ಕಾಫಿನಾಡಿನ ಕಾರ್ಮಿಕರು, ರೈತರಿಗೆ ಕಂಟಕವಾಗುತ್ತಿದೆ ಅಲ್ಯೂಮಿನಿಯಂ ಏಣಿ
ತೋಟಗಳಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಗಳಿಂದ ಹೆಚ್ಚುತ್ತಿವೆ ಅವಘಡ
ಚಿಕ್ಕಮಗಳೂರು, ಜೂ.8: ಕಬ್ಬಿಣ, ಅಲ್ಯೂಮಿನಿಯಂ ಏಣಿಗಳನ್ನು ಏರಿ ಕಾರ್ಮಿಕರು ಕೆಲಸ ಮಾಡುವ ಸಂದರ್ಭದಲ್ಲಿ ಕಾಫಿ, ಅಡಿಕೆ, ಟೀ ಎಸ್ಟೇಟ್‌ಗಳಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಗಳು ಸ್ಪರ್ಶಿಸಿ ಕಾರ್ಮಿಕರು ಪ್ರಾಣ ಕಳೆದುಕೊಳ್ಳುತ್ತಿರುವ ಘಟನೆಗಳಿಗೆ ಮಲೆನಾಡಿನ ಜನತೆ ಮಮ್ಮುಲ ಮರುಗುತ್ತಿದ್ದು, ಇಂತಹ ಘಟನೆಗಳಿಂದ ಕಾರ್ಮಿಕರ ಪ್ರಾಣಕ್ಕೆ ಕುತ್ತಾಗುವುದನ್ನು ತಡೆಯಲು ಸರಕಾರ ಕಠಿಣ ಕಾನೂನುಗಳನ್ನು ಜಾರಿ ಮಾಡಬೇಕೆಂದು ಆಗ್ರಹಿಸುತ್ತಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ನೂರಾರು ಕಾಫಿ, ಟೀ, ಅಡಿಕೆ ಎಸ್ಟೇಟ್‌ಗಳನ್ನು ಹೊಂದಿರುವ ಜಿಲ್ಲೆಯಾಗಿದ್ದು, ಲಕ್ಷಾಂತರ ಕಾರ್ಮಿಕರಿಗೆ ಈ ಎಸ್ಟೇಟ್‌ಗಳು ಕೈತುಂಬಾ ಕೆಲಸದೊಂದಿಗೆ ಕಾರ್ಮಿಕರ ಜೀವನಕ್ಕೆ ಆಶ್ರಯವಾಗಿವೆ. ಕಾಫಿ, ಅಡಿಕೆ, ಟೀ ಎಸ್ಟೇಟ್‌ಗಳಲ್ಲಿ ಕಾಳು ಮೆಣಸನ್ನು ಮಿಶ್ರ ಬೆಳೆಯಾಗಿ ಬೆಳೆಯುತ್ತಿದ್ದು, ಕಾಳು ಮೆಣಸು ಕಟಾವು ಕೆಲಸ ಸೇರಿದಂತೆ ಮರಗಸಿ, ಅಡಿಕೆ ಕೊಯ್ಲು, ಔಷಧ ಸಿಂಪಡಣೆಯಂತಹ ಕೃಷಿ ಚಟುವಟಿಕೆ ಸಂದರ್ಭಗಳಲ್ಲಿ ಈ ತೋಟ ಅಥವಾ ಎಸ್ಟೇಟ್‌ಗಳಲ್ಲಿ ಕಾರ್ಮಿಕರು ಅನಿವಾರ್ಯವಾಗಿ ಅಲ್ಯೂಮಿನಿಯಂ ಇಲ್ಲವೇ ಕಬ್ಬಿಣದ ಏಣಿಗಳನ್ನು ಬಳಸಬೇಕಾಗಿದೆ. ಇಂತಹ ಏಣಿಗಳನ್ನು ಬಳಸುವ ಸಂದರ್ಭದಲ್ಲಿ ಕಾರ್ಮಿಕರು ಒಂದು ಕಡೆಯಿಂದ ಮತ್ತೊಂದು ಕಡೆಗೆ ಅಥವಾ ಒಂದು ಮರದಿಂದ ಮತ್ತೊಂದು ಮರಕ್ಕೆ ಈ ಏಣಿಗಳನ್ನು ಕೊಂಡೊಯ್ಯುವ ವೇಳೆ ತೋಟಗಳಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಗಳಿಗೆ ಏಣಿ ಸ್ಪರ್ಶಿಸಿ ಏಣಿ ಹಿಡಿದುಕೊಂಡ ಕಾರ್ಮಿಕರು ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಮೃತಪಡುತ್ತಿದ್ದಾರೆ.
ಇಂತಹ ಘಟನೆಗಳು ಕಾಫಿನಾಡಿನಲ್ಲಿ ಪ್ರತೀ ವರ್ಷ ನಡೆಯುತ್ತಿದ್ದು, ಪ್ರತೀ ವರ್ಷ ಮಲೆನಾಡಿನ ಕಾಫಿ, ಅಡಿಕೆ, ಟೀ ಎಸ್ಟೇಟ್‌ಗಳಲ್ಲಿ ವಿವಿಧ ಅವಘಡಗಳಿಂದಾಗಿ ಸಾಯುತ್ತಿರುವ ನೂರಾರು ಕಾರ್ಮಿಕರ ಪೈಕಿ ಕಾಳು ಮೆಣಸು, ಮರಗಸಿ ಸಂದರ್ಭ ಏಣಿಗಳಿಗೆ ವಿದ್ಯುತ್ ತಂತಿ ಸ್ಪರ್ಶಿಸಿ ಮೃತಪಡುತ್ತಿರುವ ಕಾರ್ಮಿಕರ ಸಂಖ್ಯೆಯೇ ಹೆಚ್ಚು. ಇಂತಹ ಘಟನೆಗಳು ಜಿಲ್ಲೆಯಲ್ಲಿ ಪ್ರತೀ ವರ್ಷ ನಡೆಯುತ್ತಿದ್ದರೂ ಕಾರ್ಮಿಕರ ಪ್ರಾಣಗಳಿಗೆ ಬೆಲೆಯೇ ಇಲ್ಲ ಎಂಬಂತಹ ಆರೋಪಗಳು ಕಾರ್ಮಿಕ ಸಂಘಟನೆಗಳ ಮುಖಂಡರದ್ದಾಗಿದೆ.
ಜಿಲ್ಲೆಯ ಬಹುತೇಕ ಕಾಫಿ, ಟೀ, ಅಡಿಕೆ ಎಸ್ಟೇಟ್‌ಗಳಲ್ಲಿ ವಿದ್ಯುತ್ ತಂತಿಗಳು ಹಾದು ಹೋಗಿರುವ ದೃಶ್ಯಗಳು ಸಾಮಾನ್ಯವಾಗಿವೆ. ಈ ವಿದ್ಯುತ್ ತಂತಿಗಳಿಂದಾಗಿ ಕಾರ್ಮಿಕರು ಜೀವ ಕಳೆದುಕೊಳ್ಳುತ್ತಿದ್ದು, ತೋಟ, ಎಸ್ಟೇಟ್‌ಗಳ ಮಾಲಕರು ತಮ್ಮ ತೋಟಗಳ ವ್ಯಾಪ್ತಿಯಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಗಳಿಗೆ ಪೈಪ್‌ಗಳನ್ನು ಅಳವಡಿಸಿದರೆ ಇಂತಹ ವಿದ್ಯುತ್ ಅವಘಡಗಳನ್ನು ತಡೆಯಲು ಸಾಧ್ಯವಿದೆ. ಆದರೆ ಜಿಲ್ಲೆಯಲ್ಲಿ ಪ್ರತೀ ವರ್ಷ ಇಂತಹ ಘಟನೆಗಳು ನಡೆಯುತ್ತಿದ್ದರೂ ತೋಟಗಳ ಮಾಲಕರು, ಜಿಲ್ಲಾಡಳಿತ, ಸರಕಾರ, ಕಾರ್ಮಿಕರ ಸಂಘಟನಗಳಾಗಲಿ ಈ ಸಂಬಂಧ ನಿರ್ಲಕ್ಷ ವಹಿಸಿರುವುದನ್ನು ಗಮನಿಸಿದರೆ ಕಾರ್ಮಿಕರ ಪ್ರಾಣಕ್ಕೆ ಬೆಲೆಯೇ ಇಲ್ಲ ಎಂಬುದು ಸ್ಪಷ್ಟ ಎಂದು ಪ್ರಜ್ಞಾವಂತ ನಾಗರಿಕರು ವಿಷಾದ ವ್ಯಕ್ತಪಡಿಸುತ್ತಿದ್ದಾರೆ.
ವಿದ್ಯುತ್ ತಂತಿಗಳು ಹಾದು ಹೋಗಿರುವ ತೋಟಗಳ ಮಾಲಕರು ತಮ್ಮ ತೋಟಗಳ ವ್ಯಾಪ್ತಿಯಲ್ಲಿನ ವಿದ್ಯುತ್ ತಂತಿಗಳಿಗೆ ವಿದ್ಯುತ್ ಪ್ರವಹಿಸದ ಪೈಪ್‌ಗಳನ್ನು ಅಳವಡಿಸುವುದನ್ನು ಸರಕಾರ ಕಡ್ಡಾಯ ಮಾಡಿ ಆದೇಶ ಹೊರಡಿಸಬೇಕು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.
ತಮಿಳುನಾಡು ಮೂಲದ ಕಾರ್ಮಿಕ ಮೃತ್ಯು
ಕಳಸ ಹೋಬಳಿ ವ್ಯಾಪ್ತಿಯ ಕಾರಗದ್ದೆ ಗ್ರಾಮದಲ್ಲಿರುವ ಅತ್ತಿಕೊಂಡ ಕಾಫಿ ಎಸ್ಟೇಟ್‌ನಲ್ಲಿ ತಮಿಳುನಾಡು ಮೂಲದ ಕಾರ್ಮಿಕ ದಮೋದರ್(55) ಎಂಬವರು ಸೋಮವಾರ ಅಲ್ಯೂಮಿನಿಯಂ ಏಣಿಗೆ ಬಲಿಯಾಗಿದ್ದಾರೆ.
ಕಾಫಿ ತೋಟದ ಮಧ್ಯೆ ಏಣಿ ಕೊಂಡೊಯ್ಯುತ್ತಿದ್ದ ವೇಳೆ ತೋಟದಲ್ಲಿ ಹಾದು ಹೋಗಿದ್ದ ವಿದ್ಯುತ್ ತಂತಿಗೆ ಏಣಿ ಸ್ಪರ್ಶಿಸಿದ ಪರಿಣಾಮ ಕಾರ್ಮಿಕ ದಮೋದರ್ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. 10 ವರ್ಷಗಳಲ್ಲಿ ಇಂತಹ ಅವಘಡಕ್ಕೆ 200ಕ್ಕೂ ಹೆಚ್ಚು ಕಾರ್ಮಿಕರು ಬಲಿಯಾಗಿದ್ದಾರೆ. ಈ ಪಟ್ಟಿಯಲ್ಲಿ ರೈತರು ಸೇರಿದ್ದಾರೆ. ಇಂತಹ ಘಟನೆಗಳನ್ನು ತಡೆಯುವ ನಿಟ್ಟಿನಲ್ಲಿ ಸರಕಾರ ಅಲ್ಯೂಮಿನಿಯಂ ಏಣಿಗಳನ್ನು ನಿಷೇಧಿಸಬೇಕೆಂದು ಕಾರ್ಮಿಕ ಸಂಘಟನೆಗಳ ಮುಖಂಡರು ಆಗ್ರಹಿಸಿದ್ದಾರೆ.
ಮಲೆನಾಡಿನ ತೋಟಗಳಲ್ಲಿ ಅಲ್ಯೂಮಿನಿಯಂ ಏಣಿಗಳ ಬಳಕೆ ಇತ್ತೀಚೆಗೆ ಅಪಾಯಕಾರಿಯಾಗುತ್ತಿದೆ. ವಿದ್ಯುತ್ ಪ್ರವಹಿಸುವ ಏಣಿಗಳನ್ನು ನಿಷೇಧಿಸಬೇಕಿದೆ. ಕಾರ್ಮಿಕರು, ರೈತರು ತೋಟಗಳಲ್ಲಿ ಕೆಲಸ ಮಾಡುವ ವೇಳೆ ತಿಳಿಯದೆ ವಿದ್ಯುತ್ ತಂತಿಗಳಿಗೆ ಏಣಿ ತಾಗಿಸಿ ಅಸು ನೀಗುತ್ತಿದ್ದಾರೆ. ಇಲ್ಲಿನ ಕೃಷಿಕರಿಗೆ ಏಣಿ ಅತ್ಯಗತ್ಯವಾಗಿದೆ. ಏಣಿ ತಯಾರಿಸುವ ಕಂಪೆನಿಗಳು ವಿದ್ಯುತ್ ಪ್ರವಹಿಸದಂತಹ ಏಣಿಗಳ ತಯಾರಿಸಲು ಮುಂದಾಗಬೇಕು. ಈ ಸಂಬಂಧ ಸರಕಾರದ ಗಮನ ಸೆಳೆಯಲಾಗುವುದು.
-ಎಂ.ಪಿ.ಕುಮಾರಸ್ವಾಮಿ, ಶಾಸಕ, ಮೂಡಿಗೆರೆ ವಿಧಾನಸಭಾ ಕ್ಷೇತ್ರಅಲ್ಯೂಮಿನಿಯಂ ಏಣಿಗಳು ಮತ್ತು ರೈತರ ಜಮೀನು, ಹೊಲ ಗದ್ದೆಗಳಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಗಳಿಂದಾಗಿ ಜಿಲ್ಲೆಯಲ್ಲಿ ನೂರಾರು ಕಾರ್ಮಿಕರು, ರೈತರು ಪ್ರಾಣ ಕಳೆದುಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಸರಕಾರ ಅಲ್ಯೂಮಿನಿಯಂ ಏಣಿಗಳನ್ನು ನಿಷೇಧಿಸಬೇಕು. ರೈತರು, ಎಸ್ಟೇಟ್ ಮಾಲಕರು ತಮ್ಮ ತೋಟಗಳ ವ್ಯಾಪ್ತಿಯಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಗಳಿಗೆ ಕಡ್ಡಾಯವಾಗಿ ಪೈಬರ್ ಪೈಪ್‌ಗಳನ್ನು ಅಳವಡಿಸಬೇಕೆಂದು ಆದೇಶ ಹೊರಡಿಸಬೇಕು.
-ರಸೂಲ್ ಖಾನ್, ಕಾಂಗ್ರೆಸ್ ಅಸಂಘಟಿತ ಕಾರ್ಮಿಕರ ಘಟಕದ ಜಿಲ್ಲಾಧ್ಯಕ್ಷ