲಿನಲ್ಲಿದ್ದಾರೆ. ಕನ್ಹಯ್ಯಕುಮಾರ್ ಅವರನ್ನು ವಿಶ್ವವಿದ್ಯಾನಿಲಯದಿಂದ ಹೊರದಬ್ಬುವ ಮಸಲತ್ತು ನಡೆಯಿತು. ಆದರೆ, ಅದನ್ನೆದುರಿಸಿ ಅವರು ಪಿಎಚ್‌ಡಿ ಮಾಡಿ ಡಾ.ಕನ್ಹಯ್ಯಕುಮಾರ್ ಆಗಿದ್ದಾರೆ.

ತಮಿಳುನಾಡಿನ ತಿರುನಲ್ವೆಲಿಯಲ್ಲಿ ಅಣು ಸ್ಥಾವರ ವಿರುದ್ಧ ಹೋರಾಟ ನಡೆಸಿದ 8,856 ಮಂದಿಯ ಮೇಲೆ ದೇಶದ್ರೋಹದ ಪ್ರಕರಣವನ್ನು ದಾಖಲಿಸಲಾಗಿದೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಜಾಮಿಯಾ ಮಿಲ್ಲಿಯಾ ಮತ್ತು ಅಲಿಗಡ ವಿಶ್ವವಿದ್ಯಾನಿಲಯದಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪದ ಮೇಲೆ ಜೆಎನ್‌ಯು ಪಿಎಚ್‌ಡಿ ವಿದ್ಯಾರ್ಥಿ ಶರ್ಜೀಲ್ ಇಮಾಮ್ ವಿರುದ್ಧ ಕೂಡ ದೇಶದ್ರೋಹದ ಮೊಕದ್ದಮೆ ದಾಖಲಿಸಲಾಗಿದೆ. ಗುಜರಾತ್‌ನಲ್ಲಿ 2016ರಲ್ಲಿ ಪಾಟಿದಾರ ಸಮುದಾಯಕ್ಕೆ ಮೀಸಲಾತಿ ನೀಡುವಂತೆ ಒತ್ತಾಯಿಸಿ ಚಳವಳಿ ನಡೆಸಿದ ಹಾರ್ದಿಕ್ ಪಟೇಲ್ ಮೇಲೆ ಕೂಡ ದೇಶದ್ರೋಹದ ಪ್ರಕರಣ ದಾಖಲಿಸಲಾಗಿದೆ.

 ಈಗ ದೇಶದ ಅಧಿಕಾರ ಸೂತ್ರವನ್ನು ಹಿಡಿದವರು ಮತ್ತು ಅವರನ್ನು ನಿಯಂತ್ರಿಸುವ ನಾಗಪುರದ ಗುರುಗಳು ಹಾಗೂ ಅವರ ಭಕ್ತ ಪರಿವಾರವನ್ನು ಹೊರತುಪಡಿಸಿ ಉಳಿದವರೆಲ್ಲ ದೇಶದ್ರೋಹದ ನಿಂದನೆಗೆ ಗುರಿಯಾಗಿದ್ದಾರೆ.

ಆದರೆ ಈ ಭಾರತ ಯಾರದು? ಯಾವುದೇ ಪಕ್ಷದಪರಿವಾರದ. ಜಾತಿಯ ಖಾಸಗಿ ಸೊತ್ತೇ? ಇಲ್ಲಿ ಶತಮಾನಗಳಿಂದ ನೆಲೆಸಿದ ಎಲ್ಲ ಸಮುದಾಯಗಳ ಜನರಿಗೆ ಸೇರಿದ ದೇಶ ಭಾರತ. ಇದು ಯಾವುದೇ ಧರ್ಮಕ್ಕೆ, ಜನಾಂಗಕ್ಕೆ, ಕೋಮಿಗೆ, ಜಾತಿಗೆ ಸೇರಿದ ದೇಶವಲ್ಲ.

 ರಾಷ್ಟ್ರಕವಿ ಕುವೆಂಪು ಅವರು ಹೇಳಿದಂತೆ ಇದು ಸರ್ವ ಜನಾಂಗದ ಶಾಂತಿಯ ತೋಟ. ವಾಸ್ತವವಾಗಿ ಈ ಶಾಂತಿಯ ತೋಟಕ್ಕೆ ನುಗ್ಗಿ ಕಲಹದ ಕಿಡಿ ಹೊತ್ತಿಸುವವರು, ಜನಸಾಮಾನ್ಯರ ನಡುವೆ ದ್ವೇಷದ ವಿಷ ಬೀಜ ಬಿತ್ತುವವರು ದೇಶದ್ರೋಹಿಗಳು. ಆ ದೇಶದ್ರೋಹಿ ಕುಹಕಿಗಳನ್ನು ಸದೆ ಬಡಿಯಲು ನಾವೆಲ್ಲ ಒಂದಾಗಬೇಕಾಗಿದೆ. ಬಸವಣ್ಣನವರು ಹೇಳಿದಂತೆ ಸಕಲ ಜೀವಾತ್ಮರ ಲೇಸನು ಬಯಸುವ ನಾಡನ್ನು ಕಟ್ಟಬೇಕಾಗಿದೆ.

 ದೇಶಭಕ್ತರೆಂದರೆ ಯಾರು, ದೇಶ ಭಕ್ತಿ ಅಂದರೆ ಯಾವುದು? ನ್ಯಾಯಕ್ಕಾಗಿ ಹೋರಾಡುವವರು ನಿಜವಾದ ದೇಶ ಭಕ್ತರು. ತಮ್ಮ ಕಾಯಕದ ಪಾಲನ್ನು ಕೇಳುವವರು ನಿಜವಾದ ದೇಶ ಭಕ್ತರು. ತಮ್ಮ ರಕ್ತ ನೀರು ಮಾಡಿಕೊಂಡು ದುಡಿದು ದೇಶ ಕಟ್ಟುವವರು ನಿಜವಾದ ದೇಶ ಭಕ್ತರು. ದೇಶದ ಸಮಾನ ಹಂಚಿಕೆಯಾಗಬೇಕೆಂದು ಹೇಳುವುದು, ಅಸ್ಪಶ್ಯತೆ ಜಾತಿಯತೆ, ಅಸಮಾನತೆ ವಿರುದ್ಧ ಹೋರಾಡುವುದು ದೇಶ ಭಕ್ತಿ.

ದೇಶ ದ್ರೋಹಿಗಳೆಂದರೆ ಯಾರು? ಗಾಂಧೀಜಿಯನ್ನು ಕೊಂದವರು ದೇಶದ್ರೋಹಿಗಳು. ದೇಶದ 130 ಕೋಟಿ ಜನರಿಗೆ ಸೇರಿದ ಸಂಪತ್ತನ್ನು ಅಂಬಾನಿ, ಅದಾನಿಯಂತಹ ಕಾರ್ಪೊರೇಟ್‌ನವರ ಮಡಿಲಿಗೆ ಹಾಕುವವರು ದೇಶದ್ರೋಹಿಗಳು. ದಲಿತರನ್ನು ಮಲದ ಗುಂಡಿಗೆ ಇಳಿಸಿ ಉಸಿರು ಗಟ್ಟಿಸಿ ಸಾಯಿಸುವವರು ದೇಶ ದ್ರೋಹಿಗಳು. ಆಮ್ಲಜನಕ ನೀಡದೇ ಕೋವಿಡ್ ಪೀಡಿತರನ್ನು ಕೊಲ್ಲುವುದು ದೇಶದ್ರೋಹ. ಹೀಗೆ ದೇಶಭಕ್ತಿ ಹಾಗೂ ದೇಶದ್ರೋಹದ ಮರುವ್ಯಾಖ್ಯಾನ ಮಾಡಬೇಕಾದ ಕಾಲ ಬಂದಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)