ಜನ ಜನಿತ
ಸಾಮಾಜಿಕ ನ್ಯಾಯದ ಪ್ರವರ್ತಕ ಪ್ರೊ. ಮುಮ್ತಾಝ್ ಅಲಿ ಖಾನ್

ಬೆಂಗಳೂರು ಕೃಷಿ ವಿವಿಯ ಕುದ್ಮುಲ್ ರಂಗರಾಯರಂತಿದ್ದರು ಪ್ರೊ. ಮುಮ್ತಾಝ್ ಅಲಿ ಖಾನ್. ಅವರು 94ನೇ ವಯಸ್ಸಿನಲ್ಲಿ ಜೂನ್ 07, 2021ರಂದು ಮರಣಹೊಂದಿದ್ದಾರೆ. ಬೆಂಗಳೂರು ಕೃಷಿ ವಿವಿಯಲ್ಲಿ ಸಮಾಜಶಾಸ್ತ್ರದ ಪ್ರಾಧ್ಯಾಪಕರಾಗಿ ಸುತ್ತಮುತ್ತ ನಡೆಯುವ ಘಟನೆಗಳನ್ನು ಉದಾಹರಿಸುತ್ತಾ ವಿದ್ಯಾರ್ಥಿಮಿತ್ರ ಶಿಕ್ಷಕರಾದರು. ಅವರ ಮನಸ್ಸು ಸದಾ ಸಮಾಜದ ಕಟ್ಟಕಡೆಯ ಮನುಷ್ಯನಿಗಾಗಿ ಮಿಡಿಯುತ್ತಿತ್ತು. ನಿಜ ಅರ್ಥದಲ್ಲಿಯೂ ಅವರು ಸಮಾಜಶಾಸ್ತ್ರಜ್ಞರಾಗಿದ್ದರು. ಅವರೊಬ್ಬ ಪ್ರಗತಿಪರ ಚಿಂತಕರಾಗಿದ್ದರು. ಎರಡು ದಶಕಗಳ ಕಾಲ ಅವರಿಂದ ಸಮಾಜಶಾಸ್ತ್ರದ ಪಾಠ ಕಲಿತವರು ಇಂದಿಗೂ ಅವರನ್ನು ಸಹೃದಯತೆಯಿಂದ ನೆನಪಿಸಿಕೊಳ್ಳುತ್ತಾರೆ.
ತಮ್ಮ ಸಹೋದ್ಯೋಗಿ ಮಿತ್ರರಾದ ಡಾ. ಎಸ್. ಟಿ. ನಾಗರಾಜ, ಡಾ. ಭದ್ರ ಅವರೊಂದಿಗೆ ಸೇರಿ ಕೃಷಿವಿಶ್ವವಿದ್ಯಾನಿಲಯದ ಹೆಬ್ಬಾಳ ಕ್ಯಾಂಪಸ್‌ನ ಮಕ್ಕಳಿಗಾಗಿ 1974ರಲ್ಲಿ ಕ್ಯಾಂಪಸ್ ಶಾಲೆ ತೆರೆದರು. ವಿಶ್ವವಿದ್ಯಾನಿಲಯದಲ್ಲಿ ದಲಿತರಿಗಾಗುತ್ತಿರುವ ಅನ್ಯಾಯ ಕಂಡು ರೋಸಿ ಹೋಗಿ 1982ರ ಸುಮಾರಿಗೆ ಸ್ವಯಂ ನಿವೃತ್ತಿ ಪಡೆದರು. ಗಂಗಾನಗರದ ತಮ್ಮ ಮನೆಯ ಒಂದು ಭಾಗದಲ್ಲಿ ‘ಸಮಗ್ರ ಕುಟುಂಬ ಕಲ್ಯಾಣ ಘಟಕ’ ಹಾಗೂ ‘ದಲಿತರ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ’ ಎಂಬ ಸರಕಾರೇತರ ಸಂಸ್ಥೆಗಳನ್ನು ತೆರೆದರು. ಬಡ ಕುಟುಂಬಗಳ ಮಹಿಳೆಯರು ಮತ್ತು ದಲಿತರ ಅಭ್ಯುದಯಕ್ಕಾಗಿ ಹಲವು ಯೋಜನೆಗಳನ್ನು ಕೈಗೆತ್ತಿಕೊಂಡರು. ಬಡವರ ಬಂಧು ಆದರು. ಅವರು ರಸ್ತೆಯಲ್ಲಿ ನಡೆದುಹೋಗುತ್ತಿದ್ದರೆ ಕೈಮುಗಿಯುತ್ತಿದ್ದವರು ಅಡಿಗಡಿಗೆ ಸಿಗುತ್ತಿದ್ದರು. ಗಂಗಾನಗರ, ಆರ್. ಟಿ. ನಗರದ ಸುತ್ತಮುತ್ತಲ ಪ್ರದೇಶಗಳ ಬಡಮಕ್ಕಳಿಗಾಗಿ ಶಾಲೆ ತೆರೆದರು. ಉಚಿತ ಶಿಕ್ಷಣ ನೀಡಿದರು. ಉಡುಪು, ಆಹಾರ ನೀಡಿದರು.
ಪ್ರಥಮ ವರ್ಷದ ಪಶುವೈದ್ಯಕೀಯ ವಿದ್ಯಾರ್ಥಿಯಾಗಿದ್ದ ನನ್ನ ಮತ್ತು ಶಿಕ್ಷಕರಾದ ಡಾ. ಬಿ. ಎನ್. ಸತ್ಯನಾರಾಯಣ ಅವರ ಒತ್ತಾಯಕ್ಕೆ ಮಣಿದು ನಿವೃತ್ತಿಯ ನಂತರ ಪ್ರೊ. ಮುಮ್ತಾಝ್ ಅಲಿ ಖಾನ್ ಅವರು 1983ರಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಡಾ. ಬಿ. ಆರ್. ಅಂಬೇಡ್ಕರ್ ಕಲ್ಯಾಣ ಸಂಘಕ್ಕೆ ಅನಿವಾರ್ಯ ಅಧ್ಯಕ್ಷರಾದರು. ನಾನು ಉಪಾಧ್ಯಕ್ಷನಾದೆ. ವಿಶ್ವವಿದ್ಯಾನಿಲಯದ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಹೆಚ್ಚುವರಿ ವಸತಿ ಮತ್ತು ಭೋಜನ ವೆಚ್ಚ ಭರಿಸಲು ಸರಕಾರದ ವಿವಿಧ ಹಂತಗಳಲ್ಲಿ ಮಾತುಕತೆ ನಡೆಸಿದರು. ಕುಲಪತಿ ಡಾ. ಎನ್. ಜಿ. ಪೆರೂರ್ ಅವರೂ ಜೊತೆಯಾದರು. ಆರ್ಥಿಕ ಇಲಾಖೆಯ ಕಾರ್ಯದರ್ಶಿಯವರಾದ ಗೋಪಾಲರೆಡ್ಡಿಯವರು ವೆಚ್ಚದ ಅನುದಾನಕ್ಕೆ ಒಪ್ಪಿಗೆ ನೀಡಿದರು. ದಲಿತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಇದ್ದ ಅಡೆತಡೆಗಳು 1983ರ ನವೆಂಬರ್‌ನಿಂದ ಕೊಂಚ ನಿವಾರಣೆಯಾದವು. ಈಗ ರಾಜ್ಯದ ಎಲ್ಲಾ ಆರು ಕೃಷಿ ವಿಶ್ವವಿದ್ಯಾನಿಲಯಗಳ ಸಾವಿರಾರು ದಲಿತ ವಿದ್ಯಾರ್ಥಿಗಳು ಈ ಸೌಲಭ್ಯವನ್ನು ಅನುಭವಿಸುತ್ತಿದ್ದಾರೆ. 1988ರಲ್ಲಿ ಕೃಷಿವಿವಿಯಲ್ಲಿ ನಡೆದ ಡಾ. ಅಂಬೇಡ್ಕರ್ ಜಯಂತಿಗೆ ರಾಗಿ ಲಕ್ಷ್ಮಣಯ್ಯನವರು ಮುಖ್ಯ ಅತಿಥಿಗಳು. ಆ ಕಾರ್ಯಕ್ರಮದಲ್ಲಿ ಪಿ. ಲಂಕೇಶ್ ಮತ್ತು ಪ್ರೊ. ಮುಮ್ತಾಝ್ ಅಲಿ ಖಾನ್ ಭಾಗವಹಿಸಿದ್ದರು. ಅವರಿಬ್ಬರೂ ರಾಗಿ ಲಕ್ಷ್ಮಣಯ್ಯನವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಲು ಒತ್ತಾಯಿಸಿದರು.
1989ರ ಘಟಿಕೋತ್ಸವದಲ್ಲಿ ಅದು ಸಾಕಾರವಾಯಿತು. ಅದೇ ಹೊತ್ತಿಗೆ, ಸೆಪ್ಟಂಬರ್ 1988ರಲ್ಲಿ ಪ್ರೊ. ಮುಮ್ತಾಝ್ ಅಲಿ ಖಾನ್ ಅವರು ಮೂರು ವರ್ಷಗಳ ಅವಧಿಗೆ ಕೃಷಿವಿವಿಯ ಬೋರ್ಡ್ ಆಫ್ ರಿಜೆಂಟ್ಸ್‌ನ ಸದಸ್ಯರಾದರು. ಅವರೊಂದಿಗೆ ಪ್ರೊ. ಎಂ. ಡಿ. ನಂಜುಂಡಸ್ವಾಮಿ, ಡಾ. ಜಿ. ಪರಮೇಶ್ವರ, ಶ್ರೀಮತಿ ಪಾಲಿ ಅಯ್ಯಪ್ಪ, ವಿ. ರಾಮಯ್ಯರಂತಹ ದಿಗ್ಗಜ ಸದಸ್ಯರಿದ್ದರು. ವಿಶ್ವವಿದ್ಯಾನಿಲಯದಲ್ಲಿ ದುಡಿಯುತ್ತಿದ್ದ ಕೆಲವು ಹಂಗಾಮಿ ಕೃಷಿ ಕಾರ್ಮಿಕರು ಖಾಯಂ ಆದರು. ಇಲ್ಲವೇ ತಿಂಗಳ ವೇತನಕ್ಕೆ ಅರ್ಹರಾದರು. ಮಸ್ಟರ್ ರೋಲ್ ಎಂಬ ಹಾಜರಾತಿ ರಿಜಿಸ್ಟರ್‌ಗಳಲ್ಲಿ ಕಾರ್ಮಿಕರ ಹೆಸರುಗಳು ಸೇರ್ಪಡೆಗೊಂಡವು. ಅವರ ತಂಡದ ಬೋರ್ಡ್ ಆಫ್ ರಿಜೆಂಟ್ಸ್ ಅವಧಿಯಲ್ಲಿ 1991ರಲ್ಲಿ ದಲಿತ ಸಮುದಾಯದ 35 ಅಭ್ಯರ್ಥಿಗಳು ಬೋಧಕರು, ಸಂಶೋಧನಾ ಸಹಾಯಕರು, ವಿಸ್ತರಣಾ ಮಾರ್ಗದರ್ಶಿಗಳ ಬ್ಯಾಕ್‌ಲಾಗ್ ಹುದ್ದೆಗಳಿಗೆ ನೇಮಕವಾದರು. ಅಲ್ಲಿಯವರೆಗೆ ಬೆರಳೆಣಿಕೆಯ ದಲಿತ ಶಿಕ್ಷಕರಿದ್ದರು. ಕುಲಪತಿಯಾಗಿ ಡಾ.ಕೆ.ಕೃಷ್ಣಮೂರ್ತಿಯವರು ಇವರ ದಲಿತೋದ್ಧ್ದಾರದ ಕೆಲಸಗಳಿಗೆ ಇಂಬು ಕೊಟ್ಟರು.
ವಿದೇಶಿ ಮಹಿಳೆಯಾದ ಸ್ಕಾರ್ಲೆಟ್ ಎಪ್‌ಸ್ಟೀನ್ ಅವರು ಮೈಸೂರಿನ ಎರಡು ಹಳ್ಳಿಗಳಿಗೆ ಭೇಟಿ ನೀಡಿ ವರ್ಷಾನುಗಟ್ಟಲೆ ಹಳ್ಳಿಯವರೊಂದಿಗೆ ವಾಸ್ತವ್ಯ ಹೂಡಿ ಆ ಹಳ್ಳಿಗಳ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ ಕುರಿತು ಮಾನವಶಾಸ್ತ್ರಕ್ಕೆ ಅಪೂರ್ವ ಕೊಡುಗೆಯಾಗಿ 1962ರಲ್ಲಿ ರಚಿಸಿದ ಅಪರೂಪದ ಪುಸ್ತಕವನ್ನು ಪ್ರೊ. ಮುಮ್ತಾಝ್ ಅಲಿ ಖಾನ್ ಅವರು ಕನ್ನಡಕ್ಕೆ ‘ದಕ್ಷಿಣ ಭಾರತ: ಅಂದು-ಇಂದು’ ಕೃತಿಯಾಗಿ ಅನುವಾದಿಸಿದ್ದಾರೆ. ಬೆಂಗಳೂರು ಕೃಷಿ ವಿವಿಯ ಕನ್ನಡ ಅಧ್ಯಯನ ವಿಭಾಗ ಅದನ್ನು ಪ್ರಕಟಿಸಿದೆ. ನ್ಯಾಯಮೂರ್ತಿಗಳಾಗಿದ್ದ ವಿ. ಆರ್. ಕೃಷ್ಣ ಅಯ್ಯರ್ ಅವರನ್ನು 1985ರಲ್ಲಿ ಕ್ಯಾಂಪಸ್‌ಗೆ ಆಹ್ವಾನಿಸಿದ್ದರು. ಪ್ರಗತಿಪರ ಚಿಂತಕರನ್ನು ಹುಟ್ಟು ಹಾಕಿದರು. ಅವರ ಡಾಕ್ಟರೇಟ್ ಪದವಿಗೆ ವೇಶ್ಯೆಯರ ಸಮಸ್ಯೆಗಳ ಕುರಿತು ಅಧ್ಯಯನ ಮಾಡಿದ್ದರು. ದಿಲ್ಲಿಯ ಪ್ರಕಾಶನ ಸಂಸ್ಥೆಯೊಂದು ಆ ಮಹಾಪ್ರಬಂಧವನ್ನು ಪುಸ್ತಕರೂಪದಲ್ಲಿ ಪ್ರಕಟಿಸಿದೆ. ಸಮಾಜದ ಸಮಸ್ಯೆಗಳನ್ನು ವೃತ್ತ ಪತ್ರಿಕೆಗಳ ಓದುಗರ ಕಾಲಮ್‌ಗೆ ನಿಯಮಿತವಾಗಿ ಬರೆದರು. ಆಂಗ್ಲಭಾಷೆಯಲ್ಲಿ ‘ಕ್ರಷ್’ ಎಂಬ ನಿಯತಕಾಲಿಕವನ್ನು ಪ್ರಕಟಿಸಿದರು. ಹಿಂದೂ ಮುಸ್ಲಿಂ ಭಾವೈಕ್ಯದ ಪ್ರತೀಕದಂತಿದ್ದರು.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ