ಕೋವಿಡ್ ಕಾಲದಲ್ಲಿ ಬಾಯಿಯ ಆರೋಗ್ಯ ಏಕೆ ಮುಖ್ಯ?
ಕೋವಿಡ್-19 ಸಾಂಕ್ರಾಮಿಕದ ಈ ಕಾಲದಲ್ಲಿ ಬಾಯಿಯ ಆರೋಗ್ಯದ ಬಗ್ಗೆ ನಮಗೆ ತಿಳಿದಿರುವುದು ಮುಖ್ಯವಾಗಿದೆ. ಕೋರೋನವೈರಸ್ ಸೇರಿದಂತೆ ರೋಗಕಾರಕಗಳಿಗೆ ನಮ್ಮ ಶರೀರದ ಪ್ರವೇಶದ್ವಾರಗಳಲ್ಲಿ ಬಾಯಿಯೂ ಒಂದಾಗಿರುವುದರಿಂದ ನಮ್ಮ ಹಲ್ಲುಗಳು ಮತ್ತು ವಸಡುಗಳ ಸ್ಥಿತಿಯು ನಾವು ವೈರಲ್ ರೋಗಗಳಿಗೆ ತುತ್ತಾಗುವ ಅಪಾಯವನ್ನು ಹೆಚ್ಚಿಸುತ್ತವೆ.ಕೋವಿಡ್ನ ಹಲವಾರು ಪ್ರಕರಣಗಳು ಹಲ್ಲುಗಳ ಅನಾರೋಗ್ಯದೊಂದಿಗೂ ಗುರುತಿಸಿಕೊಂಡಿವೆ.
ಸಾಂಕ್ರಾಮಿಕದ ಸಂದರ್ಭದಲ್ಲಿ ಬಾಯಿಯ ಆರೋಗ್ಯವು ಹಿಂದೆಂದಿಗಿಂತಲೂ ಹೆಚ್ಚು ಮಹತ್ವವನ್ನು ಪಡೆದುಕೊಂಡಿದೆ ಮತ್ತು ಇದರಲ್ಲಿ ದಂತವೈದ್ಯರನ್ನು ನಿಯಮಿತವಾಗಿ ಭೇಟಿಯಾಗುವುದು ಸೇರಿದೆ. ಆದರೆ ನಿರಂತರ ಲಾಕ್ಡೌನ್ಗಳು,ಸಾಮಾಜಿಕ ಪ್ರತ್ಯೇಕತೆ,ಆರ್ಥಿಕ ಮುಗ್ಗಟ್ಟು ಮತ್ತು ಇವುಗಳಿಂದ ಉಂಟಾಗುವ ಮಾನಸಿಕ ಒತ್ತಡ ಇವುಗಳಿಂದಾಗಿ ಹೆಚ್ಚಿನವರು ಬಾಯಿ ಆರೋಗ್ಯ ಸೇರಿದಂತೆ ಸ್ವಂತದ ಆರೋಗ್ಯದ ಬಗ್ಗೆ ಅಸಡ್ಡೆಯನ್ನು ಹೊಂದಿದ್ದಾರೆ. ಗುರ್ಗಾಂವ್ ನ ದಂತತಜ್ಞೆ ಡಾ.ವನಶ್ರೀ ಪಾಠಕ್ ಅವರು ಬಾಯಿಯ ಅನೈರ್ಮಲ್ಯ ಹೇಗೆ ಕೋವಿಡ್-19ಕ್ಕೆ ತುತ್ತಾಗುವ ಅಪಾಯವನ್ನು ಆಹ್ವಾನಿಸುತ್ತದೆ ಎನ್ನುವುದನ್ನು ವಿವರಿಸಿದ್ದಾರೆ.
ಬಾಯಿಯಲ್ಲಿಯ ಹಾನಿಕಾರಕ ಬ್ಯಾಕ್ಟೀರಿಯಾಗಳು ನಮ್ಮ ರಕ್ತದಲ್ಲಿ ಸೇರಿಕೊಂಡರೆ ಅವು ಮಧುಮೇಹ,ಎಂಡೊಕಾರ್ಡಿಟಿಸ್ ಅಥವಾ ಹೃದಯದಲ್ಲಿ ಉರಿಯೂತ,ಅಪಧಮನಿಗಳಲ್ಲಿ ಹೆಪ್ಪುಗಟ್ಟುವಿಕೆ,ಅಧಿಕ ರಕ್ತದೊತ್ತಡ,ಹೃದಯನಾಳೀಯ ದೋಷಗಳು ಇತ್ಯಾದಿಗಳು ಇನ್ನಷ್ಟು ಹದಗೆಡುವಂತೆ ಮಾಡುತ್ತವೆ. ಪಾರ್ಶ್ವವಾಯುವಿಗೂ ತುತ್ತಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತವೆ ಎಂದು ಹೇಳಿದರು.
ಹಲ್ಲುಗಳ ನೈರ್ಮಲ್ಯದ ಬಗ್ಗೆ ಸೂಕ್ತ ಕಾಳಜಿ ವಹಿಸದಿದ್ದರೆ ಅದು ಗಂಟಲು ಮತ್ತು ಬಾಯಿಯಲ್ಲಿ ಬ್ಯಾಕ್ಟೀರಿಯಾಗಳ ತೆಳು ಪದರ ನಿರ್ಮಾಣಗೊಳ್ಳುವ ಅಪಾಯವನ್ನು ಹೆಚ್ಚಿಸುತ್ತದೆ ಮತ್ತು ಇದು ಹಲವಾರು ಸೋಂಕುಗಳಿಗೆ ಕಾರಣವಾಗುವ ಮೂಲಕ ವಿವಿಧ ಆರೋಗ್ಯ ಸಮಸ್ಯೆಗಳನ್ನುಂಟು ಮಾಡುತ್ತದೆ. ಕೊರೋನವೈರಸ್ ಮುಖ್ಯವಾಗಿ ಶ್ವಾಸಕೋಶಗಳಿಗೆ ದಾಳಿ ಮಾಡುವುದರಿಂದ ಬ್ಯಾಕ್ಟೀರಿಯಾಗಳ ಬೆಳವಣಿಗೆಯು ಅದರ ಸೋಂಕನ್ನು ತೀವ್ರಗೊಳಿಸುತ್ತದೆ ಮತ್ತು ಮಾರಣಾಂತಿಕವಾಗಿಸುತ್ತದೆ.
ನಿಯಮಿತವಾಗಿ ಹಲ್ಲುಗಳನ್ನು ಫ್ಲಾಸ್ ಮತ್ತು ಬ್ರಷ್ ಮಾಡಲು ಮರೆಯುತ್ತಿದ್ದರೆ ಅದು ಕೊರೋನವೈರಸ್ ವಿರುದ್ಧ ಶರೀರದ ನಿರೋಧಕತೆಯನ್ನು ದುರ್ಬಲಗೊಳಿಸಬಲ್ಲದು.ಈ ಕೋವಿಡ್ ಕಾಲದಲ್ಲಿ ಹಲ್ಲುಗಳು ಮತ್ತು ಬಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಮುಖ್ಯವಾಗಿದೆ. ನೈರ್ಮಲ್ಯವನ್ನು ಕಾಯ್ದುಕೊಳ್ಳುವುದು ಶರೀರದ ಒಟ್ಟಾರೆ ಆರೋಗ್ಯವನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ ಎನ್ನುತ್ತಾರೆ ಡಾ.ಪಾಠಕ್. ಮುಖಕ್ಕೆ ಮಾಸ್ಕ್ ಧರಿಸುವ ಮೂಲಕ ಬಾಹ್ಯ ರಕ್ಷಣೆ ಪಡೆದಿದ್ದರೂ ಶರೀರದ ನೈಸರ್ಗಿಕ ನಿರೋಧಕ ವ್ಯವಸ್ಥೆಯು ದುರ್ಬಲವಾಗಿದ್ದರೆ ಎಲ್ಲ ಸಂಭಾವ್ಯ ಸೋಂಕುಗಳ ವಿರುದ್ಧ ಹೋರಾಡುವುದು ಕಷ್ಟವಾಗುತ್ತದೆ.
ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಕೆಲವು ಟಿಪ್ಸ್ ಇಲ್ಲಿವೆ.ದಿನಕ್ಕೆ ಕನಿಷ್ಠ ಎರಡು ಸಲ ಹಲ್ಲುಗಳನ್ನು ಉಜ್ಜಿ. ದಿನಕ್ಕೊಮ್ಮೆ ಹಲ್ಲುಗಳ ಫ್ಲಾಸಿಂಗ್ ಮಾಡಿ. ದಿನಕ್ಕೆರಡು ಸಲ,ಬ್ರಷಿಂಗ್ ಮತ್ತು ಫ್ಲಾಸಿಂಗ್ ಬಳಿಕ ಕ್ಲೋರೊಹೆಕ್ಸಿಡೈನ್ ವೌತ್ವಾಷ್ನಿಂದ ಬಾಯಿಯನ್ನು ಮುಕ್ಕಳಿಸಿ. ಪ್ರತಿ ಎರಡು ತಿಂಗಳಿಗೊಮ್ಮೆ ನಿಮ್ಮ ಟೂಥ್ ಬ್ರಷ್ ಅನ್ನು ಬದಲಿಸಿ. ಕೋವಿಡ್ ಸೋಂಕಿಗೆ ಗುರಿಯಾಗಿದ್ದರೆ ತಕ್ಷಣವೇ ಟೂಥ್ ಬ್ರಷ್ ಬದಲಿಸಿ. ಕನಿಷ್ಠ ಆರು ತಿಂಗಳಿಗೊಮ್ಮೆಯಾದರೂ ದಂತವೈದ್ಯರನ್ನು ಭೇಟಿಯಾಗಿ.
ಕೃಪೆ: Onlymyhealth