varthabharthi


ಕಾಲಂ 9

ಪ್ರಧಾನಿಗಳಿಗೊಂದು ಬಹಿರಂಗ ಪತ್ರ

‘ಉಚಿತ ಲಸಿಕೆ-ಉಚಿತ ಪಡಿತರ’: ತಮ್ಮ ಉದ್ರಿ ಭರವಸೆಗಳು ಹುಟ್ಟಿಸಿರುವ ಪ್ರಶ್ನೆಗಳು-ಅನುಮಾನಗಳು

ವಾರ್ತಾ ಭಾರತಿ : 9 Jun, 2021
ಶಿವಸುಂದರ್

32 ನಿಮಿಷಗಳ ನಿಮ್ಮ ಭಾಷಣದಲ್ಲಿ ನೀವು ಅಚ್ಚುಕಟ್ಟಾಗಿ ಕೆಲವೇ ಕೆಲವು ಅನಿವಾರ್ಯ ಕ್ರಮಗಳನ್ನು, ಹಲವಾರು ಸುಳ್ಳುಗಳು ಹಾಗೂ ಉತ್ಪ್ರೇಕ್ಷೆಗಳನ್ನು ಬೆರೆಸಿ ಕಾಕ್‌ಟೇಲ್ ಮಾಡಿ ಕುಡಿಸಿದ್ದರಿಂದ ದೇಶದ ಜನತೆ ತಮ್ಮ ಕೃಪೆಯಿಂದ ಜೂನ್ 21ಕ್ಕೆ ಎಲ್ಲರೂ ಕೋವಿಡ್ ಮುಕ್ತವಾಗಿಬಿಡುತ್ತೇವೆ ಎಂಬ ಉನ್ಮಾದದಲ್ಲಿದ್ದಾರೆ. ಆದ್ದರಿಂದಲೇ ನಿಮ್ಮ ಉಚಿತ ಭಾಷಣ ಹಲವು ಖಚಿತ ಅನುಮಾನಗಳನ್ನು ಮತ್ತು ಪ್ರಶ್ನೆಗಳನ್ನು ಮೂಡಿಸುತ್ತಿದೆ.


ಮಾನ್ಯ ಪ್ರಧಾನಿಗಳೇ,

ತಾವು ಮೊನ್ನೆ ಮಾಡಿದ ಉಚಿತಗಳ ಭಾಷಣದ ವಾಸ್ತವಿಕತೆ ಏನೇ ಇದ್ದರೂ ಕೋವಿಡ್ ಪ್ರಾರಂಭವಾದ ಒಂದೂವರೆ ವರ್ಷಗಳ ನಂತರ ತಾವು ಮೊತ್ತಮೊದಲ ಬಾರಿಗೆ ಜನರ ಅಗತ್ಯಗಳ ಬಗ್ಗೆ ಮಾತನ್ನಾದರೂ ಆಡಿದಿರಿ. ಅದಕ್ಕಾಗಿ ತಮಗೆ ಅಭಿನಂದನೆಗಳು.

ಆದರೆ ನೀವು ಕೊಟ್ಟ ಉದ್ರಿ ವಾಗ್ದಾನಗಳೆಲ್ಲವೂ ಒತ್ತಡಕ್ಕೆ ಹಣ್ಣಾದ- ಅಥವಾ ಕೊಳೆತ ಭರವಸೆಗಳೇ ಆಗಿರುವುದು ನಿರೀಕ್ಷಿತವೇ ಆಗಿದ್ದರೂ ದುರದೃಷ್ಟಕರ....ಏಕೆಂದರೆ 32 ನಿಮಿಷಗಳ ನಿಮ್ಮ ಭಾಷಣದಲ್ಲಿ ನೀವು ಅಚ್ಚುಕಟ್ಟಾಗಿ ಕೆಲವೇ ಕೆಲವು ಅನಿವಾರ್ಯ ಕ್ರಮಗಳನ್ನು, ಹಲವಾರು ಸುಳ್ಳುಗಳು ಹಾಗೂ ಉತ್ಪ್ರೇಕ್ಷೆಗಳನ್ನು ಬೆರೆಸಿ ಕಾಕ್‌ಟೇಲ್ ಮಾಡಿ ಕುಡಿಸಿದ್ದರಿಂದ ದೇಶದ ಜನತೆ ತಮ್ಮ ಕೃಪೆಯಿಂದ ಜೂನ್ 21ಕ್ಕೆ ಎಲ್ಲರೂ ಕೋವಿಡ್ ಮುಕ್ತವಾಗಿಬಿಡುತ್ತೇವೆ ಎಂಬ ಉನ್ಮಾದದಲ್ಲಿದ್ದಾರೆ. ಆದ್ದರಿಂದಲೇ ನಿಮ್ಮ ಉಚಿತ ಭಾಷಣ ಹಲವು ಖಚಿತ ಅನುಮಾನಗಳನ್ನು ಮತ್ತು ಪ್ರಶ್ನೆಗಳನ್ನು ಮೂಡಿಸುತ್ತಿದೆ.

ಪ್ರಶ್ನೆ-1: ಜೂನ್ 21ರಿಂದ ಎಲ್ಲರಿಗೂ ಉಚಿತ ವ್ಯಾಕ್ಸಿನ್ ಕೊಡಲು ವ್ಯಾಕ್ಸಿನ್ ಲಭ್ಯವಿದೆಯೇ? ಎಲ್ಲೆಲ್ಲಿಂದ ಎಷ್ಟೆಷ್ಟು ಸರಬರಾಜಾಗಲಿದೆ ಎಂಬ ಖಚಿತ ಅಂದಾಜಾದರೂ ತಮ್ಮ ಸರಕಾರಕ್ಕಿದೆಯೇ?

ಹಾಗೆ ನೋಡಿದರೆ ಎಲ್ಲರಿಗೂ ಉಚಿತ ವ್ಯಾಕ್ಸಿನ್ ಕೊಡಲಾಗುವುದೆಂದು ನೀವು ವಾಗ್ದಾನ ಮಾಡುತ್ತಿರುವುದು ಇದೇ ಮೊದಲೇನಲ್ಲ. 2021ರ ಬಜೆಟ್ ನಿಂದ ಹಿಡಿದು ಹಲವಾರು ಬಾರಿ ಇದೇ ವಾಗ್ದಾನ ಮಾಡಿ, ಈಡೇರಿಸದಾದಾಗ ಅದನ್ನು ಯಾರೂ ಪ್ರಶ್ನಿಸದಂತೆ ಮಾಡಿದಿರಿ.

-ಐದು ರಾಜ್ಯಗಳ ಚುನಾವಣಾ ಪ್ರಕ್ರಿಯೆಗಳು ನಡೆಯುತ್ತಿರುವಾಗ ಇದ್ದಕ್ಕಿದ್ದಂತೆ ತಾವು ಫುಲೆ-ಅಂಬೇಡ್ಕರ್ ಹೆಸರಿನಲ್ಲಿ ಎಪ್ರಿಲ್ 11-14ರ ತನಕ ಸಕಲರಿಗೂ ಲಸಿಕೋತ್ಸವದ ಹೆಸರಿನಲ್ಲಿ ಉಚಿತ ವ್ಯಾಕ್ಸಿನೇಷನ್ ಅನ್ನು ಪ್ರಾರಂಭಿಸಿದ್ದು ನೆನಪಿದೆಯಷ್ಟೆ... ಆದರೆ ವ್ಯಾಕ್ಸಿನ್ ಸರಬರಾಜೇ ಇಲ್ಲದಿದ್ದರಿಂದ ಆ ಯೋಜನೆ ಘೋರವಾಗಿ ವಿಫಲವಾಯಿತು. ಆದರೇನಂತೆ... ಲಸಿಕೋತ್ಸವ ಲಾಭವನ್ನು ಚುನಾವಣೆಯಲ್ಲಿ ಬಳಸಿಕೊಳ್ಳುವ ಪ್ರಯತ್ನವನ್ನು ತಾವು ಹಾಗೂ ತಮ್ಮ ಬಿಜೆಪಿ ಮಾಡಿತ್ತು.

-ಆ ನಂತರ ಮೇ 1ರಿಂದ 18-45 ವಯಸ್ಸಿನ ಎಲ್ಲರಿಗೂ ವ್ಯಾಕ್ಸಿನ್ ಕೊಡಲಾಗುವುದು ಎಂದು ಘೋಷಿಸಲಾಯಿತು. ಆದರೆ ಅದ್ಯಾವುದೂ ಜಾರಿಯಾಗಲಿಲ್ಲ. ಏಕೆಂದರೆ ಅಷ್ಟು ವ್ಯಾಕ್ಸಿನ್ ಲಭ್ಯವೇ ಇರಲಿಲ್ಲ. ಈಗ ಮತ್ತೆ ಜೂನ್ 21ರಿಂದ ಎಲ್ಲರಿಗೂ ಹಂತ ಹಂತವಾಗಿ ವ್ಯಾಕ್ಸಿನ್ ಎಂದು ಹೇಳುತ್ತಿದ್ದೀರಿ...!!

ಆದರೆ ಈಗಲಾದರೂ ದೇಶಕ್ಕೆ ಬೇಕಾಗಿರುವ ಅಂದಾಜು 200 ಕೋಟಿ ವ್ಯಾಕ್ಸಿನ್‌ಗಳನ್ನು ಎಲ್ಲಿಂದ ಮತ್ತು ಹೇಗೆ ಪಡೆದುಕೊಳ್ಳಲಾಗುವುದು ಎಂಬುದರ ಬಗ್ಗೆ ಈಗಲೂ ನಿಮ್ಮ ಸರಕಾರಕ್ಕೆ ಸ್ಪಷ್ಟತೆಯಿಲ್ಲವೆಂಬುದನ್ನು ಮೊನ್ನೆಯ ನಿಮ್ಮ ಭಾಷಣವೇ ಸ್ಪಷ್ಟಪಡಿಸುತ್ತಿತ್ತು.

ವಾಸ್ತವದಲ್ಲಿ ನಮ್ಮ ದೇಶಕ್ಕೆ ಅಗತ್ಯವಿರುವಷ್ಟು ಕೋವಿಡ್ ಲಸಿಕೆಗಳು ಸಿಗಬೇಕೆಂದರೆ ತಮ್ಮ ಸರಕಾರದ ಕ್ರಿಮಿನಲ್ ಬೇಜವಾಬ್ದಾರಿ ಸೃಷ್ಟಿಸಿರುವ ನಾಲ್ಕು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕಾದ ಅಗತ್ಯವಿದೆ:

-ಮೊದಲನೆಯದಾಗಿ: ಇಂದು ದೇಶದೊಳಗೆ ತಯಾರಾಗುತ್ತಿರುವ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆಗಳ ಜಂಟಿ ಸಾಮರ್ಥ್ಯ ಜುಲೈ ವೇಳೆಗೆ ಹೆಚ್ಚೆಂದರೆ ತಿಂಗಳಿಗೆ 10 ಕೋಟಿ ಆಗಬಹುದೆಂಬ ನಿರೀಕ್ಷೆಯನ್ನು ಸರಕಾರ ಜನರಲ್ಲಿ ಮೂಡಿಸಲು ಯತ್ನಿಸುತ್ತಿದೆ. ಆದರೆ ಮೇ ತಿಂಗಳಲ್ಲಿ ಆರೋಗ್ಯ ಇಲಾಖೆಯೇ ಮಾಡಿರುವ ಅಂದಾಜಿನ ಪ್ರಕಾರ ಮೇ, ಜೂನ್ ಮತ್ತು ಜುಲೈ ಮೂರು ತಿಂಗಳಲ್ಲಿ ಈ ಎರಡೂ ಕಂಪೆನಿಗಳಿಂದ 19.8 ಕೋಟಿ ಲಸಿಕೆಗಳು ಮಾತ್ರ ಸಿಗಲಿದೆ. ಅಂದರೆ ತಿಂಗಳಿಗೆ ಹೆಚ್ಚೆಂದರೆ ಕೇವಲ 7 ಕೋಟಿಗಳು ಮಾತ್ರ. ಆದರೆ ಭಾರತವು ಡಿಸೆಂಬರ್ ವೇಳೆಗಾದರೂ ಈ ದೇಶದ 100 ಕೋಟಿ ಜನರಿಗೆ 200 ಕೋಟಿ ವ್ಯಾಕ್ಸಿನ್ ಕೊಟ್ಟು ಮುಗಿಸಬೇಕೆಂದರೆ ತಿಂಗಳಿಗೆ 25-30 ಕೋಟಿ ವ್ಯಾಕ್ಸಿನ್‌ಗಳು ಬೇಕು!!

ಇದರ ಜೊತೆಗೆ ಕೋವಿಶೀಲ್ಡ್ ಉತ್ಪಾದಿಸುವ SII ಸಂಸ್ಥೆಯು ಅಂತರ್‌ರಾಷ್ಟ್ರೀಯ ಸಂಸ್ಥೆಗಳಿಂದ 2020ರ ಜೂನ್‌ನಲ್ಲೇ 3,000 ಕೋಟಿ ರೂ. ಮುಂಗಡ ಪಡೆದಿದ್ದು 100 ಕೋಟಿ ವ್ಯಾಕ್ಸಿನ್‌ಗಳನ್ನು ಡಿಸೆಂಬರ್ ವೇಳೆಗೆ ಸರಬರಾಜು ಮಾಡಬೇಕಿದೆ. ಹೀಗಾಗಿ ಅದರ ಉತ್ಪಾದನಾ ಸಾಮರ್ಥ್ಯದ ಅರ್ಧ ಭಾಗ ಮಾತ್ರ ಭಾರತಕ್ಕೆ ದಕ್ಕುತ್ತದೆ. ಈ ಸಮಸ್ಯೆಯನ್ನು ಸರಕಾರ ಹೇಗೆ ಬಗೆಹರಿಸಿಕೊಳ್ಳಲಿದೆಯೆಂಬ ಯಾವ ನೀಲನಕ್ಷೆಯೂ ನಿಮ್ಮ ಭಾಷಣದಲ್ಲಿಲ್ಲ.

 -ಎರಡನೆಯದಾಗಿ: ಕಳೆದ ಎಪ್ರಿಲ್‌ವರೆಗೂ ಸರಕಾರ ರಶ್ಯದ ಸ್ಪುಟ್ನಿಕ್ ಅಥವಾ ಅಮೆರಿಕದ ಫೈಝರ್ ಉತ್ಪಾದನೆ ಅಥವಾ ಸಿದ್ಧ ಸರಬರಾಜಿಗೆ ಅವಕಾಶ ಕೊಟ್ಟಿರಲಿಲ್ಲ. ಏಕೆಂದರೆ ಎರಡು ಭಾರತೀಯ ಕಂಪೆನಿಗಳು ಉತ್ಪಾದಿಸುವ ಲಸಿಕೆಗಳೇ ಸಾಕೆಂದುಕೊಂಡಿತ್ತು. ಮತ್ತೊಮ್ಮೆ ಈ ದೊಡ್ಡ ದೇಶಕ್ಕೆ ಎಲ್ಲಿಂದ ಮತ್ತು ಹೇಗೆ ಲಸಿಕೆ ಪಡೆದುಕೊಳ್ಳಬೇಕು ಎಂಬ ಬಗ್ಗೆ ತಮ್ಮ ಸರಕಾರಕ್ಕಿದ್ದ ಘೋರ ನಿರ್ಲಕ್ಷ್ಯದ ಪರಿಣಮವಿದು.

ಇರಲಿ, ಈಗ ಅದಕ್ಕೆ ಅನುಮತಿ ನೀಡಿದ್ದೀರಿ. ಆದರೆ ರಶ್ಯದ ಸ್ಪುಟ್ನಿಕ್ ವ್ಯಾಕ್ಸಿನ್ ಭಾರತದಲ್ಲಿ ತಯಾರಾಗಲು ಸಮಯ ಬೇಕು. ಮತ್ತದರ ಉತ್ಪ್ರೇಕ್ಷಿತ ಸಾಮರ್ಥ್ಯವೂ ತಿಂಗಳಿಗೆ ಕೆಲವು ಕೋಟಿಗಳಿಗಿಂತ ಜಾಸ್ತಿಯಿಲ್ಲ. ಈಗ ತರಾತುರಿಯಲ್ಲಿ ಈ ವಿದೇಶಿ ಲಸಿಕೆಯನ್ನು ಕೊಂಡುಕೊಳ್ಳುವ ಸಲುವಾಗಿ ಅದನ್ನು ಬಳಸುವ ಭಾರತೀಯ ಜನರ ಮೇಲೆ ಪ್ರಯೋಗ ಮಾಡಬೇಕಾದ ಬ್ರಿಡ್ಜ್ ಟ್ರಯಲ್ಲಿನ ಅಗತ್ಯವನ್ನೇ ರದ್ದುಪಡಿಸಿದ್ದೀರಿ! ಹೀಗಾಗಿ ಇಂತಹ ಭಾರತೀಯರ ಮೇಲಿನ ಪ್ರಯೋಗದಲ್ಲೂ ಪರಿಣಾಮಕಾರಿ ಎಂದು ಸಾಬೀತಾಗದ ವಿದೇಶಿ ಲಸಿಕೆಗಳ ಬಗ್ಗೆ ಜನರು ಆತಂಕ ಪಟ್ಟರೆ ಅದು ದೇಶದ್ರೋಹ-ಲಸಿಕಾ ದ್ರೋಹ ಎಂದು ಹೇಳುತ್ತಿದ್ದೀರಿ..

ಈ ಸಮಸ್ಯೆಯನ್ನು ಹೇಗೆ ಬಗೆಹರಿಸಲಿದ್ದೀರಿ? -ಮೂರನೆಯದಾಗಿ: ತಾವು ತಮ್ಮ ಭಾಷಣದಲ್ಲಿ ಹೇಳಿದಂತೆ ಹೊಸ ವ್ಯಾಕ್ಸಿನ್ ಉತ್ಪಾದನೆ ಹೊಸದಾಗಿ Bio e Sub Vaacine,  Zydus Cadilla, SII Novavax, BB Nasal, Genova mRna ಎಂಬ ಐದು ಕಂಪೆನಿಗಳಿಗೆ ಅವಕಾಶ ಮಾಡಿಕೊಟ್ಟಿದ್ದೀರಿ. ಆದರೆ ತಮ್ಮ ಸರಕಾರ ಹೊಸದಾಗಿ ಅನುಮತಿ ನೀಡಿರುವ ಈ ಕಂಪೆನಿಗಳು ಇನ್ನು ಮೊದಲನೇ ಮತ್ತು ಎರಡನೇ ಕ್ಲಿನಿಕಲ್ ಟ್ರಯಲ್‌ಗಳನ್ನೇ ಪೂರೈಸಿಲ್ಲ. ಇದರ ಫಲಿತಾಂಶ ಏನೆಂದು ಗೊತ್ತಾಗುವುದಕ್ಕೆ ಮುಂಚೆಯೇ ಅವುಗಳ ಉತ್ಪಾದನೆಯನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದು ಅಪರಾಧವಲ್ಲವೇ ಪ್ರಧಾನಿಗಳೇ? ಅಥವಾ... ಸರಿಯಾದ ಫಲಿತಾಂಶ ಬರದಿದ್ದರೂ ತಮ್ಮ ಸರಕಾರ ಅವನ್ನು ಜನರ ಮೇಲೆ ಪ್ರಯೋಗಿಸುವುದೇ??

-ನಾಲ್ಕನೆಯದಾಗಿ: ಇನ್ನು ಉಳಿದಿರುವುದು ಈಗಾಗಲೇ ವಿದೇಶಗಳಲ್ಲಿ ದಾಸ್ತಾನಾಗಿರುವ ಸಿದ್ಧ ಲಸಿಕೆಗಳನ್ನು ಆಮದು ಮಾಡಿಕೊಳ್ಳುವುದು. ಅದರ ಬಗ್ಗೆ ತಾವು ಆಲೋಚನೆ ಮಾಡಿದ್ದೇ ಐದೂ ರಾಜ್ಯಗಳ ಚುನಾವಣೆ ಮುಗಿದು ಫಲಿತಾಂಶ ಬಂದ ನಂತರದಲ್ಲಿ!!

ಆದರೆ, ಅಮೆರಿಕದಿಂದ ಆಮದು ಮಾಡಿಕೊಳ್ಳಬೇಕೆಂದಿರುವ ಮೊಡೆರ್ನಾ, ಫೈಝರ್ ಹಾಗೂ ಚೀನಾದ ಸೀನೋಫಾರ್ಮಾ   ವ್ಯಾಕ್ಸಿನ್‌ಗಳ ದಾಸ್ತಾನು ಆ ದೇಶದಲ್ಲಿ ಈ ಸದ್ಯಕ್ಕೆ ಲಭ್ಯವಿಲ್ಲ. ಏಕೆಂದರೆ ತಮ್ಮ ಸರಕಾರಕ್ಕಿಂತ ಹಲವಾರು ತಿಂಗಳುಗಳು ಮುಂಚೆಯೇ ಜಗತ್ತಿನ ಇತರ ದೇಶಗಳು ಆ ಕಂಪೆನಿಗಳೊಂದಿಗೆ ಒಪ್ಪಂದ ಮಾಡಿಕೊಂಡು ಬಿಟ್ಟಿದ್ದವು. ಹೀಗಾಗಿ ಮೊದಲು ಆರ್ಡರ್ ಮಾಡಿದ ದೇಶಗಳಿಗೆ ಪೂರೈಕೆ ಮಾಡಿದ ನಂತರವಷ್ಟೇ ಅವು ಭಾರತಕ್ಕೆ ಲಭ್ಯವಾಗಲಿದೆ. ಅದು ಡಿಸೆಂಬರ್ ಆಗಬಹುದು.. ಬೇರೆ ದೇಶಗಳ ರೀತಿ ತಮ್ಮ ಸರಕಾರ ಕೂಡ ಮೊದಲೇ ಆ ಕಂಪೆನಿಗಳ ಜೊತೆ ಒಪ್ಪಂದ ಮಾಡಿಕೊಳ್ಳದಿರಲು ಕಾರಣವೇನು, ಪ್ರಧಾನಿಗಳೇ?

ಇಷ್ಟಾದರೂ ನಮ್ಮ ಸರಕಾರ ಮಾಡಬೇಕಾದದ್ದೆಲ್ಲವನ್ನು ಮಾಡಿದೆ ಎಂದೇ ಭಾಷಣ ಮಾಡಿದ ತಮ್ಮಲ್ಲಿ ಮಾನವ ಸಂವೇದನೆ ಉಳಿದಿದೆ ಎಂದು ಭಾರತೀಯರು ನಂಬುವುದು ಹೇಗೆ..ಪ್ರಧಾನಿಗಳೇ.. ಇನ್ನು ಆ ಕಂಪೆನಿಗಳು ಭಾರತದಲ್ಲೇ ಬಂದು ಉತ್ಪಾದನೆ ಮಾಡಬೇಕೆಂದರೆ ಅವು ಹಾಕುತ್ತಿರುವ ಷರತ್ತುಗಳು ಭಾರತವನ್ನು ಮತ್ತಷ್ಟು ಆಪತ್ತಿಗೆ ದೂಡುವಂತಿವೆ...ಮತ್ತು ಆಗಲು ಅವರ ಉತ್ಪಾದನೆ ಪ್ರಾರಂಭಿಸಲು ಹಲವು ತಿಂಗಳು ಬೇಕಾಗುತ್ತವೆ. ಲಸಿಕೆ ಪೂರೈಕೆಗಳಿಗೆ ಇರುವ ಈ ನಾಲ್ಕು ಅಡ್ಡಿಗಳನ್ನು ಮೀರಲು ತಮ್ಮ ಸರಕಾರ ಯಾವುದೇ ನೈಜ ಕ್ರಮಗಳನ್ನು ತೆಗೆದುಕೊಳ್ಳದಿದ್ದರೂ.... ಮತ್ತೊಮ್ಮೆ ಜೂನ್ 21ರಿಂದ ಎಲ್ಲರಿಗೂ ವ್ಯಾಕ್ಸಿನ್ ಎಂದು ಹೇಳುತ್ತಿದ್ದೀರಿ...!!! ಇದು ಜನದ್ರೋಹವಲ್ಲವೇ ಪ್ರಧಾನಿಗಳೇ....

ಪ್ರಶ್ನೆ 2: ಎಪ್ರಿಲ್‌ನಲ್ಲಿ ತಾವು ಘೋಷಿಸಿದ ಹೊಸ ವ್ಯಾಕ್ಸಿನ್ ನೀತಿಗೆ ಕಾರಣ ರಾಜ್ಯ ಸರಕಾರಗಳ ಒತ್ತಡವೇ? ಅಥವಾ ಅದು ವ್ಯಾಕ್ಸಿನ್ ಕೊರತೆಯಿಂದ ಸರಕಾರದ ಬಗ್ಗೆ ಜನರಿಗೆ ಉಕ್ಕುತ್ತಿದ್ದ ಆಕ್ರೋಶವನ್ನು ಕೇಂದ್ರ ಸರಕಾರದಿಂದ ರಾಜ್ಯಗಳತ್ತ ಹರಿಸುವ ತಂತ್ರವಾಗಿತ್ತೇ?  

 2021ರ ಜನವರಿ 16ರಿಂದ ಎಪ್ರಿಲ್ ಕೊನೆಯವರೆಗೆ ಕೇಂದ್ರ ಸರಕಾರದ ಸುಪರ್ದಿಯಲ್ಲಿ ನಡೆದ ವ್ಯಾಕ್ಸಿನ್ ಉತ್ಪಾದನೆ ಮತ್ತು ವಿತರಣೆ ಸುಗಮವಾಗಿತ್ತು. ಆದರೆ ಹಲವು ರಾಜ್ಯ ಸರಕಾರಗಳು ವ್ಯಾಕ್ಸಿನ್ ನೀತಿಯನ್ನು ವಿಕೇಂದ್ರೀಕರಿಸಬೇಕೆಂದು ಒತ್ತಾಯಿಸಿದ್ದರಿಂದ ಹೊಸನೀತಿಯನ್ನು ತರಲಾಯಿತು. ಆದರೆ ಈಗ ರಾಜ್ಯಗಳಿಗೆ ಬುದ್ಧಿ ಬಂದಿರುವುದರಿಂದ ಮತ್ತೆ ಕೇಂದ್ರವೇ ಎಲ್ಲರಿಗೂ ವ್ಯಾಕ್ಸಿನ್‌ನ್ನು ಉಚಿತವಾಗಿ ಕೊಡಲಿದೆ ಎಂದು ಎಲ್ಲಾ ಕ್ರೆಡಿಟನ್ನು ತಮಗೂ ಹಾಗೂ ಎಲ್ಲಾ ಟೀಕೆಗಳನ್ನು ರಾಜ್ಯ ಸರಕಾರಗಳಿಗೂ ವರ್ಗಾಯಿಸಿದಿರಿ. ಆದರೆ ರಾಜ್ಯಗಳು ಕೇಳಿದ್ದು ಲಸಿಕೆಯ ವಿತರಣೆ ಮತ್ತು ವಿತರಣಾ ನೀತಿಯ ವಿಕೇಂದ್ರೀಕರಣವನ್ನೇ ವಿನಾ ಲಸಿಕೆಯ ಉತ್ಪಾದನೆ ಅಥವಾ ಸಂಗ್ರಹದ ವಿಕೇಂದ್ರೀಕರಣವನ್ನಲ್ಲ. ಇದನ್ನು ಹಲವಾರು ರಾಜ್ಯ ಸರಕಾರಗಳು ಸ್ಪಷ್ಟವಾಗಿ ತಮ್ಮ ಗಮನಕ್ಕೆ ತಂದಿದ್ದವು. ಆದರೂ ವ್ಯಾಕ್ಸಿನ್‌ಗಳ ಸಂಗ್ರಹ ಹಾಗೂ ವಿತರಣೆಯ ಎಲ್ಲಾ ಹೊಣೆಗಾರಿಕೆಯನ್ನು ರಾಜ್ಯಗಳಿಗೆ ವರ್ಗಾಯಿಸಿ ಕೈತೊಳೆದುಕೊಂಡಿರಿ. ಆದರೆ ವ್ಯಾಕ್ಸಿನ್ ಉತ್ಪಾದನೆಗಾಗಿಯೆಂದೇ ಕೇಂದ್ರ ಬಜೆಟ್ಟಿನಲ್ಲಿ ಎತ್ತಿಡಲಾಗಿದ್ದ 35,000 ಕೋಟಿಯಲ್ಲಿ ಒಂದು ಪೈಸೆಯನ್ನು ರಾಜ್ಯಗಳ ಜೊತೆ ಹಂಚಿಕೊಳ್ಳದಿದ್ದುದೇಕೆ?

ಆದರೆ ಇದು ವ್ಯಾಕ್ಸಿನ್ ಅಭಾವದಿಂದ ಸೃಷ್ಟಿಯಾಗುತ್ತಿದ್ದ ಸರಕಾರ ವಿರೋಧಿ ಮನೋಭಾವವನ್ನು ಕೇಂದ್ರದ ಬದಲು ರಾಜ್ಯ ಸರಕಾರಗಳ ವಿರುದ್ಧ ತಿರುಗಿಸುವ ವ್ಯವಸ್ಥಿತ ಕುತಂತ್ರವಾಗಿರಲಿಲ್ಲವೇ? ಈಗಲಾದರೂ ಅದನ್ನು ವಿನಮ್ರತೆಯಿಂದ ತಿದ್ದುಕೊಳ್ಳುತ್ತಿದ್ದೇವೆ ಎಂದು ಹೇಳಲಿಲ್ಲ.. ಬದಲಿಗೆ, ರಾಜ್ಯ ಸರಕಾರಗಳು ವಿಫಲವಾದದ್ದರಿಂದ ಕೇಂದ್ರವು ಜನರ ರಕ್ಷಣೆಗೆ ಧಾವಿಸುತ್ತಿದೆ ಎಂಬಂತೆ ಚಿತ್ರಿಸುತ್ತಾ ಸಾವಿನಲ್ಲೂ ಸಂಕಷ್ಟದಲ್ಲೂ ರಾಜ್ಯಗಳನ್ನು ವಿಲನ್ ಮಾಡುವ ಕ್ಷುದ್ರ ರಾಜಕಾರಣ ಮಾಡುತ್ತಿರುವುದನ್ನು ಏನೆಂದು ಕರೆಯಬೇಕು?

ಪ್ರಶ್ನೆ 3: ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆಗಳು ಭಾರತದ ದೇಸೀ (ಆತ್ಮನಿರ್ಭರ) ವ್ಯಾಕ್ಸಿನ್‌ಗಳೆಂಬುದು ಸುಳ್ಳಲ್ಲವೇ? 

ಕೋವಿಡ್ ನಿರ್ವಹಣೆಯಲ್ಲಿ ತಮ್ಮ ಸರಕಾರದ ಘೋರ ವೈಫಲ್ಯವನ್ನು ಮುಚ್ಚಿಕೊಳ್ಳಲು ಹಲವು ಸುಳ್ಳುಗಳನ್ನು ಹೇಳಲು ತಾವು ತಮ್ಮ ಭಾಷಣದ ಬಹು ಭಾಗವನ್ನು ವ್ಯಯಿಸಿದಿರಿ. ಅದರ ಭಾಗವಾಗಿ ತಮ್ಮ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಲಸಿಕೆಯಲ್ಲಿ ಆತ್ಮ ನಿರ್ಭರತೆಯನ್ನು ಸಾಧಿಸಿದ್ದರಿಂದಲೇ ಇಂದು ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಎಂಬ ಎರಡು ದೇಸೀಯ ಲಸಿಕೆಗಳಿವೆ ಎಂದು ಹೇಳಿದಿರಿ..
ಆದರೆ, ಪ್ರಧಾನಿಗಳೇ,

ಕೋವಿಶೀಲ್ಡ್ ಲಸಿಕೆಯು ಇಂಗ್ಲೆಂಡಿನ ಆ್ಯಸ್ಟ್ರಝೆನೆಕ ಸಂಸ್ಥೆಯು ಅಲ್ಲಿನ ಆಕ್ಸ್‌ಫರ್ಡ್ ಯೂನಿವರ್ಸಿಟಿಯ ಸಹಯೋಗದೊಂದಿಗೆ ಕಂಡು ಹಿಡಿದ ವ್ಯಾಕ್ಸಿನ್ ಹೊರತು ಭಾರತದ್ದಲ್ಲ ಅಲ್ಲವೇ? ಆ್ಯಸ್ಟ್ರಝೆನೆಕ ಸಂಸ್ಥೆ ಭಾರತದ ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (SII) ಗುತ್ತಿಗೆ ಒಪ್ಪಂದ ಮಾಡಿಕೊಂಡಿರುವುದಷ್ಟೇ...ಅಲ್ಲವೇ? ಕೋವ್ಯಾಕ್ಸಿನ್ ಉತ್ಪಾದಿಸುವ ಭಾರತ್ ಬಯೋಟೆಕ್ ಈ ವರೆಗೆ ಉತ್ಪಾದಿಸಿರುವ ಎಲ್ಲಾ ವ್ಯಾಕ್ಸಿನ್‌ಗಳಿಗೂ ಅಮೆರಿಕದ ಮೆಲಿಂದಾ ಗೇಟ್ಸ್ ಸಂಸ್ಥೆಯ ಹಣಕಾಸು ಮತ್ತು ಪರಿಜ್ಞಾನದ ಸರಬರಾಜಿಲ್ಲವೇ? ಹಾಗೂ ಇಲ್ಲಿಯವರೆಗೂ ಕೋವ್ಯಾಕ್ಸಿನ್‌ಗೆ WHO ಇಂದ ಅನುಮತಿ ಪಡೆದುಕೊಳ್ಳುವ ಪ್ರಯತ್ನವನ್ನೇ ಮಾಡದಿರಲು ಕಾರಣ ಅದರ ಮೂರನೇ ಟ್ರಯಲ್ ಫಲಿತಾಂಶಗಳು ಅಧಿಕೃತವಾಗಿ ಹೊರಬಂದದ್ದೇ ಇತ್ತೀಚೆಗೆ ಎಂಬುದಲ್ಲವೇ? ಆದರೆ ಅದಕ್ಕೆ ಮುಂಚೆಯೇ ಭಾರತದ ಜನರ ಮೇಲೆ ಕೋವ್ಯಾಕ್ಸಿನ್ ಬಳಕೆ ಪ್ರಾರಂಭಿಸಲು ನಿಮ್ಮ ಸರಕಾರ ಅನುಮತಿ ನೀಡಲು ಕಾರಣ ಒಂದು ಬಗೆಯ ಆತ್ಮಬರ್ಬರ ರಾಜಕಾರಣವೇ ಅಲ್ಲವೇ?

 ಪ್ರಶ್ನೆ 4: 2014ಕ್ಕೆ ಮುಂಚೆ ದೇಶದಲ್ಲಿ ಲಸಿಕೀಕರಣದ ಪ್ರಮಾಣ ಕೇವಲ ಶೇ. 60ರಷ್ಟಿದ್ದದ್ದು, ತಾವು ಅಧಿಕಾರಕ್ಕೆ ಬಂದ ಮೇಲೆ ಇಂದ್ರಧನುಷ್ ಯೋಜನೆಯ ಭಾಗವಾಗಿ ಶೇ. 90ರಷ್ಟು ಲಸಿಕೀಕರಣ ಸಾಧಿಸಿದ್ದಾಗಿ ಹೇಳಿದಿರಿ. ಇದು ಸುಳ್ಳಲ್ಲವೇ? 
ವಾಸ್ತವದಲ್ಲಿ ತಾವು ಅಧಿಕಾರಕ್ಕೆ ಬರುವ ಬಹಳ ಮುಂಚೆಯೇ ಭಾರತವು ಬಿಸಿಜಿ, ಸಿಡುಬು, ಪೋಲಿಯೊ ಇನ್ನಿತರ ವ್ಯಾಕ್ಸಿನ್‌ಗಳಲ್ಲಿ ಪರಿಪೂರ್ಣತೆಯನ್ನು ಸಾಧಿಸಿತ್ತು. ಇತರ 13ಕ್ಕೂ ಹೆಚ್ಚು ವ್ಯಾಧಿಗಳ ನಿಗ್ರಹಕ್ಕಾಗಿ 13ಕ್ಕೂ ಹೆಚ್ಚು ವ್ಯಾಕ್ಸಿನ್‌ಅಭಿಯಾನ ಯೋಜನೆಗಳು ಜಾರಿಯಲ್ಲಿದ್ದವು. ಅವುಗಳಲ್ಲಿ ಹಲವಕ್ಕೆ ವ್ಯಾಕ್ಸಿನ್ ಕಂಡು ಹಿಡಿದದ್ದು 1977ರ ನಂತರದಲ್ಲಿ. ಹೀಗಾಗಿ ಹಲವು ವ್ಯಾಕ್ಸಿನ್‌ಗಳ ಜಾರಿ ಗತಿಯನ್ನು ಸ್ವಾತಂತ್ರ್ಯ ಬಂದಾಗಿನಿಂದ ಲೆಕ್ಕ ಹಾಕಬಾರದು. ಮೇಲಾಗಿ ತಮ್ಮದೇ ಸರಕಾರದ ವರದಿಗಳು ಹೇಳುವಂತೆ 2004-14ರ ನಡುವೆ ದೇಶದಲ್ಲಿ ಲಸಿಕೀಕರಣದ ಗತಿ ಶೇ. 43.65ರಿಂದ 63.45ಕ್ಕೆ ಜಿಗಿತ ಸಾಧಿಸಿತ್ತು. ಆದರೆ ಅದು ಸಾಲದಾಗಿತ್ತು. ಯುಪಿಎ ಸರಕಾರ, ಅದರ ಹಿಂದಿನ ವಾಜಪೇಯಿ ಸರಕಾರ, ಕಾಂಗ್ರೆಸ್ ಸರಕಾರಗಳೆಲ್ಲವೂ ಆರೋಗ್ಯ ಸೌಕರ್ಯಕ್ಕೆ ಕೊಡಬೇಕಾದಷ್ಟು ಒತ್ತನ್ನು ಕೊಡಲಿಲ್ಲ. ಅಷ್ಟರ ಮಟ್ಟಿಗೆ ನಿಜ. (http://www.nhm.gov.in/index1.php?lang=1&level=2&sublinkid=824&lid=220)

ಆದರೆ ತಮ್ಮ ಸರಕಾರ ಮಾಡಿದ್ದೇನು? ತಮ್ಮ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಇಂದ್ರಧನುಷ್ ಯೋಜನೆಯ ಮೂಲಕ ಲಸಿಕೀಕರಣದ ಪ್ರಮಾಣವನ್ನು ಶೇ. 90ರಷ್ಟಕ್ಕೆ ಹೆಚ್ಚಿಸುವ ಉದ್ದೇಶವನ್ನು ಘೋಷಿಸಿದ್ದೀರಿ. ಆದರೆ ನೀವು ಕೊಚ್ಚಿಕೊಂಡಂತೆ ಅದನ್ನು ಸಾಧಿಸಲಾಯಿತೇ?

ತಮ್ಮ ಸರಕಾರದ ವರದಿಗಳ ಪ್ರಕಾರವೇ ತಮ್ಮ ಅಧಿಕಾರಾವಧಿಯಲ್ಲಿ 2017-19ರಲ್ಲಿ ಶೇ. 6.5ರಷ್ಟು ಹೆಚ್ಚುವರಿ ಬೆಳವಣಿಗೆಯಾಗಿತ್ತು. ಆದರೆ ಅದು 2019ರ ಚುನಾವಣಾ ತಯಾರಿಯೂ ಆಗಿತ್ತು. ಏಕೆಂದರೆ 2019ರ ಚುನಾವಣೆಗೆ ಮುನ್ನ ರಾಜ್ಯ ಸರಕಾರಗಳನ್ನು ಬದಿಗೆ ಸರಿಸಿ ಸುಮಾರು 118 ಜಿಲ್ಲೆಗಳಲ್ಲಿ ‘ಮೋದಿ ಯೋಜನೆ’ ಜಾರಿ ಮಾಡಿದಿರಿ. ಅಲ್ಲೆಲ್ಲಾ ನಿಮ್ಮ ಪಕ್ಷವೇ ಗೆದ್ದಿತ್ತು. ಆದರೆ ಚುನಾವಣೆಯ ನಂತರ ಆ ಯೋಜನೆಗಳಿಗೆ ಬಜೆಟ್‌ನಲ್ಲಿ ಹಣವೇ ಖೋತಾ ಮಾಡಿದಿರಿ. ಇದನ್ನು 2020ರ ರಾಜ್ಯಸಭೆಯ ಸದನ ಸಮಿತಿ ವರದಿಯೇ ಸ್ಪಷ್ಟವಾಗಿ ಹೇಳಿದೆ. (https://rajyasabha.nic.in/rsnew/Committee_site/Committee_File/ReportFile/14/121/118_2020_3_15.pdf)

  ಪ್ರಶ್ನೆ 5: ಲಸಿಕೆಯ ಬಗ್ಗೆ ಜನರಲ್ಲಿ ವಿಶ್ವಾಸವನ್ನು ತುಂಬಿ-ಅಪನಂಬಿಕೆಯನ್ನು ಬಿತ್ತಬೇಡಿ ಎಂದು ಕರೆ ನೀಡಿದ್ದೀರಿ.. 

 ಒಳ್ಳೆಯದು.. ಹಾಗಿದ್ದಲ್ಲಿ... -ಲಸಿಕೆಯ ಬಗ್ಗೆ ಹಾಗೂ ಲಸಿಕಾ ವಿಜ್ಞಾನದ ಬಗ್ಗೆ ನಿರಂತರವಾಗಿ ಅಪನಂಬಿಕೆ ಬಿತ್ತುತ್ತಿರುವ ನಿಮ್ಮ ಯೋಗರಾಯಭಾರಿ ಬಾಬಾ ರಾಮ್‌ದೇವ್...

- ಕೋವಿಡ್ ಎಂಬುದು ಒಂದು ಸಾಂಕ್ರಾಮಿಕವೇ ಅಲ್ಲ- ಅದು ಭಾರತದ ವಿರುದ್ಧ ಪಾಕಿಸ್ತಾನದ ಶಡ್ಯಂತ್ರ ಎಂದೂ, ಯಾರೂ ಲಸಿಕೆ ತೆಗೆದುಕೊಳ್ಳುವ ಅಗತ್ಯವಿಲ್ಲವೆಂದೂ ದಿನಬೆಳಗಾದರೆ ಪ್ರಚಾರ ಮಾಡುವ ನಿಮ್ಮ ಅಚ್ಚುಮೆಚ್ಚಿನ ಸುದರ್ಶನ್ ಚಾನೆಲ್ ಮತ್ತು ಇನ್ನಿತರ ಬುರುಡೆ ಚಾನೆಲ್‌ಗಳು.. -ಕೋವಿಡ್‌ನಿಂದ ಪಾರಾಗಲು ಲಸಿಕೆ ಬೇಕಿಲ್ಲ -ಗಂಜಲ ಸಾಕು ಎಂದು ಪ್ರಚಾರ ಮಾಡುತ್ತಿರುವ ನಿಮ್ಮ ಪಕ್ಷದ ಸಂಸದೆ ಪ್ರಜ್ಞಾ ಸಿಂಗ್ ಹಾಗೂ ಇನ್ನಿತರರ ಬಗ್ಗೆ ಏನು ಕ್ರಮ ಕೈಗೊಳ್ಳುವಿರಿ?

 -ಹಾಗೆಯೇ ದೀಪ ಹಚ್ಚಿದರೆ ಹಾಗೂ ಜಾಗಟೆ ಬಡಿದರೆ ಕೊರೋನ ಓಡಿಹೋಗುತ್ತದೆ ಎಂದು ದೇಶವನ್ನು ಜಗತ್ತಿನ ಜನರೆದುರು ಅವಮಾನಕ್ಕೀಡು ಮಾಡಿದವರ ಮೇಲೆ, ಕುಂಭಮೇಳ ಹಾಗೂ ಚುನಾವಣಾ ರ್ಯಾಲಿಗಳಲ್ಲಿ ಜನ ಲಕ್ಷಾಂತರ ಸಂಖ್ಯೆಯಲ್ಲಿ ಒಟ್ಟಾಗಿ ಸೇರಿದರೂ ದೇವರ ದಯೆ ಇರುವುದರಿಂದ ಕೊರೋನ ತಗಲುವುದಿಲ್ಲ ಎಂದು ಪ್ರಚಾರ ಮಾಡಿದ ನಾಯಕರ ಮೇಲೆ ಯಾವ ಕ್ರಮ?

ಇವರ ಮೇಲೆ ಕ್ರಮ ತೆಗೆದುಕೊಳ್ಳದಿದ್ದಲ್ಲಿ ನಿಮ್ಮ ಭಾಷಣದ ಗುರಿ ಕೋವ್ಯಾಕ್ಸಿನ್ ಅಂತಹ ಪ್ರಯೋಗ ಫಲಿತಾಂಶ ದೊರೆಯದ ವ್ಯಾಕ್ಸಿನ್‌ಗಳ ಬಗ್ಗೆ ಸಕಾರಣ ವೈಜ್ಞಾನಿಕ ಸಂದೇಹ ವ್ಯಕ್ತಪಡಿಸಿದ ವಿಜ್ಞಾನಿಗಳು, ಪರಿಣಿತರು ಹಾಗೂ ವಿರೋಧ ಪಕ್ಷಗಳೇ ಹೊರತು ತಾವು ಹಾಗೂ ತಮ್ಮ ಸ್ನೇಹಿತರು ವ್ಯವಸ್ಥಿತವಾಗಿ ಬಿತ್ತಿದ ಮೌಢ್ಯವಲ್ಲ ಎಂದಾಗುವುದಿಲ್ಲವೇ? ಇದು ಕ್ಷುದ್ರ ರಾಜಕಾರಣವೇ ಅಲ್ಲವೇ?

ಪ್ರಶ್ನೆ 6: ಈಗಲೂ ಕಂಪೆನಿಗಳು ಉತ್ಪಾದಿಸುವ ಶೇ. 25ರಷ್ಟು ಲಸಿಕೆಗಳನ್ನು ಖಾಸಗಿ ಆಸ್ಪತ್ರೆಗಳು ಕೊಳ್ಳಬಹುದೆಂದು ಅನುಮತಿ ನೀಡುತ್ತಿದ್ದೀರ..ಇದರಿಂದ ಮತ್ತೆ ದುಡ್ಡಿದ್ದವರಿಗೇ ಮೊದಲ ಆದ್ಯತೆಯಲ್ಲಿ ಲಸಿಕೆ ಸಿಗುತ್ತದೆಯೇ ವಿನಾ ಅಗತ್ಯವಿದ್ದವರಿಗಲ್ಲ. ಅಲ್ಲವೇ?  

ರಾಜ್ಯ ಸರಕಾರಗಳ ಒತ್ತಡದಿಂದಾಗಿ ಲಸಿಕಾ ನೀತಿಯನ್ನು ಬದಲಿಸಿ ರಾಜ್ಯಗಳಿಗೆ ನೇರ ಖರೀದಿಗೆ ಅವಕಾಶಕೊಡಬೇಕಾಯಿತು ಎಂಬ ನಿಮ್ಮ ತರ್ಕವನ್ನು ಒಪ್ಪುವುದಾದರೆ ಉತ್ಪಾದನೆಯಾಗುವ ಲಸಿಕೆಯಲ್ಲಿ ಶೇ. 50ರಷ್ಟು ಕೇಂದ್ರ ಸರಕಾರ ಮತ್ತು ಶೇ. 50 ರಾಜ್ಯ ಸರಕಾರ ಕೊಳ್ಳಬೇಕು ಎಂದು ಹಂಚಿಕೊಳ್ಳಬೇಕಿತ್ತಲ್ಲವೇ? ಹಾಗೆ ಮಾಡದೆ, ರಾಜ್ಯಗಳ ಇಚ್ಛೆಗೆ ವಿರುದ್ಧವಾಗಿ, ಶೇ. 25ರಷ್ಟು ಮಾತ್ರ ರಾಜ್ಯ ಸರಕಾರ ಹಾಗೂ ಶೇ. 25ರಷ್ಟು ಖಾಸಗಿ ಆಸ್ಪತ್ರೆಗಳು ಎಂದು ಮಾಡಿದ್ದರಲ್ಲಿ ಯಾವ ಘನ ಉದ್ದೇಶವಿತ್ತು ಪ್ರಧಾನಿಗಳೇ? ನಿಮ್ಮ ಈ ನೀತಿಯಿಂದಾಗಿ, ಲಸಿಕೆ ಕಂಪೆನಿಗಳು ಅಧಿಕ ಬೆಲೆ ನೀಡಬಲ್ಲ ಇಂತಹ ಖಾಸಗಿ ಕಾರ್ಪೊರೇಟ್ ಆಸ್ಪತ್ರೆಗಳಿಗೆ ಆದ್ಯತೆಯಲ್ಲಿ ಲಸಿಕೆಯನ್ನು ಮಾರುತ್ತಿವೆ. ಅವು ಉತ್ಪಾದಿಸಿರುವ ಹಲವು ಕೋಟಿ ವ್ಯಾಕ್ಸಿನ್‌ಗಳು ಈಗಾಗಲೇ..ಅಪೋಲೋ, ತಮ್ಮ ಆಪ್ತ ಮಿತ್ರ ಅಂಬಾನಿ ಪ್ರಾಯೋಜಿತ ಆಸ್ಪತ್ರೆ, ನಿಮ್ಮ ಬ್ಲೂ ಐಯ್ಡೆ ಬಾಯ್ ದೇವಿಶೆಟ್ಟಿಯ ನಾರಾಯಣ ಹೃದಯಾಲಯದಂತಹ ದೇಶದ ಒಂಭತ್ತು ಬೃಹತ್ ಖಾಸಗಿ ಆಸ್ಪತ್ರೆಗಳಲ್ಲಿ ದಾಸ್ತಾನಾಗಿವೆ. ಇದರಿಂದ ಕಂಪೆನಿಗಳು ಲಸಿಕೆ ಉತ್ಪಾದಿಸಿದರೂ ಅತ್ಯಗತ್ಯವಾಗಿರುವ ಬಡಜನರಿಗೆ ನಿಮ್ಮ ಈ ಕಾರ್ಪೊರೇಟ್ ಪರ ನೀತಿಯಿಂದಾಗಿಯೇ ಲಸಿಕೆಗಳು ಸಿಗುತ್ತಿಲ್ಲ. ಇವೆಲ್ಲ ಗೊತ್ತಿದ್ದರೂ ಮತ್ತೆ ಶೇ. 25ರಷ್ಟು ದಾಸ್ತಾನು ಮಾಡಿಕೊಳ್ಳಲು ಖಾಸಗಿ ಕಾರ್ಪೊರೇಟ್ ಆಸ್ಪತ್ರೆಗಳಿಗೆ ಅವಕಾಶ ನೀಡುತ್ತಿರಲು ತಮ್ಮ ಕಾರ್ಪೊರೇಟ್ ನಿಷ್ಠೆಯೇ ಕಾರಣವಲ್ಲವೇ??

ಚುನಾವಣಾ ಕಾಳಜಿ, ಸುಪ್ರೀಂಕೋರ್ಟು ಧಮಕಿ  

ಹೀಗಾಗಿ ಪ್ರಧಾನಿಗಳೇ... ನಿಮ್ಮ ಭಾಷಣ... ದೇಶವನ್ನು ಮತ್ತು ಜನರನ್ನು ಕೋವಿಡ್‌ನಿಂದ ಬಚಾವು ಮಾಡಲು ಯಾವುದೇ ನೈಜ ಕ್ರಮಗಳನ್ನೂ ತೆಗೆದುಕೊಳ್ಳದ, ಕೇವಲ ರಾಜಕೀಯ ಅನಿವಾರ್ಯದಿಂದ ಮಾಡಿದ ವಂಚನೆಯ ಭಾಷಣವಾಗಿತ್ತು... ನೀವು ಈ ಉದ್ರಿ ಭರವಸೆಗಳನ್ನು ಘೋಷಿಸಲೇ ಬೇಕಾದ ಅನಿವಾರ್ಯತೆಯಿತ್ತು. ಅವು: -ಕೋವಿಡ್ ನಿರ್ವಹಣೆಯಲ್ಲಿನ ವೈಫಲ್ಯದಿಂದಾಗಿ ಚುನಾವಣೆ ನಡೆಯಲಿರುವ ಉತ್ತರ ಪ್ರದೇಶದಲ್ಲಿ ಕುಸಿಯುತ್ತಿರುವ ನಿಮ್ಮ ಹಾಗೂ ಬಿಜೆಪಿಯ ಜನಪ್ರಿಯತೆ ಮತ್ತು ಚುನಾವಣೆಗೆ ಮುಂಚೆ ತಮ್ಮ ಹಾಗೂ ಬಿಜೆಪಿಯ ಜನಪ್ರಿಯತೆಗಳನ್ನು ಹೆಚ್ಚಿಸಿಕೊಳ್ಳಲು ಇತ್ತೀಚೆಗೆ ತಾವು, ತಮ್ಮ ಪಕ್ಷದ ಹಿರಿಯ ಮುಖಂಡರು ಹಾಗು ಆರೆಸ್ಸೆಸ್‌ನ ಮುಖ್ಯಸ್ಥರು ನಡೆಸಿದ ಚಿಂತನ ಮಂಥನ..ಹೀಗಾಗಿ ನಿಮ್ಮ ಭಾಷಣದಲ್ಲಿ ಘೋಷಿಸಿರುವ ಅಲ್ಪಸ್ವಲ್ಪಪರಿಹಾರಗಳು ಸಹ ಉತ್ತರ ಪ್ರದೇಶಕ್ಕೆ ಲಾಭವಾಗುವುದೇ ವಿನಾ ಇತರ ರಾಜ್ಯಗಳಿಗಲ್ಲ ಎಂಬ ಬಗ್ಗೆ ಈ ದೇಶದ ಯಾರಿಗೂ ಸಂದೇಹವಿಲ್ಲ... -ಎರಡನೆಯದಾಗಿ ಐದು ರಾಜ್ಯಗಳಲ್ಲಿ ಬಿಜೆಪಿ ಪಕ್ಷದ ನಿರೀಕ್ಷೆಗೆ ತಕ್ಕನಾಗಿರದ ಫಲಿತಾಂಶ..ಹಾಗೂ..

-ಬೋಬ್ಡೆಯವರ ನಂತರದ ಸುಪ್ರೀಂ ಕೋರ್ಟ್ ಸದ್ಯಕ್ಕೆ ನಿಮ್ಮ ಆಜ್ಞಾನುವರ್ತಿಯಾಗಿರದಿರುವುದರಿಂದ ಸೃಷ್ಟಿಯಾಗಿರುವ ಇಕ್ಕಟ್ಟು ... ಈ ಅನಿವಾರ್ಯಗಳು ನಿಮ್ಮ ಭಾಷಣಕ್ಕೆ ಕಾರಣವೇ ವಿನಾ ಜನರ ಬಗ್ಗೆ ಕಾಳಜಿಯಲ್ಲ...ಇದು ಈ ದೇಶದ ದೌರ್ಭಾಗ್ಯ ..

ಈಗಲಾದರೂ, ಇಷ್ಟಾದರೂ ಮಾಡುವಿರಾ?
ಈಗಲಾದರೂ ಈ ದೇಶ ಕೋವಿಡ್ ಮುಕ್ತವಾಗಬೇಕೆಂದರೆ ನೀವು ಮಾಡಬೇಕಿರುವುದು:

1. ಕೋವಿಡ್ ನಿರ್ವಹಣೆಗಾಗಿ ಒಂದು ಪ್ರಾತಿನಿಧಿಕ ಹಾಗೂ ಸರ್ವಪ್ರತಿನಿಧಿಗಳನ್ನೊಳಗೊಂಡ ಪ್ರಾಧಿಕಾರ ಸ್ಥಾಪನೆಯಾಗಬೇಕು. ಸರಕಾರದ ಕೋವಿಡ್ ಕ್ರಮಗಳು ಈ ಪ್ರಾಧಿಕಾರದ ಸರ್ವ ಸಮ್ಮತಿಯೊಂದಿಗೆ ನಡೆಯುವಂತಾಗಬೇಕು.

2. ಕೋವಿಡ್ ಆಪತ್ ನಿಧಿಯೊಂದನ್ನು ಸ್ಥಾಪಿಸಬೇಕು. ಲಸಿಕೆ, ಇತರ ಮೂಲಭೂತ ಸೌಕರ್ಯಗಳಿಗಾಗಿ ಬೇಕಾಗುವ ಮೊತ್ತವನ್ನು ಈ ದೇಶದ ಅತಿ ಶ್ರೀಮಂತರ ಮೇಲೆ ಶೇ. 2ರಷ್ಟು ಕೋವಿಡ್ ಸೆಸ್ ಹಾಕುವ ಮೂಲಕ, ಶೇ. 2ರಷ್ಟು ಹೆಚ್ಚುವರಿ ಕಾರ್ಪೊರೇಟ್ ಸೆಸ್ ವಿಧಿಸುವ ಮೂಲಕ ಹಾಗೂ ಅನಗತ್ಯ ವೆಚ್ಚಗಳನ್ನು ಕಡಿತ ಮಾಡುವ ಮೂಲಕ ಸಂಗ್ರಹಿಸಬೇಕು. ಅದರ ವೆಚ್ಚದ ನಿರ್ವಹಣೆಯನ್ನು ಸರ್ವಪಕ್ಷ ಪ್ರಾಧಿಕಾರವೇ ಮಾಡಬೇಕು. ಮತ್ತವು ಆರ್‌ಟಿಐ ಹಾಗೂ ಸಿಎಜಿಗಳ ವ್ಯಾಪ್ತಿಯಲ್ಲಿರಬೇಕು.

3. ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ತಯಾರಿಕೆಯ ಮೇಲಿನ ಯಜಮಾನಿಕೆಯನ್ನು ಕಂಪೆನಿಗಳಿಂದ ಸರಕಾರವೇ ಕಸಿದುಕೊಂಡು ದೇಶಾದ್ಯಂತ ಲಸಿಕೆ ತಯಾರಿಕಾ ಸಾಮರ್ಥ್ಯವಿರುವ ಎಲ್ಲಾ ಸರಕಾರಿ ಹಾಗೂ ಖಾಸಗಿ ಸಂಸ್ಥೆಗಳಿಗೂ ಪರವಾನಿಗೆ ಕೊಡಬೇಕು. ಜೊತೆಗೆ ಈ ಎರಡೂ ಕಂಪೆನಿಗಳು ತಮ್ಮ ಉತ್ಪಾದನಾ ಸಾಮರ್ಥ್ಯವನ್ನು ಸತತವಾಗಿ ಹೆಚ್ಚಿಸಿಕೊಳ್ಳುವಂತೆ ನಿಗಾ ಇಟ್ಟಿರಬೇಕು.

4. ವ್ಯಾಕ್ಸಿನ್ ಕಂಪೆನಿಗಳು ಉತ್ಪಾದಿಸುವ ಶೇ. 100ರಷ್ಟು ವ್ಯಾಕ್ಸಿನ್‌ಗಳನ್ನೂ ಸರಕಾರವೇ ಖರೀದಿಸಬೇಕು ಮತ್ತು ಆದ್ಯತೆಯ ಮೇಲೆ ಅತ್ಯಗತ್ಯವಿರುವವರಿಗೆ ಹಂಚುವ ಏರ್ಪಾಡಾಗಬೇಕು. ಅದರ ವಿತರಣೆಯಲ್ಲಿ ರಾಜ್ಯ ಸರಕಾರಗಳನ್ನೂ, ರಾಜ್ಯ ಸರಕಾರಗಳು ಸ್ಥಳೀಯ ಸಂಸ್ಥೆಗಳನ್ನೂ ಒಳಗೊಳ್ಳಬೇಕು.

5. ವಿದೇಶಿ ವ್ಯಾಕ್ಸಿನ್‌ಗಳು ಮತ್ತು ಹೊಸ ವ್ಯಾಕ್ಸಿನ್‌ಗಳು ಬ್ರಿಡ್ಜ್ ಟ್ರಯಲ್ ಗಳನ್ನೂ ತುರ್ತಾಗಿ ಪೂರೈಸಲು ಕ್ರಮಗಳನ್ನು ತೆಗೆದುಕೊಳ್ಳಬೇಕು.

6. ಲಸಿಕೆ ಹಾಗೂ ವೈದ್ಯ ವಿಜ್ಞಾನದ ವಿರುದ್ಧ ರಾಜಕೀಯ ದುರುದ್ದೇಶದಿಂದ ಪ್ರಚಾರ ಮಾಡುತ್ತಿರುವ ಬಾಬಾ ರಾಮ್‌ದೇವ್ ಆದಿಯಾಗಿ ನಿಮ್ಮ ಪಕ್ಷದ ಎಲ್ಲರ ಮೇಲೂ ನಿರ್ದಾಕ್ಷಿಣ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಇಷ್ಟಾದರೂ ಮಾಡುವಿರಾ ಪ್ರಧಾನಿಗಳೇ?

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)