ಪಾಕ್ ರೈಲು ಅಪಘಾತ: ಮೃತರ ಸಂಖ್ಯೆ 62ಕ್ಕೆ ಏರಿಕೆ
ಕರಾಚಿ (ಪಾಕಿಸ್ತಾನ), ಜೂ. 8: ಪಾಕಿಸ್ತಾನದ ಸಿಂಧ್ ಪ್ರಾಂತದಲ್ಲಿ ಸೋಮವಾರ ಸಂಭವಿಸಿದ ರೈಲು ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ ಮಂಗಳವಾರ 62ಕ್ಕೇರಿದೆ.
ಈ ನಡುವೆ, ದೇಶದ ಭೀಕರ ರೈಲು ಅಪಘಾತಗಳ ಪೈಕಿ ಒಂದಾಗಿರುವ ಈ ಅಪಘಾತಕ್ಕೆ ಕಾರಣವಾದ ಅಂಶಗಳ ಬಗ್ಗೆ ತಕ್ಷಣ ತನಿಖೆ ನಡೆಸುವಂತೆ ಪ್ರತಿಪಕ್ಷಗಳು ಒತ್ತಾಯಿಸಿವೆ.
ಸೋಮವಾರ ಬೆಳಗ್ಗೆ ರೆಟಿ ಮತ್ತು ದಾರ್ಕಿ ರೈಲು ನಿಲ್ದಾಣಗಳ ನಡುವೆ ಮಿಲ್ಲತ್ ಎಕ್ಸ್ಪ್ರೆಸ್ ರೈಲಿನ 8 ಬೋಗಿಗಳು ಹಳಿತಪ್ಪಿದವು ಹಾಗೂ ಸ್ವಲ್ಪ ಸಮಯದ ಬಳಿಕ ಅದೇ ಹಳಿಯಲ್ಲಿ ಬಂದ ಸರ್ ಸೈಯದ್ ಎಕ್ಸ್ಪ್ರೆಸ್ ರೈಲು ಈ ಬೋಗಿಗಳಿಗೆ ಡಿಕ್ಕಿ ಹೊಡೆಯಿತು. 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
17 ಬೋಗಿಗಳನ್ನು ತೆರವುಗೊಳಿಸಿದ ಬಳಿಕ ರೈಲು ಸಂಚಾರ ಪುನರಾರಂಭಗೊಂಡಿದೆ ಎಂದು ರೈಲ್ವೆ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ‘ಜಿಯೋ ನ್ಯೂಸ್’ ವರದಿ ಮಾಡಿದೆ.
Next Story