ವಂಚನೆ ಪ್ರಕರಣ: ಮಹಾತ್ಮ ಗಾಂಧಿಯ ಮರಿ ಮೊಮ್ಮಗಳಿಗೆ 7 ವರ್ಷ ಜೈಲುಶಿಕ್ಷೆ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ,ಜೂ.8: ಸುಮಾರು 3.22 ಕೋಟಿ ರೂ. ವಂಚನೆ ಹಾಗೂ ನಕಲಿ ದಾಖಲೆ ಸೃಷ್ಟಿ ಪ್ರಕರಣಕ್ಕೆ ಸಂಬಂಧಿಸಿ ಮಹಾತ್ಮಾಗಾಂಧೀಜಿಯವರ ಮರಿಮೊಮ್ಮಗಳು ಆಶೀಶ್ ಲತಾ ರಾಂಗೋಬಿನ್ ಅವರಿಗೆ ದಕ್ಷಿಣ ಆಫ್ರಿಕದ ಡರ್ಬಾನ್ ನ್ಯಾಯಾಲಯವು 7 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಭಾರತದಿಂದ ತಾನು ಆಮದುಮಾಡಿಕೊಳ್ಳುತ್ತಿರುವ ಲಿನೆನ್ (ನಾರುಬಟ್ಟೆ)ನ ಸರಕಿಗೆ ಆಮದು ಮತ್ತು ಕಸ್ಟಮ್ಸ್ ಸುಂಕ ಪಾವತಿಸಬೇಕೆಂದು ಹೇಳಿಕೊಂಡು ಆಶೀಶ್ ಲತಾ ಅವರು ರಾಂಗೋಬಿನ್ ಅವರಿಂದ 6.22 ಮಿಲಿಯ ರ್ಯಾಂಡ್ (ದ.ಆಫ್ರಿಕದ ಕರೆನ್ಸಿ) ಪಡೆದುಕೊಂಡಿದ್ದರು.ಅಲ್ಲದೆ ತನ್ನ ಆದಾಯದಲ್ಲಿ ಪಾಲು ನೀಡುವುದಾಗಿ ತಿಳಿಸಿದ್ದರು.
ನ್ಯೂಆಫ್ರಿಕ ಅಲಾಯನ್ಸ್ ಫುಟ್ವೇರ್ ಡಿಸ್ಟ್ರಿಬ್ಯೂಟರ್ಸ್ ಕಂಪೆನಿಯ ನಿರ್ದೇಶಕರಾದ ಎಸ್.ಆರ್.ಮಹಾರಾಜ್ ಅವರನ್ನು 2015ರ ಆಗಸ್ಟ್ ನಲ್ಲಿ ಭೇಟಿಯಾಗಿದ್ದರು. ತಾನು ದಕ್ಷಿಣ ಆಫ್ರಿಕದ ಆಸ್ಪತ್ರೆ ಸಮೂಹ ‘ನೆಟ್ಕೇರ್’ಗಾಗಿ ಭಾರತದಿಂದ ಮೂರು ಕಂಟೈನರ್ ಹಡಗುಗಳಲ್ಲಿ ನಾರು ಬಟ್ಟೆಗಳನ್ನು ಆಮದುಮಾಡಿಕೊಳ್ಳುತ್ತಿದ್ದು, ಕಸ್ಟಮ್ಸ್ ಸುಂಕ ಹಾಗೂ ಆಮದು ವೆಚ್ಚ ಪಾವತಿಗೆ ಆರ್ಥಿಕ ತೊಂದರೆ ಎದುರಿಸುತ್ತಿ ರುವುದಾಗಿ ಲತಾ ಅವರು ಎಸ್.ಆರ್.ಮಹಾರಾಜ್ ಗೆ ಹೇಳಿದ್ದರು.
ಇದಕ್ಕಾಗಿ ತನಗೆ ಬಂದರಿನಿಂದ ಸರಕುಗಳನ್ನು ಬಿಡಿಸಿಕೊಳ್ಳಲು 6.2 ದಶಲಕ್ಷ ರ್ಯಾಂಡ್ನ (ದ.ಆಫ್ರಿಕದ ಕರೆನ್ಸಿ) ಅಗತ್ಯವಿದೆಯೆಂದು ತಿಳಿಸಿದ್ದರು. ತಾನು ಆಮದುಮಾಡಿಕೊಂಡಿರುವ ಸರಕುಗಳ ಡೆಲಿವರಿ ನೋಟ್ ಮತ್ತು ನೆಟ್ಕೇರ್ ಆಸ್ಪತ್ರೆ ಸಮೂಹದ ಸರಕುಪಟ್ಟಿ (ಇನ್ವಾಯ್ಸಿ) ಗೆ ಸಂಬಂಧಿಸಿದ ನಕಲಿ ದಾಖಲೆಗಳನ್ನು ಪ್ರದರ್ಶಿಸಿದ್ದರು ಎಂದು ದ.ಆಫ್ರಿಕದ ರಾಷ್ಟ್ರೀಯ ಪ್ರಾಸಿಕ್ಯೂಟಿಂಗ್ ಪ್ರಾಧಿಕಾರ (ಎನ್ಪಿಎ)ದ ಪ್ರಾಸಿಕೂಟರ್ ಬ್ರಿಗೇಡಿಯರ್ ಹಂಗ್ವಾನಿ ವೌಲಾದ್ಝಿ ಅವರು ನ್ಯಾಯಾಲಯದ ವಿಚಾರಣೆ ವೇಳೆ ಆಪಾದಿಸಿದ್ದಾರೆ.
ರಾಮ್ಗೋಬಿನ್ರ ಕೌಟುಂಬಿಕ ಹಿನ್ನೆಲೆ ಮತ್ತು ಆಕೆ ತೋರಿಸಿದ ನೆಟ್ಕೇರ್ ಸಂಸ್ಥೆಯ ದಾಖಲೆಗಳನ್ನು ನಂಬಿದ ಮಹಾರಾಜ್ ಆಕೆಯೊಂದಿಗೆ ಒಪ್ಪಂದ ಮಾಡಿ ಕೊಂಡು 6.2 ಮಿಲಿಯ ಹಣವನ್ನು ನೀಡಿದ್ದರು.ಮಹಾರಾಜ್ ಅವರ ಕಂಪೆನಿಯು ಬಟ್ಟೆ, ನಾರುಬಟ್ಟೆ (ಲಿನೆನ್) ಹಾಗೂ ಪಾದರಕ್ಷೆಗಳ ಆಮದು ಹಾಗೂ ಉತ್ಪಾದನೆಯಲ್ಲಿ ತೊಡಗಿದೆ ಹಾಗೂ ಲಾಭ ಹಂಚಿಕೆ ಆಧಾರದಲ್ಲಿ ಇತರ ಕಂಪೆನಿಗಳಿಗೂ ಆರ್ಥಿಕ ನೆರವನ್ನು ಒದಗಿಸುತ್ತಿದೆ.
ಆದರೆ ಆಕೆ ತೋರಿಸಿದ ದಾಖಲೆಗಳೆಲ್ಲವೂ ನಕಲಿ ಎಂದು ಅರಿವಾದ ಬಳಿಕ ಮಹಾರಾಜ್ ಅವರು ನ್ಯಾಯಾಲಯದಲ್ಲಿ ಆಕೆಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿದ್ದರು.
ಲತಾ ರಾಂಗೋಬಿನ್ ಅವರು ಇಂಟರ್ನ್ಯಾಶನಲ್ ಸೆಂಟರ್ ಫಾರ್ ನಾನ್ ವಾಯಲೆನ್ಸ್ ಎನ್ಜಿಓ ಸಂಸ್ಥೆಯಲ್ಲಿ ಸ್ಥಾಪಕ ಹಾಗೂ ಕಾರ್ಯನಿರ್ವಹಣಾ ನಿರ್ದೇಶಕರಾಗಿದ್ದಾರೆ. ಲತಾ ರಾಮ್ಗೋಬಿನ್ ಅವರ ತಾಯಿ ಎಲಾ ಗಾಂಧಿ ಅವರು ಮಾನವಹಕ್ಕು ಹೋರಾಟಕ್ಕೆ ನೀಡಿದ ಕೊಡುಗೆಗಾಗಿ ಭಾರತ ಹಾಗೂ ದಕ್ಷಿಣ ಆಫ್ರಿಕದ ಗೌರವಾದರಕ್ಕೆ ಪಾತ್ರರಾಗಿದ್ದರು.