ಎಲ್ಲ ಗದ್ದಲಗಳ ನಡುವೆ ʼಪ್ರಮುಖ ಸಂದೇಶವೊಂದುʼ ಕಳೆದುಹೋಯಿತು: 5ಜಿ ಅರ್ಜಿಯ ಕುರಿತಾದಂತೆ ಜೂಹಿ ಚಾವ್ಲಾ ಹೇಳಿಕೆ
ಹೊಸದಿಲ್ಲಿ: ದೇಶದಲ್ಲಿ 5ಜಿ ನೆಟ್ ವರ್ಕ್ ಪ್ರಾರಂಭಿಸುವುದರ ವಿರುದ್ಧ ಜೂಹಿ ಚಾವ್ಲಾ ಸಲ್ಲಿಸಿದ್ದ ಅರ್ಜಿಯನ್ನು ದಿಲ್ಲಿ ನ್ಯಾಯಾಲಯ ವಜಾಗೊಳಿಸಿದ ಬಳಿಕ ತಾನೇಕೆ ಅರ್ಜಿ ಸಲ್ಲಿದ್ದೆ ಎಂದು ನಟಿ ಜೂಹಿ ಚಾವ್ಲಾ ವೀಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಅವರ ಅರ್ಜಿಯನ್ನು ವಜಾ ಮಾಡಿದ್ದ ನ್ಯಾಯಾಲಯ, ʼಪ್ರಚಾರಕ್ಕಾಗಿʼ ಅರ್ಜಿ ಹಾಕಲಾಗಿತ್ತು ಎಂದು ೨೦ ಲಕ್ಷ ರೂ. ದಂಡ ಪಾವತಿಸುವಂತೆ ತಿಳಿಸಿತ್ತು.
"ಕಳೆದ ಕೆಲವು ದಿನಗಳಲ್ಲಿ ನನ್ನ ಶಬ್ಧ ನನಗೇ ಕೇಳಿಸಲಾಗದಷ್ಟು ಗದ್ದಲಗಳಿತ್ತು. ಈ ಗದ್ದಲಗಳ ನಡುವೆ ಮುಖ್ಯವಾದ ದ ಸಂದೇಶವೊಂದು ಕಳೆದು ಹೋಗಿದೆ." ಎಂದು ಅವರು ಇನ್ ಸ್ಟಾಗ್ರಾಮ್ ನಲ್ಲಿ ಪ್ರಕಟಿಸಿದ ವೀಡಿಯೋದಲ್ಲಿ ತಿಳಿಸಿದ್ದಾರೆ. "ನಾನು ೫ಜಿ ವಿರುದ್ಧವಾಗಿಲ್ಲ. ವಾಸ್ತವವಾಗಿ ನಾನು ಅದನ್ನು ಸ್ವಾಗತಿಸುತ್ತಿದ್ದೇನೆ ಆದರೆ ೫ಜಿಯನ್ನು ಸುರಕ್ಷಿಇತ ಎಂದು ಪ್ರಮಾಣಿಸಬೇಕಾಗಿ ನಾನು ಅಧಿಕಾರಿಗಳೊಂದಿಗೆ ಕೇಳಿಕೊಳ್ಳುತ್ತಿದ್ದೇನೆ" ಎಂದು ಹೇಳಿದ್ದಾರೆ.
ಜೂಹಿ ಚಾವ್ಲ, ವೀರೇಶ್ ಮಲಿಕ್ ಹಾಗೂ ಟೀನಾ ವಚಾನಿ ಅವರು ಹೂಡಿದ್ದ ಮೊಕದ್ದಮೆಯಲ್ಲಿ, ೫ಜಿ ನೆಟ್ ವರ್ಕ್ ನ ವಿಕಿರಣಗಳಿಂದ ಪರಿಸರಕ್ಕೆ, ಮಾನವರಿಗೆ, ಪಕ್ಷಿ ಕೀಟಗಳಿಗೆ ಹಾನಿಯಾಗುತ್ತದೆ. ದಿನದ ೨೪ ಗಂಟೆಗಳು ಮತ್ತು ೩೬೫ ದಿನಗಳೂ ನಾವು ನಮ್ಮನ್ನು ಈ ವಿಕಿರಣಗಳಿಗೆ ಒಡ್ಡಬೇಕಾಗುತ್ತದೆ" ಎಂದು ಉಲ್ಲೇಖಿಸಲಾಗಿತ್ತು.
"ನಾವು ಕೇಳುತ್ತಿರುವುದು, ನೀವಿದನ್ನು ಪ್ರಮಾಣಿಸಬೇಕು ಎಂದಾಗಿದೆ. ಅಧ್ಯಯನಗಳು ಮತ್ತು ಸಂಶೋಧನೆಗಳನ್ನು ಸಾರ್ವಜನಿಕ ಕ್ಷೇತ್ರದಲ್ಲಿ ಪ್ರಕಟಿಸುವುದರಿಂದ ನಮ್ಮಲ್ಲಿರುವ ಭಯ ದೂರವಾಗುತ್ತದೆ. ಇದರಿಂದ ನಾವೆಲ್ಲರೂ ಶಾಂತಿಯಿಂದ ಮಲಗಬಹುದು. ಇದು ಮಕ್ಕಳಿಗೆ ಸುರಕ್ಷಿತವಾಗಿದೆ ಎಂದು ನಾವು ತಿಳಿದುಕೊಳ್ಳಲು ಬಯಸುತ್ತೇವೆ, ಗರ್ಭಿಣಿ ಮಹಿಳೆಯರಿಗಾಗಿ, ಹುಟ್ಟಲಿರುವ ಮಕ್ಕಳಿಗಾಗಿ, ವಯಸ್ಸಾದ ಜನರಿಗೆ, ಸಸ್ಯ, ಪ್ರಾಣಿಗಳಿಗಾಗಿ ... ನಾವು ಕೇಳುತ್ತಿರುವುದು ಅಷ್ಟೆ" ಎಂದು ವೀಡಿಯೋದಲ್ಲಿ ಜೂಹಿಚಾವ್ಲಾ ಹೇಳಿಕೆ ನೀಡಿದ್ದಾರೆ.